_1784656621145.webp?w=480&auto=format%2Ccompress&fit=max)
_1784656621145.webp?w=480&auto=format%2Ccompress&fit=max)
ಅದಾದ ಎರಡು ದಶಕಗಳಲ್ಲಿ ಉತ್ತರ ಅಮೆರಿಕಾ ಖಂಡದ ವಾಯವ್ಯ ತುದಿಯಾದ ಅಲಾಸ್ಕಾವನ್ನೂ ತನ್ನೊಳಗೆ ಸೇರಿಸಿಕೊಂಡು ತನ್ನ ಭೂವಿಸ್ತೀರ್ಣವನ್ನು 91 ಲಕ್ಷ ಚ.ಕಿ.ಮೀಗೂ ಹೆಚ್ಚಿಗೆಗೇರಿಸಿಕೊಂಡದ್ದಲ್ಲದೇ ಏಶಿಯಾದ ಸೈಬೀರಿಯಾಕ್ಕೂ ಆರ್ಕ್ಟಿಕ್ ಸಾಗರಕ್ಕೂ ಹತ್ತಿರಾಯಿತು. ಅಮೆರಿಕಾ ಹೀಗೆ ದೈತ್ಯನಾಗಿ ಬೆಳೆದದ್ದು ನೆಲ ಖರೀದಿ ಮತ್ತು ಆಕ್ರಮಣದ ಮೂಲಕ. ಆಕ್ರಮಣ ನಾವು ಭಾರತೀಯರ ಜಾಯಮಾನಕ್ಕೆ ಒಗ್ಗದ ನಡವಳಿಕೆ. ಇತಿಹಾಸದ ಯಾವ ಹಂತದಲ್ಲೂ ನಾವು ಇತರರನ್ನು ಪದಾಕ್ರಾಂತಗೊಳಿಸಿ ಅವರ ನೆಲದ ಮೇಲೆ ನಮ್ಮ ಶಾಶ್ವತ ರಾಜಕೀಯ ಅಧಿಕಾರ ಸ್ಥಾಪಿಸಿಕೊಂಡಿಲ್ಲ. ಹಾಗೆಯೇ ಲಕ್ಷಾಂತರ ಚ.ಕಿ.ಮೀ. ನೆಲವನ್ನು ಇತರರಿಂದ ನಾವು ಖರೀದಿಸಿಯೂ ಇಲ್ಲ. ಅಮೆರಿಕಾ ಅದೆಲ್ಲವನ್ನೂ ಹೇಗೆ ಮಾಡಿತು ಎನ್ನುವುದರ ಮೇಲೊಂದು ಪಕ್ಷಿನೋಟ ಹರಿಸೋಣ.
ಮೂರನೆಯ ಅಧ್ಯಕ್ಷ ಥಾಮಸ್ ಜೆಫರ್ಸನ್ 1803ರಲ್ಲಿ ಪಶ್ಚಿಮದಲ್ಲಿ ಫ್ರೆಂಚರ ನಿಯಂತ್ರಣದಲ್ಲಿದ್ದ ವಿಶಾಲ ಲೂಸಿಯಾನಾವನ್ನು ಖರೀದಿಸಿ ದೇಶದ ವಿಸ್ತೀರ್ಣವನ್ನು ಒಂದೇ ಬಾರಿಗೆ ದ್ವಿಗುಣಗೊಳಿಸಿದರು. ಆಮೇಲೆ ಜೇಮ್್ಸ ಮನ್ರೋರ ಅಧ್ಯಕ್ಷಾವಧಿಯಲ್ಲಿ ಸ್ಪೇನ್ನಿಂದ ಫ್ಲಾರಿಡಾ ಪರ್ಯಾಯದ್ವೀಪವನ್ನು ಅಮೆರಿಕಾ ಖರೀದಿಸಿತು. ಆಮೇಲೆ 1854ರಲ್ಲಿ ಅಧ್ಯಕ್ಷ ಫ್ರಾಂಕ್ಲಿನ್ ಪಿಯರ್ಸ್ ಸ್ಥಳೀಯ ‘ಇಂಡಿಯನ್’ (?) ಮೂಲನಿವಾಸಿಗಳಿಂದ ಅವರ ನೆಲವನ್ನು ಖರೀದಿಸಲು ಪತ್ರ ಬರೆದಾಗ ಆ ಜನರ ನಾಯಕ ಸಿಯಾಟಲ್ ತನ್ನವರ ಜೀವ ಮತ್ತು ಜೀವನೋಪಾಯವನ್ನು ರಕ್ಷಿಸುವ ಉದ್ದೇಶದಿಂದ ಖರೀದಿಗೆ ಸಮ್ಮತಿಸಿದರೇನೋ ಸರಿ. ಆದರೆ ಅವರು ವಾಷಿಂಗ್ಟನ್ ಟೆರಿಟರಿ (ಇಂದಿನ ವಾಯವ್ಯದ ವಾಷಿಂಗ್ಟನ್ ರಾಜ್ಯ) ಗವರ್ನರ್ ಐಸಾಕ್ ಸ್ಟೀವನ್ಸ್ರೊಂದಿಗೆ ಮಾತನಾಡುತ್ತಾ ಭೂಮಿಯ ಖರೀದಿ ತಮ್ಮ ಜನರ ನಂಬಿಕೆಗಳಿಗೆ ಹೊಂದಿಕೆಯಾಗುವುದಿಲ್ಲ ಎಂದು ವಿವರವಾಗಿ ಹೇಳಿದರಂತೆ.
ಅವರ ಮಾತುಗಳನ್ನು ಆಧರಿಸಿ ಟೆಡ್ ಪೆರಿ ಎಂಬ ಚಿತ್ರಕಥೆ ರಚನಕಾರರೊಬ್ಬರು 1971ರಲ್ಲಿ ಪರಿಸರ ರಕ್ಷಣೆಯ ಕುರಿತಾದ ಚಲನಚಿತ್ರಕ್ಕಾಗಿ ಬರೆದ ಮಾತುಗಳು ಹೀಗೆ ಸಾಗುತ್ತವೆ: ‘ಆಕಾಶವನ್ನು, ಗಾಳಿಯ ಸುಗಂಧವನ್ನು, ಮಣ್ಣಿನ ಬಿಸುಪನ್ನು, ನೀರಿನ ಹೊಳಪನ್ನು, ಹಕ್ಕಿಗಳ ಚಿಲಿಪಿಲಿಯನ್ನು, ದುಂಬಿಗಳ ಗುಂಗುಂ ಗಾನವನ್ನು ನೀವು ಹೇಗೆ ಖರೀದಿಸಬಲ್ಲಿರಿ?... ಜಿಂಕೆಗಳು ನಮ್ಮ ಸಹೋದರರು. ಕುದುರೆಯ ಮೈನ ಬಿಸುಪು, ಮನುಷ್ಯನ ಶರೀರದ ಶಾಖ ಎರಡೂ ನಮಗೆ ಒಂದೇ’. ಸಿಯಾಟಲ್ರ ಭಾವನಾತ್ಮಕ ಭಾಷಣದಲ್ಲಿ ವ್ಯಕ್ತವಾದ ಮಾತುಗಳಿಗೆ ಮೂಲನಿವಾಸಿಗಳ ಪರಂಪರಾಗತ ನಂಬಿಕೆಗಳೇ ಪ್ರೇರಕ ಎನ್ನುವ ವಾದ ಆ ಜನರ ಮೌಲ್ಯಗಳ ಕುರಿತಾಗಿ ಗೌರವ ಮೂಡಿಸುತ್ತದೆ. ದೂರದ ಆ ನಾಡಿನ ಜನರ ಭಾವನೆಗಳು ನಮ್ಮ ಪುರಾತನ ಭಾರತೀಯ ಭಾವನೆಗಳಿಗೆ, ಮೌಲ್ಯಗಳಿಗೆ ಸಮಾನವಾಗಿರುವಂತೇ ಇವೆಯಲ್ಲ? ಆ ಅರ್ಥದಲ್ಲಿ ಅವರನ್ನೂ ಇಂಡಿಯನ್ಸ್ ಎಂದು ಕರೆಯುವುದು ಸರಿಯೇನೋ.
ಈ ನಡುವೆ ಅಧ್ಯಕ್ಷ ಜಾನ್ ಟೇಲರ್ ಮೆಕ್ಸಿಕೋದಿಂದ ಟೆಕ್ಸಾಸ್ ಅನ್ನು ಕುತಂತ್ರಗಳ ಮೂಲಕ ಕಿತ್ತುಕೊಂಡರೆ ಅವರ ಉತ್ತರಾಧಿಕಾರಿ ಜೇಮ್ಸ್ ಪೋಲ್ಕ್ ಕ್ಷುಲ್ಲಕ ಕಿತಾಪತಿಗಳನ್ನೆಸಗಿ ಆ ಬಡಪಾಯಿ ದೇಶದ ಮೇಲೆ 1846-48ರಲ್ಲಿ ಯುದ್ಧ ನಡೆಸಿ ಟೆಕ್ಸಾಸ್ನಿಂದ ಕ್ಯಾಲಿಫೋರ್ನಿಯಾವರೆಗೆ ಇಡೀ ಉತ್ತರ ಮೆಕ್ಸಿಕೋವನ್ನು ಆಕ್ರಮಿಸಿಕೊಂಡು ಅಮೆರಿಕಾಗೆ ಸೇರಿಸಿಕೊಂಡರು! ಈ ದುರಾಗ್ರಹ ನಮಗಂತೂ ಸಂಪೂರ್ಣ ಪರಕೀಯ ಬಿಡಿ. ಆಮೇಲೆ ಅಧ್ಯಕ್ಷ ಆಂಡ್ರೂ್ಯ ಜಾನ್ಸನ್ 1867ರಲ್ಲಿ ರಷಿಯನ್ನರಿಂದ ಅಲಾಸ್ಕಾವನ್ನೂ ಖರೀದಿಸಿ ಅಮೆರಿಕಾದ ಭೌಗೋಳಿಕ ವಿಸ್ತಾರವನ್ನು ಈಗಿನ ಪ್ರಮಾಣಕ್ಕೆ ತಂದರು. ಇಂದು ಅಮೆರಿಕಾ ಭೌಗೋಳಿಕವಾಗಿ ಜಗತ್ತಿನ ನಾಲ್ಕನೆಯ ಅತಿದೊಡ್ಡ ದೇಶ. ಅದಕ್ಕೂ ಎರಡನೆಯ ಹಾಗೂ ಮೂರನೆಯ ವಿಶಾಲ ದೇಶಗಳಾದ ಕೆನಡಾ ಮತ್ತು ಚೀನಾಗಳಿಗೂ ಹೆಚ್ಚಿನ ವ್ಯತ್ಯಾಸವೇನಿಲ್ಲ. ಏಳನೆಯ ದೊಡ್ಡ ದೇಶವಾದ ನಮ್ಮ ಭಾರತ ಹೆಚ್ಚುಕಡಿಮೆ ಅಮೆರಿಕಾದ ಮೂರನೆಯ ಒಂದರಷ್ಟಿದೆ. ನಮ್ಮದೇಕೆ ಇಷ್ಟು ಚಿಕ್ಕದಾಗಿಬಿಟ್ಟಿತು?
1947ರಲ್ಲಿ ದೇಶವಿಭಜನೆಯಾಗದಿದ್ದರೂ ನಮ್ಮ ದೇಶವೇನೂ ಆರನೆಯ ಬೃಹತ್ ರಾಷ್ಟ್ರವೂ ಆಗುತ್ತಿರಲಿಲ್ಲ. ಜತೆಗೆ ಆ ವರ್ಷದ ವಾಸ್ತವಗಳು ವಿಭಜನೆಯನ್ನು ಅನಿವಾರ್ಯವಾಗಿಸಿಯೂ ಬಿಟ್ಟಿದ್ದವು ಮತ್ತು ನಮ್ಮ ನಾಯಕರಿಗೆ ಅದು ಸಮ್ಮತವೂ ಆಗಿತ್ತು ಬಿಡಿ. ಆದಾಗ್ಯೂ, ವಿಭಜನೆಯ ಹೊರತಾಗಿಯೂ ನಮ್ಮದಾಗಿಯೇ ಉಳಿಯಬಹುದಾಗಿದ್ದ ಕೆಲವು ಪ್ರದೇಶಗಳನ್ನು ನಾವು ಕಳೆದುಕೊಂಡೆವು. ತಮ್ಮ ದೇಶದ ವಿಸ್ತಾರಕ್ಕೆ ಅಮೆರಿಕದ ನಾಯಕರು ತೋರಿದ ನಿಷ್ಠೆಯಲ್ಲಿ ಲವಲೇಶವನ್ನೂ ನಮ್ಮ ನಾಯಕರು ತೋರಲಿಲ್ಲ. ಅದರ ಒಂದೆರಡು ದಾರುಣ ಉದಾಹರಣೆಗಳನ್ನು ನಿಮ್ಮ ಮುಂದಿಡುತ್ತೇನೆ. ಉಪಖಂಡವನ್ನು ಭಾರತ ಮತ್ತು ಪಾಕಿಸ್ತಾನಗಳೆಂಬ ಎರಡು ದೇಶಗಳಾಗಷ್ಟೇ ವಿಭಜಿಸಬೇಕೆಂದು ಮುಸ್ಲಿಂ ಲೀಗ್ ಒತ್ತಾಯಿಸಿದರೆ ಹದಿನೆಂಟು ಸ್ವತಂತ್ರ ದೇಶಗಳಾಗಿ ವಿಭಜಿಸಬೇಕೆಂದು ಭಾರತೀಯ ಕಮ್ಯುನಿಸ್ಟ್ ಪಕ್ಷ ಆಣಿಮುತ್ತು ಉದುರಿಸಿತ್ತು. ಸದ್ಯ ಇಂಗ್ಲಿಷರು ಕಮ್ಯೂನಿಸ್ಟರ ಮಾತನ್ನು ತಮ್ಮ ದೇಶದಲ್ಲೂ ಕೇಳಲಿಲ್ಲ, ಇಲ್ಲೂ ಕೇಳಲಿಲ್ಲ.
ಈಗ ಕಾಂಗ್ರೆಸ್ನತ್ತ ತಿರುಗೋಣ. ದೇಶವಿಭಜನೆಗೆ ಧರ್ಮ ಮೂಲಕಾರಣವಾದರೂ ಪಂಜಾಬ್ ಮತ್ತು ಬಂಗಾಳಗಳ ಗಡಿಜಿಲ್ಲೆಗಳಲ್ಲಿ ಧರ್ಮಕ್ಕಿಂತಲೂ ಆರ್ಥಿಕತೆ ಮತ್ತು ಸಂಪರ್ಕ ಸಾಧ್ಯತೆಗಳನ್ನು ಪ್ರಮುಖವಾಗಿ ಪರಿಗಣಿಸಬೇಕೆಂಬ ನಿಯಮವಿತ್ತು. ಆ ಕಾರಣದಿಂದಲೇ ಪಶ್ಚಿಮ ಬಂಗಾಳದ ಉತ್ತರ ಮತ್ತು ದಕ್ಷಿಣ ಭಾಗಗಳಿಗೆ ಸಂಪರ್ಕವಿರಲೆಂದು ಮುಸ್ಲಿಂ ಬಹುಸಂಖ್ಯಾತ ಮುರ್ಷಿದಾಬಾದ್ ಜಿಲ್ಲೆಯನ್ನು ಭಾರತಕ್ಕೆ ಕೊಡಲಾಯಿತು. ಹಾಗೆಯೇ ಆರ್ಥಿಕ ಕಾರಣಗಳಿಗಾಗಿ ಹಿಂದೂ ಬಹುಸಂಖ್ಯಾತ ಕೊಮಿಲ್ಲಾ ಜಿಲ್ಲೆಯನ್ನು ಪೂರ್ವ ಪಾಕಿಸ್ತಾನಕ್ಕೆ ನೀಡಲಾಯಿತು. ಆ ಹಿನ್ನೆಲೆಯಲ್ಲಿ ಚಿತ್ತಗಾಂಗ್ ಜಿಲ್ಲೆ ಮತ್ತು ಚಿತ್ತಗಾಂಗ್ ಗುಡ್ಡಗಾಡು ಪ್ರದೇಶ ಜಿಲ್ಲೆಗಳನ್ನು ಪರಿಗಣಿಸಿದರೆ ಅವೆರಡೂ ಭಾರತಕ್ಕೆ ಸಿಗಬೇಕಾಗಿತ್ತು.
ಬಂಗಾಳದ ವಿಭಜನೆಯಿಂದಾಗಿ ಈಶಾನ್ಯ ರಾಜ್ಯಗಳೊಂದಿಗೆ ಭಾರತದ ಮುಖ್ಯ ಭೂಭಾಗ ಸಂಪರ್ಕ ಹೊಂದಿರುವುದು 22 ಕಿ.ಮೀ. ಅಗಲದ ಸಿಲಿಗುರಿ ಕಾರಿಡಾರ್ ಮೂಲಕ ಮಾತ್ರ. ಅದನ್ನು ಬಂದ್ ಮಾಡಿ ಈಶಾನ್ಯ ರಾಜ್ಯಗಳನ್ನು ಭಾರತದಿಂದ ಕತ್ತರಿಸುವ ಮಾತನ್ನು ಬಾಂಗ್ಲಾದೇಶದ ಮಹಮದ್ ಯೂನುಸ್ ಅಲ್ಲದೇ ನಮ್ಮವರೇ ಆದ ಸರ್ಜೀಲ್ ಇಮಾಮ್ ಆಲಿಗರ್ ಮುಸ್ಲಿಂ ಯೂನಿವರ್ಸಿಟಿಯಂತಹ ಮಹತ್ವದ ಸ್ಥಳದಲ್ಲೇ ಆಡಿದ್ದಾರೆ. ಈ ಹಿನ್ನೆಲೆಯಲ್ಲಿ ಈಶಾನ್ಯ ರಾಜ್ಯಗಳಿಗೆ ಮತ್ತೊಂದು ಸಂಪರ್ಕ ಕಲ್ಪಿಸಲು ಚಿತ್ತಗಾಂಗ್ ಜಿಲ್ಲೆಯನ್ನು ಭಾರತಕ್ಕೆ ಕೊಡಬೇಕಾಗಿತ್ತು. ಅದರಾಚೆಗೆ ನಮ್ಮ ತ್ರಿಪುರಾ ಮತ್ತು ಮಿಝೆೊರಾಮ್ ರಾಜ್ಯಗಳಿಗೆ ಹೊಂದಿಕೊಂಡ ಚಿತ್ತಗಾಂಗ್ ಗುಡ್ಡಗಾಡು ಜಿಲ್ಲೆಯಲ್ಲಿ 1947ರಲ್ಲಿ 97% ಬೌದ್ಧರು ಮತ್ತು ಹಿಂದೂಗಳಿದ್ದರು. ಮುಸ್ಲಿಮರು 3% ಮಾತ್ರ. ಅದರೊಂದಿಗೆ ಚಿತ್ತಗಾಂಗ್ ಜಿಲ್ಲೆಯನ್ನೂ ಭಾರತಕ್ಕೆ ಕೊಟ್ಟಿದ್ದರೆ ಕೊಲ್ಕತಾದಿಂದ ಚಿತ್ತಗಾಂಗ್ ಬಂದರಿಗೆ ನೇರ ನೌಕಾಸಂಪರ್ಕ, ಅಲ್ಲಿಂದಾಚೆಗೆ ಈಶಾನ್ಯದ ಎಲ್ಲ ರಾಜಧಾನಿಗಳಿಗೆ ರಸ್ತೆ ಮತ್ತು ರೈಲು ಸಂಪರ್ಕ ನಿರ್ವಿುಸಿ ಇಡೀ ಪ್ರದೇಶವನ್ನು ದೇಶದ ಮುಖ್ಯ ಭೂಭಾಗದೊಂದಿಗೆ ಭದ್ರವಾಗಿ ಜೋಡಿಸಬಹುದಾಗಿತ್ತು. ‘ಚಿಕನ್ಸ್ ನೆಕ್’ ಎಂದು ಕರೆಸಿಕೊಳ್ಳುವ ಕಿರಿದಾದ ಸಿಲಿಗುರಿ ಕಾರಿಡಾರ್ ಬಗ್ಗೆ ಆತಂಕಗೊಳ್ಳುವ ಅಗತ್ಯವೇ ನಮಗಿರುತ್ತಿರಲಿಲ್ಲ.
ಚಿತ್ತಗಾಂಗ್ ಗುಡ್ಡಗಾಡು ಜಿಲ್ಲೆಯ ಜನರು ಜವಾಹರ್ಲಾಲ್ ನೆಹರೂ ಅವರೊಂದಿಗೆ ಮಾತಾಡಿ ತಮ್ಮ ಜಿಲ್ಲೆಯನ್ನು ಭಾರತದಲ್ಲೇ ಉಳಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡಿದ್ದರು. ವೈಸ್ರಾಯ್ ಮೌಂಟ್ಬ್ಯಾಟನ್ ಜತೆ ಮಾತಾಡುವುದಾಗಿ ನೆಹರೂ ಭರವಸೆ ನೀಡಿದ್ದರು ಸಹ. ಮಾತಾಡಿದರೋ ಏನೋ ವಿವರಗಳು ಲಭ್ಯವಿಲ್ಲ. ಆ ಎರಡೂ ಜಿಲ್ಲೆಗಳು ಪೂರ್ವ ಪಾಕಿಸ್ತಾನಕ್ಕೆ ಕೊಡಲ್ಪಟ್ಟವು, ನಮಗೆ ಚಿಕನ್ಸ್ ನೆಕ್ ಅಷ್ಟೇ ಗತಿಯಾಯಿತು. 97% ಬೌದ್ಧರು ಹಾಗೂ ಹಿಂದೂಗಳಿದ್ದ ಚಿತ್ತಗಾಂಗ್ ಗುಡ್ಡಗಾಡು ಜಿಲ್ಲೆ ಧರ್ಮದ ದೃಷ್ಟಿಯಿಂದ ಮತ್ತು 25% ಮಾತ್ರ ಹಿಂದೂಗಳಿದ್ದ ಚಿತ್ತಗಾಂಗ್ ಜಿಲ್ಲೆ ಸಂಪರ್ಕ, ಆರ್ಥಿಕತೆಯ ಜತೆಗೆ ರಕ್ಷಣೆಯ ದೃಷ್ಟಿಯಿಂದಲೂ ಭಾರತಕ್ಕೆ ಬರಬೇಕಾಗಿತ್ತು. ನಮ್ಮ ನಾಯಕರು ಅದಕ್ಕಾಗಿ ನಿಷ್ಠೆಯಿಂದ ಪ್ರಯತ್ನಿಸಬೇಕಾಗಿತ್ತು. ನಾಡಿನ ಹಿತಾಸಕ್ತಿಗಳ ಬಗ್ಗೆ ನಮ್ಮ ನಾಯಕರಿಗೆ ಅರಿವು ತಾನಾಗಿಯೇ ಮೂಡದಿದ್ದರೆ ಅದನ್ನವರು ಬಿಕಾನೇರ್ನ ಮಹಾರಾಜ ಸಾದುಲ್ ಸಿಂಗ್ರಿಂದಾದರೂ ಕಲಿಯಬಹುದಾಗಿತ್ತು.
ಹೇಳಿಕೇಳಿ ಬಿಕಾನೇರ್ ಥಾರ್ ಮರುಭೂಮಿಯ ಅಂಚು. ಅದು ಸಮೃದ್ಧಿ ಕಾಣತೊಡಗಿದ್ದು ಸಿಂಧು ನೀರಾವರಿ ವ್ಯವಸ್ಥೆ ಆರಂಭಗೊಂಡ ಮೇಲೆ. ಬಿಕಾನೇರ್ಗೆ ನೀರು ಹರಿದುಬರುತ್ತಿದ್ದುದು ಪಂಜಾಬ್ನ ಫಿರೋಜ್ಪುರ್ ಜಿಲ್ಲೆಯಲ್ಲಿನ ಕಾಲುವೆಗಳಿಂದ. ಮುಸ್ಲಿಂ ಬಹುಸಂಖ್ಯಾತ ಫಿರೋಜ್ಪುರ್ ಜಿಲ್ಲೆಯನ್ನು ಪಾಕಿಸ್ತಾನಕ್ಕೆ ಕೊಡಲು ರ್ಯಾಡ್ಕ್ಲಿಫ್ ಸಮಿತಿ ತೀರ್ಮಾನಿಸಿ ನಕ್ಷೆಯನ್ನೂ ತಯಾರಿಸಿತ್ತು. ಅದರ ಸುಳಿವು ಹತ್ತಿದ ಮಹಾರಾಜ ಸಾದುಲ್ ಸಿಂಗ್ ವೈಸ್ರಾಯ್ ಮೌಂಟ್ಬ್ಯಾಟನ್ ಬಳಿ ಓಡಿದರು. ಫಿರೋಜ್ಪುರ್ ಹೆಡ್ವರ್ಕ್ಸ್ ಪಾಕಿಸ್ತಾನದ ಕೈಗೆ ಬಿದ್ದರೆ ಬಿಕಾನೇರ್ ಮತ್ತೆ ಮರುಭೂಮಿಯಾಗುವುದು ನಿಶ್ಚಿತ ಎಂದು ಆತಂಕವನ್ನು ತೋಡಿಕೊಂಡರು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಮೌಂಟ್ಬ್ಯಾಟನ್ ನಕ್ಷೆಯನ್ನು ಬದಲಿಸಿ ಫಿರೋಜ್ಪುರ್ ಜಿಲ್ಲೆಯನ್ನು ಭಾರತಕ್ಕೆ ನೀಡುವಂತೆ ರ್ಯಾಡ್ಕ್ಲಿಫ್ಗೆ ನಿರ್ದೇಶಿಸಿದರು. ಪರಿಣಾಮವಾಗಿ ಮುಸ್ಲಿಂ ಬಹುಸಂಖ್ಯಾತ ಫಿರೋಜ್ಪುರ್ ಜಿಲ್ಲೆ ಭಾರತಕ್ಕೆ ಬಂತು, ಬಿಕಾನೇರ್ ಮತ್ತೆ ಮರಳುಗಾಡಾಗುವುದರಿಂದ ಬಚಾವಾಯಿತು.
ಈ ಪ್ರಕರಣ ಕಲಿಸುವ ಪಾಠವೆಂದರೆ ಅಧ್ಯಕ್ಷ ಫ್ರಾಂಕ್ಲಿನ್ ಪಿಯರ್ಸ್ರ ಕುತಂತ್ರವನ್ನಾಗಲೀ, ಅಧ್ಯಕ್ಷ ಜೇಮ್ಸ್ ಪೋಲ್ಕ್ರ ದುರಾಕ್ರಮಣ ನೀತಿಯನ್ನಾಗಲೀ ನಮ್ಮ ನಾಯಕರು ಕಲಿಯುವುದು ಬೇಕಾಗಿರಲಿಲ್ಲ, ಬೇಕಾಗಿದ್ದುದು ರಾಷ್ಟ್ರದ ಹಿತಾಸಕ್ತಿಗಳ ಅರಿವು ಮತ್ತು ಅವುಗಳನ್ನು ನ್ಯಾಯಯುತವಾಗಿಯೇ ಸಾಧಿಸಿಕೊಳ್ಳುವ ಬದ್ಧತೆ. ಅವೆರಡೂ ಇಲ್ಲದಿದ್ದಲ್ಲಿ ಹಿಂದೆ ಸರಿದು ಉತ್ತಮರಿಗೆ ಜವಾಬ್ದಾರಿ ನೀಡುವ ವಿವೇಕ. ಇನ್ನು 1947-48ರಲ್ಲಿ ಕಾಶ್ಮೀರದ ಮೇಲೆ ಪಾಕಿಸ್ತಾನದ ದುರಾಕ್ರಮಣವನ್ನು ಮಾನ್ಯ ಮಾಡುವಂತೆ ಆ ರಾಜ್ಯದ ಬಹುದೊಡ್ಡ ಭಾಗವನ್ನು ಪಾಕಿಸ್ತಾನಿಗಳ ವಶದಲ್ಲೇ ಬಿಟ್ಟು ಕದನವಿರಾಮಕ್ಕೆ ಒಪ್ಪಿಕೊಂಡ ನೆಹರೂ ಆ ರಾಷ್ಟ್ರಹಿತಘಾತಕ ನಡೆಯಿಂದಾಗಿ ಅಫ್ಘಾನಿಸ್ತಾನದೊಂದಿಗೆ ನಮ್ಮ ಭೂಸಂಪರ್ಕವನ್ನು ಕತ್ತರಿಸಿದರು ಮತ್ತು ಪಾಕಿಸ್ತಾನ ಹಾಗೂ ಚೀನಾಗಳು ಭೂಸಂಪರ್ಕ ಸಾಧಿಸಿಕೊಳ್ಳುವಂತೆ ಮಾಡಿದರು! ಅದನ್ನು ಆ ಎರಡು ಶತ್ರುರಾಷ್ಟ್ರಗಳು ಹೇಗೆಲ್ಲಾ ಉಪಯೋಗಿಸಿಕೊಳ್ಳುತ್ತಿವೆ ಮತ್ತು ಅದರಿಂದಾಗಿ ನಮಗೆಂತಹ ಅಪಾಯಗಳು ಎದುರಾಗಿವೆ ಎನ್ನುವುದನ್ನು ಅನುಭವಿಸುತ್ತಲೇ ಇದ್ದೇವೆ.
ಇದರ ಜತೆಗೆ, ಸಿಂಧೂ, ಝೀಲಂ ಮತ್ತು ಚಿನಾಬ್ ನದಿಗಳ 80% ನೀರನ್ನು ಪಾಕಿಸ್ತಾನಕ್ಕೆ ಬಿಟ್ಟುಕೊಡುವ ಒಪ್ಪಂದಕ್ಕೆ ಸಹಿಹಾಕಿದ್ದಲ್ಲದೇ, ಅಷ್ಟು ನೀರನ್ನು ಹೇಗೆ ಬಳಸಿಕೊಳ್ಳುವುದು ಎಂದು ತೋಚದಿದ್ದ ಪಾಕಿಸ್ತಾನಕ್ಕೆ ತಾರರ್ಬೆಲಾ ಅಣೆಕಟ್ಟು ಕಟ್ಟಿಕೊಳ್ಳಲು ಮತ್ತು ನೀರಾವರಿ ಕಾಲುವೆಗಳನ್ನು ನಿರ್ವಿುಸಿಕೊಳ್ಳಲು 174 ಮಿಲಿಯನ್ ಡಾಲರ್ಗಳ ‘ನೆರವು’ ನೀಡಿದ ನೆಹರೂರ ನಡವಳಿಕೆಯನ್ನು ಹೇಗೆ ಅರ್ಥೈಸಬೇಕು? ಒಟ್ಟಿನಲ್ಲಿ ಅಮೆರಿಕಾದ ಪ್ರಾರಂಭಿಕ ನಾಯಕರು ತಮ್ಮ ರಾಷ್ಟ್ರಕ್ಕೆ ಹಾಕಿದ ಭದ್ರ ಬುನಾದಿಯನ್ನು ನಮ್ಮ ಪ್ರಾರಂಭಿಕ ನಾಯಕರು ರಾಷ್ಟ್ರನಿರ್ವಣ ಮಾಡಹೊರಟ ಬಗೆಗೆ ಒಮ್ಮೆ ಹೋಲಿಸಿ.