ನಾಲ್ಕನೆಯ ತಲೆಮಾರಿನ ಸಮರ ಮತ್ತು ನಾಗರಿಕ ಸಮಾಜ

asdasdasdfqW
Published on
ಐವತ್ತೆರಡು ವರ್ಷಗಳ ಹಿಂದೆ ತಾವು ತರಬೇತಿ ಪಡೆದು ಐಪಿಎಸ್ ಅಧಿಕಾರಿಯಾಗಿ ಹೊರಬಂದಿದ್ದ ಹೈದರಾಬಾದ್​ನ ಸರ್ದಾರ್ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿಯಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಕುಮಾರ್ ದೋವಲ್ ನವೆಂಬರ್ 12ರಂದು ಮಾಡಿದ ಭಾಷಣ ಈಗ ಸುದ್ದಿ ಮಾಡುತ್ತಿದೆ. ಐಪಿಎಸ್ ಪ್ರೊಬೇಷನರ್​ಗಳ 73ನೇ ಬ್ಯಾಚ್​ನ ಪಾಸಿಂಗ್ ಔಟ್ ಪರೇಡ್​ನಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡುತ್ತ ದೋವಲ್ ‘...ನಾಲ್ಕನೆಯ ತಲೆಮಾರಿನ ಸಮರದಲ್ಲಿ ನಾಗರಿಕ ಸಮಾಜ ಯುದ್ಧದ ಹೊಸ ಗಡಿ ಆಗಿದೆ’ ಎಂದು ಹೇಳಿದರು. ‘ಇಂತಹ ಅವಸ್ಥೆಯಿಂದ ನಾಗರಿಕ ಸಮಾಜವನ್ನು ರಕ್ಷಿಸುವುದು... ಆ ಮೂಲಕ ರಾಷ್ಟ್ರದ ಸುರಕ್ಷೆಯನ್ನು ಕಾಪಾಡುವುದು ನಿಮ್ಮ ಜವಾಬ್ದಾರಿ’ ಎಂದು ಹೊಸ ಐಪಿಎಸ್ ಅಧಿಕಾರಿಗಳಿಗೆ ಕರೆನೀಡಿದರು. ಅವರ ಮಾತುಗಳ ಅರ್ಥ ಮತ್ತು ಮಹತ್ವವನ್ನು ತಿಳಿಯಬೇಕಾದರೆ ನಾಲ್ಕನೆಯ ತಲೆಮಾರಿನ ಸಮರ ಅಂದರೇನು ಎಂದು ಅರಿಯಬೇಕು ಮತ್ತು ನಾಗರಿಕ ಸಮಾಜ ಯಾವುದು ಎಂದು ಗುರುತಿಸಬೇಕು.

ಇಂಗ್ಲಿಷ್​ನಲ್ಲಿ “Fourth Generation War” ಅಥವಾ ಚಿಕ್ಕದಾಗಿ ‘4gw‘ ಎನ್ನುವುದನ್ನು ಕನ್ನಡದಲ್ಲಿ ‘ನಾಲ್ಕನೆಯ ತಲೆಮಾರಿನ ಸಮರ’ ಅಥವಾ ಚಿಕ್ಕದಾಗಿ ‘4’ ಎಂದು ಕರೆಯೋಣ. ಆದಿಕಾಲದಿಂದ ಇಂದಿನವರೆಗೆ ಬದಲಾಗುತ್ತ ಬಂದಿರುವ ಕದನದ ಸ್ವರೂಪವನ್ನು ಪರಿಗಣಿಸಿ ಸಮರಗಳು ಐದು ತಲೆಮಾರುಗಳಲ್ಲಿ ವಿಕಸಿಸುತ್ತ ಬಂದಿವೆ ಎಂದು ಗುರುತಿಸಬಹುದು. ರಣಾಂಗಣದಲ್ಲಿ ಮುಖಾಮುಖಿಯಾದ ಪರಸ್ಪರ ವಿರೋಧಿ ಸೈನಿಕರು ಒಬ್ಬರ ಮೇಲೊಬ್ಬರು ಎರಗಿ ಮುಷ್ಟಿ, ಕಲ್ಲು, ದೊಣ್ಣೆ, ಕತ್ತಿ, ಭರ್ಜಿಗಳನ್ನು ಬಳಸಿ ಸೆಣಸುವುದು ಮೊದಲ ತಲೆಮಾರಿನ ಸಮರ. ನಂತರ ಆಧುನಿಕ ಕಾಲದಲ್ಲಿ ವಿಜ್ಞಾನದ ಸಹಾಯದಿಂದ ಮಾರಕಾಸ್ತ್ರಗಳ ಆವಿಷ್ಕಾರವಾಗತೊಡಗಿದಂತೆ ವಿವಿಧ ಬಗೆಯ ತುಪಾಕಿಗಳು, ಬಂದೂಕುಗಳನ್ನು ಬಳಸತೊಡಗಿದ್ದು ಎರಡನೆಯ ತಲೆಮಾರಿನ ಯುದ್ಧ ಎನಿಸಿಕೊಂಡಿತು. ಇಪ್ಪತ್ತನೆಯ ಶತಮಾನದಲ್ಲಿ ಯುದ್ಧವಿಮಾನಗಳು, ಕ್ಷಿಪಣಿಗಳು ಹಾಗೂ ಡ್ರೋನ್​ಗಳ ಮೂಲಕ ಯುದ್ಧಗಳು ನಡೆಯಲಾರಂಭಿಸಿದಾಗ ಅದು ಮೂರನೆಯ ತಲೆಮಾರಿನ ಯುದ್ಧ ಎನಿಸಿಕೊಂಡಿತು. ಒಟ್ಟಿನಲ್ಲಿ ವಿರೋಧಿ ಸೈನಿಕರು ದೈಹಿಕವಾಗಿ ಪರಸ್ಪರ ದೂರವಾಗುತ್ತ ಹೋದದ್ದನ್ನು, ಹಾಗೆಯೇ ಅವರ ಕೊಲ್ಲುವ ಸಾಮರ್ಥ್ಯ ಅಗಾಧವಾಗುತ್ತ ಸಾಗಿದ್ದನ್ನು ಕಾಣಬಹುದು. ಇವುಗಳಿಗೆ ಹೋಲಿಸಿದರೆ ನಾಲ್ಕನೆಯ ತಲೆಮಾರಿನ ಸಮರ ಸಂಪೂರ್ಣ ಭಿನ್ನವಾದುದು. ಇದರಲ್ಲಿ ಸೈನಿಕರೂ ಇರುವುದಿಲ್ಲ ಮತ್ತು ಬಹುತೇಕ ಸಂದರ್ಭಗಳಲ್ಲಿ ಯಾವುದೇ ಆಯುಧ ಅಸ್ತ್ರವೂ ಇರುವುದಿಲ್ಲ. ಹಾಗಿದ್ದರೆ ಈ ಸಮರ ನಡೆಯುವುದಾದರೂ ಹೇಗೆ?

‘ನಾಲ್ಕನೆಯ ತಲೆಮಾರಿನ ಸಮರ’ ಅಥವಾ ‘4ತಸ’ದಲ್ಲಿ ಶತ್ರುರಾಷ್ಟ್ರಗಳು ತಮ್ಮ ಸೈನಿಕರ ಮೂಲಕ ಭೌಗೋಳಿಕ ಗಡಿಯಲ್ಲಿ ನಮ್ಮನ್ನೆದುರಿಸುವುದಿಲ್ಲ. ಬದಲಾಗಿ ಅವು ನಮ್ಮ ದೇಶದ ಕೆಲಜನರನ್ನೇ ನಮ್ಮ ವಿರುದ್ಧ ತಮ್ಮ ಆಯುಧಗಳನ್ನಾಗಿ ಮಾಡಿಕೊಳ್ಳುತ್ತಾರೆ! ಯಾವುದೇ ಕಾರಣ ಅಥವಾ ಆಮಿಷದಿಂದಾಗಿ ಅವರ ಮಾತು ಕೇಳುವ ನಮ್ಮವರನ್ನೇ ನಮ್ಮ ನಡುವೆ ಅವಿಶ್ವಾಸ, ಅಶಾಂತಿ, ರಕ್ತಪಾತ ಉಂಟುಮಾಡಲು ಬಳಸಿಕೊಳ್ಳುತ್ತಾರೆ! ಆ ಮೂಲಕ ನಮ್ಮ ದೇಶ ಅನಗತ್ಯ ಅಂತಃಕಲಹಗಳಲ್ಲಿ ಬೆಂದು ಬಲಹೀನಗೊಳ್ಳುವಂತೆ ಮಾಡುತ್ತಾರೆ. ರಣರಂಗದಲ್ಲಿ ನೇರವಾಗಿ ಎದುರಿಸದೇ ಸೋಲಿಸುವ ಸರಳ ಹಾಗೂ

ಮಿತವ್ಯಯಕಾರಿ ಮಾರ್ಗ ಇದು! ಈ 4ತಸ ಬಗ್ಗೆ ವಿಸõತವಾಗಿ ಹೇಳುವ ಮೊದಲು ಐದನೆಯ ತಲೆಮಾರಿನ ಯುದ್ಧದ ಸೂಕ್ಷ್ಮ ಪರಿಚಯವನ್ನಿಲ್ಲಿ ಕೊಟ್ಟುಬಿಡುತ್ತೇನೆ. ಇತ್ತೀಚಿನ ದಿನಗಳಲ್ಲಿ ಸರ್ಕಾರ, ಅರ್ಥವ್ಯವಸ್ಥೆ ಹಾಗೂ ಸೇನೆಗೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಅಂತರ್ಜಾಲದ ಬಳಕೆ ವ್ಯಾಪಕವಾಗುತ್ತಿದೆಯಲ್ಲವೇ? ಇದರಿಂದಾಗಿ ಸಮಯ, ಸಂಪನ್ಮೂಲಗಳ ಬಳಕೆಯನ್ನು ಮಿತಿಗೊಳಿಸಬಹುದಾಗಿದೆ ಹಾಗೂ ಮಾಹಿತಿಗಳ ಕ್ರೋಡೀಕರಣ ಮತ್ತು ಹಂಚಿಕೆ ಸುಲಭವಾಗುತ್ತಿದೆ. ಆದರೆ ಇದೇ ಅಪಾಯಕ್ಕೂ ದಾರಿ ಮಾಡಿಕೊಡುತ್ತಿದೆ. ವಿದೇಶಗಳು ಅಥವಾ ಯಾವುದೇ ರಾಷ್ಟ್ರಕಂಟಕ ಸಂಘಟನೆಗಳು ಸೈಬರ್ ಅಟ್ಯಾಕ್, ಹ್ಯಾಕಿಂಗ್​ಗಳ ಮೂಲಕ ಸೂಕ್ಷ್ಮ ಮಾಹಿತಿಗಳನ್ನು ಕದಿಯುವ, ಹಾಳುಗೆಡಹುವ, ಆ ಮೂಲಕ ಸರ್ಕಾರದ, ಬ್ಯಾಂಕ್​ಗಳ, ವಿಮಾನಯಾನ ಸಂಸ್ಥೆಗಳ, ಸುರಕ್ಷಾಪಡೆಗಳ ಕೆಲಸಗಳನ್ನೇ ಅಸ್ತವ್ಯಸ್ತಗೊಳಿಸಿ ದೇಶದ ಮುಂಚಲನೆಯನ್ನು ನಿಲುಗಡೆಗೆ ತಂದುಬಿಡುವ ಅಪಾಯವೂ ಇದೆ. ಇಂತಹ ದಾಳಿಗೆ ಯಾವುದಾದರೂ ದೇಶ ಅಥವಾ ಅದರ ಒಂದು ಅಂಗ ಬಲಿಯಾದರೆ ಅದನ್ನು ‘ಐದನೆಯ ತಲೆಮಾರಿನ ಸಮರ’ ಎಂದು ಹೆಸರಿಸಲಾಗುತ್ತದೆ.

ಇಂದು ಐದೂ ತಲೆಮಾರಿನ ಸಮರಗಳನ್ನು ನಾವು ಕಾಣಬಹುದು. ಕಳೆದ ವರ್ಷ ಗಲ್ವಾನ್​ನಲ್ಲಿ ಚೀನೀ ಸೈನಿಕರು ವರ್ತಿಸಿದ ಬಗೆ ಮೊದಲ ತಲೆಮಾರಿನ ಸಮರಕ್ಕೆ ಉದಾಹರಣೆಯಾದರೆ ತನ್ನ ಮೇಲೆ ಭಾರತದಿಂದ ಸೈಬರ್ ಅಟ್ಯಾಕ್ ಆಗಿದೆಯೆಂದು ಎರಡುವಾರಗಳ ಹಿಂದೆ ಚೀನಾ ಅತ್ತದ್ದರಲ್ಲಿ ತುಸುವಾದರೂ ಹುರುಳಿದ್ದಲ್ಲಿ ಅದು ಐದನೆಯ ತಲೆಮಾರಿನ ಯುದ್ಧಕ್ಕೆ ಇತ್ತೀಚಿನ ಉದಾಹರಣೆಯಾಗುತ್ತದೆ. ನಡುವಿನ ಮೂರು ತಲೆಮಾರುಗಳ ಅದೆಷ್ಟೋ ಯುದ್ಧಗಳು ನಮ್ಮ ತಲೆಮಾರಿನಲ್ಲೇ ಘಟಿಸಿರುವ ಉದಾಹರಣೆಗಳಿವೆ.

ಈಗ ‘4ತಸ’ಕ್ಕೆ ಹಿಂದಿರುಗೋಣ. ಈ ಬಗೆಯ ಸಮರದಲ್ಲಿ ‘ಅವರ’ ಮಾತು ಕೇಳಿ ನಮಗೇ ಹಾನಿಯೆಸಗುವ ‘ನಮ್ಮವರು’ ಯಾರೆಂದು ನೋಡಬೇಕಾದರೆ ದೋವಲ್ ಉಲ್ಲೇಖಿಸಿದ ‘ಇಜಿಡಜ್ಝಿ ಖಟ್ಚಜಿಛಿಠಿಢ‘ ಅಂದರೆ ‘ನಾಗರಿಕ ಸಮಾಜ’ ಯಾವುದೆಂದು ನೋಡಬೇಕು. ಸೇನೆ ಮತ್ತು ಆಡಳಿತಶಾಹಿಯನ್ನೊಳಗೊಂಡ ಸರ್ಕಾರ ಮತ್ತದರ ಜತೆಗೆ ವ್ಯಾಪಾರಸ್ಥರನ್ನು ಹೊರತುಪಡಿಸಿ ನನ್ನ ನಿಮ್ಮಂತಹ ಸಾಮಾನ್ಯರೆಲ್ಲರೂ ಸೇರಿದಂತೆ ದೇಶದಲ್ಲಿರುವ ಉಳಿದೆಲ್ಲರೂ ನಾಗರಿಕ ಸಮಾಜದ ಪರಿಧಿಯೊಳಗೆ ಬರುತ್ತಾರೆ ಎನ್ನುವುದು ಸಾಮಾನ್ಯ ವ್ಯಾಖ್ಯೆ. ಆದರೆ ಇದನ್ನು ಸ್ವಲ್ಪ ಸೀಮಿತಗೊಳಿಸುವುದು ಅಧ್ಯಯನದ ಸ್ಪಷ್ಟತೆಯ ದೃಷ್ಟಿಯಿಂದ ಅಗತ್ಯವೆನಿಸುತ್ತದೆ. ಆ ಅರ್ಥದಲ್ಲಿ ಸಮಾಜದ ಆಗುಹೋಗುಗಳಿಗೆ ಸ್ಪಂದಿಸುವ ವಿವಿಧ ನಮೂನೆಯ ಧಾರ್ವಿುಕ ಹಾಗೂ ಸಾಮಾಜಿಕ ಕಾರ್ಯಕರ್ತರು, ವಿಚಾರವಾದಿಗಳು, ಚಿಂತಕರು, ಸಾಹಿತಿಗಳು, ಪತ್ರಕರ್ತರು, ಪ್ರಾಧ್ಯಾಪಕರು ನಾಗರಿಕ ಸಮಾಜದ ಅಂಗಗಳಾಗುತ್ತಾರೆ. ಇವರುಗಳಲ್ಲಿ ಕೆಲವರನ್ನು ವಿದೇಶಗಳು ಉಪಯೋಗಿಸಿಕೊಂಡು ನಮ್ಮ ದೇಶದ ವಿರುದ್ಧವೇ ಬಳಸುವ ಮೂಲಕ ‘4ತಸ’ ಅನ್ನು ಜಾರಿಯಲ್ಲಿಟ್ಟಿರುವುದನ್ನು ನಾವು ಕೆಲವು ದಶಕಗಳಿಂದಲೂ ನೋಡುತ್ತಿದ್ದೇವೆ. ಆ ಬಗೆಯಲ್ಲಿ ಇವರು ‘4ತಸ’ದಲ್ಲಿ ನಾವು ಹೋರಾಡಬೇಕಾಗಿರುವ ಹೊಸ ಗಡಿಗಳಾಗಿದ್ದಾರೆ ಅಂದರೆ ದೇಶರಕ್ಷಣೆಗಾಗಿ ದೇಶದ ಭೌಗೋಳಿಕ ಗಡಿಗಳ ಬದಲು ಇವರ ಕಾರ್ಯಕ್ಷೇತ್ರಗಳಲ್ಲಿ ನಾವಿಂದು ಹೋರಾಡ ಬೇಕಾಗಿದೆ. ಇದನ್ನು ಕೆಲವು ಉದಾಹರಣೆಗಳ ಮೂಲಕ ವಿವರವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ.

ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳೇ ಬಳಕೆಯಾಗುವ ನೇರ ಸಮರದಲ್ಲಿ ಭಾರತವನ್ನು ಎದುರಿಸಲಾಗುವುದಿಲ್ಲ ಎನ್ನುವುದನ್ನು 1971ರಲ್ಲಿ ಭಾರತಕ್ಕೆ ಸೋತು ಶರಣಾದ ಪಾಕಿಸ್ತಾನ ಅರಿತುಕೊಂಡಿತು. ತನ್ನ ಕಾದುವ ಶಕ್ತಿಯನ್ನು ವೃದ್ಧಿಗೊಳಿಸಿಕೊಳ್ಳಲು ಅದು ಯುದ್ಧ ಮುಗಿದ ಒಂದೇ ತಿಂಗಳಲ್ಲಿ ಅಣ್ವಸ್ತ್ರ ಯೋಜನೆ ರೂಪಿಸಿತು. ಆದರೆ ಅದು ಆ ಮಾರ್ಗದಲ್ಲಿ ಇನ್ನೂ ಪುಟ್ಟ ಹೆಜ್ಜೆಗಳನ್ನಿಡತೊಡಗಿದ್ದಾಗಲೇ ಭಾರತ ಅಣ್ವಸ್ತ್ರದ ಯಶಸ್ವಿ ಪರೀಕ್ಷೆ ನಡೆಸಿಬಿಟ್ಟಿತು. ಕಂಗಾಲಾದ ಪಾಕಿಸ್ತಾನ ಆಗ ಆರಿಸಿಕೊಂಡದ್ದು ನಮ್ಮ ನಾಗರಿಕ ಸಮಾಜವನ್ನು. ಅದಕ್ಕೊಂದು ಸರ್ಕಾರಿ ನೀತಿಯ ಸ್ವರೂಪ ನೀಡಿದ್ದು ಪಾಕ್ ಸೇನೆಯ ಕುಖ್ಯಾತ ‘ಇಂಟರ್ ಸರ್ವೀಸಸ್ ಇಂಟಲಿಜೆನ್ಸ್’ (ಐಎಸ್​ಐ) ಸಂಸ್ಥೆಯ ನಿರ್ದೇಶಕ ಹಮೀದ್ ಗುಲ್, ‘ಭಾರತ ಸಾವಿರ ಗಾಯಗಳಿಂದ ರಕ್ತ ಹರಿಸಿಕೊಂಡು ಒದ್ದಾಡುವಂತೆ ಮಾಡುತ್ತೇವೆ’ ಎಂದು ಹೇಳುವ ಮೂಲಕ. ಅದರಂತೆ ಮೊದಲಿಗೆ ಪಂಜಾಬ್​ನಲ್ಲಿ ಭಯೊತ್ಪಾದನೆಯನ್ನು ಪಾಕಿಸ್ತಾನ ಪ್ರಾಯೋಜಿಸಿತು. ನಂತರ ಅದನ್ನು ಕಾಶ್ಮೀರದಲ್ಲಿ ವಿಸ್ತರಿಸಿತು. ಅದರ ನಡುವೆ ಸಿಮಿ, ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೊಯ್ಬಾ ಮುಂತಾದ ಭಯೋತ್ಪಾದಕ ಸಂಘಟನೆಗಳ ಮೂಲಕ ಮುಂಬೈ, ದೆಹಲಿ ಸೇರಿದಂತೆ ಭಾರತದ ಹಲವಾರು ನಗರಗಳಲ್ಲಿ ಹಿಂಸೆ ತಾಂಡವವಾಡುವಂತೆ ಮಾಡತೊಡಗಿತು. ಹಮೀದ್ ಗುಲ್ ಹಾಕಿಕೊಟ್ಟ ಯೋಜನೆಗನುಗುಣವಾಗಿ ಭಾರತ ಸಾವಿರ ಗಾಯಗಳಿಂದ ರಕ್ತ ಹರಿಸಿಕೊಂಡು ಒದ್ದಾಡತೊಡಗಿತು. ಹೀಗೆ ಭಾರತದ ವಿರುದ್ಧ ‘4ತಸ’ವನ್ನು ಪಾಕಿಸ್ತಾನ ಯಶಸ್ವಿಯಾಗಿ ಚಾಲನೆಗೊಳಿಸಿತು. ನೇರ ಯುದ್ಧವಿಲ್ಲ, ತನ್ನ ಸ್ವಂತ ಸೈನಿಕರು ರಣಾಂಗಣಕ್ಕಿಳಿಯಲಿಲ್ಲ, ಖರ್ಚೂ ಅತೀ ಕಡಿಮೆ! ಇದಕ್ಕಾಗಿ ಆ ದೇಶ ಉಪಯೋಗಿಸಿಕೊಂಡದ್ದು ಇಲ್ಲಿದ್ದ ದಾರಿ ತಪ್ಪಿದ್ದ ಹಾಗೂ ದಾರಿತಪ್ಪಲು ತಯಾರಾಗಿದ್ದ ಒಂದಷ್ಟು ಧಾರ್ವಿುಕ ನೇತಾರರು ಹಾಗೂ ಕಾರ್ಯಕರ್ತರು, ವಿಚಾರವಾದಿಗಳು, ಪತ್ರಕರ್ತರು ಮತ್ತು ಸಾಹಿತಿಗಳು. ಕಾಶ್ಮೀರ ಕಣಿವೆಯಲ್ಲಿ ಅಶಾಂತಿಯೆಬ್ಬಿಸಲೆಂದೇ 2015-16ರ ಒಂದೇ ಸಾಲಿನಲ್ಲಿ ಪಾಕಿಸ್ತಾನ ಪ್ರತ್ಯೇಕತಾವಾದಿಗಳ ಕೈಗೆ ಹಾಕಿದ್ದು ಬರೋಬ್ಬರಿ 800 ಕೋಟಿ ರೂಪಾಯಿಗಳು! ಇನ್ನು ಅದರ ಹಿಂದಿನ ಕಾಲು ಶತಮಾನದಲ್ಲಿ, ಅದಕ್ಕೂ ಹಿಂದಿನ ಒಂದು ದಶಕದಲ್ಲಿ ಅದು ಪಂಜಾಬ್​ನಲ್ಲಿ ಖರ್ಚು ಮಾಡಿದ ಹಣದ ಲೆಕ್ಕ ಸಿಗುವುದು ಅಶಕ್ಯ. ಆದಾಗ್ಯೂ ಅದು ಭಾರತದೊಂದಿಗೆ ನೇರಯುದ್ಧದಲ್ಲಿ ಖರ್ಚು ಮಾಡಬಹುದಾಗಿದ್ದುದಕ್ಕಿಂತ ತೀರಾ ತೀರಾ ಅಲ್ಪ.

ಹೀಗೆ ಪಾಕಿಸ್ತಾನದಿಂದ ಬಂದ ಹಣವನ್ನು ಪ್ರತ್ಯೇಕತಾವಾದಿಗಳು ಉಪಯೋಗಿಸಿದ್ದು ಒಬ್ಬೊಬ್ಬರಿಗೆ ತಿಂಗಳಿಗೆ ಐದರಿಂದ ಎಂಟು ಸಾವಿರ ರೂಪಾಯಿ ‘ಸಂಬಳ’ ನೀಡಿ ನೂರಾರು ನಿರುದ್ಯೋಗಿ ಯುವಕರನ್ನು ಕಲ್ಲುತೂರಾಟಕ್ಕೆಂದು ನೇಮಿಸಿಕೊಂಡದ್ದಕ್ಕೆ, ಪ್ರತಿಭಟನೆ, ಬಂದ್​ಗಳನ್ನು ಆಯೋಜಿಸುವುದಕ್ಕೆ ಮತ್ತು ಐಷಾರಾಮಿ ಜೀವನ ನಡೆಸುವುದಕ್ಕೆ! ಭಾರತದ ವಿರುದ್ಧವಾಗಿ, ಕಾಶ್ಮೀರಿಗಳ ‘ಆಜಾದಿ’ಯ ಪರವಾಗಿ ಉದ್ದುದ್ದ ಲೇಖನ ಬರೆದ, ವಾರ್ತಾವಾಹಿನಿಗಳಲ್ಲಿ ಕೂಗಾಡಿದ ವಿಚಾರವಾದಿಗಳಿಗೆ, ಪತ್ರಕರ್ತರಿಗೆ, ಪ್ರಾಧ್ಯಾಪಕರುಗಳಿಗೆ ಸಿಕ್ಕಿದ ಹಣದ ಲೆಕ್ಕ ಇಲ್ಲ. ಆದರೆ ಅದರಲ್ಲಿ ಬಹುಪಾಲು 2016 ನವೆಂಬರ್ 8ರಂದು ವ್ಯರ್ಥ ಕಾಗದವಾದದ್ದು ಈಗ ಇತಿಹಾಸ.

ಧಾರ್ವಿುಕ ವ್ಯಕ್ತಿಗಳಲ್ಲಿ ನಮಗೆ ಸಿಗುವ ಪ್ರಮುಖ ಉದಾಹರಣೆಗಳಲ್ಲೊಂದು ಝುಕೀರ್ ನಾಯಕ್. ಧಾರ್ವಿುಕ ಎನ್​ಜಿಓಗಳಿಗೆ ಸಂಬಂಧಿಸಿದ ಒಂದು ಪ್ರಕರಣ ಇಲ್ಲಿ ಉಲ್ಲೇಖನಿಯ. ರಷ್ಯಾದ ನೆರವಿನಿಂದ ತಮಿಳುನಾಡಿನ ಕೂಡಂಕುಲಂನಲ್ಲಿ ನಿರ್ವಣವಾಗುತ್ತಿದ್ದ ಅಣುಸ್ಥಾವರದ ವಿರುದ್ಧ ಕೆಲವು ಪರಿಸರವಾದಿ ಎನ್​ಜಿಓಗಳು 2012ರ ಆದಿಯಲ್ಲಿ ವ್ಯಾಪಕ ಪ್ರತಿಭಟನೆಗಳನ್ನು ನಡೆಸಿದ್ದರು. ಆ ಪ್ರತಿಭಟನೆಗಳ ಹಿಂದೆ ವಿದೇಶೀ ಹಣ ಕೆಲಸ ಮಾಡುತ್ತಿದೆ ಎಂದು ಪ್ರಧಾನಿ ಮನ್​ವೋಹನ್ ಸಿಂಗ್ ಫೆಬ್ರವರಿ 12ರಂದು ಹೇಳಿದರು. ನಂತರ ಅವರ ಮಾತನ್ನು ತನಿಖೆ ಸಾಬೀತುಪಡಿಸಿತು. ಧಾರ್ವಿುಕ ಹಾಗೂ ಸಾಮಾಜಿಕ ಪ್ರಗತಿಪರ ಕಾರ್ಯಕ್ರಮಗಳಿಗಾಗಿ ಅಮೆರಿಕ ಮತ್ತು ಯುರೋಪ್​ನಿಂದ ಪಡೆದುಕೊಂಡ ದೇಣಿಗೆಗಳನ್ನು ಮೂರು ಎನ್​ಜಿಓಗಳು ದುರುಪಯೋಗಪಡಿಸಿಕೊಂಡಿದ್ದವು! ನಕ್ಸಲರಿಗೆ, ನಗರನಕ್ಸಲರಿಗೆ ಚೀನಾದಿಂದ ಮತ್ತು ಪರಿಸರವಾದದ ಸೋಗಿನ ಅಂತಾರಾಷ್ಟ್ರೀಯ ಎಡಪಂಥೀಯ ಸಂಘಟನೆಗಳಿಂದ, ಅರಾಜಕತಾವಾದಿ ಬಿಲಿಯನೇರ್ ಜಾರ್ಜ್ ಸೊರೇಸ್​ನ ‘ಓಪನ್ ಸೊಸೈಟಿ ಫೌಂಡೇಷನ್ಸ್’ನಿಂದ ಮಿಲಿಯನ್​ಗಟ್ಟಲೆ ಹಣ ಬರುತ್ತಿದ್ದುದು ಈಗ ಬಹಿರಂಗ ರಹಸ್ಯ. ಆ ಹಣವನ್ನು ಇಲ್ಲಿ ಅರಾಜಕತೆ ಉಂಟುಮಾಡಲು ಅದಕ್ಕೆಂದೇ ಹುಟ್ಟುಹಾಕಲಾಗಿದ್ದ ನೂರಾರು ಎನ್​ಜಿಓಗಳು ಬೇಕಾಬಿಟ್ಟಿಯಾಗಿ ಚೆಲ್ಲುತ್ತಿದ್ದುವು. ಇದಕ್ಕೆ ಇತ್ತೀಚಿನ ಉದಾಹರಣೆ ಕಳೆದ ವರ್ಷದ ಆದಿಯಲ್ಲಿ ದೆಹಲಿಯಲ್ಲಿ ಸಿಎಎ ವಿರುದ್ಧ ನಡೆದ ಪ್ರತಿಭಟನೆ ಮತ್ತು ಹಿಂಸೆ.

ಹಾಗೆ ವಿದೇಶೀ ಹಣದಿಂದಲೇ ಅದೆಷ್ಟೋ ತಥಾಕಥಿತ ವಿಚಾರವಾದಿಗಳು, ಮಾನವಹಕ್ಕುಗಳ ನಕಲಿ ಹೋರಾಟಗಾರ/ಗಾರ್ತಿಯರು ದಶಕಗಳಿಂದಲೂ ಜೀವ ಹಿಡಿದುಕೊಂಡಿದ್ದರು. ಕಾಶ್ಮೀರದಲ್ಲಿ ಸೇನಾ ಕಾರ್ಯಾಚರಣೆ ಆದಾಗಲೆಲ್ಲ ಉಗ್ರವಾದಿಗಳ ಪರವಾಗಿ, ದೊಕ್ಲಾಂ ಬಿಕ್ಕಟ್ಟಿನ ಸಮಯದಲ್ಲಿ ಚೀನಾ ಪರವಾಗಿ ಗಲಾಟೆಯೆಬ್ಬಿಸಿದವರು ಇವರೇ. ನಗರನಕ್ಸಲರಂತೂ ಪ್ರಧಾನಮಂತ್ರಿಗಳನ್ನು ಹತ್ಯೆಗೈಯುವ, 2025ರ ಹೊತ್ತಿಗೆ ದೇಶದಲ್ಲಿ ರಕ್ತಕ್ರಾಂತಿ ಎಸಗಿ ಸರ್ಕಾರವನ್ನು ತಮ್ಮ ಕೈಗೆ ತೆಗೆದುಕೊಳ್ಳುವ ಸಂಚು ಹೂಡಿದ್ದರು! ಈ ಸಂಚಿನಲ್ಲಿ ಭಾಗಿಯಾಗಿದ್ದವರಲ್ಲಿ ಎನ್​ಜಿಓಗಳನ್ನು ಹುಟ್ಟುಹಾಕಿಕೊಂಡವರಿದ್ದರು, ವಿಶ್ವವಿದ್ಯಾಲಯಗಳ ಅಧ್ಯಾಪಕರಿದ್ದರು, ಪತ್ರಕರ್ತರಿದ್ದರು! ಇವರೆಲ್ಲರೂ ಹಾಕಿಕೊಂಡಿದ್ದ ಮುಖವಾಡ ಸಮಾಜಸೇವೆ!

ವಿದೇಶಗಳು ಹಾಗೂ ವಿದೇಶೀ ಅರಾಜಕತಾವಾದಿಗಳು ಈ ದೇಶವನ್ನು ಹಂತಹಂತವಾಗಿ ಬಲಹೀನಗೊಳಿಸಿ ಮಂಡಿಯೂರಿಸಲು ಆರಂಭಿಸಿದ ‘4ತಸ’ದ ಕೆಲ ಮುಖಗಳಿವು. ಸೆಪ್ಟೆಂಬರ್ 2020ರಲ್ಲಿ ಸರ್ಕಾರ ಫಾರಿನ್ ಎಕ್ಸ್​ಚೇಂಜ್ ರೆಗ್ಯುಲೇಶನ್ ಆಕ್ಟ್(ಫೆರಾ)ಗೆ ತಂದ ತಿದ್ದುಪಡಿ ಇಂತಹ ದುರ್ವ್ಯವಹಾರಗಳಿಗೆ ಕಡಿವಾಣ ಹಾಕಿದೆ. ಅಂದಿನಿಂದ ನೂರಾರು ನಕಲಿ ಪರಿಸರವಾದಿ, ಮಾನವಹಕ್ಕು ಎನ್​ಜಿಓಗಳು ಬಾಗಿಲು ಮುಚ್ಚಿಕೊಂಡಿವೆ; ವಿದೇಶಿ ಹಣ ತಿಂದು ದೇಶ ದ್ರೋಹಗೈಯುತ್ತಿದ್ದ ಸಾವಿರಾರು ಜನ ‘ಭಾರತೀಯರು’ ಈಗ ನಿರುದ್ಯೋಗಿಗಳಾದ್ದಾರೆ. ಇಂತಹವರನ್ನು ಇನ್ನು ಮುಂದೆಯೂ, ಸಾಧ್ಯವಾದರೆ ಸರಿದಾರಿಗೆ ತರಲು, ಆಗದಿದ್ದರೆ ಹತ್ತಿಕ್ಕಲು, ಆ ಮೂಲಕ ‘4ತಸ’ದಲ್ಲಿ ಭಾರತಕ್ಕೆ ವಿಜಯ ತಂದುಕೊಡಲು ದೋವಲ್ ಹೊಸ ಐಪಿಎಸ್ ಅಧಿಕಾರಿಗಳಿಗೆ, ಅವರ ಮೂಲಕ ದೇಶದ ಪ್ರಜ್ಞಾವಂತ ಪ್ರಜೆಗಳಿಗೆ ಕರೆನೀಡಿದ್ದಾರೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net