

ಜನತೆಗೆ ಸೀಮಿತ ಪ್ರಮಾಣದಲ್ಲಿ ಒಂದಿಡೀ ವರ್ಷ ಆಹಾರ ಪೂರೈಸುವ ಸಾಮರ್ಥ್ಯ ಈ ದೇಶಕ್ಕಿದೆ. ಆದರೆ ಕೋಟಿಗಟ್ಟಲೆ ಜನರಿಗೆ ಸೋಂಕು ತಗುಲಿದರೆ ಮತ್ತದು ಇಲ್ಲಿನ ಅಗಾಧ ಜನಸಂಖ್ಯೆಯಲ್ಲಿ ನಿಯಂತ್ರಣವಿಲ್ಲದೆ ಹರಡುತ್ತ ಹೋದರೆ ಅದನ್ನು ನಿಭಾಯಿಸುವ ಸಾಮರ್ಥ್ಯ ದೇಶಕ್ಕಿಲ್ಲ. ವೈದ್ಯಕೀಯ ವ್ಯವಸ್ಥೆ ಕುಸಿದುಬಿದ್ದು ಜನ ಹುಳುಗಳಂತೆ ಸಾಯುವ ಪರಿಸ್ಥಿತಿ ಉಂಟಾಗುತ್ತದೆ.
ಅಮೆರಿಕದಲ್ಲಿ ವೈರಸ್ನ ಸಾಮುದಾಯಿಕ ಪ್ರಸರಣ ಆರಂಭವಾಗಿದೆ ಎಂಬ ವರದಿ ಬಂದದ್ದು ಮಾರ್ಚ್ 2ರಂದು. ಆದರೂ ಅಲ್ಲಿ ಲಾಕ್ಡೌನ್ ಜಾರಿಗೆ ಬಂದದ್ದು ಹತ್ತು ದಿನಗಳ ನಂತರ. ಅಷ್ಟರಲ್ಲಾಗಲೇ ವೈರಸ್ ದೇಶದಾದ್ಯಂತ ವ್ಯಾಪಕವಾಗಿ ಹರಡಿಹೋಗಿತ್ತು. ಸೋಂಕಿನ ಹೊಡೆತ ತೀವ್ರವಾಗಿ ತಟ್ಟಿದ್ದು ನ್ಯೂಯಾರ್ಕ್ ನಗರಕ್ಕೆ. ಅಲ್ಲಿ ಕರೊನಾ ಅಮೆರಿಕನ್ ಸಮಾಜದ ಕಪು್ಪ ಮುಖವೊಂದನ್ನು ಬಯಲು ಮಾಡಿತು. ತನ್ನ ಹರಡುವಿಕೆಯಲ್ಲಿ ವೈರಸ್ ಯಾವುದೇ ತಾರತಮ್ಯ ತೋರದಿದ್ದರೂ ಸೋಂಕಿತರ ಬಗ್ಗೆ ನ್ಯೂಯಾರ್ಕ್ನ ವೈದ್ಯಕೀಯ ಮತ್ತು ನಾಗರಿಕ ಆಡಳಿತ ವ್ಯವಸ್ಥೆ ತನ್ನ ತಾರತಮ್ಯವನ್ನು ಢಾಳಾಗಿಯೇ ಪ್ರದರ್ಶಿಸಿತು. ಕಪು್ಪವರ್ಣೀಯ ಮತ್ತು ಹಿಸ್ಪಾ್ಯನಿಕ್ಸ್ (ಸ್ಪಾ್ಯನಿಷ್ ಮೂಲದವರು) ಜನರಿಗೆ ಅಗತ್ಯ ವೈದ್ಯಕೀಯ ಸೇವೆ ಸೂಕ್ತ ಸಮಯದಲ್ಲಿ ದೊರೆಯಲಿಲ್ಲ. ಶೇಕಡ 70ರಷ್ಟು ವರ್ಣಿಯ ಮತ್ತು ಶೇಕಡ 47ರಷ್ಟು ಹಿಸ್ಪಾ್ಯನಿಕ್ಸ್ ಸೋಂಕಿತರು ತಾರತಮ್ಯಕ್ಕೊಳಗಾದರು ಎಂದು ಒಂದು ವರದಿ ಹೇಳುತ್ತದೆ. ಪರಿಣಾಮವಾಗಿ ಮೃತಪಟ್ಟವರಲ್ಲಿ ಹೆಚ್ಚಿನವರು ಆ ಎರಡು ಜನಾಂಗದವರೇ. ಏಷಿಯನ್ ಮೂಲದ ಸೋಂಕಿತರೂ ತಾರತಮ್ಯಕ್ಕೊಳಗಾದರು ಎಂಬ ವರದಿಯಿದೆ. ಪಶ್ಚಿಮದ ಆ ಧನಶ್ರೀಮಂತ ರಾಷ್ಟ್ರ ಮಾನವೀಯ ಮೌಲ್ಯಶ್ರೀಮಂತವಾಗಲು ಇನ್ನೆಷ್ಟು ಅಬ್ರಹಾಂ ಲಿಂಕನ್ನರು, ಮಾರ್ಟಿನ್ ಲೂಥರ್ ಕಿಂಗ್ಗಳು ಅವತರಿಸಬೇಕಾಗಿದೆಯೋ.
ಇದನ್ನೂ ಓದಿ ರಾಜ್ಯದಲ್ಲಿ ಮೇ 31ರವರೆಗೂ ಇರಲಿದೆ ಮಳೆಯ ಅಬ್ಬರ
ನ್ಯೂಯಾರ್ಕ್ ನಗರದ ಸ್ಥಿತಿ ಹೆಚ್ಚು ಕಡಿಮೆ ಇಡೀ ದೇಶದಲ್ಲಿ ಒಂದಲ್ಲ ಒಂದು ಪ್ರಮಾಣದಲ್ಲಿ ಕಾಣಿಸಿದೆ. ಜತೆಗೆ ಲಾಕ್ಡೌನ್ ಅಮೆರಿಕದ ಸಂವಿಧಾನಕ್ಕೆ ವಿರುದ್ಧ ಎಂದು ಸಾವಿರಾರು ಜನ ವಿವಿಧ ನಗರಗಳಲ್ಲಿ ಪ್ರದರ್ಶನಕ್ಕೂ ಇಳಿದರು! ಹೀಗೆ ವಾದಿಸಿದವರಲ್ಲಿ ಒಹಾಯೋ ರಾಜ್ಯದ ಮುಖ್ಯ ನ್ಯಾಯಾಲಯದ ನಾಯಾಧೀಶರೊಬ್ಬರೂ ಇದ್ದರು! ಹೀಗೆ ಲಾಕ್ಡೌನ್ಗೆ ಸಿಕ್ಕಿದ ವ್ಯಾಪಕ ನಕಾರಾತ್ಮಕ ಪ್ರತಿಕ್ರಿಯೆಯ ಫಲವನ್ನು ಅಮೆರಿಕ ಅನುಭವಿಸುತ್ತಿದೆ, ಸೋಂಕಿತರ ಹಾಗೂ ಮೃತರ ಪ್ರಮಾಣ ಭಯಾನಕವಾಗಿ ಏರುತ್ತಿದೆ.
ನಮ್ಮಲ್ಲಿ ಸಾಮುದಾಯಿಕ ಪ್ರಸರಣದ ಸಾಧ್ಯತೆ ದೂರದಲ್ಲಿದ್ದಾಗಲೇ ಕೇಂದ್ರ ಸರ್ಕಾರ ಲಾಕ್ಡೌನ್ ವಿಧಿಸಿತು. ಪರಿಣಾಮವಾಗಿ ಇಂದು ಮುಂಬೈ ಸೇರಿ ದೇಶದ ಬೆರಳೆಣಿಕೆಯಷ್ಟು ಸ್ಥಳಗಳಲ್ಲಿ ಮಾತ್ರ ಸಣ್ಣಪ್ರಮಾಣದಲ್ಲಿ ಸಾಮುದಾಯಿಕ ಪ್ರಸರಣ ಕಾಣಿಸಿಕೊಂಡಿದೆ. ಒಂದುವೇಳೆ ಸೂಕ್ತ ಸಮಯದಲ್ಲಿ ಲಾಕ್ಡೌನ್ ವಿಧಿಸದೇ ಹೋಗಿದ್ದಲ್ಲಿ ಕರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಈ ದೇಶದ ಜನಸಂಖ್ಯೆಯ ಗಾತ್ರ ಮತ್ತು ಸಾಂದ್ರತೆಯೇ ನಮ್ಮ ಪ್ರಥಮ ವೈರಿಯಾಗುತ್ತಿತ್ತು.
ವಿಷಯವನ್ನು ಮುಂದೆ ಕೊಂಡೊಯ್ಯುವ ಮೊದಲು ಮತ್ತು ಮುಂದಿನ ವಿಶ್ಲೇಷಣೆಗೆ ಪೂರಕವಾಗಿ, ನಮ್ಮಲ್ಲಿನ ಜನಸಂಖ್ಯೆ ತಂದೊಡ್ಡಿರುವ ಅಪಾಯದ ಕಿರುಪರಿಚಯ ಅಗತ್ಯ. 60 ವರ್ಷಗಳ ಹಿಂದೆ ದೇಶದ ಜನಸಂಖ್ಯೆ 50 ಕೋಟಿಯನ್ನು ಸಮೀಪಿಸಿದಾಗ ‘ಜನಸಂಖ್ಯಾಸ್ಪೋಟ’ವನ್ನು ತಡೆಯಲೇಬೇಕು ಎನ್ನುವುದು ಸರ್ಕಾರದ ಮಂತ್ರವಾಯಿತು. ಅದರಿಂದಾಗಿಯೇ 1962ರಲ್ಲಿ ಪ್ರಾರಂಭವಾದ ಮೂರನೆಯ ಪಂಚವಾರ್ಷಿಕ ಯೋಜನೆಯ ಪ್ರಧಾನ ಆದ್ಯತೆ ಜನಸಂಖ್ಯೆಯ ನಿಯಂತ್ರಣವಾಯಿತು. ಆಗ ಸರ್ಕಾರಿ ಪ್ರಕಟಣೆಗಳಲ್ಲಿ, ಅಂಚೆಚೀಟಿಗಳಲ್ಲಿ ಅಬ್ಬರದಿಂದ ಪ್ರಾರಂಭವಾದ ‘ಕುಟುಂಬ ಯೋಜನೆ’ 1970ರ ದಶಕದವರೆಗೂ ಸಾಕಷ್ಟು ಸದ್ದು ಮಾಡುತ್ತಿತ್ತು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಂತೂ ‘ಸೂಪರ್ ಪ್ರೖೆಮ್ ಮಿನಿಸ್ಟರ್’ ಸಂಜಯ್ ಗಾಂಧಿ ‘ನಸ್ಬಂದಿ’ಯನ್ನು ಒಂದು ಗೀಳಾಗಿಸಿಕೊಂಡದ್ದು ಈಗ ಹೆಚ್ಚಿನವರಿಗೆ ನೆನಪಿರಲಿಕ್ಕಿಲ್ಲ. ನಂತರದ ದಿನಗಳಲ್ಲಿ ಜನಸಂಖ್ಯೆ 75, 100, 125ರ ಮೈಲಿಗಲ್ಲುಗಳನ್ನು ಶರವೇಗದಲ್ಲಿ ಲಂಘಿಸಿ ಈಗ 140 ಕೋಟಿಯನ್ನು ಸಮೀಪಿಸಿದೆ. 2030ರ ಹೊತ್ತಿಗೆ ನಾವು ಚೀನಾವನ್ನು ಹಿಂದಿಕ್ಕುತ್ತೇವಂತೆ. ಇಷ್ಟಾಗಿಯೂ ಜನಸಂಖ್ಯಾ ನಿಯಂತ್ರಣದ ಮಾತೇ ಇಲ್ಲ! ಪರಿಣಾಮವಾಗಿ ಇಂದು ಭೂಗೋಳದ ಶೇಕಡ 2 ಭೂಭಾಗವನ್ನಷ್ಟೇ ಹೊಂದಿರುವ ಭಾರತದಲ್ಲಿ ಜಗತ್ತಿನ ಶೇಕಡ 17.5 ಜನ ವಾಸಿಸುತ್ತಿದ್ದಾರೆ! ಚೀನಾ ಮತ್ತು ಅಮೆರಿಕಗಳು ಭೂಭಾಗದ ದೃಷ್ಟಿಯಿಂದ ನಮ್ಮ ದೇಶಕ್ಕಿಂತಲೂ ಮೂರು ಪಟ್ಟು ವಿಸ್ತಾರವಾಗಿವೆ. ಆದರೆ ಚೀನಾದಲ್ಲಿ ನಮಗಿಂತ ಕೇವಲ ಐದು ಕೋಟಿಯಷ್ಟೇ ಹೆಚ್ಚು ಜನರಿದ್ದರೆ ಅಮೆರಿಕದ ಜನಸಂಖ್ಯೆ ನಮ್ಮದರ ಕಾಲುಭಾಗವೂ ಇಲ್ಲ! ಈ ಅಂಕಿಅಂಶಗಳು ನಮ್ಮ ಜನಸಂಖ್ಯೆಯ/ಜನಸಾಂದ್ರತೆಯ ಕರಾಳ ಮುಖವೊಂದನ್ನು ನಮ್ಮೆದುರು ಇಡುತ್ತವೆ.
ಜನಸಂಖ್ಯೆಯ ಅತಿ ಸಾಂದ್ರತೆಯಿಂದಾಗಿಯೇ ಇಲ್ಲಿ ಸೋಂಕು ವೇಗವಾಗಿ ಹರಡುವ ಅಪಾಯವಿತ್ತು. ಇದನ್ನು ಗಮನಿಸಿಯೇ ಕೆಲ ಪಾಶ್ಚಾತ್ಯ ವಿಶ್ಲೇಷಕರು ‘ಭಾರತದಲ್ಲಿ ಕೋವಿಡ್-19 ಸುನಾಮಿ ಏಳಲಿದೆ’ ಎಂದು ಎಚ್ಚರಿಸಿದ್ದರು. ಆ ಅಪಾಯವನ್ನು ಇಲ್ಲಿಯವರೆಗೆ ದೂರ ನಿಲ್ಲಿಸಿದ್ದೇ ಸೂಕ್ತ ಸಮಯದಲ್ಲಿ ಜಾರಿಗೆ ಬಂದ ಲಾಕ್ಡೌನ್. ಸಮಾಧಾನದ ವಿಷಯವೆಂದರೆ ದೇಶದ ಜನರೂ ಲಾಕ್ಡೌನ್ ನಿಯಮಗಳನ್ನು ಬಹುಪಾಲು ನಿಷ್ಠೆಯಿಂದಲೇ ಪಾಲಿಸಿದರು. ಇಲ್ಲದಿದ್ದರೆ ಇಷ್ಟರ ಹೊತ್ತಿಗೆ ಇಲ್ಲಿ ಸೋಂಕಿತರ ಸಂಖ್ಯೆ ಒಂದು ಕೋಟಿಯನ್ನು ದಾಟುತ್ತಿದ್ದುದು ನಿಶ್ಚಿತ. ಮುಂದಿನ ದಿನಗಳಲ್ಲಿ ಸೋಂಕಿನ ನಾಗಾಲೋಟ ಮತ್ತಷ್ಟು ವೇಗವಾಗಿಬಿಡುತ್ತಿತ್ತು. ಆಗ ಏಳಬಹುದಾಗಿದ್ದ ಸುನಾಮಿಯನ್ನು ತಡೆಯಲು ನಮ್ಮ ವ್ಯವಸ್ಥೆ ಸಶಕ್ತವಾಗಿರುತ್ತಿತ್ತೇ ಎನ್ನುವುದು ಅನುಮಾನ. ಅತ್ಯಲ್ಪ ಕಾಲದಲ್ಲಿ ಅತಿಶೀಘ್ರವಾಗಿ ಸೋಂಕು ಹರಡಿದ್ದರೆ ನಮ್ಮ ವೈದ್ಯಕೀಯ ವ್ಯವಸ್ಥೆಯ ಮೇಲೆ ಅತಿಯಾದ ಒತ್ತಡ ಬೀಳುತ್ತಿದ್ದುದು ನಿಶ್ಚಿತ.
ವಾಸ್ತವ ಹೀಗಿರುವಾಗ, ಲಾಕ್ಡೌನ್ ವಿರುದ್ಧದ ದನಿಗಳು ಕೆಲ ಅತಿಶಿಕ್ಷಿತ ಜನರಿಂದಲೇ ಬರುತ್ತಿರುವುದೊಂದು ವಿಪರ್ಯಾಸ. ತೈವಾನ್ನಂಥ ಪುಟ್ಟ ದೇಶಗಳ ಉದಾಹರಣೆಯನ್ನಿತ್ತು ಜನರ ಚಿಂತನೆಯನ್ನು ಅಡ್ಡದಾರಿಗೆ ಎಳೆಯಲು ಇವರು ಪ್ರಯತ್ನಿಸಿದ್ದುಂಟು. ತೈವಾನ್ನಲ್ಲಿ ಜನಸಾಂದ್ರತೆ ನಮ್ಮದಕ್ಕಿಂತಲೂ ಹೆಚ್ಚಿರಬಹುದು, ಆದರೆ ಕೇವಲ ನಾಲ್ಕು ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಂತಹ ಸೀಮಿತ ಪ್ರವೇಶಬಿಂದುಗಳಿರುವ ತೈವಾನ್ ದ್ವೀಪವನ್ನು ಭಾರತದಂಥ ಬೃಹತ್ ದೇಶಕ್ಕೆ ಹೋಲಿಸುವ ಪ್ರಯತ್ನವೇ ಮೂರ್ಖತನದ್ದು. ಅಲ್ಲದೆ ರಾಜಧಾನಿ ತೈಪೇಯಲ್ಲಿ ದೇಶವಿದೇಶಗಳ ತಬ್ಲಿಘಿ ಮೌಲ್ವಿಗಳು ಒಟ್ಟುಗೂಡಿ ಸಮ್ಮೇಳನ ನಡೆಸಿ ನಂತರ ಕರೊನಾ ವೈರಸ್ನ್ನು ತೈವಾನ್ ದ್ವೀಪದುದ್ದಕ್ಕೂ ಹರಡಲಿಲ್ಲ ಎನ್ನುವ ವಾಸ್ತವವನ್ನೂ ಗಮನಿಸಬೇಕು.
ಲಾಕ್ಡೌನ್ನಿಂದಾಗಿ ಕರೊನಾ ವೈರಸ್ಗಿಂತಲೂ ಹಸಿವಿನಿಂದ ಸಾಯುವವರ ಸಂಖ್ಯೆ ಹೆಚ್ಚಾಗಲಿದೆ ಎಂಬ ಮಾತೂ ಕೇಳಿಬಂದದ್ದುಂಟು. ಈ ಮಾತನ್ನು ಒಂದು ಹಂತದವರೆಗಷ್ಟೇ ಒಪ್ಪಿಕೊಳ್ಳಬಹುದು. ಜನತೆಗೆ ಸೀಮಿತ ಪ್ರಮಾಣದಲ್ಲಿ ಒಂದಿಡೀ ವರ್ಷ ಆಹಾರ ಪೂರೈಸುವ ಸಾಮರ್ಥ್ಯ ಈ ದೇಶಕ್ಕಿದೆ. ಆದರೆ ಕೋಟಿಗಟ್ಟಲೆ ಜನರಿಗೆ ಸೋಂಕು ತಗುಲಿದರೆ ಮತ್ತದು ಇಲ್ಲಿನ ಅಗಾಧ ಜನಸಂಖ್ಯೆಯಲ್ಲಿ ನಿಯಂತ್ರಣವಿಲ್ಲದೆ ಹರಡುತ್ತ ಹೋದರೆ ಅದನ್ನು ನಿಭಾಯಿಸುವ ಸಾಮರ್ಥ್ಯ ದೇಶಕ್ಕಿಲ್ಲ. ವೈದ್ಯಕೀಯ ವ್ಯವಸ್ಥೆ ಕುಸಿದುಬಿದ್ದು ಜನ ಹುಳುಗಳಂತೆ ಸಾಯುವ ಪರಿಸ್ಥಿತಿ ಉಂಟಾಗುತ್ತದೆ ಎನ್ನುವ ಭಯಾನಕ ಭವಿಷ್ಯವನ್ನು ಗುರುತಿಸುವುದರಲ್ಲಿ ಈ ಜನ ಸೋತದ್ದು ಅಚ್ಚರಿ ಮೂಡಿಸುತ್ತದೆ. ಪುಟ್ಟ ಜನಸಂಖ್ಯೆಯ ಈಕ್ವೆಡಾರ್ನಲ್ಲಿ ವೈದ್ಯಕೀಯ ವ್ಯವಸ್ಥೆ ಹಾಗೂ ನಾಗರಿಕ ಆಡಳಿತ ವ್ಯವಸ್ಥೆ ಕುಸಿದುಬಿದ್ದ ಪರಿಣಾಮವಾಗಿ ಸಂಸ್ಕಾರಕ್ಕಾಗಿ ಕಾದು ರಸ್ತೆರಸ್ತೆಗಳಲ್ಲಿ ಬಿದ್ದ ಶವಗಳ ಚಿತ್ರಗಳು ನಮಗೊಂದು ಪಾಠವಾಗಬೇಕು. ನಮಗಿಂತಲೂ ಹೆಚ್ಚು ವ್ಯವಸ್ಥಿತ ಹಾಗೂ ವ್ಯಾಪಕ ವೈದ್ಯಕೀಯ ಹಾಗೂ ನಾಗರಿಕ ಆಡಳಿತ ವ್ಯವಸ್ಥೆಯಿರುವ ಚೀನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ಸೋತುಹೋಗಿರುವ ಉದಾಹರಣೆಯೂ ನಮ್ಮ ಕಣ್ಣ ಮುಂದಿದೆ. ಸೋಂಕು ಮೊದಲಿಗೆ ಕಾಣಿಸಿಕೊಂಡ ಮಧ್ಯ ಚೀನಾದ ವೂಹಾನ್ ಮತ್ತು ದೇಶದ ಈಶಾನ್ಯ ಮೂಲೆಯಲ್ಲಿರುವ ಹಾರ್ಬಿನ್ ನಗರಗಳಲ್ಲಿ ರಸ್ತೆಬದಿಯಲ್ಲಿ ಬಿದ್ದ ಸೋಂಕಿತರ ಶವಗಳು ನಮ್ಮ ಸರ್ಕಾರಕ್ಕೆ ಮತ್ತು ಬಹುಪಾಲು ಜನರಿಗೆ ಎಚ್ಚರಿಕೆಯ ಗಂಟೆಗಳಾಗಿ ಕಂಡಿವೆ, ದುರದೃಷ್ಟವಶಾತ್ ನಮ್ಮಲ್ಲಿನ ಕೆಲ ಅತಿಬುದ್ಧಿವಂತರಿಗಲ್ಲ. ಈ ದೇಶದ ಕಡು ಬೇಸಿಗೆಯೇ ಕರೊನಾ ಸೋಂಕನ್ನು ನಿವಾರಿಸಿಬಿಡುತ್ತದೆ, ಲಾಕ್ಡೌನ್ ಅಗತ್ಯವಿಲ್ಲ ಎಂಬ ಅವೈಜ್ಞಾನಿಕ ವಾದಗಳೂ ಬಂದದ್ದುಂಟು. 60 ಡಿಗ್ರೀ ಸೆಂಟಿಗ್ರೇಡ್ ಉಷ್ಣತೆಯಲ್ಲೂ ಕರೊನಾ ಸೋಂಕು ತಾಸುಗಳ ಕಾಲ ಜೀವಂತವಾಗಿ ಇರುತ್ತದೆ ಎಂದು ಫ್ರೆಂಚ್ ವಿಜ್ಞಾನಿಗಳು ಮಾರ್ಚ್ನಲ್ಲೇ ಹೇಳಿದ್ದು ಈ ಅತಿಬುದ್ಧಿವಂತರ ಗಮನಕ್ಕೆ ಬರಲೇ ಇಲ್ಲ. ಇದನ್ನೆಲ್ಲ ನೋಡಿದರೆ ಮೂಡುವ ಪ್ರಶ್ನೆ- ಕರೊನಾ ಸೋಂಕಿನ ವಿರುದ್ಧದ ಹೋರಾಟದಲ್ಲಿ ದೇಶ ಸೋತುಹೋಗಲಿ ಎಂಬುದು ಇವರ ಆಶಯವಾಗಿರಬಹುದೇ, ಅಂಥದೇ ಉದ್ದೇಶವನ್ನು ಹೊಂದಿರುವ ಚೀನಾಗೆ ಇವರು ತಿಳಿದೋ ತಿಳಿಯದೆಯೋ ಸಹಕರಿಸುತ್ತಿರಬಹುದೇ?
ಜನವರಿಯಲ್ಲಿ ವೂಹಾನ್ ನಗರದಿಂದ ತನ್ನದೇ ವಿವಿಧ ನಗರಗಳಿಗೆ ವಿಮಾನಸಂಪರ್ಕವನ್ನು ನಿಲುಗಡೆಗೆ ತಂದ ಚೀನಾ ಅದೇ ವೂಹಾನ್ನಿಂದ ಜಗತ್ತಿನ ವಿವಿಧ ನಗರಗಳಿಗೆ ವಿಮಾನಸಂಪರ್ಕ ಜಾರಿಯಲ್ಲಿ ಇರುವಂತೆ ನೋಡಿಕೊಂಡಿತು. ಜತೆಗೆ, ಫೆಬ್ರವರಿಯಲ್ಲಿ ತನ್ನ ದೇಶಕ್ಕೆ ಹೊರಗಿನವರ ಬರುವಿಕೆಯನ್ನು ತಡೆಗಟ್ಟಿದ ಚೀನಾ ತನ್ನ ದೇಶೀಯರ ಆಗಮನದ ಮೇಲೆ ಅಂಥ ನಿರ್ಬಂಧವನ್ನು ಹೇರಬಾರದೆಂದು ಜಗತ್ತಿನ ಹಲವು ರಾಷ್ಟ್ರಗಳ ಮೇಲೆ ಒತ್ತಡ ಹಾಕಿತು. ಇದರರ್ಥ ತನ್ನಲ್ಲಿ ಉದ್ಭವಿಸಿದ ಕರೊನಾ ಸೋಂಕು ಜಗತ್ತಿನೆಲ್ಲೆಡೆ ಹರಡಲಿ ಎನ್ನುವುದು ಚೀನೀ ಕಮ್ಯೂನಿಸ್ಟ್ ಸರ್ಕಾರದ ಇರಾದೆಯಾಗಿತ್ತು. ಚೀನಾದ ಕಾಕದೃಷ್ಟಿಗೆ ಬಿದ್ದ ದೇಶಗಳಲ್ಲಿ ಭಾರತವೂ ಒಂದು.
ಚೀನಾದ ‘ನಿರೀಕ್ಷೆ’ಗೆ ವಿರುದ್ಧವಾಗಿ ಕೇಂದ್ರ ಸರ್ಕಾರ ಸೂಕ್ತ ಸಮಯದಲ್ಲಿ ಲಾಕ್ಡೌನ್ ವಿಧಿಸಿ ಸೋಂಕಿನ ಪ್ರಸರಣವನ್ನು ತಡೆಯಲು ಪ್ರಯತ್ನಿಸಿತು. ಅಷ್ಟೇ ಅಲ್ಲ, ಅಮೆರಿಕದಲ್ಲಾದ ತಾರತಮ್ಯ ವರ್ತನೆಗೆ ವಿರುದ್ಧವಾಗಿ ನಮ್ಮ ಸರ್ಕಾರಿ ವ್ಯವಸ್ಥೆ ಸೋಂಕಿತರನ್ನು ಉಪಚರಿಸುವಲ್ಲಿ ಯಾವ ತಾರತಮ್ಯವನ್ನೂ ತೋರದೆ ಸೋಂಕುತಡೆಗೆ ನಿಷ್ಠೆಯಿಂದ ಪ್ರಯತ್ನಿಸಿತು. ಆದರೆ ಸೋಂಕಿತರನ್ನು ಉಪಚರಿಸುವವರು ಧರಿಸುವ ಪರ್ಸನಲ್ ಪ್ರೊಟೆಕ್ಷನ್ ಎಕ್ವಿಪ್ವೆುಂಟ್ಸ್ (ಪಿಪಿಇ) ಮತ್ತು ಸೋಂಕು ಪತ್ತೆ ಹಚ್ಚುವ ಟೆಸ್ಟಿಂಗ್ ಕಿಟ್ಸ್ಗಳ ಉತ್ಪಾದನೆಯಲ್ಲಿ ಚೀನಾಗಿದ್ದ ಏಕಸ್ವಾಮ್ಯ ನಮ್ಮ ವಿರುದ್ಧವಾಗಿ ಅದರ ಮುಂದಿನ ಕುಟಿಲ ಯೋಜನೆಗಳಿಗೆ ಸಹಕಾರಿಯಾಯಿತು. ಪ್ರಯೋಜನಕ್ಕೆ ಬಾರದ 50 ಸಾವಿರ ಪಿಪಿಇ ಮತ್ತು ಆರೂವರೆ ಲಕ್ಷ ಟೆಸ್ಟಿಂಗ್ ಕಿಟ್ಸ್ ಅನ್ನು ನಮ್ಮಲ್ಲಿಗೆ ಕಳುಹಿಸುವ ಮೂಲಕ ಸೋಂಕಿನ ವಿರುದ್ಧದ ನಮ್ಮ ಹೋರಾಟವನ್ನು ವಿಫಲಗೊಳಿಸಲು ಚೀನಾ ಪ್ರಯತ್ನಿಸಿತು. ಪಾಠ ಕಲಿತ ಕೇಂದ್ರ ಸರ್ಕಾರ ಗುಣಮಟ್ಟದ ವೈದ್ಯಕೀಯ ಸಾಮಗ್ರಿಗಳ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸುವ ಯೋಜನೆಯನ್ನು ತರಾತುರಿಯಲ್ಲಿ ರೂಪಿಸಿತು. ಪರಿಣಾಮವಾಗಿ ಇಂದು ದೇಶದಲ್ಲಿ ಪ್ರತಿದಿನ ಮೂರು ಲಕ್ಷ ಪಿಪಿಇಗಳು ಉತ್ಪಾದನೆಯಾಗುತ್ತಿವೆ ಮತ್ತು ಅವುಗಳ ಉತ್ಪಾದನೆಯಲ್ಲಿ ಭಾರತ ಜಾಗತಿಕವಾಗಿ ಎರಡನೆಯ ಸ್ಶಾನ ಗಳಿಸಿದೆ. ವಿವಿಧ ರಾಜ್ಯಗಳಿಗೆ ಈಗಾಗಲೇ 30 ಲಕ್ಷ ಪಿಪಿಇಗಳ ಪೂರೈಕೆಯಾಗಿದೆ ಮತ್ತು ಸರ್ಕಾರ ಸದ್ಯದಲ್ಲೇ ಅವುಗಳನ್ನು ವಿದೇಶಗಳಿಗೆ ರಫ್ತು ಮಾಡುವ ಯೋಜನೆ ರೂಪಿಸುತ್ತಿದೆ. ಜತೆಗೆ ಅಧಿಕ ಪ್ರಮಾಣದಲ್ಲಿ ಎನ್-95 ಮಾಸ್ಕ್ಗಳ ಉತ್ಪಾದನೆಯನ್ನು ಆರಂಭಿಸಿರುವ ಭಾರತ ಸಣ್ಣ ಗಾತ್ರದ ವೆಂಟಿಲೇಟರ್ಗಳ ಅಧಿಕ ಉತ್ಪಾದನೆಯನ್ನೂ ಹಮ್ಮಿಕೊಂಡಿದೆ. ಭಾರತವನ್ನು ಕೋವಿಡ್-19 ಸುನಾಮಿಗೆ ದೂಡುವಲ್ಲಿ ತನ್ನ ತಂತ್ರಗಳು ಹೀಗೆ ವಿಫಲ ಆಗುತ್ತಿರುವುದನ್ನು ಗಮನಿಸಿದ ಚೀನಾ ಹೊಸದೊಂದು ತಂತ್ರಕ್ಕೆ ಮುಂದಾಗಿದೆ. ಭಾರತದ ಸ್ಥೈರ್ಯವನ್ನೇ ಉಡುಗಿಸುವ ತಂತ್ರವಿದು.
ಮೇ 5ರಂದು ಸಿಕ್ಕಿಂನ ನಕೂ ಲಾ ಪ್ರದೇಶದಲ್ಲಿ ಗಡಿಯನ್ನು ಉಲ್ಲಂಘಿಸಿದ ಚೀನಾ ಮುಂದಿನ ಒಂದು ವಾರದಲ್ಲಿ ಸಾಮರಿಕವಾಗಿ ತನಗೆ ಅನುಕೂಲಕರವಾಗಿರುವ ಪೂರ್ವ ಲಡಾಖ್ ಗಡಿಯಲ್ಲಿ ಸೇನಾ ಜಮಾವಣೆ ಆರಂಭಿಸಿದೆ. ಪಂಗೊಂಗ್ ತ್ಸೋ ಸರೋವರ ಪ್ರದೇಶದಲ್ಲಿ ಗಡಿಯನ್ನು ಮತ್ತೆಮತ್ತೆ ಉಲ್ಲಂಘಿಸಿದ ಚೀನೀ ಸೇನೆ ಕಳೆದ ಹತ್ತು ದಿನಗಳಲ್ಲಿ ಗಲ್ವಾನ್ ನದೀಕಣಿವೆಯಲ್ಲಿ ಹಲವಾರು ಬಂಕರ್ಗಳನ್ನೂ, ನೂರರಷ್ಟು ಟೆಂಟ್ಗಳನ್ನೂ ನಿರ್ವಿುಸಿದೆ. ಅಲ್ಲಿ 5 ಸಾವಿರ ಚೀನೀ ಸೈನಿಕರು ಜಮಾಯಿಸಿರುವುದಲ್ಲದೆ ಕದನಕ್ಕೆ ಅನುಕೂಲವಾಗುವ ಕಂದಕಗಳ ತೋಡುವಿಕೆ ಜಾರಿಯಲ್ಲಿ ಇರುವುದಾಗಿ ಮತ್ತು ಆಹಾರ ಮತ್ತು ಶಸ್ತ್ರಾಸ್ತ್ರಗಳ ದಾಸ್ತಾನು ಸೌಲಭ್ಯಗಳೂ ತಲೆ ಎತ್ತಿವೆಯೆಂದು ವರದಿಗಳು ಬರುತ್ತಿವೆ.
ಇದು ಸಾಲದು ಎಂಬಂತೆ ಚೀನಾ ತನ್ನ ಪರವಾದ ಕಮ್ಯೂನಿಸ್ಟ್ ಸರ್ಕಾರವಿರುವ ನೇಪಾಳವನ್ನು ಭಾರತದ ವಿರುದ್ಧ ಎತ್ತಿಕಟ್ಟಿ ನಮ್ಮ ತಲೆನೋವನ್ನು ಮತ್ತಷ್ಟು ಹೆಚ್ಚಿಸಿದೆ (ಇದನ್ನು ಮುಂದೆ ವಿವರವಾಗಿ ವಿಶ್ಲೇಷಿಸೋಣ). ಹೀಗೆ ಯುದ್ಧ ಭೀತಿಯೊಡ್ಡಿ ಭಾರತದ ಸ್ಥೈರ್ಯವನ್ನು ಕುಂದಿಸಿ, ಕರೊನಾ ವಿರುದ್ಧದ ಸಮರದಿಂದ ಈ ದೇಶವನ್ನು ವಿಮುಖಗೊಳಿಸುವುದು ಚೀನಾದ ಈಗಿನ ತಂತ್ರವಾಗಿದೆ. ಅದಕ್ಕೆ ಅನುಕೂಲ ಆಗುವಂಥ ನಡೆಗಳನ್ನು ನಮ್ಮ ಕೆಲವು ಅತಿಬುದ್ಧಿವಂತರು ಪ್ರದರ್ಶಿಸುತ್ತಿದ್ದಾರೆ. ಕರೊನಾ ವಿರುದ್ಧ ಹೋರಾಡುವುದರ ಜತೆಗೆ ಹೊರಗಿನ ಚೀನೀ ಕಮ್ಯೂನಿಸ್ಟ್ ಮತ್ತು ಒಳಗಿನ ಅತಿಬುದ್ಧಿವಂತ ನರಕರೊನಾಗಳ ಜತೆಗೂ ಸೆಣಸಬೇಕಾದ ಸ್ಥಿತಿ ಇಂದು ದೇಶದ್ದಾಗಿದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)