ಜನಮತ: ಶಿಕ್ಷಣದ ನಿಜವಾದ ಉದ್ದೇಶ ಸಫಲವಾಗುತ್ತಿದೆಯೇ?

Janamata
Published on

ಈಗಿನ ಅನೇಕ ಸಮಸ್ಯೆಗಳಿಗೆ ಶಿಕ್ಷಣದ ಕೊರತೆಯೇ ಕಾರಣ. ಅದರಲ್ಲೂ, ನೈತಿಕ, ಆಧ್ಯಾತ್ಮಿಕ, ರಾಷ್ಟ್ರಪ್ರೇಮ, ಸೇವಾ ಮನೋಭಾವ ಶಿಕ್ಷಣದ ಕೊರತೆ ಎದ್ದು ಕಾಣುತ್ತಿದೆ. ಜೀವನಕ್ಕೆ ಗೊತ್ತು ಗುರಿ ಇಲ್ಲದೆ ಹೇಗೆ ಬೇಕಾದ ಹಾಗೆ ಬದುಕುವುದು, ಕಷ್ಟವಿಲ್ಲದೆ ಜೀವನ ನಡೆಸುವುದು, ದುಡ್ಡು ಕೊಟ್ಟರೆ ದೇಶ, ಸಂಸ್ಕೃತಿ, ಧರ್ಮ ಹಿರಿಮೆಯನ್ನು ತೆಗಳುವವರೂ ಇದ್ದಾರೆ, ಕೆಲ ಜನರನ್ನು ಆ ನಿಟ್ಟಿನಲ್ಲಿ ತರಬೇತಿಗೊಳಿಸುತ್ತಿದ್ದಾರೆ. ಬಹುಬೇಗ ಪ್ರಸಿದ್ಧಿಗೆ ಬರಬೇಕೆಂಬ ದುರಾಲೋಚನೆಯೂ ಇದಕ್ಕೆ ಕಾರಣ.

ಈ ಸಂಕಷ್ಟಗಳಿಗೆ ರಾಮಬಾಣವೆಂದರೆ, ಪಠ್ಯಗಳಲ್ಲಿ ಹೆಚ್ಚೆಚ್ಚು ರಾಷ್ಟ್ರಪ್ರೇಮದ, ಸೇವಾ ಮನೋಭಾವದ, ಮಹಾನ್ ಸಾಧಕರ, ಹೋರಾಟಗಾರರ ಜೀವನ ಚರಿತ್ರೆ ಅಳವಡಿಸುವುದು. ಎಷ್ಟೋ ಶಾಲೆಗಳಲ್ಲಿ ‘ನೈತಿಕ ಶಿಕ್ಷಣ’ ಎನ್ನುವ ಪಠ್ಯಪುಸ್ತಕ ನೆಪ ಮಾತ್ರಕ್ಕೆ ಇದೆ. ಕೆಲವರು ಯೌವ್ವನವನ್ನು ಗಲಾಟೆ, ಕಿಟಲೆ, ಹೊಡೆದಾಟ, ದ್ವೇಷ, ಕೀರ್ತಿಯ ಹಪಾಹಪಿತನದಿಂದ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಕೆಲವರು ದೇಶದ್ರೋಹದಂಥ ವಿಧ್ವಂಸಕ ಕೃತ್ಯಗಳಲ್ಲಿ ತೊಡಗಿದ್ದಾರೆ.

ಇನ್ನು ಸ್ವಲ್ಪ ಮಂದಿ ‘ನಮಗೆ ದುಡಿಮೆ ಅಷ್ಟೇ ಮುಖ್ಯ. ಸಮಾಜ, ಸೇವೆ, ದೇಶಪ್ರೇಮ ಕಟ್ಟಿಕೊಂಡು ನಮಗೇನಾಗಬೇಕಿದೆ’ ಎನ್ನುವ ಯೋಚನೆಯಲ್ಲಿದ್ದಾರೆ. ದುಡಿಮೆ ಬೇಕು ನಿಜ. ಆದರೆ, ಸಮಾಜದ ಏಳಿಗೆ ಬಗ್ಗೆ ಚಿಂತನೆ ಮಾಡದಿದ್ದರೆ, ದೀನರ ಅನಾಥರ ಆರ್ತನಾದ ಕೇಳಿಸಿಕೊಳ್ಳದಿದ್ದರೆ ಸಮಾಜಕ್ಕೆ ನಮ್ಮಿಂದ ಏನು ಕೊಡುಗೆ ಕೊಡಬಲ್ಲೆವು? ಶಿಕ್ಷಣದ ಉದ್ದೇಶ ನಿಜಕ್ಕೂ ಕೈಗೂಡುತ್ತಿದೆಯಾ? ನಾವೆಲ್ಲ ವಿದ್ಯಾವಂತರು, ಶಿಕ್ಷಣವಂತರು ಎಂದು ತಲೆ ಎತ್ತಿ ತಿರುಗಿಕೊಂಡು ಹೋಗುವುದರಲ್ಲಿ ಸಾರ್ಥಕತೆ ಇದೆಯೇ?

‘ಗಂಗೆ ಇದ್ದರೆ ತುಂಗೆ ಇದ್ದರೆ, ಗಿರಿ ಹಿಮಾಲಯವಿದ್ದರೆ, ಮೂರು ಸಾಗರ ದೈವ ಸಾಸಿರವಿದ್ದರೆ, ವೇದವಿದ್ದರೆ ಭೂಮಿ ಇದ್ದರೆ, ಘನ ಪರಂಪರೆ ಇದ್ದರೆ, ಏನು ಸಾರ್ಥಕ, ಮನೆಯ ಮಕ್ಕಳು ಮಲಗಿ ನಿದ್ರಿಸುತ್ತಿದ್ದರೆ?’ ಎನ್ನುತ್ತಾರೆ ಕವಿ ಶಿವರಾಮು. ಆದ್ದರಿಂದ ದೇಶ ಸಂಕಷ್ಟದಲ್ಲಿ ಸಿಲುಕಿರುವಾಗ, ನಾವೆಲ್ಲ ಒಂದಾಗಿ ಭವ್ಯಭಾರತದ ನಿರ್ವಣಕ್ಕೆ ಕಟಿಬದ್ಧರಾಗಬೇಕಿದೆ. ಶಿಕ್ಷಣ ಅರ್ಥ ಕಳೆದುಕೊಳ್ಳುತ್ತಿರುವ ಸಂದರ್ಭದಲ್ಲಿ ಮತ್ತೆ ಶಿಕ್ಷಣದ ಮಹತ್ವವನ್ನು ಉಳಿಸಿ ಬೆಳೆಸಬೇಕಿದೆ.

| ಎಂ.ಪರಮೇಶ್ವರ, ಮದ್ದಿಹಳ್ಳಿ (ಹಿರಿಯೂರು ತಾಲೂಕು) 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net