

ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ಅಂಕಣ ‘ಅರ್ಥಾಗ್ದಿದ್ರು ಸಿಕ್ದಂಗ್ ಅನ್ನಾದ್ ಚಂದ್ರನ ಮಕ್ ಉಗ್ದಂಗೆ’ (ಡಿ.13 ಚಿಂತನ ಪುಟ) ಪಾಂಡಿತ್ಯ ಪೂರ್ಣವಾಗಿದೆ. ಕವಿ- ಸಹೃದಯ ಸಂಬಂಧವನ್ನು, ಕಾವ್ಯ ಪರಂಪರೆಯನ್ನು ನೋಡಿರುವ ರೀತಿಯನ್ನು ಸಾದ್ಯಂತವಾಗಿ ವಿವರಿಸಲಾಗಿದೆ. ಬರಹದ ಆಶಯ ಈಡೇರುವುದೇ ಒಳ್ಳೆಯ ಓದುಗ ಸಿಕ್ಕಾಗ. ಓದುಗರ ಸಂಖ್ಯೆಯೇ ಗಮನೀಯವಾಗಿ ಕುಸಿದಿರುವ ಈ ದಿನಗಳಲ್ಲಿ ಓದಿದವರೂ ಅದನ್ನು ಸರಿಯಾಗಿ ಗ್ರಹಿಸದೆ, ಹಗುರವಾಗಿ ಅದರ ಬಗ್ಗೆ ಮಾತನಾಡಿಬಿಡುವುದು ಲೇಖಕರು ಹೇಳಿರುವಂತೆ ಸರ್ವೇಸಾಮಾನ್ಯವಾಗಿಬಿಟ್ಟಿದೆ. ಓದದವರೂ ಓದಿದವರಿಗಿಂತ ಹೆಚ್ಚಾಗಿ ವಿಮರ್ಶೆ ಮಾಡುವುದೂ ಒಂದುರೀತಿಯ ದೇಶಾಚಾರವಾಗಿಬಿಟ್ಟಿದೆ.
ಕಾವ್ಯದ ಓದು ಮನುಷ್ಯನ ಸಂವೇದನೆಯನ್ನು ತೀಕ್ಷ್ಣಗೊಳಿಸಬೇಕು. ಕವಿ-ಸಹೃದಯ ಸಂಯೋಜನೆ ಹೇಗಿರಬೇಕೆಂದು ವಿವರಿಸಲು ಲೇಖಕರು ಉಲ್ಲೇಖಿಸಿರುವ ಬೇಂದ್ರೆ ಸಾಲು ಅದೆಷ್ಟು ಸೂಕ್ತ, ಸುಂದರವಾಗಿದೆ! ‘ಕಲ್ಲುಸಕ್ಕರೆಯಂತ ನಿನ್ನ ಮನ ಕರಗಿದರೆ/ಆ ಸವಿಯ ಹಣಿಸು ನನಗೆ’ ಓದಿಗೆ ಅಂದ, ಅರ್ಥ ಬರುವುದೇ ಇಂಥ ಒಡಂಬಡಿಕೆ ಸಾಧ್ಯವಾದಾಗಲಲ್ಲವೆ? ‘ಮನಸ್ಸೆಂಬ ಕನ್ನಡಿ ನಿರ್ಮಲವಾಗಿರುವುದರಿಂದ ವರ್ಣಿತವಿಷಯದಲ್ಲಿ ತನ್ಮಯವಾಗುವ ಯೋಗ್ಯತೆ ಯಾರಿಗುಂಟೋ ಅವನೇ ಸಹೃದಯ’- ಎಂತಹ ಅದ್ಭುತ ವ್ಯಾಖ್ಯಾನವಿದು! ತಲೆಬರಹ ಒಂದೇವಾಕ್ಯದಲ್ಲಿ ಸುಂದರವಾಗಿ ಲೇಖನದ ಅರ್ಥವನ್ನು ಸಮೀಕರಿಸಿದೆ. ನಿಯಮಿತವಾಗಿ ಇಂತಹ ಅರ್ಥಪೂರ್ಣ ಲೇಖನಗಳನ್ನು ನೀಡುತ್ತಿರುವ ವಿಜಯವಾಣಿಗೆ ವಂದನೆಗಳು.
| ಉಮಾ ರಾಜಣ್ಣ