ಕರೊನಾ ಸಂಕಟ; ಹತಾಶರಾಗೋದು ಬೇಡ

IMG-20210528-WA0004
Published on

ಕರೊನಾ ಕುರಿತ ಭಯದಿಂದ ಒತ್ತಡಕ್ಕೆ ಒಳಗಾಗಿ, ಇದರಿಂದ ಮುಕ್ತಿ ಪಡೆಯುವುದಕ್ಕೆ ಆತ್ಮಹತ್ಯೆಯೊಂದೇ ದಾರಿ ಎಂಬ ತಪು್ಪಕಲ್ಪನೆಯಿಂದಾಗಿಯೇ ಕೆಲವರು ಆತ್ಮಹತ್ಯೆಯ ದಾರಿ ತುಳಿಯುತ್ತಿದ್ದಾರೆ. ಇಂತಹ ಪ್ರಕರಣಗಳು ರಾಜ್ಯದ ನಾನಾ ಭಾಗದಲ್ಲಿ ವರದಿಯಾಗಿವೆ. ಕೋವಿಡ್​ಗೆ ಹೆದರಿ ಮಾನಸಿಕ ಖಿನ್ನತೆಗೆ ಒಳಗಾಗದೆ, ಮುನ್ನೆಚ್ಚರಿಕೆ ವಹಿಸಿ ವೈದ್ಯರ ಸಲಹೆ, ಮಾರ್ಗದರ್ಶನದಂತೆ ಸಕಾಲಕ್ಕೆ ಚಿಕಿತ್ಸೆ ಪಡೆದು ಕೋವಿಡ್​ನಿಂದ ಗೆಲ್ಲಬಹುದು.

ಈ ತರಹದ ಆತ್ಮಹತ್ಯೆಗಳನ್ನು ತಪ್ಪಿಸಲು ಯಾವುದೇ ವ್ಯಕ್ತಿ ಖಿನ್ನತೆ, ಒತ್ತಡ ಅಥವಾ ಯಾವುದೇ ಸಮಸ್ಯೆಯಲ್ಲಿ ಸಿಲುಕಿದ್ದರೆ, ಅವರನ್ನು ಆದಷ್ಟು ಏಕಾಂಗಿಯಾಗಿ ಬಿಡಬೇಡಿ. ಅವರು ತಮಗೆ ತಾವೇ ನೋವು ತಂದುಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಉತ್ತಮ ಸ್ನೇಹಿತ, ಕುಟುಂಬ ಸದಸ್ಯರ ಅಗತ್ಯವಿರುತ್ತದೆ. ಮಾನಸಿಕವಾಗಿ ತೀರಾ ಕುಗ್ಗಿರುವ ವ್ಯಕ್ತಿಯಾಗಿದ್ದರೆ, ಮಾನಸಿಕ ವೈದ್ಯರು ಅಥವಾ ಉತ್ತಮ ಮಾರ್ಗದರ್ಶಕರ ಬಳಿ ಕರೆದುಕೊಂಡು ಹೋಗಿ ಅವರಿಗೆ ತಿಳಿ ಹೇಳಿಸಿ. ಕರೊನಾ ಮಹಾಮಾರಿಯಾಗಿದ್ದರೂ ಶೇಕಡವಾರು ಸಾವಿನ ಸಂಖ್ಯೆ ಕಡಿಮೆ ಇದ್ದು, ಗುಣಮುಖರಾಗಿ, ಸಹಜ ಜೀವನ ನಡೆಸುತ್ತಿರುವವರ ಸಂಖ್ಯೆ ಹೆಚ್ಚಿದೆ. ಒಟ್ಟಾರೆ ‘ಧೈರ್ಯಂ ಸರ್ವತ್ರ ಸಾಧನಂ’ ಎಂಬಂತೆ ಧೈರ್ಯದಿಂದ ಕರೊನಾ ಮಹಾಮಾರಿಯನ್ನು ಗೆಲ್ಲಬಹುದು. ಸಾರ್ವಜನಿಕರು ಪರಸ್ಪರ ಅಂತರ ಕಾಯ್ದುಕೊಂಡು, ಮಾಸ್ಕ್ ಧರಿಸಿ, ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು.

| ಉದಯ ಯಂಡಿಗೇರಿ ಧಾರವಾಡ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net