‘ಚೀನೀ ಊರವರಿಗೆ’ ಊರ ದುಃಖ, ‘ಷಿ’ಗೆ ಸಮರದ ದುಃಖ!

Jagadagala
Published on
ಕರೊನಾ ಮಾರಿ 2020ರ ಮಾರ್ಚ್​ನಲ್ಲಿ ಜಗತ್ತನ್ನು ವೇಗವಾಗಿ ಆವರಿಸಿಕೊಳ್ಳತೊಡಗಿದಂತೆ ಅಂತಾರಾಷ್ಟ್ರೀಯ ಸಮ್ಮೇಳನಗಳು ರದ್ದಾದವು ಅಥವಾ ಮುಂದೂಡಲ್ಪಟ್ಟವು, ರಾಷ್ಟ್ರನಾಯಕರ ವಿದೇಶ ಪ್ರವಾಸಗಳೂ ನಿಂತುಹೋದವು. ಅಗತ್ಯವಾಗಿ ವಿಚಾರವಿನಿಮಯ ಮಾಡಿಕೊಳ್ಳಲೇಬೇಕಾದಾಗ ಆನ್​ಲೈನ್ ಮಾತುಕಥೆಗಳ ಹೊಸ ವಿಧಾನವನ್ನು ರೂಢಿಸಿಕೊಳ್ಳತೊಡಗಿದರು. ಸುಮಾರು ಒಂದೂವರೆ ವರ್ಷಗಳ ನಂತರ ಕರೊನಾ ಸಂಕ್ರಮಣ ತಹಬಂದಿಗೆ ಬಂದಿದೆಯೆಂಬ ನಂಬಿಕೆ ಮೂಡುತ್ತಿದ್ದಂತೇ ಜಗತ್​ನಾಯಕರ ಹಾರಾಟಗಳು ನಿಧಾನವಾಗಿ ಮತ್ತೆ ಆರಂಭಗೊಳ್ಳತೊಡಗಿದವು. ದ್ವಿಪಕ್ಷೀಯ, ತ್ರಿಪಕ್ಷೀಯ ಮಾತುಕಥೆಗಳ ಜತೆ ಅಂತಾರಾಷ್ಟ್ರೀಯ ಸಮ್ಮೇಳನಗಳೂ ಆಯೋಜನೆಗೊಳ್ಳತೊಡಗಿದವು. ಸೆಪ್ಟೆಂಬರ್​ನಲ್ಲಿ ನ್ಯೂಯಾರ್ಕ್​ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಾರ್ಷಿಕ ಅಧಿವೇಶನ, ಅಕ್ಟೋಬರ್​ನಲ್ಲಿ ಇಟಲಿಯ ರೋಮ್ಲ್ಲಿ ಜಿ-20 ದೇಶಗಳ ಸಮಾವೇಶವೂ ನಡೆಯಿತು. ಈಗ ಸ್ಕಾಟ್​ಲೆಂಡ್​ನ ಗ್ಲಾಸ್​ಗೋ ನಗರದಲ್ಲಿ ವಿಶ್ವಸಂಸ್ಥೆಯ ಹವಾಮಾನ ಸಮ್ಮೇಳನ ‘ಕಾಪ್26’ ನಡೆಯುತ್ತಿದೆ. ಈ ಎಲ್ಲ ಸಮ್ಮೇಳನಗಳಲ್ಲಿ ಎಲ್ಲ ಸದಸ್ಯ ದೇಶಗಳ ನಾಯಕರು ಖುದ್ದಾಗಿ ಅಥವಾ ಆನ್​ಲೈನ್​ನಲ್ಲಿ ಭಾಗವಹಿಸಿದ್ದಾರೆ, ಭಾಗವಹಿಸುತ್ತಿದ್ದಾರೆ. ಇವುಗಳಲ್ಲಿ ಗಮನ ಸೆಳೆಯುವ ಗೈರುಹಾಜರಿಯೆಂದರೆ ಚೀನೀ ಅಧ್ಯಕ್ಷರದು. ವಿಶ್ವಸಂಸ್ಥೆಯ ಮತ್ತು ಜಿ-20 ಸಮ್ಮೇಳನಗಳಲ್ಲಿ ಆನ್​ಲೈನ್ ಮೂಲಕ ಹಾಜರಿಯಿತ್ತ ಷಿ ಜಿನ್​ಪಿಂಗ್ ‘ಕಾಪ್26’ ಸಮ್ಮೇಳನದಿಂದ ಸಂಪೂರ್ಣವಾಗಿ ಹೊರಗುಳಿದಿದ್ದಾರೆ. ನಾಲ್ಕು ವರ್ಷಗಳ ಹಿಂದೆ ಜಾಗತೀಕರಣ ಪ್ರಕ್ರಿಯೆಯಿಂದ ಅಮೆರಿಕವನ್ನು ಹೊರಗೊಯ್ಯುವ ಮಾತುಗಳನ್ನು ಅಂದಿನ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಡತೊಡಗಿದ್ದಾಗ, ಹಾಗೇನಾದರೂ ಆದರೆ ಅಮೆರಿಕ ತೆರವುಮಾಡುವ ಸ್ಥಾನ ತುಂಬಲು ಚೀನಾ ತಯಾರಾಗಿದೆಯೆಂದು ಜಿನ್​ಪಿಂಗ್ ಡಾವೋಸ್ ಸಮ್ಮೇಳನದಲ್ಲಿ ಎದೆಯುಬ್ಬಿಸಿ ಘೊಷಿಸಿದ್ದರು. ವಿಶ್ವದ ಆರ್ಥಿಕ ನಾಯಕತ್ವ ವಹಿಸಿಕೊಳ್ಳಲು ಅಂದು ತಯಾರಾಗಿದ್ದ ಚೀನಾ ಇಂದು ಜಗತ್ತಿನ ವ್ಯವಹಾರಗಳಿಂದ ದೂರ ಉಳಿಯುತ್ತಿದೆ! ಅದರ ಅಧ್ಯಕ್ಷ ಜಗತ್ತಿನೆದುರು ಕಾಣಿಸಿಕೊಳ್ಳಲು ಹಿಂದೆಗೆಯುತ್ತಿದ್ದಾರೆ.

ಹಾಗೆ ನೋಡಿದರೆ ಜಿನ್​ಪಿಂಗ್ ಜಗತ್ತಿನೆದುರಿರಲಿ, ದೇಶವಾಸಿಗಳೆದುರೂ ಕಾಣಿಸಿಕೊಳ್ಳದೇ ಹೋದದ್ದೂ ಒಮ್ಮೆ ನಡೆದಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಲ್ಲಿ ಸುಮಾರು ಮೂರು ವಾರಗಳವರೆಗೆ ಅಧ್ಯಕ್ಷ ಷಿ ಮಾಯವಾಗಿದ್ದರು. ಆ ದಿನಗಳಲ್ಲಿ ದೇಶದೊಳಗೇ ಎರಡು ಸಮ್ಮೇಳನಗಳನ್ನು ಉದ್ಘಾಟಿಸಬೇಕಾದಾಗ ಅವರು ವಿಡಿಯೋ ರೆಕಾರ್ಡೆಡ್ ಭಾಷಣಗಳನ್ನಷ್ಟೇ ಕಳುಹಿಸಿದ್ದರು. ಅವರೇಕೆ ಅಷ್ಟು ದಿನಗಳು ಮಾಯವಾಗಿದ್ದರು, ಎಲ್ಲಿದ್ದರು ಎಂಬ ಬಗ್ಗೆ ಯಾವ ವಿವರಗಳೂ ಹೊರಬರಲಿಲ್ಲ. ಚೀನೀ ಸರ್ಕಾರ ಮತ್ತು ಕಮ್ಯೂನಿಸ್ಟ್ ಪಾರ್ಟಿ (ಸಿಸಿಪಿ) ಬಾಯಿ ತೆರೆಯಲೇ ಇಲ್ಲ. ಆದರೆ ಕಮ್ಯೂನಿಸ್ಟ್ ಪಕ್ಷದ ಉಚ್ಚಸ್ತರೀಯ ನಾಯಕರ ಶುಶ್ರೂಷೆಗಷ್ಟೇ ಮೀಸಲಾದ ಬೀಜಿಂಗ್​ನ ‘ಮಿಲಿಟರಿ ಹಾಸ್ಪಿಟಲ್ 301’ ಸುತ್ತ ಆ ದಿನಗಳಲ್ಲಿ ಸೇನೆ ದಿಗ್ಬಂಧನ ಹಾಕಿದ್ದು ಮಾತ್ರ ಸುದ್ದಿಯಾಯಿತು. ಅದರರ್ಥ ಅಧ್ಯಕ್ಷರು ಕರೊನಾ ಸೋಂಕಿಗೆ ತುತ್ತಾಗಿ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ ಎಂಬ ಪ್ರಶ್ನೆ ಅಲ್ಲಲ್ಲಿ ಕೇಳಿಬಂದದ್ದಂತೂ ನಿಜ. ಉತ್ತರವಂತೂ ಸಿಗಲಿಲ್ಲ ಬಿಡಿ. ಸರಿ, ಜಗನ್ನಾಯಕರಾಗಹೊರಟವರು ಸುಧಾರಿಸಿಕೊಂಡು ಬರಲಿ, ಪಟ್ಟವೇರಲಿ ಅಂತ ನಾವೆಲ್ಲ ಕಾದದ್ದೇ ಬಂತು. ಈಗ ನೋಡಿದರೆ ಆಸಾಮಿ ಹೊರಗೆ ಕಾಣಿಸಿಕೊಳ್ಳಲೂ ಹೆದರುತ್ತಿದ್ದಾರೆ! ಇದೇನು ಚೋದ್ಯ? ಬನ್ನಿ ಅದನ್ನಿಷ್ಟು ಶೋಧಿಸುವ.

ಚೀನೀ ಸರ್ಕಾರ, ಚೀನೀ ಕಮ್ಯೂನಿಸ್ಟ್ ಪಕ್ಷ ಅದೆಷ್ಟೇ ಮುಚ್ಚಿಟ್ಟರೂ, ಅವು ಹಾಕಿದ ಗೆರೆ ದಾಟದ ತುತ್ತೂರಿ ಮಾಧ್ಯಮಗಳು ಅದೆಷ್ಟೇ ರಂಗುರಂಗಿನ ಗಾಳಿಪಟಗಳನ್ನು ಹಾರಾಡಿಸಿದರೂ ಒಂದಷ್ಟು ವಿಷಯಗಳು ನಮಗೆ ದೊರೆಯುತ್ತಲೇ ಇವೆ. ಅವುಗಳ ಪ್ರಕಾರ ಚೀನಾದಲ್ಲಿ ಈಗ ಏನೇನೂ ನೆಟ್ಟಗಿಲ್ಲ! ವರ್ಷದ ಆರಂಭದಲ್ಲಿ ಚೇತರಿಕೆಯ ಸೂಚನೆ ನೀಡಿದ್ದ ಚೀನೀ ಅರ್ಥವ್ಯವಸ್ಥೆ ಎರಡನೆಯ ಮತ್ತು ಮೂರನೆಯ ತ್ರೖೆಮಾಸಿಕದಲ್ಲಿ ಕುಸಿತ ಕಂಡಿರುವುದು; ಕರೊನಾ ಕಾಲದಲ್ಲಿ ಅಮೆರಿಕನ್ ಡಾಲರ್​ಗೆದುರು ಚೀನೀ ಯುವಾನ್ ಶೇಕಡ ಹತ್ತಕ್ಕಿಂತಲೂ ಹೆಚ್ಚು ಅಪಮೌಲ್ಯಗೊಂಡಿರುವುದು; ಚೀನೀ ರಿಯಲ್ ಎಸ್ಟೇಟ್ ದೈತ್ಯಗಳಾದ ಅಥವಾ ಹಾಗೆ ತೋರಿಸಿಕೊಂಡಿದ್ದ ಎವರ್​ಗ್ರಾ್ಯಂಡ್, ಸಿನಿಕ್​ಹೋಲ್ಡಿಂಗ್ಸ್, ಫ್ಯಾಂಟೇಶಿಯಾಗಳು ಮುಳುಗಿಹೋಗುತ್ತಿರುವುದು, ತಮ್ಮ ಜತೆ ತಮ್ಮಲ್ಲಿ ಹಣ ಹೂಡಿದ ಮಿಲಿಯನ್​ಗಟ್ಟಲೆ ಚೀನಿಯರನ್ನೂ ಮುಳುಗಿಸುತ್ತಿರುವುದು ನಿಮಗೆ ತಿಳಿದೇ ಇದೆ. ವಿಷಯ ಅದಷ್ಟೇ ಅಲ್ಲ, ಚೀನೀಯರು ಈಗ ಎದುರಿಸುತ್ತಿರುವ ಬಹುದೊಡ್ಡ ಸಂಕಟ ಆಹಾರದ್ದು ಮತ್ತು ಈ ಚಳಿಗಾಲದಲ್ಲಿ ಬದುಕಿ ಉಳಿಯುವುದು ಹೇಗೆಂದು.

140 ಕೋಟಿಗೂ ಅಧಿಕ ಸಂಖ್ಯೆಯ ಜನರಿಗಾಗಿ ಅಗತ್ಯ ಆಹಾರಧಾನ್ಯಗಳನ್ನು ಬೆಳೆದುಕೊಳ್ಳುವುದು ಮತ್ತು ಹೊರಗಿನಿಂದ ಹಣ ಕೊಟ್ಟು ಖರೀದಿಸುವುದು 1980ರ ದಶಕದಿಂದಲೂ ಚೀನಾಗೆ ಕಷ್ಟವಾಗಿರಲಿಲ್ಲ. 1970ರ ದಶಕದ ನಂತರ ಆಹಾರ ಸಮಸ್ಯೆ ದೊಡ್ಡದಾಗಿ ಕಾಣಿಸಿಕೊಂಡದ್ದು ಕಳೆದ ವರ್ಷದ ಎರಡನೆಯ ಭಾಗದಲ್ಲಿ. ಅದಕ್ಕೆ ಕಾರಣಗಳಿದ್ದವು. ಕಳೆದ 80 ವರ್ಷಗಳಲ್ಲಿ ಚೀನಾ ಕಂಡಿಲ್ಲದಷ್ಟು ಭಾರಿ ಪ್ರಮಾಣದ ಮಳೆ 2020ರ ಜೂನ್-ಜುಲೈನಲ್ಲಿ ಸುರಿದು ದೇಶದ ಮೂರನೆಯ ಎರಡು ಭಾಗ ಪ್ರವಾಹ, ಭೂಕುಸಿತಗಳಲ್ಲಿ ತತ್ತರಿಸಿಹೋಯಿತು. ಆಗ ಒಂದಿಡೀ ಫಸಲು ನಾಶವಾಗಿಯೂ ಹೋಯಿತು. ಇದು ಸಾಲದು ಎಂಬಂತೆ ದ್ವಿದಳ ಧಾನ್ಯ ಹಾಗೂ ಮೆಕ್ಕೆಜೋಳವನ್ನು ಅಧಿಕಪ್ರಮಾಣದಲ್ಲಿ ಪೂರೈಸುತ್ತಿದ್ದ ಪೂರ್ವ ಆಫ್ರಿಕಾದ ದೇಶಗಳು ಮಿಡತೆಗಳ ಹಾವಳಿಗೆ ಸಿಲುಕಿದ್ದರಿಂದ ಅವುಗಳಿಗೇ ಆಹಾರದ ಕೊರತೆಯಾಗಿ ಅಷ್ಟರಮಟ್ಟಿಗೆ ಚೀನಾದ ಆಮದು ಧಕ್ಕೆಗೊಳಗಾಯಿತು. ಕರೊನಾ ಕಾರಣದಿಂದಾಗಿ ಥಾಯ್ಲ್ಯಾಂಡ್​ನಿಂದ ಮೊಟ್ಟೆಗಳು ಬರುವುದೂ ನಿಂತುಹೋಯಿತು. ಆಗ ಉಳಿದಿದ್ದ ಆಹಾರಧಾನ್ಯಗಳ ದಾಸ್ತಾನನ್ನು ಹೇಗೋ ಜತನದಿಂದ ಬಳಸಿಕೊಳ್ಳುವ ಜಾಣತನವನ್ನು ಸರ್ಕಾರ ರೂಪಿಸಿತು. ಇನ್ನು ಆರು ತಿಂಗಳು ಕಡಿಮೆ ಊಟ ಮಾಡಬೇಕೆಂದು ಅಧ್ಯಕ್ಷ ಜಿನ್​ಪಿಂಗ್ ಮಾಡಿಕೊಂಡ ಮನವಿಗೆ ಜನತೆಯೂ ಸ್ಪಂದಿಸಿತು. 2020 ಹೇಗೋ ಕಳೆದುಹೋಯಿತು. 2021ರ ಮೊದಲ ಭಾಗದಲ್ಲಿ ಎಲ್ಲವೂ ಸರಿಯಾಯಿತು ಎನ್ನುವ ಆಶಾಭಾವನೆ ಮೂಡಿತ್ತು.

ಆದರೆ ಇದೇ ಸೆಪ್ಟೆಂಬರ್-ಅಕ್ಟೋಬರ್​ನಲ್ಲಿ ದೇಶದ ಪೂರ್ವಾರ್ಧ ಭಾಗ ಮತ್ತೆ ಭೀಕರ ಮಳೆಗಾಲವನ್ನು ಕಂಡಿತು, ಮತ್ತೊಮ್ಮೆ ಪ್ರವಾಹ, ಭೂಕುಸಿತ, ಫಸಲು ನಾಶ. ಇದಕ್ಕೆ ಚೀನಾ ತಯಾರಾಗಿರಲಿಲ್ಲ. ಇದಕ್ಕೆ ಜೋಡಿಯಾಗಿ ವಕ್ಕರಿಸಿದ ಮತ್ತೊಂದು ಸಮಸ್ಯೆಯೆಂದರೆ ಆಹಾರಪದಾರ್ಥಗಳ ಸಾಗಾಟದ್ದು. ಇದಂತೂ ಚೀನೀ ಸರ್ಕಾರ ಮುಖ್ಯವಾಗಿ ಅತಿಬುದ್ಧಿವಂತ ಅಧ್ಯಕ್ಷ ಮಹಾಶಯ ಜಿನ್​ಪಿಂಗ್​ರ ಸ್ವಯಂಕೃತಾಪರಾಧ. ಇದರ ಮೂಲಕ್ಕೆ ಹೋಗಬೇಕಾದರೆ ನಾವು ಒಂದು ವರ್ಷ ಹಿಂದಕ್ಕೆ ಹೋಗಬೇಕು.

ಕರೊನಾ ಮಾರಿಯನ್ನು ಜಗತ್ತಿಗೆ ಹರಡಿದ್ದಕ್ಕಾಗಿ ಚೀನಾವನ್ನು ತರಾಟೆಗೆ ತೆಗೆದುಕೊಂಡದ್ದು, ತನಿಖೆಯಾಗಲೇಬೇಕು ಎಂದು ಅಬ್ಬರಿಸಿದ್ದು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಎನ್ನುವುದು ನಿಮಗೆ ನೆನಪಿರಲೇಬೇಕು. ‘ಮಾರಿಸನ್’ ಅಂದರೆ ಮಾರಿಯ ಮಗ, ‘ಮಾರಿ’ ಅಂದರೆ ಕರೊನಾ ಮಾರಿ, ಅದಂತೂ ನಮ್ಮದೇ ಬಿಡಿ, ಹೀಗಾಗಿ ಮಾರಿಸನ್ ಸಹ ನಮ್ಮವರೇ ಎಂದು ಜಿನ್​ಪಿಂಗ್ ಸುಮ್ಮನಿರಬಹುದಾಗಿತ್ತು. ಆದರೆ ಮಾರಿಸನ್ ಮಾತುಗಳಿಂದ ಮೈಯೆಲ್ಲ ಉರಿಸಿಕೊಂಡ ಜಿನ್​ಪಿಂಗ್ ಆಸ್ಟ್ರೇಲಿಯಾಗೆ ಶಿಕ್ಷೆ ವಿಧಿಸುವ ಮಾರ್ಗವಾಗಿ ಕಳೆದ ಅಕ್ಟೋಬರ್​ನಲ್ಲಿ ಆ ದೇಶದಿಂದ ಕಲ್ಲಿದ್ದಲು ಖರೀದಿಸುವುದನ್ನು ನಿಲ್ಲಿಸಿದರು. ತನ್ನ ದೇಶವೇ ಜಗತ್ತಿನ ಅತಿದೊಡ್ಡ ಕಲ್ಲಿದ್ದಲು ಉತ್ಪಾದಕನಾಗಿರುವುದರಿಂದ ತಮಗೇನೂ ತೊಂದರೆಯಾಗದು, ನಷ್ಟ ಆಗುವುದಿದ್ದರೆ ಅದು ಆಸ್ಟ್ರೇಲಿಯಾಗೇ, ಹಾಗೇ ಆಗಬೇಕು ಎಂದು ಜಿನ್​ಪಿಂಗ್ ತರ್ಕ. ಆದರೆ ಚೀನಾದಲ್ಲಿ ಶಾಖ ವಿದ್ಯುತ್ ಸಂಯಂತ್ರಗಳಲ್ಲಿ ಬಳಕೆಯಾಗುವುದು ಕಲ್ಲಿದ್ದಲು, ಚೀನಾದ ವಾರ್ಷಿಕ ವಿದ್ಯುತ್ ಉತ್ಪಾದನೆಯಲ್ಲಿ 53% ಕಲ್ಲಿದ್ದಲು ಮೂಲದ್ದು, ಜತೆಗೆ ಮುಂಬರಲಿದ್ದ ಚಳಿಗಾಲದಲ್ಲಿ ಮನೆಮನೆಯಲ್ಲಿ ಶಾಖೋತ್ಪನ್ನಕ್ಕಾಗಿ ಜನರು ಅಧಿಕ ಪ್ರಮಾಣದಲ್ಲಿ ಕಲ್ಲಿದ್ದಲು ಬಳಸುತ್ತಾರೆ ಎಂಬ ವಾಸ್ತವಗಳನ್ನು ಜಿನ್​ಪಿಂಗ್ ಗುರುತಿಸಲಾರದೇಹೋದರು. ಅದರ ದುಷ್ಪರಿಣಾಮ ದೇಶದ, ಜನತೆಯ ಮೇಲೆ ಬಿತ್ತು. ವಿದ್ಯುತ್ ಉತ್ಪಾದನೆ ಗಮನಾರ್ಹವಾಗಿ ಕುಗ್ಗಿತು. ವಿದ್ಯುತ್ ಕೊರತೆಯ ಹೊಡೆತಕ್ಕೆ ಸಿಲುಕಿದ ಜನಸಾಮಾನ್ಯರು ಮನೆಗಳಲ್ಲಿ ಕಲ್ಲಿದ್ದಲು ಉರಿಸುವುದನ್ನು ಪ್ರತಿಬಂಧಿಸಿ ಅವರ ಕಲ್ಲಿದ್ದಲು ಸಂಗ್ರಹವನ್ನು ಬಲವಂತವಾಗಿ ಕಿತ್ತು ಕಮ್ಯೂನಿಸ್ಟ್ ಪಾರ್ಟಿಯ ಕಾರ್ಯಕರ್ತರಿಗಷ್ಟೇ ಹಂಚಲಾಯಿತು. ಜನಸಾಮಾನ್ಯರು ಸೌದೆಗಳ ಮೊರೆಹೊಕ್ಕ ಸುದ್ದಿಗಳು ಆಗ ಬಂದಿದ್ದವು.

ನಂತರ ಎಚ್ಚೆತ್ತ ಜಿನ್​ಪಿಂಗ್ ರಷ್ಯಾ ಮತ್ತು ಮಂಗೋಲಿಯಾಗಳಿಂದ ಕಲ್ಲಿದ್ದಲು ಆಮದಿಗೆ ವ್ಯವಸ್ಥೆ ಮಾಡಿದರು. ಆದರೆ ಆ ದೇಶಗಳ ಕಲ್ಲಿದ್ದಲು ಆಸ್ಟ್ರೇಲಿಯಾದ ಕಲ್ಲಿದ್ದಲಿಗಿಂತ ಗುಣಮಟ್ಟದಲ್ಲಿ ಕಳಪೆ ಮತ್ತು ಆ ಕಾರಣದಿಂದಾಗಿ ಅವುಗಳನ್ನು ಬಳಸಲು ಚೀನೀ ಶಾಖ ವಿದ್ಯುತ್ ಸಂಯಂತ್ರಗಳ ಯಂತ್ರಗಳಲ್ಲಿ ಮಾರ್ಪಾಡು ಮಾಡಬೇಕಾದ ಅಗತ್ಯವುಂಟಾಯಿತು. ದುರಂತವೆಂದರೆ ಹೊಸ ಮೂಲಗಳಿಂದ ಕಲ್ಲಿದ್ದಲು ಬರುವುದೂ, ಅದಕ್ಕೆ ತಕ್ಕ ಹಾಗೆ ಯಂತ್ರಗಳನ್ನು ಮಾರ್ಪಡಿಸುವುದೂ ಸೂಕ್ತ ಸಮಯದಲ್ಲಿ ಆಗದೇ ವಿದ್ಯುತ್ ಉತ್ಪಾದನೆ ಇನ್ನಷ್ಟು ಕುಸಿಯಿತು. ಪರಿಣಾಮವಾಗಿ ಇಂದು ದೇಶದ ಇಪ್ಪತ್ತಮೂರರಲ್ಲಿ ಹದಿನೇಳು ಪ್ರಾಂತ್ಯಗಳು ವಿದ್ಯುತ್ ಸಂಕಷ್ಟಕ್ಕೆ ಸಿಲುಕಿವೆ. ಊರು ಪಟ್ಟಣಗಳು ಕತ್ತಲಲ್ಲಿ ಮುಳುಗಿವೆ, ಈ ಸಲ ಬೇಗನೇ ಬಂದ ಚಳಿಗಾಲದಿಂದ ರಕ್ಷಣೆ ಪಡೆಯಲು ಜನ ಹತಾಶರಾಗಿ ಹಳೆಯ ಬಟ್ಟೆಗಳನ್ನು ಕೊಂಡು ಉರಿಸುತ್ತಿದ್ದಾರೆ. ಅದೇ ಕಲ್ಲಿದ್ದಲು ಕೊರತೆ ಆಹಾರಸಮಸ್ಯೆಗೂ ಕಾರಣವಾಗಿದೆ. ಕಲ್ಲಿದ್ದಲು ಕೊರತೆಯಿಂದ ‘ಹಿಂಜರಿಯದ’ ಜಿನ್​ಪಿಂಗ್ ಸರ್ಕಾರ ದೇಶದಲ್ಲಿದ್ದ ಅಗಾಧ ಡೀಸೆಲ್ ಭಂಡಾರವನ್ನು ವಿದ್ಯುತ್ ಉತ್ಪಾದನೆಗೆ ಬಳಸಲು ಯೋಚಿಸಿತು. ಅದರಂತೆ ಈ ವರ್ಷದ ಆಗಸ್ಟ್ ವರೆಗೂ ಡೀಸೆಲ್ ಬಳಸಿ ವಿದ್ಯುತ್ ಉತ್ಪಾದಿಸಲಾಯಿತು. ಆದರೆ ಉತ್ಪಾದನೆಯಾದ ವಿದ್ಯುತ್​ನ ಹೆಚ್ಚಿನ ಭಾಗ ಉಪಯೋಗಿಸಲ್ಪಟ್ಟದ್ದು ಸೇನಾ ಅಗತ್ಯಗಳಿಗಾಗಿ. ಆ ಪ್ರಕಾರ ವಿವಿಧೆಡೆಗಳಲ್ಲಿದ್ದ ಶಸ್ತ್ರಾಸ್ತ್ರ ತಯಾರಿಕಾ ಘಟಕಗಳನ್ನು ದೇಶದ ಮಧ್ಯಭಾಗಕ್ಕೆ ಸ್ಥಳಾಂತರಿಸಿ ಮರುನಿರ್ವಿುಸಲಾಗುತ್ತಿದೆ. ಜತೆಗೆ ಉತ್ತರ-ಮಧ್ಯ ಚೀನಾದಲ್ಲಿ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಮಿಸೈಲ್​ಗಳನ್ನು ಸಜ್ಜಾಗಿರಿಸುವ ಕಾರ್ಯವೂ ನಡೆಯುತ್ತಿದೆ. ಅದಕ್ಕಾಗಿ ಆಗಸ್ಟ್​ನಿಂದೀಚೆಗೆ ನಿರ್ವಿುಸಲಾಗಿರುವ ಸುಮಾರು 300 ಸೈಲೋಗಳನ್ನು (ಕಾಂಕ್ರೀಟ್ ಗುಣಿಗಳು) ಬೇಹುಗಾರಿಕ ಉಪಗ್ರಹಗಳು ಪತ್ತೆಹಚ್ಚಿವೆ!

ಹೀಗೆ ಮಿಲಿಟರಿ ಉದ್ದೇಶಗಳಿಗಾಗಿ ವಿದ್ಯುತ್ ಉತ್ಪಾದಿಸಲು ಡೀಸೆಲ್ ಬಳಕೆಯಾದ ಕಾರಣ ಟ್ರಕ್​ಗಳಿಗೆ ಡೀಸೆಲ್ ಸಿಗದೇ ದೇಶದಾದ್ಯಂತ ಅವುಗಳ ಸಂಚಾರ ಸ್ಥಗಿತಗೊಂಡಿದೆ. ಹೀಗಾಗಿ ದಾಸ್ತಾನು ಕೇಂದ್ರಗಳಿಂದ ಆಹಾರ ಸಾಮಗ್ರಿಗಳನ್ನು ದೇಶದ ವಿವಿಧೆಡೆ ಸಾಗಿಸಲಾಗುತ್ತಿಲ್ಲ. ತರಕಾರಿಗಳ ಆಗರ ಪೂರ್ವದ ಶಾನ್​ದೋಂಗ್ ಪ್ರಾಂತ್ಯದಲ್ಲಿ ಮಳೆಯಿಂದ ಬಚಾವಾಗಿ ಉಳಿದ ಹಸಿರು ತರಕಾರಿಗಳು ಕೊಳೆತುಹೋಗುತ್ತಿವೆ. ಶೀಘ್ರ ಹಾಳಾಗುವ ಆಹಾರವಸ್ತುಗಳದು ದೇಶಾದ್ಯಂತ ಇದೇ ಹಣೆಬರಹ. ಜತೆಗೆ ಇದೇ ನವೆಂಬರ್ 1ರಂದು ವಾಣಿಜ್ಯ ಮಂತ್ರಾಲಯ ಹೊರಡಿಸಿದ ‘ಚಳಿಗಾಲಕ್ಕಾಗಿ ಆಹಾರಪದಾರ್ಥಗಳನ್ನು ಈಗಲೇ ಸಂಗ್ರಹಿಸಿಟ್ಟುಕೊಳ್ಳಿ’ ಎಂಬ ಪ್ರಕಟಣೆಯಿಂದಾಗಿ ಜನರು ಸೂಪರ್​ವಾರ್ಕೆಟ್​ಗಳಿಗೆ ಮುಗಿಬಿದ್ದು ಖರೀದಿಸತೊಡಗಿದರು. ಮಾರ್ಕೆಟ್​ಗಳು ಒಂದೆರಡು ದಿನಗಳಲ್ಲಿ ಬರಿದಾದವು. ಹೆಚ್ಚಿನವುಗಳಿಗೆ ವಸ್ತುಗಳ ಮರುಪೂರೈಕೆ ಆಗುತ್ತಿಲ್ಲ. ಬಹುತೇಕ ಟ್ರಕ್​ಗಳು ನಿಂತಲ್ಲೇ ನಿಂತುಬಿಟ್ಟಿವೆಯಲ್ಲ. ಚಳಿಗಾಲಕ್ಕಾಗಿ ಯಾಕಾಗಿ ಆಹಾರವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು ಎಂದು ಯಾರಿಗೂ ಅರ್ಥವಾಗುತ್ತಿಲ್ಲ. ಕರೊನಾವೈರಸ್ ಡೆಲ್ಟಾ ರೂಪಾಂತರಿ ಎಲ್ಲೆಡೆ ವೇಗವಾಗಿ ಹರಡುತ್ತಿರುವುದರಿಂದ ದೇಶಾದ್ಯಂತ ಮತ್ತೊಮ್ಮೆ ಲಾಕ್​ಡೌನ್ ವಿಧಿಸಲಾಗುತ್ತದೆಯೇ? ತೈವಾನ್ ಅಥವಾ ಭಾರತದೊಂದಿಗೆ ಅಥವಾ ಎರಡರೊಂದಿಗೂ ಏಕಕಾಲದಲ್ಲಿ ಯುದ್ಧ ಆರಂಭವಾಗಲಿದೆಯೇ, ಮತ್ತದು ಇತರ ದೇಶಗಳನ್ನೂ ಒಳಗೊಳ್ಳಲಿದೆಯೇ? ಜನರನ್ನು ಕಾಡುತ್ತಿರುವುದು ಈ ಪ್ರಶ್ನೆಗಳು. ಅವರಿಗೆ ತುಸುವಾದರೂ ಸಮಾಧಾನ ನೀಡಲೆಂಬಂತೆ ಚೀನೀ ಸೇನೆ ಮತ್ತು ಕಮ್ಯೂನಿಸ್ಟ್ ಪಾರ್ಟಿಗಳೆರಡೂ ತೈವಾನ್ ಜತೆ ಯುದ್ಧದ ಪ್ರಶ್ನೆ ಇಲ್ಲವೆಂದು ನವೆಂಬರ್ 2ರಂದು ಹೇಳಿಕೆ ಹೊರಡಿಸಿದವು. ಈ ನಡುವೆ, ಅಧ್ಯಕ್ಷರ ಆರೋಗ್ಯದ ಕಡೆಗೆ ಈಗ ನಮ್ಮ ಗಮನ ಎಂದು ಸೇನೆಯ ಮುಖ್ಯಾಧಿಕಾರಿಗಳು ಹೇಳಿದ್ದಾಗಿ ಸಿಸಿಪಿ ಮುಖವಾಣಿ ‘ಎಕನಾಮಿಕ್ಸ್ ಡೈಲಿ’ ವರದಿ ಮಾಡಿದೆ. ಅಧ್ಯಕ್ಷರ ಆರೋಗ್ಯ ಸಮಸ್ಯೆಯೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ.

ಜನತೆ ಹೀಗೆ ಬೇಸ್ತುಬಿದ್ದಿರುವಾಗ ಕಮ್ಯೂನಿಸ್ಟ್ ಪಕ್ಷದ ಸೆಂಟ್ರಲ್ ಕಮಿಟಿ ಇದೇ 8ರಂದು ನಾಲ್ಕು ದಿನಗಳ ಸಭೆ ‘ಸಿಕ್ಸ್​ತ್ ಪ್ಲೀನಂ’ ಆರಂಭಿಸಿದೆ. ಅದರ ಮುಂದಿರುವ ಏಕೈಕ ಅಜೆಂಡಾ ಷಿ ಜಿನ್​ಪಿಂಗ್ ಅವರ ಅಧ್ಯಕ್ಷಾವಧಿಯನ್ನು ಇನ್ನೂ ಐದು ವರ್ಷಗಳಿಗೆ ವಿಸ್ತರಿಸುವುದು ಮತ್ತು ಅವರನ್ನು ಹೊಗಳುವುದು. ಅಷ್ಟೇಯಾ ಎಂದು ಕೇಳಬೇಡಿ. ಸರ್ವಾಧಿಕಾರದಲ್ಲಿ ಮತ್ತೇನು ತಾನೆ ಇರುತ್ತದೆ?‘

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net