ಜನಮತ | ಶಾಸಕರ ಹಾಜರಾತಿಗೆ ಕಟ್ಟುನಿಟ್ಟಿನ ಆದೇಶ ಅವಶ್ಯ

Janamatha
Published on

ಸರ್ಕಾರ ವಿಧಾನಮಂಡಳ ಅಧಿವೇಶನ ಕರೆಯಬೇಕು; ಹಲವಾರು ಮಹತ್ವದ ವಿಷಯಗಳ ಚರ್ಚೆಯಾಗಬೇಕಿದೆ ಎಂದು ಶಾಸಕರು ಹೇಳುವುದು ಸಾಮಾನ್ಯ. ಆದರೆ ಈಗ ಅಧಿವೇಶನ ಪ್ರಾರಂಭವಾಗಿ ಎರಡು ದಿನವಾದರೂ ಅನೇಕ ಶಾಸಕರು ಅಧಿವೇಶನಕ್ಕೆ ಬಂದಿಲ್ಲ. ಹೀಗೆ ಗೈರಾದವರಲ್ಲಿ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳೆರಡಕ್ಕೂ ಸೇರಿದವರಿದ್ದಾರೆ. ಇದು ಬೇಸರದ ಸಂಗತಿ.

ಹಾಗಾದರೆ ಅಧಿವೇಶನ ನಡೆಸಬೇಕು ಎಂದು ಇವರು ಒತ್ತಾಯಿಸುವುದಾದರೂ ಯಾವ ಪುರುಷಾರ್ಥಕ್ಕಾಗಿ? ಈ ರೀತಿ ನಿರ್ಲಕ್ಷ್ಯ ತೋರುವುದಾದಲ್ಲಿ ಸಾರ್ವಜನಿಕರ ಹಣದಲ್ಲಿ ಕೋಟ್ಯಂತರ ರೂ.ಖರ್ಚು ಮಾಡಿ ಅಧಿವೇಶನ ನಡೆಸುವ ಅವಶ್ಯಕತೆಯಾದರೂ ಏನು? ಜನಸಾಮಾನ್ಯರ ಸಮಸ್ಯೆಗಳ ಬಗ್ಗೆ ಮತ್ತು ಜ್ವಲಂತ ವಿಚಾರಗಳ ಬಗ್ಗೆ ಅರ್ಥಪೂರ್ಣ ಚರ್ಚೆಯಾಗಿ, ಉತ್ತಮ ನಿರ್ಣಯ ಹೊರಹೊಮ್ಮಿದಲ್ಲಿ ಅಧಿವೇಶನಕ್ಕೆ ಸಾರ್ಥಕತೆ. ಆದ್ದರಿಂದ ಸರ್ಕಾರ ಮತ್ತು ಉಭಯ ಸದನಗಳ ಮುಖ್ಯಸ್ಥರು ಶಾಸಕರ ಹಾಜರಾತಿಗೆ ಬಿಗಿ ಕ್ರಮ ಕೈಗೊಳ್ಳುವುದು ಅವಶ್ಯ.

| ವಿ.ಜಿ.ಇನಾಮದಾರ ಸಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net