ಅಧಿಕಾರಾತುರಾಣಾಂ ನ ಸಂಯಮ ನ ತರ್ಕ

ವಿಶೇಷ ಅಂಕಣ
ವಿಶೇಷ ಅಂಕಣ
Published on
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಸೋನಿಯಾ ಗಾಂಧಿ ಮತ್ತವರ ಮಕ್ಕಳ ಕ್ಷಮಾಗುಣ ಅಸಾಧಾರಣವಾದುದು. ರಾಜೀವ್ ಗಾಂಧಿಯವರ ಹತ್ಯೆಯ ಸಂಚಿನಲ್ಲಿ ಅಪರಾಧಿಗಳೆಂದು ನ್ಯಾಯಾಲಯದಿಂದ ತೀರ್ವನಿಸಲ್ಪಟ್ಟು ಕಾರಾಗೃಹ ಶಿಕ್ಷೆ ಅನುಭವಿಸುತ್ತಿರುವವರನ್ನು ಬಂಧಮುಕ್ತಗೊಳಿಸುವುದರ ಪರವಾಗಿ ಸೋನಿಯಾ ಗಾಂಧಿ ಇದ್ದಾರೆ ಎಂಬ ಮಾತು ಕೆಲವರ್ಷಗಳ ಹಿಂದೆ ದೊಡ್ಡದಾಗಿ ಕೇಳಿಬಂದಿತ್ತು. ಹಾಗೆಯೇ ಅವರು ಮುರುಗನ್- ನಳಿನಿ ದಂಪತಿಯ ಮಗಳ ವೈದ್ಯಕೀಯ ವಿದ್ಯಾಭ್ಯಾಸಕ್ಕೂ ಸಹಕಾರ ಒದಗಿಸಿದರೆಂಬ ಮಾತನ್ನೂ ನಾವು ಕೇಳಿದ್ದೇವೆ.

ಇದೆಲ್ಲವೂ ಸತ್ಯವೇ ಆಗಿದ್ದರೆ ಸೋನಿಯಾ ಗಾಂಧಿಯವರದು ದೊಡ್ಡ ಹೃದಯ. ಅವರ ಮಗಳು ಪ್ರಿಯಾಂಕಾ ಗಾಂಧಿಯವರಂತೂ ತಾಯಿಗಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ ನಳಿನಿ ಅವರನ್ನು ಕಾರಾಗೃಹದಲ್ಲಿ ಭೇಟಿಯಾಗಿದ್ದಾರೆ. ಇದೆಲ್ಲದರ ಅರ್ಥ ಸೋನಿಯಾ ಗಾಂಧಿ ತಮ್ಮ ಪತಿಯ ಹಂತಕರನ್ನು, ಪ್ರಿಯಾಂಕಾ ಗಾಂಧಿ ತಮ್ಮ ತಂದೆಯ ಹಂತಕರನ್ನು ಕ್ಷಮಿಸಿದ್ದಾರೆ! ಆದರೆ ಇದೇ ಕ್ಷಮಾಗುಣವನ್ನು ಅವರು ಮತ್ತು ರಾಹುಲ್ ಗಾಂಧಿ ಬಿಜೆಪಿ ನೇತಾರ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಬಗ್ಗೆ ತೋರುತ್ತಿಲ್ಲ, ಗುಜರಾತ್ ಕೋಮು ಹಿಂಸಾಚಾರದಲ್ಲಿ ಅವರು ನಿದೋಷಿ ಎಂಬ ವಿಶೇಷ ತನಿಖಾ ದಳದ ವರದಿಯನ್ನು ಸವೋಚ್ಚ ನ್ಯಾಯಾಲಯ ಯುಪಿಎ ಆಡಳಿತಾವಧಿಯಲ್ಲೇ ಅಂಗೀಕರಿಸಿದ್ದರೂ! ಹೀಗೇಕೆ?

‘ವ್ಯಕ್ತಿಯೊಬ್ಬ ತನ್ನ ತಂದೆಯ ಹತ್ಯಾಕಾರಿಯನ್ನು ಕ್ಷಮಿಸಬಹುದು. ಆದರೆ ತನ್ನ ಆಸ್ತಿಯನ್ನು ಕಸಿದುಕೊಂಡವನನ್ನು ಕ್ಷಮಿಸಲಾರ.’ ಮಧ್ಯಕಾಲೀನ ರೋಮ್ ಜಗದ್ವಿಖ್ಯಾತ ರಾಜನೀತಿಶಾಸ್ತ್ರಜ್ಞ ನಿಕೊಲೋ ಮೆಕಿಯಾವೆಲ್ಲಿ ಐದು ಶತಮಾನಗಳ ಹಿಂದೆಯೇ ಹೇಳಿಹೋದ ಮಾತಿದು. ರಾಜೀವ್ ಗಾಂಧಿ ಹತ್ಯಾಕಾರಿಗಳು ಒಬ್ಬ ಪತಿಯನ್ನು, ಒಬ್ಬ ತಂದೆಯನ್ನು ಕೊಂದರು ಅಷ್ಟೇ. ಅವರು ಆಸ್ತಿಯನ್ನೇನೂ ಅಂದರೆ ಆಸ್ತಿಯನ್ನು ತಂದುಕೊಡಬಹುದಾದ ರಾಜಕೀಯ ಅಧಿಕಾರವನ್ನು ‘ಕಸಿದುಕೊಳ್ಳಲಿಲ್ಲ’. ಆ ‘ಅಪರಾಧ’ವನ್ನು ಎಸಗಿರುವವರು ನರೇಂದ್ರ ಮೋದಿ.

1998ರಲ್ಲಿ ಸೀತಾರಾಮ್ ಕೇಸರಿಯವರನ್ನು ಕೆಳಗಿಳಿಸಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನವನ್ನು ಪಡೆದುಕೊಂಡ ಸೋನಿಯಾ ಗಾಂಧಿಯವರು ತಮ್ಮ ರಾಜಕೀಯ ಅಧಿಕಾರದ ಹಾದಿಯಲ್ಲಿ ಅಡ್ಡಿಯಾಗಿ ಕಂಡದ್ದು ಅಟಲ್ ಬಿಹಾರಿ ವಾಜಪೇಯಿ ಅವರನ್ನು. ಅವರ ವಿರುದ್ಧವಾಗಿ ಸೋನಿಯಾರಿಗೆ ವಿವಿಧ ಕಾರಣಗಳಿಗಾಗಿ ಸಾಮಾಜಿಕ ಕಾರ್ಯಕರ್ತರು ಮತ್ತು ಪತ್ರಕರ್ತರ ಒಂದು ವರ್ಗದ ಬೆಂಬಲ ದೊರಕಿದ್ದೀಗ ಇತಿಹಾಸ. ವಾಜಪೇಯಿಯವರಿಗಿಂತಲೂ ನರೇಂದ್ರ ಮೋದಿ ತಮಗೆ ದೊಡ್ಡ ರಾಜಕೀಯ ಪ್ರತಿಸ್ಪರ್ಧಿಯಾಗಬಹುದೆಂದು ಸೋನಿಯಾ ಗಾಂಧಿಯವರು 2001ರ ಹೊತ್ತಿಗೆ ಪರಿಗಣಿಸಿದ ಸಾಧ್ಯತೆ ಇದೆ. ನಿಜ ಹೇಳಬೇಕೆಂದರೆ, ಸ್ವಕುಟುಂಬ ಹಿತಾಸಕ್ತಿಗಳ ಒತ್ತಡದಲ್ಲಿ ಸಿಲುಕದ, ನಿಸ್ವಾರ್ಥ ಮನೋಭಾವದ ನರೇಂದ್ರ ಮೋದಿ ತಮಗೆ ಸಿಕ್ಕಿದ ಸ್ಥಾನವನ್ನು ಜನಹಿತಕ್ಕಾಗಿ ಸದುಪಯೋಗಪಡಿಸಿಕೊಂಡು, ಜನಾನುರಾಗಿಯಾಗಿ ಬೆಳೆದು ಪಟ್ಟಾಗಿ ಕೂತುಬಿಡಬಹುದೆಂಬ ಶಂಕೆ ಗುಜರಾತ್​ನ ಬಿಜೆಪಿ ನೇತಾರ ಕೇಶುಭಾಯಿ ಪಟೇಲ್ ಅವರಿಗೇ ಇತ್ತು.

ಹೀಗಾಗಿಯೇ ಅವರು ಮೋದಿಯವರನ್ನು ಗುಜರಾತ್​ನಿಂದಲೇ ದೂರವಿರಿಸಿದ್ದರು. ಆದರೆ ಮೋದಿಯವರಂತಹ ನೇತಾರರ ಮಹತ್ವವನ್ನು ದೂರದೃಷ್ಟಿಶಾಲಿ ವಾಜಪೇಯಿ ಅರಿತಿದ್ದರು. ಅದರಿಂದಾಗಿ ಗುಜರಾತ್​ನ ನೊಗ ಹೆಗಲಿಗೇರಿಸಿಕೊಂಡ ಮೋದಿ ಅಲ್ಲಿಗೇ ನಿಲ್ಲುವುದಿಲ್ಲ ಎಂದು ಸೋನಿಯಾ ಗಾಂಧಿ ರ್ತಸಿದ ಹಾಗೂ ಆ ಪ್ರಕಾರ ತಮ್ಮ ನಿಕಟ ಭವಿಷ್ಯದ ಪ್ರತಿಸ್ಪರ್ಧಿ ನರೇಂದ್ರ ಮೋದಿಯವರೇ ಹೊರತು ಬೇರಾರೂ ಅಲ್ಲ ಎಂದು ಸೋನಿಯಾ ಗಾಂಧಿಯವರು ಖುದ್ದಾಗಿ ಅಥವಾ ತಮ್ಮ ಹಿತೈಷಿಗಳ ಮೂಲಕ ಗುರುತಿಸಿದ ಸಾಧ್ಯತೆಯಿದೆ. ಆ ಕಾರಣದಿಂದಲೇ ಇರಬೇಕು ಅವರು ಗುಜರಾತ್ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ ಮೋದಿಯವರ ಮೇಲೆ ಉಗ್ರ ದಾಳಿ ಆರಂಭಿಸಿದ್ದು.

ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಸೋನಿಯಾ ಕಟುವಾಗಿ ನಿಂದಿಸತೊಡಗಿದರೆ ಅವರ ಆಪ್ತರಾದ ಅಹ್ಮದ್ ಪಟೇಲ್ ಸಾಮಾಜಿಕ ಕಾರ್ಯಕರ್ತರ ಮೂಲಕ ಮೋದಿಯವರ ಮೇಲೆ ಒತ್ತಡ ಹೇರತೊಡಗಿದರು. ಹಾಗಾಗಿ ಮೋದಿ ನ್ಯಾಯಾಲಯದಲ್ಲಿ ಆರೋಪಿಯಾಗಿ ನಿಲ್ಲಬೇಕಾಯಿತು. ಆದರೆ ಅವರ ಮೇಲೆ ಹೊರಿಸಿದ ಆರೋಪಗಳು ನಿರಾಧಾರ ಎಂದು ನ್ಯಾಯಾಲಯವೇ ಹೇಳಿದಾಗ ಅವರ ವಿರುದ್ಧದ ದೊಡ್ಡ ಅಸ್ತ್ರವೊಂದು ಸೋನಿಯಾರ ಕೈನಿಂದ ಜಾರಿಹೋಯಿತು. ಜತೆಗೆ, ಸಾಂವಿಧಾನಿಕ ಕಾರಣಗಳಿಂದಾಗಿ ತಾವು ಪ್ರಧಾನಿಯಾಗುವುದು ಅಸಾಧ್ಯವೆಂದು ಅದಾಗಲೇ ಮನವರಿಕೆಯಾಗಿದ್ದ ಸೋನಿಯಾ ಅವರು ಮೋದಿಯವರ ವಿರುದ್ಧದ ಬಹಿರಂಗ ಸಮರವನ್ನು ತಗ್ಗಿಸಿ ಅಖಾಡಕ್ಕೆ ರಾಹುಲ್ ಗಾಂಧಿಯವರನ್ನು ಇಳಿಸಿದಂತೆ ಕಾಣುತ್ತದೆ.

ಆದರೆ ಈ ‘ಜವಾಬ್ದಾರಿ’ ರಾಹುಲ್ ಗಾಂಧಿಯವರಿಗೆ ಆರಂಭದಲ್ಲಿ ಒಲ್ಲದ ಮಾಘಸ್ನಾನದಂತಿದ್ದಂತೆ ಕಾಣುತ್ತದೆ. ಅವರು ಮೊದಲಿಗೆ ಲೋಕಸಭೆ ಪ್ರವೇಶಿಸಿದ್ದು ಮೇ 2004ರಲ್ಲಿ, ಅಲ್ಲಿ ವಿಷಯವೊಂದರ ಪ್ರಸ್ತಾಪ ಮಾಡಿದ್ದು ಹತ್ತು ತಿಂಗಳುಗಳ ನಂತರ, ಮಾರ್ಚ್ 2005ರಲ್ಲಿ! ಅಲ್ಲದೇ, ತಮ್ಮ ರಾಜಕೀಯ ಉತ್ಕರ್ಷದ ಕನಸು ಕಾಣುವ ಯುವ ರಾಜಕಾರಣಿಯೊಬ್ಬ ತೋರಬೇಕಾದಷ್ಟು ಆಸಕ್ತಿಯನ್ನು ರಾಹುಲ್ ಗಾಂಧಿ ಲೋಕಸಭೆಯ ಕಾರ್ಯಕಲಾಪಗಳಲ್ಲಿ ತೋರಲಿಲ್ಲ. ‘ಪಾರ್ಟ್​ಟೈಂ ಪಾಲಿಟೀಷಿಯನ್’ ಎಂದು ಮಾಧ್ಯಮ ಮತ್ತು ಇತರ ರಾಜಕೀಯ ಪಕ್ಷಗಳು ಅವರನ್ನು ಕರೆಯತೊಡಗಿದ್ದು ಈ ಹಿನ್ನೆಲೆಯಲ್ಲಿ. ತಾಯಿ ತನಗಾಗಿ ಸಿದ್ಧಪಡಿಸುತ್ತಿದ್ದಿರಬಹುದಾದ ಕುದುರೆಯತ್ತ ಅವರು ಉದಾಸೀನ ಹೊಂದಿದ್ದುದು ಇದರಿಂದ ಸ್ಪಷ್ಟವಾಗುತ್ತದೆ.

ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಮಂತ್ರಿಮಂಡಲದಲ್ಲಿ ನೀಡಬಯಸಿದ ಸ್ಥಾನವನ್ನೂ ರಾಹುಲ್ ತಿರಸ್ಕರಿಸಿದ ವರದಿಯೂ ಇದನ್ನೇ ಪುಷ್ಟೀಕರಿಸುತ್ತದೆ. ತಾನು ನೇರವಾಗಿ ಪ್ರಧಾನಿಯಾಗುವ ಅರ್ಹತೆ ಹಾಗೂ ಹಕ್ಕು ಉಳ್ಳವನು ಎಂದವರು ತಿಳಿದ ಕಾರಣ ಮಂತ್ರಿ ಪದವಿಯನ್ನು ತಿರಸ್ಕರಿಸಿದರು ಎಂಬ ‘ವದಂತಿ’ ನಿಜವೇ ಆಗಿದ್ದರೆ ಅದೂ ಸಹ ಅವರ ಋಣಾತ್ಮಕ ರಾಜಕೀಯ ನಡೆಗೆ ಉದಾಹರಣೆಯಾಗುತ್ತದೆ. ಇಂದಿರಾ ಗಾಂಧಿಯವರು ಲಾಲ್ ಬಹಾದುರ್ ಶಾಸ್ತ್ರಿಯವರ ಮಂತ್ರಿಮಂಡಲದಲ್ಲಿ ಲಭ್ಯವಾದ ಸ್ಥಾನವೊಂದನ್ನು ಸ್ವೀಕರಿಸಿ, ಆಡಳಿತದ ನೇರ ಅನುಭವವನ್ನು ಪಡೆಯಲು ಪ್ರಯತ್ನಿಸಿದ ಧನಾತ್ಮಕ ಉದಾಹರಣೆಯನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಆದರೆ ಯುಪಿಎ ಸರ್ಕಾರದ ಕೊನೆಯ ಹಂತದಲ್ಲಿ ರಾಹುಲ್ ಗಾಂಧಿ ಏಕಾಏಕಿ ಅತ್ಯುತ್ಸಾಹ ತೋರಬಯಸಿದಂತೆ ಕಾಣುತ್ತದೆ. ಅಣ್ಣಾ ಆಂದೋಲನದ ಹಿನ್ನೆಲೆಯಲ್ಲಿ ಮನಮೋಹನ್ ಸಿಂಗ್ ಅಧಿಕಾರ ತ್ಯಜಿಸಬಹುದಾದ, ಅದು ತಮಗೆ ಸಿಗಬಹುದಾದ ರಾಹುಲ್, ಅದಾಗದೇ ಹೋದಾಗ 2014ರ ಚುನಾವಣೆಗಳಾಚೆ ತಮ್ಮ ಭವಿಷ್ಯವನ್ನು ಅರಸಿದರು. ಅದಕ್ಕೆ ಸಿದ್ಧತೆಯಾಗಿ ಅವರು ಎಸಗಿದ ಸಂಯಮರಹಿತ ಹಾಗೂ ತರ್ಕರಹಿತ ಕೃತ್ಯ ಮನಮೋಹನ್ ಮಂತ್ರಿಮಂಡಲ ಅಂಗೀಕರಿಸಿದ್ದ ಸುಗ್ರೀವಾಜ್ಞೆಯೊಂದನ್ನು ಅವರು ಸೆಪ್ಟೆಂಬರ್ 2013ರಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹರಿದುಹಾಕಿದ್ದು.

ಭ್ರಷ್ಟಾಚಾರಿ ರಾಜಕಾರಣಿಗಳಿಗೆ ತಾತ್ಕಾಲಿಕ ಉಸಿರು ಒದಗಿಸುವಂತಿದ್ದ ಆ ಸುಗ್ರೀವಾಜ್ಞೆಯನ್ನು ಸಾರ್ವಜನಿಕವಾಗಿ ತಿರಸ್ಕರಿಸುವ ಮೂಲಕ ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ-ವಿರೋಧಿ ಆಂದೋಲನಕ್ಕೆ ಕಾಂಗ್ರೆಸ್ ನೀಡುವ ಸೂಕ್ತ ಪರಿಹಾರ ತಾವು ಎಂದು ರಾಹುಲ್ ಗಾಂಧಿ ಆ ಕೃತ್ಯದ ಮೂಲಕ ಸಾರುವ ಪ್ರಯತ್ನ ಮಾಡಿದಂತೆ ಕಾಣುತ್ತದೆ. ಕಾಂಗ್ರೆಸ್​ನ ನಿರೀಕ್ಷೆಗೆ ವಿರುದ್ಧವಾಗಿ ಅದು 2014ರ ಚುನಾವಣೆಗಳಲ್ಲಿ ಅಧಿಕಾರ ಕಳೆದುಕೊಂಡಿತು. ಆದರೆ ಅದೇನೂ ರಾಹುಲ್ ಗಾಂಧಿಯವರನ್ನು ಮತ್ತು ಪಕ್ಷವನ್ನು ಹತಾಶೆಯ ಪ್ರಪಾತಕ್ಕೆ ದೂಡಲಿಲ್ಲ.

ಒಮ್ಮೆ ಕಳೆದುಕೊಂಡ ಅಧಿಕಾರವನ್ನು ಕಾಂಗ್ರೆಸ್ ಅನತಿಕಾಲದಲ್ಲೇ ಮತ್ತೆ ಗಳಿಸಿಕೊಳ್ಳುವ ಪ್ರಕ್ರಿಯೆ ಹಿಂದಿನ ಸರಿಸುಮಾರು ನಾಲ್ಕು ದಶಕಗಳಿಂದಲೂ ನಡೆಯುತ್ತಲೇ ಬಂದಿತ್ತು. 1977ರಲ್ಲಿ ಕಳೆದುಕೊಂಡ ಅಧಿಕಾರ ಮೂರು ವರ್ಷಗಳು ಕಳೆಯುವುದರೊಳಗೇ ಮತ್ತೆ ದಕ್ಕಿತ್ತು. 1989ರಲ್ಲಿ ಕೈಜಾರಿಹೋದ ಅಧಿಕಾರ ಕೇವಲ ಒಂದೂವರೆ ವರ್ಷದಲ್ಲಿ ಕೈವಶವಾಗಿತ್ತು. 1996ರಲ್ಲಿ ಅಧಿಕಾರ ಕಳೆದುಕೊಂಡರೂ ಮುಂದಿನ ಎರಡು ವರ್ಷಗಳು ಅದು ಕಿಂಗ್ ಮೇಕರ್ ಸ್ಥಾನದಲ್ಲಿ ವಿಜೃಂಭಿಸಿತ್ತು. ಆಮೇಲೆ ತುಸು ಹೆಚ್ಚೇ ಅನಿಸಬಹುದಾದ ಆರು ವರ್ಷಗಳ ಅವಧಿಯನ್ನು ಅಧಿಕಾರದಿಂದ ಹೊರಗೆ ಕಳೆದರೂ 2004ರಲ್ಲಿ ಅದು ಮತ್ತೆ ಗದ್ದುಗೆಯೇರಿತು.

ಅದೇ ಪ್ರಕ್ರಿಯೆಯು ಮುಂದುವರಿದು 2014ರಲ್ಲಿ ಕೈತಪ್ಪಿದ ಅಧಿಕಾರ 2019ರಲ್ಲಿ ಮತ್ತೆ ಸಿಕ್ಕೇ ಸಿಗುತ್ತದೆ ಎಂದು ಕಾಂಗ್ರೆಸ್ ಭಾವಿಸಿದ್ದರಲ್ಲಿ ಅಚ್ಚರಿಯೇನಿಲ್ಲ. ಅದೇ ಭಾವನೆ ಹೊಂದಿರಬಹುದಾದ ರಾಹುಲ್ ಗಾಂಧಿ ತಾವು ತಮ್ಮ ಕಡೆಯಿಂದ ಹೆಚ್ಚೇನೂ ಶ್ರಮ ತೆಗೆದುಕೊಳ್ಳುವ ಅಗತ್ಯವಿಲ್ಲ ಎಂದು ತಿಳಿದಂತೆ ಅವರ ನಡವಳಿಕೆಗಳು ಕಾಣುತ್ತವೆ. ಸಂಸತ್ ಕಲಾಪಗಳ ಕುರಿತಾಗಿ ಅವರೆಷ್ಟು ನಿರ್ಲಕ್ಷ್ಯ ತಳೆದರೆಂದರೆ ದಶಕದ ಹಿಂದೆ ಲೋಕಸಭೆಯ ಬಜೆಟ್ ಅಧಿವೇಶನವನ್ನು ಬಿಟ್ಟು ಅವರು ಐವತ್ತೇಳು ದಿನಗಳಷ್ಟು ದೀರ್ಘಕಾಲ ದೇಶದಿಂದ ಹೊರಗೆ ಹೊರಟುಹೋಗಿದ್ದರು! ಅಧಿವೇಶನದ ಕೊನೆಯ ಹಂತದಲ್ಲಿ ಏಕಾಏಕಿ ಪ್ರತ್ಯಕ್ಷರಾಗಿ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳತೊಡಗಿದ ಅವರ ಬಗ್ಗೆ ಅಂದಿನ ಅರ್ಥಮಂತ್ರಿ ‘ಕೆಲವರು ಇಡೀ ಅಧಿವೇಶನದಲ್ಲಿ ಮಾಯವಾಗಿದ್ದು, ಕೊನೆಯಲ್ಲಿ ಬಂದು ಪ್ರಶ್ನೆಗಳನ್ನೆತ್ತುತ್ತಾರೆ’ ಎಂದು ತೋರಿದ ತಿರಸ್ಕಾರ ದೇಶದ್ದೂ ಆಗಿತ್ತು. ಕಾಂಗ್ರೆಸ್ ಯುವರಾಜ ಹಾಗೂ ಪ್ರಧಾನಿ ಪಟ್ಟದ ಆಕಾಂಕ್ಷಿ ರಾಹುಲ್ ಗಾಂಧಿ ಒಬ್ಬರು ಪಾರ್ಟ್​ಟೈಂ ಪಾಲಿಟೀಷಿಯನ್ ಎಂದು ದೇಶ ಮತ್ತೊಮ್ಮೆ ದೊಡ್ಡದಾಗಿ ಆಡಿಕೊಂಡಿತು.

ಆಗ ಎಚ್ಚೆತ್ತ ರಾಹುಲ್ ಗಾಂಧಿ ದೇಶದ ಕುರಿತಾಗಿ ಕಾಳಜಿ ತೋರಿಸುತ್ತಾ ಮೋದಿ ಸರ್ಕಾರದ ನೀತಿಗಳನ್ನು ಪ್ರಶ್ನಿಸತೊಡಗಿದರು. ಅಂತಹ ಉದಾಹರಣೆಗಳು ಲೋಕಸಭೆಯ ಒಳಗೂ ಹೊರಗೂ ಕಾಣತೊಡಗಿದವು. ಮೇಕ್ ಇನ್ ಇಂಡಿಯಾ ಕಾರ್ಯಯೋಜನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಲೋಕಸಭೆಯಲ್ಲಿನ ಉದಾಹರಣೆಗಳಲ್ಲಿ ಒಂದಾದರೆ, ಜಿಎಸ್​ಟಿಯನ್ನು ಗಬ್ಬರ್ ಸಿಂಗ್ ಟ್ಯಾಕ್ಸ್ ಎಂದು ಲೇವಡಿ ಮಾಡಿದ್ದು ಮತ್ತು ಬೆಂಗಳೂರಿನ ಮೌಂಟ್ ಕಾರ್ವೆಲ್ ಕಾಲೇಜಿನಲ್ಲಿ ಸ್ವಚ್ಛ ಭಾರತ್ ಮಿಷನ್ ಬಗ್ಗೆ ವಿದ್ಯಾರ್ಥಿನಿಯರಲ್ಲಿ ಅನುಮಾನ ಬಿತ್ತುವಂತಹ ಮಾತುಗಳನ್ನಾಡಿದ್ದು ದೇಶದ ವಿವಿಧೆಡೆ ಮೋದಿ ಸರ್ಕಾರವನ್ನು ಲೇವಡಿ ಮಾಡುವ ಅವರ ಪ್ರಯತ್ನಗಳಿಗೆ ಉದಾಹರಣೆಯಾದವು. ಅದೇ ಅವಧಿಯಲ್ಲಿ, ನಿಂಬುಪಾನಿ ಮಾರುತ್ತಿದ್ದವನೊಬ್ಬ ಕೋಕಾ ಕೋಲಾ ಕಂಪೆನಿ ಸ್ಥಾಪಿಸಿದ ಎಂದು ಹೇಳಿದ್ದು.

ಈ ದಿನಗಳಲ್ಲಿ ವಿಮಾನಗಳಲ್ಲಿ ಪೈಲಟ್​ಗಳು ಇರುವುದಿಲ್ಲ, ಪ್ರಯಾಣಿಕರು ಧೈರ್ಯಗೆಡಬಾರದೆಂದು ಯಾರಾದರೂ ಇರುತ್ತಾರಷ್ಟೇ ಎಂದು ಹೇಳಿದ ಮಾತುಗಳೂ ಅವರ ಬುದ್ಧಿಮತ್ತೆ ಮತ್ತು ಪ್ರಧಾನಿಯಾಗುವ ಅರ್ಹತೆಯ ಬಗ್ಗೆ ಜನತೆಯಲ್ಲಿ ಅನುಮಾನ ಉಂಟುಮಾಡಿದ್ದನ್ನೂ ನೆನಪಿಸಿಕೊಳ್ಳಬಹುದು. ಈ ಹೆಚ್ಚಿನ ಉದಾಹರಣೆಗಳು ರಾಹುಲ್ ಗಾಂಧಿಯವರು ನರೇಂದ್ರ ಮೋದಿಯವರನ್ನು, ಅವರ ಮಂತ್ರಿಮಂಡಲವನ್ನು, ಅವರು ರೂಪಿಸಿ ಅನುಷ್ಠಾನಗೊಳಿಸುವ ನೀತಿಗಳನ್ನು ಜನತೆಯ ದೃಷ್ಟಿಯಲ್ಲಿ ಕೆಳಗಿಳಿಸುವ ಅಪ್ರಬುದ್ಧ ಪ್ರಯತ್ನಗಳಂತೆ ಕಂಡವು. ಅದು ಅತ್ಯಂತ ಉಗ್ರವಾಗಿ ತೋರಿದ್ದು ರಫಾಯೆಲ್ ಯುದ್ಧವಿಮಾನಗಳ ವಿಷಯದಲ್ಲಿ ಮೋದಿ ಸರ್ಕಾರ ಭ್ರಷ್ಟಾಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಆಪಾದಿಸಿ ‘ಚೌಕಿದಾರ್ ಚೋರ್ ಹೈ’ ಎಂದು ರಾಹುಲ್ ಗಾಂಧಿ ವಿವಿಧ ವೇದಿಕೆಗಳಲ್ಲಿ ಕೂಗತೊಡಗಿದಾಗ. ಇಲ್ಲಿ ರಾಹುಲ್ ಗಾಂಧಿ ಎಸಗಿದ್ದು ಒಂದಕ್ಕಿಂತ ಹೆಚ್ಚು ತಪ್ಪುಗಳು. ಅವು ರಫಾಯೆಲ್ ವ್ಯವಹಾರದ ಬಗ್ಗೆ ಅವರ ಕಡಿಮೆ ತಿಳಿವಳಿಕೆ ಹಾಗೂ ದೇಶದಲ್ಲಿ ಸರ್ಕಾರದ ರಕ್ಷಣಾ ನೀತಿಯ ಕುರಿತಾಗಿ ಅನುಮಾನ ಸೃಷ್ಟಿಸುವ ಪ್ರಯತ್ನವನ್ನು ಪ್ರದರ್ಶಿಸುವುದರ ಜತೆಗೆ, ತಮ್ಮದೇ ತಂದೆಯವರ ಬಗ್ಗೆ ಹಿಂದೆ ಎದ್ದಿದ್ದ, ಈಗ ದೇಶ ಮರೆತಿದ್ದ ಲೇವಡಿಯ ಮಾತೊಂದನ್ನು ದೇಶ ಮತ್ತೆ ನೆನಪಿಸಿಕೊಳ್ಳುವಂತೆ ಮಾಡಿದವು. ನರೇಂದ್ರ ಮೋದಿಯವರ ಬಗ್ಗೆ ‘ನಫ್ರತ್ ಕಾ ದುಕಾನ್’ ತೆರೆದಿರುವ ರಾಹುಲ್ ಗಾಂಧಿ ಇಂದು ಅಲ್ಲಿ ತಮ್ಮದೇ ಕುಟುಂಬದ ಹಿರಿಯರ ಮಾನವೂ ಹರಾಜಾಗುವಂತಹ ಸನ್ನಿವೇಶವನ್ನು ಇದೇ ಬಜೆಟ್ ಅಧಿವೇಶನದಲ್ಲಿ ಸೃಷ್ಟಿಸಿದರು.

ಇವೆಲ್ಲವನ್ನೂ ಅವರು ಮಾಡುತ್ತಿರುವುದು ನರೇಂದ್ರ ಮೋದಿ ಮೂರನೆಯ ಅವಧಿಯನ್ನು ಪೂರ್ಣಗೊಳಿಸದೇ ಹೋಗುವ, ತಾವು ಪ್ರಧಾನಿಯಾಗುವ ಅವಕಾಶವು ಸೃಷ್ಟಿಯಾಗುವ ಸಮಯವನ್ನು ಹತ್ತಿರವಾಗಿಸುವ ಸಂಯಮರಹಿತ ಹಾಗೂ ತರ್ಕಹೀನ ಪ್ರಯತ್ನಗಳಂತೆ ಕಾಣುತ್ತವೆ. ಈ ಆತುರದ ಓಟದಲ್ಲಿ ರಾಹುಲ್ ಗಾಂಧಿ ಮುಗ್ಗರಿಸುವ, ರಾಜಕೀಯವಾಗಿ ಮತ್ತೆ ಮೇಲೇಳಲಾಗದಷ್ಟು ಶಕ್ತಿಗುಂದುವ ಸನ್ನಿವೇಶಗಳೂ ಸೃಷ್ಟಿಯಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net