ಜನಮತ; ಬೇಕಿದೆ ಅಭಿವೃದ್ಧಿಯ ಬೆಳಕು

Janamata
Published on

ಚಾಮರಾಜನಗರ ಜಿಲ್ಲೆಯು ದೇವಸ್ಥಾನಗಳು, ಪ್ರವಾಸಿತಾಣಗಳು, ಆಕರ್ಷಕ ಜಲಪಾತಗಳಾದ ಗಗನಚುಕ್ಕಿ-ಭರಚುಕ್ಕಿ, ವಿಶಾಲವಾದ ಹೊಗೆನಕಲ್ ಜಲಪಾತಗಳ ತವರೆಂದೇ ಖ್ಯಾತವಾಗಿದೆ.

ಆದರೆ ಪ್ರವಾಸಿತಾಣಗಳ ವೀಕ್ಷಣೆಗೆ ಕರ್ನಾಟಕದ ವಿವಿಧ ಭಾಗಗಳಿಂದ ಬರುವ ಪ್ರವಾಸಿಗರಿಗೆ ಸ್ಥಳೀಯವಾಗಿ ನಾಗರಿಕ ಸೌಲಭ್ಯ ಒದಗಿಸದ ಕಾರಣ, ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರಗಳು ಮುಂದಾಗದ ಕಾರಣ ‘ಹಿಂದುಳಿದ, ಶಾಪಗ್ರಸ್ತ ಜಿಲ್ಲೆ’ ಎಂಬ ಹಣೆಪಟ್ಟಿ ತಾಗಿದೆ.

2008 ರಿಂದ 2014ರವರೆಗೆ ನಾನು ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಅಭಿಯೋಜಕನಾಗಿದ್ದಾಗ, ಜಿಲ್ಲೆಯ 24 ಕೆರೆಗಳು ಬತ್ತಿರುವುದನ್ನು ಗಮನಿಸಿ 2009ರಲ್ಲಿ ಯಡಿಯೂರಪ್ಪ ಸರ್ಕಾರದಲ್ಲಿ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿಯವರಿಗೆ ಕಬನಿ ನದಿಯಿಂದ ನೀರು ಪೂರೈಸಿ ಕೆರೆಗಳೊಡಲು ತುಂಬಲು ಮನವಿ ಮಾಡಿಕೊಂಡಿದ್ದೆ.

ಮನವಿಗೆ ಸ್ಪಂದಿಸಿದ ಸಚಿವರು 2010ರಲ್ಲಿ ಕ್ರಿಯಾಯೋಜನೆಗೆ ಮಂಜೂರಾತಿ ನೀಡಿದರು. 2014ರಲ್ಲಿ ನಂಜನಗೂಡು ತಾಲೂಕಿನ ವ ಚಾಮರಾಜನಗರ ಜಿಲ್ಲೆಯ 24 ಕೆರೆಗಳಿಗೆ ಸರ್ಕಾರ ನೀರು ಹರಿಸಿ ಕೆರೆಯೊಡಲು ತುಂಬಿಸಿತು. ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗಾಗಿ ವಸತಿ ಗೃಹಗಳ ನಿರ್ವಣ, ಬೆಂಗಳೂರು-ಚಾಮರಾಜನಗರ, ಮೈಸೂರು-ಟಿ ನರಸಿಪುರ- ಕೊಳ್ಳೆಗಾಲ ರೈಲುಮಾರ್ಗ ನಿರ್ವಣಕ್ಕಾಗಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿದ್ದು, ಆ ಮನವಿಗಳ ಪ್ರತಿಗಳನ್ನು ಜಿಲ್ಲಾ ಉಸ್ತವಾರಿ ಸಚಿವರಿಗೂ ಸಲ್ಲಿಸಲಾಗಿದೆ. ಜಿಲ್ಲೆಯ ಅಭಿವೃದ್ಧಿಗೆ ಶ್ರಮಿಸಿದರೆ ಹಿಂದುಳಿದ ಜಿಲ್ಲೆ ಎಂಬ ಶಾಪ ವಿಮೋಚನೆ ಆಗಲಿದೆ.

| ಬಸವರಾಜ ಹುಡೇದಗಡ್ಡಿ ವಕೀಲರು, ಮೈಸೂರು 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net