

ಜನತಾ ಪ್ರಯೋಗದ ವೈಫಲ್ಯದಿಂದ ಇಂದಿನವರೆಗಿನ ಈ ಅವಧಿಯಲ್ಲಿ ಒಂದು ರಾಜಕೀಯ ಪಕ್ಷವಾಗಿ ಬಿಜೆಪಿ ಪಾಠಗಳನ್ನು ಕಲಿಯುತ್ತ ಆ ಮೂಲಕ ಪ್ರಬುದ್ಧವಾಗುತ್ತ ಸಾಗಿದ್ದನ್ನು ಗುರುತಿಸಬಹುದು. ಮೊದಲಿಗೆ ಜನತಾ ಪ್ರಯೋಗದಲ್ಲೇ, ತನ್ನ ಪೂರ್ವಾವತಾರದಲ್ಲೇ ಅದು ಕಲಿತ ಪಾಠವನ್ನು ಉಲ್ಲೇಖಿಸಿಯೇ ನಾವು ಮುಂದೆ ಹೋಗುವುದು ಉಚಿತ.
ಜನತಾ ಪಕ್ಷದಲ್ಲಿ ಒಂದುಗೂಡಿದ ನಾಲ್ಕು ಪಕ್ಷಗಳ ನೀತಿಗಳಲ್ಲಿ ಯಾವುದೇ ಹೊಂದಾಣಿಕೆ ಇರಲಿಲ್ಲ. ಹೀಗಾಗಿಯೇ ಅದನ್ನು ಸಂಜಯ್ ಗಾಂಧಿ ‘ನಾಲ್ಕು ಕಾಲಿನ ಕತ್ತೆ’ ಎಂದು ಲೇವಡಿ ಮಾಡಿದ್ದು. ಕಾಂಗ್ರೆಸ್ನಿಂದ ಹೊರಬಿದ್ದ ಜಗಜೀವನ್ ರಾಮ್ ಹುಟ್ಟುಹಾಕಿದ ‘ಕಾಂಗ್ರೆಸ್ ಫಾರ್ ಡೆಮಾಕ್ರೆಸಿ’ (ಸಿಎಫ್ಡಿ) ಎಂಬ ಬಾಲವೂ ಸೇರಿಕೊಂಡು ಕತ್ತೆ ಸಂಪೂರ್ಣಗೊಂಡು ಮಾರ್ಚ್ 1977ರಲ್ಲಿ ಕಾಂಗ್ರೆಸ್ಗೆ ಮುಖ್ಯವಾಗಿ ಇಂದಿರಾ ಮತ್ತು ಸಂಜಯ್ಗೇ ಭಾರಿ ಒದೆತ ನೀಡಿತೇನೋ ನಿಜ. ಆದರೆ ಅನತಿ ಕಾಲದಲ್ಲೇ ಜನತಾ ಪಕ್ಷದ ಆಂತರಿಕ ವೈರುಧ್ಯಗಳು ಮೊದಲಿಗೆ ರಾಜ್ನಾರಾಯಣ್ ಮತ್ತು ಪಿಲೂ ಮೋದಿಯವರ ಮಾತುಗಳಲ್ಲಿ ಹೊರಬರತೊಡಗಿದ ಅದು ನಂತರ ಮೊರಾರ್ಜಿ-ಚರಣ್ ಸಿಂಗ್ ಬಹಿರಂಗ ಕಿತ್ತಾಟವಾಗಿ ಅನಾವರಣಗೊಳ್ಳತೊಡಗಿತು. ಆ ಸನ್ನಿವೇಶದಲ್ಲಿ ಜನತಾ ಪಕ್ಷದ ಜನಸಂಘ ಗುಂಪಿನ ನಾಯಕರು ಗಾಂಭೀರ್ಯ ಪ್ರದರ್ಶಿಸಿದಂತೆ ಕಂಡರೂ ಅವರಲ್ಲಿದ್ದುದು ಗಾಂಭೀರ್ಯಕ್ಕಿಂತಲೂ ತಮ್ಮ ತಪು್ಪನಡೆಯೊಂದರ ಬಗ್ಗೆ ಅವರಲ್ಲೇ ಮೂಡಿದ ಪಶ್ಚಾತ್ತಾಪದಂತೆ ಕಾಣುತ್ತದೆ.
ಜನತಾ ಪಕ್ಷದ ಸೃಷ್ಟಿಯಲ್ಲಿ, ಮುಖ್ಯವಾಗಿ ಮೊರಾರ್ಜಿ ದೇಸಾಯಿ ಮತ್ತು ಜಗಜೀವನ್ ರಾಮ್ ಜತೆ ಜನಸಂಘ ಸೇರಿದ್ದು ರಾಷ್ಟ್ರಹಿತಘಾತಕ ಕೃತ್ಯವೊಂದರಲ್ಲಿ ತಿಳಿಯದೇ ಭಾಗಿಯಾದಂತಹ ಕೃತ್ಯ. ಜನಸಂಘದ ರಾಷ್ಟ್ರಭಕ್ತಿಗೆ ವಿರುದ್ಧವಾಗಿ ಆ ಇಬ್ಬರು ಮಾಜಿ ಕಾಂಗ್ರೆಸ್ಸಿಗರಲ್ಲಿದ್ದುದು ರಾಷ್ಟ್ರಹಿತವನ್ನು ಬಲಿಗೊಡುವ ಮನೋಭಾವ. ದೇಸಾಯಿ ಅಣ್ವಸ್ತ್ರದ ವಿಷಯದಲ್ಲಿ ಪಾಕಿಸ್ತಾನಕ್ಕೆ ಸಹಕಾರಿಯಾಗಿ ನಡೆದುಕೊಂಡದ್ದರ ಜತೆಗೆ ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎಗೂ ಸಹಕಾರಿಯಾಗಿ ನಡೆದುಕೊಂಡಿದ್ದರು. ಅವರು ಸಿಐಎನ ಪೇ ರೋಲ್ನಲ್ಲಿದ್ದ ಬಗ್ಗೆ ಅಮೆರಿಕದ ಪತ್ರಕರ್ತ ಸೇಮರ್ ಹರ್ಶ್ ಬರೆದದ್ದರ ವಿರುದ್ಧ ಮಾಜಿ ಪ್ರಧಾನಿ ಅಮೆರಿಕದ ನ್ಯಾಯಾಲಯವೊಂದರಲ್ಲೇ ದಾವೆ ಹೂಡಿದ್ದೇನೋ ಸರಿ, ಆದರೆ ತಮ್ಮ ಮೇಲಿನ ಆರೋಪ ಸತ್ಯದೂರ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡುವುದರಲ್ಲಿ ಅವರು ಸೋತುಹೋದರು. ಇನ್ನು, 1971ರ ಯುದ್ಧದ ಸಮಯದಲ್ಲಿ ಇಂದಿರಾ ಮಂತ್ರಿಮಂಡಲ ತೆಗೆದುಕೊಳ್ಳುತ್ತಿದ್ದ ನಿರ್ಣಯಗಳನ್ನು ರಕ್ಷಣಾಮಂತ್ರಿಯಾಗಿದ್ದ ಜಗಜೀವನ್ ರಾಮ್ ಅವರೇ ಒಡನೆಯೇ ಸಿಐಎಗೆ ತಲುಪಿಸುತ್ತಿದ್ದರು! ಇಂಥವರು ಪ್ರಧಾನಿ ಹಾಗೂ ಉಪಪ್ರಧಾನಿಯಾಗಲು ಸಹಕರಿಸಿದ್ದು ಸಹಜವಾಗಿಯೇ ಜನಸಂಘದ ನಾಯಕರನ್ನು ಪಶ್ಚಾತ್ತಾಪಕ್ಕೆ ದೂಡಿ, ಬಹು ದೊಡ್ಡ ಪಾಠವೊಂದನ್ನು ಅವರಿಗೆ ಕಲಿಸಿದ್ದರಲ್ಲಿ ಅಚ್ಚರಿಯಿಲ್ಲ.
1980ರ ಜನವರಿಯಲ್ಲಿ ಇಂದಿರಾ ಮತ್ತೆ ಅಧಿಕಾರಕ್ಕೆ ಬಂದರು. ಮುಂದಿನ ನಾಲ್ಕು ತಿಂಗಳಲ್ಲಿ ಜನಸಂಘ ಜನತಾ ಪಕ್ಷದಿಂದ ಹೊರಬಂದು ಭಾರತೀಯ ಜನತಾ ಪಕ್ಷವಾಗಿ ಹೊಸ ಹುಟ್ಟು ಪಡೆಯಿತು. ಪ್ರಾರಂಭಿಕ ವರ್ಷಗಳಲ್ಲಿ ಅದರ ರಾಜಕೀಯ ಹೆಜ್ಜೆಗಳು ರಾಷ್ಟ್ರರಾಜಕಾರಣದಲ್ಲಿ ಆಳವಾಗೇನೂ ಮೂಡಲಿಲ್ಲ. ಆದರೆ ಆ ದಶಕದ ಕೊನೆಯಲ್ಲಿ ದೇಶದ ರಾಜಕೀಯ ಪರಿಸ್ಥಿತಿ ಮಹತ್ತರ ತಿರುವು ಪಡೆದುಕೊಳ್ಳತೊಡಗಿತು, ಸಮ್ಮಿಶ್ರ ರಾಜಕಾರಣ ಮತ್ತೆ ತಲೆಯೆತ್ತಿತ್ತು. ಇಂದಿರಾ ಹತ್ಯೆಯ ಪರಿಣಾಮವಾಗಿ ಎದ್ದ ಸಂತಾಪದ ಅಲೆಗಳ ಮೇಲೇರಿ ಡಿಸೆಂಬರ್ 1984ರ ಲೋಕಸಭಾ ಚುನಾವಣೆಗಳಲ್ಲಿ ಪ್ರಚಂಡ ವಿಜಯ ಸಾಧಿಸಿದ ಕಾಂಗ್ರೆಸ್ನ ಅದೃಷ್ಟರೇಖೆ ಮುಂದಿನ ಮೂರೇ ವರ್ಷಗಳಲ್ಲಿ ವೇಗವಾಗಿ ಕೆಳಗಿಳಿಯತೊಡಗಿತ್ತು. ಬೋಫೋರ್ಸ್ ಹಗರಣಕ್ಕೆ ಸಿಲುಕಿದ ರಾಜೀವ್ ಗಾಂಧಿ ಮತ್ತು ಅದರಿಂದಾಗಿಯೇ ಕಾಂಗ್ರೆಸ್ನಿಂದ ಹೊರಬಿದ್ದ ರಕ್ಷಣಾ ಸಚಿವ ವಿಶ್ವನಾಥ್ ಪ್ರತಾಪ್ ಸಿಂಗ್ ಪರಸ್ಪರ ಎದುರುಬದುರಾಗಿ ನಿಂತ ನವೆಂಬರ್ 1989ರ ಚುನಾವಣೆಗಳಲ್ಲಿ ಮತದಾರನ ಆಯ್ಕೆ ಛಿದ್ರಗೊಂಡ ಪರಿಣಾಮವಾಗಿ ಯಾವ ಪಕ್ಷಕ್ಕೂ ಬಹುಮತ ದಕ್ಕಲಿಲ್ಲ. ಬದಲಾದ ಸನ್ನಿವೇಶದಲ್ಲಿ ಭ್ರಷ್ಟಾಚಾರಿ ಕಾಂಗ್ರೆಸ್ಗೆ ಬೆಂಬಲ ನೀಡಲು ಯಾವ ಪಕ್ಷವೂ ಮುಂದೆ ಬರಲಿಲ್ಲ. ಎಡಪಕ್ಷಗಳ ಗುಂಪು ಹಾಗೂ ಬಿಜೆಪಿ ವಿ.ಪಿ. ಸಿಂಗ್ರ ಜನತಾ ದಳಕ್ಕೆ ಬೆಂಬಲ ನೀಡಿ ದೇಶದ ಎರಡನೆಯ ಸಮ್ಮಿಶ್ರ ಸರ್ಕಾರದ ರಚನೆಗೆ ಕಾರಣವಾದವು. ಆದರೆ ಎಡಪಕ್ಷಗಳಂತೆ ಬಿಜೆಪಿ ಸರ್ಕಾರಕ್ಕೆ ಸೇರದೇ ಹೊರಗಿನಿಂದ ಬೆಂಬಲ ನೀಡುವ ನಿಲುವು ತಳೆಯಿತು. ಅದಕ್ಕೆ ಕಾರಣ ಎರಡು- ಒಂದು, ರಾಷ್ಟ್ರರಕ್ಷಣೆ ವಿಷಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಿಡಿದೆದ್ದ ಸಿಂಗ್ ಪರವಾಗಿ ನಿಲ್ಲಬೇಕೆಂಬ ನೈತಿಕ ಜವಾಬ್ದಾರಿ; ಎರಡು, ಆಳ ತಿಳಿಯದ ಬಾವಿಗೆ ಜಿಗಿಯಬಾರದೆಂಬ ವಿವೇಕ. ಬಿಜೆಪಿ ತಪು್ಪ ಹೆಜ್ಜೆ ಇಡದ ಪಾಠ ಕಲಿತಿತ್ತು ಮತ್ತು ರಾಷ್ಟ್ರ ರಾಜಕಾರಣದಲ್ಲಿ ನಿರ್ಣಾಯಕ ಪಾತ್ರ ವಹಿಸುವ ಹಂತಕ್ಕೆ ಬೆಳೆದುನಿಂತಿತ್ತು.
ಅಯೋಧ್ಯಾ ಪ್ರಕರಣ ಕುರಿತಂತೆ ಬಿಜೆಪಿ ಮತ್ತು ಸರ್ಕಾರದೊಳಗಿದ್ದ ಪಕ್ಷಗಳ ನಡುವೆ ಸಹಜವಾಗಿಯೇ ತಾಳಮೇಳ ಇರಲಿಲ್ಲ ಮತ್ತು ಆ ಅಭಿಪ್ರಾಯಭೇದ ಅನತಿಕಾಲದಲ್ಲೇ ಹೊರಬೀಳುವುದು ನಿರೀಕ್ಷಿತವೇ ಆಗಿತ್ತು. ಜತೆಗೆ ಸರ್ಕಾರವನ್ನು ಉಳಿಸಿಕೊಳ್ಳುವ ಇರಾದೆ ವಿ.ಪಿ. ಸಿಂಗ್ರಿಗೂ ಇದ್ದಂತಿರಲಿಲ್ಲ. ಮೊದಲೇ ಉಪಪ್ರಧಾನಿ ದೇವಿಲಾಲ್ರ ನೌಟಂಕಿಗಳು ಹಾಗೂ ಮಂಡಲ್ ಅಶಾಂತಿಯಿಂದ ನರಳುತ್ತಿದ್ದ ಸರ್ಕಾರ ಐಸಿಯುಗೆ ದೂಡಲ್ಪಟ್ಟದ್ದು ಪ್ರಧಾನಿ ಸಿಂಗ್ ‘ಸರ್ಕಾರ್ ಗಿರೇಗಿ, ಮಸ್ಜಿದ್ ನಹೀಂ’ ಎಂದು ಆವೇಶದ ಹೇಳಿಕೆ ನೀಡಿ, ತಾವು ರಾಜಕಾರಣಿ ಅಲ್ಲ ಎಂದು ತೋರಿಸಿಕೊಂಡಾಗ. ಮುಂದಿನ ಘಟನೆಗಳು ವೇಗವಾಗಿ ಜರುಗಿದವು, ಸರ್ಕಾರಕ್ಕೆ ತನ್ನ ಸಮರ್ಥನೆಯನ್ನು ಬಿಜೆಪಿ ಹಿಂತೆಗೆದುಕೊಂಡಿತು, ಕಾಂಗ್ರೆಸ್ ಬೆಂಬಲದಿಂದ ಮಾಜಿ ಕಾಂಗ್ರೆಸ್ಸಿಗ ಚಂದ್ರಶೇಖರ್ ಪ್ರಧಾನಿಯಾದರು. ಅದೂ ನಾಲ್ಕು ದಿನಗಳ ಆಟವಷ್ಟೇ. ಅದು ತಂದ ಒಂದೇ ಒಂದು ಗೋಚರವಾಗುವ ‘ಬೆಳವಣಿಗೆ’ಯೆಂದರೆ ಬತ್ತಿಹೋಗಿದ್ದ ಚಂದ್ರಶೇಖರರ ಕೆನ್ನೆಗಳು ತಿಂಗಳೊಪ್ಪತ್ತಿನಲ್ಲಿ ತುಂಬಿಕೊಂಡದ್ದು.
1990ರ ದಶಕದ ಮೊದಲರ್ಧ ಭಾಗ ಪಿ.ವಿ. ನರಸಿಂಹರಾವ್ ಸರ್ಕಾರ ಐತಿಹಾಸಿಕ ಕ್ರಮಗಳ ಮೂಲಕ ದೇಶದ ಆರ್ಥಿಕ ಭವಿಷ್ಯವನ್ನು ಸಕಾರಾತ್ಮಕವಾಗಿ ಬದಲಾಯಿಸುತ್ತಿದ್ದುದನ್ನೂ, ರಾಜಕೀಯವಾಗಿ ಬಿಜೆಪಿಯ ಜನಪ್ರಿಯತೆ ವೃದ್ಧಿಯಾಗುತ್ತ ಹೋದದ್ದಕ್ಕೂ ಸಾಕ್ಷಿಯಾಯಿತು. 1996ರ ಚುನಾವಣೆಗಳಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಮೊಟ್ಟಮೊದಲ ಬಾರಿಗೆ ಸರ್ಕಾರ ರಚಿಸಿತು. ಆದರೆ ಬಹುಮತ ಸಾಬೀತುಗೊಳಿಸಲು ಇತರ ಪಕ್ಷಗಳ ಬೆಂಬಲ ಗಳಿಸುವಲ್ಲಿ ವಿಫಲವಾದ ವಾಜಪೇಯಿ ಸರ್ಕಾರ ಹದಿಮೂರೇ ದಿನಗಳಲ್ಲಿ ರಾಜೀನಾಮೆ ಸಲ್ಲಿಸಿತು. ಈ ಅನುಭವ ಸಮ್ಮಿಶ್ರ ರಾಜಕಾರಣದ ಅಗತ್ಯ ಮತ್ತು ಆ ದಾರಿಯಲ್ಲಿ ಸಾಗಬೇಕಾದರೆ ತನ್ನ ನೀತಿಗಳಲ್ಲಿ ಅಗತ್ಯವಾದಷ್ಟು ರಾಜಿಗೆ ತಯಾರಾಗಿರಬೇಕೆಂಬ ಪಾಠವನ್ನು ಬಿಜೆಪಿಗೆ ಮನವರಿಕೆ ಮಾಡಿಕೊಟ್ಟಿತು. ಬಿಜೆಪಿ ಅಧ್ಯಕ್ಷ ಎಲ್.ಕೆ.ಆಡ್ವಾಣಿ 1998ರಲ್ಲಿ ಸಮ್ಮಿಶ್ರ ರಾಜಕಾರಣಕ್ಕೆ ಒತ್ತುಕೊಟ್ಟು, ಬಿಜೆಪಿ ನಾಯಕತ್ವದಲ್ಲಿ 32 ಪಕ್ಷಗಳ ಒಕ್ಕೂಟವಾದ ನ್ಯಾಷನಲ್ ಡೆಮೋಕ್ರಾಟಿಕ್ ಅಲಯನ್ಸ್ (ಎನ್ಡಿಎ) ಕಟ್ಟಿದರು. ಬಿಜೆಪಿ ಅಷ್ಟೇ ಅಲ್ಲ, ರಾಷ್ಟ್ರರಾಜಕಾರಣದಲ್ಲೂ ಇದೊಂದು ಮಹತ್ತರ ತಿರುವು.
ಎನ್ಡಿಎ ಮೊದಲಿಗೆ 13 ತಿಂಗಳು ಆಡಳಿತ ನಡೆಸಿ, ಮಧ್ಯಂತರ ಚುನಾವಣೆ ಗಳಲ್ಲಿ ಮತ್ತಷ್ಟು ಸದೃಢವಾಗಿ ಹೊರಹೊಮ್ಮಿ ಐದು ವರ್ಷಗಳ ಅವಧಿ ಪೂರೈಸಿತು. ಆದರೆ ಬಿಜೆಪಿ ಕಲಿಯಬೇಕಾದ ಪಾಠಗಳು ಇನ್ನೂ ಪೂರ್ಣವಾಗಿರಲಿಲ್ಲ.
ಅಟಲ್ ಬಿಹಾರಿ ವಾಜಪೇಯಿ ಜನಮಾನ್ಯ ಪ್ರಧಾನಿ ಯಾಗಿದ್ದರು. ಸಹಯೋಗಿಗಳ ಭಾವನೆಗೆ ಬೆಲೆಕೊಟ್ಟು ಬಿಜೆಪಿ ಅಯೋಧ್ಯಾ ಪ್ರಕರಣದಲ್ಲಿ ರಾಜಿ ಮಾಡಿಕೊಂಡು ಅಷ್ಟರಮಟ್ಟಿಗೆ ತನ್ನ ವಿರೋಧಿಗಳಲ್ಲೂ ಮೆಚ್ಚುಗೆ ಗಳಿಸಿತ್ತು, ಎನ್ಡಿಎ ಸರ್ಕಾರ ಸುವರ್ಣ ಚತುಷ್ಪಥ ಹೆದ್ದಾರಿ ಯೋಜನೆಗಳಂತಹ ಆರ್ಥಿಕ ಅಭ್ಯುದಯಕ್ಕೆ ಒತ್ತುನೀಡುವ ಯೋಜನೆಗಳನ್ನು ತಂದಿತ್ತು. ವಿದೇಶನೀತಿಗೆ ಬಂದರೆ, ಕಾರ್ಗಿಲ್ ಯುದ್ಧದಲ್ಲಿ ಭಾರತ ಪರಿಣಾಮಕಾರಿ ರಕ್ಷಣಾ ಹಾಗೂ ರಾಜತಾಂತ್ರಿಕ ನಿಲುವುಗಳನ್ನು ಪ್ರದರ್ಶಿಸಿ ಪಾಕಿಸ್ತಾನವನ್ನು ಮಣಿಸಿದ್ದಲ್ಲದೆ ಅಮೆರಿಕಾ, ರಷ್ಯಾ ಜತೆಗೆ ಚೀನಾದಿಂದಲೂ ಶಹಭಾಸ್ಗಿರಿ ಪಡೆದಿತ್ತು. ಇಷ್ಟಾಗಿಯೂ ಬಿಜೆಪಿ ನೇತೃತ್ವದ ಎನ್ಡಿಎ ಮೇ 2004ರ ಚುನಾವಣೆ ಗಳಲ್ಲಿ ಹಿನ್ನಡೆ ಅನುಭವಿಸಿತು. ಯಾಕೆ? ಕಾರಣ ಸರಳ, ಒಳಗಿನ ವೈರಿಗಳು!
2002ರ ಗುಜರಾತ್ ಕೋಮು ಹಿಂಸಾಚಾರಕ್ಕೆ ಕಾರಣವಾದದ್ದು ಗೋಧ್ರಾ ರೈಲು ಹತ್ಯಾಕಾಂಡ. ಅದನ್ನು ಎಸಗಿದವರು ಆ ಪ್ರದೇಶದ ಕಾಂಗ್ರೆಸ್ ಬೆಂಬಲಿತ ಘಾಂಚಿ ಮುಸ್ಲಿಮರು. ಆದರೆ ಅದನ್ನು ಮುಚ್ಚಿಟ್ಟ ಕಾಂಗ್ರೆಸ್ ಮತ್ತದರ ಕೃಪಾಪೋಷಿತ ಮಾಧ್ಯಮಗಳು ಮತ್ತು ಎನ್ಜಿಓಗಳು ತಮ್ಮ ಷಡ್ಯಂತ್ರದ ಭಾಗವಾಗಿ ಎಲ್ಲ ತಪ್ಪನ್ನು ಮುಖ್ಯಮಂತ್ರಿ ನರೇಂದ್ರ ಮೋದಿಯವರ ತಲೆಗೆ ಕಟ್ಟಿ ಅವರನ್ನು ನರಹಂತಕ ಎಂದು ನಿಂದಿಸಿ ಅವರು ಮತ್ತು ಬಿಜೆಪಿ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದವು. ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ನಿಂದ ಇದಕ್ಕಿಂತ ಒಳ್ಳೆಯ ನಡವಳಿಕೆ ನಿರೀಕ್ಷಿಸುವುದು ಅರ್ಥಹೀನ. ಅಲ್ಲದೆ, ವಿರೋಧಪಕ್ಷವಾಗಿ ಕಾಂಗ್ರೆಸ್ ರಾಜಕೀಯಕ್ಕೆ ತೊಡಗುವುದು ಅಸಹಜವೂ ಅಲ್ಲ, ಅನಿರೀಕ್ಷಿತವೂ ಅಲ್ಲ. ಈ ಅಪಪ್ರಚಾರದ ಒಳಹೂರಣವನ್ನು ದೇಶದ, ಜಗತ್ತಿನ ಮುಂದೆ ಬಿಚ್ಚಿಡಬೇಕಾಗಿದ್ದಷ್ಟೇ ರ್ತಾಕವಾಗಿ ಬಿಜೆಪಿ ಮತ್ತು ಎನ್ಡಿಎ ಮಾಡಬೇಕಾಗಿದ್ದ ಕೆಲಸ. ಆದರೆ ನಾನಾವತಿ ಆಯೋಗಕ್ಕೆ ಗೋಧ್ರಾ ಪ್ರಕರಣದ ತನಿಖೆಯಲ್ಲಿ ಅಸಹಕಾರ ತೋರಿದ್ದು ಎನ್ಡಿಎ ಸರ್ಕಾರದ್ದೇ ರೈಲ್ವೇ ಮಂತ್ರಾಲಯ, ಮುಖ್ಯವಾಗಿ ರೈಲ್ವೇ ಮಂತ್ರಿ ನಿತೀಶ್ ಕುಮಾರ್! ಪರಿಣಾಮವಾಗಿ 2004ರ ಚುನಾವಣೆಗಳಿಗೆ ಮೊದಲೇ ಸತ್ಯ ಹೊರಬರದ ಕಾರಣ ಸೋನಿಯಾ ಗಾಂಧಿ ಮತ್ತವರ ಪರವಾದ ಮಾಧ್ಯಮಗಳು ಹೇಳಿದ್ದನ್ನೇ ಜನ ನಂಬಿದರು, ಬಿಜೆಪಿಯ ಬೆಂಬಲದ ಮೂಲ ಕಿರಿದಾಯಿತು! ಮೋದಿ ವಿರುದ್ಧದ ಎಲ್ಲ ಆರೋಪಗಳೂ ಸುಳ್ಳು ಮತ್ತು ದುರುದ್ದೇಶಪೂರಿತ ಎಂದು ನಾನಾವತಿ ಆಯೋಗದ ಜತೆ, ಸುಪ್ರೀಂ ಕೋರ್ಟ್ ನೇಮಿಸಿದ್ದ ವಿಶೇಷ ತನಿಖಾ ತಂಡ ಸಹ ತೀರ್ವನಿಸಿ ದೇಶಕ್ಕೆ ಸಾರುವ ಹೊತ್ತಿಗೆ ಏಳು ವರ್ಷಗಳು ಕಳೆದುಹೋಗಿದ್ದವು, ಸೋನಿಯಾ ನೇತೃತ್ವದ ಯುಪಿಎ ಒಂದರ ನಂತರ ಒಂದರಂತೆ ಎರಡು ಚುನಾವಣೆಗಳನ್ನು ಗೆದ್ದಿತ್ತು! ಒಂದುವೇಳೆ ನಾನಾವತಿ ಆಯೋಗಕ್ಕೆ ರೈಲ್ವೇ ಇಲಾಖೆ ಸಹಕರಿಸಿ, 2004ರ ಚುನಾವಣೆಗಳ ಮೊದಲೇ ಸತ್ಯ ಹೊರಬಂದಿದ್ದರೆ ಆ ಚುನಾವಣೆಯಲ್ಲಿ ಎನ್ಡಿಎ, ಮುಖ್ಯವಾಗಿ ಬಿಜೆಪಿ ಸೋಲುತ್ತಲೇ ಇರಲಿಲ್ಲ. ಆದಾಗ್ಯೂ, ಚುನಾವಣಾ ಹಿನ್ನಡೆಯ ಹಿನ್ನೆಲೆಯಲ್ಲಿ ನಿತೀಶ್ ಕುಮಾರರ ಸಂಯುಕ್ತ ಜನತಾ ದಳವನ್ನು ಹೊರಗಟ್ಟಿದ್ದರೆ ಬಿಹಾರದಲ್ಲೂ ನೆಲೆ ಕಳೆದುಕೊಳ್ಳುವ ಅಪಾಯ ಎನ್ಡಿಎಗಿತ್ತು. ನಿತೀಶ್ ಎನ್ಡಿಎಯಿಂದ ತನಗೆ ಬೇಕಾದ ಅನುಕೂಲ ಪಡೆದುಕೊಳ್ಳುತ್ತಿದ್ದರು, ಪ್ರತಿಯಾಗಿ ಒಕ್ಕೂಟಕ್ಕೆ ಅನುಕೂಲವಾಗುವಂತಹ ನಿಲುವನ್ನವರು ಹೊಂದಿರಲಿಲ್ಲ ಎಂಬ ವಿಚಾರ ಹೊರಬಿದ್ದಾಗಲೂ ಅವರನ್ನು ಹೊರಗಿಡಲು ಸಾಧ್ಯವಾಗದೇ ಹೋದದ್ದು ಹೀಗೆ. (ನಿತೀಶ್ 2014ರಲ್ಲಿ ತಾವಾಗಿಯೇ ಎನ್ಡಿಎ ತೊರೆದರು. ಅದು ಬೇರೆಯೇ ವಿಷಯ) ಒಟ್ಟಿನಲ್ಲಿ ನಿತೀಶ್ ಪ್ರಕರಣದಿಂದ ಬಿಜೆಪಿ ಕಲಿತ ಪಾಠ ನಂಬಿಕಸ್ತರಲ್ಲದವರನ್ನು ದೂರ ಮಾಡಿಕೊಳ್ಳದೇ ಹೊಸಹೊಸ ನಂಬಿಕಸ್ತರನ್ನು ಗಳಿಸಿಕೊಳ್ಳುತ್ತ ಹೋಗುವುದು. ನಿಜ ಹೇಳಬೇಕೆಂದರೆ, ಈ ಪಾಠವನ್ನು ಬಿಜೆಪಿ ಏಪ್ರಿಲ್ 1998ರಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ಕೈಕೊಟ್ಟು ವಾಜಪೇಯಿ ಸರ್ಕಾರ ಉರುಳುವಂತೆ ಮಾಡಿದಾಗಲೇ ತುಸುಮಟ್ಟಿಗೆ ಕಲಿತಿತ್ತು.
ಬಿಜೆಪಿ ಆರಂಭಿಸಿ ಯಶಸ್ಸು ಕಂಡ ಸಮ್ಮಿಶ್ರ ರಾಜಕಾರಣ ತಂತ್ರವನ್ನೇ ಸೋನಿಯಾ ಉಪಯೋಗಿಸಿ 2004ರಲ್ಲಿ 11 ಪಕ್ಷಗಳನ್ನು ಒಟ್ಟಿಗೆ ತಂದು ಯುಪಿಎ ಕಟ್ಟಿ ಸಮ್ಮಿಶ್ರ ರಾಜಕಾರಣದ ಮುಂದುವರಿಕೆಗೆ ಕಾರಣರಾದರು. ಬಿಜೆಪಿ-ವಿರೋಧಿ ಬಣ 10 ವರ್ಷ ದೇಶವಾಳಿದ ನಂತರ ಎನ್ಡಿಎ 2014ರಲ್ಲಿ ಮತ್ತೆ ಅಧಿಕಾರಕ್ಕೆ ಬಂತು. ಇದು ಸಾಧ್ಯವಾದದ್ದು ವಿರೋಧಿಗಳು ಬಿಜೆಪಿಗೆ ಹಚ್ಚಿದ್ದ ‘ಹಿಂದೂ ಉಚ್ಚ ವರ್ಗಗಳ ಪಕ್ಷ’ ಎಂಬ ಹಣೆಪಟ್ಟಿಯನ್ನು ಕಿತ್ತುಹಾಕಿ, ಭಾರತೀಯ ಎಂಬ ಪಕ್ಷದ ವಾಸ್ತವ ಮುಖವನ್ನು ಜನತೆಯ ಮುಂದಿಡುವುದರ ಮೂಲಕ. ಹಿಂದಿನ ಪಾಠಗಳ ಜತೆ ಈ ಪಾಠವೂ ಸೇರಿ ಬಿಜೆಪಿಯನ್ನು ಇಂದು ರಾಷ್ಟ್ರ ರಾಜಕಾರಣದಲ್ಲಿ ಒಂದು ಪ್ರಬಲ ಶಕ್ತಿಯಾಗಿಸಿವೆ.