ಮಧ್ಯಂತರದಲ್ಲಿ ಕುಸಿಯುತ್ತಿರುವ ಟ್ರಂಪ್ ಟವರ್

ನಿರೀಕ್ಷೆಯಂತೆ ಮಧ್ಯಂತರ ಚುನಾವಣೆಗಳಲ್ಲಿ ಡೆಮೊಕ್ರಾಟಿಕ್ ಪಕ್ಷ ಅಮೆರಿಕಾದ ಸಂಸತ್ ಕಾಂಗ್ರೆಸ್​ನ ಎರಡೂ ಸದನಗಳಲ್ಲಿ ಬಹುಮತ ಗಳಿಸಿದೆ. ಜನವರಿ ಮೊದಲ ವಾರದಲ್ಲಿ ಹೊಸ ಸದಸ್ಯರೊಂದಿಗೆ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಮೇಲ್ಮನೆ ಸೆನೆಟ್ ರಚನೆಯಾಗುವುದರೊಂದಿಗೆ ಎರಡು ವರ್ಷಗಳಿಂದ ಹೊಂದಿದ್ದ ಬಹುಮತವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ರಿಪಬ್ಲಿಕನ್ ಪಕ್ಷ ಕಳೆದುಕೊಳ್ಳಲಿದೆ.
ಮಧ್ಯಂತರದಲ್ಲಿ ಕುಸಿಯುತ್ತಿರುವ ಟ್ರಂಪ್ ಟವರ್
Published on: 

ನಿರೀಕ್ಷೆಯಂತೆ ಮಧ್ಯಂತರ ಚುನಾವಣೆಗಳಲ್ಲಿ ಡೆಮೊಕ್ರಾಟಿಕ್ ಪಕ್ಷ ಅಮೆರಿಕಾದ ಸಂಸತ್ ಕಾಂಗ್ರೆಸ್​ನ ಎರಡೂ ಸದನಗಳಲ್ಲಿ ಬಹುಮತ ಗಳಿಸಿದೆ. ಜನವರಿ ಮೊದಲ ವಾರದಲ್ಲಿ ಹೊಸ ಸದಸ್ಯರೊಂದಿಗೆ ಕೆಳಮನೆ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಮತ್ತು ಮೇಲ್ಮನೆ ಸೆನೆಟ್ ರಚನೆಯಾಗುವುದರೊಂದಿಗೆ ಎರಡು ವರ್ಷಗಳಿಂದ ಹೊಂದಿದ್ದ ಬಹುಮತವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್​ರ ರಿಪಬ್ಲಿಕನ್ ಪಕ್ಷ ಕಳೆದುಕೊಳ್ಳಲಿದೆ. ಇದು ಅಧ್ಯಕ್ಷರ ಕಾರ್ಯವಿಧಾನಗಳ ಮೇಲೆ, ಅಷ್ಟೇಕೆ ಅವರ ಅಧ್ಯಕ್ಷಗಿರಿಯ ಮೇಲೆ ಎಂತಹ ಋಣಾತ್ಮಕ ಪರಿಣಾಮಗಳನ್ನು ಬೀರಬಹುದೆಂಬುದರ ಬಗ್ಗೆ ಲೆಕ್ಕಾಚಾರಗಳು ಮತ್ತು ಊಹಾಪೋಹಗಳು ಸಹಜವಾಗಿಯೇ ತಾರಕಕ್ಕೇರಿವೆ. ಟ್ರಂಪ್​ರ ಯಾವ ನೀತಿನಿಲುವುಗಳು ಇಂದು ಪಕ್ಷದ ಸೋಲಿಗೆ ಕಾರಣವಾದವೋ ಅವೇ ಅವರ ಕುರಿತಾಗಿ ಕಾಂಗ್ರೆಸ್​ನ ಹೊಸ ಸದನಗಳ ಕಾರ್ಯಯೋಜನೆಗಳನ್ನು ನಿರ್ಧರಿಸಲಿವೆ, ಅಂದರೆ ಕರ್ಮ ಇನ್ನೆರಡು ತಿಂಗಳುಗಳಲ್ಲಿ ಟ್ರಂಪ್​ರ ಬೆನ್ನು ಹತ್ತಲಿದೆ, ಸಾಕಷ್ಟು ಬಲವಾಗಿಯೇ.

ಎರಡು ವರ್ಷಗಳ ಹಿಂದಿನ ಅಧ್ಯಕ್ಷೀಯ ಚುನಾವಣೆ ಸಮಯದಲ್ಲಿ 54% ಇದ್ದ ಟ್ರಂಪ್​ರ ಜನಪ್ರಿಯತೆಯ ಪ್ರಮಾಣ ಇಂದು 36%ಗೆ ಕುಸಿದು ಅವರ ಪಕ್ಷದ ಚುನಾವಣಾ ಸೋಲಿಗೆ ಕಾರಣವಾಗಿರುವುದು ನವೆಂಬರ್ 2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರದಲ್ಲಿ ಮತದಾರರಿಗೆ ಕೊಟ್ಟ ಭಾರಿಭಾರಿ ವಾಗ್ದಾನಗಳನ್ನು ಆ ವ್ಯವಹಾರಕುಶಲಿ ರಾಜಕಾರಣಿ ಈಡೇರಿಸುವುದಿರಲಿ ಅವುಗಳಿಗೆ ಪೂರ್ಣ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಮತದಾರರು ತೀರ್ವನಿಸಿರುವುದರಿಂದ. ಆ ತೀರ್ಮಾನ ಸಾಧುವೇ ಎನ್ನುವುದನ್ನು ಮೊದಲು ವಿಶ್ಲೇಷಿಸುವುದು ಅಗತ್ಯ.

ತಾವು ಅಧಿಕಾರಕ್ಕೆ ಬಂದರೆ ರಷ್ಯಾ-ಯೂಕ್ರೇನ್ ಯುದ್ಧವನ್ನು ಇಪ್ಪತ್ತನಾಲ್ಕು ತಾಸುಗಳಲ್ಲಿ ನಿಲುಗಡೆಗೆ ತರುವುದಾಗಿ ಟ್ರಂಪ್ ಮತ್ತೆಮತ್ತೆ ಘೊಷಿಸಿದ್ದರು. ಅದು ಅಂದು ಅವರ ಜನಪ್ರಿಯತೆಯನ್ನು ಗಣನೀಯವಾಗಿ ವೃದ್ಧಿಸಿದ್ದುದು ಸುಳ್ಳಲ್ಲ. 2022ರ ಫೆಬ್ರವರಿಯಿಂದಲೂ ನಡೆಯುತ್ತಲೇ ಇದ್ದ ಆ ಸಮರ ಜಗತ್ತಿಗೆ ಹಲವು ಬಗೆಯ ಸಂಕಷ್ಟಗಳನ್ನು ತಂದೊಡ್ಡಿತ್ತು. ಸೂರ್ಯಕಾಂತಿ ಎಣ್ಣೆ ಮತ್ತು ಗೋಧಿಯ ಬೃಹತ್ ಉತ್ಪಾದಕ ರಾಷ್ಟ್ರವಾಗಿದ್ದ ಯೂಕ್ರೇನ್ ಯುದ್ಧದಲ್ಲಿ ಸಿಲುಕಿದ್ದರಿಂದ ಆ ಎರಡು ಬಹುಮುಖ್ಯ ಆಹಾರ ಸಾಮಗ್ರಿಗಳ ಉತ್ಪಾದನೆ ಹಾಗೂ ನಿರ್ಯಾತ ಬಾಧಿತಗೊಂಡು ಅವುಗಳ ಕೊರತೆ ಪಶ್ಚಿಮ ಏಷ್ಯಾ ಮತ್ತು ಆಫ್ರಿಕಾಗಳಲ್ಲಿ ಉಲ್ಬಣಗೊಂಡಿತು. ನಮ್ಮ ಅಗತ್ಯದ ಮುಕ್ಕಾಲು ಪಾಲು ಸೂರ್ಯಕಾಂತಿ ಎಣ್ಣೆಗಾಗಿ ನಾವು ಯೂಕ್ರೇನ್ ಮೇಲೆ ಅವಲಂಬಿತವಾಗಿದ್ದುದರಿಂದಾಗಿ ತರಾತುರಿಯಲ್ಲಿ ಬ್ರೆಜಿಲ್ ಮತ್ತು ಅರ್ಜೆಂಟೈನಾಗಳ ಮೊರೆಹೋಗಿ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ನಾವು ಹೆಣಗಿದ್ದನ್ನೂ ನೆನಪಿಸಿಕೊಳ್ಳಬಹುದು. ಯೂರೋಪಿಯನ್ ರಾಷ್ಟ್ರಗಳು ಅನುಭವಿಸತೊಡಗಿದ ಸಂಕಷ್ಟವಂತೂ ಅಪಾರ. ಒಟ್ಟಾರೆ ಯೂರೋಪಿಯನ್ ಯೂನಿಯನ್ ತನ್ನ ಅಗತ್ಯದ 45% ನೈಸರ್ಗಿಕ ಅನಿಲ ಹಾಗೂ 35% ಕಚ್ಚಾತೈಲಕ್ಕಾಗಿ ರಷ್ಯಾ ಮೇಲೆ ಅವಲಂಬಿತವಾಗಿತ್ತು. ಯುದ್ಧದ ಕಾರಣವೊಡ್ಡಿ ರಷ್ಯಾ ಮೇಲೆ ಅಮೆರಿಕಾದ ಬೈಡೆನ್ ಆಡಳಿತ ವಿಧಿಸಿದ ಆರ್ಥಿಕ ದಿಗ್ಬಂಧನಗಳು ಮತ್ತು ಅದರ ಸಹಾಯದಿಂದ ಯೂಕ್ರೇನಿಯನ್ನರು ರಷ್ಯಾ-ಯೂರೋಪ್ ಅನಿಲ ಕೊಳವೆಮಾರ್ಗಗಳಾದ ನಾರ್ಡ್ ಸ್ಟ್ರೀಂ-1 ಮತ್ತು ನಾರ್ಡ್​ಸಿ್ಟ್ರಂ-2ಗಳನ್ನು ಹಾಳುಗೆಡವಿದ್ದರಿಂದಾಗಿ ಯೂರೋಪ್​ಗೆ

ಪೂರೈಕೆ ಹಂತಹಂತವಾಗಿ ಕುಸಿಯುತ್ತಾ ಹೋಗಿ ಅಲ್ಲಿನ ಜನತೆ ಚಳಿಗಾಲವನ್ನು ಕಷ್ಟಕರವಾಗಿ ಕಳೆಯಬೇಕಾಯಿತು. ಅನಿಲವನ್ನೇನೋ ಅಮೆರಿಕಾ ಪೂರೈಸಲು ಮುಂದೆ ಬಂತು. ಆದರೆ ಅದರ ಬೆಲೆ ರಷಿಯನ್ ಅನಿಲಕ್ಕಿಂತ ನಾಲ್ಕೈದು ಪಟ್ಟು ಅಧಿಕ! ಇಂತಹ ಸನ್ನಿವೇಶದಲ್ಲಿ ಯೂಕ್ರೇನ್ ಸಮರವನ್ನು ಟ್ರಂಪ್ ನಿಲುಗಡೆಗೆ ತಂದರೆ ಅದು ಜಗತ್ತಿಗೊಂದು ವರದಾನವೇ ಸರಿ. 2017-21ರ ತಮ್ಮ ಮೊದಲ ಅಧ್ಯಕ್ಷಾವಧಿಯಲ್ಲಿ ಟ್ರಂಪ್ ಆಫ್ಘನ್ ಯುದ್ಧವನ್ನು ನಿಲುಗಡೆಗೆ ತರಲು ಒಪ್ಪಂದ ಮಾಡಿಕೊಂಡಿದ್ದರು. (ಆಮೇಲದು ಕಾರ್ಯರೂಪಕ್ಕೆ ಬಂದದ್ದು ಬೈಡೆನ್ ಕಾಲದಲ್ಲಿ) ಜತೆಗೆ ದ್ವಿತೀಯ ಮಹಾಯುದ್ಧದ ನಂತರ ಒಂದೂ ಹೊಸ ಯುದ್ಧವನ್ನು ಆರಂಭಿಸದ ಅಮೆರಿಕಾದ ಮೊದಲ ಅಧ್ಯಕ್ಷ ಎಂಬ ಹೆಗ್ಗಳಿಕೆಗೂ ಟ್ರಂಪ್ ಪಾತ್ರರಾಗಿದ್ದರು. ಹೀಗಾಗಿ ಯೂಕ್ರೇನ್ ಯುದ್ಧವನ್ನು ನಿಲುಗಡೆಗೆ ತಂದುಬಿಡುತ್ತೇನೆ ಎಂಬ ಟ್ರಂಪ್​ರ ಮಾತನ್ನು ಜಗತ್ತು ನಂಬಿತು ಮತ್ತು ವಿವಿಧ ರಾಷ್ಟ್ರಗಳು ತಂತಮ್ಮ ಸಂಕಷ್ಟಗಳು ದೂರಾಗುತ್ತವೆಂದು ಆಸೆಯಿಂದ ಕಾದವು. ಆದರೆ ಆದದ್ದೇನು?

ಎರಡನೆಯ ಬಾರಿಗೆ ಅಧಿಕಾರಕ್ಕೆ ಬಂದ ವರ್ಷ ಕಳೆಯುವುದರೊಳಗೆ ಟ್ರಂಪ್ ವಿವಿಧ ಕಾರಣಗಳನ್ನೊಡ್ಡಿ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದ ಏಳು ರಾಷ್ಟ್ರಗಳ ಮೇಲೆ ಬಾಂಬ್ ದಾಳಿ ನಡೆಸಲು ವಾಯುಸೇನೆಗೆ ಅವಕಾಶ ಮಾಡಿಕೊಟ್ಟರು. ಕೊನೆಗೆ ಇರಾನ್ ಮೇಲೆ ಭೀಕರ ದಾಳಿಯನ್ನೂ ಆರಂಭಿಸಿಬಿಟ್ಟರು. ಯೂಕ್ರೇನ್ ಸಮರ ಮುಂದುವರಿಯುತ್ತಲೇ ಹೋಯಿತು. ಅದರಿಂದಾಗಿ ಜಗತ್ತಿನ ತೈಲ ಅಗತ್ಯದ ಕಾಲುಭಾಗ ಹಾದುಹೋಗುವ ಹೊಮುಜ್ ಜಲಸಂಧಿ ಬಂದ್ ಆಗಿ ಹೊಸ ಬಗೆಯ ಸಂಕಟ ಧುತ್ತನೆ ಎದುರಾಯಿತು.

ಅತ್ತ ಅಮೆರಿಕಾದೊಳಗೆ ಇನ್ನೊಂದು ನಾಟಕ ಆರಂಭವಾಯಿತು. Mಚkಛಿ ಅಞಛ್ಟಿಜ್ಚಿಚ ಎಛಿಚಠಿ ಅಜಚಜ್ಞಿ ಎಂಬ ಘೊಷಣೆಯೊಂದಿಗೆ ಅಧಿಕಾರಕ್ಕೆ ಬಂದ ಟ್ರಂಪ್ ನೆರೆಯ ಕೆನಡಾ ಮೇಲೆ ಕಣ್ಣುಹಾಕಿ ಆ ಹಳೆಯ ಮಿತ್ರದೇಶವನ್ನು ದೂರಮಾಡಿಕೊಂಡರು. ಗ್ರೀನ್​ಲ್ಯಾಂಡ್ ಸಹಾ ಬೇಕು ಎಂದು ಗಲಾಟೆಯೆಬ್ಬಿಸಿ ಡೆನ್​ವಾರ್ಕ್ ಮತ್ತದರ ಜತೆಗೆ ಯೂರೋಪಿಯನ್ ಯೂನಿಯನ್​ಗೂ ಇರಿಸುಮುರಿಸು ಉಂಟುಮಾಡಿದರು. ಮೆಕ್ಸಿಕೋ ಕೊಲ್ಲಿಯನ್ನು ಅಮೆರಿಕಾ ಕೊಲ್ಲಿ, ಹೊಮುಜ್ ಜಲಸಂಧಿಯನ್ನು ‘ಟ್ರಂಪ್ ಜಲಸಂಧಿ’ ಎಂದೆಲ್ಲಾ ಕರೆದು ನಗೆಪಾಟಲಿಗೀಡಾದರು.

ಟ್ರಂಪ್ ಮಾಡಿದ ಎಲ್ಲಕ್ಕಿಂತ ಹೆಚ್ಚಿನ ಅನಾಹುತಕಾರಿ ಕೃತ್ಯವೆಂದರೆ ಅರ್ತಾಕ ಸುಂಕ ಯೋಜನೆಗಳು. ಅಮೆರಿಕಾಗೆ ಅಧಿಕವಾಗಿ ಸರಕುಗಳನ್ನು ರಫ್ತುಮಾಡಿ ವರ್ಷವರ್ಷವೂ 300-400 ಬಿಲಿಯನ್ ಡಾಲರ್ ಕೊಳ್ಳೆಹೊಡೆಯುತ್ತಿದ್ದ ಚೀನಾ ಮತ್ತು ಕೆನಡಾಗಳಂತಹ ದೇಶಗಳ ಮೇಲೆ ಆಯಾತ ಸುಂಕ ವಿಧಿಸಿ ಸೂರೆಹೋಗುತ್ತಿದ್ದ ಡಾಲರ್ ಸಂಗ್ರಹವನ್ನು ಉಳಿಸಿಕೊಳ್ಳಲು ಪ್ರಯತ್ನಿಸುವುದೇನೋ ಸರಿ, ಆದರೆ ಎಲ್ಲ ದೇಶಗಳ ಸರಕುಗಳ ಮೇಲೆ, ಯಾವ ಸರಕನ್ನೂ ರಫ್ತುಮಾಡದ ಕೇವಲ ಪೆಂಗ್ವಿನ್​ಗಳು ಇರುವ ಹರಡ್ ಮತ್ತು ಮೆಕ್​ಡೊನಾಲ್ಡ್ ದ್ವೀಪಗಳ ಮೇಲೂ ತರ್ಕಕ್ಕೆ ಸಿಗದ ಪ್ರಮಾಣದ ಸುಂಕಗಳನ್ನು ವಿಧಿಸಿದರು. ಅಮೆರಿಕಾದೊಳಗೇ ಆದದ್ದರ ಬಗ್ಗೆ ಹೇಳುವುದಾದರೆ ಅಮೆರಿಕನ್ನರ ದಿನನಿತ್ಯದ ಬದುಕಿಗೆ ಅಗತ್ಯವಾಗಿದ್ದ ವಸ್ತುಗಳ ಮೇಲೆ ಆಯಾತ ಸುಂಕ ಹೇರಿದಾಗ ಅದರ ಹೊರೆ ಬಿದ್ದದ್ದು ಅಮೆರಿಕನ್ನರ ಮೇಲೇ. ಅಂದರೆ ಆ ವಸ್ತುಗಳ ಬೆಲೆಯಲ್ಲಿ ಏಕಾಏಕಿ ಹೆಚ್ಚಳವಾಗಿ ದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಯಿತು. ಹೀಗಾಗಿ ಟ್ರಂಪ್ ಅಮೆರಿಕಾದ ಒಳಗೆ ಮತ್ತು ಹೊರಗೆ ವಿರೋಧವನ್ನೆದುರಿಸುವ ಸ್ಥಿತಿ ನಿರ್ವಣವಾಯಿತು. ಟ್ರಂಪ್ ವಿವೇಕಿಯಾಗಿದ್ದರೆ ಅಮೆರಿಕನ್ನರಿಗೆ ಅಗತ್ಯವಾದ ವಸ್ತುಗಳ ಉತ್ಪಾದನೆ ಸಾಧ್ಯವಾದಷ್ಟು ಮಟ್ಟಿಗೆ ಅಮೆರಿಕಾದೊಳಗೇ ಆಗಿ, ಹೊರದೇಶಗಳ ಮೇಲೆ ಅವಲಂಬನೆ ಕಡಿಮೆಯಾಗುವಂತಹ ಯೋಜನೆಗಳನ್ನು ಹಂತಹಂತವಾಗಿ ಜಾರಿಗೆ ತರಬೇಕಾಗಿತ್ತು. ನಿಜವಾದ ರಾಷ್ಟ್ರನಿರ್ವತೃಗಳು ಹಿಡಿಯುವ ಮಾರ್ಗ ಅದು. ಅದು ಸೀಮಿತ ಅಧಿಕಾರಾವಧಿಯುಳ್ಳ ಅಮೆರಿಕಾದಲ್ಲಿ ಒಬ್ಬ ಅಧ್ಯಕ್ಷನಿಂದಷ್ಟೇ ಸಾಧ್ಯವಾಗುವಂತಹದಲ್ಲ. ಆದರೆ ಅದಕ್ಕೆ ಬುನಾದಿ ಹಾಕಿ ಮುಂದಿನವರಿಗೆ ದಾರಿ ತೋರುವಂತಹ ಧನಾತ್ಮಕ ನಡೆಗಳನ್ನು ಅಧ್ಯಕ್ಷನೊಬ್ಬ ಅನುಸರಿಸಬೇಕು. ಹಿಂದೆ ಸ್ವಾತಂತ್ರಾ್ಯನಂತರ ಜಾರ್ಜ್ ವಾಷಿಂಗ್​ಟನ್, ಅಂತರ್ಯುದ್ಧದ ನಂತರ ಆಂಡ್ಯೂ್ಯ ಜಾನ್ಸನ್, ಮಹಾ ಆರ್ಥಿಕ ಕುಸಿತ (ಗ್ರೇಟ್ ಡಿಪ್ರೆಷನ್) ನಂತರ ಫ್ರಾಂಕ್ಲಿನ್ ಡಿ. ರೂಸ್​ವೆಲ್ಟ್ ಮಾಡಿದ್ದು ಅದನ್ನೇ. ಆದರೆ ಮಹಾನಾಯಕರ ದಾರಿ ಹಿಡಿಯದೇ ಟ್ರಂಪ್ ಏಕಾಏಕಿ ಸುಂಕ ವಿಧಿಸುವ ದಾರಿ ಹಿಡಿದು ಜನಪ್ರಿಯತೆಯನ್ನು ಅಗಾಧವಾಗಿ ಕುಗ್ಗಿಸಿಕೊಂಡರು.

ಇನ್ನು ಇರಾನ್ ಯುದ್ಧದ ಕಥೆಯತ್ತ ಹೊರಳೋಣ. ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ರದು ಈ ವಿಷಯದಲ್ಲಿ ದೊಡ್ಡ ದನಿ. ಸಂಸದೀಯ ಚುನಾವಣೆಗಳಲ್ಲಿ ರಿಪಬ್ಲಿಕನ್ ಪಕ್ಷ ಹೀನಾಯವಾಗಿ ಸೋಲಲು ಇರಾನ್ ಯುದ್ಧ ಪ್ರಮುಖ ಕಾರಣಗಳಲ್ಲೊಂದು ಎಂದು ಅವರು ಹೇಳಿದ್ದಾರೆ. ವ್ಯಾನ್ಸ್​ರ ಮಾತನ್ನು ಟ್ರಂಪ್​ರ ಮಗ ಡೊನಾಲ್ಡ್ ಟ್ರಂಪ್ ಜ್ಯೂನಿಯರ್ ಅನುಮೋದಿಸಿದ್ದಾರೆ. ಟ್ರಂಪ್ ಆರಂಭಿಸಿದ ಇರಾನ್ ಯುದ್ಧದಿಂದಾಗಿ ಅಮೆರಿಕಾದಲ್ಲಿ ಪೆಟ್ರೋಲ್ ಬೆಲೆ ಏರಿತು, ಡೀಸೆಲ್ ಕೊರತೆಯುಂಟಾಯಿತು, ರಸಗೊಬ್ಬರ ತಯಾರಿಕೆಗಾಗಿ ಪೊಟ್ಯಾಷ್ ದುರ್ಲಭವಾಯಿತು ಎನ್ನುವುದೆಲ್ಲವೂ ನಿಜ. ಆದರೆ ಅದಷ್ಟೇ ನಿಜವಲ್ಲ.

ಇರಾನ್​ನ ಮೂಲಭೂತವಾದಿ ನಾಯಕರು ಅಮೆರಿಕಾವನ್ನು ದ್ವೇಷಿಸಲು ಟ್ರಂಪ್ ಕಾರಣರಲ್ಲ. ಅದು ಆರಂಭವಾದದ್ದು 1979ರಲ್ಲಿ ಆಯತೊಲ್ಲಾ ಆಲಿ ಖೊಮೇನಿ ಪಹ್ಲವಿ ಅರಸೊತ್ತಿಗೆಯನ್ನು ಕೊನೆಗಾಣಿಸಿ ಧಾರ್ವಿುಕ ಮೂಲಭೂತವಾದಿ ಸರ್ಕಾರವನ್ನು ಸ್ಥಾಪಿಸಿದಾಗ, ಅಮೆರಿಕಾವನ್ನು ಮಹಾ ಸೈತಾನ ಎಂದು ಹೀಗಳೆದಾಗ, ಮೂಲಭೂತವಾದಿ ಸರ್ಕಾರಕ್ಕೆ ನಿಷ್ಠರಾದ ವಿದ್ಯಾರ್ಥಿಗಳು ತೆಹರಾನ್​ನಲ್ಲಿನ ಅಮೆರಿಕಾದ ರಾಯಭಾರ ಕಚೇರಿಗೆ ನುಗ್ಗಿ 52 ಅಮೆರಿಕನ್ನರನ್ನು 444 ದಿನಗಳಷ್ಟು ದೀರ್ಘಕಾಲದವರೆಗೆ ಒತ್ತೆಯಾಳುಗಳನ್ನಾಗಿ ಹಿಡಿದಿಟ್ಟುಕೊಂಡಾಗ. ಆಗ ಟ್ರಂಪ್ ರಾಜಕೀಯಕ್ಕಿಳಿಯುವ ಕಿಂಚಿತ್ ಸುಳಿವೂ ಇರಲಿಲ್ಲ. ನಂತರ ಇರಾನ್ ಅಣ್ವಸ್ತ್ರಗಳನ್ನು ಪಡೆದುಕೊಳ್ಳುವ ಯೋಜನೆ ರೂಪಿಸಿದ್ದು ಮತ್ತು ಅದಕ್ಕೆ ಅಗತ್ಯವಾದ ಪರಿಕರಗಳನ್ನು ಕಳ್ಳತನದಲ್ಲಿ ಸಂಗ್ರಹಿಸಿಕೊಳ್ಳಲು ಆರಂಭಿಸಿದ್ದು 1990ರ ದಶಕದಲ್ಲಿ. ಆ ಅಣ್ವಸ್ತ್ರ ಯೋಜನೆ ತೀವ್ರಗತಿ ಪಡೆದುಕೊಂಡದ್ದು ಹೊಸ ಶತಮಾನದ ಆರಂಭದ ದಶಕದಲ್ಲಿ. ಆಗಲೂ ಟ್ರಂಪ್ ರಾಜಕೀಯಕ್ಕಿಳಿದಿರಲಿಲ್ಲ. ದಾರುಣ ಸತ್ಯವೆಂದರೆ ಇರಾನ್​ನೊಂದಿಗೆ ಒಪ್ಪಂದ ಮಾಡಿಕೊಂಡು, ಅದರ ಮೇಲಿದ್ದ ನಿರ್ಬಂಧಗಳನ್ನು ತೆಗೆದುಹಾಕಿ, ಅದು ರಹಸ್ಯವಾಗಿ ಅಣ್ವಸ್ತ್ರ ಯೋಜನೆಯನ್ನು ತೀವ್ರಗೊಳಿಸಿದ್ದರತ್ತ ಕಣ್ಣುಮುಚ್ಚಿ ಕೂತದ್ದು ಬರಾಕ್ ಹುಸೇನ್ ಒಬಾಮಾ. ತಮ್ಮ ಪಾಡಿಗೆ ತಾವು ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದ ಟ್ರಂಪ್​ರನ್ನು ಹೀಯಾಳಿಸಿ, ಟ್ರಂಪ್​ರಲ್ಲಿ ರಾಜಕೀಯಕ್ಕಿಳಿಯುವ ಕಿಚ್ಚು ಹೊತ್ತಿಸಿದ್ದೂ ಅದೇ ಒಬಾಮಾ.

ಮುಂದಿನ ದೊಡ್ಡ ಕಥೆಯನ್ನು ಚಿಕ್ಕದಾಗಿಸಿ ಹೇಳುವುದಾದರೆ ಹತ್ತು ವರ್ಷಗಳ ಹಿಂದ ಟ್ರಂಪ್ ಮೊದಲಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದರು, ಒಬಾಮಾ ಆಡಳಿತ ಮಾಡಿಕೊಂಡಿದ್ದ ಒಪ್ಪಂದಕ್ಕೆ ಇರಾನ್ ಪ್ರಾಮಾಣಿಕವಾಗಿ ನಡೆದುಕೊಳ್ಳುತ್ತಿಲ್ಲವೆಂದರಿತ ಅವರು ಅಮೆರಿಕಾವನ್ನು ಆ ಒಪ್ಪಂದದಿಂದ ಹೊರಗೊಯ್ದರು, ಆ ದೇಶದ ಮೇಲೆ ಮತ್ತೆ ಆರ್ಥಿಕ ಹಾಗೂ ವೈಜ್ಞಾನಿಕ ದಿಗ್ಬಂಧನ ವಿಧಿಸಿದರು. ಆರು ವರ್ಷಗಳ ಹಿಂದೆ ಜೋ ಬೈಡೆನ್ ಅಧ್ಯಕ್ಷೀಯ ಚುನಾವಣೆಯನ್ನು ಗೆಲ್ಲುವುದರೊಂದಿಗೆ ಟ್ರಂಪ್ ಮಾಡಿದ್ದೆಲ್ಲವೂ ಹೊಳೆಯಲ್ಲಿ ಹುಣಿಸೆಹಣ್ಣು ತೇಯ್ದಂತಾಯಿತು. ತಮ್ಮ ಎರಡನೆಯ ಅವಧಿಯಲ್ಲಿ ಟ್ರಂಪ್ ಇರಾನ್ ಅಣ್ವಸ್ತ್ರ ರಾಷ್ಟ್ರವಾಗುವುದನ್ನು ತಡೆಯಲೇಬೇಕೆಂದು ಸಂಕಲ್ಪ ಮಾಡಿಕೊಂಡೇ ಶ್ವೇತಭವನ ಪ್ರವೇಶಿಸಿದರು. ಯಾಕೆಂದರೆ ಇರಾನ್ ಅಣ್ವಸ್ತ್ರಗಳನ್ನು ಗಳಿಸಿಕೊಂಡರೆ ಅದು ಇಸ್ರೇಲ್​ಗಷ್ಟೇ ಅಲ್ಲ, ಅಮೆರಿಕಕ್ಕೂ ಘಾತಕಕಾರಿ ಎಂದರಿತ ಮೊತ್ತಮೊದಲ ಅಧ್ಯಕ್ಷ ಈ ಟ್ರಂಪ್.

ನಿಜ ಹೇಳಬೇಕೆಂದರೆ ಇಂದು ಟ್ರಂಪ್ ಮಾಡುತ್ತಿರುವುದನ್ನು ಕನಿಷ್ಠ ಇಪ್ಪತ್ತು-ಇಪ್ಪತೆôದು ವರ್ಷಗಳ ಹಿಂದೆಯೇ ಅಮೆರಿಕಾದ ಅಧ್ಯಕ್ಷರು ಮಾಡಬೇಕಾಗಿತ್ತು. ಆಗ ಇರಾನ್ ಈ ಮಟ್ಟದ ಸೇನಾ ಸಾಮರ್ಥ್ಯವನ್ನು ಹೊಂದಿರಲಿಲ್ಲ. ರಾಜತಾಂತ್ರಿಕವಾಗಿಯೂ ಅದು ರಷ್ಯಾ ಮತ್ತು ಚೀನಾಗಳೊಂದಿಗೆ ಘನಿಷ್ಟ ಸಂಬಂಧ ಹೊಂದಿರಲಿಲ್ಲ. ಬಹುತೇಕ ಎಲ್ಲ ಬಗೆಗಳಲ್ಲೂ ಬಲಹೀನವಾಗಿದ್ದ ಇರಾನ್ ಅನ್ನು ಬಾಗಿಸಿ ಅದರ ಅಣ್ವಸ್ತ್ರ ಯೋಜನೆಯನ್ನು ಪೂರ್ಣವಾಗಿ ನಿಮೂಲನ ಮಾಡುವುದು, ಮೂಲಭೂತವಾದಿ ಸರ್ಕಾರವನ್ನು ಕಿತ್ತುಹಾಕಿ ಶಾಂತಿ ಹಾಗೂ ಸಹಬಾಳ್ವೆಯ ನೀತಿಗಳಿಗೆ ಬದ್ಧವಾದ ಹೊಸ ಸರ್ಕಾರವನ್ನು ಸ್ಥಾಪಿಸುವುದು ಆಗ ಸಾಧ್ಯವಿತ್ತು. ಅಂತಹ ಪ್ರಯತ್ನಗಳು ಹೊಮುಜ್ ಜಲಸಂಧಿಯನ್ನು ಮುಕ್ತವಾಗಿಯೇ ಇರಿಸುತ್ತಿದ್ದವು, ಕೊಲ್ಲಿ ರಾಷ್ಟ್ರಗಳ ತೈಲ ಪೂರೈಕೆಯನ್ನು ಕಾಪಾಡುತ್ತಿದ್ದವು. ಆದರೀಗ ಕಾಲ ಬಹುಶಃ ಮಿಂಚಿಹೋಗಿದೆ. ಇರಾನ್ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುವ ತೀರ್ಮಾನ ಹೊಂದಿದ ಅಧ್ಯಕ್ಷನೊಬ್ಬ ಶ್ವೇತಭವನದಲ್ಲಿ ಕಾಣಿಸಿಕೊಳ್ಳುವ ಹೊತ್ತಿಗೆ ಇರಾನ್ ಸೇನಾಶಕ್ತಿಯಲ್ಲಿ, ರಾಜತಾಂತ್ರಿಕ ಅನುಕೂಲತೆಗಳಲ್ಲಿ ಮತ್ತು ಆರ್ಥಿಕ ಶಕ್ತಿಯಲ್ಲಿ ನಿಗ್ರಹಿಸಲಾಗದಷ್ಟು ಮಟ್ಟಿಗೆ ಬೆಳೆದುಹೋಗಿದೆ. ಅದರ ವಿರುದ್ಧ ಕಾರ್ಯಾಚರಣೆಗಿಳಿಯುವ ಯಾವುದೇ ದೇಶ ಒಂದಷ್ಟು ಹಾನಿಯನ್ನು ಅನುಭವಿಸಲೇಬೇಕಾಗುತ್ತದೆ. ಅಂತಹ ಹಾನಿಯನ್ನು ತಾತ್ಕಾಲಿಕವಾಗಿ ಅನುಭವಿಸಲು ಅಮೆರಿಕನ್ನರು ತಯಾರಿಲ್ಲ. ಇದು ಟ್ರಂಪ್​ರ ಸಮಸ್ಯೆ. ಅವರು ತಮ್ಮದಲ್ಲದ ಕಾಲದಲ್ಲಿ ಅಮೆರಿಕಾದ ಅಧ್ಯಕ್ಷರಾಗಿದ್ದಾರೆ. ಹಿಂದಿನವರು ಮಾಡದೇ ಬಿಟ್ಟ ಅತ್ಯವಶ್ಯಕ ಕೆಲಸವನ್ನು ಮಾಡಲುಹೋಗಿ ಕೈಸುಟ್ಟುಕೊಳ್ಳುತ್ತಿದ್ದಾರೆ.

ಟ್ರಂಪ್ ಅಮೆರಿಕಾದ ಅಧ್ಯಕ್ಷರಾಗಿ ಇನ್ನೆರಡು ವರ್ಷ ಇರಬಹುದು ಅಥವಾ ಅದಕ್ಕೂ ಮೊದಲೇ ಮಹಾಭಿಯೋಗದ ಮೂಲಕ ಹೊರದೂಡಲ್ಪಡಲೂಬಹುದು. ಆದರೆ ಅವರು ಮಾಡಹೊರಟ ಕೆಲಸ ಅಮೆರಿಕದ ಹಿತಾಸಕ್ತಿಗಳಿಗೆ ಅದೆಷ್ಟು ಅಗತ್ಯವಾಗಿತ್ತು ಎನ್ನುವುದನ್ನು ಅಮೆರಿಕನ್ ಮತದಾರ ಅರಿಯುವ ದಿನ ದೂರವಿಲ್ಲ. ಅಮೆರಿಕನ್ನರೊಂದಿಗೆ ಇತರ ಹಲವು ದೇಶಗಳಿಗೂ ಆ ಅರಿವು ತಟ್ಟಲಿದೆ. ಟ್ರಂಪ್ ಅಧ್ಯಕ್ಷಗಿರಿಯ ಬ್ಯಾಲೆನ್ಸ್ ಶೀಟ್ ಇಲ್ಲಿಗೇ ಮುಕ್ತಾಯವಾಗುವುದಿಲ್ಲ.

(ಮುಂದುವರಿಯುತ್ತದೆ)

-(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)