

ಹಲವಾರು ಧನಾತ್ಮಕ ಕಾಕತಾಳೀಯಗಳು ಏಕಕಾಲದಲ್ಲಿ ಘಟಿಸುವುದು ಬಹಳ ಅಪರೂಪ. ಅಂಥದೊಂದು ಅಸಾಧಾರಣ ಪ್ರಕರಣ 2026ರ ಸೆ. 30ರಂದು ಪಶ್ಚಿಮ ಏಷ್ಯಾದ ಆಗಸದಲ್ಲಿ ಘಟಿಸಿಹೋಯಿತು. ಅಂದು 27 ಮಕ್ಕಳನ್ನೊಳಗೊಂಡ 174 ಪ್ರಯಾಣಿಕರು ಮತ್ತು 8 ಚಾಲಕ ಹಾಗೂ ಪರಿಚಾರಕ ಸಿಬ್ಬಂದಿಯಿದ್ದ ಫ್ಲೈದುಬೈ ಎಫ್ರೆೆಡ್-1073 ವಿಮಾನ ಪರ್ಶಿಯನ್ ಕೊಲ್ಲಿಯ ಪಶ್ಚಿಮ ತೀರದ ದುಬೈನಿಂದ ಮೆಡಿಟರೇನಿಯನ್ ಸಮುದ್ರ ಪೂರ್ವ ತೀರದ ತೆಲ್ ಅವಿವ್ಗೆ ಹಾರತೊಡಗಿತು. ನಿಯಮದಂತೆ ಒಳಗಿನಿಂದ ಲಾಕ್ ಆಗಿದ್ದ ಕಾಕ್ಪಿಟ್ನಲ್ಲಿದ್ದವರು ಸಂಕಟಕಾಲದಲ್ಲಿ ಹನುಮಾನ್ ಚಾಲೀಸಾ ಪಠಿಸಬಲ್ಲ ಪೈಲಟ್ ಕ್ಯಾ. ಸ್ಮಿತ್ ಮಚಾರ್ ಮತ್ತು ಧಾರ್ವಿುಕ ಮೂಲಭೂತವಾದಿ ಭಯೋತ್ಪಾದಕ ಕೋ-ಪೈಲಟ್ ಹಮಾಮ್ ಅಲ್-ಹಮಾಮಿ. ಮೊದಲೇ ಮಾಡಿಕೊಂಡಿದ್ದ ಘಾತಕ ಯೋಜನೆಯಂತೆ ಅಲ್-ಹಮಾಮಿ ಪ್ರಾರ್ಥನೆ ಮಾಡುವ ನೆಪವೊಡ್ಡಿ ಕ್ಯಾ. ಮಚಾರ್ರ ಹಿಂದೆ ಸರಿದರು.
ಅವರ ಧಾರ್ವಿುಕಾಚರಣೆಯತ್ತ ಕಣ್ಣು ಹಾಯಿಸುವುದು ಸೌಜನ್ಯವಲ್ಲವೆಂದು ತಿಳಿದ ಮಚಾರ್ ಮುಂದಕ್ಕಷ್ಟೇ ದೃಷ್ಟಿಯಿಟ್ಟರು. ಅದೇ ತಪ್ಪಾಯಿತು. ಅವರಿಗರಿವಿಲ್ಲದಂತೆ ತನ್ನ ಘಾತಕ ಯೋಜನೆಗೆ ತಯಾರಾದ ಅಲ್-ಹಮಾಮಿ ತುರ್ತಸಂದರ್ಭಕ್ಕಾಗಿ ಕಾಕ್ಪಿಟ್ನಲ್ಲಿರಿಸಲಾಗುವ ಹರಿತ ಕ್ಯಾ್ಯಷ್ಏಕ್ಸ್ ಎತ್ತಿಕೊಂಡು ಸಹೋದ್ಯೋಗಿಯ ತಲೆಯ ಹಿಂಭಾಗ, ಮುಂಗೈ ಮತ್ತು ಕೆಳಹೊಟ್ಟೆಯ ಮೇಲೆ ಪ್ರಹಾರ ಮಾಡಿದ. ನಂತರದ ತನಿಖೆಯಲ್ಲಿ ಅವನು ಯುಎಇ ಪೊಲೀಸರಿಗೆ ಹೇಳಿದ ಪ್ರಕಾರ ಮಚಾರ್ರನ್ನು ಕೊಂದು ವಿಮಾನವನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ತೆಲ್ಅವಿವ್ನ ಬೆನ್ ಗುರಿಯೆನ್ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಯೆಹೂದಿ ರಾಷ್ಟ್ರದ ಎಲ್ ಅಲ್ ವಿಮಾನಸಂಸ್ಥೆಯ ವಿಮಾನವೊಂದಕ್ಕೆ ಅಥವಾ ಅಲ್ಲಿನ ಕಟ್ಟಡವೊಂದಕ್ಕೆ ಅಥವಾ ಗಗನಚುಂಬಿಯೊಂದಕ್ಕೆ, ಅದಾಗದಿದ್ದರೆ ಜೋರ್ಡಾನ್ನಲ್ಲಿರುವ ಅಮೆರಿಕಾದ ಸೇನಾನೆಲೆಯ ಮೇಲೆ, ಅದೂ ಆಗದಿದ್ದರೆ ಸೌದಿ ಅರೇಬಿಯಾದಲ್ಲೇ ನೆಲಕ್ಕೆ ಅಪ್ಪಳಿಸಿಬಿಡುವುದು ಅಲ್-ಹಮಾಮಿಯ ಯೋಜನೆಯಾಗಿತ್ತು.
ಮಚಾರ್ರನ್ನು ಗಾಯಗೊಳಿಸುವವರೆಗೆ ಎಲ್ಲವೂ ಆ ಭಯೋತ್ಪಾದಕನ ಲೆಕ್ಕಾಚಾರದಂತೆ ನಡೆಯಿತು. ಅಲ್ಲಿಂದಾಚೆಗಿನ ಏಳು ನಿಮಿಷಗಳಲ್ಲಿ ಧನಾತ್ಮಕ ಕಾಕತಾಳೀಯಗಳು ಸರಸರನೆ ಘಟಿಸಿಹೋಯಿತು. ಇಸ್ರೇಲ್ ಗಂಡುಹೆಣ್ಣೆನ್ನದೇ 18 ವರ್ಷದ ತನ್ನ ನಾಗರಿಕರಿಗೆ ಕಡ್ಡಾಯ ಮಿಲಿಟರಿ ತರಬೇತಿ ನೀಡುತ್ತದೆ. ವೈರಿಗಳಿಂದ ಅಪಾಯಕ್ಕೊಳಗಾಗುವ ಸನ್ನಿವೇಶಗಳನ್ನು ಸದಾ ಎದುರಿಸುತ್ತಲೇ ಇರುವ ಆ ಯೆಹೂದಿ ರಾಷ್ಟ್ರ ಸ್ವರಕ್ಷಣೆಗಾಗಿ, ಸ್ವದೇಶರಕ್ಷಣೆಗಾಗಿ ತನ್ನ ಜನರನ್ನು ಸದಾ ಸಿದ್ಧವಾಗಿಯೇ ಇಡುತ್ತದೆ. ಯುವಕ-ಯುವತಿಯರು ಮಿಲಿಟರಿ ತರಬೇತಿ ಪಡೆಯುವುದನ್ನು ನೋಡುವ ಎಳೆಯರಿಗೂ ತುರ್ತು ಸಂದರ್ಭಗಳಲ್ಲಿ ಎಚ್ಚರಿಕೆ ವಹಿಸುವುದನ್ನು ಬಹುಶಃ ಅರಿತುಕೊಂಡಿರುತ್ತಾರೆ. ಅದು ಅಂದು ಆ ಬೋಯಿಂಗ್ 737 ವಿಮಾನದಲ್ಲಿ ಬಹುಮುಖ್ಯ ಪಾತ್ರ ವಹಿಸಿತು.
ವಾಷ್ರೂಂಗೆ ಹೋಗಿದ್ದ 6 ವರ್ಷದ ಬಾಲಕಿ ನೀನಾ ಕಾಕ್ಪಿಟ್ನೊಳಗೆ ಕೂಗಾಟವನ್ನು ಕೇಳಿ ಅದು ಅಸಹಜ ಎಂದು ಊಹಿಸಿ ತಾಯಿ ತಾಲಿ ಮೆನ್ಸ್ಗೆ ಹೇಳುತ್ತಾಳೆ. ತಾಯಿ ಕೂಗಿ ಇತರ ಪ್ರಯಾಣಿಕರ ಗಮನವನ್ನು ಕಾಕ್ಪಿಟ್ನತ್ತ ಸೆಳೆಯುತ್ತಾರೆ. 171ರಲ್ಲಿ 156 ಇದ್ದ ಇಸ್ರೇಲಿ ಪ್ರಯಾಣಿಕರಲ್ಲಿ ಹಲವರು ಕಾಕ್ಪಿಟ್ನತ್ತ ಓಡುತ್ತಾರೆ. ಅವರಲ್ಲೊಬ್ಬರು 16ನೇ ಸಾಲಿನಲ್ಲಿದ್ದ ಕೊಳಾಯಿ ಕೆಲಸಗಾರ ಯಾನಿವ್ ಹಯೂನ್. ಮತ್ತಿಬ್ಬರು ಆ ವಿಮಾನದಲ್ಲೇ ಪ್ರಯಾಣಿಸುತ್ತಿದ್ದ ಪೈಲಟ್ಗಳು.
ಅವರೆಲ್ಲರೂ ಕಾಕ್ಪಿಟ್ ಬಾಗಿಲು ಸಮೀಪಿಸುವ ಹೊತ್ತಿಗೆ ಕ್ಯಾ. ಮಚಾರ್ ತಮ್ಮ ಗಾಯಗಳೂ ಮತ್ತು ತೀವ್ರ ರಕ್ತಸ್ರಾವದ ನಡುವೆಯೂ ಹೇಗೋ ಕಾಕ್ಪಿಟ್ ಬಾಗಿಲನ್ನು ಅನ್ಲಾಕ್ ಮಾಡಿದ್ದರು. ಅಲ್-ಹಮಾಮಿ ವಿಮಾನವನ್ನು ನೆಲಕ್ಕೆ ಅಪ್ಪಳಿಸುವ ಪ್ರಯತ್ನದಲ್ಲಿದ್ದ. ಅದರಿಂದಾಗಿ ವಿಮಾನ 1 ನಿಮಿಷಕ್ಕೂ ಕಡಿಮೆ ಅವಧಿಯಲ್ಲಿ 17,000 ಅಡಿ ಕೆಳಗಿಳಿದಿತ್ತು. ಇನ್ನು 30 ಸೆಂಕೆಡ್ಗಳಲ್ಲಿ ಅಫಘಾತಕ್ಕೀಡಾಗಬಹುದಿತ್ತು. ಪ್ಲಂಬರ್ ಯಾನಿವ್ ವಿಮಾನದ ತಾಂತ್ರಿಕ ವಿಷಯಗಳನ್ನು ಮೇ ಡೇಯಂತಹ ವಿಮಾನಾಪಘಾತ ತನಿಖೆಗಳ ಡಾಕ್ಯುಮೆಂಟರಿಗಳನ್ನು ನೋಡುವುದರ ಮೂಲಕ ಅರಿತುಕೊಂಡಿದ್ದರು. ಆ ಅರಿವನ್ನು ಸಮಯೋಚಿತವಾಗಿ ಬಳಸಿದ ಅವರು ಕಂಟ್ರೋಲ್ ಕಾಲಂ ಹಿಂದಕ್ಕೆಳೆದು ನೆಲದ ಕಡೆಗಿದ್ದ ವಿಮಾನದ ಮೂತಿ ಮೇಲೆತ್ತಿ ಮುಂದಕ್ಕೆ ನೇರವಾಗಿಸಿದರು.
ಅದು ಆ ಕೊಳಾಯಿ ಕೆಲಸಗಾರರ ಬದುಕಿನಲ್ಲಿ ವಿಮಾನ ನಿಯಂತ್ರಣ ಕೆಲಸಕ್ಕೆ ಕೈಹಾಕಿದ ಮೊಟ್ಟಮೊದಲ ಅನುಭವ! ಮುಂದಿನದನ್ನು ಉಳಿದವರು ನೋಡಿಕೊಂಡರು. ಎಲ್ಲರೂ ಸೇರಿ ಅಲ್-ಹಮಾಮಿಯನ್ನು ಹೊರಗೆಳೆದು ಕೆಡವಿ ಕಟ್ಟಿಹಾಕಿದರು. ಆತ ನನ್ನನ್ನು ಕೊಲ್ಲಿ ಎಂದು ಕೂಗುತ್ತಲೇ ಇದ್ದ. ಇತರರನ್ನು ಸಾಯಿಸಲಾಗಲಿಲ್ಲ, ತಾನೊಬ್ಬನಾದರೂ ಸತ್ತುಹೋಗೋಣವೆಂದು ಆ ಸೈತಾನನ ಕೊನೆಯ ಆಸೆಯಾಗಿದ್ದಿರಬಹುದು. ಆದರೆ ಯಾರೂ ಹಾಗೆ ಮಾಡಲಿಲ್ಲ. ಅವನನ್ನು ಉಳಿಸಿದರು ಮತ್ತು ಪ್ರಯಾಣಿಕರಾಗಿದ್ದ ಇಬ್ಬರು ಪೈಲಟ್ಗಳು ವಿಮಾನವನ್ನು ನಿಯಂತ್ರಣಕ್ಕೆ ತೆಗೆದುಕೊಂಡು ಹತ್ತಿರದಲ್ಲಿದ್ದ ಸೌದಿ ಅರೇಬಿಯಾದ ತಾಬೂಕ್ನಲ್ಲಿ ಸುರಕ್ಷಿತವಾಗಿ ಇಳಿಸಿ ಅದು ಬೃಹತ್ ಸಾಮೂಹಿಕ ತಾಬೂತ್ (ಶವಪೆಟ್ಟಿಗೆ) ಆಗುವುದನ್ನು ತಪ್ಪಿಸಿದರು!
ತೀವ್ರವಾಗಿ ಗಾಯಗೊಂಡಿದ್ದರೂ ಕಾಕ್ಪಿಟ್ ಬಾಗಿಲು ಅನ್ಲಾಕ್ ಮಾಡಿದ ಕ್ಯಾ. ಮಚಾರ್, ಕೂಗಾಟ ಕೇಳಿ ತಾಯಿಯನ್ನು ಎಚ್ಚರಿಸಿದ ನೀಯಾ, ತಾನೂ ಕೂಗಿ ಇತರರನ್ನು ಎಚ್ಚರಿಸಿದ ತಾಲಿ ಮೆನ್ಸ್, ಮೇ ಡೇ ಡಾಕ್ಯುಮೆಂಟರಿ ನೋಡಿಯಷ್ಟೇ ಕಂಟ್ರೋಲ್ ಕಾಲಂ ಬಳಕೆಯನ್ನರಿತಿದ್ದ ಯಾನಿವ್, ರಡ್ ಮುರಿದಿದ್ದರೂ ವಿಮಾನವನ್ನು ಸುರಕ್ಷಿತವಾಗಿ ಕೆಳಗಿಳಿಸಿದ ಇಬ್ಬರು ಪ್ರಯಾಣಿಕ-ಪೈಲಟ್ಗಳು ಇಷ್ಟೂ ಜನರಲ್ಲಿ ಯಾರೊಬ್ಬರಾದರೂ ಅಂದು ಆ ವಿಮಾನದಲ್ಲಿರದಿದ್ದರೆ? ಅಥವಾ ಸಮಯಸ್ಪೂರ್ತಿಯಿಂದ ವರ್ತಿಸಿರದಿದ್ದರೆ! ಎಷ್ಟೊಂದು ಧನಾತ್ಮಕ ಕಾಕತಾಳೀಯಗಳು ಹೇಗೆ ಏಕಕಾಲದಲ್ಲಿ ಘಟಿಸಿಬಿಟ್ಟಿವೆ!
ಒಂದುವೇಳೆ ಅವರ್ಯಾರ ಪ್ರಯತ್ನವೂ ಯಶಸ್ವಿಯಾಗದೇ, 9/11ನಂತಹ ಭೀಕರ ಭಯೋತ್ಪಾದಕ ಕೃತ್ಯವನ್ನೆಸಗುವುದರಲ್ಲಿ ಅಲ್-ಹಮಾಮಿ ಯಶಸ್ವಿಯಾಗಿಯೇ ಬಿಟ್ಟಿದ್ದರೆ ಆಗ ಅಪವಾದ ಭಾರತೀಯರಾದ ಕ್ಯಾ. ಮಚಾರ್ರ ಮೇಲೆ ಬರುತ್ತಿತ್ತು. ಹಿಂದೂ ಭಯೋತ್ಪಾದನೆ ಎಂದು ಕೂಗುವವರಿಗೆ ಹಬ್ಬದ ಸಂಭ್ರಮವಾಗುತ್ತಿತ್ತು ಎಂದು ಕೆಲವರು ಹೇಳುತ್ತಿದ್ದಾರೆ. ಹಾಗೇನೂ ಆಗುತ್ತಿರಲಿಲ್ಲ. ಕಳೆದ ವರ್ಷ ಅಹ್ಮದಾಬಾದ್ನಲ್ಲಾದ ಏರ್ ಇಂಡಿಯಾ ವಿಮಾನ ದುರಂತದ ಮೊದಲ ದಿನಗಳಲ್ಲಿ ಬಿಬಿಸಿ, ವಾಷಿಂಗ್ಟನ್ ಪೋಸ್ಟ್, ನ್ಯೂಯಾರ್ಕ್ ಟೈಮ್ಸ್ನಂತಹ ಎಡಪಂಥೀಯ ನಿಯಂತ್ರಣದ ಪಶ್ಚಿಮದ ಮಾಧ್ಯಮಗಳು ಭಾರತೀಯರ ಬಗ್ಗೆ ಮಾಡಿದ ಅಪಪ್ರಚಾರವನ್ನು ನೆನಪಿಸಿಕೊಂಡರೆ ಈಗಲೂ ಹಾಗೇ ಆಗಬಹುದಿತ್ತು ಅನಿಸಬಹುದು.
ಆದರೆ ಅದೆಲ್ಲಾ ಎರಡು ದಿನಗಳ ಆಟವಾಗುತ್ತಿತ್ತಷ್ಟೇ. ಕಳೆದವಾರ ಉಲ್ಲೇಖಿಸಿರುವ 2015ರ ಜರ್ಮನ್ ವಿಂಗ್ಸ್ ವಿಮಾನ ದುರಂತದ ಬಗ್ಗೆ ನಡೆದ ತನಿಖೆ ಸಾರಿದ್ದು ದುರಂತಕ್ಕೆ ಕೋ-ಪೈಲಟ್ ಮಾತ್ರ ಕಾರಣ, ಆತ ಆತ್ಮಹತ್ಯಾ ಮನೋಭಾವದಿಂದ ಬಳಲುತ್ತಿದ್ದ ಎಂದು. ಈಗಲೂ ಹಾಗೇ ಆಗುತ್ತಿತ್ತು. ಅಲ್-ಹಮಾಮಿ ಭಯೋತ್ಪಾದಕನಾಗಿದ್ದ ಎನ್ನುವುದು ತನಿಖೆಗಳಿಂದ ಪತ್ತೆಯಾಗುತ್ತಿತ್ತು; ಯೆಮೆನ್ ವಿಮಾನಸಂಸ್ಥೆ ತನ್ನಲ್ಲಿರುವ ವಿವರಗಳನ್ನೆಲ್ಲಾ ತನಿಖೆಯಲ್ಲಿ ಬಯಲುಮಾಡಿಬಿಡುತ್ತಿತ್ತು. ಕ್ಯಾ. ಮಚಾರ್ ಮತ್ತು ಭಾರತೀಯರಿಗೆ ಇರುವ ಬಲವಾದ ಅನುಕೂಲವೆಂದರೆ ಈ ತನಿಖೆಯಲ್ಲಿ ಭಾಗಿಯಾಗಿರುವುದು ಇಡೀ ಪಶ್ಚಿಮ ಏಷ್ಯಾದಲ್ಲಿ ಭಾರತದ ಘನಿಷ್ಟ ಮಿತ್ರದೇಶಗಳಾದ ಯುಎಇ, ಇಸ್ರೆಲ್ ಮತ್ತು ಯೆಮೆನ್. ಅಮೆರಿಕಾ, ಬ್ರಿಟನ್ ಅಥವಾ ಕೆನಡಾ ಅಲ್ಲ.
ಈ ಸ್ಪಷ್ಟನೆಯೊಂದಿಗೆ ನಿಜವಾದ ವಿಷಯಗಳತ್ತ ಹೊರಳೋಣ. ಅಲ್-ಖಯೀದಾ ನಾಯಕ ಮೆನ್ ಅಲ್ ಜವಾಹಿರಿಯ ಅಭಿಮಾನಿಯಾಗಿರುವುದರೊಂದಿಗೆ ಇತರ ಭಯೋತ್ಪಾದಕ ಪ್ರವೃತ್ತಿಗಳನ್ನು ಅಲ್-ಹಮಾಮಿ ಹೊಂದಿದ್ದುದು ಪತ್ತೆಯಾದ ಮೇಲೆ ಒಮಾನ್ ಏರ್ಲೈನ್ಸ್ ಆತನಿಗೆ ಪೈಲಟ್ ಜವಾಬ್ದಾರಿ ನೀಡುವುದನ್ನು ನಿಲ್ಲಿಸಿದರೂ ಕಛೇರಿ ಕೆಲಸಕ್ಕೆ ಉಳಿಸಿಕೊಂಡದ್ದೇಕೆ? ಆಮೇಲೆ ರಾಯಲ್ ಮೊರಾಕ್ಕೋ ಏರ್ಲೈನ್ಸ್ ಮತ್ತು ಫ್ಲೈದುಬೈ ಅವನನ್ನು ಪೈಲಟ್ ಆಗಿ ನೇಮಿಸಿಕೊಳ್ಳುವಾಗ ಒಮಾನ್ ಏರ್ಲೈನ್ಸ್ನಿಂದ ಆತನ ಪೂರ್ವಾಪರಗಳ ಬಗ್ಗೆ ವಿವರ ಕೇಳಲಿಲ್ಲವೇ? ತನ್ನ ಜತೆ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲದ ದೇಶಗಳ ನಾಗರಿಕರು ಯಾವುದೇ ವಿಮಾನಸಂಸ್ಥೆಯ ಚಾಲಕ ಹಾಗೂ ಪರಿಚಾರಕ ಸಿಬ್ಬಂದಿಯಾಗಿ ತನ್ನ ದೇಶಕ್ಕೆ ಪ್ರವೇಶಿಸಕೂಡದು ಎಂದು ತಾನೇ ವಿಧಿಸಿಕೊಂಡಿರುವ ಇಸ್ರೇಲ್ ಒಮಾನಿ ನಾಗರಿಕನಾದ ಅಲ್-ಹಮಾಮಿ ತನ್ನ ದೇಶಕ್ಕೆ ಮತ್ತೆಮತ್ತೆ ಹಾರಿಬರಲು ಬಿಟ್ಟದ್ದೇಕೆ? ಅದರ ಜಗದ್ವಿಖ್ಯಾತ ಬೇಹುಗಾರಿಕಾ ಸಂಸ್ಥೆಗಳು ಏನು ಮಾಡುತ್ತಿದ್ದವು? ಇದರರ್ಥ ಅಲ್-ಹಮಾಮಿಯ ವಿಷಯದಲ್ಲಿ ಒಂದಕ್ಕಿಂತ ಹೆಚ್ಚು ತಪ್ಪುಗಳು ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಘಟಿಸಿಹೋಗಿವೆ! ಈ ಕೊನೆಯ ವಿಷಯ ವಿಶೇಷ ವಿಶ್ಲೇಷಣೆಗೆ ಅರ್ಹ.
ಭಾರತ, ಇಸ್ರೇಲ್ ಮತ್ತು ಯುಎಇ ನಂಬಿಗಸ್ಥ ಮಿತ್ರದೇಶಗಳು. ಈ ಮಿತ್ರತ್ವ ಇಸ್ರೇಲ್ ಮತ್ತು ಭಾರತಗಳ ನಡುವೆ ಬಹಳಕಾಲದಿಂದಲೂ ಸೇನಾಸಹಕಾರವಾಗಿ ವಿಸ್ತರಿಸಿದೆ ಮತ್ತು ಇತ್ತೀಚೆಗೆ ಈ ಬಗೆಯ ಸಹಕಾರಕ್ಕೆ ಯುಎಇ ಸಹ ಸೇರಿಕೊಂಡಿದೆ. ಮಾರ್ಚ್ನಲ್ಲಿ ಇಸ್ರೇಲಿ ಪ್ರಧಾನಿ ಬೆಂಜಮಿನ್ ನೇತನ್ಯಾಹು ಯುಎಇಗೆ ಖುದ್ದಾಗಿ ಭೇಟಿನೀಡಿ ಆ ದೇಶ ಇರಾನಿ ಕ್ಷಿಪಣಿ ದಾಳಿಗಳನ್ನು ಸಮರ್ಥವಾಗಿ ಎದುರಿಸಲು ಅಗತ್ಯವಾದ ವಾಯುಸುರಕ್ಷಾವ್ಯವಸ್ಥೆಯನ್ನು ಒದಗಿಸಿದರು. ನಂತರ ಸೌದಿ ಅರೇಬಿಯಾ ಮತ್ತು ತುರ್ಕಿಯೇ ಜತೆಗೂಡಿ ಪಾಕಿಸ್ತಾನದೊಂದಿಗೆ ಮಕ್ಕಾ ಡಿಫೆನ್ಸ್ ಅಲಯನ್ಸ್ ಮಾಡಿಕೊಂಡಾಗ ಭಾರತ ಮತ್ತು ಯುಎಇ ರಕ್ಷಣಾ ಸಹಕಾರವನ್ನು ಉನ್ನತ ಮಟ್ಟಕ್ಕೇರಿಸಿಕೊಂಡವು. ಎರಡೂ ದೇಶಗಳ ನಡುವೆ ರಕ್ಷಣಾ ಒಪ್ಪಂದದ ಮಾತುಗಳೂ ಕೇಳಿಬರುತ್ತಿವೆ. ಅಂದರೆ ಮಕ್ಕಾ ಕೂಟಕ್ಕೆ ಎದುರಾಗಿ ಇಸ್ರೇಲ್, ಯುಎಇ ಮತ್ತು ಭಾರತಗಳ ಕೂಟ ರಚನೆಯಾಗುವ ಹಾದಿಯಲ್ಲಿದೆ ಅಥವಾ ಈಗಾಗಲೇ ಆಗಿದೆ.
ಇದರಿಂದ ಹೆದರಿರುವ ಮುಖ್ಯ ದೇಶಗಳು ಪಾಕಿಸ್ತಾನ ಮತ್ತು ತುರ್ಕಿಯೇ ಮತ್ತವುಗಳಿಗೆ ಸೌದಿ ಅರೇಬಿಯಾದ ಸಹಾನುಭೂತಿ ಇದ್ದೇ ಇದೆ. ಅಲ್-ಹಮಾಮಿ ಪಾಕಿಸ್ತಾನದ ಲಷ್ಕರ್-ಇ-ತೋಯ್ಬಾ ದಿಂದ ತರಬೇತಿ ಪಡೆದ ಸುದ್ದಿಯಿದೆ. ಹಾಗಿದ್ದರೆ ಅವನ ಜತೆ ಎಲ್ಇಟಿ ಮತ್ತು ಪಾಕಿಸ್ತಾನದ ಐಎಸ್ಐಗಳೂ ಸಂಪರ್ಕ ಹೊಂದಿಯೇ ಇರುತ್ತವೆ. ಇಸ್ರೇಲ್ನ ಮೊಸಾದ್ ಮತ್ತು ಶಿನ್ಬೆತ್ ಇತ್ತೀಚೆಗೆ ಅಜಾಗರೂಕವಾಗುತ್ತಿರುವುದು ನಮಗೇ ಗೊತ್ತಾಗುತ್ತಿದೆ, ಪಾಕಿಸ್ತಾನೀಯರಿಗೆ ಗೊತ್ತಿಲ್ಲವೇ? ಯುಎಇಯಲ್ಲಿರಬಹುದಾದ ತನ್ನ ಹಳೆಯ ಬೇಹುಗಾರಿಕಾ ಮೂಲಗಳ ನೆರವಿನಿಂದ ಅಲ್-ಹಮಾಮಿಯನ್ನು ಫ್ಲೈದುಬೈ ಸಂಸ್ಥೆಗೆ ಒಳತೂರಿಸಿ, ಅಜಾಗರೂಕ ಮೊಸಾದ್ನ ಮೂಗಿನ ಕೆಳಗೆ ಅವನು ಇಸ್ರೇಲ್ಗೆ ಹಾರುವಂತೆ ಮಾಡಿದರೆ, ಬೆನ್ ಗುರಿಯನ್ ವಿಮಾನನಿಲ್ದಾಣವನ್ನು ಚೆನ್ನಾಗಿ ಪರಿಚಯ ಮಾಡಿಕೊಂಡ ಅವನು ಭಾರತೀಯ ಅದರಲ್ಲೂ ಹಿಂದೂ ಪೈಲಟ್ನೊಂದಿಗೆ ಕಾಕ್ಪಿಟ್ನೊಳಗೆ ಕೂರುವ ಅವಕಾಶ ಸಿಕ್ಕಿದೊಡನೇ ಪಾ(ತ)ಕಿಗಳ ಆದೇಶಕ್ಕನುಗುಣವಾಗಿ ಆತ್ಮಹತ್ಯಾ ವಿಮಾನಾಪಘಾತ ಮಾಡಿದರೆ ಅದು ಏಕಾಏಕಿ ಭಾರತ, ಯುಎಇ ಮತ್ತು ಇಸ್ರೇಲ್ಗಳ ನಡುವೆ ಅನುಮಾನ ಮತ್ತು ಮನಸ್ತಾಪಗಳನ್ನು ಸೃಷ್ಟಿಸಿಬಿಡುತ್ತದೆ! ಅಲ್ಲಿಗೆ ಆ ಮೂರೂ ದೇಶಗಳ ನಡುವಿನ ಸೇನಾ ಬಾಂಧವ್ಯವೂ ತಾತ್ಕಾಲಿಕವಾಗಿಯಾದರೂ ನಿಲುಗಡೆಗೆ ಬರುತ್ತದೆ! ಇಸ್ಲಾಮಾಬಾದ್ ಮತ್ತು ಅಂಕಾರಾಗಳ ಹಿಂದಿನ ದುಷ್ಟ ಯೋಜನೆಗಳು ಮತ್ತು ಇಂದಿನ ನಾಯಕತ್ವಗಳನ್ನು ನೋಡಿದರೆ ಇಂತಹ ಸಂಚುಗಳನ್ನು ರೂಪಿಸುವುದು ಅವುಗಳಿಗೆ ಬಹಳ ಸುಲಭ.
ಜುಲೈನಲ್ಲೇ ತಾನು ಇಂತಹ ಕೃತ್ಯವೆಸಗಲು ನೋಡಿದ್ದೆ, ಆದರೆ ಪರಿಚಾರಕ ಸಿಬ್ಬಂದಿಯಲ್ಲೊಬ್ಬರಲ್ಲಿ ತನಗೆ ಆತ್ಮೀಯತೆ ಬೆಳೆದಿದ್ದರಿಂದ ಹಾಗೆ ಮಾಡದೇ ಅವರ ಜೀವವುಳಿಸಿದೆ ಎಂದು ಅಲ್-ಹಮಾಮಿ ಹೇಳುವುದು ತನಿಖೆಯನ್ನು ಅಡ್ಡದಾರಿಗೆಳೆಯುವ ತಂತ್ರ. ಮಹಿಳಾ ಸಹೋದ್ಯೋಗಿಗಳ ಕೈ ಕುಲುಕಲು ಹಿಂದೆಗೆಯುತ್ತಿದ್ದ, ಯಾವಾಗಲೂ ದೇವರ ಹೆಸರನ್ನು ಹೇಳಿಕೊಳ್ಳುತ್ತಿದ್ದ, ಆತ್ಮಹತ್ಯಾ ದಾಳಿಗೆಂದೇ ತರಬೇತಿ ಪಡೆದ ಅವನಂತಹವರು ಯಾರ ಜತೆಗೂ ಆತ್ಮೀಯತೆ ಬೆಳೆಸಿಕೊಳ್ಳುವುದಿಲ್ಲ. ಜುಲೈನಲ್ಲಿ ಆತ ತೆಲ್ ಅವೀವ್ಗೆ ಹೋದದ್ದು ವಿಮಾನನಿಲ್ದಾಣವನ್ನು ಚೆನ್ನಾಗಿ ಪರಿಚಯಿಸಿಕೊಳ್ಳಲಷ್ಟೇ.
ಅಲ್-ಹಮಾಮಿಯನ್ನು ಪ್ರಯಾಣಿಕರು ಕೆಡವಿ ಕಟ್ಟಿಹಾಕಿದಾಗ ಅವನ ಕಟ್ಟುಗಳನ್ನು ಬಿಚ್ಚಲು ಪರಿಚಾರಕ ಸಿಬ್ಬಂದಿಯ ಕೆಲವರು ಹೇಳತೊಡಗಿದರೆಂದು ಪ್ರತ್ಯಕ್ಷದರ್ಶಿ ಪ್ರಯಾಣಿಕರೊಬ್ಬರು ಹೇಳಿದ್ದಾರೆ. ಇದು ಆ ಕ್ಷಣದ ಗೊಂದಲವನ್ನೂ ಮೀರಿ ಅವರು ನಿಜವಾಗಿಯೂ ಕಂಡದ್ದೇ ಆಗಿದ್ದರೆ ಸಂಚಿನ ಸೂತ್ರಧಾರ ಆಗಸದಲ್ಲೆಲ್ಲೂ ಇರಲಿಲ್ಲ, ಭೂಮಿಯ ಮೇಲೇ ಇದ್ದ, ಇಸ್ಲಾಮಾಬಾದ್ನಲ್ಲಿ ಅಥವಾ ಅಂಕಾರಾದಲ್ಲಿ.
ಒಟ್ಟಿನಲ್ಲಿ ಇಸ್ರೇಲ್, ಯುಎಇ ಮತ್ತು ಭಾರತಗಳ ನಡುವೆ ತಾತ್ಕಾಲಿಕವಾಗಿಯಾದರೂ ವಿರಸವುಂಟುಮಾಡುವ, ಆ ಮೂಲಕ ಯುಎಇಯನ್ನು ಇಸ್ರೇಲ್ನಿಂದ ದೂರ ಎಳೆದು ಸೌದಿಗೆ ಹತ್ತಿರಾಗಿಸಿ ಯೆಮೆನ್ನ ಶಿಯಾ ಹೂತಿಗಳ ವಿರುದ್ಧ ಅರಬ್ ಸುನ್ನಿ ಸಂಯುಕ್ತ ರಂಗವೊಂದನ್ನು ಸೃಷ್ಟಿಸುವ ಹುನ್ನಾರ ವಿಫಲವಾದ ನಂತರ ಪಾಕಿಸ್ತಾನ ದಾರಿಗಾಣದೇ ಸೌದಿಗಳ ಸಹಾಯಕ್ಕೆ ಕಳ್ಳಹೆಜ್ಜೆಯಲ್ಲಿ ಬರುತ್ತಿದೆ. ಅ. 4ರಂದು ಪಾಕಿಸ್ತಾನಿ ವಾಯುದಳ ಹೂತಿ ಠಿಕಾಣೆಗಳ ಮೇಲೆ ದಾಳಿ ಆರಂಭಿಸಿದೆ. ಆ ಬಗೆಗಿನ ವರದಿಗಳನ್ನುಪಾಕಿಸ್ತಾನಿ ವಾಯುಸೇನೆಯ ಒಬ್ಬ ಅಧಿಕಾರಿ ಒಪ್ಪಿಕೊಂಡರೆ ಇನ್ನೊಬ್ಬರು ನಿರಾಕರಿಸಿದ್ದಾರೆ. ಇಬ್ಬರ ಹೇಳಿಕೆಗಳನ್ನೂ ನ್ಯೂಯಾರ್ಕ್ ಟೈಮ್್ಸ ಅಕ್ಟೋಬರ್ 6ರಂದು ವರದಿ ಮಾಡಿದೆ. ಈ ಇಬ್ಬಗೆಯ ಮಾತಿನ ಅರ್ಥ ಇಷ್ಟೇ- ಪಾಕಿಸ್ತಾನದ ನಿಜವಾದ ಆಡಳಿತಗಾರ ಆಸಿಮ್ ಮುನೀರ್ ಇಕ್ಕಟ್ಟಿನಲ್ಲಿ ಸಿಲುಕಿದ್ದಾರೆ. ಮಕ್ಕಾ ಒಪ್ಪಂದ ಈಗ ಅವರಿಗೆ ಬಲವಂತದ ಬಸಿರು; ಹೇಳಲೂ ಆಗದು, ಹೇಳಿಕೊಳ್ಳದಿರಲೂ ಆಗದು.
ಇಷ್ಟಾಗಿಯೂ ಫ್ಲೈದುಬೈ ಪ್ರಕರಣದ ಹಿಂದಿರುವ ಶಕ್ತಿಗಳು ಒಂದು ಗುರಿಯನ್ನಂತೂ ಸಾಧಿಸಿಕೊಂಡಿವೆ. 2023ರ ಅ. 7ರ ಹಮಾಸ್ ದಾಳಿಯ ಮುನ್ಸೂಚನೆಯ ಬಗ್ಗೆ ಉದಾಸೀನತೆ ತೋರಿದಂತೆ ಈಗ ಅಲ್-ಹಮಾಮಿಯ ವಿಷಯದಲ್ಲೂ ಉದಾಸೀನತೆ ತೋರಿ ಆತ ಇಸ್ರೇಲ್ಗೆ ಹಾರಿಬರುವಂತಹ ಸನ್ನಿವೇಶವನ್ನೇಕೆ ಸೃಷ್ಟಿಸಿದಿರಿ ಎಂದು ಇಸ್ರೇಲಿ ಮತದಾರ ನೇತನ್ಯಾಹು ಅವರನ್ನು ಪ್ರಶ್ನಿಸುವಂತಾಗಿದೆ. ಸೂಕ್ತ ಉತ್ತರ ಹೊಂದಿಸಿಕೊಳ್ಳದಿದ್ದರೆ ಅ. 27ರ ಚುನಾವಣೆ ಬೀಬೀಗೆ ಬೈಬೈ ಆಗಬಹುದು.