ಶತಮಾನೋತ್ಸವ ಸಂಭ್ರಮದಲ್ಲಿ ಚೀನಿ ಕಮ್ಯೂನಿಸ್ಟ್ ಪಕ್ಷ

Lead Column
Published on
ಒಂದಿಡೀ ಶತಮಾನದ ವಿದೇಶಿ ಒತ್ತಡ ಮತ್ತು ಅಂತರಿಕ ಕ್ಷೋಭೆಗಳಿಂದ ಹೈರಾಣಾಗಿದ್ದ ಚೀನಾ 1949ರಲ್ಲಿ ಯಶಸ್ವಿ ಕಮ್ಯೂನಿಸ್ಟ್ ಕ್ರಾಂತಿಯೊಡನೆ ಸದೃಢ ಸರ್ಕಾರವನ್ನು ಪಡೆದುಕೊಂಡಾಗಲೇ ಅದು ಜಗತ್ತನ್ನು ಅಲುಗಿಸಬಲ್ಲುದೆಂಬ ಸೂಚನೆ ಸಿಕ್ಕಿತು. ನಂತರ ಆಡಳಿತಕ್ಕೆ ಬಂದವರು ಚೀನಾದ ಪ್ರಾಬಲ್ಯವನ್ನು ಹೆಚ್ಚಿಸಲು ನ್ಯಾಯ-ಅನ್ಯಾಯದ ಹೆಜ್ಜೆಗಳನ್ನು ಇರಿಸಿದರು.

ಇಂದು ಇಡೀ ಮಾನವಜನಾಂಗಕ್ಕೆ ಕರೊನಾ ವೈರಸ್ ಅನ್ನು ಘಾತಕ ಕೊಡುಗೆಯಾಗಿ ನೀಡಿರುವ ಚೀನೀ ಕಮ್ಯೂನಿಸ್ಟ್ ಪಕ್ಷಕ್ಕೆ ಇದೇ ಜುಲೈ 1ಕ್ಕೆ ನೂರು ವರ್ಷಗಳಾಗುತ್ತಿವೆ. ಜಗತ್ತು ಕರೊನಾ ವೈರಸ್ ವಿರುದ್ಧ ಸಾವುಬದುಕಿನ ಸೆಣಸಾಟದಲ್ಲಿರುವಾಗ ಚೀನೀ ಕಮ್ಯೂನಿಸ್ಟ್ ಪಕ್ಷ ತನ್ನ ಶತಮಾನೋತ್ಸವದ ಸಂಭ್ರಮಾಚರಣೆಯನ್ನು ಜೂನ್ 13ರಂದು ಆರಂಭಿಸಿದೆ. ಬೀಜಿಂಗ್, ಶಾಂಘೖ, ಚೆಂಗ್​ದು, ಗ್ವಾಂಗ್​ರkೌ, ಶೆನ್​ರೆೆನ್ ಸೇರಿ ಹಲವಾರು ನಗರಗಳಲ್ಲಿ ವಿವಿಧ ಬಗೆಯಲ್ಲಿ ಸಂಭ್ರಮಾಚರಣೆ ಆರಂಭವಾಗಿದೆ, ‘ಪೀಪಲ್ಸ್ ಬ್ಯಾಂಕ್ ಆಫ್ ಚೀನಾ’ ಜೂನ್ 21ರಂದು ಒಂಬತ್ತು ಸ್ಮರಣಾ ನಾಣ್ಯಗಳನ್ನು ಹೊರತಂದಿದೆ, ಶತಮಾನೋತ್ಸವವನ್ನು ಜಾಗತಿಕವಾಗಿ ಪ್ರಚಾರ ಮಾಡುವುದಕ್ಕಾಗಿಯೇ ಇರುವ ಪ್ರೆಸ್ ಸೆಂಟರ್ ಈ ಕುರಿತಾಗಿನ ತನ್ನ ಮೊದಲ ಪತ್ರಿಕಾ ಸಮ್ಮೇಳನವನ್ನು ಜೂನ್ 27ರಂದು ಆಯೋಜಿಸಿ ಕೊಂಬು ಕಹಳೆಗಳನ್ನು ಜೋರಾಗಿಯೇ ಊದಿದೆ. ಚೀನಾದಲ್ಲಿ ಕಮ್ಯೂನಿಸ್ಟ್ ಅಧಿಕಾರ ಸ್ಥಾಪನೆಯ ಗುರಿಯೊಂದಿಗೆ ಅಸ್ತಿತ್ವಕ್ಕೆ ಬಂದು, ಇಪ್ಪತ್ತೆಂಟು ವರ್ಷಗಳ ನಂತರ ಆ ಗುರಿ ಸಾಧಿತವಾಗುತ್ತಿದ್ದಂತೇ ಇಡೀ ಜಗತ್ತನ್ನು ಚೀನಾದ ಪ್ರಭಾವಕ್ಕೆ ಒಳಗಾಗಿಸಲು ಯೋಜನೆ ರೂಪಿಸಿ ಅದನ್ನು ಹಂತಹಂತವಾಗಿ ಅಷ್ಟೇ ಕ್ರೂರವಾಗಿ ಜಾರಿಗೆ ತರಹೊರಟ, ‘ಸಿಸಿಪಿ’ ಎಂಬ ಹ್ರಸ್ವನಾಮದಲ್ಲಿ ಜಾಗತಿಕವಾಗಿ ಪರಿಚಿತವಾಗಿರುವ, ಹಲವು ಅರ್ಥಗಳಲ್ಲಿ ಕುಪ್ರಸಿದ್ಧವೂ ಆಗಿರುವ ಚೀನೀ ಕಮ್ಯೂನಿಸ್ಟ್ ಪಾರ್ಟಿಯ ಕಿರು ಪರಿಚಯ ಈ ಲೇಖನಸರಣಿಯ ವಸ್ತುವಿಷಯ.

ಸಿಸಿಪಿಯ ಸ್ಥಾಪನೆಗೆ ಪೂರಕವಾದ ಅಂಶಗಳನ್ನು ಮೊದಲು ಅವಲೋಕಿಸೋಣ. ಒಂದು ಕಾಲದ ಬಲಾಢ್ಯ ಚೀನೀ ಸಾಮ್ರಾಜ್ಯ ಹತ್ತೊಂಬತ್ತನೇ ಶತಮಾನದಲ್ಲಿ ತೀವ್ರಗತಿಯಲ್ಲಿ ಶಕ್ತಿಗುಂದತೊಡಗಿತು. ಅದಕ್ಕೆ ಕಾರಣ ವಿದೇಶೀ ಶಕ್ತಿಗಳ ಒತ್ತಡ. ಚೀನಾದ ಸುತ್ತಲಿನ ನಾಡುಗಳನ್ನು ತಂತಮ್ಮ ವಸಾಹತುಶಾಹಿ ಸಾಮ್ರಾಜ್ಯಗಳ ಭಾಗಗಳಾಗಿ ಹರಿದು ಹಂಚಿಕೊಂಡ ಯುರೋಪಿಯನ್ ರಾಷ್ಟ್ರಗಳು ಚೀನಾ ಬಗ್ಗೆ ತೋರಿದ್ದು ವಿಚಿತ್ರ ನೀತಿ. ಚೀನಾವನ್ನು ಯಾರೊಬ್ಬರೂ ಇಡಿಯಾಗಿ ಆಕ್ರಮಿಸಿಕೊಂಡು ವಸಾಹತು ಮಾಡಿಕೊಳ್ಳಬಾರದೆಂದೂ, ತಂತಮ್ಮ ಹಿತಾಸಕ್ತಿಗಳಿಗೆ ಭಂಗವಾಗದಂತೆ ಯಾರು ಬೇಕಾದರೂ ಚೀನಾದೊಂದಿಗೆ ಬೇಕೆಂದ ಬಗೆಯಲ್ಲಿ ವರ್ತಿಸಬಹುದೆಂಬ ಒಪ್ಪಂದಗಳನ್ನು ಈ ವಿದೇಶಗಳು ಚೀನಾದ ಅನುಮತಿಯಿಲ್ಲದೇ ಮಾಡಿಕೊಂಡಿದ್ದವು. ಬಡಪಾಯಿ ಚೀನಾವನ್ನು ರಣರಂಗದಲ್ಲಿ ಬಡಿದು, ಆ ದೇಶಕ್ಕೆ ಮುಕ್ತವಾಗಿ ಅಫೀಮು ಮಾರಿ, ಚೀನೀಯರನ್ನು ಮಾದಕವ್ಯಸನಿಗಳನ್ನಾಗಿ ಮಾಡುವ ‘ಸ್ವಾತಂತ್ರ್ಯ’ವನ್ನು ಈ ದೇಶಗಳು ಪಡೆದುಕೊಂಡಿದ್ದವು. ಇನ್ನು ನೆಲದ ಬಗ್ಗೆ ಹೇಳುವುದಾದರೆ ಆಯಕಟ್ಟಿನ ಬಂದರು ನಗರಗಳನ್ನು ಪ್ರಮುಖ ಯುರೋಪಿಯನ್ ದೇಶಗಳು ಹಿಡಿದುಕೊಂಡಿದ್ದವು. ಹಾಂಗ್​ಕಾಂಗ್​ನಲ್ಲಿ ಬ್ರಿಟಿಷರೂ, ಮಕಾವೋದಲ್ಲಿ ಪೋರ್ಚುಗೀಸರೂ ಪಟ್ಟಾಗಿ ನೆಲೆಯೂರಿದ್ದರೆ ವೈಹೈವೈಗೆ ಜರ್ಮನರು ಕಾಲಿಟ್ಟಿದ್ದರು. ಇತ್ತ ಪೂರ್ವದಲ್ಲಿ ಜಪಾನೀಯರು ಕೊರಿಯಾ ಪರ್ಯಾಯದ್ವೀಪವನ್ನು ಚೀನಾದಿಂದ ಕಿತ್ತುಕೊಂಡಿದ್ದರೆ ಅತ್ತ ಪಶ್ಚಿಮದಲ್ಲಿ ರಷ್ಯನ್ನರು ಸಿಂಕಿಯಾಂಗ್ ಮತ್ತು ಮಂಗೋಲಿಯಾಗಳನ್ನು ತನ್ನ ಪ್ರಭಾವದೊಳಗೆ ಸಿಲುಕಿಸಿಕೊಂಡಿದ್ದರು. ಆಂತರಿಕವಾಗಿ, 1911-12ರಲ್ಲಿ ಕ್ರಾಂತಿಯಾಗಿ ಕ್ವಿಂಗ್ ರಾಜಮನೆತನದ ಅಂತ್ಯವಾಗಿ, ರಾಜಕೀಯ ಮುತ್ಸದ್ಧಿ ಸನ್ ಯತ್-ಸೆನ್ ನೇತೃತ್ವದಲ್ಲಿ ಚೀನೀ ಗಣರಾಜ್ಯದ ಸ್ಥಾಪನೆಯಾಗಿದ್ದರೂ ದೇಶದೆಲ್ಲೆಡೆ ಅರಾಜಕ ಪರಿಸ್ಥಿತಿ ಇತ್ತು, ಜತೆಗೆ ಸಾರ್ವತ್ರಿಕ ಬಡತನ ತಾಂಡವ.

ಇಂತಹ ನಿರಾಶಾದಾಯಕ ಸನ್ನಿವೇಶದಲ್ಲಿ ‘ಜೈನೀಸ್ ಕಮ್ಯೂನಿಸ್ಟ್ ಪಾರ್ಟಿ’ (ಸಿಸಿಪಿ) ಎಂದು ಸಾಮಾನ್ಯವಾಗಿ ಹೆಸರಿಸಲ್ಪಡುವ ‘ದ ಕಮ್ಯೂನಿಸ್ಟ್ ಪಾರ್ಟಿ ಆಫ್ ಚೀನಾ’ದ ಸ್ಥಾಪನೆಗೆ ಚಾಲನೆ ನೀಡಿದ್ದು ಸೋವಿಯೆತ್ ಕಮ್ಯೂನಿಸ್ಟ್ ಪಾರ್ಟಿಯ ಫಾರ್ ಈಸ್ಟ್ರರ್ನ್ ಬ್ಯೂರೋ ಮತ್ತು ಜಾಗತಿಕವಾಗಿ ಕಮ್ಯೂನಿಸ್ಟ್ ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತರುವ ಗುರಿಯೊಂದಿಗೆ ಸ್ಥಾಪನೆಯಾಗಿ, 1919-43ರ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ‘ಕೊಮಿನ್​ಟರ್ನ್’ ಅಥವಾ ‘ಕಮ್ಯೂನಿಸ್ಟ್ ಇಂಟರ್​ನ್ಯಾಷನಲ್’ನ ಫಾರ್ ಈಸ್ಟರ್ನ್ ಸೆಕ್ರೆಟೇರಿಯಟ್​ಗಳು. ಪಕ್ಷದ ಸ್ಥಾಪನೆಯಲ್ಲಿ ಸಕ್ರಿಯ ಪಾತ್ರ ವಹಿಸಿದವರು 1911-12ರ ಕ್ರಾಂತಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಮಾಜವಾದಿ ಚಿಂತಕ ಹಾಗೂ ಕ್ರಾಂತಿಕಾರಿ ಚೆನ್ ತು-ಹ್ಷಿಯು (1879-1942) ಮತ್ತು ಬುದ್ಧಿಜೀವಿ ಲಿ ತ-ಚಾವೋ (1889-1927).

ಸಿಸಿಪಿಯ ಆಂತರಿಕ ವ್ಯವಸ್ಥೆಯ ಬಗ್ಗೆ ಹೇಳುವುದಾದರೆ ಪಕ್ಷದ ನೀತಿನಿಯಮಗಳು ಹಾಗೂ ಕಾರ್ಯವಿಧಾನಗಳ ನಿರ್ಧಾರವಾಗುವುದು ಐದು ವರ್ಷಗಳಿಗೊಮ್ಮೆ ಆಯೋಜನೆಗೊಳ್ಳುವ ‘ನ್ಯಾಷನಲ್ ಕಾಂಗ್ರೆಸ್’ನಲ್ಲಿ. ಈ ನ್ಯಾಷನಲ್ ಕಾಂಗ್ರೆಸ್​ನ ಮೊದಲ ಅಧಿವೇಶನ ಜರುಗಿದ್ದು 1921ರ ಜುಲೈ 21-31ರ ಅವಧಿಯಲ್ಲಿ. ಹೀಗಾಗಿ ಅಧಿವೇಶನ ಆರಂಭವಾದ ದಿನವಾದ ಜುಲೈ 21ನ್ನು ಪಕ್ಷದ ನಿಜವಾದ ಸ್ಥಾಪನೆಯ ದಿನ ಎಂದೂ ಉಲ್ಲೇಖಿಸುವುದುಂಟು. ನ್ಯಾಷನಲ್ ಕಾಂಗ್ರೆಸ್​ನ ಎರಡು ಅಧಿವೇಶನಗಳ ನಡುವೆ ಸಿಸಿಪಿ ಸೆಂಟ್ರಲ್ ಕಮಿಟಿ ವಾರ್ಷಿಕ ಸಭೆಗಳನ್ನು ಆಯೋಜಿಸಿ ಪಕ್ಷದ ಕಾರ್ಯವಿಧಾನಗಳು ಮತ್ತು ಚಟುವಟಿಕೆಗಳನ್ನು ಅವಲೋಕಿಸುತ್ತದೆ. ಪಾಲಿಟ್​ಬ್ಯೂರೋ ಸ್ಟಾ ್ಯಡಿಂಗ್ ಕಮಿಟಿ ಸಿಸಿಪಿಯ ಅತ್ಯುಚ್ಚ ಅಂಗ ಮತ್ತದು ದೇಶದ ಆಡಳಿತದ ಮೇಲೆ ಪೂರ್ಣ ನಿಯಂತ್ರಣ ಹೊಂದಿರುತ್ತದೆ. ಇದರಲ್ಲಿ ಏಳು ಸದಸ್ಯರಿರುತ್ತಾರೆ ಮತ್ತು ದೇಶದ ಅಧ್ಯಕ್ಷ ಇವರಲ್ಲಲೊಬ್ಬರಾಗಿರುತ್ತಾರೆ. (ಹಿಂದೆ ಇದರ ಸದಸ್ಯರ ಸಂಖ್ಯೆ ಐದರಿಂದ ಹನ್ನೊಂದರವರೆಗೆ ಬದಲಾಗುತ್ತಿದುದುಂಟು).

ಸಿಸಿಪಿಯ ಸಂವಿಧಾನದ ಪ್ರಕಾರ ಅದರ ಮೂಲಭೂತ ನೀತಿನಿಯಮಗಳು ಮಾರ್ಕ್ಸಿಸಂ-ಲೆನಿನಿಸಂ ಮತ್ತು ಚೀನೀ ಲಕ್ಷಣಗಳುಳ್ಳ ಸಮಾಜವಾದ. ಈ ಪಟ್ಟಿಗೆ ಕಾಲಕಾಲಕ್ಕೆ ಮಾವೋ ಝೆದಾಂಗ್ ಮತ್ತು ಡೆಂಗ್ ಷಿಯಾವೋಪಿಂಗ್ ಚಿಂತನೆಗಳನ್ನು ಸೇರಿಸಲಾಯಿತು. ಇತೀಚೆಗೆ ಪ್ರಸಕ್ತ ಅಧ್ಯಕ್ಷ ಷಿ ಜಿನ್​ಪಿಂಗ್​ರ ಚಿಂತನೆಗಳನ್ನೂ ಸೇರಿಸಲಾಗಿದೆ.

ಆ ದಿನಗಳಲ್ಲಿ ಚೀನಾದಲ್ಲಿ ಅಧಿಕಾರದಲ್ಲಿದ್ದ, ಸನ್ ಯತ್-ಸೆನ್ ನೇತೃತ್ವದ ಕ್ಯೋಮಿನ್​ಟಾಂಗ್ ಪಕ್ಷ (ಕೆಎಂಟಿ) ಕಮ್ಯೂನಿಸ್ಟ್ ಮೌಲ್ಯಗಳ ಬಗ್ಗೆ ಒಲವು ಹೊಂದಿದುದಾಗಿತ್ತು. ಆದರೆ 1925ರಲ್ಲಿ ಸನ್ ಯತ್-ಸೆನ್ ನಿಧನಾನಂತರ ಅಧಿಕಾರಕ್ಕೆ ಬಂದ ಚಿಯಾಂಗ್ ಕೈ-ಷೆಕ್ ಕೆಎಂಟಿಯನ್ನು ಕಮ್ಯೂನಿಸಂನ ಪ್ರಭಾವದಿಂದ ಮುಕ್ತಗೊಳಿಸಲು ತೀವ್ರ ಕ್ರಮಗಳನ್ನು ಕೈಗೊಂಡರು. ಪರಿಣಾಮವಾಗಿ 1927ರಲ್ಲಿ ಸಿಸಿಪಿ ಮತ್ತು ಕೆಎಂಟಿಗಳ ನಡುವೆ ಸಂಘರ್ಷ ಆರಂಭವಾಯಿತು. ಒಂದಿಡೀ ದಶಕದವರೆಗೆ ನಡೆದ ಚೀನೀ ಅಂತರ್ಯುದ್ಧದಲ್ಲಿ ಸಿಸಿಪಿಗೆ ಸಮರ್ಥ ನಾಯಕತ್ವ ಒದಗಿಸಿದ್ದು ಮಾವೋ ಝೆದಾಂತ್. ಗ್ರಾಮೀಣ ಚೀನಾದ ರೈತಾಪಿವರ್ಗ ಮತ್ತು ನಗರಪ್ರದೇಶಗಳ ಕೂಲಿಕಾರ್ವಿುಕರನ್ನು ಸೇರಿಸಿಕೊಂಡು ‘ಪೀಪಲ್ಸ್ ಲಿಬರೇಷನ್ ಆರ್ವಿು’ಯನ್ನು ಮಾವೋ ಬಲಿಷ್ಠಗೊಳಿಸಿದರು. ಈ ಬಗ್ಗೆ ಹೇಳುವಾಗ 1934-35ರ ‘ಲಾಂಗ್ ಮಾರ್ಚ್’ ಅನ್ನು ಉಲ್ಲೇಖಿಸಲೇಬೇಕು. ಸುಮಾರು ಒಂದುಲಕ್ಷ ಕಮ್ಯೂನಿಸ್ಟ್ ಕಾಲಾಳುಗಳನ್ನು ದೇಶದ ಆಗ್ನೇಯ ಭಾಗದಿಂದ ಉತ್ತರದ ಸೋವಿಯೆತ್ ನಿಯಂತ್ರಣದ ಮಂಗೋಲಿಯಾ ಮತು ಸಿಂಕಿಯಾಂಗ್​ಗಳ ಸನಿಹಕ್ಕೆ ಮಾವೋ ಕರೆದೊಯ್ದ ಐತಿಹಾಸಿಕ ದೀರ್ಘ ನಡಿಗೆ ಇದು. ಹತ್ತುಸಾವಿರ ಕಿಲೋಮೀಟರ್​ಗಳ ಈ ನಡಿಗೆ ಗುರಿ ತಲುಪಿದಾಗ ಒಂದುಲಕ್ಷ ಜನರಲ್ಲಿ ಬದುಕಿ ಉಳಿದಿದ್ದವರು ಸುಮಾರು ಇಪ್ಪತ್ತು ಸಾವಿರ ಮಾತ್ರ. ಆದರೆ ಅಷ್ಟರಲ್ಲಿ ಸಿಸಿಪಿಯ ಅನಭಿಷಿಕ್ತ ಸಾಮ್ರಾಟನಾಗಿ ಮಾವೋ ಹೊರಹೊಮ್ಮಿಯಾಗಿತ್ತು.

ಮುಂದಿನ ಎರಡು ವರ್ಷಗಳಲ್ಲಿ ಜಪಾನೀ ಸಾಮ್ರಾಜ್ಯವಾದಕ್ಕೆ ಚೀನಾ ಬಲಿಯಾಯಿತು. ಬಿರುಗಾಳಿಯಂತೆ ನುಗ್ಗಿಬಂದ ಜಪಾನೀ ಸೇನೆ ಕ್ಷಿಪ್ರಕಾಲದಲ್ಲಿ ಇಡೀ ಪೂರ್ವ ಚೀನಾವನ್ನು ತನ್ನ ಕಪಿಮುಷ್ಟಿಗೆ ತೆಗೆದುಕೊಂಡಿತು. ಆಗ ಕೆಎಂಟಿ ಮತ್ತು ಸಿಸಿಪಿಗಳು ತಮ್ಮ ನಡುವಿನ ವೈರ ಮರೆತು ಜಪಾನೀ ಆಕ್ರಮಣದ ವಿರುದ್ಧ ಜಂಟಿಯಾಗಿ ಹೋರಾಡುವ ವಿವೇಕ ಪ್ರದರ್ಶಿಸಿದವು. ಎರಡನೆಯ ಮಹಾಯುದ್ಧದಲ್ಲಿ ಕಮ್ಯೂನಿಸ್ಟ್ ಸೋವಿಯೆತ್ ಯೂನಿಯನ್ ಸನ್ನಿವೇಶದ ಪ್ರಭಾವದಿಂದಾಗಿ ತನ್ನ ನೀತಿ ಬದಲಾಯಿಸಿ ಅಮೆರಿಕ ಮತ್ತು ಬ್ರಿಟನ್ ಜತೆ ಸೇರಿದ್ದು ಮತ್ತು ಜಪಾನ್ ಅವುಗಳ ವಿರೋಧಿ ಬಣದಲ್ಲಿದ್ದದ್ದು ಚೀನೀ ರಾಜಕಾರಣದ ಮೇಲೂ ಪ್ರಭಾವ ಬೀರಿತು. ಸೋವಿಯೆತ್ ಸಲಹೆ ಹಾಗೂ ಒತ್ತಡದಲ್ಲಿದ್ದ ಸಿಸಿಪಿ ಹಾಗೂ ಅಮೆರಿಕದ ಪ್ರಭಾವದಲ್ಲಿದ್ದ ಕೆಎಂಟಿ ನಡುವೆ ಸಹಕಾರ ಮತ್ತಷ್ಟು ಹೆಚ್ಚಿತು. (ಆ ದಿನಗಳಲ್ಲಿ ಸೋವಿಯೆತ್ ಸಲಹೆ ಹಾಗೂ ಒತ್ತಡಗಳಿಗನುಗುಣವಾಗಿ ಭಾರತೀಯ ಕಮ್ಯೂನಿಸ್ಟ್ ಪಕ್ಷ ಕೂಡ ಬ್ರಿಟಿಷ್ ವಸಾಹತುಶಾಹಿ ಸತ್ತೆಯ ಬೆಂಬಲಕ್ಕೆ ನಿಂತದ್ದು, ಗಾಂಧೀಜಿ ಆಯೋಜಿಸಿದ ‘ಬ್ರಿಟಿಷರೇ, ಭಾರತ ಬಿಟ್ಟು ತೊಲಗಿ’ ಅಂದೋಲನಕ್ಕೆ ಸಹಕಾರ ನೀಡದೇ ಹೋದದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು.)

1945ರಲ್ಲಿ ಎರಡನೆಯ ಮಹಾಯುದ್ಧ ಮುಕ್ತಾಯವಾಯಿತು. ಅದರೊಂದಿಗೆ ಅಮೆರಿಕ ಮತ್ತು ಬ್ರಿಟನ್​ಗಳ ಜತೆ ಸೋವಿಯೆತ್ ಯೂನಿಯನ್​ನ ಹನಿಮೂನ್ ಅಂತ್ಯಗೊಂಡಿತು. ಜತೆಗೆ, ಚೀನಾದಿಂದ ಜಪಾನ್ ಕಾಲ್ತೆಗೆಯುವ ಒತ್ತಡಕ್ಕೊಳಗಾಯಿತು. ಇದೆಲ್ಲದರ ಪರಿಣಾಮವಾಗಿ ಚೀನಾದಲ್ಲಿ ಸಿಸಿಪಿ ಮತ್ತು ಕೆಎಂಟಿಗಳ ನಡುವಿನ ಸಹಕಾರದ ಯುಗ ಅಂತ್ಯಗೊಂಡು ಅಂತರ್ಯುದ್ಧ ಮತ್ತೆ ಆರಂಭವಾಯಿತು. ಆದರೀಗ ಎರಡೂ ಪಕ್ಷಗಳ ಬಲಾಬಲಗಳಲ್ಲಿ ಗಮನಾರ್ಹ ಏರುಪೇರುಂಟಾಗಿತ್ತು. ಆಕ್ರಮಿತ ಚೀನಾದಲ್ಲಿ, ಮುಖ್ಯವಾಗಿ ಮಂಚೂರಿಯಾದಲ್ಲಿ ಜಪಾನೀ ಸೇನೆಯನ್ನು ಹತ್ತಿಕ್ಕಿ ಅದರಿಂದ ಆಗಾಧ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡ ಸೋವಿಯೆತ್ ಸೇನೆ ಅದೆಲ್ಲವನ್ನು ಸಿಸಿಪಿಗೆ ನೀಡಿತು. ಪರಿಣಾಮವಾಗಿ ಸಿಸಿಪಿಯ ಶಕ್ತಿ ಏಕಾಏಕಿ ವೃದ್ಧಿಸಿದರೂ ಅದರಲ್ಲಿದ್ದ ಸೈನಿಕ ಹೆಸರಿನ ಹಳ್ಳಿಗಾಡಿನ ರೈತರು ಮತ್ತು ಕೂಲಿಕಾರ್ವಿುಕರಲ್ಲಿ ಆ ಕಾಲಕ್ಕೆ ಅತ್ಯಾಧುನಿಕವೆನಿಸಿದ್ದ ಜಪಾನೀ ಶಸ್ತ್ರಾಸ್ತ್ರಗಳನ್ನು ಸಮರ್ಥವಾಗಿ ಉಪಯೋಗಿಸುವ ಕೌಶಲದ ಕೊರತೆಯಿತ್ತು. ಹೀಗಾಗಿ ಸುಲಭವಾಗಿ ಜಯಿಸಬಹುದಾಗಿದ್ದ ಅಂತರ್ಯುದ್ಧವನ್ನು ಕಮ್ಯೂನಿಸ್ಟರು ನಾಲ್ಕು ವರ್ಷಗಳವರೆಗೆ ಎಳೆದುಕೊಂಡು ಹೋದರು. ಸಿಸಿಪಿಗೆ ಅಂತಿಮವಾಗಿ ವರದಾನವಾದದ್ದು ಕೆಎಂಟಿಯ ಪ್ರಳಯಾಂತಕ ಪ್ರಮಾಣದ ಭ್ರಷ್ಟಾಚಾರ. ಆ ದಿನಗಳ ಜಗತ್ತಿನ ದೊಡ್ಡ ಭ್ರಷ್ಟಾಚಾರಿ ಸರ್ಕಾರ ಕೆಎಂಟಿಯದಾಗಿತ್ತು ಎಂದು ಇತಿಹಾಸ ದಾಖಲಿಸಿದೆ. ಹೀಗಾಗಿ ರೋಸಿದ ಜನತೆ ಸಾರಾಸಗಟಾಗಿ ಸಿಸಿಪಿಯ ಪರವಾಗಿ ನಿಂತರು. ಈ ಭಾರಿ ಜನಬೆಂಬಲದೊಂದಿಗೆ ಸಿಸಿಪಿ ಅಂತಿಮವಾಗಿ ಅಂತರ್ಯುದ್ಧದಲ್ಲಿ ಜಯಗಳಿಸಿ 1949 ಅಕ್ಟೋಬರ್ 1ರಂದು ಚೀನೀ ಮುಖ್ಯ ಭೂಭಾಗದಲ್ಲಿ ಕಮ್ಯೂನಿಸ್ಟ್ ಸತ್ತೆಯನ್ನು ಸ್ಥಾಪಿಸಿತು. ಪರಾಭವಗೊಂಡ ಕೆಎಂಟಿ ಮತ್ತದರ ನಾಯಕ ಚಿಯಾಂಗ್ ಕೈ-ಷೆಪ್ ನೆರೆಯ ಫಾಮೋಸಾ ದ್ವೀಪಕ್ಕೆ ಓಡಿಹೋಗಿ ಅದನ್ನು ಅಮೆರಿಕದ ಬೆಂಬಲದೊಂದಿಗೆ ತಮ್ಮ ಸರ್ಕಾರದ ನೆಲೆಯನ್ನಾಗಿಸಿಕೊಂಡರು. ಅದೀಗ ತೈವಾನ್ ಎಂಬ ಹೆಸರಿನಲ್ಲಿ ಜಗತ್​ಪ್ರಸಿದ್ಧವಾಗಿದೆ. ಒಟ್ಟಿನಲ್ಲಿ ಏಳು ದಶಕಗಳ ಹಿಂದೆ ಚೀನಾದಲ್ಲಿ ಮಾವೋ ನೇತೃತ್ವದ ಸದೃಢ ಆದರೆ ನಿರಂಕುಶ ಸರ್ಕಾರ ಸ್ಥಾಪನೆಯಾದದ್ದು ಚೀನಾದ ಆಂತರಿಕ ಇತಿಹಾಸವನ್ನಷ್ಟೇ ಅಲ್ಲ ಜಾಗತಿಕ ಇತಿಹಾಸವನ್ನೂ ಬದಲಾಯಿಸಿಬಿಟ್ಟಿತು. ಇದನ್ನು ಸಮಗ್ರವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ಕಮ್ಯೂನಿಸ್ಟ್ ಸರ್ಕಾರದ ಆಂತರಿಕ ಹಾಗೂ ವಿದೇಶ ನೀತಿಗಳೆರಡನ್ನೂ ಅವಲೋಕಿಸಬೇಕು.

‘ಅಲ್ಲೊಬ್ಬ ದೈತ್ಯ ಮಲಗಿದ್ದಾನೆ... ಅವನು ಎದ್ದಾಗ ಇಡೀ ಜಗತ್ತನ್ನೇ ಅಲುಗಿಸಿಬಿಡುತ್ತಾನೆ’- ಇದು ಚೀನಾದ ಬಗ್ಗೆ ನೆಪೋಲಿಯನ್ ಹೇಳಿದ ಎನ್ನಲಾದ ಮಾತು. ಒಂದಿಡೀ ಶತಮಾನದ ವಿದೇಶೀ ಒತ್ತಡ ಮತ್ತು ಅಂತರಿಕ

ಕ್ಷೋಭೆಗಳಿಂದ ಹೈರಾಣಾಗಿದ್ದ ಚೀನಾ 1949ರಲ್ಲಿ ಯಶಸ್ವಿ ಕಮ್ಯೂನಿಸ್ಟ್ ಕ್ರಾಂತಿಯೊಡನೆ ಸದೃಢ ಸರ್ಕಾರವನ್ನು ಪಡೆದುಕೊಂಡಾಗಲೇ ಅದು ಜಗತ್ತನ್ನು ಅಲುಗಿಸಬಲ್ಲುದೆಂಬ ಸೂಚನೆ ಸಿಕ್ಕಿತೆಂದೇ ಹೇಳಬೇಕು. 1950 ಜೂನ್ 25ರಂದು ಸೋವಿಯೆತ್ ಬೆಂಬಲಿತ ಉತ್ತರ ಕೊರಿಯಾ ಅಮೆರಿಕ ಬೆಂಬಲಿತ ದಕ್ಷಿಣ ಕೊರಿಯಾದ ಮೇಲೆ ಆಕ್ರಮಣವೆಸಗಿ ಆಕ್ರಮಿಸಿಕೊಂಡದ್ದು, ದಕ್ಷಿಣ ಕೊರಿಯಾದ ಪರವಾಗಿ ತನ್ನ ನೇತೃತ್ವದ ಅಂತಾರಾಷ್ಟ್ರೀಯ ಸೇನೆಯನ್ನು

ವಿಶ್ವಸಂಸ್ಥೆ ಅನುಮತಿಯೊಂದಿಗೆ ಆಯೋಜಿಸಿದ ಅಮೆರಿಕ ಕೊರಿಯಾ ಯುದ್ಧರಂಗಕ್ಕಿಳಿದು ದಕ್ಷಿಣ ಕೊರಿಯಾವನ್ನು ವಿಮೋಚನೆಗೊಳಸಿ ಉತ್ತರ ಕೊರಿಯಾಗೇ ನುಗ್ಗಿತಷ್ಟೇ. ಆಗ ಉತ್ತರ ಕೊರಿಯಾದ ರಕ್ಷಣೆಗೆ ಧಾವಿಸಿದ ಕಮ್ಯೂನಿಸ್ಟ್ ಚೀನಾ, ಅಮೆರಿಕದ ಅಗಾಧ ಶಸ್ತ್ರಾಸ್ತ್ರಗಳ ವಿರುದ್ಧ ತನ್ನ ಜನಬಾಹುಳ್ಯವನ್ನೇ ಪ್ರಬಲ ಅಸ್ತ್ರವಾಗಿ ಬಳಸಿ ಯಶಸ್ವಿಯಾಯಿತು. ಒಬ್ಬ ಅಮೆರಿಕನ್ ಸೈನಿಕನಿಗೆ ಪ್ರತಿಯಾಗಿ ತನ್ನ ಏಳು ಸೈನಿಕರನ್ನು ಬಲಿಗೊಟ್ಟು ಅಮೆರಿಕ ಸೇನೆಯನ್ನು ಉತ್ತರ ಕೊರಿಯಾದಿಂಂದ ಹೊರಗಟ್ಟಿದ ಚೀನಾ ತನ್ನ ಹಾಗೂ ತನ್ನ ಹಿಂಬಾಲಕರ ಹಿತಾಸಕ್ತಿಗಳನ್ನು ಕಾಪಾಡಲು ಯಾವ ಕ್ರಮಕ್ಕಾದರೂ ತಾನು ಸಿದ್ಧ ಎಂದು ಜಗತ್ತಿಗೆ ಮನಗಾಣಿಸಿ, ವಿಶ್ವನಾಯಕನ ಹಮ್ಮಿನಲ್ಲಿ ಬೀಗುತ್ತಿದ್ದ ಅಮೆರಿಕವನ್ನು ಕಂಗೆಡಿಸಿತು. ಒಂದೂವರೆ ಶತಮಾನ ಹಳೆಯದಾದ ನೆಪೋಲಿಯನ್ ಭವಿಷ್ಯ ಹೀಗೆ ನಿಜವಾಗತೊಡಗಿತ್ತು.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net