ನಾಯಕತ್ವದ ವಿಷಯದಲ್ಲಿ ಅವರ ಅದೃಷ್ಟ, ನಮ್ಮ ಅಳು

ವಿಶೇಷ ಅಂಕಣ
ವಿಶೇಷ ಅಂಕಣ
Published on

ಅಮೆರಿಕಾ ನಮಗೇನು ಕಲಿಸಬಲ್ಲುದು? ಭಾಗ2

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಥಾಮಸ್ ಜೆಫರ್ಸನ್ ರಚಿಸಿದ ಸ್ವಾತಂತ್ರ್ಯದ ಘೊಷಣೆ ಸ್ವಾತಂತ್ರ್ಯ ಆಂದೋಲನದ ನಾಯಕರಿಗೆ ಸಮ್ಮತವಾಗಿ 1776ರ ಜು. 4ರಂದು ಬ್ರಿಟನ್​ನಿಂದ ಪೂರ್ಣ ಸ್ವಾತಂತ್ರ್ಯದ ಘೊಷಣೆಯಾಯಿತು. ಅದರೊಂದಿಗೆ ಸ್ವಾತಂತ್ರ್ಯ ಸಮರವೂ ಆರಂಭವಾಯಿತು.

ಜಾರ್ಜ್ ವಾಷಿಂಗ್ಟನ್​ರ ದಂಡನಾಯಕತ್ವದಲ್ಲಿ ಮುಂದಿನ 5 ವರ್ಷ ಹೋರಾಡಿದ ಅಮೆರಿಕದ ಸೇನೆ ಅಂತಿಮವಾಗಿ 1781ರಲ್ಲಿ ಚಾರ್ಲ್ಸ್ ಕಾರ್ನ್​ವಾಲೀಸ್ ನೇತೃತ್ವದ ಬ್ರಿಟಿಷ್ ಸೇನೆಯನ್ನು ಸೋಲಿಸಿಬಿಟ್ಟಿತು. ‘ಯಾರ್ಕ್​ಟೌನ್ ಕದನ’ ಎಂದು ಇತಿಹಾಸದಲ್ಲಿ ಪ್ರಸಿದ್ಧವಾಗಿರುವ ಆ ಕಾಳಗದಲ್ಲಿ ಅಮೆರಿಕನ್ನರಿಗೆ ಸಹಕರಿಸಿದ ಫ್ರೆಂಚರೇ ಮುಂದೆ ಎರಡೂ ಪಕ್ಷಗಳ ನಡುವೆ ಶಾಂತಿ ಮಾತುಕತೆಗಳನ್ನೂ ಆಯೋಜಿಸಿದರು. ಪರಿಣಾಮವಾಗಿ 1783ರ ಸೆ. 3ರಂದು ಐತಿಹಾಸಿಕ ಪ್ಯಾರಿಸ್ ಒಪ್ಪಂದಕ್ಕೆ ಸಹಿಯಾಗಿ 13 ವಸಾಹತುಗಳು ಸ್ವತಂತ್ರವಾದವು.

ಮುಂದೆ ಹೋಗುವ ಮೊದಲು ನಾವು ಭಾರತೀಯರು ಚಣಕಾಲವಾದರೂ ಆತ್ಮಶೋಧನೆ ಮಾಡಿಕೊಳ್ಳಬಹುದಾದ ವಿಷಯವೊಂದರ ಪ್ರಸ್ತಾಪ ಅಗತ್ಯವೆನಿಸುತ್ತದೆ. ಯಾರ್ಕ್​ಟೌನ್​ನಲ್ಲಿ ಅಮೆರಿಕನ್ನರಿಗೆ ಸೋತು ಶರಣಾದ ಕಾರ್ನ್​ವಾಲೀಸ್ ನಂತರದ ಐದೇ ವರ್ಷಗಳಲ್ಲಿ ಭಾರತಕ್ಕೆ ಬಂದು ಇಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಮೊದಲ ಗವರ್ನರ್ ಜನರಲ್ ಆದ! ನಾವು ನಮ್ಮ ಇತಿಹಾಸ ಪಠ್ಯಪುಸ್ತಕಗಳಲ್ಲಿ ಕಾಣುವ ಲಾರ್ಡ್ ಕಾರ್ನ್​ವಾಲೀಸ್ ಅವನೇ. ಇಂಗ್ಲಿಷರು ಅಲ್ಲಿ ಕಳೆದುಕೊಂಡದ್ದನ್ನು ಇಲ್ಲಿ ಗಳಿಸಿಕೊಂಡರು.

ಸುಮಾರು 80 ವರ್ಷಗಳ ನಂತರ ನಮ್ಮಲ್ಲೂ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ಹೋರಾಟ ನಡೆಯಿತು. ಆದರೆ ಅಂದಿನ ವೈರುಧ್ಯಮಯ ರಾಜಕೀಯ ಆಶೋತ್ತರಗಳ ಕಾರಣಗಳಿಂದಾಗಿ 1857-58ರ ಬೆಳವಣಿಗೆಗಳು ಅಮೆರಿಕದಲ್ಲಾದಂತೆ ಇಲ್ಲಿ ಬ್ರಿಟಿಷ್ ವಸಾಹತುಶಾಹಿಯ ಅಂತ್ಯಕ್ಕೆ ದಾರಿ ಮಾಡಿಕೊಡಲಿಲ್ಲ. 1770ರ ದಶಕದಲ್ಲಿ ಅಮೆರಿಕದ ಸ್ವಾತಂತ್ರ್ಯಕ್ಕಾಗಿ ಪ್ರಯತ್ನಿಸಿದ ವ್ಯಕ್ತಿಗಳು ಅಮೆರಿಕನ್ನರೇ ಆಗಿದ್ದರು. ಆದರೆ ಭಾರತದಲ್ಲಿ ಹಾಗಾಗಲಿಲ್ಲ. ಇಲ್ಲಿನ ಸ್ವಾತಂತ್ರಾ್ಯಂದೋಲನಕ್ಕೆ ವೇದಿಕೆಯಾದ ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ (ಐಎನ್​ಸಿ) ರೂಪಿಸಿದವರು ಒಬ್ಬ ಬ್ರಿಟಿಷ್ ನಾಗರಿಕ, ಕಾಂಗ್ರೆಸ್ ಸ್ಥಾಪನೆಗೆ 2 ವರ್ಷ ಹಿಂದಿನವರೆಗೂ ಬ್ರಿಟಿಷ್ ವಸಾಹತುಶಾಹಿಯ ಭಾಗವಾಗಿದ್ದವರೇ.

ಅವರೇ ಹೇಳಿಕೊಂಡಿರುವ ಪ್ರಕಾರ 1857-58ರ ರಕ್ತಸಿಕ್ತ ಘಟನೆಗಳು ಭಾರತದಲ್ಲಿ ಮತ್ತೊಮ್ಮೆ ಘಟಿಸಬಾರದು ಎಂಬ ಉದ್ದೇಶವನ್ನಿಟ್ಟುಕೊಂಡೇ, ಭಾರತೀಯರು ಶಾಂತಿಯುತವಾಗಿ ತಮ್ಮ ರಾಜಕೀಯ ಆಶೋತ್ತರಗಳನ್ನು ವ್ಯಕ್ತಪಡಿಸಲು ಅನುವಾಗಲೆಂದೇ ಅಂತೆ ಅವರು ಕಾಂಗ್ರೆಸ್ಸನ್ನು ಸ್ಥಾಪಿಸಿದ್ದು. ಅದಕ್ಕಾಗಿ ಅವರು ಜತೆಗೂಡಿಸಿಕೊಂಡದ್ದು ಬಹುಪಾಲು ತಮ್ಮಂತೇ ವಸಾಹತುಶಾಹಿ ಸರ್ಕಾರದ ಸೇವೆಯಲ್ಲಿದ್ದವರನ್ನೇ. 1885ರ ಡಿಸೆಂಬರ್​ನಲ್ಲಿ ಬಾಂಬೆಯಲ್ಲಿ ಆಯೋಜಿಸಲಾದ ಮೊಟ್ಟಮೊದಲ ಕಾಂಗ್ರೆಸ್ ಅಧಿವೇಶನದಲ್ಲಿ ಭಾಗಿಯಾಗಿದ್ದ ಇಬ್ಬರು ಬ್ರಿಟಿಷ್ ನಾಗರಿಕರಲ್ಲಿ ಒಬ್ಬರು ಬಾಂಬೆ ಪ್ರಾಂತೀಯ ಸರ್ಕಾರದಲ್ಲಿ ಇನ್ನೂ ಸೇವೆ ಸಲ್ಲಿಸುತ್ತಿದ್ದವರು, ಮತ್ತೊಬ್ಬರು ಹೈಕೋರ್ಟ್​ನಲ್ಲಿ ನ್ಯಾಯಾಧೀಶರಾಗಿದ್ದವರು. 

ಜತೆಗೆ, ಅವರೆಲ್ಲರ ಪ್ರಯತ್ನಕ್ಕೆ ವಸಾಹತುಶಾಹಿ ಸರ್ಕಾರ ಅನುವು ಮಾಡಿಕೊಟ್ಟದ್ದು ಭಾರತೀಯರ ವಸಾಹತುಶಾಹಿ-ವಿರೋಧಿ ಭಾವನೆಗಳು ಹೊರಬರಲು ಒಂದು ಸೇಫ್ಟಿ ವಾಲ್ವ್ ಸೃಷ್ಟಿಸಿಕೊಡುವ ಲೆಕ್ಕಾಚಾರದಿಂದಲೇ.  ಬ್ರಿಟಿಷ್ ಸರ್ಕಾರದ ಈ ‘ಹುನ್ನಾರ’ಕ್ಕೆ ಹೊಂದಿಕೆಯಾಗುವಂತೆ ಭಾರತೀಯರನ್ನೂ ತಮ್ಮತ್ತ ಸೆಳೆದುಕೊಳ್ಳಲು ಹ್ಯೂಮ್ ಬಹಳ ಜಾಣತನದ ದಾರಿಯೊಂದನ್ನೂ ಹುಡುಕಿಕೊಂಡಿದ್ದರು. ಬೇಕೆಂದಾಗ ಬೇಕೆಂದಲ್ಲಿ ದರ್ಶನವೀಯಬಲ್ಲ, ವಯಸ್ಸಿನ ಬಂಧನವಿಲ್ಲದ ಹಿಮಾಲಯದ ಮಹಾತ್ಮರೊಬ್ಬರು ಕಾಂಗ್ರೆಸ್ಸನ್ನು ಹುಟ್ಟುಹಾಕುವಂತೆ ತಮಗೆ ಹೇಳಿದರು, ಆ ಮಹಾತ್ಮರಿಗೆ ತಮ್ಮನ್ನು ಪರಿಚಯಿಸಿದವರು ಥಿಯಸಾಫಿಕಲ್ ಸೊಸೈಟಿಯ ಅನಿ ಬೆಸೆಂಟ್ ಎಂದೂ ಹ್ಯೂಮ್ ಹೇಳಿಕೊಂಡಿದ್ದಾರೆ! 

ಹೇಳಿಕೇಳಿ ಭಾರತೀಯರು ಸಾಧುಸಂತರನ್ನು, ಅದರಲ್ಲೂ ಹಿಮಾಲಯದ ಮಹಾತ್ಮರಲ್ಲಿ ಶ್ರದ್ಧೆಯಿಟ್ಟವರು, ಅವರ ಮಾತುಗಳನ್ನು ದೇವರ ವಾಕ್ಯಗಳೆಂದೇ ನಂಬುವವರು ಎಂದು ಹ್ಯೂಮ್ ಭಾರತದಲ್ಲಿನ ತಮ್ಮ 36 ವರ್ಷಗಳ ವಾಸ್ತವ್ಯದಲ್ಲಿ ಚೆನ್ನಾಗಿಯೇ ಅರಿತುಕೊಂಡಿದ್ದರು. ಇವು ತಂತಮ್ಮ ಸ್ವಾತಂತ್ರ್ಯಕ್ಕಾಗಿ ಅಮೆರಿಕನ್ನರು ಮತ್ತು ಭಾರತೀಯರು ಹಿಡಿದ ಬೇರೆಬೇರೆ ದಾರಿಗಳು. ಅಮೆರಿಕನ್ನರು ಸ್ವಾತಂತ್ರಾ್ಯಭಿಲಾಷೆ ವ್ಯಕ್ತಪಡಿಸಲು ಆಯ್ದುಕೊಂಡದ್ದು ರಕ್ತಸಮರದ ಮಾರ್ಗ. ‘ಸೇಫ್ಟಿ ವಾಲ್ವ್’ ಸೃಷ್ಟಿಸಲು ಬ್ರಿಟಿಷರಿಗೆ ಅವಕಾಶವನ್ನೇ ಕೊಡಲಿಲ್ಲ. ಬ್ರಿಟಿಷರು ಅಂತಹ ಪ್ರಯತ್ನ ಮಾಡಿದಂತೆ ಕಾಣುವುದಿಲ್ಲ. ಅಮೆರಿಕನ್ನರ ಸೇನೆಯ ವಿರುದ್ಧ ಹೋರಾಡಲು ಅವರೂ ತಮ್ಮ ಸೇನೆಯನ್ನು ಕಣಕ್ಕಿಳಿಸಿದರು. 

ಇಲ್ಲಿ ಸೇಫ್ಟಿ ವಾಲ್ವ್​ಗೆ ಮನಸೋತ ಅಂದರೆ ಶಾಂತಿಯುತ ಮಾರ್ಗ ಹಿಡಿದ ಗಾಂಧಿ, ನೆಹರೂರನ್ನು ವಸಾಹತುಶಾಹಿ ಆಡಳಿತ ಇಡುತ್ತಿದ್ದ ಕಾರಾಗೃಹಗಳೆಂದರೆ ಪುಣೆಯ ಆಘಾಖಾನ್​ರ ಅರಮನೆ, ತಂಪುಹವೆಯ ಡೆಹ್ರಾಡೂನ್​ನಲ್ಲಿನ ಸುವ್ಯವಸ್ಥಿತ ‘ಸೆರೆಮನೆ’ಯಲ್ಲಿ. ವಿಶಾಲ ಜೈಲುಕೋಣೆಗಳು, ಒಂದಕ್ಕಿಂತ ಹೆಚ್ಚು ಕಿಟಕಿಗಳು ಸಹ. ಓದಲು ಪತ್ರಿಕೆ, ಪುಸ್ತಕಗಳು, ಬರೆಯಲು ಕಾಗದ, ಲೇಖನಿಗಳೂ ಇರುತ್ತಿದ್ದವು. ಹಗಲಿಡೀ ವಿರಾಮವಾಗಿ ತಿರುಗಾಡಲೂ ಅವಕಾಶವಿದ್ದ ‘ಸೆರೆಮನೆ’ಗಳು ಅವು... ಅಮೆರಿಕನ್ನರಿಂದ ಸ್ಪೂರ್ತಿ ಪಡೆದು 1857-58ರಲ್ಲಾದದ್ದು ಕೇವಲ ಸಿಪಾಯಿ ದಂಗೆಯಲ್ಲ, ಅದು ಭಾರತದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮ ಎಂದು 1909ರ ತಮ್ಮ ಕೃತಿಯಲ್ಲಿ ಸಾರಿ, ಸ್ವಾತಂತ್ರ್ಯಕ್ಕಾಗಿ ಅಂತಹದು ಮತ್ತೆ ಆಗಬೇಕಾಗಿದೆ ಎಂದು ಕರೆ ನೀಡಿದ ಸಾವರ್ಕರ್​ರನ್ನು ಬ್ರಿಟಿಷ್ ಸರ್ಕಾರ ಇಟ್ಟದ್ದು ಹೊರಜಗತ್ತಿನ ಸಂಪರ್ಕವೇ ಇಲ್ಲದ ಅಂಡಮಾನ್​ನ ಸೆಲ್ಯುಲರ್ ಜೈಲ್​ನಲ್ಲಿ. ಅಮೆರಿಕನ್ನರ ದಾರಿಯನ್ನು ಭಾರತೀಯರು ಹಿಡಿಯಬಾರದೆನ್ನುವುದು ಬ್ರಿಟಿಷರ ಅಚಲ ನಿರ್ಧಾರವಾಗಿತ್ತು.

ಸ್ವಾತಂತ್ರ್ಯದ ಹೊಸ್ತಿಲಲ್ಲಿ ನಿಂತಾಗ ಎರಡೂ ದೇಶಗಳ ನಾಯಕರು ಭವಿಷ್ಯದ ಕುರಿತಾಗಿ ಆಲೋಚಿಸಿದ್ದರ ಪರಿಚಯ ಮಾಡಿಕೊಳ್ಳೋಣ. ಜಾರ್ಜ್ ವಾಷಿಂಗ್ಟನ್, ಥಾಮಸ್ ಜೆಫರ್ಸನ್, ಬೆಂಜಮಿನ್ ಫ್ರಾಂಕ್​ಲಿನ್, ಅಲೆಕ್ಸಾಂಡರ್ ಹ್ಯಾಮಿಲ್ಟನ್, ಜಾನ್ ಆಡಮ್್ಸ, ಜೇಮ್್ಸ ಮ್ಯಾಡಿಸನ್ ಮತ್ತು ಜಾನ್ ಜೇ ಎಂಬ 7 ಮಹಾನಾಯಕರು ‘ಫೌಂಡಿಂಗ್ ಫಾದರ್ಸ್ ಆಫ್ ಅಮೆರಿಕ’ ಎಂದು ಗೌರವಿಸಲ್ಪಟ್ಟಿದ್ದಾರೆ. ಇವರು ಸ್ವಾತಂತ್ರ್ಯ ಸಮರ ಮುನ್ನಡೆಸಿ, ನಂತರ ದೇಶವನ್ನು ಒಂದುಗೂಡಿಸಿ ಸದೃಢವಾಗಿ ಕಟ್ಟುವ ಕಾರ್ಯವನ್ನೂ ನಿಷ್ಠೆಯಿಂದ ಮಾಡಿದರು. ಬ್ರಿಟಿಷ್ ವಸಾಹತುಶಾಹಿಯಿಂದ ಹೊರಬಂದ 13 ವಸಾಹತುಗಳು 13 ಪ್ರತ್ಯೇಕ ದೇಶಗಳಾಗಲು ಅವಕಾಶವಿತ್ತು. ಆದರೆ ಹಾಗಾಗಬಾರದು, ಅದು ನಮ್ಮಲ್ಲೇ ಕಿತ್ತಾಟಗಳಿಗೆ ದಾರಿ ಮಾಡಿಕೊಡಬಹುದು, ನಾವು ಆರ್ಥಿಕವಾಗಿಯೂ ಸಬಲರಾಗುವುದಿಲ್ಲ, ಸುರಕ್ಷಿತವಾಗಿಯೂ ಉಳಿಯುವುದಿಲ್ಲ, ಒಂದಾಗಿರುವುದೇ ಉತ್ತಮ ಎಂದು ತೀರ್ವನಿಸಿದ ಆ ಏಳು ಫೌಂಡಿಂಗ್ ಫಾದರ್ಸ್ 13 ಮಾಜಿ ವಸಾಹತುಗಳನ್ನು ರಾಜ್ಯಗಳೆಂದು ಕರೆದು ಒಂದು ಒಕ್ಕೂಟದಲ್ಲಿ ಒಗ್ಗೂಡಿಸಿ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕ (ಯುಎಸ್​ಎ) ಸೃಷ್ಟಿಸಿದರು. 

ಆ ದೇಶ ಮುಂದೆ ಜಾಗತಿಕವಾಗಿ ಬೃಹತ್ ಆರ್ಥಿಕ ಹಾಗೂ ಸೇನಾ ಶಕ್ತಿಯಾಗಿ ಬೆಳೆಯಲು ಸದೃಢ ಅಸ್ತಿಭಾರ ದೊರಕಿದ್ದು ಆಗ. ಅಮೆರಿಕದ ಸ್ವಾತಂತ್ರ್ಯಸಮರದ ಮುಂದಾಳುಗಳು ಆರಂಭಿಸಿದ ರಾಷ್ಟ್ರನಿರ್ವಣ ಪ್ರಕ್ರಿಯೆಯನ್ನು ನಮ್ಮ ಸ್ವಾತಂತ್ರಾ್ಯಂದೋಲನದ ಮುಂದಾಳುಗಳ ನೀತಿಗಳಿಗೆ ಹೋಲಿಸೋಣ. ಸ್ವಾತಂತ್ರ್ಯದ ಸಮಯದಲ್ಲಿ ನಮ್ಮ ದೇಶ ಇಬ್ಭಾಗವಾಗಿ ಶತ್ರುರಾಷ್ಟ್ರಗಳಾದದ್ದು ಇಂದಿಗೂ ನಾವು ಅನುಭವಿಸುತ್ತಿರುವ ದುರಂತ. 1947ರಲ್ಲಿ ದೇಶವಿಭಜನೆಯನ್ನು ತಪ್ಪಿಸಲಾಗದ ಸ್ಥಿತಿಯುಂಟಾಗಿತ್ತು. ಭಾರತವನ್ನು ವಿಭಜಿಸುವ ನಿರ್ಧಾರವನ್ನು ಲಂಡನ್​ನ ಬ್ರಿಟಿಷ್ ಸರ್ಕಾರ ಕಳೆದ ಶತಮಾನದ ಆರಂಭದಲ್ಲೇ ತೆಗೆದುಕೊಂಡಿತ್ತು. ಅದರಿಂದ ತಾವು ರಾಜಕೀಯ ಅಧಿಕಾರವನ್ನೂ ಗಳಿಸಿಕೊಳ್ಳಬಹುದು, ಆರ್ಥಿಕ ಲಾಲಸೆಗಳನ್ನೂ ಪೂರೈಸಿಕೊಳ್ಳಬಹುದು ಎಂದರಿತ ಕೆಲ ಮುಸ್ಲಿಂ ಮುಂದಾಳುಗಳು ಬ್ರಿಟಿಷರ ಜತೆ ಕೈಜೋಡಿಸಿದರು. 

ಆ ಎರಡೂ ಶಕ್ತಿಗಳ ವಿರುದ್ಧ ಹೋರಾಡಿ ದೇಶವನ್ನು ಒಂದಾಗಿ ಉಳಿಸಿಕೊಳ್ಳುವುದು ಅಂದು ಕಾಂಗ್ರೆಸ್​ಗೆ ಸಾಧ್ಯವೇ ಇರಲಿಲ್ಲ. ಒಂದು ವೇಳೆ ದೇಶ 1947ರಲ್ಲಿ ಒಂದಾಗಿ ಉಳಿದರೂ ಧಾರ್ವಿುಕ ಭಿನ್ನತೆಯಿಂದಾಗಿ ಇಂದು ಇರುವಷ್ಟಾದರೂ ನೆಮ್ಮದಿಯಿಂದ ಇರಲು ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ ಅಂದು ಘಟಿಸಿದ ದೇಶವಿಭಜನೆಯ ನೋವನ್ನು ನಾವು ಸಹಿಸಿಕೊಳ್ಳಲೇಬೇಕು. ಆದರೆ ಪ್ರಶ್ನೆಯಿರುವುದು ದೇಶವಿಭಜನೆಯನ್ನು ಕಾಂಗ್ರೆಸ್, ಮುಖ್ಯವಾಗಿ ನೆಹರೂ ಒಪ್ಪಿಕೊಂಡ ‘ನಿಜವಾದ’ ಕಾರಣದ ಬಗ್ಗೆ. ಮಹಮದ್ ಆಲಿ ಜಿನ್ನಾರ ಹೊರತಾಗಿ ಮುಸ್ಲಿಂ ಲೀಗ್​ಗೆ ಪ್ರಭಾವಿ ನಾಯಕತ್ವವೇ ಇರಲಿಲ್ಲ. ಜಮಾತ್-ಇ-ಇಸ್ಲಾಮಿಯ ಸ್ಥಾಪಕ ಮೌಲಾನಾ ಅಬು ಅಲಾ ಮೌದುದಿ ಹಾಗೂ ಮೌಲಾನಾ ಅಬುಲ್ ಕಲಂ ಆಜಾದ್ ಸೇರಿದಂತೆ ಹಲವಾರು ಮುಸ್ಲಿಂ ನಾಯಕರು ದೇಶವಿಭಜನೆ ಮತ್ತು ಪಾಕಿಸ್ತಾನದ ಸ್ಥಾಪನೆಗೆ ವಿರೋಧವಾಗಿದ್ದರು. ಜಿನ್ನಾ ಇಲ್ಲದಿದ್ದರೆ ಮುಸ್ಲಿಂ ಲೀಗ್ ಸಹ ಇದೇ ಹಾದಿಗೆ ಬರುತ್ತಿತ್ತು. ಅಂತಹ ಸನ್ನಿವೇಶವೂ ಸೃಷ್ಟಿಯಾಗುವುದರಲ್ಲಿತ್ತು!

ಜಿನ್ನಾ ಕ್ಯಾನ್ಸರ್​ನಿಂದ ಬಳಲುತ್ತಿದ್ದುದು 1947ರ ಆರಂಭದ ಹೊತ್ತಿಗೇ ಅವರಿಗೇ ತಿಳಿದುಹೋಗಿತ್ತು. ಅದನ್ನರಿತಿದ್ದ ಮತ್ತೊಬ್ಬರೆಂದರೆ ಅವರ ಖಾಸಗಿ ವೈದ್ಯ ಮಾತ್ರ. ದೇಶವಿಭಜನೆಯಾದ 13 ತಿಂಗಳೊಳಗೆ 1948ರ ಸೆ. 11ರಂದು ಕ್ಯಾನ್ಸರ್ ಜತೆ ಕ್ಷಯರೋಗಕ್ಕೂ ಸಿಲುಕಿ ನಿಧನರಾದರು. ಭಾರತಕ್ಕೆ 1948ರ ಜುಲೈನಲ್ಲಿ ಸ್ವಾತಂತ್ರ್ಯ ನೀಡಲು ಬ್ರಿಟಿಷ್ ಸರ್ಕಾರ ಮೊದಲಿಗೆ ಆಲೋಚಿಸಿತ್ತು. ಒಂದು ವೇಳೆ ಹಾಗೆಯೇ ಆಗಿದ್ದರೆ ಅಷ್ಟರ ಹೊತ್ತಿಗೆ ಜಿನ್ನಾರ ಅನಾರೋಗ್ಯ ಉಲ್ಬಣಗೊಂದು ಅವರು ರಾಜಕಾರಣದಲ್ಲಿ ಸಕ್ರಿಯವಾಗಿರುವ ಸಾಮರ್ಥ್ಯ ಕಳೆದುಕೊಂಡಿರುತ್ತಿದ್ದರು. ಅಲ್ಲಿಗೆ ಪಾಕಿಸ್ತಾನಕ್ಕಾಗಿ ಒತ್ತಾಯಿಸುವ ಶಕ್ತಿಯನ್ನು ಮುಸ್ಲಿಂ ಲೀಗ್ ಕಳೆದುಕೊಂಡಿರುತ್ತಿತ್ತು.

ಆದರೆ ದೇಶಕ್ಕೆ 1947ರ ಆಗಸ್ಟ್​ನಲ್ಲೇ ಸ್ವಾತಂತ್ರ್ಯ ನೀಡಿಬಿಡಬೇಕೆಂದು ಬ್ರಿಟಿಷ್ ಸರ್ಕಾರ ಹೇಳಿ, ಅದಕ್ಕಾಗಿ ತರಾತುರಿಯಲ್ಲಿ ದೇಶವಿಭಜನೆಯ ಕೆಲಸ ಕೈಗೊಂಡಾಗ ಕಾಂಗ್ರೆಸ್ ಅದನ್ನು ಸ್ವಾಗತಿಸಿತು. ತರಾತುರಿಯ ವಿಭಜನೆಯೆಂದರೆ ಅರಿವಳಿಕೆಯಿಲ್ಲದ ಶಸ್ತ್ರಚಿಕಿತ್ಸೆ, ಅದರಿಂದ ಅಪಾರ ಸಾವುನೋವುಗಳಾಗುತ್ತವೆ ಎನ್ನುವುದನ್ನು ಕಾಂಗ್ರೆಸ್​ನ ‘ಶಾಂತಿಪ್ರಿಯ’ ನಾಯಕರು ಅರಿಯಲೇ ಇಲ್ಲ. ಸ್ವಾತಂತ್ರ್ಯವನ್ನು 1948ರ ಜುಲೈಗೇ ನಿಗದಿಗೊಳಿಸಿದ್ದರೆ ದೇಶ ವಿಭಜನೆಯಾಗುತ್ತಿರಲಿಲ್ಲ ಅಥವಾ ಅದು ಘಟಿಸಿದರೂ ವಿಭಜನೆಯ ಪ್ರಕ್ರಿಯೆ ನಿಧಾನವಾಗಿ ಜರುಗಿ ಹೆಚ್ಚು ರಕ್ತಪಾತವಿಲ್ಲದೇ ಜನತೆ ಹೊಸ ಗಡಿಯ ಆಚೀಚೆಗೆ ಸಾಗಿ ನೆಲೆಸಬಹುದಾಗಿತ್ತು.

ಈ ವಿಚಾರವನ್ನು ನೆಹರೂ ಮುಂದೆ ನೇರವಾಗಿ ಎತ್ತಿದವರು ಬ್ರಿಟಿಷ್ ಪತ್ರಕರ್ತ ಲಿಯೋನಾರ್ಡ್ ಮೋಸ್ಲಿ, 1960ರಲ್ಲಿ. ‘ಸ್ವಾತಂತ್ರ್ಯಕ್ಕಾಗಿ ಸ್ವಲ್ಪ ಕಾಯಬಹುದಾಗಿತ್ತಲ್ಲ, ಹಾಗೆ ಮಾಡಿದ್ದರೆ ಎಷ್ಟೆಲ್ಲಾ ಅನಾಹುತಗಳನ್ನು ತಪ್ಪಿಸಬಹುದಾಗಿತ್ತು’ ಎಂದು ಮೋಸ್ಲಿ ಸಂದರ್ಶನದಲ್ಲಿ ಪ್ರಶ್ನಿಸಿದಾಗ ನೆಹರೂ ನೀಡಿದ ಉತ್ತರ ಹೀಗಿತ್ತು- ‘ನಾವೆಲ್ಲರೂ ವೃದ್ಧರಾಗುತ್ತಿದ್ದೆವು. ಕಾಯುವ ತಾಳ್ಮೆ ನಮಗಿರಲಿಲ್ಲ.’ ಈ ವಿಷಯವನ್ನು ಮೋಸ್ಲಿ 1960ರಲ್ಲಿ ಪ್ರಕಟವಾದ ತಮ್ಮ ಕೃತಿ ‘ದ ಲಾಸ್ಟ್ ಡೇಸ್ ಆಫ್ ದ ಬ್ರಿಟಿಷ್ ರಾಜ್’ನಲ್ಲಿ ದಾಖಲಿಸಿದ್ದಾರೆ. ಪೂರ್ತಿ ವೃದ್ಧರಾಗಿ ನಿತ್ರಾಣರಾಗುವ ಮೊದಲೇ ಅಧಿಕಾರ ಅನುಭವಿಸಿಬಿಡಬೇಕು ಎನ್ನುವುದು ನೆಹರೂರ ಈ ಮಾತಿನ ಅರ್ಥವೇ? ಕೇವಲ 11 ತಿಂಗಳು ಕಾಯುವ ತಾಳ್ಮೆ ಅವರಿಗಿರಲಿಲ್ಲವೇ? ದೇಶದ ಜನತೆ ಅದೆಷ್ಟು ರಕ್ತಪಾತ ಅನುಭವಿಸಿದರೂ ಸರಿಯೇ, ತಮ್ಮ ಕೈಗೆ ಅಧಿಕಾರ ಬೇಗನೆ ಸಿಗಬೇಕು ಎಂಬುದವರ ಇಂಗಿತವಾಗಿತ್ತು ಎಂದು ಹೇಳದೇ ವಿಧಿಯಿಲ್ಲ. ನೆಹರೂರ ಈ ನಡವಳಿಕೆಯನ್ನು ಅಮೆರಿಕದ ಆ ಏಳು ನಾಯಕರ ನಿಲುವಿಗೆ ಹೋಲಿಸಿದಾಗ ನಾಯಕತ್ವದ ವಿಷಯದಲ್ಲಿ ಅಮೆರಿಕನ್ನರ ಅದೃಷ್ಟದ ಬಗ್ಗೆ, ನಮ್ಮ ದುರದೃಷ್ಟದ ಬಗ್ಗೆ ಗಂಭೀರವಾಗಿ ಯೋಚಿಸುವಂತಾಗುತ್ತದೆ.


ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net