

ಕಡ್ಡಾಯ ವರ್ಗಾವಣೆ ಶಿಕ್ಷಕರಿಗೆ ಶಿಕ್ಷೆಯಾಗಿ ಪರಿಣಮಿಸಿದ್ದನ್ನು ಮನಗಂಡು ಸರ್ಕಾರ 2020ರಲ್ಲಿ ಈ ಸಂಬಂಧ ಸುಗ್ರೀವಾಜ್ಞೆ ಮೂಲಕ ಪರಿಹಾರ ರೂಪಿಸಿತು. ಅದರ ಅನ್ವಯ ಸಾಮಾನ್ಯ ವರ್ಗಾವಣೆಯಲ್ಲಿ ಕೌನ್ಸೆಲಿಂಗ್ ಮೂಲಕ ಒಮ್ಮೆ ತಾಲೂಕಿನ ಒಳಗೆ ಸ್ಥಳ ಆಯ್ಕೆಗೆ ಅವಕಾಶ ಕಲ್ಪಿಸಲಾಗಿತ್ತು. ಅದರೆ ಕೆಎಟಿ ತಡೆಯಾಜ್ಞೆಯಿಂದ ಮತ್ತೆ ಶಿಕ್ಷಕರ ಸಮಸ್ಯೆ ಮುಂದುವರಿಯಿತು. ಈ ಹಂತದಲ್ಲಿ ನೂತನ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಮಸ್ಯೆಗೆ ತಕ್ಷಣ ಪರಿಹಾರ ರೂಪಿಸುವ ನಿಟ್ಟಿನಲ್ಲಿ 2020ರ ಮಸೂದೆಗೆ ವಿಧಾನಸಭೆಯಲ್ಲಿ ಅನುಮೋದನೆ ಪಡೆದರು. ಇದಕ್ಕಾಗಿ ಶಿಕ್ಷಕ ಸಮುದಾಯ ಅಭಿನಂದನೆ ಸಲ್ಲಿಸಿದೆ. ಆದರೆ ಕಾನೂನಿನ ಉದ್ದೇಶ ಸಫಲವಾಗಬೇಕಾದರೆ ಅದು ತಕ್ಷಣವೇ ಜಾರಿಯಾಗಬೇಕು. ಈ ನಿಟ್ಟಿನಲ್ಲಿ ಕಡ್ಡಾಯ ವರ್ಗಾವಣೆಗೆ ಒಳಪಟ್ಟು ಬವಣೆ ಪಡುತ್ತಿರುವ ಶಿಕ್ಷಕರಿಗೆ ತಕ್ಷಣವೇ ನಿಯಮ ಅನ್ವಯ ಕೌನ್ಸೆಲಿಂಗ್ ಅವಕಾಶ ಕಲ್ಪಿಸಲಿ. ಉಳಿದಂತೆ ಎಲ್ಲ ಆಕಾಂಕ್ಷಿ ಶಿಕ್ಷಕರಿಗೆ ಶಿಕ್ಷಕಸ್ನೇಹಿ ವರ್ಗಾವಣೆ ವೇಳಾಪಟ್ಟಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಲಿ. ಪ್ರತಿವರ್ಷ ಸಾಮಾನ್ಯ ವರ್ಗಾವಣೆಯನ್ನು ಕೈಗೊಳ್ಳುವ ಮೂಲಕ ಶಿಕ್ಷಕ ಸಮುದಾಯಕ್ಕೆ ನ್ಯಾಯ ಒದಗಿಸಲಿ.
| ಸುದರ್ಶನ್ ಭದ್ರಾವತಿ
ಹವಾಮಾನ ಬದಲಾವಣೆ, ಏರುತ್ತಿರುವ ತಾಪಮಾನದ ಕುರಿತಂತೆ ಅಂತಾರಾಷ್ಟ್ರೀಯ ವರದಿಗಳು ಎಚ್ಚರಿಸುತ್ತಲೇ ಇವೆ. ಅಕಾಲಿಕ ಮಳೆ, ತೀವ್ರ ಉಷ್ಣತೆ ಇವೆಲ್ಲ ನಿಸರ್ಗ ಪಲ್ಲಟದ ಉದಾಹರಣೆ. ಆದರೂ, ಪರಿಸರವನ್ನು ಉಳಿಸುವ ಮತ್ತು ಪರಿಸರಕ್ಕೆ ಹಾನಿ ಮಾಡದೆ ಬದುಕುವ ವಿಷಯವನ್ನು ಸರ್ಕಾರವಾಗಲಿ, ಜನಸಾಮಾನ್ಯರಾಗಲಿ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಪರಿಸ್ಥಿತಿ ಹೀಗೇ ಮುಂದುವರಿದರೆ ಕೆಲ ವರ್ಷಗಳಲ್ಲೇ ನೈಸರ್ಗಿಕ ವಿಕೋಪಗಳು ಹೆಚ್ಚಲಿವೆ ಎಂಬ ಅಂಶವನ್ನು ಕಡೆಗಣಿಸುವಂತಿಲ್ಲ. ಅಭಿವೃದ್ಧಿ ಪ್ರಕ್ರಿಯೆ ಮುಖ್ಯವೇನೋ ಸರಿ. ಆದರೆ, ಪ್ರಕೃತಿಯನ್ನೇ ಶೋಷಿಸಿ ಮಾಡುವ ‘ಅಭಿವೃದ್ಧಿ’ ಅನಾಹುತವನ್ನೇ ಸೃಷ್ಟಿಸುತ್ತದೆ. ಪದೇಪದೆ ಚಂಡಮಾರುತಗಳು ಸೃಷ್ಟಿಯಾಗುತ್ತಿರುವುದು, ತಾಪಮಾನ ಹೆಚ್ಚುತ್ತಿರುವುದು ಇವೆಲ್ಲ ಉದಾಹರಣೆಗಳಷ್ಟೇ. ಸುಸ್ಥಿರ ಅಭಿವೃದ್ಧಿ ಮತ್ತು ಪರಿಸರ ರಕ್ಷಣೆ ನಿಟ್ಟಿನಲ್ಲಿ ಹೆಜ್ಜೆ ಇರಿಸುವಲ್ಲಿ ಈಗಾಗಲೇ ಸಾಕಷ್ಟು ವಿಳಂಬವಾಗಿದೆ. ಇನ್ನೂ, ನಿಸರ್ಗದ ಎಚ್ಚರಿಕೆ ಗಂಟೆಗೆ ಕಿವಿಯಾಗದಿದ್ದರೆ ಮಾನವರೇ ಅದಕ್ಕೆ ಬೆಲೆ ತೆರಬೇಕಾಗುತ್ತದೆ. ಜೀವನಶೈಲಿಯನ್ನೂ ನಿಸರ್ಗಸ್ನೇಹಿ ಮಾಡಿಕೊಳ್ಳುವ ಮೂಲಕ ಪ್ರಕೃತಿಗೆ ಸನಿಹವಾಗಿ ಬಾಳಲು ಇದು ಸಕಾಲ.
| ರವಿ ಮಂಗಳೂರು