ಭಾರತೀಯರು ತಮ್ಮ ಸಾಂಸ್ಕೃತಿಕ ಪರಂಪರೆ, ಧಾರ್ವಿುಕ ನಂಬಿಕೆ, ಆಚರಣೆಗಳ ಬಗ್ಗೆ ಕೀಳರಿಮೆ ಬೆಳೆಸಿಕೊಳ್ಳುವಂತೆ ಶಿಕ್ಷಣ ಪದ್ಧತಿ ರೂಪಿಸುವ ವ್ಯವಸ್ಥಿತ ಪ್ರಯತ್ನವನ್ನು ಬ್ರಿಟಿಷ್ ಕ್ರಿಶ್ಚಿಯನ್ ಮಿಷನರಿ ಶಿಕ್ಷಣ ಸಂಸ್ಥೆಗಳು 19ನೇ ಶತಮಾನದ ಮಧ್ಯಭಾಗದಲ್ಲೇ ಆರಂಭಿಸಿದವು. ಅದು ಸ್ವತಂತ್ರ ಭಾರತದ ಕಾಂಗ್ರೆಸ್ ಶಾಸನ ಕಾಲದಲ್ಲಿ ಇನ್ನಷ್ಟು ಉಗ್ರವಾಗಿ ಮುಂದುವರೆಯಿತು. ಆ ಅವಧಿಯಲ್ಲಿ ಹಿಂದೂ ಇತಿಹಾಸಕಾಲದ ಋಣಾತ್ಮಕ ಚಿತ್ರಣ ಮತ್ತು ಮುಸ್ಲಿಂ ಶಾಸನದ ವೈಭವೀಕರಣ ಸರ್ಕಾರದ ಶಿಕ್ಷಣ ನೀತಿಯ ಪ್ರಮುಖ ಅಂಶವಾಗಿದ್ದರೆ, ಇತಿಹಾಸದ ವಸ್ತುನಿಷ್ಠ ಚಿತ್ರಣದ ಪ್ರಯತ್ನದಲ್ಲಿ ತೊಡಗಿದ ವ್ಯಕ್ತಿಗಳನ್ನು ಮತ್ತು ಸಂಸ್ಥೆಗಳನ್ನು ವ್ಯವಸ್ಥಿತವಾಗಿ ನಿಗ್ರಹಿಸುವ ಕೆಲಸವನ್ನು ಸರ್ಕಾರಿ ವಲಯದ ಶಿಕ್ಷಣ ಸಂಸ್ಥೆಗಳು, ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆಗಳು ಮಾಡಿದವು.