

ತಂತ್ರಜ್ಞಾನ ಬೆಳೆದಂತೆಲ್ಲ ದೈನಂದಿನ ವ್ಯವಹಾರದಲ್ಲಿ ಬಹಳಷ್ಟು ಬದಲಾವಣೆಗಳಾಗುತ್ತಿವೆ. ಪರಿವರ್ತನೆ ಜಗದ ನಿಯಮ; ಅದೂ ನಿಜ. ಆದರೆ ಕೆಲವೊಂದು ಬದಲಾವಣೆಗಳನ್ನು ಜಾರಿಗೆ ತರುವಾಗ ಹಿರಿಯ ನಾಗರಿಕರು ಆಧುನಿಕ ತಂತ್ರಜ್ಞಾನಕ್ಕೆ ಹೊಂದಿಕೊಳ್ಳುವುದರಲ್ಲಿ ಬಹಳಷ್ಟು ಹಿಂದಿರುವುದನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಉದಾಹರಣೆಗೆ, ಹೆಚ್ಚಿನ ಬ್ಯಾಂಕುಗಳಲ್ಲಿ ಪಾಸ್ಬುಕ್ ನಮೂದಿಸಲು ಯಂತ್ರ ಇದೆ. ಎಟಿಎಂನಿಂದ ಒಂದು ನಿರ್ದಿಷ್ಟ ಮೊತ್ತಕ್ಕಿಂತ ಹೆಚ್ಚು ಪಡೆಯಲು ಒಟಿಪಿ ದಾಖಲಿಸುವ ಪದ್ಧತಿ ಜಾರಿಗೆ ಬಂದಿದೆ. ಖಾತೆಗೆ ನಗದು ಜಮಾ ಮಾಡಲೂ ಯಂತ್ರಗಳಿವೆ. ಇದೆಲ್ಲ ಆಧುನಿಕ ಯುಗದ ಬದಲಾವಣೆಗಳು. ಆದರೆ ಬಹಳಷ್ಟು ಹಿರಿಯ ನಾಗರಿಕರಲ್ಲಿ ಇಂದಿಗೂ ಮೊಬೈಲ್ ಫೋನ್ ಇಲ್ಲದವರೂ ಇದ್ದಾರೆ. ಇದ್ದರೂ ಕೇವಲ ದೂರವಾಣಿ ಕರೆ ಮಾಡಲು ಮತ್ತು ಸ್ವೀಕರಿಸಲು ಹೊರತುಪಡಿಸಿ ಎಸ್ಎಂಎಸ್ ಕೂಡ ಗೊತ್ತಿಲ್ಲದವರು ಬಹಳಷ್ಟು ಮಂದಿ ಇದ್ದಾರೆ. ಹಾಗಿರುತ್ತ ಇಂಟರ್ನೆಟ್ ಬ್ಯಾಂಕಿಂಗ್, ವಾಟ್ಸ್ ಆ್ಯಪ್ ದೂರವೇ ಉಳಿಯಿತು ಬಿಡಿ.
ಬ್ಯಾಂಕುಗಳಲ್ಲಿ ಸಿಬ್ಬಂದಿ ಕೊರತೆ ಇರುವುದು ಹೌದಾದರೂ ಬ್ಯಾಂಕಿಗೆ ಬರುವ ವಯೋವೃದ್ಧರಿಗೆ ಕೇವಲ ಪ್ರತ್ಯೇಕ ಸರತಿ ಸಾಲು ನೀಡಿದರೆ ಸಾಲದು. ಇಂತಹ ಕೆಲಸಗಳಿಗಾಗಿ ಕನಿಷ್ಠ ಇನ್ನೊಂದು ದಶಕದವರೆಗಾದರೂ ಓರ್ವ ಸಹಾಯಕರನ್ನು ಪ್ರತಿಯೊಂದು ಬ್ಯಾಂಕಿನಲ್ಲಿ ನೇಮಿಸುವ ಅಗತ್ಯವಿದೆ.
| ಮೋಹನದಾಸ ಕಿಣಿ ಕಾಪು