ಈ ಸಂಘರ್ಷ ಇಂದು ನಾಳೆ ನಿಲ್ಲುವಂತಹದಲ್ಲ...

ವಿಶೇಷ ಅಂಕಣ, ಚಿತ್ರಕೃಪೆ: pixabay
ವಿಶೇಷ ಅಂಕಣ, ಚಿತ್ರಕೃಪೆ: pixabay
Published on: 

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಇದು 1963ರ ಜನವರಿಯಿಂದಲೂ ಅವ್ಯಾಹತವಾಗಿ ನಡೆಯುತ್ತಿದೆ. ದುರದೃಷ್ಟವೆಂದರೆ ನಮ್ಮ ನಾಯಕರೂ ಅದಕ್ಕೆ ಸಹಕರಿಸಿದ್ದಾರೆ. ಸ್ಯಾಂಡ್​ಹರ್ಸ್ಟ್ ಸೇನಾ ಶಿಕ್ಷಣ ಕೇಂದ್ರದಲ್ಲಿ ಭಾರತೀಯ ಸೇನಾಧಿಕಾರಿಗಳೊಂದಿಗೇ ತರಬೇತಿ ಪಡೆದಿದ್ದ, ಏಷ್ಯಾದಲ್ಲೇ ಬಲಿಷ್ಠವೆನಿಸಿದ್ದ ಬ್ರಿಟಿಷ್ ಭಾರತೀಯ ಸೇನೆಯನ್ನು ಹೆಮ್ಮೆಯಿಂದ ನೆನಪಿಸಿಕೊಳ್ಳುತ್ತಿದ್ದ ಪಾಕಿಸ್ತಾನದ ಸೇನಾ ಸರ್ವಾಧಿಕಾರಿ ಫೀಲ್ಡ್​ಮಾರ್ಷಲ್ ಅಯೂಬ್ ಖಾನ್ ಭಾರತ ಮತ್ತು ಪಾಕಿಸ್ತಾನಗಳ ರಕ್ಷಣಾಪಡೆಗಳನ್ನು ಮತ್ತೆ ಒಂದುಗೂಡಿಸುವ ಅಗತ್ಯದ ಬಗ್ಗೆ 1960ರಲ್ಲಿ ಮಾತಾಡಿದ್ದರು. ಅವರ ಪ್ರಕಾರ ಆ ಸೇನೆ ಉಭಯ ದೇಶಗಳ ಗಡಿಯಲ್ಲಿರಬಾರದು, ಬದಲಿಗೆ ಇತರ ದೇಶಗಳೊಂದಿಗೆ ಎರಡೂ ದೇಶಗಳು ಹೊಂದಿರುವ ಗಡಿಗಳನ್ನು ರಕ್ಷಿಸುವುದು ಅದರ ಜವಾಬ್ದಾರಿಯಾಗಬೇಕು. ಒಂದುವೇಳೆ ಈ ಯೋಜನೆ ಜಾರಿಗೆ ಬಂದಿದ್ದರೆ ಭಾರತ-ಚೀನಾ ಗಡಿಯನ್ನು ಪಾಕಿಸ್ತಾನಿ ಸೈನಿಕರೂ ಕಾಯುತ್ತಿದ್ದರು ಮತ್ತು 1962ರ ಯುದ್ಧದಲ್ಲಿ ಚೀನಿ ಸೇನೆಯೊಂದಿಗೆ ಹೋರಾಡುತ್ತಿದ್ದರು! ಹಾಗಾಗಿದ್ದ ಪಕ್ಷದಲ್ಲಿ ಪಾಕಿಸ್ತಾನ ಮತ್ತು ಚೀನಾ ಹತ್ತಿರಾಗುವ ಅವಕಾಶ ಬಹುಶಃ ಇಲ್ಲವಾಗುತ್ತಿತ್ತು. ಆದರೆ ಅಯೂಬ್ ಸಲಹೆಗೆ ನೆಹರೂರ ಪ್ರತಿಕ್ರಿಯೆ- ‘ಜಂಟಿ ರಕ್ಷಣಾ ಪಡೆಗಳು! ಯಾರ ವಿರುದ್ಧ? 

ಎರಡೂ ದೇಶಗಳಿಗೆ ಪರಸ್ಪರರ ಹೊರತಾಗಿ ಬೇರೆ ಶತ್ರುಗಳೇ ಇಲ್ಲ’ ಎನ್ನುವುದು ಆ ‘ಪಂಡಿತ’ರ ತಿಳುವಳಿಕೆಯಾಗಿತ್ತು! ಅದೆಷ್ಟು ತಪ್ಪಾಗಿತ್ತು ಎನ್ನುವುದನ್ನು ಮುಂದಿನ ಎರಡೇ ವರ್ಷಗಳಲ್ಲಿ ಚೀನಾ ಸಾಬೀತುಮಾಡಿತು. ಆಗಲೂ ಅಯೂಬ್ ಖಾನ್ ನಿಂತದ್ದು ಭಾರತದ ಪರವಾಗಿಯೇ. ಪಾಕಿಸ್ತಾನಿ ಗಡಿಯಲ್ಲಿರುವ ತನ್ನ ಸೇನೆಯನ್ನು ಭಾರತ ಚೀನಿ ಗಡಿಗೆ ಒಯ್ದು ಅಲ್ಲಿ ರಕ್ಷಣೆಯನ್ನು ಬಲಪಡಿಸಿಕೊಳ್ಳಬೇಕೆಂದು ಅವರು ಸೂಚಿಸಿದರು. ಭಾರತದ ಸಂಕಷ್ಟವನ್ನು ತಾವು ದುರುಪಯೋಗಪಡಿಸಿಕೊಳ್ಳುವುದಿಲ್ಲವೆಂದು ತೋರಿಸಲು ತಮ್ಮ ಸೇನೆಯನ್ನು ಭಾರತದ ಗಡಿಯಿಂದ ದೂರ ಒಯ್ಯಲು ವ್ಯವಸ್ಥೆ ಮಾಡಿದರು. ಇದಕ್ಕೆ ನಮ್ಮ ಪ್ರತಿಕ್ರಿಯೆ? ಭಾರತ-ಚೀನಾ ಯುದ್ಧ ಆರಂಭವಾದ ಮರುದಿನ ಅಂದರೆ ಅಕ್ಟೋಬರ್ 21, 1962ರಂದು ಬಾಂಬೇಯಲ್ಲಿ ಮಾಡಿದ ಸಾರ್ವಜನಿಕ ಭಾಷಣದುದ್ದಕ್ಕೂ ರಕ್ಷಣಾ ಮಂತ್ರಿ ವಿ.ಕೆ. ಕೃಷ್ಣ ಮೆನನ್ ಪಾಕಿಸ್ತಾನದ ವಿರುದ್ಧವಾಗಿಯೇ ಮಾತಾಡಿದರು. 

ಹಿಂದಿನ ದಿನ ನಮ್ಮ ಮೇಲೆ ಆಕ್ರಮಣವೆಸಗಿದ್ದ ಚೀನಾ ವಿರುದ್ಧ ಒಂದು ಮಾತೂ ಇಲ್ಲ! ಇದೆಲ್ಲದರಿಂದ ಭ್ರಮನಿರಸನಗೊಂಡ ಅಯೂಬ್ ಖಾನ್ ನೆಹರೂರ ಮನಗೆಲ್ಲುವ ವ್ಯರ್ಥ ಪ್ರಯತ್ನವನ್ನು ಕೈಬಿಟ್ಟು ಚೀನಾದತ್ತಲೇ ಸ್ನೇಹಹಸ್ತ ಚಾಚಿದರು. ಅದರಲ್ಲಿ ಅವರ ಚಾಲಾಕಿ ವಿದೇಶಮಂತ್ರಿ ಝುುಲ್ಪಿಕರ್ ಆಲಿ ಭುಟ್ಟೋರ ಪಾತ್ರ ದೊಡ್ಡದಾಗಿತ್ತು. ಒಟ್ಟಾರೆಯಾಗಿ ಪಾಕಿಸ್ತಾನವನ್ನು ಚೀನಾದ ತೆಕ್ಕೆಗೆ ದೂಡಿದ ದೊಡ್ಡ ಕೈ ನೆಹರೂ ಸರ್ಕಾರದ್ದು ಎನ್ನದೇ ವಿಧಿಯಿಲ್ಲ. ಇನ್ನು ಶ್ರೀಲಂಕಾ, ನೇಪಾಳ, ಬಾಂಗ್ಲಾದೇಶ ಮತ್ತು ಮಾಲ್ದೀವ್ಸ್​ಗಳನ್ನೂ ತನ್ನತ್ತ ಸೆಳೆದುಕೊಂಡು ಭಾರತವನ್ನು ಇನ್ನಷ್ಟು ಸಂಕಷ್ಟಕ್ಕೀಡುಮಾಡಲು ಚೀನಾ ಮತ್ತೆಮತ್ತೆ ಪ್ರಯತ್ನಿಸುತ್ತಲೇ ಇದೆ. ತನ್ನ ಈ ವಿಸ್ತರಿತ ಭಾರತ-ವಿರೋಧಿ ನೀತಿಗಳಲ್ಲಿ ಅದು ನಮ್ಮದೇ ನಾಯಕರನ್ನೂ ಉಪಯೋಗಿಸಿಕೊಂಡದ್ದಕ್ಕೆ ಉದಾಹರಣೆಯಿದೆ. 2006-08ರಲ್ಲಿ ನೇಪಾಳದಲ್ಲಿ ತೀವ್ರ ರಾಜಕೀಯ ಬದಲಾವಣೆಗಳು ಘಟಿಸತೊಡಗಿದಾಗ ಸಿಪಿಎಂ ನಾಯಕ ಸೀತಾರಾಮ್ ಯೆಚೂರಿಯವರನ್ನು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಕಾಠ್ಮಂಡುವಿಗೆ ಅಟ್ಟಿದರು. 

ಅಲ್ಲಿ ತಮ್ಮ ಯೆಚೂರಿ ಪ್ಲಾನ್ ಅನಾವರಣಗೊಳಿಸಿದ ಕಮ್ಯೂನಿಸ್ಟ್ ನಾಯಕ ನೇಪಾಳ ಗಣರಾಜ್ಯವಾಗುವಂತೆ, ಹಿಂದೂ ರಾಷ್ಟ್ರವೆಂಬ ಹಣೆಪಟ್ಟಿಯನ್ನೂ ಕಿತ್ತೊಗೆಯುವಂತೆ ಮಾಡಿದರು. ಮುಂದುವರೆದು ಅಲ್ಲಿನ ರಾಜಕಾರಣದಲ್ಲಿ ಕಮ್ಯೂನಿಸ್ಟರು ಮತ್ತು ಮಾವೋವಾದಿಗಳು ಮುನ್ನೆಲೆಗೆ ಬರಲು ಸಹಕರಿಸಿತು. ಅದೆಲ್ಲವೂ ಅನುಕೂಲ ಒದಗಿಸಿದ್ದು ಚೀನಾಗೆ. ಜೂನ್ 2008ರಲ್ಲಿ ಚೀನಿ ಕಮ್ಯೂನಿಸ್ಟ್ ಪಕ್ಷದ ವಿದೇಶಿ ಬೇಹುಗಾರಿಕಾ ವಿಭಾಗ ಇಂಟರ್​ನ್ಯಾಷನಲ್ ಲಿಯಾಸನ್ ಡಿಪಾರ್ಟ್​ವೆುಂಟ್ ಜತೆಗೆ ನಮ್ಮ ದೇಶದ ಕಾಂಗ್ರೆಸ್ ಪಕ್ಷ ಮಾಡಿಕೊಂಡ ರಹಸ್ಯ ಒಪ್ಪಂದವನ್ನೂ, ಅದಕ್ಕೆ ರಾಹುಲ್ ಗಾಂಧಿ ಸಹಿ ಹಾಕಿದ್ದನ್ನೂ ನೆನಪಿಸಿಕೊಳ್ಳಿ.

ಇನ್ನು ನಮ್ಮ ವಿರುದ್ಧ ಪಾಕಿಸ್ತಾನ (ಅಯೂಬ್ ಖಾನ್ ಆಡಳಿತದ ಮೊದಲ ಐದು ವರ್ಷಗಳ ಹೊರತಾಗಿ) ಮಾಡುತ್ತಿರುವುದನ್ನು, ನಾಲ್ಕು ಯುದ್ಧಗಳನ್ನು, ಅಸಂಖ್ಯ ಗಡಿ ತಂಟೆಗಳನ್ನು, ಭಯೋತ್ಪಾದನೆಯನ್ನು ನಾನಿಲ್ಲಿ ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಅದರ ಭಯೋತ್ಪಾದನಾ ಕೃತ್ಯಗಳಲ್ಲಿ ಸ್ಥಳೀಯರೂ ಸಹಕರಿಸುತ್ತಿರುವುದೂ ಎಲ್ಲರಿಗೂ ಗೊತ್ತಿರುವಂತಹದೇ. ಖಲಿಸ್ತಾನಿ ಭಯೋತ್ಪಾದಕರು ಪಾಕಿಸ್ತಾನಿ ಅಜೆಂಡಾವನ್ನು ಮುಂದಿಟ್ಟುಕೊಂಡು 1981-93ರ ಅವಧಿಯಲ್ಲಿ ನಡೆಸಿದ ರಕ್ತದೋಕುಳಿ ನಮಗಿನ್ನೂ ನೆನಪಿದೆ. ಇನ್ನು ಕಾಶ್ಮೀರದ ದುರಂತ ಕಥೆಯನ್ನು ನೆನಪಿಸಿಕೊಳ್ಳುವುದೇ ಬೇಡ. ನಮ್ಮವರನ್ನೇ ಬಳಸಿಕೊಂಡು ಪಾಕಿಸ್ತಾನ ನಮಗೆ ಎಸಗುತ್ತಿರುವ ಒಂದೆರಡು ಸೂಕ್ಷ್ಮ ಸಂಗತಿಗಳನ್ನಷ್ಟೇ ಹೇಳುತ್ತೇನೆ. ತನ್ನದೇ ಮುಸ್ಲಿಂ ಭಯೋತ್ಪಾದಕರ ಬದಲಿಗೆ ಭಾರತದ ಹಿಂದೂಗಳನ್ನೇ ಭಯೋತ್ಪಾದಕ ಕೃತ್ಯಗಳಿಗಾಗಿ ಬಳಸುವ ಷಡ್ಯಂತ್ರವನ್ನು ಪಾಕಿಸ್ತಾನ ಕನಿಷ್ಠ ಕಾಲು ಶತಮಾನದ ಹಿಂದೆಯೇ ಆರಂಭಿಸಿತು. 

ಎಲ್​ಇಟಿ ಭಯೋತ್ಪಾದಕಿ ಇಶ್ರತ್ ಜಹಾನ್​ಳ ಸಂಗಾತಿ ಪ್ರಾಣೇಶ್ ಪಿಳ್ಳೈ ಉರುಫ್ ಜಾವೇದ್ ಶೇಖ್ ಅಂತಹ ಹೆಸರುಗಳಲ್ಲೊಂದು. ತೀರಾ ಇತ್ತೀಚೆಗೆ 2020ರಲ್ಲಿ ಐಎಸ್​ಐ ಭಯೋತ್ಪಾದಕನೊಬ್ಬ ಅಫ್ಘಾನಿಸ್ತಾನದ ಗುರುದ್ವಾರವೊಂದಕ್ಕೆ ನುಗ್ಗಿ ಬಾಂಬ್ ಸ್ಪೋಟಿಸಿ ಹಲವರನ್ನು ಕೊಂದು ತಾನೂ ಸತ್ತ. ಅಫ್ಘನ್ ಸರ್ಕಾರವೇ ನಡೆಸಿದ ತನಿಖೆಯಿಂದ ಪತ್ತೆಯಾದದ್ದು ಆತ ಮೂಲತಃ ಕೇರಳದ ಹಿಂದೂ! ಇಂತಹ ಉದಾಹರಣೆಗಳು ಹಲವಾರಿವೆ. ಹಿಂದೂಗಳಾರೂ ಸಿಗದಿದ್ದಾಗ ತನ್ನದೇ ಮುಸ್ಲಿಂ ಭಯೋತ್ಪಾದಕರನ್ನು ಹಿಂದೂಗಳಂತೆ ಬಿಂಬಿಸುವ ಕೆಲಸವನ್ನು ಪಾಕಿಸ್ತಾನ ಮಾಡುತ್ತದೆ. ಇದಕ್ಕೆ ದೊಡ್ಡ ಉದಾಹರಣೆ ಮುಂಬೈ ಹತ್ಯಾಕಾಂಡದಲ್ಲಿ ಸೆರೆಸಿಕ್ಕ ಅಜ್ಮಲ್ ಕಸಬ್ ಮುಂಗೈಗೆ ಕಟ್ಟಿಕೊಂಡಿದ್ದ ಕಲಾವ. ಒಂದುವೇಳೆ ಅವನನ್ನು ಪೇದೆ ತುಕಾರಾಂ ಓಂಬಳೆ ಜೀವಂತವಾಗಿ ಹಿಡಿಯದಿದ್ದರೆ ಆ ಘೊರ ಹತ್ಯಾಕಾಂಡವನ್ನು ಎಸಗಿದ ಆ ಹತ್ತು ನರರಕ್ಕಸರು ಹಿಂದೂಗಳೇ, ಆರ್​ಎಸ್​ಎಸ್​ನವರೇ ಎಂದು ಹೇಳುವ ಪಾಕಿಸ್ತಾನಿ ಷಡ್ಯಂತ್ರ ಯಶಸ್ವಿಯಾಗುತ್ತಿತ್ತು. 

ಇಷ್ಟಾಗಿಯೂ, ಕಸಬ್​ನ ವಿಚಾರಣೆಯಾಗಿ, ಗಲ್ಲುಶಿಕ್ಷೆಯೂ ಜರುಗಿಹೋದ ಮೇಲೆ 2010 ಡಿ. 6ರಂದು ‘ಆರ್​ಎಸ್​ಎಸ್ ಕೀ ಸಾಜಿಷ್: 26/11’ ಎಂಬ ಪುಸ್ತಕ ಭಾರತದಲ್ಲೇ ಬಿಡುಗಡೆಗೊಂಡಿತು. ಅದನ್ನು ಬರೆದವರು ಪ್ರಮುಖ ಉರ್ದು ಪತ್ರಿಕೆ ರಾಷ್ಟ್ರೀಯ ಸಹಾರಾದ ಪ್ರಧಾನ ಸಂಪಾದಕ ಅಜೀಜ್ ಬರ್ನೀ, ಬಿಡುಗಡೆಗೊಳಿಸಿದವರು ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್, ಬಿಡುಗಡೆಯಾದ ದಿನ ಬಾಬ್ರಿ ಮಸೀದಿ ಧ್ವಂಸದ ವಾರ್ಷಿಕೋತ್ಸವ! ಪಾಕಿಸ್ತಾನಿ ಷಡ್ಯಂತ್ರಗಳಿಗೆ ಸಹಕರಿಸುವವರು ಈ ದೇಶದೊಳಗೇ ಇದ್ದಾರೆ ಎಂದು ಇದರಿಂದ ಹೇಳದಿರಲಾಗುತ್ತದೆಯೇ? ಇದೇ ಸರಣಿಯಲ್ಲಿ ತೀರಾ ಇತ್ತೀಚಿನ ಪ್ರಕರಣಕ್ಕೆ ಬರೋಣ. ದೆಹಲಿಯ ಜಂತರ್ ಮಂತರ್​ನಲ್ಲಿ ಸಿಜೆಪಿ ಆಂದೋಲನ ನಡೆಯುತ್ತಿದ್ದಾಗ ಅಲ್ಲಿ ಪೆಟ್ರೋಲ್ ಬಾಂಬ್ ಎಸೆದು ಗೊಂದಲ ಸೃಷ್ಟಿಸಲು ಪಾಕಿಸ್ತಾನದ ಐಎಸ್​ಐ ತಯಾರು ಮಾಡಿದ್ದ 9 ಜನರನ್ನು ಬಂಧಿಸಲಾಗಿದೆ, ಅವರಲ್ಲಿ ನಾಲ್ವರು ಮುಸ್ಲಿಮರಲ್ಲದ ಬಾಲಕರು ಎಂದು ಅಮೃತಸರ್ ಪೊಲೀಸ್ ಕಮಿಷನರ್ ಗುರ್​ಪ್ರೀತ್ ಸಿಂಗ್ ಭುಲ್ಲರ್ 2026ರ ಆಗಸ್ಟ್ 4ರಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. 

ಆ ಬಾಲಕರು ದೆಹಲಿಗೆ ಪ್ರಯಾಣಿಸಿ ಜಂತರ್ ಮಂತರ್​ಗೂ ಹೋಗಿದ್ದುದಾಗಿಯೂ, ಆದರೆ ಧೈರ್ಯ ಸಾಲದೇ ತಮಗೊಪ್ಪಿಸಲಾದ ಕೆಲಸವನ್ನು ಮಾಡಲಾಗದೇ ಹಿಂತಿರುಗಿದರೆಂದೂ ಭುಲ್ಲರ್ ಹೇಳಿದರು. ತನ್ನ ಕುಕೃತ್ಯಗಳಿಗಾಗಿ ಸ್ಥಳೀಯ ಸಿಖ್ ಹಾಗೂ ಹಿಂದೂ ಎಳೆಯರನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿರುವ ಗಂಭೀರ ಸಮಸ್ಯೆಯ ಕುರಿತಾಗಿನ ಸೂಕ್ಷ್ಮ ಸತ್ಯಾಂಶಗಳಿವು. ಆದರೆ ಇದನ್ನು ಹೊರಗೆಡಹಿದ ಮರುದಿನವೇ ಆ ಪೊಲೀಸ್ ಕಮಿಷನರ್ ಭುಲ್ಲರ್​ರನ್ನು ಪಂಜಾಬ್ ಸರ್ಕಾರ ಪದವಿಯಿಂದ ಕಿತ್ತೊಗೆಯಿತು. ಜತೆಗೆ, ಬಂಧಿತ ಬಾಲಕರಿಗೂ ಸಿಜೆಪಿ ಆಂದೋಲನಕ್ಕೂ ಯಾವ ಸಂಬಂಧವೂ ಇಲ್ಲ ಎಂದೂ ಹೇಳಿತು. ಪಂಜಾಬ್​ನಲ್ಲೀಗ ಭಗವಂತ್ ಮಾನ್ ಹೆಸರಿಗೆ ಮಾತ್ರ ಮುಖ್ಯಮಂತ್ರಿಯಷ್ಟೇ. ಅವರ ಮೇಲೆ ಕುಳಿತಿರುವ ಸೂಪರ್ ಚೀಫ್ ಮಿನಿಸ್ಟರ್ ಅರವಿಂದ್ ಕೇಜ್ರಿವಾಲ್. ಅವರು ಇದೆಲ್ಲವನ್ನೂ ಮಾಡಿದ್ದು ಯಾಕಾಗಿ? ಯಾರನ್ನು ಕಾಪಾಡಲಿಕ್ಕಾಗಿ?

ಹೀಗೆ ಚೀನಾ ಮತ್ತು ಪಾಕಿಸ್ತಾನಗಳ ಜತೆಗೆ ತುರ್ಕಿಯೇ, ಬಾಂಗ್ಲಾದೇಶಗಳಂತಹ ದೇಶಗಳು ಇಲ್ಲಿ ತಮ್ಮ ಪರವಾಗಿ ತಮಗೆ ಸಾಧ್ಯವಾಗುವ ಮಟ್ಟಿಗೆ ಕಾರಸ್ಥಾನಗಳನ್ನು ನೇರವಾಗಿ ಅಥವಾ ಸ್ಥಳೀಯ ಸಹಚರಿಗಳ ಮೂಲಕ ನಡೆಸುತ್ತವೆ. ಇವೆಲ್ಲವನ್ನೂ ಆಂಗ್ಲೋಸ್ಪಿಯರ್ ದೇಶಗಳು ಉಪಯೋಗಿಸಿಕೊಳ್ಳುತ್ತವೆ. ಹೀಗೆ ಬಳಸಿಕೊಳ್ಳುವಾಗ ಆಯಾ ದೇಶಗಳ ಜತೆ ಆಂಗ್ಲೋಸ್ಪಿಯರ್ ದೇಶಗಳು ಹೊಂದಿರಬಹುದಾದ ನಕಾರಾತ್ಮಕ ಅಥವಾ ಅಹಿತಕರ ಸಂಬಂಧಗಳು ಪರಿಗಣನೆಗೆ ಒಳಗಾಗುವುದಿಲ್ಲ! ಐದೂ ಆಂಗ್ಲೋಸ್ಪಿಯರ್ ದೇಶಗಳು ತಮ್ಮದಷ್ಟೇ ಆದ ಜಂಟಿ ಬೇಹುಗಾರಿಕಾ ವ್ಯವಸ್ಥೆ ಊಜಿಡಛಿ ಉಢಛಿಠ ಮಾಡಿಕೊಂಡಿವೆ. ಇದರ ಮೂಲಕ ಅವುಗಳಿಗೆ ಗೊತ್ತಾಗದ ಬೆಳವಣಿಗೆಗಳು ಬಹಳ ಅಲ್ಪ. ಸಿಕ್ಕಿದ ಬೇಹುಗಾರಿಕಾ ಮಾಹಿತಿಗಳನ್ನು ಇವು ಹಂಚಿಕೊಳ್ಳುತ್ತವೆ ಮತ್ತು ಅವುಗಳ ಆಧಾರದ ಮೇಲೆ ತಮ್ಮ ಮುಂದಿನ ಯೋಜನೆಗಳನ್ನು ಸಂಯೋಜಿತವಾಗಿ ರೂಪಿಸಿಕೊಳ್ಳುತ್ತವೆ. ಭಾರತದ ವಿಷಯದಲ್ಲಿ ಈ ನಡೆ ದಶಕಗಳಿಂದಲೂ ನಡೆಯುತ್ತಲೇ ಇದೆ.

ಇಡೀ ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಿಸಲು ಸಾಧ್ಯವಾಗದಿದ್ದರೆ ಭಾರತಕ್ಕೆ ಅಫ್ಘಾನಿಸ್ತಾನ ಮತ್ತು ಮಧ್ಯ ಏಷ್ಯಾದ ಸಂಪರ್ಕ ಇಲ್ಲದಂತೆ ಮಾಡುವಷ್ಟಾದರೂ ಕಾಶ್ಮೀರಿ ನೆಲವನ್ನು ಪಾಕಿಸ್ತಾನಕ್ಕೆ ಕೊಡಿಸುವುದು ಲಂಡನ್ ಮತ್ತು ವಾಷಿಂಗ್ಟನ್​ಗಳ ಯೋಜನೆಯಾಗಿತ್ತು ಮತ್ತು ಅದನ್ನು ಅವು ವಿಶ್ವಸಂಸ್ಥೆಯನ್ನು ದುರುಪಯೋಗಪಡಿಸಿಕೊಂಡು ಸಾಧಿಸಿಕೊಂಡವು. ನೆಹರೂರ ಅವ್ಯಾವಹಾರಿಕ ವಿದೇಶ ಮತ್ತು ರಕ್ಷಣಾ ನೀತಿಗಳು ಅಡಿಗಡಿಗೆ ಆಂಗ್ಲೋಸ್ಪಿಯರ್​ನ ರೊಟ್ಟಿ ಜಾರಿ ತುಪ್ಪದಲ್ಲಿ ಬೀಳುವಂತೆ ಮಾಡಿದವು. ಭೂ-ರಾಜಕೀಯ ಹಾಗೂ ಭೂ-ಸಾಮರಿಕ ವಾಸ್ತವಗಳನ್ನು ಭಾರತದ ಪರವಾಗಿ ಸಾಧ್ಯವಾದಷ್ಟು ಮಟ್ಟಿಗೆ ಬದಲಿಸಿಕೊಳ್ಳಲು ಪ್ರಯತ್ನಿಸಿದ ಇಂದಿರಾರಿಗೆ ಹಲವು ಬಗೆಗಳಲ್ಲಿ ಕಾಟ ಕೊಟ್ಟು ಹಿಮ್ಮೆಟ್ಟಿಸಲಾಯಿತು. ಇಂದಿರಾ ಕೊನೆಗೂ ಬಲಿಯಾದದ್ದು ಪಾಕಿಸ್ತಾನವನ್ನು ಮುಂದಿಟ್ಟುಕೊಂಡು ಆಂಗ್ಲೋಸ್ಪಿಯರ್ ಬಿತ್ತಿದ್ದ ಖಲಿಸ್ತಾನಿ ವಿಷಬೀಜಕ್ಕೇ. ಇಂದು ಅದರ ನೇರ ಗುರಿಯಲ್ಲಿ ನರೇಂದ್ರ ಮೋದಿ ಇದ್ದಾರೆ.

ಮೋದಿಯವರನ್ನು ಹತ್ಯೆಗೈಯಲು, ಅದಾಗದಿದ್ದರೆ ಅಧಿಕಾರದಿಂದ ಕೆಳಗಿಳಿಸಲು ಸಿಐಎ ಸಂಚು ಹೂಡಿದ್ದ ವಿಷಯ ಸಿಐಎ ಮೂಲಗಳಿಂದಲೇ ಭಾರತ ಸರ್ಕಾರಕ್ಕೆ ತಲುಪಿದ ಸುದ್ದಿ ಸರಿಯಾಗಿ ವರ್ಷದ ಹಿಂದೆ ಬಂದಿತ್ತು. ಅದು ಬೇರೊಂದು ರೂಪ ತಳೆದು ಈಗ ಕಣಕ್ಕಿಳಿದಿದೆ. ಬೋಸ್ಟನ್​ನಲ್ಲಿ 2025ರ ಡಿಸೆಂಬರ್​ವರೆಗೂ ವ್ಯಾಸಂಗ ಮಾಡುತ್ತಿದ್ದುದಾಗಿ ಹೇಳಿಕೊಳ್ಳುವ, ಆದರೆ ಆ ಬಗ್ಗೆ ಪ್ರಶ್ನೆಗಳನ್ನೆದುರಿಸುತ್ತಿರುವ, ಒಂದುವೇಳೆ ವ್ಯಾಸಂಗ ಮಾಡಿದರೂ ತದನಂತರ ಐದು ತಿಂಗಳಿಗೂ ಹೆಚ್ಚುಕಾಲ ಅಲ್ಲೇ ಇದ್ದುದರ ಬಗೆಗೂ ಪ್ರಶ್ನೆಗಳನ್ನೆದುರಿಸುತ್ತಿರುವ ಅಭಿಜಿತ್ ದೀಪ್ಕೆ ವಾಸ್ತವವಾಗಿ ತಾನು ಅರಾಜಕತಾವಾದಿ ಎಂದು ಮೊದಲಿನಿಂದಲೂ ಘೊಷಿಸಿಕೊಳ್ಳುತ್ತಲೇ ಮತ್ತು ಹಾಗೇ ವರ್ತಿಸುತ್ತಲೇ ಇರುವ ಅರವಿಂದ್ ಕೇಜ್ರಿವಾಲ್, ಮತ್ತು ಮಾಜಿ ರಾ ಅಧಿಕಾರಿ ಕರ್ನಲ್ ಆರ್​ಎಸ್​ಎನ್ ಸಿಂಗ್ ಹೇಳುವಂತೆ ಆಪ್ ನಾಯಕನನ್ನು ಎತ್ತಿ ನಿಲ್ಲಿಸಿದ ಯುಎಸ್​ಎಐಡಿ/ಸಿಐಎ ನಡುವೆ ಸಂಪರ್ಕವಾಗಿ ಕಾರ್ಯನಿರ್ವಹಿಸುತ್ತಾ ಬೋಸ್ಟನ್​ನಲ್ಲೇ ಉಳಿದರೇ? ಎಂಬ ಅನುಮಾನಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ. 

ಆ ಪ್ರಶ್ನೆಗಳಿಗೆ ಉತ್ತರ ಸಕಾರಾತ್ಮಕ ರೂಪದಲ್ಲಿದ್ದರೆ ಸಿಜೆಪಿ ಆಂದೋಲನ ಆಂಗ್ಲೋಸ್ಪಿಯರ್​ನ ಹೊಸ ಕಾರಸ್ಥಾನದ ಆರಂಭವಷ್ಟೇ. ಇದರ ಅಂತ್ಯ ಸದ್ಯಕ್ಕೆ ಗೋಚರವಾಗುತ್ತಿಲ್ಲ. ತನ್ನ ಹಾದಿಯಲ್ಲಿ ಅದು ಮೋದಿಯವರನ್ನು ಅನಾಗರಿಕವಾಗಿ ಲೇವಡಿ ಮಾಡುತ್ತದೆ, ಭದ್ರತಾ ಪಡೆಗಳನ್ನು ಕೆಣಕುತ್ತದೆ, ಹಾಗೆ ಮಾಡುತ್ತಾ ಗಿಲ್ಗಿಟ್-ಬಾಲ್ಟಿಸ್ತಾನದಿಂದ ಮೋದಿ ಸರ್ಕಾರದ ಗಮನವನ್ನು ದೂರ ಒಯ್ಯಲು, ಆ ಮೂಲಕ ಅಫ್ಘಾನಿಸ್ತಾನ ಮತ್ತು ಅದರಾಚೆಗೆ ಮಧ್ಯ ಏಷ್ಯಾ ಗಣರಾಜ್ಯಗಳ ಮೂಲಕ ರಷ್ಯಾದೊಂದಿಗೆ ಭಾರತವನ್ನು ಸಂರ್ಪಸುವುದು ಮೋದಿ ಮತ್ತು ಪೂತಿನ್​ರಿಗೆ ಸಾಧ್ಯವಾಗದಂತೆ, ಬ್ರಿಕ್ಸ್, ಮುಖ್ಯವಾಗಿ ರಷ್ಯಾ, ಭಾರತ ಮತ್ತು ಬ್ರೆಝಿಲ್​ಗಳ ಬಾಂಧವ್ಯ ಗಟ್ಟಿಯಾಗದಂತೆ ತಡೆಯುತ್ತಾ ಹೋಗುತ್ತದೆ. ಆದರೆ ಮೋದಿಯವರ ಇದುವರೆಗಿನ ಬದುಕನ್ನು ನೋಡಿದರೆ ಇಂತಹ ಒಂದು ಸನ್ನಿವೇಶದಲ್ಲಿ ಸಮರ್ಥ ನಾಯಕತ್ವ ಒದಗಿಸಲೆಂದೇ ಭಾರತ ಅವರನ್ನು ಸೃಷ್ಟಿಸಿಕೊಂಡಿತ್ತು ಅನಿಸುತ್ತದೆ. ಹೀಗಾಗಿ ಈಗ ಆರಂಭವಾಗಿರುವ ಸಂಘರ್ಷ ಆಸಕ್ತಿಕರವಾಗಿರುತ್ತದೆ. (ಮುಕ್ತಾಯ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net