

ಮೊದಲಿಗೆ, ವರ್ಷದ ಹಿಂದೆ ಕರೊನಾ ಮೊದಲ ಬಾರಿಗೆ ದೇಶವನ್ನು ತನ್ನ ಕಬಂಧಬಾಹುಗಳೊಳಗೆ ಸೆಳೆದುಕೊಳ್ಳತೊಡಗಿದಾಗ ಎರಡು ವಿಷಯಗಳು ಗೌಣವಾದದ್ದನ್ನು, ಅದೀಗ ನಮಗೆ ಪಾಠಗಳಾಗುತ್ತಿರುವುದನ್ನು ಗುರುತಿಸೋಣ.
ಒಂದು- ಭೂಮಿಯ ಒಟ್ಟು ನೆಲದಲ್ಲಿ ಭಾರತಕ್ಕಿರುವುದು ಕೇವಲ ಶೇಕಡ 2. ಆದರೆ ಭೂಮಿಯ ಒಟ್ಟು ಜನಸಂಖ್ಯೆಯ ಶೇಕಡ 17.5 ಜನರು ಇಲ್ಲಿದ್ದಾರೆ. ಆರು ದಶಕಗಳ ಹಿಂದೆ ದೇಶದ ಜನಸಂಖ್ಯೆ 50 ಕೋಟಿಯನ್ನು ಸಮೀಪಿಸಿದಾಗ ‘ಜನಸಂಖ್ಯಾಸ್ಪೋಟ’ವನ್ನು ತಡೆಯಲೇಬೇಕು ಎನ್ನುವುದು ಸರ್ಕಾರದ ಮಂತ್ರವಾಯಿತು. ಅದರಿಂದಾಗಿಯೇ 1962ರಲ್ಲಿ ಪ್ರಾರಂಭವಾದ ಮೂರನೆಯ ಪಂಚವಾರ್ಷಿಕ ಯೋಜನೆಯ ಪ್ರಧಾನ ಆದ್ಯತೆ ಜನಸಂಖ್ಯೆಯ ನಿಯಂತ್ರಣವಾದದ್ದು ಈಗ ಹೆಚ್ಚಿನವರಿಗೆ ನೆನಪಿರಲಿಕ್ಕಿಲ್ಲ. ಆಗ ಸರ್ಕಾರಿ ಪ್ರಕಟಣೆ, ಅಂಚೆಚೀಟಿಗಳಲ್ಲಿ ಅಬ್ಬರದಿಂದ ಪ್ರಾರಂಭವಾದ ‘ಕುಟುಂಬ ಯೋಜನೆ’ 1970ರ ದಶಕದವರೆಗೂ ಸದ್ದು ಮಾಡುತ್ತಿತ್ತು. ತುರ್ತು ಪರಿಸ್ಥಿತಿ ಸಂದರ್ಭದಲ್ಲಂತೂ ‘ಸೂಪರ್ ಪ್ರೖೆಮ್ ಮಿನಿಸ್ಟರ್’ ಸಂಜಯ್ ಗಾಂಧಿ ನಸ್ಬಂದಿಯನ್ನು ಒಂದು ಗೀಳಾಗಿಸಿಕೊಂಡದ್ದುಂಟು. ನಂತರದ ದಿನಗಳಲ್ಲಿ ಜನಸಂಖ್ಯೆ ಎಪ್ಪತೆôದು, ನೂರು, ನೂರಾ ಇಪ್ಪತೆôದರ ಮೈಲಿಗಲ್ಲುಗಳನ್ನು ಶರವೇಗದಲ್ಲಿ ಲಂಘಿಸಿ ಈಗ 140 ಕೋಟಿಯನ್ನು ಸಮೀಪಿಸಿದೆ. 2030ರ ಹೊತ್ತಿಗೆ ನಾವು ಚೀನಾವನ್ನು ಹಿಂದಿಕ್ಕುತ್ತೇವಂತೆ. ಇಷ್ಟಾಗಿಯೂ ಜನಸಂಖ್ಯಾ ನಿಯಂತ್ರಣದ ಮಾತೇ ಇಲ್ಲ!
ಜತೆಗೆ, ಹೊರಗಿನವರನ್ನೂ ಒಳಬಿಟ್ಟುಕೊಳ್ಳುವುದು ಸತತವಾಗಿ ನಾಲ್ಕು ದಶಕಗಳಿಗೂ ಹೆಚ್ಚುಕಾಲ ನಡೆದಿದೆ ಮತ್ತದು ಕೆಲವು ರಾಜಕೀಯ ಪಕ್ಷಗಳ ನೀತಿಯೇ ಆಗಿಹೋಗಿದೆ. ಪರಿಣಾಮವಾಗಿ ಇಂದು ಬೃಹತ್ ರಷ್ಯಾ ಸೇರಿ ಇಡೀ ಯುರೋಪ್ ಹಾಗೂ ಅಮೆರಿಕ, ಕೆನಡಾ, ಬ್ರೆಜಿಲ್ ಮತ್ತು ಅರ್ಜೆಂಟೈನಾ ದೇಶಗಳ ಒಟ್ಟು ಜನಸಂಖ್ಯೆಗೆ ಸಮನಾದ ಜನಸಂಖ್ಯೆ ಭಾರತವೆಂಬ ಪುಟ್ಟ ನೆಲದಲ್ಲಿದೆ. ಇಲ್ಲಿರುವ ಈ ಅಗಾಧ ಜನಸಾಂದ್ರತೆಯಿಂದಾಗಿಯೇ, ‘ಭಾರತದಲ್ಲಿ ಕೋವಿಡ್-19 ಸುನಾಮಿ ಏಳಲಿದೆ’ ಎಂಬ ಎಚ್ಚರಿಕೆ ಕೆಲ ವಿದೇಶೀ ವಿಶೇಷಜ್ಞರಿಂದ ವರ್ಷದ ಹಿಂದೆಯೇ ಬಂದಿತ್ತು. ಅದು ನಿಜವಾಗಲು ಒಂದು ವರ್ಷ ಹಿಡಿದದ್ದು ನಮ್ಮ ಅದೃಷ್ಟವೇ ಇರಬೇಕು. ಹಿಂದಾಗಲೀ, ಈಗಾಗಲೀ, ಇಷ್ಟು ಭಾರಿ ಜನಸಂಖ್ಯೆಯ ಆರೋಗ್ಯ ಅವಶ್ಯಕತೆಗಳನ್ನು ಪೂರ್ಣವಾಗಿ ಪೂರೈಸುವುದು ಯಾವುದೇ ಸರ್ಕಾರದ ಸಾಮರ್ಥ್ಯಕ್ಕೆ ಮೀರಿದ್ದು. ಹೀಗಾಗಿ, ಎಲ್ಲದಕ್ಕೂ ಸರ್ಕಾರದ ಮೇಲೆ ಅವಲಂಬಿತವಾಗದೇ, ಸರ್ಕಾರವನ್ನು ದೂಷಿಸದೇ ನಮ್ಮ ಆರೋಗ್ಯದ ಜವಾಬ್ದಾರಿಯ ಬಹುಭಾಗವನ್ನು ನಾವೇ ಹೊತ್ತುಕೊಳ್ಳಬೇಕು.
ಎರಡು- ವೈರಸ್ ಗಾಳಿಯಲ್ಲಿ ಚಲಿಸುವ, ಆ ಮೂಲಕ ಪ್ರಸರಿಸುವ ವಿಷಯ ಇಂದು ದೊಡ್ಡದಾಗಿ ಚರ್ಚೆಗೆ ಬಂದಿದೆ. ಅದಕ್ಕೆ ಅನುಗುಣವಾಗಿ ಮಾಸ್ಕ್ನ ಕಡ್ಡಾಯ ಬಳಕೆಗೆ ಒತ್ತು ನೀಡಲಾಗುತ್ತಿದೆ. ಶ್ವಾಸಿಕ ರೋಗವಾದ ಕೋವಿಡ್-19 ಒಬ್ಬರಿಂದೊಬ್ಬರಿಗೆ ಸುಲಭವಾಗಿ ಹರಡುತ್ತದೆ. ವಿಶೇಷಜ್ಞರ ಪ್ರಕಾರ ದೇಶದ ಜನತೆಯಲ್ಲಿ ಶೇ.80-85 ಜನರು ರೋಗಲಕ್ಷಣ ರಹಿತರು, ಅಂದರೆ ಅವರಲ್ಲಿ ಸೋಂಕು ಇದ್ದರೂ ಅದರ ಲಕ್ಷಣಗಳು ಕಾಣಿಸಿಕೊಳ್ಳುವುದಿಲ್ಲ. ಪರಿಣಾಮವಾಗಿ ಅವರು ಸುರಕ್ಷಾ ಕ್ರಮಗಳ ಕಡೆ ಗಮನ ನೀಡುವುದಿಲ್ಲ. ಶ್ವಾಸಿಕ ರೋಗವಾದ ಕರೊನಾ ಸೋಂಕು ಹರಡುವುದು ಮುಖ್ಯವಾಗಿ ಈ ವೈರಸ್ ವಾಹಕರಿಂದ. ಇವರು ತಂತಮ್ಮ ಮನೆಗಳಲ್ಲೇ ಇತರರಿಗೆ ಸೋಂಕು ಹರಡಬಹುದು. ಇಂದು ಇಡೀ ಕುಟುಂಬಗಳು ಸೋಂಕಿಗೆ ತುತ್ತಾಗುತ್ತಿರುವುದಕ್ಕೆ ಇದು ಮುಖ್ಯ ಕಾರಣ. ಕರೊನಾ ವೈರಸ್ ಗಾಳಿಯಲ್ಲಿ ಹದಿನೇಳು ಅಡಿಗಳಷ್ಟು ಚಲಿಸಬಲ್ಲುದು ಎಂದು ಸಿಂಗಾಪುರದ ವೈದ್ಯಕೀಯ ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆಂಬ ಸುದ್ದಿ ಕಳೆದ ಮಾರ್ಚ್ನಲ್ಲೇ ಬಂದದ್ದುಂಟು. ಅದರರ್ಥ ಸೋಂಕನ್ನು ತಡೆಯಲು ಅಂದು ಅಥವಾ ಇತ್ತೀಚಿನವರೆಗೂ ನಾವು ಅನುಸರಿಸಿದ ಸುರಕ್ಷಾ ವಿಧಾನಗಳು ನಮಗೆ ಪೂರ್ಣ ಸುರಕ್ಷೆ ನೀಡಲಾರವು ಎಂಬುದನ್ನು ಗುರುತಿಸಿ ಅದಕ್ಕೆ ಅನುಗುಣವಾಗಿ ತಮ್ಮ ಕ್ಷೇಮದ ದೃಷ್ಟಿಯಿಂದ ಸೂಕ್ತ ಕ್ರಮಗಳನ್ನು ಸಾರ್ವಜನಿಕರೇ ಕೈಗೊಳ್ಳುವ ಅಗತ್ಯವಿತ್ತು. ಆದರೆ ಅದಾಗಲಿಲ್ಲ. ಹೀಗಾಗಿ, ಕಡ್ಡಾಯವಾಗಿ ಮಾಸ್ಕ್ ಧರಿಸುವ ಅಗತ್ಯದ ಬಗೆಗಿನ ಈಗಿನ ಮಾತುಗಳು ಊರೆಲ್ಲ ಸೂರೆಹೋದ ಮೇಲೆ ದಿಡ್ಡಿಬಾಗಿಲು ಮುಚ್ಚುವಂತಹದೇನೋ ಅನಿಸುತ್ತದೆ. ಒಂದಿಡೀ ವರ್ಷದ ನಿರ್ಲಕ್ಷ್ಯದ ತಪ್ಪಿಗೆ ನಾವಿಂದು ಬೆಲೆ ತೆರುತ್ತಿದ್ದೇವೆ. ಮನೆಯಲ್ಲೂ ಮಾಸ್ಕ್ ಧರಿಸಬೇಕಾದ ಸಮಯ ಈಗ ಬಂದಿದೆಯೆಂದು ಕೋವಿಡ್-19 ಟಾಸ್ಕ್ ಫೋರ್ಸ್ನ ಮುಖ್ಯಸ್ಥರಾದ ಡಾ. ವಿ.ಕೆ. ಪಾಲ್ ಹೇಳಿರುವ ಮಾತಿನ ಮಹತ್ವ ಅಡಗಿರುವುದು ಇಲ್ಲಿ.
ಹೀಗೆ ಅಗಾಧ ಜನಸಂಖ್ಯೆ ಮತ್ತದು ಸುರಕ್ಷಾ ನಿಯಮಗಳನ್ನು ಸರಿಯಾಗಿ ಪಾಲಿಸದೇ ಹೋದ ಕಾರಣ ಎರಡನೆಯ ಅಲೆ ದೇಶಕ್ಕೆ ಬಲವಾಗಿಯೇ ಅಪ್ಪಳಿಸಿದೆ. ಎರಡನೆಯ ಅಲೆಯ ಪ್ರಮುಖ ಲಕ್ಷಣವೆಂದರೆ ತೀವ್ರ ಉಸಿರಾಟ. ಇದರ ಉಪಚಾರಕ್ಕೆ ವೈದ್ಯಕೀಯ ಆಮ್ಲಜನಕ ಅತ್ಯಗತ್ಯವಾಗುತ್ತದೆ. ಎರಡನೆಯ ಅಲೆ ಅಪ್ಪಳಿಸಿದ ವೇಗ, ಅದು ವೈದ್ಯಕೀಯ ಆಮ್ಲಜನಕದ ಪೂರೈಕೆಯ ಮೇಲೆ ಹೇರಿದ ಅಗಾಧ ಒತ್ತಡ ಹೆಚ್ಚಿನ ಸಾವುಗಳಿಗೆ ಕಾರಣ. ಇಷ್ಟಾಗಿಯೂ ಸೋಂಕಿನಿಂದ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಆಶಾದಾಯಕವಾಗಿರುವುದನ್ನು ಗ್ರಹಿಸುತ್ತಲೇ ಮುಂದಿನ ದಿನಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾಗಿದೆ. ಆ ನಿಟ್ಟಿನಲ್ಲಿ, ಕರೊನಾ ವೈರಸ್ ಹಾಗೂ ಸೋಂಕಿನ ಇಂದಿನ ಸ್ವರೂಪವನ್ನು ನಾವು ಗುರುತಿಸಬೇಕಾಗಿದೆ.
ನಮ್ಮಲ್ಲಿ ರೋಗಲಕ್ಷಣರಹಿತ ಜನಸಂಖ್ಯೆ ಅಗಾಧವಾಗಿದ್ದು ಅದು ಮನೆಯಂತಹ ಒಳಾಂಗಣಗಳಲ್ಲಿ ಸದ್ದಿಲ್ಲದೇ ಸೋಂಕು ಹರಡುತ್ತಿರುವುದರ ಜತೆಗೆ ವೇಗವಾಗಿ ಪ್ರಸರಣಗೊಳ್ಳುವ ವೈರಸ್ನ ರೂಪಾಂತರಗಳೂ ಕಾಣಿಸಿ ಕೊಂಡು ಸಮಸ್ಯೆಯನ್ನು ಬಿಗಡಾಯಿಸಿವೆ. ದೆಹಲಿ ಮತ್ತು ಪಂಜಾಬ್ನಲ್ಲಿ ಪತ್ತೆಯಾಗಿರುವ ಯುಕೆ ರೂಪಾಂತರಿ ಹಿಂದಿನದಕ್ಕಿಂತ ಶೇ.50 ಹೆಚ್ಚಿನ ವೇಗದಲ್ಲಿ ಪ್ರಸರಣಗೊಳ್ಳುತ್ತಿದೆ. ಮೊದಲಿಗೆ ಭಾರತದಲ್ಲೇ, ಮುಖ್ಯವಾಗಿ ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡ ಎರಡನೆಯ ರೂಪಾಂತರಿ ‘ಆ1.671‘ ಪ್ರಕಾರದ ‘ಔ452‘ ಸೋಂಕು ವೇಗವಾಗಿ ಹರಡಲು ಕಾರಣವಾಗಿದೆ. ಇತ್ತೀಚೆಗಂತೂ ಮೂರನೆಯ ರೂಪಾಂತರಿ ಪಿ614ಆರ್ ಮಹಾರಾಷ್ಟ್ರವಷ್ಟೇ ಅಲ್ಲದೆ ಛತ್ತೀಸ್ಗಢ, ದೆಹಲಿ ಮತ್ತು ಪಶ್ಚಿಮ ಬಂಗಾಳಗಳಲ್ಲೂ ಕಾಣಿಸಿಕೊಂಡಿದೆ. ಹಾಗೂ ಇದು ಎರಡನೆಯ ರೂಪಾಂತರಿಗಿಂತಲೂ ಘಾತಕವಾದದ್ದು ಎಂದು ಹೇಳಲಾಗುತ್ತಿದೆ.
ಇಂತಹ ಸನ್ನಿವೇಶದಲ್ಲಿ ವಿವಿಧ ಕಾರಣಗಳಿಂದಾಗಿ ಲಾಕ್ಡೌನ್, ಸೀಲ್ಡೌನ್, ಮೈಕ್ರೋ ಕಂಟೇನ್ಮೆಂಟ್ ನಿಯಮಗಳು ಕಳೆದ ವರ್ಷದ ಮೊದಲ ಅಲೆಯ ಸಂದರ್ಭದಲ್ಲಿ ಜಾರಿಯಾದ ಮಟ್ಟಕ್ಕೆ ಇಂದು ಜಾರಿಯಾಗದ ಕಾರಣ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಬಹುದಾದ ಸಾಧ್ಯತೆಯಿದೆ. ಜತೆಗೆ, ಮರಣದರ ಕುರಿತಂತೆ ಮೊದಲ ಅಲೆ ನೀಡಿದ್ದ ಚಿತ್ರಣದ ಕೆಲ ಅಂಶಗಳನ್ನು ಎರಡನೆಯ ಅಲೆ ಬದಲಾಯಿಸಿದೆ. ಸೋಂಕುಪೀಡಿತರ ಸಂಖ್ಯೆಯೇ ಅಧಿಕವಾಗುತ್ತಿರುವ ಕಾರಣ ಮರಣ ಸಂಖ್ಯೆಯೂ ಅಧಿಕವಾಗಿಯೇ ಇದೆ. ಆದರೂ ಹಿಂದಿನಂತೆ ಹಿರಿಯರಲ್ಲಿ ಮಾತ್ರ ಮರಣದರ ಅಧಿಕ ಎಂದು ಈಗ ಹೇಳುವ ಹಾಗಿಲ್ಲ. ಕೇಂದ್ರ ಸರ್ಕಾರ ನೀಡಿರುವ ವಿವರಗಳ ಪ್ರಕಾರ ಹತ್ತರಿಂದ ಎಪ್ಪತ್ತು ವರ್ಷದೊಳಗಿನವರಲ್ಲಿ, 30-40 ವಯೋಮಾನದವರ ಹೊರತಾಗಿ ಉಳಿದೆಲ್ಲರಲ್ಲೂ ಮರಣದರ ಮೊದಲ ಅಲೆಗಿಂತ ಈಗ ಕಡಿಮೆಯಾಗಿದೆ. ಆದರೆ ಹತ್ತು ವರ್ಷದೊಳಗಿನವರಲ್ಲಿ ಮತ್ತು ಎಪ್ಪತ್ತು ದಾಟಿದವರಲ್ಲಿ ಅದು ಹೆಚ್ಚಳ ತೋರಿಸಿದೆ. 0-10 ವಯೋಮಾನದವರಲ್ಲಿ ಹೆಚ್ಚಳ ತುಸುವೇ ಆಗಿದ್ದರೂ (ಮೊದಲ ಅಲೆ- ಶೇ.0.27, ಎರಡನೆಯ ಅಲೆ- ಶೇ.0.34), ಎಪ್ಪತ್ತು ವರ್ಷಗಳ ಮೇಲ್ಪಟ್ಟವರಲ್ಲಿ ಅದು ಗಮನಾರ್ಹವಾಗಿದೆ. 70-80 ವಯೋಮಾನದವರಲ್ಲಿ ಮೊದಲ ಅಲೆಯಲ್ಲಿ 19.99 ಇದ್ದದ್ದು ಎರಡನೆಯ ಅಲೆಯಲ್ಲಿ ಶೇ.22.17ಗೇರಿದೆ! ಹಾಗೆಯೇ 80 ವಯಸ್ಸು ದಾಟಿದವರಲ್ಲಿ ಅದು ಶೇ.7.82ನಿಂದ 9.81ಗೇರಿದೆ! ಇದರರ್ಥ ಅತೀ ಹಿರಿಯರ ಜತೆಗೆ ಅತೀ ಎಳೆಯರೂ ಇಂದು ‘ಅಪಾಯ ವಲಯ’ದಲ್ಲಿದ್ದಾರೆ ಮತ್ತು ಆ ಕಾರಣಕ್ಕಾಗಿ ಅವರ ಬಗ್ಗೆ ಹೆಚ್ಚಿನ ಕಾಳಜಿಯ ಅಗತ್ಯವಿದೆ. ಇಷ್ಟಾಗಿಯೂ, ಯುವಜನತೆಯಲ್ಲಿ ರೋಗನಿರೋಧಕ ಶಕ್ತಿ ಎಷ್ಟು ಕಾಲದವರೆಗೆ ಅಗತ್ಯ ಪ್ರಮಾಣದಲ್ಲಿಯೇ ಇರುತ್ತದೆ ಎನ್ನುವ ಬಗ್ಗೆ ನಿಖರ ಮಾಹಿತಿ ಲಭ್ಯವಿಲ್ಲದಿರುವುದು, ವೈರಸ್ನ ಮತ್ತಾವ ರೂಪಾಂತರಗಳು ಅವತರಿಸಬಹುದು ಮತ್ತು ಅವುಗಳ ಸ್ವರೂಪವೇನು ಎಂದು ಊಹಿಸಲಾಗದ ಕಾರಣ ತಂತಮ್ಮ ಸುರಕ್ಷೆ ಎಲ್ಲರ ಕಾಳಜಿಯಾಗಬೇಕು. ಸರ್ಕಾರ ಸೂಚಿಸುತ್ತಿರುವ ನಿಯಮಗಳಿಗಿಂತಲೂ ಹೆಚ್ಚಿನ ಸುರಕ್ಷಾ ನಿಯಮಗಳನ್ನು ಜನತೆ ತನಗೆ ತಾನೇ ವಿಧಿಸಿಕೊಳ್ಳುವುದು ಮತ್ತು ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳನ್ನು ‘ಜವಾಬ್ದಾರಿಯುತ’ವಾಗಿ ಬಳಸಿಕೊಳ್ಳುವ ಅಗತ್ಯವಿದೆ.
ಇಲ್ಲಿ ವ್ಯಾಕ್ಸಿನೇಷನ್ ಬಗೆಗಿನ ಕೆಲವು ತಪು್ಪ ಕಲ್ಪನೆಗಳ ಪ್ರಸ್ತಾಪವೂ ಅಗತ್ಯ. ಸದ್ಯಕ್ಕೆ ಬಳಸಲಾಗುತ್ತಿರುವ ಲಸಿಕೆಗಳಷ್ಟೇ ಕರೊನಾ ಸೋಂಕನ್ನು ತಡೆಯುವುದಿಲ್ಲ ಎಂಬುದನ್ನು ಎಲ್ಲರೂ ಮೊದಲು ಅರಿಯಬೇಕು. ಸರ್ಕಾರಿ ಅಂಕಿಅಂಶಗಳೇ ಹೇಳುವ ಪ್ರಕಾರ ಲಸಿಕೆ ಪಡೆದ ಪ್ರತೀ ಹತ್ತುಸಾವಿರ ಜನರಲ್ಲಿ ಇಬ್ಬರಿಂದ ನಾಲ್ವರು ಸೋಂಕಿಗೆ ತುತ್ತಾಗಿದ್ದಾರೆ. ಕೋವಿಶೀಲ್ಡ್ ಲಸಿಕೆಯ ಮೊದಲ ಡೋಸ್ ಪಡೆದ ಹತ್ತುಕೋಟಿ ಮೂರು ಲಕ್ಷ ಜನರಲ್ಲಿ 17,145 (ಶೇ.0.02) ಜನರೂ, ಎರಡೂ ಡೋಸ್ಗಳನ್ನು ಪಡೆದ 1 ಕೋಟಿ 57 ಲಕ್ಷ ಜನರಲ್ಲಿ 5,014 (ಶೇ.0.03) ಜನರೂ ಸೋಂಕಿಗೀಡಾಗಿದ್ದಾರೆ. ಹಾಗೆಯೇ ಕೊವ್ಯಾಕ್ಸಿನ್ ಲಸಿಕೆಯ ಮೊದಲ ಡೋಸ್ ಪಡೆದ 93,56,000 ಜನರಲ್ಲಿ 4.208 (ಶೇ.0.04) ಜನರೂ, ಎರಡೂ ಡೋಸ್ ಪಡೆದ 17,37,000 ಜನರಲ್ಲಿ 695 (ಶೇ.0.04) ಜನರೂ ಸೋಂಕಿಗೊಳಗಾಗಿದ್ದಾರೆ. ಇದಕ್ಕೆ ಕಾರಣ ಲಸಿಕೆ ಪಡೆದವರ ವಯೋಮಾನ, ದೇಹಾರೋಗ್ಯದ ಸ್ಥಿತಿ, ರೋಗನಿರೋಧಕ ಶಕ್ತಿ ಮತ್ತು ಮುಖ್ಯವಾಗಿ ಅವರು ಪಾಲಿಸುತ್ತಿರುವ/ಪಾಲಿಸದಿರುವ ಸುರಕ್ಷಾ ವಿಧಾನಗಳು. ಅಂದರೆ ಲಸಿಕೆ ಪಡೆದ ನಂತರ ಸುರಕ್ಷಾ ನಿಯಮಗಳನ್ನು ಧಿಕ್ಕರಿಸುವುದು ಸೋಂಕಿಗೆ ಆಹ್ವಾನ ನೀಡಿದಂತೆ. ಲಸಿಕೆಗಳಿಂದಾಗುವ ಅತಿದೊಡ್ಡ ಪ್ರಯೋಜನವೆಂದರೆ ಆ ನಂತರ ಬರಬಹುದಾದ ಸೋಂಕು ಘಾತಕವಾಗಿರುವುದಿಲ್ಲ, ಆಸ್ಪತ್ರೆಗೆ ದಾಖಲಾಗದೇ ಮನೆಯಲ್ಲೇ ಶುಶ್ರೂಷೆ ಮಾಡಿ(ಸಿ)ಕೊಂಡು ಸೋಂಕಿನಿಂದ ಹೊರಬರಬಹುದು. ಅವರೇನೋ ಹೆಚ್ಚಿನ ಶ್ರಮವಿಲ್ಲದೇ ಆರಾಮವಾಗಬಹುದು. ಆದರೆ ಅವರಿಂದಾಗಿ, ಲಸಿಕೆ ಪಡೆಯದಿರುವವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆಯಿರುವವರು ತೊಂದರೆಗೀಡಾಗುತ್ತಾರೆ ಎನ್ನುವುದನ್ನು ಮರೆಯಬಾರದು. ತಮ್ಮದರ ಜತೆಗೆ ಇತರರ ಆರೋಗ್ಯದ ಬಗೆಗೂ ಕಾಳಜಿ ವಹಿಸಬೇಕಾದದ್ದು ಎಲ್ಲರ ಕರ್ತವ್ಯ.
ಈ ದುರ್ಭರ ಸ್ಥಿತಿಯನ್ನೂ ನಾವು ದಾಟಿ ಮುಂದೆ ಹೋಗೇಹೋಗುತ್ತೇವೆ. ಆದರೆ ಆ ಹಾದಿಯಲ್ಲಿ ನಾವು ತೆರಬೇಕಾದ ಬೆಲೆಯನ್ನು ಎಷ್ಟು ಸಾಧ್ಯವೋ ಅಷ್ಟು ಕಡಿಮೆಗೊಳಿಸುವುದು ನಮ್ಮದೇ ಜವಾಬ್ದಾರಿ. ಈಗ ನಾವು ಹೇಗೆ ವರ್ತಿಸುತ್ತೇವೆ ಎನ್ನುವುದು ಮುಂದಿನ ಅಕ್ಟೋಬರ್ನಲ್ಲಿ ಎರಗಬಹುದೆಂದು ನಿರೀಕ್ಷಿಸಲಾಗಿರುವ ಮೂರನೆಯ ಅಲೆಯನ್ನು ಹೇಗೆ ನಿಭಾಯಿಸಬಲ್ಲೆವು ಎನ್ನುವುದಕ್ಕೆ ಮುನ್ಸೂಚನೆಯಾಗುತ್ತದೆ, ಅದನ್ನು ಸಕ್ಷಮವಾಗಿ ಎದುರಿಸಲು ನಮ್ಮನ್ನು ತಯಾರು ಮಾಡುತ್ತದೆ. ಈ ಸಂದರ್ಭದಲ್ಲಿ ಅಮೆರಿಕ, ಬ್ರಿಟನ್, ಫ್ರಾನ್ಸ್ ಮತ್ತು ಸೌದಿ ಅರೇಬಿಯಾ ಸೇರಿ 13 ದೇಶಗಳು ಅಗತ್ಯ ವೈದ್ಯಕೀಯ ಸಾಮಗ್ರಿಗಳನ್ನು ಪೂರೈಸಿ ನಮ್ಮ ನೆರವಿಗೆ ನಿಂತಿವೆ. ನೆರೆಯ ಪಾಕಿಸ್ತಾನ ಸಹ ಸಹಾಯದ ಘೊಷಣೆ ಮಾಡಿದೆ. ಅಂತಹದೇ ಪೂರೈಕೆಯ ಘೊಷಣೆ ಚೀನಾದಿಂದ ಬಂದಿದ್ದರೂ ನಾವು ಎಚ್ಚರಿಕೆಯಿಂದಿರಬೇಕು. ವರ್ಷದ ಹಿಂದೆ ಅದು ನಮಗೆ ಮಾರಿದ ಟೆಸ್ಟಿಂಗ್ ಕಿಟ್ಗಳು ಅಸಮರ್ಪಕವೆನಿಸಿ ವ್ಯರ್ಥವಾದುದನ್ನೂ, ಪಿಪಿಇ ಕಿಟ್ಗಳೇ ಸೋಂಕುಪೂರಿತವಾಗಿದ್ದುದನ್ನೂ, ಅಂತಹವುಗಳನ್ನು ನಮಗೆ ಹಣಕ್ಕಾಗಿ ಮಾರಿದ ಚೀನೀ ಸರ್ಕಾರದ ಮನೋಭಾವವನ್ನೂ ನಾವು ಮರೆಯಬಾರದು.