ಇಂದಿರಾರ ನೇರ ಉತ್ತರಾಧಿಕಾರಿ ಮೋದಿ! ಹೇಗೆ?

ವಿಶೇಷ ಅಂಕಣ
ವಿಶೇಷ ಅಂಕಣ
Published on

ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು

)

ವಿಯೆಟ್ನಾಂ ಯುದ್ಧದ ಕೆಸರಿನಲ್ಲಿ ಸಿಲುಕಿಕೊಂಡು ಹೊರಬರಲು ಹೆಣಗಾಡುತ್ತಾ ಅಮೆರಿಕಾ ಕಮ್ಯೂನಿಸ್ಟ್ ಚೀನಾವನ್ನು ತನ್ನತ್ತ ಸೆಳೆದುಕೊಂಡು ಶೀತಲಸಮರವನ್ನು ಅನಿಶ್ಚಿತತೆಯ ಪರಾಕಾಷ್ಠೆಗೊಯ್ದಿದ್ದ ಸಮಯದಲ್ಲಿ, ಅಮೆರಿಕದೊಂದಿಗೆ ರಕ್ಷಣಾ ಒಪ್ಪಂದ ಮಾಡಿಕೊಂಡಿದ್ದ ಮತ್ತು ಅಮೆರಿಕಾ ನೇತೃತ್ವದ ‘ಸೌತ್ಈಸ್ಟ್ ಏಷ್ಯಾ ಟ್ರೀಟಿ ಆರ್ಗನೈಜೇಷನ್’ ಸೇನಾಕೂಟದ ಸದಸ್ಯ ದೇಶವಾಗಿದ್ದ ಪಾಕಿಸ್ತಾನವನ್ನು ತುಂಡರಿಸಿ ನಮ್ಮ ಇಂದಿರಾ ಆ ಜಾಗತಿಕ ದೊಡ್ಡಣ್ಣನ ಸಾಮರಿಕ ಲೆಕ್ಕಾಚಾರಗಳನ್ನು ಅಸ್ತವ್ಯಸ್ತಗೊಳಿಸಿ ಶ್ವೇತಭವನನಕ್ಕೆ ನೀಡಿದಷ್ಟು ಆಘಾತವನ್ನು ಯಾರೂ ನೀಡಿಲ್ಲ.

ಇದು ಇಂದಿರಾರ ಜಾಗತಿಕ ಹೆಗ್ಗಳಿಕೆಯಾದರೆ ದೇಶದೊಳಗೆ ಅವರಷ್ಟು ಮಾಸ್ ಅಪೀಲ್ ಸೃಷ್ಟಿಸಿಕೊಂಡಿದ್ದ ಮತ್ತೊಬ್ಬ ಪ್ರಧಾನಮಂತ್ರಿಯನ್ನು ಭಾರತ 2014ರವರೆಗೆ ಮತ್ತೆ ಕಾಣಲೇ ಇಲ್ಲ. ಇಂದಿರಾ ಮತ್ತು ಮೋದಿ ನಡುವಿನ 30 ವರ್ಷಗಳಲ್ಲಿ ಬಂದುಹೋದ ಪ್ರಧಾನಿಗಳೆಲ್ಲರೂ ವಿದೇಶ ಹಾಗೂ ರಕ್ಷಣಾ ನೀತಿಗಳ ವಿಷಯದಲ್ಲಿ ಈ ಬಣ್ಣನೆಗೆ ಪಿ.ವಿ. ನರಸಿಂಹರಾವ್ ಮತ್ತು ಅಟಲ್ ಬಿಹಾರಿ ವಾಜಪೇಯಿ ಸಹ ಹೊರತಲ್ಲ. ನರಸಿಂಹರಾವ್ರ ಕ್ರಾಂತಿಕಾರಕ ಎಲ್ಪಿಜಿ ಕಾರ್ಯಯೋಜನೆಗಳ ಹಿಂದಿದ್ದದ್ದು ಐಎಂಎಫ್. ಅದರ ಹಿಂದಿದ್ದದ್ದು ಅಮೆರಿಕ! ಅದಕ್ಕಾಗಿ ಡಾ. ಮನಮೋಹನ್ಸಿಂಗ್​ರನ್ನು ರಾವ್ರ ತೆಕ್ಕೆಗೆ (ಅಥವಾ ಅದರ ಉಲ್ಟಾ!) ತಳ್ಳಲಾಯಿತು. 8 ವರ್ಷಗಳ ನಂತರ ಸಿಂಗ್ರನ್ನೇ ಪ್ರಧಾನಿಯಾಗಿಸಿಕೊಳ್ಳಬೇಕಾದ ಒತ್ತಡವನ್ನು ಸೋನಿಯಾ ಗಾಂಧಿ ಮೇಲೆ ಹಾಕಿದ್ದೂ ಅಮೆರಿಕವೇ. ಆ ಒತ್ತಡ ಇಡೀ 10 ವರ್ಷಗಳವರೆಗೆ ಮುಂದುವರೆಯಿತು. ಅದು ಇನ್ನೊಂದು ಪುರಾಣ ಬಿಡಿ.

ಇನ್ನು ವಾಜಪೇಯಿ ಬಗ್ಗೆ ಹೇಳುವುದಾದರೆ ಅವರ ಅಮೆರಿಕಾಪರ ಮನಸ್ಥಿತಿ 1977ರ ಚುನಾವಣೆ ಸಮಯದಲ್ಲೇ ಜಗಜ್ಜಾಹೀರಾಯಿತು. ಇಂದಿರಾ ವಿರುದ್ಧದ ಆಂದೋಲನದ ಹಿಂದೆ ಸಿಐಎ ಹಾಗೂ ಯುಎಸ್ಎಐಡಿಗಳ ಪಾತ್ರವಿದ್ದ ಸೂಚನೆಯನ್ನು ಈಗಾಗಲೇ ಕೊಟ್ಟಿದ್ದೇನೆ. ಅರ್ಥ ಮಾಡಿಕೊಳ್ಳಬಲ್ಲ ವಸ್ತುನಿಷ್ಠರಿಗೆ ಅದಕ್ಕಿಂತ ಹೆಚ್ಚೇನೂ ಹೇಳಬೇಕಾದ ಅಗತ್ಯವಿಲ್ಲ. ಜನತಾ ಪಕ್ಷ ಅಧಿಕಾರಕ್ಕೆ ಬಂದರೆ 1971ರ ಭಾರತ-ಸೋವಿಯೆತ್ ಶಾಂತಿ ಮತ್ತು ಸ್ನೇಹ ಒಪ್ಪಂದವನ್ನು ರದ್ದುಗೊಳಿಸಿ ಅಮೆರಿಕಾ ಜತೆ ಘನಿಷ್ಟ ಸಂಬಂಧ ಬೆಳೆಸಿಕೊಳ್ಳಲು ಪ್ರಯತ್ನಿಸುವುದಾಗಿ ವಾಜಪೇಯಿ 1977ರ ಚುನಾವಣೆ ಪ್ರಚಾರದಲ್ಲಿ ಹೇಳಿದ್ದನ್ನು ನೆನಪಿಸಿಕೊಳ್ಳಿ. 1971ರಲ್ಲಿ ಅಮೆರಿಕದ ಬೆದರಿಕೆಗೆ ಜಗ್ಗದೇ ಇಂದಿರಾ ಪಾಕಿಸ್ತಾನವನ್ನು ತುಂಡರಿಸಿದ್ದು ಸೋವಿಯೆತ್ ಯೂನಿಯನ್ ಜತೆ 4 ತಿಂಗಳ ಹಿಂದೆ ಮಾಡಿಕೊಂಡಿದ್ದ ಒಪ್ಪಂದದ ಬಲದಿಂದಲೇ. ಅದೊಂದು ಸ್ನೇಹದ ಮುಖವಾಡ ಹೊತ್ತ ಸೇನಾ ಒಪ್ಪಂದವಾಗಿತ್ತು ಎಂದು ಒಪ್ಪಂದದ 9ನೇ ವಿಧಿ ಹೇಳುತ್ತದೆ. 

ಚಳಿಗಾಲದಲ್ಲಿ ಯುದ್ಧ ನಡೆಸುವುದು ಸೇನಾ ದೃಷ್ಟಿಯಿಂದ ಅನುಕೂಲಕರ ಎಂಬ ಜ. ಮಾಣಿಕ್ಶಾ ಅವರ ಸಲಹೆಯನ್ನು ಒಪ್ಪಿಕೊಂಡ ಇಂದಿರಾ ಆ ಯುದ್ಧದಲ್ಲಿ ಪಾಕಿಸ್ತಾನದ ಪರವಾಗಿ ಅಮೆರಿಕ ಮತ್ತು ಚೀನಾ ಮಧ್ಯಪ್ರವೇಶಿಸಬಹುದು ಎಂದು ಸರಿಯಾಗಿಯೇ ರ್ತಸಿ, ಆ ಅಪಾಯದ ವಿರುದ್ಧ ರಕ್ಷಣೋಪಾಯವಾಗಿ ಆ ಒಪ್ಪಂದ ಮಾಡಿಕೊಂಡರು. ಮುಂದೆ ಘಟಿಸಿದ್ದೆಲ್ಲಾ ಅವರೆಣಿಕೆಯಂತೇ. ಭಾರತವನ್ನು ಬೆದರಿಸಲು ಬಂಗಾಳ ಕೊಲ್ಲಿಯತ್ತ ಮುಂಬರತೊಡಗಿದ ಅಮೆರಿಕದ 56 ಯುದ್ಧನೌಕೆಗಳ ಭಾರಿ ಸೆವೆಂತ್ ಫ್ಲೀಟ್ಅನ್ನು ಸೋವಿಯೆತ್ ಪೆಸಿಫಿಕ್ ಫ್ಲೀಟ್ ಸದ್ದಿಲ್ಲದೇ ಬೆನ್ನುಹತ್ತಿತು. ಮುಂದೆ ನಡೆದದ್ದು ಇತಿಹಾಸ. ಇದನ್ನು ಕೇವಲ ಐದೂಕಾಲು ವರ್ಷಗಳಲ್ಲಿ ವಾಜಪೇಯಿ ಹೇಗೆ ಮರೆತರು? ನಮ್ಮ ಪರ ನಿಂತ ಸೋವಿಯೆತ್ಅನ್ನು ದೂರತಳ್ಳಿ, ನಮ್ಮ ಶತ್ರುವಿನ ಪರ ನಿಂತ ಅಮೆರಿಕಾವನ್ನು ವಾಜಪೇಯಿ ಅಪ್ಪಿಕೊಳ್ಳಬಯಸಿದ್ದು ಹೇಗೆ?

ಈ ಚೋದ್ಯದಲ್ಲಿ ಅಮೆರಿಕದ ಪಾತ್ರ ಇರಲಿಲ್ಲವೇ? ವಾಜಪೇಯಿ ಮಾಡಿದ ಸ್ತುತ್ಯರ್ಹ, ಧೈರ್ಯಶಾಲಿ ಕೃತ್ಯವೆಂದರೆ 1998ರಲ್ಲಿ ಭಾರತವನ್ನು ಅಣ್ವಸ್ತ್ರ ರಾಷ್ಟ್ರವನ್ನಾಗಿಸಿದ್ದು. ಆ ಕೀರ್ತಿ ಅವರಿಗೆ ಸಲ್ಲಲೇಬೇಕು. ಆದಾಗ್ಯೂ ಅದರ ತಯಾರಿಯನ್ನು ಇಂದಿರಾ 1974ರಲ್ಲೇ ಮಾಡಿದ್ದರು. ನಮ್ಮದು ಶಾಂತಿಯುತ ಅಣುಪರೀಕ್ಷೆ, ಅಣ್ವಸ್ತ್ರ ನಿರ್ವಿುಸುವುದಿಲ್ಲ ಎಂದು ಹೇಳುತ್ತಲೇ ಇಂದಿರಾ ರಹಸ್ಯವಾಗಿ ಅಣ್ವಸ್ತ್ರಗಳನ್ನೂ, ಕ್ಷಿಪಣಿಗಳನ್ನೂ ತಯಾರಿಸಿ ಸಿದ್ಧವಾಗಿರಿಸುವ ಕ್ರಮಗಳನ್ನು ಕೈಗೊಂಡರು. 1990ರಲ್ಲಿ, ಇಂದಿರಾ ಸಾವಿನ 6 ವರ್ಷಗಳ ನಂತರ, ನಮ್ಮ ರಕ್ಷಣೆಗೆ ಬಂದದ್ದು ಅವೇ ಅಣ್ವಸ್ತ್ರಗಳು, ಕ್ಷಿಪಣಿಗಳು. 1990ರ ಮೇ 26ರಂದು ಚೀನಾದ ಅಣ್ವಸ್ತ್ರ ಪರೀಕ್ಷಾತಾಣ ಲೋಪ್ನೋರ್ನಲ್ಲಿ ತನ್ನ ಪ್ರಥಮ ಅಣ್ವಸ್ತ್ರ ಪರೀಕ್ಷೆಯನ್ನು ರಹಸ್ಯವಾಗಿ ನಡೆಸಿದ ಪಾಕಿಸ್ತಾನ 2 ತಿಂಗಳ ನಂತರ ವಿ.ಪಿ. ಸಿಂಗ್ ಸರ್ಕಾರ ಮಂಡಲ್-ಮಸ್ಜಿದ್ ಸಮಸ್ಯೆಯಲ್ಲಿ ಸಿಲುಕಿಕೊಂಡಿದ್ದಾಗ, ಕಶ್ಮೀರದಿಂದ ಭಾರತ ಸೇನೆಯನ್ನು ಹೊರತೆಗೆಯಬೇಕೆಂದೂ, ಇಲ್ಲದಿದ್ದರೆ ಭಾರತದ ಮೇಲೆ ಅಣ್ವಸ್ತ್ರ ದಾಳಿ ನಡೆಸುವುದಾಗಿಯೂ ಪಾಕಿಸ್ತಾನ ಬೆದರಿಕೆ ಸಂದೇಶ ಕಳುಹಿಸಿತು. 

ಸಗೋಧಾ ವಾಯುನೆಲೆಯಲ್ಲಿ ಎಫ್-16 ಯುದ್ಧವಿಮಾನಗಳಲ್ಲಿ ಅಣ್ವಸ್ತ್ರಗಳನ್ನು ಹೇರಿ, ಕಾಕ್ಪಿಟ್ಗಳಲ್ಲಿ ಸಿದ್ಧರಾಗಿ ಕೂತು ಮುಂದಿನ ಆಜ್ಞೆಗಾಗಿ ಕಾಯುವಂತೆ ಪೈಲಟ್ಗಳಿಗೆ ಹೇಳಿಯೂ ಆಗಿತ್ತು. ಆಗ ‘ನಮ್ಮಲ್ಲೂ ಅಣ್ವಸ್ತ್ರಗಳಿವೆ, ಪಾಕಿಸ್ತಾನ ದುಸ್ಸಾಹಸಕ್ಕಿಳಿದರೆ ಅದನ್ನು ಅದು ಊಹಿಸಿರದ ಸಂಕಟಕ್ಕೆ ನಾವು ದೂಡುತ್ತೇವೆ’ ಎಂಬ ಗೂಢಾರ್ಥದ ಸಂದೇಶವನ್ನು ಭಾರತ ಸರ್ಕಾರ ಪಾಕಿಸ್ತಾನಕ್ಕೆ ಕಳುಹಿಸಿ ಅದನ್ನು ತಣ್ಣಗಾಗಿಸಲು ಶಕ್ತವಾದದ್ದು ಇಂದಿರಾ ಮಾಡಿಟ್ಟುಹೋಗಿದ್ದ ತಯಾರಿಗಳಿಂದಲೇ.. ನಂತರ ಅದನ್ನೇ ನರಸಿಂಹರಾವ್ ಸರ್ಕಾರ ಮುಂದುವರೆಸಿತು. ಆದರೆ ಅದು ಅಮೆರಿಕದ ಬೆದರಿಕೆಯಿಂದ ಮಾಡಲಾಗದೇ ಹೋದ ಅಣ್ವಸ್ತ್ರ ಪರೀಕ್ಷೆಯನ್ನು ಅದೇ ಅಮೆರಿಕದ ಕಣ್ಣಿಗೆ ಮಣ್ಣೆರಚಿ ಸಾಧಿಸಿದ್ದು ವಾಜಪೇಯಿ ಸರ್ಕಾರ. ಆದರೆ ಅಷ್ಟರಲ್ಲಾಗಲೇ ಭಾರತದ ಕೈಗೆ ಅಣ್ವಸ್ತ್ರಗಳು ಎಂದೋ ಬಂದಾಗಿದೆ ಎನ್ನುವುದು ಬಹಿರಂಗವಾಗಿತ್ತು. ಹೀಗಾಗಿ ಅದನ್ನು ಒಪ್ಪಿಕೊಳ್ಳದೇ ಅಮೆರಿಕಾಗೆ ಬೇರೆ ದಾರಿಯೇ ಇರಲಿಲ್ಲ. ಒಂದೆರಡು ದಿನ ಮುನಿಸಿನ ನಾಟಕವಾಡಿತು ಅಷ್ಟೇ. 

ಎರಡು ವರ್ಷಗಳಲ್ಲಿ ಅಧ್ಯಕ್ಷ ಬಿಲ್ ಕ್ಲಿಂಟನ್ ಭಾರತಕ್ಕೆ ಬಂದುಹೋದದ್ದೂ ಆಯಿತು. ಅದೇ ಆವಧಿಯಲ್ಲಿ ಮಾರಿಷಸ್ನ ಆಗಲೀಗಾ ಮತ್ತು ಸೀಶೆಲ್ಸ್ನ ಅಸಂಪ್ಷನ್ ದ್ವೀಪಗಳಲ್ಲಿ ನೌಕಾಸೇನಾ ಸೌಲಭ್ಯಗಳನ್ನು ಗಳಿಸಿಕೊಳ್ಳಲು ವಾಜಪೇಯಿ ಸರ್ಕಾರ ಪ್ರಯತ್ನ ಆರಂಭಿಸಿದ್ದನ್ನು ಅಮೆರಿಕಾ ಬೆಂಬಲಿಸಿತು. ಯಾಕೆಂದರೆ ಪಶ್ಚಿಮ ಹಿಂದೂಮಹಾಸಾಗರದಲ್ಲಿ ಭಾರತದ ಈ ಚಟುವಟಿಕೆಗಳು ಚೀನಾದ ವಿರುದ್ಧವಷ್ಟೇ, ಅದರಿಂದ ತನಗೆ ಅನುಕೂಲವೇ ಆಗುತ್ತದೆ ಎಂದು ಅಮೆರಿಕಾ ಗುರುತಿಸಿತ್ತು! ಒಟ್ಟಿನಲ್ಲಿ ವಾಜಪೇಯಿ ಆಡಳಿತಾವಧಿಯಲ್ಲಿ ಭಾರತ-ಅಮೆರಿಕಾ ನಡುವೆ ಸಾಮರಿಕ ಸಹಯೋಗ ಹುಲುಸಾಗಿಯೇ ಬೆಳೆಯಿತು. ಅಂದರೆ ಅಮೆರಿಕಾ ಜತೆ ಉತ್ತಮ ಸಂಬಂಧ ಬೆಳೆಸಿಕೊಳ್ಳುವ ವಾಜಪೇಯಿಯವರ ಕಾಲು ಶತಮಾನದ ಹಿಂದಿನ ಆಶಯ ಅವರ ಪ್ರಧಾನಮಂತ್ರಿತ್ವದ ಅವಧಿಯಲ್ಲೇ ಸಾಕಷ್ಟುಮಟ್ಟಿಗೆ ಸಾಕಾರಗೊಂಡಿತು. ಅದು ಭಾರತಕ್ಕೆ ಅಗತ್ಯವೂ, ಅನುಕೂಲಕರವೂ ಆಗಿತ್ತು. 1970ರ ದಶಕಕ್ಕೂ 2000ರ ದಶಕಕ್ಕೂ ಅಗಾಧ ವ್ಯತ್ಯಾಸವಿತ್ತು. ಇಂದಿರಾ ಮತ್ತು ವಾಜಪೇಯಿ ಪ್ರಧಾನಿಗಳಾಗಿದ್ದುದು ಒಂದಕ್ಕೊಂದು ಹೋಲಿಕೆಯೇ ಇಲ್ಲದ ವಿಭಿನ್ನ ಯುಗಗಳಲ್ಲಿ.

ಆದರಿಂದು ಇತಿಹಾಸ ಮರುಕಳಿಸುತ್ತಿದೆ, ಇಂದಿರಾ ಮತ್ತು ಮೋದಿಯವರ ಕಾಲಗಳು ಸಾಮರಿಕವಾಗಿ, ಆರ್ಥಿಕವಾಗಿ ಮತ್ತು ಅವೆರಡೂ ಒಟ್ಟುಗೂಡಿ ಸೃಷ್ಟಿಸುವ ತಮ್ಮದೇ ಆದ ವಿಶಿಷ್ಟ ಮೌಲ್ಯಗಳಿಂದಾಗಿ ಒಂದೇ ಆಗಿವೆ. ಈ ಇಬ್ಬರು ನಾಯಕರು ತಮ್ಮ ನಡುವೆ ಆಗಿಹೋದ ಇತರ ನಾಯಕರು ಸೃಷ್ಟಿಸಿದ ಕಾಲದ ಅಂತರವನ್ನು ತೊಡೆದುಹಾಕಿ ಒಬ್ಬರ ನೇರ ಉತ್ತರಾಧಿಕಾರಿ ಇನ್ನೊಬ್ಬರಾಗಿದ್ದಾರೆ. ಇದನ್ನು ಮನದಟ್ಟು ಮಾಡಲೆಂದೇ ಮೇಲಿನ ವಿವರಗಳನ್ನು ನೀಡಬೇಕಾಯಿತು, ವಿಶ್ಲೇಷಣೆಗಳನ್ನು ಮಂಡಿಸಬೇಕಾಯಿತು. ತಮ್ಮನ್ನು ನಾಯಕರನ್ನಾಗಿ ಆಯ್ಕೆ ಮಾಡಿಕೊಂಡಿರುವ ಜನತೆಯ ಹಿತಾಸಕ್ತಿ ಕಾಪಾಡಲು ಈ ಇಬ್ಬರು ನಾಯಕರು ತಳೆದ ಸಂಕಲ್ಪ, ಅದು ತಂದಿರಿಸಿದ ಸವಾಲುಗಳು, ಅವುಗಳನ್ನೆದುರಿಸಲು ಇವರಿಬ್ಬರೂ ಹುಡುಕಿಕೊಂಡ ಮಾಗೋಪಾಯಗಳು, ಅವು ಸುಳಿಗಳಾಗಿ ಇವರನ್ನು ಒಳಗೆಳೆದುಕೊಳ್ಳುವ ಬಗೆಯತ್ತ ಈಗ ನೋಡೋಣ.

ಈ ಜಗತ್ತಿನಲ್ಲಿ ಇನ್ನೂರರಷ್ಟು ದೇಶಗಳಿವೆ, ಅವು ಇನ್ನೂರು ಬಗೆಗಳಲ್ಲಿ ಬೇರೆಬೇರೆಯಾಗಿವೆ. ಇಷ್ಟು ದೇಶಗಳಲ್ಲಿ ಐದು ಮಾತ್ರ ಭೌಗೋಳಿಕವಾಗಿ ದೂರದೂರದಲ್ಲಿದ್ದರೂ, ರಾಜಕೀಯವಾಗಿ ಬೇರೆಯಾಗಿರುವಂತೆ ಕಾಣಿಸುತ್ತಿದ್ದರೂ ಅವೆಲ್ಲವೂ ಮಾನಸಿಕವಾಗಿ, ಮೌಲ್ಯ-ಆಶಯ-ಧ್ಯೇಯಗಳಿಗೆ ಅನುಗುಣವಾಗಿ ಮತ್ತು ಅವೆಲ್ಲವೂ ಒಟ್ಟುಗೂಡಿ ಸೃಷ್ಟಿಸುವ ಕಾರ್ಯತಂತ್ರಗಳಿಗನುಗುಣವಾಗಿ ಒಂದೇ ಆಗಿವೆ! ಆ ಐದು ರಾಷ್ಟ್ರಗಳೆಂದರೆ ಇಂಗ್ಲೆಂಡ್, ಅಮೆರಿಕ, ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್. ಇಂಗ್ಲಿಷ್ ಜನರಿಂದ ಸೃಷ್ಟಿಯಾದ ಈ ದೇಶಗಳು ಬೇರೆಬೇರೆಯಾಗಿ ಕಾಣಿಸಿಕೊಳ್ಳುತ್ತಿರುವುದು ವ್ಯವಸ್ಥಿತವಾಗಿ ನಿರಂತರ ಚಾಲನೆಯಲ್ಲಿರುವ ಒಂದು ಕಣ್ಕಟ್ಟು. ಇದನ್ನು ಇಂಗ್ಲೆಂಡ್ ಮತ್ತು ಅಮೆರಿಕಾಗಳು ‘ಬೇರೆಯಾದ’ ಉದಾಹರಣೆಯೊಂದರಿಂದ ಗ್ರಹಿಸೋಣ.

ತನ್ನ 250ನೇ ಸ್ವಾತಂತ್ರ್ಯೋತ್ಸವವನ್ನು ಅಮೆರಿಕ ಈಗಷ್ಟೇ ಆಚರಿಸಿಕೊಂಡಿದೆ. ಆ ಸ್ವಾತಂತ್ರ್ಯಕ್ಕಾಗಿ ತಮ್ಮ ಪೂರ್ವಜರು ಸತತ ಏಳು ವರ್ಷ ಯುದ್ಧ ನಡೆಸಿದರು ಎಂದು ‘ಅಮೆರಿಕನ್ನರು’ ಹೇಳಿಕೊಳ್ಳುತ್ತಿದ್ದಾರೆ. ಹೌದು, ಯುದ್ಧ ನಡೆದದ್ದು, ರಕ್ತಪಾತವಾದದ್ದು ನಿಜ. ಆದರೆ ಅದೆಲ್ಲಾ ನಡೆದದ್ದು ಯಾಕಾಗಿ? ಅಟ್ಲಾಂಟಿಕ್ ಸಾಗರತೀರದ 13 ಇಂಗ್ಲಿಷ್ ವಸಾಹತುಗಳ ಆರ್ಥಿಕ ಸಂಪನ್ಮೂಲಗಳು, ಅವು ತರಬಹುದಾದ ಹಣದ ಹಾಗೂ ಬೆಲೆಬಾಳುವ ಲೋಹಗಳ ರೂಪದ ಆದಾಯ, ಅಷ್ಟನ್ನೂ ವ್ಯವಸ್ಥಿತವಾಗಿ ನಿರ್ವಹಿಸಲು ಅಗತ್ಯವಾದ ರಾಜಕೀಯ ಹಾಗೂ ಸೇನಾ ಅಧಿಕಾರ ಉತ್ಪಾದಕರು, ಮಾರಾಟಗಾರರು ಮತ್ತು ಬ್ಯಾಂಕರ್ಗಳು ಒಟ್ಟುಗೂಡಿದ ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ವರ್ಗಾವಣೆಗೊಂಡದ್ದನ್ನೇ ನಾವು ಅಮೆರಿಕಾದ ಸ್ವಾತಂತ್ರ್ಯ ಅಥವಾ ರಾಷ್ಟ್ರವೊಂದರ ಜನನ ಎಂಬೆಲ್ಲಾ ಹೆಸರುಗಳಿಂದ ಪಠ್ಯಪುಸ್ತಕಗಳಲ್ಲಿ ಓದುತ್ತೇವೆ ಅಥವಾ ನಾವು ಹಾಗೆ ಓದುವಂತೆ ಮಾಡಲಾಗಿದೆ.

ಮೇಲೆ ಉಲ್ಲೇಖಿಸಿದ ವರ್ಗಾವಣೆ ರಕ್ತಪಾತದ ಮೂಲಕ ಆದ ಕಾರಣ ಇಂಗ್ಲೆಂಡ್ ಮತ್ತು ಅಮೆರಿಕಾ ನಡುವೆ ಮುನಿಸು ಉಂಂಟಾಗಿತ್ತು. ಆದರೆ ಸುರಿದು ಇಂಗಿಹೋದ ರಕ್ತಕ್ಕಿಂತಲೂ ತಮ್ಮ ಮೈಗಳಲ್ಲಿ ಹರಿಯುತ್ತಲೇ ಇರುವ ಇಂಗ್ಲಿಷ್ ರಕ್ತ ಹೆಚ್ಚು ಬೆಲೆಯುಳ್ಳದ್ದು ಎನ್ನುವುದನ್ನು ಎರಡೂ ಮಣ್ಣಿನ ಜನ ಮಾನ್ಯಮಾಡಿ ವೈಷಮ್ಯ ಮರೆಯಲು ಹೆಚ್ಚುಕಾಲ ಬೇಕಾಗಲಿಲ್ಲ. ರಕ್ತಪಾತದ ಅಚಾತುರ್ಯ ಮರುಕಳಿಸದಂತಹ ಎಚ್ಚರಿಕೆಯನ್ನು ಕೆನಡಾ, ಆಸ್ಟ್ರೇಲಿಯಾ, ನ್ಯೂಜಿಲೆಂಡ್ ವಿಷಯದಲ್ಲಿ ಅನುಸರಿಸಿತು. ಪರಿಣಾಮವಾಗಿ ಆ ದೇಶಗಳಲ್ಲಿ ಆರ್ಥಿಕ ಸಂಪನ್ಮೂಲಗಳು ಮತ್ತವು ತರಬಹುದಾದ ಸಂಪತ್ತಿನ ಮೇಲಿನ ಅಧಿಕಾರ ಉತ್ಪಾದಕರ, ಮಾರಾಟಗಾರರ ಮತ್ತು ಬ್ಯಾಂಕರ್ಗಳ ಒಂದು ಗುಂಪಿನಿಂದ ಇನ್ನೊಂದು ಗುಂಪಿಗೆ ಶಾಂತಿಯುತವಾಗಿ ವರ್ಗಾವಣೆಗೊಂಡಿತು. ಈ ವರ್ಗಾವಣೆ ಪೂರ್ಣವಾಗಿ ಅಲ್ಲ. ಜತೆಗೆ ಸೇನಾ ಅಧಿಕಾರಗಳಂತೂ ಬೇರ್ಪಡಿಸಲಾಗದಂತೆ ಬೆಸೆದುಕೊಂಡೇ ಇವೆ. (ಮುಂದುವರಿಯಲಿದೆ).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net