_1769537355333.webp?w=480&auto=format%2Ccompress&fit=max)
_1769537355333.webp?w=480&auto=format%2Ccompress&fit=max)
ಬಿಜೆಪಿಯಾಗಲಿ ಅದರ ಪೂರ್ವ ರೂಪ ಭಾರತೀಯ ಜನಸಂಘವಾಗಲಿ ಸ್ವತಂತ್ರವಾಗಿಯಾಗಲಿ ಸಮ್ಮಿಶ್ರ ಸರ್ಕಾರದ ಅಂಗವಾಗಿಯಾಗಲಿ ಪಶ್ಚಿಮ ಬಂಗಾಳದಲ್ಲಿ ಇದುವರೆಗೂ ಅಧಿಕಾರ ನಡೆಸಿಲ್ಲ. ಅಸ್ಸಾಂನಲ್ಲಿ ಎಜಿಪಿ ಹಾಗೂ ಅವಿಭಜಿತ ಜಮ್ಮು-ಕಾಶ್ಮೀರದಲ್ಲಿ ಪಿಡಿಪಿ ಜತೆಗಿನ ಮೈತ್ರಿ ಬಿಜೆಪಿಗೆ ಅಧಿಕಾರದ ಅವಕಾಶ ಒದಗಿಸಿದ್ದನ್ನೂ, ಇಂದು ಎಐಎಡಿಎಂಕೆ ಜತೆಗಿನ ಮೈತ್ರಿ ಅಂತಹದೇ ಅವಕಾಶವನ್ನು ತಮಿಳುನಾಡಿನಲ್ಲೂ ಒದಗಿಸಬಹುದಾದ ಸಾಧ್ಯತೆ ಕಂಡುಬರುತ್ತಿರುವ ಹಿನ್ನೆಲೆಯಲ್ಲಿ ಅಂತಹ ರಾಜಕೀಯ ಸನ್ನಿವೇಶ ಪಶ್ಚಿಮ ಬಂಗಾಳದಲ್ಲೇಕೆ ನಿರ್ವಣವಾಗಲಿಲ್ಲ ಎನ್ನುವುದು ಕುತೂಹಲಕರ. ಆದರೆ ಈ ಪ್ರಶ್ನೆಗೆ ಉತ್ತರ ಢಾಳಾಗಿಯೇ ಕಂಡಿದೆ.
ಬಂಗಾಳದ ವಿಭಜನೆ, ಹಿಂದೂಗಳ ಮಾರಣಹೋಮ, ಜತೆಗೆ ಶ್ಯಾಮಾಪ್ರಸಾದ್ ಮುಖರ್ಜಿಯವರ ವರ್ಚಸ್ಸು ಹಾಗೂ ರಾಷ್ಟ್ರೀಯವಾದಿ ನಿಲುವುಗಳೂ ಭಾರತೀಯ ಜನಸಂಘವನ್ನು ಬಂಗಾಳಿಗಳ ಹೃದಯದಲ್ಲಿ ಗಟ್ಟಿಯಾಗಿ ಸ್ಥಾಪಿಸಬಲ್ಲ ಅಂಶಗಳಾಗಿದ್ದವು, ನಿಜ. ಆದರೆ ಆ ಪಕ್ಷದ ಸ್ಥಾಪನೆಯಲ್ಲಾದ ವಿಳಂಬವೇ ಅದಕ್ಕೆ ಮೊದಲ ಹೊಡೆತವಾಯಿತು. ಜನಸಂಘವೇನಾದರೂ 1947-48ರಲ್ಲಿ ತಲೆಯೆತ್ತಿದ್ದರೆ ಅದರ ಇತಿಹಾಸದ ಜತೆ ಬಂಗಾಳದ ಇತಿಹಾಸವೂ ಬೇರೆಯದೇ ದಾರಿ ಹಿಡಿಯುತ್ತಿತ್ತು. ದುರದೃಷ್ಟವಶಾತ್ ಆ ಪಕ್ಷ ಸ್ಥಾಪನೆಯಾಗುವ ಹೊತ್ತಿಗೆ ಬಂಗಾಳದಲ್ಲಿ ಕಾಂಗ್ರೆಸ್ ಭದ್ರವಾಗಿ ತಳವೂರಿತ್ತು ಮತ್ತು ಆರ್ಎಸ್ಎಸ್ ಅನ್ನು ಎಲ್ಲ ಬಗೆಯಲ್ಲೂ ಹಣಿಯುವ ನೆಹರೂ ಸರ್ಕಾರದ ಪಿತೂರಿಗಳೂ ಸರಿಸುಮಾರು ಯಶಸ್ವಿಯಾಗಿದ್ದವು. ಶಿಕ್ಷಣ ಮತ್ತು ಮಾಧ್ಯಮಗಳನ್ನು ದಾಳವಾಗಿ ಬಳಸಿಕೊಂಡು ಹಿಂದೂ ಧರ್ಮವನ್ನೂ, ಹಿಂದೂಗಳ ಪರವಾಗಿ ನಿಲ್ಲುವವರನ್ನೂ ರಾಷ್ಟ್ರಕಂಟಕರೆಂದು ಜನಮನದಲ್ಲಿ ಬಿಂಬಿಸುವ ನೆಹರೂ ಕುತಂತ್ರ ನಿಗ್ರಹಿಸಲಾಗದ ಮಟ್ಟಕ್ಕೆ ಬೆಳೆದುನಿಂತಿತ್ತು. ಅದರ ದುಷ್ಪರಿಣಾಮ ಸಹಜವಾಗಿಯೇ ಜನಸಂಘದ ಮೇಲೆ ತಟ್ಟಿತು. ನೆಹರೂ ಸರ್ಕಾರದ ದುರುದ್ದೇಶ ಅದೇ ಆಗಿತ್ತು ಬಿಡಿ.
ಇಷ್ಟಾಗಿಯೂ, ಪಶ್ಚಿಮ ಬಂಗಾಳದಲ್ಲಿ, ಆ ಮೂಲಕ ದೇಶದಲ್ಲಿ ತನ್ನ ವರ್ಚಸ್ಸನ್ನು ಹಾಗೂ ರಾಜಕೀಯ ಭವಿಷ್ಯವನ್ನು ಗಣನೀಯವಾಗಿ ಸುಧಾರಿಸಿಕೊಳ್ಳುವ ಅವಕಾಶ ಜನಸಂಘದ ಮುಂದೆ ಕಾಣಿಸಿಕೊಂಡದ್ದು 1970ರ ಸುಮಾರಿನಲ್ಲಿ. 1969ರಲ್ಲಿ ಕಾಂಗ್ರೆಸ್ ವಿಭಜನೆಗೊಂಡು ಲೋಕಸಭೆಯಲ್ಲಿ ಇಂದಿರಾ ಗಾಂಧಿ ಸಾಂಖ್ಯಿಕವಾಗಿ ಬಲಹೀನಗೊಂಡಾಗ ಅವರಿಗೆ ಬೆಂಬಲವಾಗಿ ನಿಲ್ಲಲು ಇತರೆಲ್ಲಾ ಪಕ್ಷಗಳಿಗಿಂತಲೂ ಜನಸಂಘಕ್ಕೆ ಸಕಾರಣಗಳಿದ್ದವು. 1967ರ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಭಾರತೀಯ ಸೇನೆಯ ಬೆಂಬಲಕ್ಕೆ ಪೂರ್ಣವಾಗಿ ನಿಂತ ಇಂದಿರಾ ಸಿಕ್ಕಿಂ ಗಡಿಯಲ್ಲಿ ಚೀನಿಯರನ್ನು ಮಣ್ಣುಮುಕ್ಕಿಸಲು ಕಾರಣರಾದರು. ಆ ಮೂಲಕ 1962ರ ಸೋಲಿನ ಅವಮಾನವನ್ನು ಒಂದು ಹಂತದವರೆಗೆ ತೊಡೆದುಹಾಕಿದರು. ಭಾರತದ ಯಾವುದೇ ರಾಷ್ಟ್ರೀಯವಾದಿ ಪಕ್ಷ ಅಥವಾ ವ್ಯಕ್ತಿ ಹೆಮ್ಮೆ ಪಡಬೇಕಾದ ವಿಷಯವಿದು. ಜತೆಗೆ ನೆಹರೂ ಸರ್ಕಾರದ ಹಲವು ನಕಾರಾತ್ಮಕ ನೀತಿಗಳನ್ನು ಇಂದಿರಾ ಒಂದೊಂದಾಗಿ ಬದಲಿಸುತ್ತಾ ಹೋಗುತ್ತಿದ್ದರೆ ಅವರ ವಿರೋಧಿಗಳಾದ ಮೊರಾರ್ಜಿ ದೇಸಾಯಿ ಮತ್ತವರ ಸಹಯೋಗಿಗಳೂ ಅದೇ ಪ್ರತಿಗಾಮಿ ನೆಹರೂ ನೀತಿಗಳ ಪರವಾಗಿದ್ದರು. ಆದರೆ ಜನಸಂಘ ಮತ್ತು ಆರ್ಎಸ್ಎಸ್ ಇಂದಿರಾರತ್ತ ನಿರ್ಲಕ್ಷ್ಯದ ನೋಟ ಬೀರಿದಾಗ ಅದನ್ನು ತಮ್ಮ ಅನುಕೂಲಕ್ಕೆ ಬಳಸಿಕೊಂಡದ್ದು ಸಿಪಿಐ. ತಾವು ನೀಡಿದ ರಾಜಕೀಯ ಬೆಂಬಲಕ್ಕೆ ಪ್ರತಿಯಾಗಿ ಆ ಕಮ್ಯೂನಿಸ್ಟರು ಕೇಳಿದ್ದೆಂದರೆ ಶಿಕ್ಷಣ, ಮಾಧ್ಯಮ ಹಾಗೂ ಸಂಸ್ಕೃತಿ ಕ್ಷೇತ್ರಗಳಲ್ಲಿ ತಮ್ಮ ಯಜಮಾನಿಕೆ. ಅದನ್ನವರಿಗೆ ನೀಡಲಾಗದಷ್ಟು ಇಂದಿರಾರ ಕೈಗಳು ಕಟ್ಟಿಹೋಗಿದ್ದವು. ಆ ಮೂರೂ ಕ್ಷೇತ್ರಗಳನ್ನು ತಮ್ಮ ಕಪಿಮುಷ್ಟಿಗೆ ತೆಗೆದುಕೊಂಡ ಎಡಪಂಥೀಯರು ಎಸಗಿದ ಅನಾಹುತಗಳನ್ನು ನಿವಾರಿಸುವುದು ನಮಗೆ ಇನ್ನೂ ಸಾಧ್ಯವಾಗಿಲ್ಲ. ಅದರ ದುಷ್ಪರಿಣಾಮಗಳನ್ನು ಇನ್ನೂ ಅನುಭವಿಸುತ್ತಲೇ ಇದ್ದೇವೆ.
ಜನಸಂಘದ ಮುಂದಿನ ನಡೆಗಳು ಇನ್ನೂ ಅಧ್ವಾನ. ಅಮೆರಿಕದ ಉಗ್ರ ವಿರೋಧವನ್ನೂ ಲೆಕ್ಕಿಸದೇ ಇಂದಿರಾ 1971ರಲ್ಲಿ ಪಾಕಿಸ್ತಾನವನ್ನು ನಿರ್ಣಾಯಕವಾಗಿ ಸೋಲಿಸಿ, ತುಂಡರಿಸಿದರು. ಇದೂ ಸಹ ಜನಸಂಘ ಮತ್ತು ಆರ್ಎಸ್ಎಸ್ ಹೆಮ್ಮೆಪಡಬೇಕಾದ ವಿಷಯವೇ. ಇಂದಿರಾ ಕೃತ್ಯದಿಂದ ಕೆರಳಿದ ಅಧ್ಯಕ್ಷ ರಿಚರ್ಡ್ ನಿಕ್ಸನ್ ಮತ್ತು ರಾಷ್ಟೀಯ ಸುರಕ್ಷಾ ಸಲಹೆಗಾರ (ಮುಂದೆ ವಿದೇಶಾಂಗ ಕಾರ್ಯದರ್ಶಿ) ಹೆನ್ರಿ ಕಿಸಿಂಜರ್ ಇಂದಿರಾರ ರಾಜಕೀಯ ಇತಿಶ್ರೀಗೆ ಪಣತೊಟ್ಟರು. ಭಾರತವೇನಾದರೂ ಲ್ಯಾಟಿನ್ ಅಮೆರಿಕ ಅಥವಾ ಆಫ್ರಿಕಾದ ಸಣ್ಣ ದೇಶವೊಂದಾಗಿದ್ದರೆ ಇಂದಿರಾ ಆಗಲೇ ಸಿಐಎನಿಂದ ಹತ್ಯೆಯಾಗಿಹೋಗುತ್ತಿದ್ದರು. ಆ ಕೃತ್ಯದ ಸಾಧಕಗಳಿಗಿಂತ ಬಾಧಕಗಳೇ ಅಧಿಕವೆಂದು ಮನಗಂಡ ನಿಕ್ಸನ್ ಮತ್ತು ಕಿಸಿಂಜರ್ ಇಂದಿರಾ ವಿರುದ್ಧ ಕಣಕ್ಕಿಳಿಸಿದ್ದು ಸಿಐಎಯನ್ನು. ಆ ಕುಖ್ಯಾತ ಗುಪ್ತಚರ ಸಂಸ್ಥೆ ಮತ್ತದರ ಸಂಗಡಿಗ ಯುಎಸ್ಎಐಡಿ ಭಾರಿ ಪ್ರಮಾಣದಲ್ಲಿ ಹಣ ವ್ಯಯಿಸಿ ಭಾರತದಲ್ಲಿ ಇಂದಿರಾ ವಿರೋಧಿ ಆಂದೋಲನಕ್ಕೆ ಚಾಲನೆ ಕೊಟ್ಟವು. ಅದಕ್ಕೂ ಹಿಮ್ಮೆಟ್ಟದ ಇಂದಿರಾ ಏಪ್ರಿಲ್ 1975ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿ ಅಮೆರಿಕದ ಕಣ್ಣನ್ನು ಇನ್ನಷ್ಟು ಕೆರಳಿಸಿದರು. ಅದಾದ ಎರಡೇ ತಿಂಗಳಲ್ಲಿ ಅವರು ಅಧಿಕಾರ ತ್ಯಜಿಸಬೇಕಾದ ಸನ್ನಿವೇಶ ನಿರ್ವಣವಾಯಿತು. ಈ ಎಲ್ಲ ಬೆಳವಣಿಗೆಗಳಲ್ಲಿ ಜನಸಂಘ ನಿಂತದ್ದು ಇಂದಿರಾ ವಿರೋಧಿಗಳ ಪರವಾಗಿ. ಅವರಲ್ಲಿ ಪ್ರಮುಖರಾದವರು ಮೊರಾರ್ಜಿ ದೇಸಾಯಿ.
ಭಾರತದ ಆತ್ಮಗೌರವವನ್ನು ಎತ್ತಿ ಹಿಡಿಯಲು ಅಮೆರಿಕದ ವಿರೋಧವನ್ನು ಕಟ್ಟಿಕೊಳ್ಳಲು ಹಿಂಜರಿಯದ ಇಂದಿರಾರನ್ನು ಬಿಟ್ಟು ಅಮೆರಿಕದ ಗುಪ್ತಚರ ಸಂಸ್ಥೆಯಿಂದ ಹಣ ಸ್ವೀಕರಿಸಿ ಈ ದೇಶದಲ್ಲಿ ಅಮೆರಿಕದ ಅಜೆಂಡಾವನ್ನು ಎತ್ತಿಹಿಡಿಯಲು ಹೋದ ಮೊರಾರ್ಜಿ ದೇಸಾಯಿಯವರನ್ನು ಬೆಂಬಲಿಸಿ ಜನಸಂಘ ಸಾಧಿಸಹೊರಟಿದ್ದಾದರೂ ಏನು ಎಂದು ಅರ್ಥವಾಗುವುದಿಲ್ಲ. ನಿಜ ಹೇಳಬೇಕೆಂದರೆ ನೆಹರೂವಾದಿಗಳಾದ ದೇಸಾಯಿಯಂತಹವರ ಪರವಾಗಿ ನಿಂತ ಜನಸಂಘ ಮತ್ತು ಆರ್ಎಸ್ಎಸ್ ಅನುಭವಿಸಿದ ಕಷ್ಟಕಾರ್ಪಣ್ಯಗಳಿಗೆ ಲೆಕ್ಕವಿಲ್ಲ. ಇಂದಿರಾ ವಿರೋಧಿ ಆಂದೋಲನದಲ್ಲಿ ದೊಡ್ಡ ಪಾತ್ರ ವಹಿಸಿದ್ದು ಇವೆರಡು. ಹಾಗೆಯೇ ತುರ್ತು ಪರಿಸ್ಥಿತಿಯಲ್ಲಿ ಅತಿಯಾಗಿ ನೊಂದದ್ದೂ ಇವೆರಡೇ. ಆದರೆ ನಂತರ ಅಧಿಕಾರದ ಕೆನೆ ಸಿಕ್ಕಿದ್ದು ಯಾರಿಗೆ? ಅದೇ ಮೊರಾರ್ಜಿ ದೇಸಾಯಿ ಮತ್ತವರ ಸಹಯೋಗಿಗಳಿಗೆ! 1967ರಿಂದ 1975ರವರೆಗೆ ಭಾರತೀಯರು ಹೆಮ್ಮೆಪಡಬಹುದಾದ ಮಹಾನ್ ಕಾರ್ಯಗಳನ್ನು ಒಂದಾದ ಮೇಲೊಂದರಂತೆ ಸಾಧಿಸಿದ ಇಂದಿರಾರನ್ನು ಭಾರತದ ಉಗ್ರ ರಾಷ್ಟ್ರೀಯವಾದಿ ಪಕ್ಷವಾದ ಜನಸಂಘ ಸಮರ್ಥಿಸಿ ನಿಲ್ಲಬೇಕಾಗಿತ್ತು ಮತ್ತು ಆ ಮೂಲಕ ಕೇಂದ್ರದಲ್ಲಿ ಅಧಿಕಾರದ ಪಾಲು ಪಡೆಯಬಹುದಾಗಿತ್ತು. ಆದರೆ ಆ ಅವಕಾಶವನ್ನು ಕಳೆದುಕೊಂಡ ಜನಸಂಘದ ಸ್ಥಿತಿ ರಾಗ ಬಂದಾಗ ತಂತಿ ಕಿತ್ತುಹೋಯ್ತು ಎನ್ನುವಂತಹದು.
ನಂತರ ನೆಹರೂವಾದಿಗಳು ಮತ್ತು ತಥಾಕಥಿತ ಸಮಾಜವಾದಿಗಳ ಜತೆಗೆ ಸೇರಿ ಜನತಾ ಪಕ್ಷವನ್ನು ಅಸ್ತಿತ್ವಕ್ಕೆ ತಂದದ್ದು ಜನಸಂಘ ತನಗೆ ತಾನೇ ಎಸಗಿಕೊಂಡ ಆತ್ಮಹತ್ಯೆಯ ಕೃತ್ಯವೇ ಸರಿ. ಅದೃಷ್ಟವಶಾತ್ ಮುಂದಿನ ಮೂರು ವರ್ಷಗಳಲ್ಲಿ ಜನಸಂಘ ಮತ್ತು ಆರ್ಎಸ್ಎಸ್ ತಮ್ಮ ತಪ್ಪನ್ನು ಗುರುತಿಸಿಕೊಂಡವು ಮತ್ತು ಪರಿಹಾರಾತ್ಮಕ ಕಾರ್ಯಕ್ಕೆ ಮುಂದಾದವು. ಪರಿಣಾಮವಾಗಿ 1980ರ ಏಪ್ರಿಲ್ 6ರಂದು ಭಾರತೀಯ ಜನಸಂಘ ಭಾರತೀಯ ಜನತಾ ಪಕ್ಷವಾಗಿ ಫೀನಿಕ್ಸ್ನಂತೆ ಮರುಜೀವ ಪಡೆದು ಮೇಲೆದ್ದಿತು. ಆದರೆ ಅಷ್ಟರಲ್ಲಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಸನ್ನು ಹಿನ್ನೆಲೆಗೆ ದೂಡಿ ಸಿಪಿಐ(ಎಂ) ಭದ್ರವಾಗಿ ಕೂತಾಗಿತ್ತು. ನಿಜ ಹೇಳಬೇಕೆಂದರೆ ಬಿಜೆಪಿ ಮತ್ತು ಆರ್ಎಸ್ಎಸ್ ಅನ್ನು ಬಂಗಾಳಿಗಳ ಮನಸ್ಸಿನಿಂದ ಕಿತ್ತುಹಾಕುವ ಕೆಲಸವನ್ನು ಕಾಂಗ್ರೆಸ್ಗಿಂತಲೂ ಮಾರ್ಕ್ಸಿಸ್ಟರು ಅತ್ಯಂತ ಕ್ರೂರವಾಗಿ, ಹಲವು ಅರ್ಥಗಳಲ್ಲಿ ಪೂರ್ಣವಾಗಿ ಸಾಧಿಸಿದರು. ಅವರು ಪಶ್ಚಿಮ ಬಂಗಾಳದ ರಾಜಕಾರಣದಲ್ಲಿ ಮುಂಚೂಣಿಯಲ್ಲಿರುವವರೆಗೂ ಬಿಜೆಪಿಗೆ ಅಲ್ಲಿ ನೆಲೆಯೇ ಇರಲಿಲ್ಲ. ಮಾರ್ಕ್ಸಿಸ್ಟರನ್ನು ಅವರ ತಂತ್ರಗಳಿಂದಲೇ ಅವರ ಕೋಟೆಯಲ್ಲೇ ಮಣ್ಣು ಮಾಡಬಹುದು ಎಂದು ತೋರಿಸಿದ್ದು ಮಮತಾ ಬ್ಯಾನರ್ಜಿ. ಆಗಲೇ ಅಲ್ಲಿ ತನ್ನ ಭವಿಷ್ಯವನ್ನು ಹುಡುಕುವ ಸಾಧ್ಯತೆಯೂ ಬಿಜೆಪಿಗೆ ಕಂಡದ್ದು. ಆದಾಗ್ಯೂ ಕೇಂದ್ರದಲ್ಲಿ ಅಧಿಕಾರ ಗಳಿಸಿಕೊಂಡ ಎರಡೇ ವರ್ಷಗಳಲ್ಲಿ ಬಂಗಾಳದಲ್ಲಿ ಪ್ರಬಲ ರಾಜಕೀಯ ಶಕ್ತಿಯಾಗಿ ತಲೆಯೆತ್ತುವುದು ಬಿಜೆಪಿಗೆ ಸಾಧ್ಯವಿರಲಿಲ್ಲ. ಅಂತಹ ಸಾಧ್ಯತೆಗಾಗಿ ಅದು 2021ರವರೆಗೆ ಕಾಯಬೇಕಾಯಿತು. ಆಗಲೂ ಸ್ಥಳೀಯ ನಾಯಕತ್ವಕ್ಕಿಂತಲೂ ಕೇಂದ್ರೀಯ ನಾಯಕತ್ವವೇ ಮುಂಚೂಣಿಯಲ್ಲಿ ನಿಲ್ಲಬೇಕಾದ್ದು ಬಿಜೆಪಿ ಅನಿವಾರ್ಯವಾಗಿ ಒಪ್ಪಿಕೊಂಡ ವಾಸ್ತವ. ಹಲವು ದೋಷಗಳಿದ್ದರೂ ಆ ವಸ್ತುಸ್ಥಿತಿ ಬಿಜೆಪಿಗೆ ಅನುಕೂಲಕರವಾಗಿ ಪರಿಣಮಿಸಿದ್ದನ್ನು ಅಲ್ಲಗಳೆಯಲಾಗುವುದಿಲ್ಲ.
ಪೂವೋತ್ತರದ ಬುಡಕಟ್ಟು ಜನಾಂಗಗಳು ಹಿಂದೂ ಅಲ್ಲ, ಆ ಕಾರಣದಿಂದಲೇ ಬಿಜೆಪಿಗೆ ಅಲ್ಲಿ ನೆಲೆಯಿಲ್ಲ ಎಂದು ಕಾಂಗ್ರೆಸ್ ಮತ್ತದರ ತಥಾಕಥಿತ ಸೆಕ್ಯೂಲರ್ ಸಹಯೋಗಿಗಳು ಹೂಡಿದ ವಾದ ಪೊಳ್ಳು ಎನ್ನುವುದನ್ನು ಅರುಣಾಚಲ ಪ್ರದೇಶ, ಮಣಿಪುರ, ನಾಗಾಲ್ಯಾಂಡ್ ಮತ್ತು ತ್ರಿಪುರಾದ ಜನತೆ ಈಗಾಗಲೇ ಸಾರಿಯಾಗಿದೆ. ಹಾಗೆಯೇ ಕಮ್ಯೂನಿಸ್ಟ್ ಮೂಸೆಯಲ್ಲಿ ಅದ್ದಿ ತೆಗೆದ ಬಂಗಾಳಿಗಳಿಗೂ ಬಿಜೆಪಿ ರ್ವ್ಯಜ ಎನ್ನುವುದು 2021ರ ವಿಧಾನಸಭಾ ಚುನಾವಣೆ ಸುಳ್ಳು ಮಾಡಿತು. ಆಗ ಬಿಜೆಪಿಗೆ ಬಹುಮತ ಬರಲಿಲ್ಲ, ನಿಜ, ಆದರೆ ಅದರ ಮತಗಳಿಕೆ ಶೇಕಡಾ 6ರಿಂದ 38ಕ್ಕೇರಿದ್ದನ್ನು ಹಾಗೂ ಸ್ಥಾನಗಳ ಸಂಖ್ಯೆ 3ರಿಂದ 70ಕ್ಕೇರಿದ್ದನ್ನು ಲೆಕ್ಕಕ್ಕೆ ತೆಗೆದುಕೊಳ್ಳದಿರಲಾಗದು. ಅದಾದದ್ದು ಸುವೇಂದು ಅಧಿಕಾರಿ ಮಮತಾಗೆ ಸರಿಸಾಟಿ ನಾಯಕ ಅಲ್ಲ ಎಂಬ ವಾಸ್ತವದ ಹಿನ್ನೆಲೆಯಲ್ಲಿ. ಇಷ್ಟಾಗಿಯೂ ಬಿಜೆಪಿ ತೀವ್ರವಾಗಿ ಪರಿಗಣಿಸಿ ಯುಕ್ತವಾಗಿ ಬಳಸಿಕೊಳ್ಳಬೇಕಾದ ಕೆಲವು ಅಂಶಗಳಿವೆ.
ತಮ್ಮ ರಾಜ್ಯವನ್ನು ಅಕ್ರಮ ವಲಸಿಗರಿಂದ ರಕ್ಷಿಸಿ ಎಂದು ಮಮತಾ 2005ರಲ್ಲಿ ಲೋಕಸಭೆಯಲ್ಲಿ ನಾಟಕೀಯವಾಗಿ ಹುಯಿಲಿಟ್ಟಿದ್ದರು. ಹನ್ನೆರಡು ವರ್ಷಗಳ ನಂತರ ಸುಮಾರು 40,000 ಅಕ್ರಮ ರೋಹಿಂಗ್ಯಾಗಳನ್ನು ಹೊರಗಟ್ಟಬೇಕಾದ ಸನ್ನಿವೇಶ ಎದುರಾದಾಗ ಅದೇ ಮಮತಾ ಅದನ್ನು ವಿರೋಧಿಸಿ ನಿಂತರು. ಯಾಕೆಂದರೆ ಆಗವರು ಮುಖ್ಯಮಂತ್ರಿಯಾಗಿದ್ದರು. ತಮ್ಮ ರಾಜಕೀಯ ಉಳಿವಿಗೆ ಅಕ್ರಮ ವಲಸಿಗರು ಅಗತ್ಯ ಎಂದು ಅರಿತಿದ್ದರು. ಇಂದು ಬಿಜೆಪಿ ಎರಗಬೇಕಾದ್ದು ಅವರ ಆ ನಿಲುವಿನ ಮೇಲೆ. ಇಂದು ಮತದಾರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಮೂಲಕ ಅದನ್ನು ಸಾಧಿಸಲಾಗುತ್ತಿದೆ.
ತಾವು ಆರ್ಥಿಕ ಅಭಿವೃದ್ಧಿಯ ಪರ ಅಲ್ಲ ಎನ್ನುವುದನ್ನು ಪಶ್ಚಿಮ ಬಂಗಾಳದ ಜನತೆ ಹಿಂದೆ ಒಂದಕ್ಕಿಂತ ಹೆಚ್ಚು ಬಾರಿ, ಮುಖ್ಯವಾಗಿ 1980ರ ದಶಕದಲ್ಲಿ ಕಾಂಗ್ರೆಸ್ನ ಅಭಿವೃದ್ಧಿ ಘೊಷಣೆಗಳನ್ನು ತಿರಸ್ಕರಿಸಿ ಜ್ಯೋತಿ ಬಸು ಅವರ ಪುಕ್ಕಟೆ ಕೊಡುಗೆಗಳಿಗೆ ಕೈಯೊಡ್ಡಿದಾಗ ಮತ್ತು 2007ರಲ್ಲಿ ಸಿಂಗೂರ್ ಮತ್ತು ನಂದಿಗ್ರಾಮ್ಳಲ್ಲಿ ಕಮ್ಯೂನಿಸ್ಟ್ ಸರ್ಕಾರದ ಅಭಿವೃದ್ಧಿ ಯೋಜನೆಗಳನ್ನು ತಿರಸ್ಕರಿಸಿ ಮಮತಾರ ಬೆಂಬಲಕ್ಕೆ ನಿಂತಾಗ, ತೋರಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರೈಲು ಸಂಪರ್ಕ ಯೋಜನೆಗಳೂ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳ ಕೊಡುಗೆಗಳನ್ನು ಪ್ರಧಾನಿ ಮೋದಿ ಪಶ್ಚಿಮ ಬಂಗಾಳದ ಜನತೆಯ ಮುಂದೆ ಸುರಿಯುತ್ತಿರುವುದು ಎಷ್ಟು ಮಟ್ಟಿಗೆ ಫಲದಾಯಕ ಎಂದು ಹೇಳಲಾಗದು. ಆದರೆ 2021ರಲ್ಲಿ ದೀದಿ ಓ ದೀದಿ ಎಂದು ಧ್ವನಿವರ್ಧಕದಲ್ಲಿ ಕೂಗಿದ್ದಕ್ಕಿಂತಲೂ ಇಂದು ಅದೇ ಧ್ವನಿವರ್ಧಕಗಳಲ್ಲಿ ಅಭಿವೃದ್ಧಿ ಕೊಡುಗೆಗಳನ್ನು ಘೊಷಿಸುತ್ತಿರುವುದು ಅದೆಷ್ಟೋ ಪಾಲು ಶ್ರೇಷ್ಠ.
ಆದಾಗ್ಯೂ ಬಿಜೆಪಿ ಗಮನಿಸಬೇಕಾದ ಮುಖ್ಯ ಅಂಶವೊಂದಿದೆ. ಟಿಎಂಸಿ ಕಮ್ಯೂನಿಸ್ಟರನ್ನು ಬಗ್ಗುಬಡಿದದ್ದು ಮುಖ್ಯವಾಗಿ ಅವರದೇ ಹಿಂಸಾತ್ಮಕ ವಿಧಾನಗಳನ್ನು ಅವರ ಮೇಲೇ ಪ್ರಯೋಗಿಸಿ. ಅದನ್ನೇ ಟಿಎಂಸಿ 2021ರಲ್ಲಿ ಮತ್ತು 2024ರಲ್ಲಿ ಬಿಜೆಪಿ ವಿರುದ್ಧ ಪ್ರಯೋಗಿಸಿದೆ. ಈ ವಿಷಯದಲ್ಲೂ ಟಿಎಂಸಿಗೆ ಅದರದೇ ಮದ್ದನ್ನು ನೀಡದ ಹೊರತು ಅಂದರೆ ಚಾಂಡಾಲ ದೇವರಿಗೆ ಚಪ್ಪಲಿ ಪೂಜೆ ಎಂಬ ಜನಸಾಮಾನ್ಯರ ಅನುಭವದ ಮಾತನ್ನು ಅನುಸರಿಸಲು ಬಿಜೆಪಿ ಹಿಂಜರಿಯದಿರುವುದು ಅಗತ್ಯ. ಯಾವುದೇ ಸುಸಂಸ್ಕೃತ ಅಥವಾ ನಾಗರಿಕ ವಿಧಾನಗಳಿಂದಲೇ ಪೂರ್ಣವಾಗಿ ಟಿಎಂಸಿ ಗೂಂಡಾಗಿರಿಯನ್ನು (ದೀದಿಗಿರಿಯನ್ನು!) ಹತ್ತಿಕ್ಕಲಾಗದು ಎನ್ನುವುದು ನಾವಿಂದು ಒಪ್ಪಿಕೊಳ್ಳಲೇಬೇಕಾದ ಕ್ರೂರ ವಾಸ್ತವ. (ಮುಂದುವರೆಯುವುದು)
-(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)