ಚುನಾವಣೆಗಳು ನಡೆದ 297 ಕ್ಷೇತ್ರಗಳಲ್ಲಿ ಯೂನುಸ್ರ ಕಣ್ಗೊಂಬೆ ಜಮಾತ್-ಇ-ಇಸ್ಲಾಮಿಗೆ ಸಿಕ್ಕಿದ್ದು ಕೇವಲ 68 ಸ್ಥಾನಗಳು. ಹಸೀನಾ ಸರ್ಕಾರವನ್ನು ಉರುಳಿಸಿದ ವೀರಾಗ್ರಣಿಗಳು ಎಂದು ಪ್ರಚಾರ ಪಡೆದಿದ್ದ ವಿದ್ಯಾರ್ಥಿಗಳ ಪಕ್ಷ ನ್ಯಾಷನಲ್ ಸಿಟಿಜನ್ಸ್ ಪಾರ್ಟಿಗೆ ಸಿಕ್ಕಿದ್ದು ಕೇವಲ 6 ಅಷ್ಟೇ! 209 ಸ್ಥಾನಗಳ ಭಾರಿ ಬಹುಮತ ಗಳಿಸಿದ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿಯ ನೇತಾರ ತಾರಿಖ್ ರಹಮಾನ್ ಇಂದು ಬಾಂಗ್ಲಾದೇಶದ ಪ್ರಧಾನಮಂತ್ರಿ. ಅವರು ಈ ಬಾರಿಯ ಸ್ವಾತಂತ್ರ್ಯದಿನದಂದು ದೇಶದಲ್ಲೇ ಇದ್ದರು, ಪಾಕಿಸ್ತಾನಿ ಸೇನೆ ಎಸಗಿದ ಭೀಕರ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸಿದರು, ಮಡಿದ ಬಂಗಾಲಿಗಳಿಗಾಗಿ ಅಶ್ರುತರ್ಪಣ ನೀಡಿದರು, ಅವರ ಬಲಿದಾನವನ್ನು ತುಂಬುಹೃದಯದಿಂದ ಸ್ಮರಿಸಿದರು, ಸ್ವಾತಂತ್ರ್ಯೋತ್ಸವವನ್ನು ವಿಧಿವತ್ತಾಗಿ ಆಚರಿಸಿದರು. ಜನರಿಂದ ಆಯ್ಕೆಯಾದ ನಾಯಕನಿಗೂ, ಹೊರಗಿನವರ ಸಂಚಿನಿಂದಾಗಿ ಕುರ್ಚಿ ಗಿಟ್ಟಿಸಿಕೊಂಡ ಅಧಿಕಾರಲಾಲಸಿ ಸ್ವಾರ್ಥಿಗೂ ಇರುವ ವ್ಯತ್ಯಾಸ ಇದು.