ಬಾಹ್ಯಾಕಾಶ ಕ್ರಾಂತಿ: ಚೀನಾ ಸಿದ್ಧಪಡಿಸುತ್ತಿದೆ ಸೂಪರ್​ ಸಾನಿಕ್​ ಸ್ಪೇಸ್​ ಕ್ಯಾಟರ್​ಪಿಲ್ಲರ್​

ಬಾಹ್ಯಾಕಾಶ ಕ್ರಾಂತಿ
ಬಾಹ್ಯಾಕಾಶ ಕ್ರಾಂತಿ
Published on

ಬಾಹ್ಯಾಕಾಶ ತಲುಪಲು ಭೂಮಿಯ ಗುರುತ್ವಾಕರ್ಷಣೆಯನ್ನು ಮೀರುವುದಕ್ಕಾಗಿ ಅಪಾರ ಇಂಧನ ಸುಡುವ ಸಾಂಪ್ರದಾಯಿಕ ರಾಕೆಟ್​ಗಳ ಬದಲಿಗೆ, ವಿದ್ಯುತ್ಕಾಂತೀಯ ಶಕ್ತಿಯ ಮೂಲಕ ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗದಲ್ಲಿ ಗಗನನೌಕೆಯನ್ನು ಚಿಮ್ಮಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಚೀನಾ ಅಭಿವೃದ್ಧಿಪಡಿಸುತ್ತಿದೆ. ಬಾಹ್ಯಾಕಾಶ ಪ್ರಯಾಣದ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಲ್ಲ ಈ ಬೃಹತ್ ‘ಸ್ಪೇಸ್ ಕ್ಯಾಟಪಲ್ಟ್’ ಯೋಜನೆ ಹೇಗೆ ಜಾಗತಿಕ ಅಂತರಿಕ್ಷ ರಂಗದ ಚಿತ್ರಣವನ್ನೇ ಬದಲಾಯಿಸಬಹುದು ಎಂಬುದರ ವಿಶ್ಲೇಷಣೆ ಇಲ್ಲಿದೆ.

ಭೂಮಿಯ ಗುರುತ್ವಾಕರ್ಷಣೆಯ ಬಲೆಯನ್ನು ಮೀರಿ ಬಾಹ್ಯಾಕಾಶ ತಲುಪಬೇಕೆಂದರೆ ಇಂದು ನಮಗೆ ನೆನಪಾಗುವುದು ಟನ್​ಗಟ್ಟಲೇ ಇಂಧನವನ್ನು ಸುಡುತ್ತ, ಭಾರಿ ಹೊಗೆ ಸೂಸುತ್ತ ನೆಗೆಯುವ ಸಾಂಪ್ರದಾಯಿಕ ರಾಕೆಟ್​ಗಳು. ಆದರೆ, ಈ ಹಳೆಯ ವಿಧಾನಕ್ಕೆ ಪರ್ಯಾಯವಾಗಿ ಚೀನಾ ಈಗ ಜಾಗತಿಕ ಅಂತರಿಕ್ಷ ರಂಗದ ಚಿತ್ರಣವನ್ನೇ ಬದಲಿಸಬಲ್ಲ ಅತ್ಯಾಧುನಿಕ ತಂತ್ರಜ್ಞಾನವೊಂದರ ಮೇಲೆ ಕೆಲಸ ಮಾಡುತ್ತಿದೆ. ಅದೇ ‘ಸ್ಪೇಸ್ ಕ್ಯಾಟಪಲ್ಟ್’ ಅಥವಾ ವಿದ್ಯುತ್ಕಾಂತೀಯ ಉಡಾವಣಾ ವ್ಯವಸ್ಥೆ.

ಚೀನಾದ ಈ ‘ಸ್ಪೇಸ್ ಕ್ಯಾಟಪಲ್ಟ್’ ಯೋಜನೆ ಯಶಸ್ವಿಯಾದರೆ, ಅದು ಕೇವಲ ಚೀನಾದ ಸಾಧನೆಯಷ್ಟೇ ಆಗಿರುವುದಿಲ್ಲ. ಬದಲಿಗೆ ಮಾನವ ಇತಿಹಾಸದಲ್ಲೇ ರಾಕೆಟ್​ಗಳ ಯುಗ ಮುಗಿದು, ಅಂತರಿಕ್ಷ ಪಯಣದ ಹೊಸ ಸುಸ್ಥಿರ ಯುಗ ಆರಂಭವಾಗಲಿದೆ. ಜಾಗತಿಕ ಬಾಹ್ಯಾಕಾಶ ರಂಗದಲ್ಲಿ ಅಮೆರಿಕದ ನಾಸಾ ಮತ್ತು ಸ್ಪೇಸ್ ಎಕ್ಸ್ ಸಂಸ್ಥೆಗಳಿಗೆ ಇದು ದೊಡ್ಡ ಪೈಪೋಟಿ ನೀಡುವುದರಲ್ಲಿ ಸಂಶಯವಿಲ್ಲ. ಕನ್ನಡದಲ್ಲಿ ಈ ಕ್ಯಾಟಪಲ್ಟ್​ಗೆ ಕವಣೆ, ಕವೆಗೋಲು ಅಂತಲೂ, ಆಡುಭಾಷೆಯಲ್ಲಿ ಕ್ಯಾಟರ್​ಪಿಲ್ಲರ್ ಅಥವಾ ಕ್ಯಾಟರ್​ಬಿಲ್ಲು ಅಂತಲೂ ಕರೆಯುತ್ತಾರೆ. ಅದರ ಮಾದರಿಯಲ್ಲೇ ಈ ಹೊಸ ತಂತ್ರಜ್ಞಾನವೂ ಕೆಲಸ ಮಾಡುತ್ತದೆ.

ಕಾರ್ಯ ನಿರ್ವಹಣೆಯ ವಿಧಾನ

ಮ್ಯಾಗ್ಲೇವ್ ಬುಲೆಟ್ ರೈಲುಗಳಲ್ಲಿ ಬಳಸಲಾಗುವ ವಿದ್ಯುತ್ಕಾಂತೀಯ ಶಕ್ತಿಯನ್ನು ಇಲ್ಲಿ ಬಳಸಲಾಗುತ್ತದೆ. 

ಟ್ರ್ಯಾಕ್​ ಆಧಾರಿತ ಉಡಾವಣೆ: ಮ್ಯಾಗ್ಲೇವ್ ರೈಲಿನಂತೆಯೇ ಇರುವ ದೈತ್ಯ ಹಳಿಗಳ ಮೇಲೆ ಗಗನನೌಕೆಯನ್ನು ಕೂರಿಸಲಾಗುತ್ತದೆ.

ವೇಗೋತ್ಕರ್ಷ: ವಿದ್ಯುತ್ಕಾಂತೀಯ ಶಕ್ತಿಯನ್ನು ಬಳಸಿ, ಗಗನನೌಕೆಯನ್ನು ಕೆಲವೇ ಸೆಕೆಂಡುಗಳಲ್ಲಿ ಗಂಟೆಗೆ ಸಾವಿರಾರು ಕಿಲೋಮೀಟರ್ ವೇಗಕ್ಕೆ (ಮ್ಯಾಕ್ 1.6 ಅಥವಾ ಅದಕ್ಕಿಂತ ಹೆಚ್ಚು) ತಳ್ಳಲಾಗುತ್ತದೆ.

ಬಾಹ್ಯಾಕಾಶಕ್ಕೆ ಚಿಮ್ಮುವಿಕೆ: ಹಳಿಯ ಕೊನೆಯಲ್ಲಿ ಗಗನನೌಕೆಯು ಭೂಮಿಯ ವಾತಾವರಣವನ್ನು ಸೀಳಿಕೊಂಡು ಬಾಹ್ಯಾಕಾಶದತ್ತ ಜಿಗಿಯುತ್ತದೆ. ನಂತರ ಅದರ ಮುಂದಿನ ಪಯಣಕ್ಕಾಗಿ ಮಾತ್ರ ಸಣ್ಣ ಪ್ರಮಾಣದ ರಾಕೆಟ್ ಇಂಜಿನ್ ಬಳಕೆಯಾಗುತ್ತದೆ.

ಯೋಜನೆಯ ವೈಶಿಷ್ಟ್ಯಗಳು

ಶೂನ್ಯ ಇಂಧನ: ಸಾಂಪ್ರದಾಯಿಕ ರಾಕೆಟ್​ಗಳು ತಮ್ಮ ಒಟ್ಟು ತೂಕದ ಶೇಕಡ 90ಕ್ಕಿಂತ ಹೆಚ್ಚು ಭಾಗ ಇಂಧನವನ್ನೇ ಹೊಂದಿರುತ್ತವೆ. ಆದರೆ, ಈ ತಂತ್ರಜ್ಞಾನದಲ್ಲಿ ಭೂಮಿಯಿಂದ ನೆಗೆಯಲು ಯಾವುದೇ ರಾಕೆಟ್ ಇಂಧನದ ಅಗತ್ಯವಿರುವುದಿಲ್ಲ. ಸಂಪೂರ್ಣವಾಗಿ ವಿದ್ಯುತ್ ಶಕ್ತಿಯ ಮೇಲೆ ಇದು ಚಲಿಸುತ್ತದೆ.

ಮರುಬಳಕೆ ಸಾಧ್ಯತೆ: ಈ ವಿದ್ಯುತ್ಕಾಂತೀಯ ಹಳಿಗಳು ಭೂಮಿಯ ಮೇಲೆಯೇ ಸ್ಥಿರವಾಗಿ ಇರುವುದರಿಂದ, ಇವುಗಳನ್ನು ಯಾವುದೇ ಸವೆತವಿಲ್ಲದೆ ಸಾವಿರಾರು ಬಾರಿ ಮರುಬಳಕೆ ಮಾಡಬಹುದು.

ದೈತ್ಯ ಹಳಿಗಳ ನಿರ್ಮಾಣ: ವರದಿಗಳ ಪ್ರಕಾರ, ಚೀನಾ ಈ ಯೋಜನೆಗಾಗಿ ಹಿಮಾಲಯದಂತಹ ಎತ್ತರದ ಪ್ರದೇಶ ಅಥವಾ ದೀರ್ಘವಾದ ವ್ಯಾಕ್ಯೂಮ್ ಟ್ಯೂಬ್ ಸುರಂಗಗಳನ್ನು ಬಳಸಲು ಯೋಜಿಸುತ್ತಿದೆ, ಇದರಿಂದ ಗಾಳಿಯ ಪ್ರತಿರೋಧವನ್ನು ಕಡಿಮೆ ಮಾಡಬಹುದು.

ಪರಿಣಾಮಗಳು

ಈ ಯೋಜನೆ ಯಶಸ್ವಿಯಾದರೆ, ಅದು ಜಾಗತಿಕ ಬಾಹ್ಯಾಕಾಶ ಸ್ಪರ್ಧೆಯಲ್ಲಿ ಇಡೀ ಜಗತ್ತನ್ನೇ ಹಿಂದೆ ಹಾಕುವ ಶಕ್ತಿಯನ್ನು ಚೀನಾಕ್ಕೆ ನೀಡುತ್ತದೆ. ಇದರ ಪ್ರಮುಖ ಪರಿಣಾಮಗಳು ಹೀಗಿವೆ.

ಅಗ್ಗವಾಗಲಿದೆ ಬಾಹ್ಯಾಕಾಶ ಪ್ರಯಾಣ: ಬಾಹ್ಯಾಕಾಶಕ್ಕೆ ಪ್ರಸ್ತುತ ಒಂದು ಕಿಲೋಗ್ರಾಂ ತೂಕವನ್ನು ಕಳುಹಿಸಲು ಲಕ್ಷಾಂತರ ರೂಪಾಯಿ ವೆಚ್ಚವಾಗುತ್ತದೆ. ಆದರೆ ಸ್ಪೇಸ್ ಕ್ಯಾಟಪಲ್ಟ್ ತಂತ್ರಜ್ಞಾನವು ಇಂಧನದ ವೆಚ್ಚವನ್ನು ಕಡಿಮೆ ಮಾಡುವುದರಿಂದ, ಉಪಗ್ರಹ ಹಾಗೂ ಗಗನಯಾತ್ರಿಗಳನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ವೆಚ್ಚವು ಶೇ.90ರಷ್ಟು ಅಗ್ಗವಾಗುವ ಸಾಧ್ಯತೆಯಿದೆ.

ಪರಿಸರಸ್ನೇಹಿ ಉಡಾವಣೆ: ಪ್ರತಿ ಬಾರಿ ರಾಕೆಟ್ ಉಡಾವಣೆಯಾದಾಗಲೂ ಟನ್​ಗಟ್ಟಲೆ ಕಾರ್ಬನ್ ಮತ್ತು ಹಾನಿಕಾರಕ ಅನಿಲಗಳು ವಾತಾವರಣ ಸೇರುತ್ತವೆ. ವಿದ್ಯುತ್ಕಾಂತೀಯ ವ್ಯವಸ್ಥೆಯು ಸಂಪೂರ್ಣವಾಗಿ ಹಸಿರು ಇಂಧನ (ವಿದ್ಯುತ್) ಆಧರಿತವಾಗಿರುವುದರಿಂದ ಇದು ಪರಿಸರಕ್ಕೆ ಯಾವುದೇ ಹಾನಿ ಮಾಡುವುದಿಲ್ಲ.

ಕ್ಷಣಾರ್ಧದಲ್ಲಿ ಉಪಗ್ರಹಗಳ ಉಡಾವಣೆ: ಸಾಂಪ್ರದಾಯಿಕ ರಾಕೆಟ್​ಗಳನ್ನು ಸಿದ್ಧಪಡಿಸಲು ತಿಂಗಳುಗಟ್ಟಲೇ ಸಮಯ ಬೇಕು. ಆದರೆ ಈ ವ್ಯವಸ್ಥೆಯಲ್ಲಿ, ರೈಲುಗಳು ನಿಲ್ದಾಣದಿಂದ ಹೊರಡುವಂತೆ ಒಂದಾದ ಮೇಲೊಂದರಂತೆ ಗಂಟೆಗಳ ಅಂತರದಲ್ಲಿ ಹತ್ತಾರು ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಚಿಮ್ಮಿಸಬಹುದು. ಇದು ವಾಣಿಜ್ಯ ಉಪಗ್ರಹ ಮಾರುಕಟ್ಟೆಯಲ್ಲಿ ಚೀನಾಕ್ಕೆ ಏಕಸ್ವಾಮ್ಯ ತಂದುಕೊಡಬಹುದು.

ಸಂಶೋಧನೆಗೆ ವೇಗ: ಸಾಮಾನ್ಯ ಜನರಿಗೂ ಬಾಹ್ಯಾಕಾಶ ಪ್ರಯಾಣ ಸಾಧ್ಯವಾಗುವ ದಿನಗಳು ಹತ್ತಿರವಾಗುತ್ತವೆ. ಅಲ್ಲದೆ, ಚಂದ್ರ ಮತ್ತು ಮಂಗಳ ಗ್ರಹಗಳ ಮೇಲಿನ ಗಣಿಗಾರಿಕೆ ಹಾಗೂ ಸಂಶೋಧನೆಗೆ ಬೇಕಾಗುವ ಕಚ್ಚಾ ವಸ್ತುಗಳನ್ನು ಸುಲಭವಾಗಿ ಸಾಗಿಸಬಹುದು.

ಭರ್ಜರಿ ತಯಾರಿ

ಸ್ಪೇಸ್ ಕ್ಯಾಟಪಲ್ಟ್ ಯೋಜನೆಯ ನಿಟ್ಟಿನಲ್ಲಿ 2025 ಮತ್ತು 2026ರ ಅವಧಿಯಲ್ಲಿ ಚೀನಾ ಕೆಲವು ಮಹತ್ವದ ಪ್ರಾಯೋಗಿಕ ಯಶಸ್ಸುಗಳನ್ನು ಸಾಧಿಸಿದೆ. ಚೀನಾ ಸರ್ಕಾರ ಮತ್ತು ಅಲ್ಲಿನ ವಾಣಿಜ್ಯ ಬಾಹ್ಯಾಕಾಶ ಸಂಸ್ಥೆಗಳು ವ್ಯವಸ್ಥಿತವಾಗಿ ಈ ಯೋಜನೆಗೆ ತಳಪಾಯ ಹಾಕುತ್ತಿವೆ. ಚೀನಾದ ‘ಜಿಯಾಂಗ್ ಕಮರ್ಷಿಯಲ್ ಏರೋಸ್ಪೇಸ್ ಲಾಂಚ್ ಟೆಕ್ನಾಲಜಿ ರಿಸರ್ಚ್ ಇನ್​ಸ್ಟಿಟ್ಯೂಟ್’ ಈ ವಿದ್ಯುತ್ಕಾಂತೀಯ ಉಡಾವಣೆ ತಂತ್ರಜ್ಞಾನದ ಸಂಪೂರ್ಣ ಜವಾಬ್ದಾರಿ ಹೊತ್ತು ಕೆಲಸ ಮಾಡುತ್ತಿದೆ. 

ವಿದ್ಯುತ್ಕಾಂತೀಯ ಪೊ›ಪಲ್ಷನ್ ಕಂಟ್ರೋಲ್ ಮತ್ತು ಹೈ-ಟೆಂಪರೇಚರ್ ಸೂಪರ್ ಕಂಡಕ್ಟಿಂಗ್ ನ್ಯಾವಿಗೇಷನ್ (ಅತಿ ಹೆಚ್ಚು ತಾಪಮಾನದಲ್ಲೂ ಕೆಲಸ ಮಾಡುವ ಅತಿವಾಹಕ ಕಾಂತೀಯ ವ್ಯವಸ್ಥೆ) ತಂತ್ರಜ್ಞಾನಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗಿದೆ. ಚೀನಾ ಈಗಾಗಲೇ ತನ್ನ ಅತ್ಯಾಧುನಿಕ ಯುದ್ಧನೌಕೆಯಾದ ‘ಫುಜಿಯನ್’ನಲ್ಲಿ ಯುದ್ಧ ವಿಮಾನಗಳನ್ನು ಹಾರಿಸಲು ವಿದ್ಯುತ್ಕಾಂತೀಯ ಕ್ಯಾಟಪಲ್ಟ್ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿದೆ. ಇದೇ ಅನುಭವವನ್ನು ಈಗ ಬಾಹ್ಯಾಕಾಶ ನೌಕೆಗಳ ಗಾತ್ರಕ್ಕೆ ವಿಸ್ತರಿಸಲಾಗುತ್ತಿದೆ. 

ಚೀನಾದ ಪ್ರಮುಖ ಬಾಹ್ಯಾಕಾಶ ಸಂಸ್ಥೆಗಳಾದ ‘ಗ್ಯಾಲಕ್ಟಿಕ್ ಎನರ್ಜಿ’ ಮುಂತಾದವು 2028ರ ವೇಳೆಗೆ ಈ ಮ್ಯಾಗ್ಲೇವ್ ಉಡಾವಣೆಯ ಮುಂದಿನ ಹಂತದ ದೊಡ್ಡ ಮಟ್ಟದ ಪರೀಕ್ಷೆಗಳನ್ನು ನಡೆಸಲು ಸಜ್ಜಾಗುತ್ತಿವೆ. ಚೀನಾ ಇದರ ಉಡಾವಣಾ ಹಳಿಗಳನ್ನು ಗಾಳಿಯ ಒತ್ತಡ ಕಡಿಮೆ ಇರುವ ಹಿಮಾಲಯದಂತಹ ಅತಿ ಎತ್ತರದ ಪ್ರದೇಶಗಳಲ್ಲಿ ಅಥವಾ ದೀರ್ಘವಾದ ವ್ಯಾಕ್ಯೂಮ್ ಟ್ಯೂಬ್ (ಶೂನ್ಯ ಪ್ರದೇಶದ ಸುರಂಗ) ಒಳಗಡೆ ನಿರ್ವಿುಸಲು ಭೂಮಿ ಸಮೀಕ್ಷೆ ಕಾರ್ಯ ಕೈಗೆತ್ತಿಕೊಂಡಿದೆ.

ಯೋಜನೆಗೆ ತಗಲುತ್ತಿರುವ ವೆಚ್ಚ ಎಷ್ಟು?

ಇದು ಜಗತ್ತಿನಲ್ಲೇ ಮೊದಲ ಬಾರಿಗೆ ಬೃಹತ್ ಮಟ್ಟದಲ್ಲಿ ನಿರ್ಮಾಣವಾಗುತ್ತಿರುವ ಯೋಜನೆಯಾಗಿರುವುದರಿಂದ ಇದರ ಆರಂಭಿಕ ವೆಚ್ಚವೇ ದೊಡ್ಡ ಪ್ರಮಾಣದ್ದು. ಬೃಹತ್ ವಿದ್ಯುತ್ಕಾಂತೀಯ ಉಡಾವಣಾ ವ್ಯವಸ್ಥೆ, ಸೂಪರ್ ಕಂಡಕ್ಟಿಂಗ್ ಮ್ಯಾಗ್ನೆಟ್​ಗಳು, ಸುರಂಗಗಳು ಮತ್ತು ದೈತ್ಯ ಪವರ್ ಸ್ಟೇಷನ್​ಗಳನ್ನು ನಿರ್ವಿುಸಲು ಅಂದಾಜು 15ರಿಂದ 20 ಬಿಲಿಯನ್ ಡಾಲರ್ (1.2 ಲಕ್ಷ ಕೋಟಿ ರೂ.ಯಿಂದ 1.6 ಲಕ್ಷ ಕೋಟಿ ರೂ.) ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಒಂದು ವೇಳೆ ಇದು ಮಾನವರ ಪ್ರಯಾಣಕ್ಕೂ ಯೋಗ್ಯವಾಗಬೇಕೆಂದರೆ (ಎಛ್ಞಿ-2 ತಂತ್ರಜ್ಞಾನ) ಈ ವೆಚ್ಚ 60 ಬಿಲಿಯನ್ ಡಾಲರ್ ದಾಟಬಹುದು.

ವಿಜ್ಞಾನಿಗಳು ಏನೆನ್ನುತ್ತಾರೆ?

ಜಾಗತಿಕ ಬಾಹ್ಯಾಕಾಶ ವಿಜ್ಞಾನಿಗಳು ಚೀನಾದ ಈ ಹೆಜ್ಜೆಯನ್ನು ಕುತೂಹಲ ಮತ್ತು ಎಚ್ಚರಿಕೆಯಿಂದ ಗಮನಿಸುತ್ತಿದ್ದಾರೆ. ನಾಸಾ ಮತ್ತು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಹಲವು ನಿವೃತ್ತ ವಿಜ್ಞಾನಿಗಳ ಪ್ರಕಾರ, ಇಂಧನದ ಮೇಲಿನ ಅವಲಂಬನೆಯನ್ನು ಕೊನೆಗೊಳಿಸುವುದು ಬಾಹ್ಯಾಕಾಶ ವಿಜ್ಞಾನದ ಮುಂದಿನ ದೊಡ್ಡ ಗುರಿಯಾಗಿದೆ. ಚೀನಾ ಈ ನಿಟ್ಟಿನಲ್ಲಿ ಪ್ರಾಯೋಗಿಕ ಹಂತಕ್ಕೆ ತಲುಪಿರುವುದು ನಿಜಕ್ಕೂ ಶ್ಲಾಘನೀಯ. ಇದು ಯಶಸ್ವಿಯಾದರೆ, ಪ್ರಸ್ತುತ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಯನ್ನು ಆಳುತ್ತಿರುವ ಇಲಾನ್ ಮಸ್ಕ್ ಅವರ ‘ಸ್ಪೇಸ್ಎಕ್ಸ್’ ಸಂಸ್ಥೆಯ ಮರುಬಳಕೆ ರಾಕೆಟ್ಗಳಿಗೂ ಇದು ಭಾರಿ ಪೈಪೋಟಿ ನೀಡಲಿದೆ. ಆದರೆ, ಅನೇಕ ತಜ್ಞರು ಇದರ ತಾಂತ್ರಿಕ ಸವಾಲುಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. 

40 ಟನ್ ತೂಕದ ನೌಕೆಯನ್ನು ಕೇವಲ 30 ಸೆಕೆಂಡುಗಳಲ್ಲಿ ಮ್ಯಾಕ್ ವೇಗಕ್ಕೆ ತಳ್ಳಲು ಸುಮಾರು 60 ದೊಡ್ಡ ಪವರ್ ಪ್ಲಾಂಟ್ಗಳು ಒಟ್ಟಿಗೆ ಉತ್ಪಾದಿಸುವಷ್ಟು ವಿದ್ಯುತ್ ಬೇಕಾಗುತ್ತದೆ. ಇಷ್ಟೊಂದು ಭಾರಿ ವಿದ್ಯುತ್ ಅನ್ನು ಒಂದೇ ಕ್ಷಣದಲ್ಲಿ ಬಿಡುಗಡೆ ಮಾಡುವ ಗ್ರಿಡ್ ವ್ಯವಸ್ಥೆ ರೂಪಿಸುವುದು ಅತಿ ದೊಡ್ಡ ಸವಾಲು. ವಾತಾವರಣದ ದಟ್ಟ ಪದರದಲ್ಲಿ ನೌಕೆಯು ಅತಿ ವೇಗವಾಗಿ ಚಲಿಸುವಾಗ ಉಂಟಾಗುವ ಘರ್ಷಣೆ ಮತ್ತು ಶಾಖವನ್ನು ತಡೆದುಕೊಳ್ಳುವ ಸೂಪರ್ ಮೆಟೀರಿಯಲ್ಸ್ (ಉಷ್ಣ ನಿರೋಧಕ ವಸ್ತುಗಳು) ಇನ್ನೂ ಸಂಪೂರ್ಣವಾಗಿ ಲಭ್ಯವಿಲ್ಲ. ಹೆಚ್ಚಿನ ಬಾಹ್ಯಾಕಾಶ ತಜ್ಞರ ಪ್ರಕಾರ, ಆರಂಭದ 10-15 ವರ್ಷಗಳ ಕಾಲ ಈ ವ್ಯವಸ್ಥೆಯನ್ನು ಉಪಗ್ರಹಗಳು, ಇಂಧನ, ನೀರು, ಮತ್ತು ಚಂದ್ರ/ಮಂಗಳ ಗ್ರಹಕ್ಕೆ ಕಳುಹಿಸುವ ಕಚ್ಚಾ ವಸ್ತುಗಳಂತಹ ಜಡ ವಸ್ತುಗಳ ಉಡಾವಣೆಗೆ ಮಾತ್ರ ಬಳಸಲು ಸಾಧ್ಯ. 

ಯಾಕೆಂದರೆ, ಹಳಿಯ ಮೇಲೆ ನೌಕೆ ವೇಗ ಪಡೆದುಕೊಳ್ಳುವಾಗ ಉಂಟಾಗುವ ಭಾರಿ ‘ಜಿ-ಫೋರ್ಸ್’ (ಗುರುತ್ವಾಕರ್ಷಣೆಯ ಒತ್ತಡ) ಅನ್ನು ಮನುಷ್ಯರು ತಡೆದುಕೊಂಡರೆ ಅವರ ಮೂಳೆಗಳು ಪುಡಿಯಾಗಬಹುದು ಅಥವಾ ಪ್ರಜ್ಞೆ ತಪ್ಪಬಹುದು. ಮಾನವ ಪ್ರಯಾಣಕ್ಕೆ ಇದನ್ನು ಬಳಸಬೇಕಾದರೆ ಕನಿಷ್ಠ 1000 ಕಿಲೋಮೀಟರ್ ಉದ್ದದ ಹಳಿ ಬೇಕಾಗುತ್ತದೆ, ಅದು ಸದ್ಯಕ್ಕೆ ಅಸಾಧ್ಯದ ಮಾತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net