ನಾನು ಹೊಡೆದಂತೆ ಮಾಡುತ್ತೇನೆ, ನೀನು ಅತ್ತಂತೆ ಮಾಡು!

ನಾನು ಹೊಡೆದಂತೆ ಮಾಡುತ್ತೇನೆ, ನೀನು ಅತ್ತಂತೆ ಮಾಡು!
ನಾನು ಹೊಡೆದಂತೆ ಮಾಡುತ್ತೇನೆ, ನೀನು ಅತ್ತಂತೆ ಮಾಡು!
Published on

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ಮೇ 14ರಂದು ಬಿಜೆಪಿ ಸಂಸದ ಸಂಬಿತ್​ ಪಾತ್ರಾ ಪತ್ರಿಕಾಗೋಷ್ಠಿ ಆಯೋಜಿಸಿ, ರಾಹುಲ್​ ಗಾಂಧಿಯವರ ಘೋಷಿತ, ಅಘೋಷಿತ ವಿದೇಶಯಾತ್ರೆಗಳ ವಿವರ ನೀಡಿದರು. ರಾಹುಲ್​ರ ಘೋಷಿತ ಆದಾಯ ಮತ್ತು ವಿದೇಶಯಾತ್ರೆಗಳ ಖರ್ಚಿನ ನಡುವೆ ತಾಳಮೇಳ ಕಾಣುತ್ತಿಲ್ಲ ಎನ್ನುವುದು ಅವರ ಮಾತುಗಳ ತಿರುಳಾಗಿತ್ತು. ರಾಹುಲ್​ ಮೇ 3ರಂದು ಮಸ್ಕತ್​ಗೆ ನೀಡಿದರೆನ್ನಲಾದ ರಹಸ್ಯ ಭೇಟಿ ಕುರಿತೂ ಪಾತ್ರಾ ಪ್ರಸ್ತಾಪಿಸಿದರು. ಗ್ರೇಟ್​ ನಿಕೋಬಾರ್​ ದ್ವೀಪದಲ್ಲಿ ಭಾರತ ಕೈಗೊಂಡಿರುವ ಯೋಜನೆಗಳ ಕುರಿತು ಚೀನೀಯರೊಂದಿಗೆ ರಾಹುಲ್​ ಚರ್ಚಿಸಿದಂತಿದೆ, ಅದು ಭಾರತದ ಹಿತಾಸಕ್ತಿಗೆ ಬಾಧೆ ತರುವಂತಿದೆ ಎಂಬ ಮಾತುಗಳನ್ನಾಡುತ್ತ ಪಾತ್ರಾ ಹೀಗೆ ಪ್ರಶ್ನಿಸಿದರು- "ರಾಹುಲ್​ಜೀ, ಮಸ್ಕತ್​ನಲ್ಲಿ ನೀವು ಏನು ಮಾಡಿದಿರಿ ಎಂದು ಹೇಳಿ. ನೀವು ಹೇಳದಿದ್ದರೆ ನಾವು ಹೇಳುತ್ತೇವೆ.
ಇದಾಗಿ ಎರಡೂವರೆ ತಿಂಗಳು ಕಳೆದಿದೆ. ಮಸ್ಕತ್​ನಲ್ಲಿ ತಾನೇನು ಮಾಡಿದ್ದೇನೆಂದು ರಾಹುಲ್​ ಹೇಳಿಲ್ಲ. ಪಾತ್ರಾ ಅವರೂ ಏನೂ ಹೇಳಿದಂತೆ ಕಾಣುವುದಿಲ್ಲ. ರಾಹುಲ್​ ಇದೇ ಜೂನ್​-ಜುಲೈನಲ್ಲಿ ಆರಾಮವಾಗಿ ಮತ್ತೆ ಮೂರು ವಾರ ವಿದೇಶಯಾತ್ರೆ ಕೈಗೊಂಡು ಸಂಸತ್​ನ ಮಾನ್ಸೂನ್​ ಅಧಿವೇಶನಕ್ಕೆ ಸ್ವಲ್ಪ ಮುಂಚೆ ಹಿಂತಿರುಗಿದ್ದಾರೆ. ತಾವು ಹೋಗಿದ್ದೆಲ್ಲಿಗೆ ಎಂದು ರಾಹುಲ್​ ಗಾಂಧಿಯೂ ಹೇಳಿಲ್ಲ, ಸಂಬಿತ್​ ಪಾತ್ರಾ ಅವರೂ ಹೇಳಿಲ್ಲ. ಹೋಗಲಿ ಬಿಡಿ. ಅವರೆಲ್ಲ ದೊಡ್ಡವರು. ಸಾಮಾನ್ಯ ನಾಗರಿಕರಿಗೆ ಯಾಕೆ ಎಲ್ಲವನ್ನೂ ಹೇಳಬೇಕು, ಅಲ್ಲವೇ? ಆದರೆ ಒಂದು ಮುಖ್ಯ ವಿಷಯವನ್ನು ನಾವು ಗಮನಿಸಬೇಕು. ರಾಹುಲ್​ ತಮ್ಮ ಮಾನ್ಸೂನ್​ ವಿದೇಶಯಾತ್ರೆಯನ್ನು ಕೈಗೊಂಡದ್ದು ಕಾಕ್ರೋಚ್​ ಜನತಾ ಪಾರ್ಟಿ (ಸಿಜೆಪಿ) ನೀಟ್​ ಪೇಪರ್​ ಲೀಕ್​ ವಿಷಯವನ್ನೆತ್ತಿಕೊಂಡು ದೆಹಲಿಯ ಜಂತರ್​ ಮಂತರ್​ನಲ್ಲಿ ನಡೆಸುತ್ತಿದ್ದ ಆಂದೋಲನದ ಮಧ್ಯೆಯೇ! ಇದನ್ನು ನೆನಪಿಟ್ಟುಕೊಳ್ಳಿ. ಮುಂದೆ ಬೇಕಾಗುತ್ತದೆ.
ಈಗ ಇನ್ನೊಂದು ಫ್ಲಾಷ್​ಬ್ಯಾಕ್​. ಇದೇ ವರ್ಷದ ಸಂಸತ್​ ಬಜೆಟ್​ ಅಧಿವೇಶನದಲ್ಲಿ ಮಾಜಿ ಸೇನಾದಂಡನಾಯಕ ಜ. ಎಂ.ಎಂ. ನರ್ವಾಣೆಯವರ ಆತ್ಮಕಥನದಲ್ಲಿದೆಯೆನ್ನಲಾದ ಕೆಲವು ವಿಷಯಗಳನ್ನೆತ್ತಿ ರಾಹುಲ್​ ಮತ್ತು ಕಾಂಗ್ರೆಸ್​ ಸಂಸದರು ಅಧಿವೇಶನ ಅಸ್ತವ್ಯಸ್ತಗೊಳಿಸಲು ಪ್ರಯತ್ನಿಸಿದ್ದರು. ಕೆಲವು ಸಂಸದೆಯರು ಪ್ರಧಾನಮಂತ್ರಿಗಳ ಆಸನವನ್ನೇ ಸುತ್ತುವರೆದ ಕಾರಣ ಲೋಕಸಭೆಯ ಇತಿಹಾಸದಲ್ಲೇ ಎರಡನೆಯ ಬಾರಿಗೆ ಬಜೆಟ್​ ಅಧಿವೇಶನದಲ್ಲಿ ಪ್ರಧಾನಿ ಮಾತಾಡದೇ ಹೋದ ಸನ್ನಿವೇಶವೂ ನಡೆಯಿತು. ಆಗ ರಾಹುಲ್​ ವಿರುದ್ಧ ಸಚಿವ ಕಿರಣ್​ ರಿಜಿಜು ವಿಶೇಷ ಹಕ್ಕುಹರಣ ಮಸೂದೆ (ಪ್ರಿವಿಲೆಜ್​ ಮೋಷನ್​) ತರುವುದಾಗಿ ಹೇಳಿದರು. ಅದರ ಬೆನ್ನಲ್ಲೇ ಬಿಜೆಪಿ ಸಂಸದ ನಿಶಿಕಾಂತ್​ ದುಬೆ ರಾಹುಲ್​ ಕುರಿತಾಗಿ ಏಕವಚನ ಪ್ರಯೋಗಿಸಿ, ಸಬ್‌ಸ್ಟಾಂಟಿವ್​ ಮೋಷನ್​ ತರುವುದಾಗಿ ಗುಡುಗಿದರು. ಅದಾದರೆ ರಾಹುಲ್​ ಸಂಸತ್​ ಸದಸ್ಯತ್ವ ಹೋಗುವುದು ಖಚಿತ ಎಂಬ ಮಾತು ಎಲ್ಲೆಡೆ ಕೇಳಿಬರತೊಡಗಿತು. ಪ್ರತಿ ಅಧಿವೇಶನದಲ್ಲೂ ಏನಾದರೂ ವಿಷಯವನ್ನೆತ್ತಿಕೊಂಡು ಕಲಾಪಗಳಿಗೆ ಅಡ್ಡಿಪಡಿಸುವ ರಾಹುಲ್​ರನ್ನು ಲೋಕಸಭೆಯಿಂದಲೇ ಹೊರಹಾಕಲು ಬಿಜೆಪಿ/ಎನ್​ಡಿಎ ತೀರ್ಮಾನಿಸಿದೆಯೆಂಬ ವಿಶ್ಲೇಷಣೆಗಳೂ ನಡೆಯತೊಡಗಿದವು. ಸಬ್‌ಸ್ಟಾಂಟಿವ್​ ಮೋಷನ್​ನಂತಹ ಬ್ರಹ್ಮೋಸ್​ ಬಾಣವೇ ಎರಗಲು ತಯಾರಾದಾಗ ಪ್ರಿವಿಲೆಜ್​ ಮೋಷನ್​ನಂತಹ ಹಳೆಯ ಮಿಗ್​-21 ಬಾಂಬರ್​ನ ಬಳಕೆಯೇಕೆ ಎಂದು ರಿಜಿಜು ಅಂದುಕೊಂಡಂತೆ ಕಾಣುತ್ತದೆ, ಆ ಮಸೂದೆಯನ್ನು ತರುವುದಿಲ್ಲ ಎಂದು ಹೇಳಿದರು. ದುಬೆಯವರು ತರುವ ಸಬ್‌ಸ್ಟಾಂಟಿವ್​ ಮೋಷನ್​ಗಾಗಿ ಕಾದರು.
ಬರೇ ಕಾದದ್ದೇ ಬಂತು. ಫೆಬ್ರವರಿ ಮಧ್ಯದಲ್ಲಿ ದುಬೆಯವರ ಗುಡುಗಿನೊಂದಿಗೆ ಅಂತ್ಯಗೊಂಡ ಬಜೆಟ್​ ಅಧಿವೇಶನದ ಮೊದಲ ಹಂತ ಮಾರ್ಚ್​ ಮತ್ತು ಏಪ್ರಿಲ್​ನಲ್ಲಿ ಎರಡನೇ ಹಂತವಾಗಿ ಜರುಗಿತು. ರಾಹುಲ್​ ವಿರುದ್ಧ ಯಾರೂ ಯಾವುದೇ ಮೋಷನ್​ ತರಲಿಲ್ಲ. ಪಬ್ಲಿಕ್​ ಮೆಮೊರಿ ಈಸ್​ ವೆರಿ ಶಾರ್ಟ್​ ಅಂತ ಸುಮ್ನೆ ಹೇಳುತ್ತಾರೆಯೇ? ಲೀಡರ್ಸ್​ ಮೆಮೊರಿ ಈಸ್​ ಆಲ್ಸೋ ಶಾರ್ಟ್​ ಅನಿಸುತ್ತದೆ. ಪುದುಚೇರಿ, ಕೇರಳ, ತಮಿಳುನಾಡು, ಅಸ್ಸಾಂ, ಪಶ್ಚಿಮ ಬಂಗಾಳ ಚುನಾವಣೆಗಳ ಭರಾಟೆಯಲ್ಲಿ ಅದನ್ನು ಎಲ್ಲರೂ ಮರೆತಂತೆ ಕಂಡಿತು. ಅದರೊಂದಿಗೆ "ಚಾರ್​ ಮಯೀ' ಬಂದು, "ಮಮತಾ ಗಯೀ' ಆಯಿತು; ಬಿಜೆಪಿ ಕೈಗೆ ಫೋರ್ಟ್​ ವಿಲಿಯಂ ಬಿದ್ದು, ಆ ಸದ್ದಿನಲ್ಲಿ "ಮಸ್ಕತ್​ ಮಸಲತ್ತು' ಸಹ ಮರೆಯಾಗಿ ಹೋದಂತೆ ಕಂಡಿತು. ಮೇ 18ರಂದು ಭಾರತದ ಮುಖ್ಯ ನ್ಯಾಯಾಧೀಶರು ನಿರುದ್ಯೋಗಿ ಅಥವಾ ಉದ್ಯೋಗಕ್ಕೆ ಲಾಯಕ್ಕಿಲ್ಲದವರನ್ನು ಪರಾವಲಂಬಿಗಳು ಎಂದು ಹೇಳುತ್ತ ಅವರನ್ನು ವರ್ಣಿಸಲು ಕಾಕ್ರೋಚಸ್​ ಎಂಬ ಪದ ಬಳಸಿದರು. ಮರುದಿನವೇ ಅವರ ಮಾತನ್ನೂ, ಬಿಜೆಪಿಯನ್ನೂ ಲೇವಡಿ ಮಾಡುವಂತೆ ಕಾಕ್ರೋಚ್​ ಜನತಾ ಪಾರ್ಟಿ ಎಂಬ ಗುಂಪು ದಿಢೀರನೆ ಅಸ್ತಿತ್ವಕ್ಕೆ ಬಂತು. ಅದಾದಾಗ ಮೇ 3ರಂದು ನಡೆದಿದ್ದ ನೀಟ್​-ಯುಜಿ ಪೇಪರ್​ ಲೀಕ್​ ಹಗರಣ ಕುರಿತ ವಾಗ್ವಾದಗಳೂ ದೇಶದಾದ್ಯಂತ ಕಾಳ್ಗಿಚ್ಚಿನಂತೆ ಹರಡತೊಡಗಿತ್ತು. ಆ ವಿಷಯವನ್ನೆತ್ತಿಕೊಂಡು ಸಿಜೆಪಿ ಜೂನ್​ 6ರಂದು ಜಂತರ್​ ಮಂತರ್​ನಲ್ಲಿ ಆಂದೋಲನ ಆರಂಭಿಸಿತು.
ಪ್ರಶ್ನೆಪತ್ರಿಕೆ ಬಯಲಾಗುವ ಪಿಡುಗು ದೇಶವನ್ನು ಬಹಳ ಕಾಲದಿಂದಲೂ ಕಾಡುತ್ತಿದೆ. 2004-14ರ ಯುಪಿಎ ಆಡಳಿತಾವಧಿಯ ಹತ್ತು ವರ್ಷಗಳಲ್ಲಿ ವಿವಿಧ ಇಂಜಿನಿಯರಿಂಗ್​, ಮೆಡಿಕಲ್​, ಸಿಬಿಎಸ್​ಇ ಪರೀಕ್ಷೆಗಳಲ್ಲದೇ ರೈಲ್ವೆ ರಿಕ್ರೂಟ್​ಮೆಂಟ್​ ಬೋರ್ಡ್​ ಪರೀಕ್ಷೆಗಳಂಥ ವೃತ್ತಿಪ್ರವೇಶ ಪರೀಕ್ಷೆಗಳ ಪ್ರಶ್ನೆಪತ್ರಿಕೆಗಳು ಮತ್ತೆಮತ್ತೆ ಬಯಲಾದವು. ಪರೀಕ್ಷೆ ಮುಂದೂಡಲ್ಪಟ್ಟವು ಅಥವಾ ಮರುಪರೀಕ್ಷೆ ನಡೆದವು. 2014ರ ನಂತರದ ಎನ್​ಡಿಎ ಆಡಳಿತಾವಧಿಯಲ್ಲೂ ಇದೇ ಹಗರಣಗಳು ಮುಂದುವರೆದವು. 2024ರಲ್ಲಿಯೂ ನೀಟ್​-ಯುಜಿ ಪ್ರಶ್ನೆಪತ್ರಿಕೆ ಬಯಲಾದಾಗ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಂಡು, ಅಂತಹ ಕೃತ್ಯಗಳನ್ನು ತಡೆಗಟ್ಟಲು ಮಸೂದೆಯೊಂದನ್ನು ಸಂಸತ್​ನಲ್ಲಿ ಮಂಡಿಸಿ ಅನುಮೋದನೆ ಪಡೆದು ಕಾನೂನು ಜಾರಿ ಮಾಡಿತು. ಆದಾಗ್ಯೂ ಈ ವರ್ಷವೂ ನೀಟ್​-ಯುಜಿ ಪ್ರಶ್ನೆಪತ್ರಿಕೆ ಬಯಲಾಯಿತು. ಅದರಲ್ಲಿ ಭಾಗಿಯಾಗಿದ್ದವರಲ್ಲಿ ಬಹುತೇಕರು ಗುಪ್ತವಾಗಿ ಪ್ರಶ್ನೆಪತ್ರಿಕೆ ರಚಿಸುವ ಜವಾಬ್ದಾರಿ ಹೊತ್ತವರೇ. ಬೇಲಿಯೇ ಎದ್ದು ಹೊಲ ಮೇಯುವಂಥ ಕೃತ್ಯಗಳನ್ನು ಮಾಡಿದ ಇವರೊಂದಿಗೆ ಕೋಚಿಂಗ್​ ಸೆಂಟರ್​ಗಳನ್ನು ನಡೆಸುತ್ತಿರುವವರೂ ಸೇರಿದ್ದು ಪತ್ತೆಯಾಗಿದೆ.
ಇದುವರೆಗೆ ಪ್ರಶ್ನೆಪತ್ರಿಕೆ ಬಯಲಿನಿಂದಾಗುವ ತೊಂದರೆಗಳ ನಿಭಾಯಿಸುವಿಕೆ ಪ್ರಮುಖವಾಗಿ ಶಿಕ್ಷಣ ಮಂತ್ರಾಲಯದ ಮತ್ತು ಪರೀಕ್ಷಾರ್ಥಿಗಳದ್ದಷ್ಟೇ ಆಗಿರುತ್ತಿತ್ತು. ಆದರೆ ಈ ಬಾರಿ ಅದು ಸಿಜೆಪಿ ಹುಟ್ಟಿದ ಕೂಡಲೇ ಕೈಗೆ ಸಿಕ್ಕಿದ ಅಪಾಯಕಾರಿ ಆಟಿಕೆಯಾಯಿತು. ಜೂನ್​ 6ರಂದು ಅದು ಆರಂಭಿಸಿದ ಆಂದೋಲನಕ್ಕೆ ಕಾವು ಬಂದು ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಲಾರಂಭಿಸಿದ್ದು ಜಮ್ಮುಕಾಶ್ಮೀರದ ರಾಜಕಾರಣದಲ್ಲಿ 1957ರಿಂದ ಸಕ್ರಿಯರಾಗಿದ್ದ ಹಾಗೂ 1975-82ರ ಅವಧಿಯಲ್ಲಿ ಶೇಖ್​ ಅಬ್ದುಲ್ಲಾರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದ ಸೋನಮ್​ ವಾಂಗ್ಯಾಲ್​ರ ಪುತ್ರ ಮತ್ತು ಈಗ ಲಡಾಖ್​ನ ಸಾಮಾಜಿಕ ಕಾರ್ಯಕರ್ತರಾಗಿರುವ ಸೋನಮ್​ ವಾಂಗ್​ಚುಕ್​ ಆಂದೋಲನದ ಭಾಗವಾಗಿ ಜೂನ್​ 28ರಂದು ಆಮರಣ ಉಪವಾಸ ಆರಂಭಿಸಿದಾಗ. ಈ ಅವಧಿಯಲ್ಲಿ ರಾಹುಲ್​ ವಿದೇಶಯಾತ್ರೆಯಲ್ಲಿದ್ದರು ಎನ್ನುವುದು ಗಮನಾರ್ಹ.
ಎರಡು ವಾರಗಳ ನಂತರ ರಾಹುಲ್​ ಸ್ವದೇಶಕ್ಕೆ ಹಿಂತಿರುಗುವ ಹೊತ್ತಿಗೆ ಜಂತರ್​ ಮಂತರ್​ನಲ್ಲಿ ಆಂದೋಲನಕಾರರ ಸಂಖ್ಯೆ ಸಾಕಷ್ಟು ಏರಿತ್ತು. ಸಿಜೆಪಿ ಕಾರ್ಯಕರ್ತರು, ರಾಜಕೀಯ ಪಕ್ಷಗಳ ಕಾರ್ಯಕರ್ತರು, ಇತರ ಆಸಕ್ತರ ಜತೆ ವಿದ್ಯಾರ್ಥಿಗಳೂ ಕಾಣಿಸಿಕೊಳ್ಳತೊಡಗಿದ್ದವು. ಬಹುಶಃ ನೀಟ್​-ಯುಜಿ ಮರುಪರೀಕ್ಷೆ ಜೂನ್​ 21ರಂದು ಯಾವುದೇ ಹಗರಣವಿಲ್ಲದೇ ಯಶಸ್ವಿಯಾಗಿ ಪೂರ್ಣಗೊಂಡದ್ದು ಮತ್ತು ಫಲಿತಾಂಶವೂ ಜುಲೈ 16ರಂದು ಘೋಷಣೆಯಾಗಿದ್ದು "ಆಸಕ್ತ' ವಿದ್ಯಾರ್ಥಿಗಳು ಆಂದೋಲನದಲ್ಲಿ ಭಾಗಿಯಾಗುವ ಮನಸ್ಸು ಮಾಡಲು ಕಾರಣವಾಗಿರಬಹುದು. ಆದರೆ ರಾಹುಲ್​ ಮಾತ್ರ ಅತ್ತ ಕಾಲುಹಾಕಲಿಲ್ಲ.
ಅವರು ಜು. 20ರಂದು ಸಂಸತ್​ನ ಮಾನ್ಸೂನ್​ ಅಧಿವೇಶನ ಆರಂಭವಾದಾಗ ನೀಟ್​ ಪ್ರಶ್ನೆಪತ್ರಿಕೆ ಕುರಿತಾಗಿ ಲೋಕಸಭೆಯಲ್ಲಿ ಚರ್ಚೆಯಾಗಬೇಕೆಂದು ಪಟ್ಟು ಹಿಡಿದರು. ಆ ಕುರಿತಾಗಿ ಪ್ರಧಾನಿ ನಿವಾಸದೆದುರು ಧರಣಿ ಕೂತು ಮಾಧ್ಯಮಗಳಲ್ಲಿ ಸುದ್ದಿಯಾದರು. ಅದೇ ನಡವಳಿಕೆಯನ್ನು ಅವರು ಜಂತರ್​ ಮಂತರ್​ನಲ್ಲಿದ್ದ ಆಂದೋಲನಕಾರರ ಜತೆಗೂಡಿ ಪ್ರದರ್ಶಿಸಲಿಲ್ಲ. ಇದನ್ನು ದೇಶದ ಗಮನಕ್ಕೆ ತಂದವರು ಸೋನಮ್​ ವಾಂಗ್​ಚುಕ್​ರ ಪತ್ನಿ ಗೀತಾಂಜಲಿ ಜಯಾಂಗ್​ಮೋ, ಇದೇ ಜುಲೈ 26ರಂದು. "ಪ್ರಧಾನಿ ನಿವಾಸದೆದುರು ರಾಹುಲ್​ ಧರಣಿ ಕೂತದ್ದು ಅನುಚಿತ, ಅವರಿಗೆ ಕಾಳಜಿ ಇದ್ದರೆ ಜಂತರ್​ ಮಂತರ್​ನಲ್ಲಿ ತೋರಿಸಬೇಕಾಗಿತ್ತು' ಎಂದು ಆಕೆ ಅಭಿಪ್ರಾಯಪಟ್ಟಿದ್ದಾರೆ.
ಸಂಸತ್​ ಅಧಿವೇಶನದ ಆರಂಭ ಮತ್ತು ಗೀತಾಂಜಲಿ ಅವರ ಮಾತುಗಳ ನಡುವಿನ ಅವಧಿಯಲ್ಲಿ ಸಂಸತ್​ನಲ್ಲಿ ಕುತೂಹಲಕರ ಬೆಳವಣಿಗೆಗಳು ನಡೆದಿವೆ. ನೀಟ್​ ಪೇಪರ್​ ಲೀಕ್​ ಕುರಿತಾಗಿ ಚರ್ಚೆಯಾಗಬೇಕು ಎಂದು ಹೇಳಿ ರಾಹುಲ್​ ಮತ್ತವರ ಸಹಯೋಗಿಗಳು ಲೋಕಸಭೆ ಅಧಿವೇಶನಕ್ಕೆ ಅಡ್ಡಿಪಡಿಸಿದರು. ಚರ್ಚೆಗೆ ತಯಾರಿದ್ದೇವೆ ಎಂದು ಸರ್ಕಾರ ಹೇಳಿದಾಗ ಶಿಕ್ಷಣಮಂತ್ರಿ ಧರ್ಮೇಂದ್ರ ಪ್ರಧಾನ್​ ರಾಜೀನಾಮೆ ಕೊಡುವವರೆಗೆ ಚರ್ಚೆ ಸಾಧ್ಯವಿಲ್ಲ ಎಂದು ರಾಹುಲ್​ ಗೋಲ್​ಪೋಸ್ಟ್​ ಬದಲಿಸಿದರು! ಪ್ರಧಾನ್​ ಜುಲೈ 25ರಂದು ರಾಜೀನಾಮೆ ಕೊಟ್ಟೇಬಿಟ್ಟರು. ಆದರೆ ಜುಲೈ 27ರಂದು, ವಾರದ ಹಿಂದೆ ಆಂದೋಲನಕಾರರ ಮೇಲೆ ಪೊಲೀಸರು ಕೈಗೊಂಡ ಅತಿರೇಕದ ಕ್ರಮಗಳ ಕುರಿತಾಗಿ ಗೃಹಮಂತ್ರಿ ಅಮಿತ್​ ಷಾ ಕ್ಷಮೆ ಕೇಳಬೇಕು ಎಂಬ ಹೊಸ ಪಟ್ಟನ್ನು ಹಿಡಿಸಿ, ಅಲ್ಲಿಯವರೆಗೆ ಲೋಕಸಭೆಯಲ್ಲಿ ಯಾವುದೇ ಚರ್ಚೆಗೆ ಆಸ್ಪದ ನೀಡುವುದಿಲ್ಲ ಎಂಬ ಹೊಸ ಗೋಲ್​ಪೋಸ್ಟ್​ ನಿರ್ಮಿಸಿಕೊಂಡು ನಿಂತರು ರಾಹುಲ್​ ಮತ್ತವರ ಸಹಯೋಗಿಗಳು. ಪ್ರಶ್ನೆಪತ್ರಿಕೆ ಬಯಲು ಮಾಡುವವರಿಗೆ ಭಾರಿ ದಂಡ-ಜೈಲು ಶಿಕ್ಷೆ, ಆಸ್ತಿ ಮುಟ್ಟುಗೋಲು ಜತೆಗೆ ಪರೀಕ್ಷಾ ವ್ಯವಸ್ಥೆ ಶುದ್ಧೀಕರಿಸುವ ಹಲವು ಕಾರ್ಯಯೋಜನೆಗಳನ್ನು ಒಳಗೊಂಡ ಮಸೂದೆಯನ್ನು ಸರ್ಕಾರ ಮಂಡಿಸಿ, ರಾಹುಲ್​ ಮತ್ತವರ ಸಹಯೋಗಿಗಳ ಭಾರಿ ಗದ್ದಲದ ಮಧ್ಯೆ ಅದು ಅಂಗೀಕಾರವಾಗಿದೆ.
ಹ್ಞಾ, ಬಜೆಟ್​ ಅಧಿವೇಶನದ ಮಾತು ಮತ್ತೆ ಬಂತಲ್ಲವೇ! ಅದರೊಂದಿಗೆ ಪ್ರಿವಿಲೆಜ್​ ಮೋಷನ್​ ಮತ್ತು ಸಬ್‌ಸ್ಟಾಂಟಿವ್​ ಮೋಷನ್​ಗಳೂ ನೆನಪಾಗುತ್ತಿವೆಯಲ್ಲ? ಆದರೆ ಅವು ರಿಜಿಜು ಅಥವಾ ದುಬೆ ಅವರಿಗೆ ನೆನಪಾದ ಸೂಚನೆ ಸಾರ್ವಜನಿಕವಾಗಿ ಕಾಣಬರುತ್ತಿಲ್ಲ. ಅಂದರೆ ರಾಹುಲ್​ ವರ್ತನೆ ಬಿಜೆಪಿಗೆ ಪರೋಕ್ಷವಾಗಿ ಅನುಕೂಲವನ್ನೇ ಮಾಡಿಕೊಡುತ್ತಿದೆಯೇ? ಈ ಕುರಿತಾಗಿ ಏನಾದರೂ ಹೊಂದಾಣಿಕೆ; "ನಾನು ಹೊಡೆದ ಹಾಗೆ ಮಾಡುತ್ತೇನೆ, ನೀನು ಅತ್ತ ಹಾಗೆ ಮಾಡು' ಅಂತೇನಾದರೂ!
ಆಂದೋಲನಕಾರರ ಮೇಲಿನ ಎಫ್​ಐಆರ್​ ಹಿಂತೆಗೆದುಕೊಳ್ಳಲು ಸರ್ಕಾರಕ್ಕೆ ಸಿಜೆಪಿ ಕೊಟ್ಟಿದ್ದ ಗಡುವೂ ಮುಗಿದಿದೆ. 18ರೊಳಗಿನ ಮತ್ತು ಅಪರಾಧವೆಸಗದವರ ಮೇಲೆ ಕಾನೂನುಕ್ರಮ ಕೈಗೊಳ್ಳಬಾರದೆಂಬ ಸುಪ್ರೀಂ ಕೋರ್ಟ್​ನ ಮಧ್ಯಂತರ ಆದೇಶವೂ ಇದೇ ಹೊತ್ತಿಗೆ ಬಂದಿದೆ. ಹಾಗೆಯೇ ಸುರಾಪಡೆಗಳ ಸುರೆಯ ಕುರಿತಾಗಿಯೂ ನ್ಯಾಯಾಲಯ ಗಮನ ನೀಡಿದೆ. ಅಂದರೆ ಜುಲೈ 20ರಂದು ಪೊಲೀಸರು ಮತ್ತು ಪತ್ರಕರ್ತರ ಮೇಲೆ ಹಲ್ಲೆ ನಡೆಸಿದ, ಅಪರಾಧ ಹಿನ್ನೆಲೆ ಹೊಂದಿರುವ 2873 ಜನರಿಗೆ ಶಿಕ್ಷೆಯಾಗಿ ಅಷ್ಟರಮಟ್ಟಿಗೆ ರಾಜಧಾನಿಯಲ್ಲಿ ಮುಂದಿನ ದಿನಗಳ ಆಂದೋಲನಗಳು ಶಾಂತಿಯುತವಾಗುತ್ತವೆ ಎಂದು ಆಶಿಸಬಹುದೇ? ಅದಕ್ಕೆ ಸಿಜೆಪಿ ಅಡ್ಡಿಪಡಿಸುವುದಿಲ್ಲ ಎಂದು ನಿರೀಕ್ಷಿಸಬಹುದು. ಯಾಕೆಂದರೆ ಸಮಾಜವಿರೋಧಿ ವ್ಯಕ್ತಿಗಳು ನಮ್ಮ ಶಾಂತಿಯುತ ಆಂದೋಲನದೊಳಗೆ ತೂರಿಕೊಂಡಿದ್ದಾರೆ ಎಂದು ಸಿಜೆಪಿ ನಾಯಕ ಸೌರವ್​ ದಾಸ್​ ಹೇಳಿಯೇ ಇದ್ದಾರಲ್ಲ?
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net