

ರಾಷ್ಟ್ರದ ಅತ್ಯುನ್ನತ ನಾಗರಿಕ ಸನ್ಮಾನ ಭಾತರರತ್ನಕ್ಕೆ ಲಾಲಕೃಷ್ಣ ಆಡ್ವಾಣಿ ಭಾಜನರಾಗುತ್ತಿದ್ದಾರೆ. ಸಹಜವಾಗಿಯೇ ಅವರಿಗೆ ಹರ್ಷವಾಗಿದೆ. ಅವರ ಪುತ್ರ ಜಯಂತ್ ಆಡ್ವಾಣಿ ಹಾಗೂ ಪುತ್ರಿ ಪ್ರತಿಭಾ ಆಡ್ವಾಣಿ ಸಹ ಸಂತಸ ವ್ಯಕ್ತಪಡಿಸಿದ್ದಾರೆ. ಇಂಥ ಸಂತಸಕರ ಸನ್ನಿವೇಶದಲ್ಲಿ ಆಡ್ವಾಣಿಯವರ ರಾಜಕೀಯ ಬದುಕಿನ ಮೇಲೆ ಒಂದು ಕ್ಷಕಿರಣ ಬೀರುವುದು ಅಗತ್ಯವೆನಿಸುತ್ತದೆ. ಆಡ್ವಾಣಿಯವರ ಏಳು ದಶಕಗಳ ಸಾರ್ವಜನಿಕ ಬದುಕು ಏಳುಬೀಳುಗಳ ದೀರ್ಘ ಸರಣಿ.
ಪಕ್ಷದ ಬೆಳವಣಿಗೆಯಲ್ಲಿ ಧನಾತ್ಮಕ ಪಾತ್ರವಹಿಸಬಹುದಾದ ಯುವ ನಾಯಕರನ್ನು ಗುರುತಿಸಿ ಬೆಳೆಸುವಲ್ಲಿ ಆಡ್ವಾಣಿಯವರ ಜಾಣ್ಮೆ ಮತ್ತು ವಿವೇಕ ಅದ್ವಿತೀಯ. ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಪ್ರಮೋದ ಮಹಾಜನ್ ಮತ್ತು ನರೇಂದ್ರ ಮೋದಿಯವರನ್ನೂ ಗುರುತಿಸಿ ಪಕ್ಷದೊಳಗೆ ಬೆಳೆಸಿದ್ದು ಆಡ್ವಾಣಿ. ಇಂದು ಮೋದಿಯವರು ತಮ್ಮ ಅಸಾಧಾರಣ ನಾಯಕತ್ವ ಗುಣಗಳಿಂದ ರಾಷ್ಟ್ರವನ್ನು ಅಭೂತಪೂರ್ವ ಪ್ರಗತಿಯತ್ತ ಕೊಂಡೊಯ್ಯುತ್ತಿರುವ ಬಗೆಯನ್ನು ನೋಡಿದಾಗ ಬೆಳೆಯುವ ಸಿರಿಯನ್ನು ಮೊಳಕೆಯಲ್ಲೇ ಗುರುತಿಸುವ ಆಡ್ವಾಣಿಯವರ ಸಾಮರ್ಥ್ಯದ ಒಂದು ಚಿತ್ರ ನಮಗೆ ದೊರೆಯುತ್ತದೆ. ಹೀಗೆ ಈ ಹಿರಿಯ ರಾಜಕಾರಣಿ ಬಿಜೆಪಿಗೆ ಮತ್ತು ರಾಷ್ಟ್ರಕ್ಕೆ ಒಂದು ಸಮರ್ಥ ನಾಯಕವರ್ಗವನ್ನು ಸೃಷ್ಟಿಸಿಕೊಟ್ಟದ್ದು ಸಮಕಾಲೀನ ಭಾರತೀಯ ಇತಿಹಾಸದ ಪ್ರಮುಖ ಬೆಳವಣಿಗೆ.
ದೆಹಲಿ ಮುನಿಸಿಪಲ್ ಕೌನ್ಸಿಲ್ ಚುನಾವಣೆಗಳಲ್ಲಿ 1960ರ ಸುಮಾರಿಗೆ ಜನಸಂಘ ಅನುಭವಿಸಿದ ಪರಾಭವ ವಾಜಪೇಯಿ ಮತ್ತು ಆಡ್ವಾಣಿಯವರಿಬ್ಬರನ್ನೂ ಕಂಗೆಡಿಸಿಬಿಟ್ಟತ್ತು. ಆ ಇಬ್ಬರು ನಾಯಕರು ಬೇಸರ ಕಳೆಯಲೆಂದು ಕನಾಟ್ ಪ್ಲೇಸ್ನ ರೀಗಲ್ ಸಿನಿಮಾಗೆ ಹೋಗಿ ಅಲ್ಲಿ ‘ಫಿರ್ ಸುಬಹ್ ಹೋಗೀ’ ಹಿಂದಿ ಚಿತ್ರವನ್ನು ನೋಡಿ ಸ್ಪೂರ್ತಿ ಪಡೆದದ್ದನ್ನು ನೆನಪಿಸಿಕೊಳ್ಳುವವರೂ ಇದ್ದಾರೆ. ನಂತರದ ವರ್ಷಗಳಲ್ಲಿ ಆ ಇಬ್ಬರು ನಾಯಕರು ಜನಸಂಘ ವನ್ನು ನಿಧಾನವಾಗಿ ಉತ್ಕರ್ಷಕ್ಕೆ ಒಯ್ಯುತ್ತ ನಡೆದರು. ಅವರಿಗೆ ಮತ್ತು ಪಕ್ಷಕ್ಕೆ ಆಘಾತಕಾರಿಯಾದದ್ದು 1975-77ರ ತುರ್ತಪರಿಸ್ಥಿತಿ. ಅದನ್ನೂ ದಾಟಿ ಬಂದು 1977-79ರ ‘ಜನತಾ ಪ್ರಯೋಗ’ದಲ್ಲಿ ಅವರು ಪಾಲುದಾರರಾದರು. ಇದು ಆ ಮಹಾನ್ ದೇಶಪ್ರೇಮಿ ನಾಯಕರಿಬ್ಬರೂ ದೇಶಹಿತವನ್ನು ಮರೆತ ಕ್ಷಣ. ಅಧಿಕಾರಲಾಲಸಿ ಮಾಜಿ ಕಾಂಗ್ರೆಸ್ಸಿಗರನ್ನು ಮುಂದಿಟ್ಟುಕೊಂಡು, ರಾಷ್ಟ್ರದ ರಾಜಕಾರಣವನ್ನು ನಿರ್ದೇಶಿಸಲು ವಾಜಪೇಯಿ ಮತ್ತು ಆಡ್ವಾಣಿ ಹೊರಟದ್ದೇಕೆ ಎಂದು ತಿಳಿಯುವುದಿಲ್ಲ. ಪಾಕಿಸ್ತಾನದ ವಿರುದ್ಧ ಇಂದಿರಾ ಗಾಂಧಿ ಮಾಡಿದ್ದ ಒಳ್ಳೆಯ ಕೆಲಸಗಳನ್ನೆಲ್ಲ ಮಣ್ಣುಗೂಡಿಸಿ, ನಮ್ಮ ವಿರುದ್ಧ ಆ ದೇಶಕ್ಕೇ ಅನುಕೂಲವಾಗುವಂಥ ಕ್ರಮಗಳನ್ನು ತೆಗೆದುಕೊಂಡು ನಮ್ಮ ಸುರಕ್ಷೆಗೆ ಶಾಶ್ವತ ಹಾನಿಯೆಸಗಿದರು ಮೊರಾರ್ಜಿ ದೇಸಾಯಿ. ನಂತರ ಲೋಕಸಭೆಯಲ್ಲಿ ತನಗೆ ಅಗತ್ಯ ಬೆಂಬಲ ಇಲ್ಲವೆಂದು ತಿಳಿದು ಕಂಗಾಲಾಗಿ, ವಿಶ್ವಾಸ ಮತಯಾಚನೆಗೂ ಹಿಂಜರಿದು ಓಡಿಹೋಗಿ, ಲೋಕಸಭೆಯನ್ನು ಎದುರಿಸದ ಏಕೈಕ ಪ್ರಧಾನಮಂತ್ರಿ ಎಂದು ಈಗಲೂ ದಾಖಲೆಯಾಗಿ ಉಳಿದುಹೋಗಿರುವ ಚರಣ್ ಸಿಂಗ್ ರಾಷ್ಟ್ರನಿಷ್ಠ ಮತ್ತು ವಿವೇಕಿ ವಾಜಪೇಯಿ ಮತ್ತು ಆಡ್ವಾಣಿಯವರಿಗೆ ಅದು ಹೇಗೆ ತಾನೆ ರಾಷ್ಟ್ರ ನಾಯಕತ್ವಕ್ಕೆ ಸೂಕ್ತರಾಗಿ ಕಂಡುಬಂದರು ಎನ್ನುವುದು ಇಂದಿಗೂ ಒಂದು ಚೋದ್ಯವೇ ಸರಿ.
ಬಹುಶಃ ಆ ತಪ್ಪನ್ನು ಸರಿಪಡಿಸಿಕೊಳ್ಳುವ ಕ್ರಮವಾಗಿಯೇ ಈ ಇಬ್ಬರು ನಾಯಕರು ಜನತಾ ಪಕ್ಷದಿಂದ ಹೊರಬಂದು 1980 ಏಪ್ರಿಲ್ 6ರಂದು ಭಾರತೀಯ ಜನತಾ ಪಕ್ಷವನ್ನು ಅಸ್ತಿತ್ವಕ್ಕೆ ತಂದರು. ಇಂದಿರಾ ಹತ್ಯೆಯಿಂದಾಗಿ ಕಾಂಗ್ರೆಸ್ಗೆ ಸಂತಾಪ ಮತಗಳ ಸುರಿಮಳೆಯಾಗಿ 1984ರ ಚುನಾವಣೆಗಳಲ್ಲಿ ಬಿಜೆಪಿಗೆ ಭಾರಿ ಹಿನ್ನಡೆಯಾಯಿತು. ಆಗ ಅದಕ್ಕೆ ದಕ್ಕಿದ ಎರಡು ಸ್ಥಾನಗಳು ಐದು ವರ್ಷಗಳ ನಂತರ 85ಕ್ಕೇರಿದ್ದರಲ್ಲಿ ಆಡ್ವಾಣಿಯವರ ಪಾತ್ರ ಮಹತ್ತರವಾದದ್ದು. ನಂತರ, 1990ರಲ್ಲಿ ರಾಮಜನ್ಮಭೂಮಿ ಮಂದಿರಕ್ಕಾಗಿ ಅವರು ಕೈಗೊಂಡ ರಥಯಾತ್ರೆ ಅವರನ್ನೂ, ಬಿಜೆಪಿಯನ್ನೂ ದೇಶದ ಹಿಂದೂಗಳಿಗೆ ಇನ್ನೂ ಹತ್ತಿರವಾಗಿಸಿತು. ಅವರು ಘೊಷಿಸಿದ ‘ಮಂದಿರ್ ವಹೀ ಬನಾಯೇಂಗೇ’ ಎಂಬ ಮೂರು ಪದಗಳು ಕೋಟ್ಯಂತರ ಹಿಂದೂಗಳ ಘೊಷವಾಕ್ಯಗಳಾದವು. ಆಮೇಲೆ ಮುಂದಿನ ಹದಿನೈದು ವರ್ಷಗಳು ಬಿಜೆಪಿ ಸಾಗಿದ್ದು ಉತ್ಕರ್ಷದ ಹಾದಿಯಲ್ಲೇ. ಅದರಲ್ಲಿ ಆಡ್ವಾಣಿಯವರ ಕಾಣಿಕೆ ಗಮನಾರ್ಹವಾದದ್ದೇ.
2004ರ ಹಿನ್ನೆಡೆಯ ನಂತರ ಆಡ್ವಾಣಿ ತಾವು ನಂಬಿದ್ದ, ಪಕ್ಷಕ್ಕೆ ತುತ್ತುತುತ್ತಾಗಿ ಉಣಿಸಿದ್ದ ಕೆಲವು ಸಿದ್ಧಾಂತ, ಮೌಲ್ಯಗಳಿಗೆ ವಿರುದ್ಧವಾಗಿ ನಡೆದುಕೊಂಡ ವೈಚಿತ್ರ್ಯಕ್ಕೆ ರಾಷ್ಟ್ರ ಎದುರಾಯಿತು. ಬಿಜೆಪಿ ಅಧಿಕಾರ ಕಳೆದುಕೊಂಡ ಮರುವರ್ಷ ಅಂದರೆ 2005ರಲ್ಲಿ ಆಡ್ವಾಣಿಯವರು ಪಾಕಿಸ್ತಾನದ ಅಸ್ತಿತ್ವವನ್ನು ಸಾರ್ವಜನಿಕವಾಗಿ ಒಪ್ಪಿಕೊಂಡು ಅಖಂಡ ಭಾರತ ಕಲ್ಪನೆಯಿಂದ ದೂರ ಸರಿಯುವ ಸೂಚನೆ ನೀಡಿ ಎಲ್ಲರನ್ನೂ ಅಚ್ಚರಿಯಲ್ಲಿ ಕೆಡವಿದರು. ಅದು ಆರಂಭ. ಅವರ ಸಿದ್ಧಾಂತ ಬದಲಾವಣೆಯನ್ನು ದೇಶ ಅರಗಿಸಿಕೊಳ್ಳುವುದಕ್ಕೂ ಮೊದಲೇ ಅವರು ಕರಾಚಿಯಲ್ಲಿನ ಜಿನ್ನಾರ ಸಮಾಧಿಸ್ಥಳಕ್ಕೆ ಭೇಟಿ ನೀಡಿ ಪಾಕಿಸ್ತಾನದ ಸೃಷ್ಟಿಕರ್ತನನ್ನು ‘ಸೆಕ್ಯೂಲರ್’ ಎಂದು ಕರೆದದ್ದಲ್ಲದೆ ‘ಹಿಂದೂ-ಮುಸ್ಲಿಂ ಸ್ನೇಹದ ರಾಯಭಾರಿ’ ಎಂದೂ ಬಣ್ಣಿಸಿದರು. ನಿಷ್ಠಾವಂತ ಬಿಜೆಪಿಗರಿಗೆ ಇದು ಆಘಾತ. ಏಕೆಂದು ಅರಿಯಲು ನಾವು ಇತಿಹಾಸದಲ್ಲಿ ಒಂದು ಶತಮಾನ ಹಿಂದೆ ಹೋಗಬೇಕಾಗುತ್ತದೆ.
ಭಾರತೀಯ ಜನತಾ ಪಕ್ಷದ ಮೂಲ ಭಾರತೀಯ ಜನ ಸಂಘ, ಅದರ ಮೂಲ ರಾಷ್ಟ್ರೀಯ ಸ್ವಯಂಸೇವಕ ಸಂಘ. ಶತಮಾನದ ಹಿಂದೆ ಇದೇ ಸುಮಾರಿಗೆ ಉಗ್ರವಾಗತೊಡಗಿದ್ದ ದೇಶವಿಭಜನೆ ಹುನ್ನಾರದ ಹಿಂದಿದ್ದದ್ದು ಬ್ರಿಟಿಷ್ ಸಾಮ್ರಾಜ್ಯಶಾಹಿ ಹಂಚಿಕೆ ಮತ್ತು ಮುಸ್ಲಿಂ ಲೀಗ್ ನಾಯಕರ ರಾಜಕೀಯ ಹಾಗೂ ಆರ್ಥಿಕ ಲಾಲಸೆಗಳು. ಇದು ಸಹಜವಾಗಿಯೇ, ಭಾರತೀಯ ಸಂಸ್ಕೃತಿಯ ಹಿರಿಮೆಗರಿಮೆಗಳ ಬಗ್ಗೆ ಅಭಿಮಾನವಿದ್ದ, ಆ ಕಾರಣದಿಂದಲೇ ಈ ದೇಶ ಅಖಂಡವಾಗಿಯೇ ಉಳಿದು 1914-18ರ ಮಹಾಯುದ್ಧೋತ್ತರ ಜಗತ್ತಿನಲ್ಲಿ ಪ್ರಮುಖ ಪಾತ್ರ ವಹಿಸಬೇಕೆಂದು ಬಯಸಿದ್ದ ಅಸಂಖ್ಯ ಭಾರತಿಯರಿಗೆ ಸಮ್ಮತವೆನಿಸಲಿಲ್ಲ. ಬ್ರಿಟಿಷ್ ವಸಾಹತುಶಾಹಿಗಳು ಮತ್ತು ಮುಸ್ಲಿಂ ಲೀಗ್ನ ಹುನ್ನಾರಗಳಿಗೆ ಪ್ರತಿಯಾಗಿ ಪರಿಣಾಮಕಾರಿ ಜನಾಭಿಪ್ರಾಯ ಮೂಡಿಸುವಲ್ಲಿ ವಿಫಲವಾಗಿದ್ದ ಕಾಂಗ್ರೆಸ್ ಬಗ್ಗೆ ದೇಶಪ್ರೇಮಿಗಳಿಗೆ ಭ್ರಮನಿರಸನವಾಗಿತ್ತು. ಅಂತಹವ ರೆಲ್ಲ ಒಟ್ಟುಗೂಡಿ 1925ರಲ್ಲಿ (ದೇಶವಿಭಜಕ ಮುಸ್ಲಿಂ ಲೀಗ್ ಸ್ಥಾಪನೆಯಾದ 19 ವರ್ಷಗಳ ನಂತರ ಎನ್ನುವುದನ್ನು ಗಮನಿಸಿ) ಸೃಷ್ಟಿಸಿದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಧ್ಯೇಯಗಳಲ್ಲೊಂದು ಅಖಂಡ ಭಾರತಕ್ಕೆ ನಿಷ್ಠೆ.
ಇಂತಹ ದೇಶಾಭಿಮಾನಿಗಳ ಪ್ರಯತ್ನವನ್ನೂ ಮೀರಿ 1947ರಲ್ಲಿ ಅಖಂಡ ಭಾರತ ತುಂಡಾಗಿಯೇ ಹೋದಾಗ ಆರ್ಎಸ್ಎಸ್ಗೆ ತೀವ್ರ ಆಘಾತವಾದದ್ದು ಸಹಜ. ಆಗ ನಿರಾಶರಾದ ಆರ್ಎಸ್ಎಸ್ ಬೆಂಬಲಿಗರು ಮತ್ತು ದೇಶವಿಭಜನೆಯಿಂದ ನೊಂದದ್ದಲ್ಲದೆ ಕಾಂಗ್ರೆಸ್ನ ಮುಸ್ಲಿಂ-ಪರ ನೀತಿಗಳಿಂದ ಭ್ರಮನಿರಸನಗೊಂಡ ಹಿಂದೂಗಳು ಮತ್ತು ರಾಷ್ಟ್ರೀಯತಾ ಮನೋಭಾವದ ಮುಂದಾಳುಗಳು ಸೃಷ್ಟಿಸಿದ ರಾಜಕೀಯ ಪಕ್ಷ ಭಾರತೀಯ ಜನಸಂಘ. ಹೀಗಾಗಿಯೇ ಪಾಕಿಸ್ತಾನದ ಅಸ್ತಿತ್ವದ ನಿರಾಕರಣೆ, ಅದಕ್ಕೆ ಕಾರಣರಾದವರ ಬಗ್ಗೆ ತಿರಸ್ಕಾರ ಹಾಗೂ ಅಖಂಡ ಭಾರತದ ಪರಿಕಲ್ಪನೆಗೆ ನಿಷ್ಠೆ ಜನಸಂಘದ ಅಸ್ತಿತ್ವದ ಸೈದ್ಧಾಂತಿಕ ಬುನಾದಿಗಳಾಗಿದ್ದವು. ಅದು ಏಪ್ರಿಲ್ 6, 1980ರಂದು ಭಾರತೀಯ ಜನತಾ ಪಕ್ಷವಾಗಿ ಮರುಹುಟ್ಟು ಪಡೆದಾಗಲೂ ಈ ಸೈದ್ಧಾಂತಿಕ ಬುನಾದಿ ಶಿಥಿಲಗೊಳ್ಳಲಿಲ್ಲ. 2005ರಲ್ಲಿ ಆಡ್ವಾಣಿ ಕೊಡಲಿಯೇಟು ಹಾಕಿದ್ದು ಆ ಬುನಾದಿಗೇ. ಯಾಕೆಂದರೆ ಆಡ್ವಾಣಿ ಬಣ್ಣಿಸಿದ್ದು ಜಿನ್ನಾರ ವ್ಯಕ್ತಿತ್ವದ ಒಂದು ಮುಖವನ್ನು ಮಾತ್ರ. ತಮ್ಮ ಸಾಮಾಜಿಕ-ರಾಜಕೀಯ ಬದುಕಿನ ಆರಂಭದ ದಿನಗಳಲ್ಲಿ ಜಿನ್ನಾ ಹಿಂದೂ-ಮುಸ್ಲಿಂ ಸೌಹಾರ್ದದ ಪರವಾಗಿದ್ದುದುಂಟು. ಅದನ್ನು ನಿಷ್ಠುರ ಸತ್ಯಗಳನ್ನು ನಿರ್ಭಿಡೆಯಿಂದ ಹೇಳುವುದಕ್ಕೆ ಹೆಸರಾಗಿದ್ದ ಸರೋಜಿನಿ ನಾಯ್ಡು ಅವರೇ ಗುರುತಿಸಿ, ‘ಜಿನ್ನಾ ಒಬ್ಬರು ಹಿಂದೂ-ಮುಸ್ಲಿಂ ಸ್ನೇಹಸೌಹಾರ್ದದ ಪ್ರಚಾರಕ’ ಎಂದು 1917ರಲ್ಲಿ ಶ್ಲಾಘಿಸಿದ್ದರು. 1925ರಲ್ಲಿ ಮೆಹಮೂದಾಗಬಾದ್ ಸಂಸ್ಥಾನದ ಹತ್ತುವರ್ಷದ ಎಳೆಯ ಯುವರಾಜ ತಾನು ಮೊದಲು ಮುಸ್ಲಿಂ, ನಂತರ ಭಾರತೀಯ ಅಂದಾಗ ಆತನನ್ನು ಜಿನ್ನಾ, ‘ನನ್ನ ಪ್ರೀತಿಯ ಹುಡುಗಾ, ನೀನು ಮೊದಲು ಭಾರತೀಯ, ನಂತರ ಮುಸ್ಲಿಂ’ ಎಂದು ತಿದ್ದಿದ್ದರು. ನಂತರ 1947 ಆಗಸ್ಟ್ 12ರಂದು ಪಾಕಿಸ್ತಾನ ಸಂವಿಧಾನ ಸಮಿತಿಯ ಮೊದಲ ಸಮಾವೇಶವನ್ನು ಉದ್ದೇಶಿಸಿ ಮಾತನಾಡುತ್ತ, ‘ಪಾಕಿಸ್ತಾನ ಒಂದು ಆಧುನಿಕ ಧರ್ಮನಿರಪೇಕ್ಷ ರಾಷ್ಟ್ರವಾಗಿ ಉಗಮಿಸಬೇಕು’ ಎಂದೂ, ‘ಪಾಕಿಸ್ತಾನೀಯರ ಧಾರ್ವಿುಕ ನಂಬಿಕೆಗಳು ಹಾಗೂ ಆಚರಣೆಗಳಿಗೂ ಸರ್ಕಾರಕ್ಕೂ ಏನೂ ಸಂಬಂಧವಿರುವುದಿಲ್ಲ’ ಎಂದೂ ಘೊಷಿಸಿದರು. ಆದರೆ 1925 ಮತ್ತು 1947ರ ನಡುವಿನ ವರ್ಷಗಳಲ್ಲಿ ಜಿನ್ನಾ, ‘ಹಿಂದೂಗಳು ಮತ್ತು ಮುಸ್ಲಿಂರು ಎರಡು ವಿಭಿನ್ನ ರಾಷ್ಟ್ರಗಳು, ಈ ಎರಡು ರಾಷ್ಟ್ರಗಳು ಒಂದೇ ಸರ್ಕಾರದ ಅಡಿಯಲ್ಲಿ ಬಾಳಲಾಗದು’ ಎಂಬ ದ್ವಿರಾಷ್ಟ್ರ ಸಿದ್ಧಾಂತವನ್ನು ಎಲ್ಲೆಡೆ ಕೂಗುತ್ತ ಸಾಗಿ, ಬ್ರಿಟಿಷರೊಂದಿಗೆ ಶಾಮೀಲಾಗಿ ದೇಶವನ್ನು ಧರ್ಮದ ಆಧಾರದ ಮೇಲೆ ಒಡೆದುಬಿಟ್ಟರಲ್ಲ?
ಜಿನ್ನಾ ಧಾರ್ವಿುಕರೇನೂ ಆಗಿರಲಿಲ್ಲ. ಅವರು ದಿನಕ್ಕೆ ಐದು ಬಾರಿ ನಮಾಜ್ ಮಾಡುತ್ತಿರಲಿಲ್ಲ. ಅವರು ಹಂದಿಮಾಂಸವನ್ನು ಇಷ್ಟಪಟ್ಟು ತಿನ್ನುತ್ತಿದ್ದರು, ಮದ್ಯವನ್ನು ಚಪ್ಪರಿಸಿ ಸವಿಯುತ್ತಿದ್ದರು, ಪಾರ್ಸಿ ಸ್ತ್ರೀಯನ್ನು ವಿವಾಹವಾಗಿದ್ದರು. ಇದೆಲ್ಲದರ ಅರ್ಥ ಅವರು ‘ಸೆಕ್ಯೂಲರ್’ ಆಗಿದ್ದರು, ಪಾಕಿಸ್ತಾನದ ಸೃಷ್ಟಿಗಾಗಷ್ಟೇ ಅವರು ತಮ್ಮಲ್ಲಿಲ್ಲದ ‘ಧರ್ವಂಧತೆ’ಯನ್ನು ಇರುವಂತೆ ದೊಡ್ಡದಾಗಿ ಪ್ರದರ್ಶಿಸಿದರು ಎನ್ನುವಂತೆ ಕಂಡರೂ, ಇಂದಿನ ಉಪಖಂಡವನ್ನು ಹೀಗಿರುವಂತೆ ಮಾಡಿದ್ದು ಜಿನ್ನಾರ ಧರ್ಮನಿರಪೇಕ್ಷತೆಯೋ ಅಥವಾ ಧರ್ವಂಧತೆಯೋ? ಖೋಟಾ ಆದರೂ ಸರಿಯೇ, ಅವರ ‘ಧರ್ವಂಧತೆ’ ದೇಶವನ್ನು ಒಡೆದುಬಿಟ್ಟಿತಲ್ಲ? ಅವರು ಸೃಷ್ಟಿಸಿದ ಆ ಧರ್ವಂಧ ರಾಷ್ಟ್ರ ಇಂದು ಜಿಹಾದಿಗಳ ಕಾರ್ಖಾನೆಯಾಗಿದೆಯಲ್ಲ? ನಮ್ಮ ವಿರುದ್ಧ ನಿರಂತರವಾಗಿ ದ್ವೇಷ ಕಾರುತ್ತ ನಮಗೆ ಮಗ್ಗುಲಲ್ಲಿ ಮುಳ್ಳಾಗಿ ಚುಚ್ಚಿ ಕೂತಿದೆಯಲ್ಲ? ಇದನ್ನೇಕೆ ಆಡ್ವಾಣಿ ನಿರ್ಲಕ್ಷಿಸಿದರು?
ಇಷ್ಟೇ ಅಲ್ಲ, ಅಖಂಡ ಭಾರತವನ್ನು ತುಂಡರಿಸಿ ಎರಡು ಪರಸ್ಪರ ವಿರೋಧಿ ರಾಷ್ಟ್ರಗಳ ಉಗಮಕ್ಕೆ ಕಾರಣರಾಗಹೋದ ಜಿನ್ನಾರ ಬಗ್ಗೆ ಆರ್ಎಸ್ಎಸ್ನಲ್ಲಿ ಸಹಜವಾಗಿಯೇ ತೀವ್ರ ಅಸಮಾಧಾನವಿತ್ತು. ಅವರನ್ನಷ್ಟೇ ಅಲ್ಲ, ಲಿಯಾಖತ್ ಆಲಿ ಖಾನ್ ಸೇರಿದಂತೆ ಪ್ರಮುಖ ಮುಸ್ಲಿಂ ಲೀಗ್ ನಾಯಕರು ತಮ್ಮ ದುಷ್ಟ ಕಾರ್ಯತಂತ್ರಗಳನ್ನು ರೂಪಿಸಲು ಸಭೆ ಸೇರುತ್ತಿದ್ದ ದೆಹಲಿಯ ಒಂದು ಹೋಟೆಲ್ ಸಭಾಂಗಣವನ್ನೇ ಬಾಂಬ್ನಿಂದ ಉಡಾಯಿಸಿಬಿಡಬೇಕೆಂದು ನಾಥೂರಾಂ ಗೋಡ್ಸೆ ಮತ್ತು ನಾರಾಯಣ ಆಪ್ಟೆ 1947ರ ಬೇಸಿಗೆಯಲ್ಲಿ ಪ್ರಯತ್ನ ಆರಂಭಿಸಿದ್ದರು. ಕಾರ್ಯಾಚರಣೆಗೆ ಬೇಕಾದ ಮಾರ್ಟರ್ಗಳನ್ನು ಗೋವಾದ ಪೋರ್ತಗೀಸ್ ಸೈನಿಕರಿಂದ ಪಡೆದುಕೊಳ್ಳುವ ಸಲುವಾಗಿ ಆ ದಿನಗಳ ಪ್ರಭಾವಿ ಧಾರ್ವಿುಕ ವ್ಯಕ್ತಿಗಳೊಬ್ಬರಾಗಿದ್ದ ದಾದಾ ಮಹಾರಾಜ್ ಅವರು ಐದುಸಾವಿರ ರೂಪಾಯಿಗಳನ್ನೂ ಕೊಟ್ಟಿದ್ದರು.
ಆದರೆ ಮಾರ್ಟರ್ಗಳು ಗೋಡ್ಸೆ ಮತ್ತು ಆಪ್ಟೆಯವರ ಕೈ ಸೇರುವ ಹೊತ್ತಿಗೆ ಜಿನ್ನಾ ಮತ್ತವರ ಸಹಚರಿಗಳು ದೆಹಲಿಯನ್ನು ಬಿಟ್ಟು ಕರಾಚಿಗೆ ಹೊರಟುಹೋಗಿದ್ದರು. ಆನಂತರವೂ, ಕರಾಚಿಯಲ್ಲಿ 1947 ಆಗಸ್ಟ್ 14ರಂದು ಜಿನ್ನಾ ‘ವಿಜಯಯಾತ್ರೆ’ ಹೊರಡಲು ಯೋಜಿಸಿದಾಗ ಅವರ ಹತ್ಯೆಗೈಯಲು ಸ್ಥಳೀಯ ಆರ್ಎಸ್ಎಸ್ ಮುಂದಾಳುಗಳು ಯೋಚಿಸಿದ್ದರು. ಅದೂ ವಿಫಲವಾದ ವಿವರಗಳನ್ನು ಡೇನಿಯಲ್ ಲಾಪಿಯರ್ ಮತ್ತು ಲ್ಯಾರಿ ಕಾಲಿನ್ಸ್ ತಮ್ಮ ‘ಫ್ರೀಡಂ ಅಟ್ ಮಿಡ್ನೈಟ್’ ಕೃತಿಯಲ್ಲಿ ನೀಡಿದ್ದಾರೆ. ಆ ಪ್ರಕಾರ, ಗುಪ್ತಚರ ಮಾಹಿತಿಗನುಗುಣವಾಗಿ ಸೂಕ್ತ ಕ್ರಮಗಳನ್ನು ವೈಸ್ರಾಯ್ ಮೌಂಟ್ಬ್ಯಾಟನ್ ಕೈಗೊಂಡರು. ಜಿನ್ನಾರನ್ನು ಉಳಿಸಲು ಮೌಂಟ್ಬ್ಯಾಟನ್ ಎಂತಹ ಕ್ರಮಕ್ಕೆ ತಯಾರಾದರೆಂದರೆ, ಸಾರೋಟಿನಲ್ಲಿ ಜಿನ್ನಾರನ್ನು ತಾವು ಮತ್ತು ತಮ್ಮ ಪತ್ನಿ ಎಸ್ವಿನಾರ ನಡುವೆ ಕೂರಿಸಿಕೊಂಡರು! ತಮ್ಮ ಉಪಸ್ಥಿತಿಯಿಂದಾಗಿ ಜಿನ್ನಾರ ಮೇಲೆ ಬಾಂಬ್ ಎಸೆಯಲು ಆರ್ಎಸ್ಎಸ್ ಕಾರ್ಯಕರ್ತರು ಹಿಂದೆಗೆಯುತ್ತಾರೆ ಎನ್ನವುದು ಅವರ ಲೆಕ್ಕಾಚಾರವಾಗಿತ್ತು. ಅದು ಹಾಗೇ ಆದಂತೆ ಕಾಣುತ್ತದೆ.
ಇದೆಲ್ಲದರ ಅರ್ಥ, ಖೋಟಾವೇ ಆಗಿರಲಿ, ಧರ್ವಂಧತೆಯನ್ನು ಉಗ್ರವಾಗಿ ಪ್ರದರ್ಶಿಸಿ ಅಖಂಡ ಭಾರತವನ್ನು ಒಡೆದ ಜಿನ್ನಾ ಬಗ್ಗೆ ಆರ್ಎಸ್ಎಸ್ ಕಾರ್ಯಕರ್ತರಿಗೆ ತೀವ್ರ ಸಿಟ್ಟಿತ್ತು. ಈ ಹಿನ್ನೆಲೆಯಲ್ಲಿ, ಜಿನ್ನಾರನ್ನು ಆಡ್ವಾಣಿ ಹೊಗಳಹೊರಟದ್ದು ಎಷ್ಟು ಸರಿ? ತಮ್ಮ ಮಾತುಗಳು ಆರ್ಎಸ್ಎಸ್ ಆಗಲೀ, ಬಿಜೆಪಿಗಾಗಲೀ ಸಮ್ಮತವೆನಿಸಲು ಸಾಧ್ಯವೇ ಇರಲಿಲ್ಲ ಎನ್ನುವುದು ಆಡ್ವಾಣಿಯವರಿಗೆ ಹೇಗೆ ಮತ್ತು ಏಕೆ ತಿಳಿಯಲಿಲ್ಲ? ಇದು ಸೈದ್ಧಾಂತಿಕ ಆಯಾಮವಾಯಿತು. ಜನಸಂಘ/ಬಿಜೆಪಿಯನ್ನು ಕಟ್ಟಿ, ಅದನ್ನು ಅಧಿಕಾರಕ್ಕೆ ತಂದಿದ್ದ ಆಡ್ವಾಣಿ ತಮ್ಮ ವೈಯಕ್ತಿಕ ಹಿತಾಸಕ್ತಿಗಳಿಗೆ ಪ್ರಾಧಾನ್ಯ ನೀಡಿ, ಪಕ್ಷದ ಕೆಲವು ಪ್ರಮಖ ಘೊಷಿತ/ಅಘೊಷಿತ ಮೌಲ್ಯಗಳು ಅರ್ಥಹೀನಗೊಳಿಸುವಂತೆ ನಡೆದುಕೊಂಡಂತೆ ಕಾಣುವ ಪ್ರಸಂಗಗಳೂ ಇವೆ. ಈ ಹಿರಿಯ ರಾಜಕಾರಣಿಯ ವ್ಯಕ್ತಿಚಿತ್ರವನ್ನು ಪೂರ್ಣಗಳಿಸಲು ಅವುಗಳನ್ನೂ ಪರಿಗಣಿಸುವ ಅಗತ್ಯವಿದೆ. ಅದನ್ನು ಮುಂದಿನವಾರ ನೋಡೋಣ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)