

‘ನನ್ನ ಮೇಜಿನ ಮೇಲಿರುವ ಒಂದೇ ಒಂದು ಬಟನ್ ಒತ್ತಿದರೆ ಇಡೀ ಜಗತ್ತನ್ನೇ ಧೂಳೀಪಟ ಮಾಡುವಷ್ಟು ಪ್ರಭಾವಶಾಲಿ ಅಣ್ವಸ್ತ್ರ ನನ್ನ ಬಳಿ ಇದೆ’ ಎಂದು ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜೋಂಗ್ ಹೇಳಿದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇನ್ನಷ್ಟು ಎತ್ತರದ ಸ್ವರದಲ್ಲಿ ತಿರುಗೇಟು ನೀಡಿದರು. ಮಾಧ್ಯಮಗಳು ಇನ್ನೇನು ಮೂರನೇ ಮಹಾಯುದ್ಧ ಆರಂಭವಾಗಿಯೇ ಬಿಟ್ಟಿತು ಎಂಬಂತೆ ಬಿಂಬಿಸತೊಡಗಿದವು.
ಕೆಲವರಂತೂ ಇನ್ನೂ ಒಂದು ಹೆಜ್ಜೆ ಮುಂದುವರಿದು ಮಹಾಯುದ್ಧ ನಡೆದರೆ ಆಗಬಹುದಾದ ಜೀವಹಾನಿ, ಆರ್ಥಿಕ ಸಂಕಷ್ಟ ಇವೆಲ್ಲದರ ಬಗ್ಗೆ ಪುಂಖಾನುಪುಂಖ ವರ್ಣನೆ ಮಾಡತೊಡಗಿದರು. ಈ ನಡುವೆಯೇ ಅಮೆರಿಕ ಅಧ್ಯಕ್ಷರು ಇರಾನಿನ ಸೇನಾನೆಲೆಗಳ ಮೇಲೆ ವೈಮಾನಿಕ ದಾಳಿ ನಡೆಸಲು ಆದೇಶ ನೀಡಿದ್ದೂ ಆಯ್ತು, ದಾಳಿಯಲ್ಲಿ ಸೇನೆಯ ಪ್ರಮುಖರಲ್ಲೊಬ್ಬರು ಸತ್ತಿದ್ದೂ ಆಯಿತು. ಆದರೆ ವಿಶ್ವದ ಗಮನ ಈ ಎಲ್ಲ ಬೆಳವಣಿಗೆಯತ್ತ ಇರುವಾಗಲೇ ಪ್ರಕೃತಿ ಮಾತ್ರ ಸದ್ದಿಲ್ಲದೆ ವಿಶ್ವಯುದ್ಧ ಘೊಷಿಸಿದ್ದು ಗೊತ್ತಾಗಲೇ ಇಲ್ಲ! ಇ
ದು ಯಾರೂ ಊಹಿಸದಷ್ಟು ಬೇಗನೆ ಜಗತ್ತಿನೆಲ್ಲೆಡೆ ವ್ಯಾಪಿಸಿದ್ದೂ ಆಯ್ತು. ಇಲ್ಲಿ ಎರಡು ದೇಶಗಳು ಅಥವಾ ದೇಶಗಳ ಗುಂಪು ಇಲ್ಲ. ಇಡೀ ವಿಶ್ವ ಒಂದೆಡೆಯಾದರೆ ಅಗೋಚರ ಪ್ರಕೃತಿಮಾತೆ ಇನ್ನೊಂದೆಡೆ. ಅದೇ ಕರೊನಾ ವೈರಸ್! ಅದೆಷ್ಟು ವೇಗದಿಂದ ಬಂತೋ, ಅಷ್ಟೇ ವೇಗದಲ್ಲಿ ಜಗತ್ತಿನ ಘಟಾನುಘಟಿ ರಾಷ್ಟ್ರಗಳ ಬುಡವನ್ನೇ ಅಲ್ಲಾಡಿಸಿಬಿಟ್ಟಿತು. ಜೀವಹಾನಿ ಮಾಡುವ ಜತೆಗೆ ಪ್ರವಾಸೋದ್ಯಮ, ವ್ಯಾಪಾರ ವ್ಯವಹಾರ ಎಲ್ಲವನ್ನೂ ಚಿಟಿಕೆ ಹೊಡೆಯುವಷ್ಟರಲ್ಲಿ ಸ್ತಬ್ಧಗೊಳಿಸಿಬಿಟ್ಟಿತು. ಏನಾಗುತ್ತಿದೆ ಎಂದು ಅರ್ಥ ಮಾಡಿಕೊಳ್ಳಲು ಪ್ರಯತ್ನ ಮಾಡುವುದರೊಳಗೆ ಜಗತ್ತೇ ನಡುಗಿತ್ತು!
ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿದ್ದ, ಸನಾತನ ಹಿಂದೂ ಸಂಸ್ಕೃತಿಯನ್ನು ಅಣಕಿಸುತ್ತಿದ್ದ ವಿಶ್ವದ ಅಗ್ರಮಾನ್ಯ ರಾಷ್ಟ್ರಗಳು, ಅದರಲ್ಲೂ ದಿನಬೆಳಗಾದರೆ ಭಾರತದ ಮೇಲೆ ಕತ್ತಿ ಮಸೆಯುತ್ತಿದ್ದ ಚೀನಾ ನಮ್ಮ ಸಂಸ್ಕೃತಿಯ ಪ್ರಮುಖ ಅಂಶವಾದ, ‘ನಮಸ್ಕಾರ’ವನ್ನು ಅಳವಡಿಸಿಕೊಂಡಿದ್ದಲ್ಲದೆ, ಅಂತ್ಯಸಂಸ್ಕಾರದ ವಿಧಿಯಲ್ಲಿ ದಫನ್ ಮಾಡುವ ಕ್ರಿಯೆಯನ್ನು ಕೈಬಿಟ್ಟು ದಹನ ಮಾಡುವ ನಿರ್ಧಾರಕ್ಕೆ ಬಂದುದು, ಆಕಾಶದೆತ್ತರಕ್ಕೆ ಏರಿ ಯಾವುದೋ ಲೋಕದೊಳಗೆ ತೇಲಾಡುತ್ತಿದ್ದವರನ್ನು ಜುಟ್ಟು ಹಿಡಿದು ವಾಸ್ತವ ಜಗತ್ತಿಗೆ ಅಪ್ಪಳಿಸಿದಂತಾಯಿತು.
ಇನ್ನು ಪಾಕಿಸ್ತಾನದಂತಹ ಚಿಲ್ಲರೆ ರಾಷ್ಟ್ರ ಚೀನಾದಲ್ಲಿ ಸಿಲುಕಿದ್ದ ತಮ್ಮ ದೇಶದ ವಿದ್ಯಾರ್ಥಿಗಳನ್ನು ವಾಪಸ್ಸು ತರಿಸಲೂ ಯೋಗ್ಯತೆಯಿಲ್ಲದೆ, ಸುಮ್ಮನಾಯಿತು. ಆದರೂ ನಮ್ಮವರು ಇನ್ನೂ ಜಾಗೃತರಾಗಿರಲಿಲ್ಲ, ಕಳೆದ ವರ್ಷ ಅತಿವೃಷ್ಟಿ, ಅನಾವೃಷ್ಟಿ, ಭೂಕಂಪ, ಭೂಕುಸಿತ ಮುಂತಾದ ಎಚ್ಚರಿಕೆಗಳನ್ನು ಪ್ರಕೃತಿ ನೀಡಿದ್ದರೂ ಬುದ್ಧಿ ಕಲಿಯಲಿಲ್ಲ. ಯಾವುದೋ ಕಾರಣಗಳನ್ನು ಮುಂದಿಟ್ಟುಕೊಂಡು ಗಲಭೆ, ದೊಂಬಿ, ಇನ್ನೂ ಏನೇನೋ ರಂಪಾಟಗಳಲ್ಲಿ ತೊಡಗಿದ್ದ, ದೇಶದೆಲ್ಲೆಡೆಯ ಪ್ರತಿಭಟನಾಕಾರರು, ಅದರಲ್ಲೂ ದೆಹಲಿಯಲ್ಲಿ ಮೂರು ತಿಂಗಳಿಗೂ ಮಿಕ್ಕಿ ಪ್ರತಿಭಟಿಸುತ್ತಿದ್ದವರು ರಾತ್ರಿ ಬೆಳಗಾಗುವುದರೊಳಗೆ ಯಾವ ಬಿಲ ಸೇರಿದರೋ ಗೊತ್ತಿಲ್ಲ.
ಒಂದಂತೂ ನಿಜ, ಹುಲುಮಾನವರಿಗೆ ಬುದ್ಧಿ ಕಲಿಸಬೇಕೆಂದು ಪ್ರಕೃತಿ ಮನಸ್ಸು ಮಾಡಿದರೆ ಹೆಚ್ಚು ಹೊತ್ತು ಬೇಕಿಲ್ಲ ಎಂಬುದಕ್ಕೆ ಇದೊಂದು ಉಜ್ವಲ ನಿದರ್ಶನ.
| ಮೋಹನದಾಸ ಕಿಣಿ ಕಾಪು