ಜನಮತ: ಪರಿವರ್ತನೆ ಜಗದ ನಿಯಮ ಇದನರಿತು ನಡೆದರೆ ಎಲ್ಲವೂ ಸುಗಮ!

Janamata
Published on

ಕೇಂದ್ರ ಸರ್ಕಾರದ ನಿರ್ಧಾರಗಳಲ್ಲಿ ಇತ್ತೀಚೆಗೆ ಹೆಚ್ಚು ವಿವಾದಕ್ಕೆ ಒಳಗಾಗುತ್ತಿರುವುದು, ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಉದ್ದಿಮೆಗಳನ್ನು ಆಂಶಿಕವಾಗಿ ಅಥವಾ ಸಂಪೂರ್ಣವಾಗಿ ಖಾಸಗಿ ಸಹಭಾಗಿತ್ವಕ್ಕೆ ತೆರೆದುಕೊಳ್ಳುವ ಪ್ರಕ್ರಿಯೆ ಬಗ್ಗೆ. ಈ ಸಾಲಿಗೆ ಇತ್ತೀಚೆಗೆ ಸೇರಿರುವ ಇನ್ನೆರಡು ವಿಷಯಗಳು: ಏರ್ ಇಂಡಿಯಾ ಖಾಸಗೀಕರಣ ಮತ್ತು ಸರ್ಕಾರದ ಏಕಸ್ವಾಮ್ಯದಲ್ಲಿರುವ ಜೀವ ವಿಮಾ ನಿಗಮದ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ ಪ್ರಸ್ತಾಪ.

ಹರಿಯುವ ನದಿಯ ನೀರು, ಸ್ಥಿರವಾಗಿ ನಿಂತಿರುವ ಕೊಳದ ನೀರಿನಂತೆ ಕಲುಷಿತವಾಗಿರದೆ ಪರಿಶುದ್ಧವಾಗಿರುತ್ತದೆ. ಈ ಸಿದ್ಧಾಂತವನ್ನು ಇಂದು ದೇಶದ ಹಲವಾರು ಸಾರ್ವಜನಿಕ ಉದ್ದಿಮೆಗಳಿಗೂ ಅನ್ವಯಿಸುವ ಕಾಲ ಬಂದಿದೆ.

ನಷ್ಟದ ಕಾರಣಕ್ಕೆ ಮುಚ್ಚುವಿಕೆ ಕೇವಲ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಸೀಮಿತವಲ್ಲ. ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳೆರಡರಲ್ಲೂ ಮುಚ್ಚುಗಡೆಯಾದರೆ ಸಂಸ್ಥೆಯ ನೌಕರರ ಮೇಲೆ ಆಗುವ ಪರಿಣಾಮ ಒಂದೇ; ಅದೇ ಉದ್ಯೋಗ ನಷ್ಟ. ಕೆಲವು ಖಾಸಗಿ ಉದ್ದಿಮೆಗಳ ಉದಾಹರಣೆಗಳನ್ನು ನೋಡುವುದಾದರೆ, ಎಲ್ಲ ರೀತಿಯ ಚಿತ್ರೀಕರಣಕ್ಕೆ ಉಪಯೋಗಿಸುವ ಫಿಲ್ಮುಗಳ ಪೂರೈಕೆದಾರವಾಗಿದ್ದ ಮೆ.ಕೊಡಾಕ್ ಸಂಸ್ಥೆ ಜಾಗತಿಕ ಮಟ್ಟದಲ್ಲಿ ದೈತ್ಯಗಾತ್ರದ ಉದ್ದಿಮೆಯಾಗಿತ್ತು. ಎರಡು ಲಕ್ಷದಷ್ಟು ಉದ್ಯೋಗಿಗಳಿದ್ದ ಈ ಸಂಸ್ಥೆ ಕ್ರಮೇಣ ದಿವಾಳಿಯಾಯಿತು,

1998ರಲ್ಲಿ ಮುಚ್ಚಿಯೇ ಹೋಯಿತು; ಕಾರಣ ಇಷ್ಟೇ-ಚಿತ್ರೀಕರಣ ರಂಗದಲ್ಲಿ ಡಿಜಿಟಲ್ ತಾಂತ್ರಿಕತೆ ಕಾಲಿಟ್ಟಾಗ ಈ ದೈತ್ಯ ಸಂಸ್ಥೆ ತನ್ನ ತಾಂತ್ರಿಕತೆಯನ್ನು Update ಮಾಡುವ ಪ್ರಯತ್ನ ಮಾಡಲಿಲ್ಲ, ಪರಿಣಾಮ, ಸಂಸ್ಥೆ ಮುಚ್ಚಿತು, ಸಿಬ್ಬಂದಿ ಉದ್ಯೋಗ ಕಳೆದುಕೊಂಡರು. ಇದು ಕೆಲವು ದಿನಗಳ ಕಾಲ ಸುದ್ದಿಯಾಗಿ ನಂತರ ಇತಿಹಾಸಕ್ಕೆ ಸೇರಿತು. ಇದಕ್ಕೆ ಸಂಸ್ಥೆಯ ಆಡಳಿತ ವೈಫಲ್ಯವಷ್ಟೇ ಕಾರಣ ಹೊರತು ಬೇರೇನೂ ಅಲ್ಲ.

ಒಂದು ಕಾಲದಲ್ಲಿ ಆಯಾ ಕ್ಷೇತ್ರಗಳಲ್ಲಿ ಬಹುದೊಡ್ಡ ಮಾರುಕಟ್ಟೆ ಹೊಂದಿದ್ದ ಬಜಾಜ್ (ಸ್ಕೂಟರ್), ಡೈನೋರಾ (ಟಿವಿ) ಮರ್ಫಿ (ರೇಡಿಯೋ) ನೋಕಿಯಾ (ಮೊಬೈಲ್) ರಾಜ್​ದೂತ್ (ಬೈಕ್) ಅಂಬಾಸಿಡರ್ (ಕಾರು) ದಿನೇಶ್ (ಬಟ್ಟೆ) ಕಿಂಗ್​ಫಿಶರ್, ಜೆಟ್ ಏರ್ಲೆನ್ಸ್ ಇನ್ನಿಲ್ಲದಂತೆ ನೆಲಕಚ್ಚಿವೆ. ಅವುಗಳಲ್ಲಿ ನೋಕಿಯಾ ಫಿನಿಕ್ಸ್ ಹಕ್ಕಿಯಂತೆ ಮರುಜನ್ಮ ಪಡೆಯಲು ತನ್ನ ತಪ್ಪನ್ನು ತಿದ್ದಿಕೊಂಡಿದ್ದೇ ಕಾರಣ.

ಹೀಗೆ ಬಾಗಿಲು ಮುಚ್ಚಿದ ಸಂಸ್ಥೆಗಳ ಸಾಲಿಗೆ ಸರ್ಕಾರಿ ಸ್ವಾಮ್ಯದ ಎಚ್​ಎಂಟಿ ಈಗಾಗಲೇ ಸೇರಿಹೋಗಿದ್ದು ಇನ್ನಷ್ಟು ತೀವ್ರ ನಿಗಾ ಘಟಕದ ಹಾದಿಯಲ್ಲಿವೆ. ಆಖಘಔ, ಏರ್ ಇಂಡಿಯಾದಂಥ ಕೆಲವು ಸಂಸ್ಥೆಗಳನ್ನು ಉಳಿಸಲು ಸರ್ಕಾರ ಕಾರ್ಯಪ್ರವೃತ್ತವಾಗಿದ್ದು ಅದರ ಹಿಂದಿರುವ ಸದುದ್ದೇಶವನ್ನು ಸಾರ್ವಜನಿಕರು ಅರ್ಥ ಮಾಡಿಕೊಳ್ಳಬೇಕು.

ಸರ್ಕಾರದ ನೇರ ನಿಯಂತ್ರಣದಲ್ಲಿ ಇರುವ ಸಂಸ್ಥೆಗಳ ಪ್ರಮುಖ ಸಮಸ್ಯೆ ಎಂದರೆ ನೀತಿ ನಿರ್ಧಾರ ಕೈಗೊಳ್ಳಲು ಇರುವ ಕೆಂಪುಪಟ್ಟಿಯ ಅಡೆತಡೆ. ಈ ಕಾರಣದಿಂದಲೇ ಖಾಸಗಿಯವರೊಂದಿಗೆ ಸ್ಪರ್ಧಿಸುವಲ್ಲಿ ಅವುಗಳು ಎಡವುತ್ತಿರುವುದು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ, ಖಾಸಗಿ ಸಂಸ್ಥೆಗಳಲ್ಲಿರುವಂತೆ ಪ್ರತಿಭೆ-ಪರಿಶ್ರಮಗಳಿಗನುಸಾರ ವೇತನ, ಬಡ್ತಿ ನೀಡಲು ಅವಕಾಶವಿಲ್ಲ. ಮಾತ್ರವಲ್ಲ ನೇಮಕಾತಿ, ಬಡ್ತಿಗಳಲ್ಲಿ ಮೀಸಲಾತಿ ಎದುರು ತಾಂತ್ರಿಕ ಪರಿಣತಿ ಗಣನೆಗೆ ಬರುವುದಿಲ್ಲ. ಭಾರತೀಯ ದೂರಸಂಪರ್ಕ ನಿಗಮದ ಇಂದಿನ ಸ್ಥಿತಿಗೆ ಇದೂ ಕಾರಣ.

ಈ ಸಂಸ್ಥೆಯನ್ನು, ತಾಂತ್ರಿಕವಾಗಿ ಉನ್ನತೀಕರಿಸುವ, 90 ಸಾವಿರ ಸಿಬ್ಬಂದಿಯನ್ನು ಸ್ವಯಂಪ್ರೇರಿತ ನಿವೃತ್ತಿಗೊಳಪಡಿಸುವುದು ಮುಂತಾದ ಕ್ರಮಗಳನ್ನು ಸರ್ಕಾರ ಜಾರಿಗೆ ತಂದಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳೇ ಆಗಿರುವ ಆಕಾಶವಾಣಿ, ದೂರದರ್ಶನಗಳೇಕೆ ನಷ್ಟದಲ್ಲಿಲ್ಲ? ಇವೆರಡೂ ತಾಂತ್ರಿಕವಾಗಿ ಅಗತ್ಯಕ್ಕೆ ತಕ್ಕಂತೆ ಸ್ವಲ್ಪವಾದರೂ ಬದಲಾಗಿದ್ದೇ ಕಾರಣ.

ಖಾಸಗಿ ವಿಮಾನಯಾನ ಸಂಸ್ಥೆಗಳು ವಿವಿಧ ರೀತಿಯ ಮಾರುಕಟ್ಟೆ ತಂತ್ರಗಳ ಮೂಲಕ ಪ್ರಯಾಣಿಕರನ್ನು ಆಕರ್ಷಿಸುತ್ತ ಹೆಚ್ಚಿನ ಆದಾಯ ಗಳಿಸುವಲ್ಲಿ ಯಶಸ್ವಿಯಾಗುತ್ತಿದ್ದರೆ, ಏರ್ ಇಂಡಿಯಾ ಇಂತಹ ತಂತ್ರಗಾರಿಕೆಯಲ್ಲಿ ವಿಫಲವಾಗಿದೆ.

ರಾಜ್ಯದ ಸಂಸ್ಥೆಗಳಿಗೆ ಅನ್ವಯಿಸುವುದಾದರೆ, ಕರ್ನಾಟಕದ ವಿದ್ಯುತ್ ವಿತರಣಾ ಸಂಸ್ಥೆಗಳನ್ನು ಕಂಪನಿಗಳಾಗಿ ಪರಿವರ್ತಿಸಿದ ನಂತರ ಗ್ರಾಹಕರಿಂದ ವಿದ್ಯುತ್ ಶುಲ್ಕವನ್ನು ವಸೂಲಿ ಮಾಡುವ ಒತ್ತಡವಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ನಷ್ಟಕ್ಕೆ ಹಲವು ಕಾರಣಗಳಿರುತ್ತವೆ. ಇದೇ ವೇಳೆ ಜೀವವಿಮಾ ನಿಗಮದ ದೈನಂದಿನ ಆಡಳಿತದಲ್ಲಿ ಸಾರ್ವಜನಿಕರನ್ನೂ ಸೇರ್ಪಡೆಗೊಳಿಸುವ ಪ್ರಕ್ರಿಯೆಯೆಂದೇಕೆ ಭಾವಿಸಬಾರದು? ಖಾಸಗಿ ಸಹಭಾಗಿತ್ವದಿಂದ ಸಾರ್ವಜನಿಕರ ನೇರ ನಿಯಂತ್ರಣ ಸಾಧ್ಯ. ಸಂಪೂರ್ಣ ಸರ್ಕಾರಿ ನಿಯಂತ್ರಣವಾದರೆ ಕೇವಲ ರಾಜಕೀಯ ನಿಯಂತ್ರಣ ವಿರುತ್ತದೆ. ಅದೇ ಖಾಸಗಿ ಸಹಭಾಗಿತ್ವವಿದ್ದರೆ ಷೇರುದಾರರಿಂದ ಆಯ್ಕೆಯಾದ, ಸಂಬಂಧಿಸಿದ ಕ್ಷೇತ್ರದಲ್ಲಿ ಪರಿಣತಿ ಹೊಂದಿದವರಾಗಿರುವ ಸಾಧ್ಯತೆಯಿದೆ.

| ಮೋಹನದಾಸ ಕಿಣಿ ಕಾಪು  

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net