ಬಂದ್ ಮತ್ತು ಪ್ರತಿಭಟನೆಗಳಿಂದಾಗುವ ನಷ್ಟಕ್ಕೆ ಯಾರು ಹೊಣೆ?

Protest
Published on

ರಾಜ್ಯದ ಮಾಜಿ ಸಚಿವ ಡಿ.ಕೆ.ಶಿವಕುಮಾರ್​ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅಕ್ರಮ ಆಸ್ತಿಗೆ ಸಂಬಂಧಪಟ್ಟ ಪ್ರಕರಣದಲ್ಲಿ ಬಂಧಿಸಿದ ವೇಳೆ ರಾಜ್ಯದ ರಾಮನಗರ ಜಿಲ್ಲೆ ಹಾಗೂ ಇನ್ನಿತರ ಕಡೆ ನಡೆದ ಬಂದ್ ಮತ್ತು ಪ್ರತಿಭಟನೆಗಳಿಂದ ಸುಮಾರು 82 ಕೋಟಿ ರೂಪಾಯಿ ಮೌಲ್ಯದ ಸಾರ್ವಜನಿಕ ಆಸ್ತಿಗೆ ನಷ್ಟವುಂಟಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟಿಗೆ ಮಾಹಿತಿ ನೀಡಿರುವ ಬಗ್ಗೆ ಮಾಧ್ಯಮದಲ್ಲಿ ವರದಿಯಾಗಿದೆ. ಈ ನಷ್ಟಕ್ಕೆಲ್ಲ ಯಾರು ಹೊಣೆ? ಈ ಪ್ರತಿಭಟನೆಯಿಂದ ಉಂಟಾದ ನಷ್ಟಗಳಿಗೆ ಅದರಲ್ಲಿ ಭಾಗವಹಿಸಿದವರನ್ನು ಮತ್ತು ಪ್ರತಿಭಟನೆಗೆ ಕರೆ ನೀಡಿ ನೇತೃತ್ವ ವಹಿಸಿದವರನ್ನು ನೇರ ಹೊಣೆಗಾರರನ್ನಾಗಿ ಮಾಡಿ ಅವರಿಂದಲೇ ನಷ್ಟದ ಬಾಬ್ತು ಹಣವನ್ನು ವಸೂಲಿ ಮಾಡಬೇಕು ಇಲ್ಲವೆ ಅವರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು.
| ಎನ್. ರಾಜೇಶ್ ಅಡಿಗ ಮಂಗಳೂರು

ಬದಲಾವಣೆ ಬೇಡ
ಕಲೆಕ್ಟರ್ ಪದನಾಮದಿಂದ ಜಿಲ್ಲಾಧಿಕಾರಿಯನ್ನು ಕರೆಯುವ ಬಗ್ಗೆ ಕಂದಾಯ ಸಚಿವರು ಪ್ರಸ್ತಾಪ ಮಾಡಿದ್ದಾರೆ. ಆದರೆ ಇದು ರಾಜ್ಯದ ಜನತೆಯ ಬೇಡಿಕೆ ಅಲ್ಲ. ಅಲ್ಲದೆ ಕಲೆಕ್ಟರ್ ಪದವನ್ನು ಜಿಲ್ಲಾಧಿಕಾರಿ ಪದಕ್ಕೆ ಹೋಲಿಸಿದಾಗ ಕಲೆಕ್ಟರ್ ಪದ ತನ್ನ ಅರ್ಥ ಮತ್ತು ಮೌಲ್ಯವನ್ನು ಕಳೆದುಕೊಳ್ಳುತ್ತದೆ. ಬ್ರಿಟಿಷರ ಆಡಳಿತದಲ್ಲಿ ತೆರಿಗೆಯನ್ನು ಸಂಗ್ರಹಿಸುವುದೇ ಮುಖ್ಯವಾಗಿದ್ದ ಈ ಹುದ್ದೆಗೆ ಕಲೆಕ್ಟರ್ ಎಂದು ಕರೆದದ್ದು ಅರ್ಥಪೂರ್ಣ. ಆದರೆ ಪ್ರಸಕ್ತ ಜಿಲ್ಲಾಧಿಕಾರಿಗಳು ಜಿಲ್ಲೆಯ ಎಲ್ಲ ಕೆಲಸದ ಜವಬ್ದಾರಿ ನಿರ್ವಹಿಸುತ್ತಾರಲ್ಲದೆ ಜಿಲ್ಲಾ ದಂಡಾಧಿಕಾರಿಗಳಾಗಿಯೂ ಕೆಲಸ ಮಾಡುತ್ತಾರೆ. ಅಂತೆಯೆ ಅವರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳು ಎಂದು ಕರೆದದ್ದು ಸೂಕ್ತವಾಗಿದೆ. ವಾಸ್ತವ ಹೀಗಿರುವಾಗ ಮತ್ತೆ ಬ್ರಿಟಿಷರನ್ನು ನೆನಪು ಮಾಡುವ ಅರ್ಥಹೀನ ಕಲೆಕ್ಟರ್ ಪದ ನಮಗ್ಯಾಕೆ?
| ಬೀರಣ್ಣ ನಾಯಕ ಮೊಗಟಾ ಯಲ್ಲಾಪುರ

ಪ್ರವೇಶಾತಿ ಪ್ರಕ್ರಿಯೆ ಆರಂಭಿಸಿ
ರಾಜ್ಯದಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ದೃಷ್ಟಿಯಿಂದ ಸರ್ಕಾರ ಹಲವಾರು ಸರ್ಕಾರಿ ವಸತಿ ಶಾಲೆಗಳನ್ನು ರಾಜ್ಯದ ಎಲ್ಲೆಡೆ ತೆರೆದಿದೆ. ಈ ವಸತಿ ಶಾಲೆಗಳ ಆರನೇ ತರಗತಿಯ ಪ್ರವೇಶಕ್ಕಾಗಿ ಪ್ರವೇಶ ಪರೀಕ್ಷೆಯನ್ನು ಪ್ರತಿವರ್ಷ ನಡೆಸಲಾಗುತ್ತದೆ. ಆದರೆ ಈ ವರ್ಷ ಈ ಶಾಲೆಗಳ ಪ್ರವೇಶಾತಿಗಾಗಿ ಅರ್ಜಿ ಹಾಕುವ ಪ್ರಕ್ರಿಯೆ ಇದುವರೆಗೂ ಆರಂಭವಾಗಿಲ್ಲ. ಮೊರಾರ್ಜಿ ದೇಸಾಯಿ, ಆದರ್ಶ ವಿದ್ಯಾಲಯಗಳು ಸೇರಿ ವಿವಿಧ ಶಾಲೆಗಳ ಪ್ರವೇಶ ಪ್ರಕ್ರಿಯೆಯನ್ನು ಕೂಡಲೇ ಆರಂಭಿಸಬೇಕು. ಹಿಂದುಳಿದ ವರ್ಗ ಸೇರಿ ಎಲ್ಲಾ ಬಡವರ್ಗದ ಮಕ್ಕಳ ಶಿಕ್ಷಣಕ್ಕೆ ದಾರಿದೀಪದಂತಿರುವ ವಸತಿ ಶಾಲೆಗಳ ಪ್ರವೇಶ ಅಧಿಸೂಚನೆ ಬೇಗನೆ ಹೊರಬರಲಿ ಎಂಬುದೇ ಪಾಲಕರ, ಶಿಕ್ಷಕರ ಹಾಗೂ ಮಕ್ಕಳ ಆಶಯ.
| ಜಿ.ಪಿ.ಬಿರಾದಾರ ಮುಳಸಾವಳಗಿ (ತಾಲೂಕು ದೇವರಹಿಪ್ಪರಗಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net