ಜನಮತ | ರೈತಸಂತತಿ ಉಳಿದರೆ ಮನುಕುಲ ಉಳಿದೀತು

Janamatha
Published on

ರೈತರು ದೇಶದ ಆರ್ಥಿಕತೆಯ ಬೆನ್ನೆಲುಬು. ರೈತರಿಲ್ಲದೆ ಜನರಿಲ್ಲ, ನಾಡಿಲ್ಲ, ದೇಶವಿಲ್ಲ. ರೈತರ ಮಕ್ಕಳಿಗೆ ಮದುವೆಯಾಗಲು ಹೆಣ್ಣು ಕೂಡ ಇಲ್ಲ. ಇಲ್ಲ ಎನ್ನುವುದಕ್ಕಿಂತ ‘ನಾ ಮುಂದು ತಾ ಮುಂದು’ ಎನ್ನುವ ಮನಸ್ಸುಳ್ಳ ಜನರಿಲ್ಲ. ತಿನ್ನಲು ಒಳ್ಳೆಯ ಆಹಾರ ಬೇಕು. ಆದರೆ ಹೆಣ್ಣು ಕೊಡಲು ಹತ್ತಾರು ಅಸಡ್ಡೆಯ ಹಾಗೂ ಅವಮಾನಿಸುವ ಮಾತುಗಳು. ಸರ್ಕಾರಿ ನೌಕರಿಯೇ ಬೇಕು, ಕೈ ತುಂಬ ಸಂಬಳ ಬೇಕು, ಅವನು ಸತ್ತಾಗ ಆ ಕೆಲಸ ನಮಗಾಗಬೇಕು ಎನ್ನುವ ಚಿಂತೆಯಲ್ಲಿ ಮುಳುಗಿರುವವರ ನಡುವೆ ದಿನವಿಡೀ ಭೂತಾಯಿಯ ಸೇವೆ ಮಾಡುತ್ತಿರುವ ರೈತರ ಮಕ್ಕಳು ಎಲ್ಲಿ ತಾನೇ ಕಾಣಲು ಸಾಧ್ಯ?

ಒಂದಂತೂ ಸತ್ಯ. ಜನಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುವುದಿಲ್ಲ. ಜನಸಂಖ್ಯೆ ಬೆಳೆದಷ್ಟು ಆಹಾರ ಪೂರೈಕೆ ಜಾಸ್ತಿಯಾಗಬೇಕು. ಅಷ್ಟು ಜನರಿಗೆ ಆಹಾರ ಪೂರೈಸಬೇಕಾದರೆ ಹೆಚ್ಚು ಹೆಚ್ಚು ಬೆಳೆಯಬೇಕು. ಹೆಚ್ಚು ಹೆಚ್ಚು ಬೆಳೆಯಲು ರೈತರ ಸಂಖ್ಯೆ ಜಾಸ್ತಿಯಾಗಬೇಕು. ಇದು ಪ್ರಕೃತಿಯ ನಿಯಮ. ಸದ್ಯದ ಪರಿಸ್ಥಿತಿಯಲ್ಲಿ ರೈತರ ಮಕ್ಕಳಿಗೆ ಹೆಣ್ಣು ಕೊಡದ ಕಾರಣ ಮದುವೆಯಾಗುವ ಉದ್ದೇಶದಿಂದಲೇ ಕೃಷಿ ಬಿಟ್ಟು ನಗರ ಪ್ರದೇಶಗಳಲ್ಲಿ ಕಾರ್ಖಾನೆ, ಹೋಟೆಲ್, ಫೈನಾನ್ಸ್ ಕಂಪನಿಗಳಿಗೆ ಕೆಲಸಕ್ಕೆ ಸೇರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೂ ‘ಖಾಸಗಿ ನೌಕರಿ’ ಎನ್ನುವ ಕಾರಣಕ್ಕೆ ಮದುವೆಯಾಗಲು ಸಾಧ್ಯವಾಗುತ್ತಿಲ್ಲ. ರೈತರ ಸಂಖ್ಯೆ ಹೆಚ್ಚುವ ಬದಲು ತುಂಬ ಕಡಿಮೆಯಾಗುತ್ತಿರುವುದು ವಿಪರ್ಯಾಸವೇ ಸರಿ. ಇರುವ ಕೃಷಿ ಭೂಮಿಗಳೆಲ್ಲ ಸೈಟು, ಕಾರ್ಖಾನೆ, ಕ್ಲಷರ್​ಗಳಾಗಿ, ಕೃಷಿಯೇತರ ಚಟುವಟಿಕೆಗಳಿಗೆ ಬಳಕೆಯಾಗುತ್ತಿರುವುದು ದುರದೃಷ್ಟಕರ. ರಾಸಾಯನಿಕ ಗೊಬ್ಬರ ಬಳಸಿ ಕಡಿಮೆ ಭೂಮಿಯಲ್ಲಿ ಹೆಚ್ಚು ಬೆಳೆದು ಆರೋಗ್ಯದ ಸಮಸ್ಯೆಗಳು ಸೃಷ್ಟಿಯಾಗುತ್ತಿರುವುದು ಕಾಣುತ್ತಿದ್ದರೂ ಏನೂ ಕಾಣದಂತೆ ಜಾಣಕುರುಡರಾಗಿ ಬದುಕುತ್ತಿರುವುದು ನಮ್ಮ ಮನುಕುಲದ ಅವನತಿಯ ಪ್ರಾಥಮಿಕ ಅಂತ.

ರೈತರ ಸಂತತಿ ಹೆಚ್ಚಾಗಬೇಕಾದರೆ ಮೊದಲು ರೈತರ ಮಕ್ಕಳಿಗೆ ಹೆಣ್ಣು ಸಿಗುವಂತಾಗಬೇಕು. ಇದರ ಮೂಲಕವೇ ಹುಟ್ಟು ರೈತರ ಸಂತತಿ ಹೆಚ್ಚಾಗಬೇಕು. ಅವರವರ ಜಮೀನುಗಳು ಅವರಲ್ಲಿಯೇ ಉಳಿಯಬೇಕು. ತಂದೆ ರೈತ, ಆತನ ಮಕ್ಕಳಿಗೆ ಮದುವೆ ಇಲ್ಲ, ನಂತರ ಆ ಕುಟುಂಬದ ರೈತ ಸಂತತಿ ಅಂದೇ ಕೊನೆ, ಆ ಜಮೀನುಗಳು ಕೃಷಿಯೇತರ ಚಟುವಟಿಕೆಗಳಿಗೆ ಮಾರಾಟ. ಅಲ್ಲಿಗೇ ಮುಗಿಯಿತು ಆ ಕುಟುಂಬದ ಹುಟ್ಟು ರೈತ ಸಂತತಿ. ಹೀಗೆ ಮುಂದುವರಿದರೆ ಮುಂದಿನ ಜನಾಂಗ ಮಾತ್ರೆ ತಿಂದು, ಟಾನಿಕ್ ಕುಡಿದು ಬದುಕುವ ಕಾಲ ಬರದೆ ಇರದು. ಇದೆಲ್ಲ ಮುಂದುವರಿಯಬಾರದು ಅಂದರೆ ಸರ್ಕಾರ ಎಚ್ಚೆತ್ತುಕೊಳ್ಳಬೇಕು. ರೈತರ ಮಕ್ಕಳನ್ನು ಮದುವೆಯಾಗುವವರಿಗೆ ಕೊಡುಗೆ ಘೋಷಿಸಬೇಕು ಅಥವಾ ಉಪಯುಕ್ತ ಯೋಜನೆ ರೂಪಿಸಬೇಕು.

| ಪ್ರಸಾದ್ ಹರವೆ ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net