

ಸಾಂಪ್ರದಾಯಿಕ ಯುದ್ಧದಲ್ಲಿ ಭಾರತದ ವಿರುದ್ಧ ಸರಿಸಮನಾಗಿ ನಿಲ್ಲುವುದು ತನಗೆ ಸಾಧ್ಯವಿಲ್ಲ ಎಂದು 1971ರ ಯುದ್ಧ ಪರಿಣಾಮವಾಗಿ ಅರಿತ ಪಾಕಿಸ್ತಾನ ಹುಡುಕಿಕೊಂಡ ಮಾರ್ಗಗಳು ಎರಡು- 1. ಅಣ್ವಸ್ತ್ರಗಳನ್ನು ಗಳಿಸಿಕೊಳ್ಳುವುದು, 2. ಭಾರತದ ವಿರುದ್ಧ ವ್ಯಾಪಕ ಹಾಗೂ ನಿರಂತರ ಭಯೋತ್ಪಾದನೆಯನ್ನು ಪ್ರಾಯೋಜಿಸುವುದು ಮತ್ತು ಆಯೋಜಿಸುವುದು. ಮೊದಲನೆಯ ಯೋಜನೆ ಕಾರ್ಯರೂಪಕ್ಕಿಳಿದದ್ದು 1972 ಜನವರಿ 29ರಂದು, ಬಾಂಗ್ಲಾದೇಶ ಯುದ್ಧವಾಗಿ ಕೇವಲ ಒಂದು ತಿಂಗಳು, ನಾಲ್ಕು ದಿನಗಳಾದ ನಂತರ. ಅಂದು ದಕ್ಷಿಣ ಪಂಜಾಬ್ನ ಮುಲ್ತಾನ್ ಪಟ್ಟಣದಲ್ಲಿ ಪಾಕಿಸ್ತಾನಿ ಅಣುಭೌತವಿಜ್ಞಾನಿಗಳ ಸಭೆ ಕರೆದ ಆಗಿನ ಪ್ರಧಾನಮಂತ್ರಿ ಝುುಲ್ಪೀಕರ್ ಆಲಿ ಭುಟ್ಟೋ, ಯುದ್ಧದಲ್ಲಿನ ಸೋಲನ್ನು, ದೇಶದ ಪೂರ್ವ ಭಾಗವನ್ನು ಕಳೆದುಕೊಂಡದ್ದರ ಜತೆಗೆ 93,000 ಪಾಕ್ ಸೈನಿಕರು ಯುದ್ಧಕೈದಿಗಳಾಗಿ ಭಾರತದಲ್ಲಿ ಉಳಿದುಹೋಗಿರುವುದನ್ನು ತಮ್ಮ ಎಂದಿನ ಚಾಣಾಕ್ಷ ಮಾತಿನಶೈಲಿಯಲ್ಲಿ ವರ್ಣಿಸಿ, ಸಲಹೆಯ ರೂಪದ ಆಜ್ಞೆ-‘ಅಣ್ವಸ್ತ್ರಕ್ಕೆ ಬೇಕಾದ ತಂತ್ರಜ್ಞಾನ ಮತ್ತು ಪರಿಕರಗಳನ್ನು ನೀವು ಕೊಂದಾದರೂ ತನ್ನಿ, ಬೇಡಿಯಾದರೂ ತನ್ನಿ ಅಥವಾ ಕದ್ದಾದರೂ ತನ್ನಿ, ಒಟ್ಟಿನಲ್ಲಿ ಮೂರು ವರ್ಷಗಳಲ್ಲಿ ನನಗೆ ಅಣ್ವಸ್ತ್ರ ಕೊಡಿ’. ಇವು ಮೂರು ಮಾರ್ಗಗಳನ್ನೂ ಚಾಚೂ ತಪ್ಪದೇ ಪಾಲಿಸಿದ ಪಾಕ್ ಅಣ್ವಸ್ತ್ರ ಯೋಜನೆಯ ನಿರ್ದೇಶಕ ಅಬ್ದುಲ್ ಖಾದರ್ ಖಾನ್ ಕೊನೆಗೂ ಯಶಸ್ವಿಯಾಗಿ, ಚೀನೀ ನೆಲದಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದು 1987ರಲ್ಲಿ. ಅಷ್ಟರೊಳಗೆ ಭುಟ್ಟೋ ಗಲ್ಲಿಗೇರಿ ಎಂಟು ವರ್ಷಗಳಾಗಿದ್ದವು, ಅವರನ್ನು ನಖಶಿಖಾಂತ ದ್ವೇಷಿಸಿದ ಸೇನಾ ಸರ್ವಾಧಿಕಾರಿ ಜಿಯಾ-ಉಲ್-ಹಕ್ ಅಣ್ವಸ್ತ್ರ ಯೋಜನೆಯನ್ನು ಮಾತ್ರ ದತ್ತು ತೆಗೆದುಕೊಂಡು ಪೋಷಿಸಿ ಹತ್ತು ವರ್ಷಗಳಾಗುತ್ತಿದ್ದವು.
ಭಾರತದ ವಿರುದ್ಧ ಪಾಕಿಸ್ತಾನದ ಭಯೋತ್ಪಾದನೆಗೆ ತಾತ್ವಿಕ ರೂಪ ಕೊಟ್ಟು ಅದನ್ನು ಸರ್ಕಾರಿ ನೀತಿಯನ್ನಾಗಿಸಿದ್ದು ಕುಖ್ಯಾತ ಐಎಸ್ಐ ನಿರ್ದೇಶಕ ಹಮೀದ್ ಗುಲ್, ‘ಭಾರತ ಸಾವಿರ ಗಾಯಗಳಿಂದ ರಕ್ತ ಹರಿಸಿಕೊಂಡು ಒದ್ದಾಡುವಂತೆ ಮಾಡುತ್ತೇವೆ’ ಎಂದು ಹೇಳುವುದರ ಮೂಲಕ. ಮೊದಲಿಗೆ ಪಂಜಾಬ್ನಲ್ಲಿ ಉಗ್ರವಾಗಿ ಅನುಷ್ಠಾನಗೊಂಡ ಆ ಯೋಜನೆ ಅಸಂಖ್ಯ ಭದ್ರತಾ ಸಿಬ್ಬಂದಿ ಹಾಗೂ ನಾಗರಿಕರ ಜತೆ ದೇಶದ ಪ್ರಧಾನಮಂತ್ರಿಯನ್ನೂ ಬಲಿತೆಗೆದುಕೊಂಡು, ಆ ದೇಶ ಅಣ್ವಸ್ತ್ರ ಗಳಿಸಿಕೊಳ್ಳುವ ಹೊತ್ತಿಗೆ ಕುಂಠಿತಗೊಳ್ಳತೊಡಗಿತ್ತು. ಅದಕ್ಕೆ ಪ್ರಮುಖವಾಗಿ ಕಾರಣವಾದದ್ದು ರಾಜ್ಯದೊಳಗೆ ಪೊಲೀಸ್ ಮುಖ್ಯಸ್ಥ ಕೆ.ಪಿ.ಎಸ್. ಗಿಲ್ ಕಠಿಣ ಕ್ರಮಗಳನ್ನು ಕೈಗೊಂಡರೆ, ಪಾಕಿಸ್ತಾನ ನಮ್ಮ ಪಂಜಾಬ್ನಲ್ಲಿ ಮಾಡುತ್ತಿದ್ದುದನ್ನು ರಾಜೀವ್ ಗಾಂಧಿ ಸರ್ಕಾರ ಸಿಂಧ್ ಮತ್ತು ಬಲೂಚಿಸ್ತಾನಗಳಲ್ಲಿ ಆರಂಭಿಸಿ ಆ ದುರುಳ ದೇಶಕ್ಕೆ ಚುರುಕು ಮುಟ್ಟಿಸಿದ್ದು. ಆದರೆ ಪಂಜಾಬ್ನಲ್ಲಾದ ವೈಫಲ್ಯವನ್ನು ಕಾಶ್ಮೀರದಲ್ಲಿ ಸರಿತೂಗಿಸಿಕೊಳ್ಳಲು ಪಾಕಿಸ್ತಾನ ಯೋಜನೆ ರೂಪಿಸಿತು. ಈ ಕರಾಳ ಯೋಜನೆಯಲ್ಲಿ ಭಾರತದ ವಿರುದ್ಧದ ಎರಡೂ ತಂತ್ರಗಳು- ಅಣ್ವಸ್ತ್ರ ಬೆದರಿಕೆ ಹಾಗೂ ಭಯೋತ್ಪಾದನೆ- ಒಟ್ಟಿಗೆ ಕಾರ್ಯರೂಪಕ್ಕಿಳಿದವು. ಕಾಶ್ಮೀರ ವಿಶೇಷವೆನಿಸುವುದು ಈ ಬಗೆಯಲ್ಲಿ. ಪಾಕಿಸ್ತಾನದ ಯೋಜನೆಗೆ ನಮ್ಮ ‘ಕಾಕ’ಗಳೂ ಜತೆಗೂಡಿದ್ದು ಕಾಶ್ಮೀರ ಕಣಿವೆಯನ್ನು ಇಂದಿಗೂ ಅಶಾಂತಿಯಲ್ಲಿಯೇ ಇರಿಸಿದೆ. ‘ಕಶ್ಮೀರ್ ಫೈಲ್ಸ್’ ಪ್ರಸ್ತುತವೆನಿಸುವುದು ಈ ಎಲ್ಲ ಬಗೆಯಲ್ಲಿ.
ಪಾಕ್ ಯೋಜನೆಗೆ ಮೊದಲಿಗೆ ಚಾಲನೆ ನೀಡಿದ್ದು ಅಫ್ಘನ್ ಬೆಳವಣಿಗೆಗಳು. ಅಮೆರಿಕವು ತನ್ನ ಶೀತಲಸಮರದ ರಾಜಕಾರಣಕ್ಕನುಗುಣವಾಗಿ ಜಾಗತಿಕ ಮುಸ್ಲಿಂ ಸಮುದಾಯವನ್ನು ಸೋವಿಯತ್ ಯೂನಿಯನ್ ವಿರುದ್ಧ ಒಂದು ಅಸ್ತ್ರವನ್ನಾಗಿ ಬಳಸಿಕೊಂಡದ್ದು, ಅದರಲ್ಲಿ ಪಾಕಿಸ್ತಾನವೂ ಸೇರಿಕೊಂಡು ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸಿದ್ದು ಈಗ ಇತಿಹಾಸ. ಹಾಗೆಯೇ, ನಾಸ್ತಿಕ ಕಮ್ಯೂನಿಸ್ಟರಿಂದ ಇಸ್ಲಾಂ ಅನ್ನು ರಕ್ಷಿಸಬೇಕೆಂದು ಅಮೆರಿಕ ಮತ್ತು ಪಾಕಿಸ್ತಾನ ಜತೆಯಾಗಿ ಕೂಗೆತ್ತಿದಾಗ ಅದಕ್ಕೆ ಓಗೊಟ್ಟು, ಇಸ್ಲಾಮನ್ನು ರಕ್ಷಿಸುತ್ತಿದ್ದೇವೆ ಎಂದು ಭ್ರಮಿಸಿ ಬಂದವರು ಸಹಸ್ರಾರು ಮುಸ್ಲಿಂ ಯುವಕರು. ಪಶ್ಚಿಮದ ಮೊರಾಕ್ಕೋದಿಂದ ಪೂರ್ವದ ಫಿಲಿಪೀನ್ಸ್ವರೆಗೆ ಎಲ್ಲ ಮುಸ್ಲಿಂ ದೇಶಗಳಿಂದಲೂ ಬಂದು ಜಿಹಾದಿ ಕಾರ್ಖಾನೆಗಳಾದ ಪಾಕ್ ಮದ್ರಸಾಗಳಲ್ಲಿ ಮತ್ತು ಸಿಐಎ-ಐಎಸ್ಎ ಭಯೋತ್ಪಾದನ ತರಬೇತಿ ಶಿಬಿರಗಳಲ್ಲಿ ಕೊಲ್ಲುವ ಯಂತ್ರಗಳಾಗಿ ಮಾರ್ಪಟ್ಟು, ಜಿಹಾದ್ನಲ್ಲಿ ತೊಡಗಿ ತಾವು ಮಾಡುವ ಪ್ರಾಣತ್ಯಾಗಕ್ಕೆ ಪ್ರತಿಯಾಗಿ ತಮಗೆ ಸ್ವರ್ಗದಲ್ಲಿ ಸಕಲ ವೈಭೋಗಗಳೂ ಕಾದಿವೆ ಎಂದು ನಂಬಿದ ಇವರು ಅಫ್ಘನ್ ಯುದ್ಧ ಮುಗಿಯುವ ಹೊತ್ತಿಗೆ ನಾಗರಿಕ ಸಮಾಜದಲ್ಲಿ ಬದುಕುವ ಮಾನಸಿಕ ಯೋಗ್ಯತೆಯನ್ನೇ ಕಳೆದುಕೊಂಡಿದ್ದರು. ಹೀಗಾಗಿ ತಂತಮ್ಮ ದೇಶಗಳಲ್ಲಿ ಸ್ವಾಗತವಿಲ್ಲದ ಇವರಿಗೆ ಬೇರೊಂದು ಹತ್ಯಾಕ್ಷೇತ್ರವನ್ನು ಹುಡುಕಬೇಕಾದ ಜವಾಬ್ದಾರಿ ಪಾಕ್ ಐಎಸ್ಐ ಮೇಲೆ ಬಿತ್ತು. ಅದಕ್ಕೆ ಕಂಡ ಸಿದ್ಧ ತಾಣ ಕಾಶ್ಮೀರ, ಗುರಿ ಅಲ್ಲಿನ ಹಿಂದೂಗಳು.
1990ನೇ ಇಸವಿ ಆರಂಭವಾಗುತ್ತಿದ್ದಂತೇ ಪ್ರತ್ಯೇಕತಾವಾದಿ ಸಂಘಟನೆಗಳು ಮತ್ತವುಗಳ ಪತ್ರಿಕೆಗಳು ಕಾಶ್ಮೀರಿ ಪಂಡಿತರಿಗೆ ಬೆದರಿಕೆ ಒಡ್ಡುವ, ಅವರ ವಿರುದ್ಧ ಸ್ಥಳೀಯ ಮುಸ್ಲಿಮರನ್ನು ಪ್ರಚೋದಿಸುವ ಹೇಳಿಕೆಗಳನ್ನೂ, ಲೇಖನಗಳನ್ನೂ ಪ್ರಕಟಿಸತೊಡಗಿದವು. ಆಯ್ದ ಪ್ರಮುಖ ಹಿಂದೂಗಳನ್ನು ಕೊಲ್ಲುವುದರೊಂದಿಗೆ ಆರಂಭವಾದ ಹಿಂಸಾಚಾರ ಮಹಿಳೆಯರನ್ನೂ, ಸ್ಥಿರಾಸ್ತಿಗಳನ್ನೂ ಬಿಟ್ಟು ಕಣಿವೆಯಿಂದ ಹೊರಹೋಗುವಂತೆ ಹಿಂದೂಗಳಿಗೆ ಜನವರಿ 19ರಂದು ಕಣಿವೆಯಾದ್ಯಂತ ಮಸೀದಿಗಳ ಧ್ವನಿವರ್ಧಕಗಳಿಂದ ಬೆದರಿಕೆ ಹೊರಡುವ ಮಟ್ಟಕ್ಕೆ ತಲುಪಿತು. ಹೊರಗಿನ ಜಿಹಾದಿಗಳು ಮತ್ತು ಸ್ಥಳೀಯ ಮುಸ್ಲಿಮರು ಆಗ ಹಿಂದೂಗಳ ವಿರುದ್ಧ ಆರಂಭಿಸಿದಷ್ಟು ಪ್ರಮಾಣದ ರಕ್ತಪಾತ, ಅವಮಾನ ಮತ್ತು ಹೊರಗಟ್ಟುವಿಕೆ ಸ್ವತಂತ್ರ ಭಾರತದ ಇತಿಹಾಸದಲ್ಲಿ ಮತ್ತೊಂದು ಘಟಿಸಿಲ್ಲ. ಜೀವ ಮತ್ತು ಮಾನವನ್ನುಳಿಸಿಕೊಳ್ಳಲು ಮನೆಮಠ ತೊರೆದು ಉಟ್ಟಬಟ್ಟೆಯಲ್ಲಿ ಕಣಿವೆಯಿಂದ ಜಮ್ಮು ಮತ್ತು ಅದರಾಚೆಯ ದೆಹಲಿಗೆ ನಿರಾಶ್ರಿತರಾಗಿ ಓಡಿದ ಹಿಂದೂಗಳ ಸಂಖ್ಯೆ ಸುಮಾರು ಐದು ಲಕ್ಷ. ಈ ದಾರುಣ ಘಟನಾವಳಿಗಳನ್ನು ಅಂದಿನ ಕಾಕ ಮಾಧ್ಯಮಗಳು ಜಗತ್ತಿನ ಕಣ್ಣಿನಿಂದ ವ್ಯವಸ್ಥಿತವಾಗಿ ಮುಚ್ಚಿಡಲು, ಅದಾಗದಿದ್ದರೆ ತಿರುಚಲು ನೋಡಿದವು. ಅವುಗಳ ಕಣ್ಣುತಪ್ಪಿಸಿ ಹೊರಜಗತ್ತಿಗೆ ತಲುಪಿದ್ದು ಬಿಡಿಬಿಡಿ ತುಣುಕುಗಳು ಅಥವಾ ಬಲಿಯಾದವರನ್ನೇ ಅಪರಾಧಿಗಳನ್ನಾಗಿ ಬಿಂಬಿಸುವ ವಿಕೃತ ಕಲ್ಪನಾಚಿತ್ರಗಳು. ಇಂದು ‘ಕಶ್ಮೀರ್ ಫೈಲ್ಸ್’ ಸತ್ಯದ ತುಣುಕುಗಳನ್ನೆಲ್ಲ ಒಟ್ಟುಗೂಡಿಸಿ ಒಂದು ಸಮಗ್ರ ಚಿತ್ರವನ್ನು ನಮ್ಮ ಮುಂದಿಟ್ಟಿದೆ, ಆ ಚಿತ್ರಗಳು ಎದೆ ಕಲುಕುತ್ತವೆ, ‘ನಿರ್ದಯೆಯೇ ಧರ್ಮ ಮೂಲವಯ್ಯ’ ಎಂದು ತಣ್ಣಗೆ ಹೇಳಿಬಿಡುತ್ತದೆ.
ಇಲ್ಲಿ ಕುತೂಹಲಕರವಾದ ಇನ್ನೊಂದು ಅಂಶವಿದೆ. ಅಂದು ಕಡುಭ್ರಷ್ಟ ನ್ಯಾಷನಲ್ ಕಾನ್ಪರೆನ್ಸ್ ಪಕ್ಷ (ಎನ್ಸಿ) ಕಾಶ್ಮೀರವನ್ನು ಬಿಹಾರದ ನಂತರ ದೇಶದ ಎರಡನೆಯ ಅತಿ ಭ್ರಷ್ಟಾಚಾರಿ ರಾಜ್ಯವನ್ನಾಗಿಸಿತ್ತು. ಸಮಾಜಕಲ್ಯಾಣ ಯೋಜನೆಗಳಿಗಾಗಿ ವರ್ಷವರ್ಷವೂ ಕೇಂದ್ರದಿಂದ ಬರುತ್ತಿದ್ದ ಕೋಟಿಗಟ್ಟಲೆ ಹಣ ಸಾಮಾನ್ಯರಿಗೆ ತಲುಪಲು ಎನ್ಸಿ ರಾಜಕಾರಣಿಗಳು, ಕಾರ್ಯಕರ್ತರು ಮತ್ತು ಅವರ ಅಧೀನದಲ್ಲಿದ್ದ ಸರ್ಕಾರಿ ನೌಕರರು ಬಿಡುತ್ತಲೇ ಇರಲಿಲ್ಲ. ಹೀಗಾಗಿ ಜನಾಕ್ರೋಶ ತಮ್ಮ ವಿರುದ್ಧವಾಗಿದೆಯೆಂದೂ, ಅದರಿಂದಾಗಿ ಪಕ್ಷ ಏಕಾಂಗಿಯಾಗಿ 1987ರ ವಿಧಾನಸಭಾ ಚುನಾವಣೆಗಳನ್ನು ಗೆಲ್ಲಲಾರದೆಂದೂ ಲೆಕ್ಕಹಾಕಿದ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಕಾಂಗ್ರೆಸ್ ಜತೆ ಚುನಾವಣಾ ಮೈತ್ರಿ ಮಾಡಿಕೊಂಡರು; ಸರ್ಕಾರಿ ವ್ಯವಸ್ಥೆಯನ್ನು ಬಳಸಿ ಚುನಾವಣೆಗಳಲ್ಲಿ ವ್ಯಾಪಕ ಅಕ್ರಮವೆಸಗಿದರು. ಈ ಎರಡು ತಂತ್ರಗಳಿಂದ ಅವರು ಜಯ ಗಳಿಸಿದರೂ ಜನತೆ ಅವರಿಂದ ದೂರವಾಯಿತು. ಅವರ ಜತೆಗೂಡಿದ ಕಾಂಗ್ರೆಸ್ ಕಡೆಗೂ ಜನಾಕ್ರೋಶ ತಿರುಗಿತು. ಆ ಜನಾಕ್ರೋಶದ ಗುರಿ ಫಾರೂಕ್ ಅಬ್ದುಲ್ಲಾ ಮತ್ತವರ ಎನ್ಸಿ ಹಾಗೂ ಕಾಂಗ್ರೆಸ್ ಎನ್ನುವುದನ್ನು ನಾವು ಮರೆಯಬಾರದು. ಎರಡು ವರ್ಷಗಳ ನಂತರ ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಒಂದು ತಿಂಗಳಲ್ಲಿ ಕಾಶ್ಮೀರ ಕಣಿವೆ ಭುಗಿಲೆದ್ದಿತು. ಈ ಸಲ ಹಿಂದೂಗಳ ವಿರುದ್ಧ ಮತ್ತು ದೇಶದ ವಿರುದ್ಧ. ಎನ್ಸಿ - ಕಾಂಗ್ರೆಸ್ ಕೂಟದ ವಿರುದ್ಧ ಇದ್ದ ಜನಾಕ್ರೋಶ ಕಾಶ್ಮೀರಿ ಹಿಂದೂಗಳ ಮತ್ತು ದೇಶದ ವಿರುದ್ಧ ತಿರುಗಿದ್ದು ಹೇಗೆ? ಶಾ ಬಾನೂ ಪ್ರಕರಣದಲ್ಲಿ ಅರಿಫ್ ಮೊಹಮ್ಮದ್ ಖಾನ್, ಬೋಫೋರ್ಸ್ ಹಗರಣದಲ್ಲಿ ವಿ.ಪಿ. ಸಿಂಗ್ ರಾಜೀವ್ ಗಾಂಧಿ ಮತ್ತು ಕಾಂಗ್ರೆಸ್ನ ನಿದ್ದೆಗೆಡಿಸಿದ್ದು ನಿಮಗೆ ನೆನಪಿದೆಯೇ? ಅವರಿಬ್ಬರೂ ಒಟ್ಟಿಗೆ ಸೇರಿ ಅಧಿಕಾರ ಗಳಿಸಿದ್ದನ್ನು ಕಾಂಗ್ರೆಸ್ ಸಹಿಸುವುದಾದರೂ ಹೇಗೆ?
ಕಾಂಗ್ರೆಸ್ ಅಧಿಕಾರ ಕಳೆದುಕೊಂಡ ಒಂದೇ ತಿಂಗಳಲ್ಲಿ ಕಾಶ್ಮೀರ ಕಣಿವೆಯಲ್ಲಿ ಪಂಡಿತರ ವಿರುದ್ಧದ ದೌರ್ಜನ್ಯ ಮತ್ತು ದೇಶದ ವಿರುದ್ಧ ‘ಆಜಾದಿ’ ಕೂಗು ಏಕಾಏಕಿ ಉದ್ಭವಿಸಿ, ವಿ.ಪಿ. ಸಿಂಗ್ರ ಕಾಂಗ್ರೆಸ್ಸೇತರ ಸರ್ಕಾರಕ್ಕೆ ಬಗೆಹರಿಸಲಾಗದ ತಲೆನೋವಾಗಿ ನಿಂತದ್ದರ ರಹಸ್ಯವೇನು? ಆ ಪ್ರಶ್ನೆಗಳ ಸರಣಿ ಅಲ್ಲಿಗೇ ನಿಲ್ಲುವುದಿಲ್ಲ. ಅಂದು ಮಾನವತೆಯ ವಿರುದ್ಧದ ಕ್ರೌರ್ಯದಲ್ಲಿ, ತಥಾಕಥಿತ ಜಿಹಾದಿ ಕೂಗಿನಲ್ಲಿ ಮುಂಚೂಣಿಯಲ್ಲಿದ್ದುದು ಪಾಕಿಸ್ತಾನದ ಲಷ್ಕರ್-ಎ-ತೋಯ್ಬಾ, ಸ್ಥಳೀಯ ಹಿಜ್ಬುಲ್ ಮುಜಾಹಿದೀನ್ ಮತ್ತು ಜಮ್ಮು ಆಂಡ್ ಕಶ್ಮೀರ್ ಲಿಬರೇಷನ್ ಫ್ರಂಟ್ (ಜೆಕೆಎಲ್ಎಫ್). ಜೆಕೆಎಲ್ಎಫ್ ನೇತಾರ ಯಾಸೀನ್ ಮಲಿಕ್ನನ್ನು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ತಮ್ಮ ಕಚೇರಿಗೆ ಆಹ್ವಾನಿಸಿ ಮಾತುಕತೆ ನಡೆಸಿದರು. ಹೀಗೆ ಕಾಂಗ್ರೆಸ್ ಸರ್ಕಾರಗಳು ಜಿಹಾದಿ ಕೊಲೆಗಡುಕರೊಂದಿಗೆ ಮಾತುಕತೆ ನಡೆಸಿದರೆ ಅದರ ಪರವಾದ ಮಾಧ್ಯಮಗಳು ಅವರನ್ನು ‘ಸ್ವಾತಂತ್ರ್ಯಹೋರಾಟಗಾರ’ರೆಂದು ವರ್ಣಿಸುತ್ತವೆ. ಅದೇ ಕಾಕ ಗುಂಪಿನ ‘ಇತಿಹಾಸಕಾರರು’ ಗುಜರಾತ್ನ ಗೋಧ್ರೋತ್ತರ ಹಿಂಸಾಚಾರವನ್ನು- ‘ದ್ವಿತೀಯ ಮಹಾಯುದ್ಧದ ನಂತರದ ಅತಿ ದೊಡ್ಡ ಯುದ್ಧ, ಅದನ್ನು ಎಸಗಿದವರು ಜಾಗತಿಕ ಜನಸಂಖ್ಯೆಯಲ್ಲಿ ಐದನೆಯ ಒಂದರಷ್ಟಿರುವ ಹಿಂದೂಗಳು’ ಎಂದು ಇತಿಹಾಸ ಪುಸ್ತಕಗಳಲ್ಲಿ ಬರೆಯುತ್ತಾರೆ. ಕಾಕ ಇತಿಹಾಸಕಾರರು ಬರೆದ ಇತಿಹಾಸದಲ್ಲಿ ಕಗ್ಗೊಲೆಯಾದ ಸಹಸ್ರಾರು ಹಿಂದೂಗಳ ಬಗ್ಗೆ, ಅವಮಾನಿತರಾದ ಹಿಂದೂ ಸ್ತ್ರೀಯರ ಬಗ್ಗೆ, ಸೂರು ಕಳೆದುಕೊಂಡು ಉಟ್ಟಬಟ್ಟೆಯಲ್ಲಿ ಓಡಿ ನಿರ್ಗತಿಕರಂತೆ ವರ್ಷವರ್ಷಗಳಿಂದ ಬದುಕುತ್ತಿರುವವರ ಬಗ್ಗೆ ಒಂದಕ್ಷರ ಉಲ್ಲೇಖವೂ ಇಲ್ಲ! ಇನ್ನು ಕಾಕ ವಿಚಾರವಾದಿಗಳು ಜಿಹಾದಿ ಕೊಲೆಗಡುಕರ ಜತೆ ವೇದಿಕೆ ಹಂಚಿಕೊಳ್ಳುತ್ತಾರೆ, ‘ಕಾಶ್ಮೀರ ಎಂದೂ ಭಾರತದ ಅಂಗವಾಗಿರಲಿಲ್ಲ’ ಎಂದು ಮೈಕ್ ಹಿಡಿದು ಕೂಗುತ್ತಾರೆ. 1947 ಅಕ್ಟೋಬರ್ 26 ಎಂಬ ದಿನಾಂಕ ಇವರ ಸ್ಮೃತಿಪಟಲದಿಂದ ಅಳಿಸಿಹೋಗಿದೆ.
ಈ ಕಾಕ ರಾಜಕಾರಣಿಗಳು, ಇತಿಹಾಸಕಾರರು, ವಿಚಾರವಾದಿಗಳು ಮತ್ತು ಪತ್ರಕರ್ತರು ಹೀಗೆ ಜಿಹಾದಿ ಕೊಲೆಗಡುಕರ ಜತೆ ‘ಮಾತುಕತೆ’ ನಡೆಸುತ್ತಾರೆ, ಅವರ ಪರವಾಗಿ ‘ಇತಿಹಾಸ’ ರಚಿಸುತ್ತಾರೆ, ಅವರ ಜತೆಗೆ ಸಂದರ್ಶನ ನಡೆಸಿ ಪ್ರಕಟಿಸುತ್ತಾರೆ. ಆ ಜಿಹಾದಿಗಳ ಕ್ರೌರ್ಯಕ್ಕೆ ಬಲಿಯಾದವರ ಜತೆ ಮಾತುಕತೆ? ಅವರ ಬಗ್ಗೆ ಇತಿಹಾಸ ರಚನೆ? ಅವರ ಸಂದರ್ಶನ? ಇಲ್ಲವೇ ಇಲ್ಲ. ಯಾಕೆಂದರೆ ಇವರೆಲ್ಲರೂ ಪ್ರಗತಿಪರರು, ಉದಾರವಾದಿಗಳು, ಸೆಕ್ಯೂಲರಿಸ್ಟರು! ಇವರೆಲ್ಲರೂ ಇದುವರೆಗೆ ಎಸಗಿದ ಅನಾಚಾರಗಳನ್ನು ಸರಿಪಡಿಸುವ ಒಂದು ಪ್ರಯತ್ನವಾಗಿ ‘ಕಶ್ಮೀರ್ ಫೈಲ್ಸ್’ ಕಾಣಿಸಿಕೊಂಡಿದೆ. ಮೂವತ್ತೆರಡು ವರ್ಷಗಳ ಹಿಂದೆ ನಡೆದ ಆ ಮಾನವತೆಯ ಮೇಲಿನ ಕ್ರೌರ್ಯವನ್ನು ಹೇಗಿದೆಯೋ ಹಾಗೆ ತೆರೆದಿಟ್ಟಿರುವ, ದುರುದ್ದೇಶಪೂರ್ವಕವಾಗಿ ಮುಚ್ಚಿಟ್ಟ ಸತ್ಯಗಳನ್ನು ‘ಕಶ್ಮೀರ್ ಫೈಲ್ಸ್’ ಅನಾವರಣಗೊಳಿಸಿದೆ. ಈ ಚಿತ್ರದಿಂದ ಸತ್ಯವೇನೆಂದು ಅರಿತ ಅಮೆರಿಕದ ರ್ಹೋಡ್ ಐಲ್ಯಾಂಡ್ ರಾಜ್ಯ ಸರ್ಕಾರ ಕಾಶ್ಮೀರ ಕಣಿವೆಯಲ್ಲಿ ನಡೆದ ಹಿಂದೂಗಳ ಮೇಲಿನ ದೌರ್ಜನ್ಯವನ್ನು ‘ಮಾನವತೆಯ ಮೇಲಿನ ಕ್ರೌರ್ಯ’ ಎಂದು ಅಧಿಕೃತವಾಗಿ ಘೊಷಿಸಿದೆ. ಇದು ಆರಂಭ. ಅಮೇನಿಯಾದಲ್ಲಿ ತುರ್ಕರು ಎಸಗಿದ ಕ್ರೌರ್ಯವೂ ಸೇರಿದಂತೆ ಇಂಥ ಕ್ರೌರ್ಯಗಳನ್ನು ಗುರುತಿಸಿ ಖಂಡಿಸುವ ಸಂಪ್ರದಾಯವನ್ನು ರ್ಹೋಡ್ ಐಲ್ಯಾಂಡ್ ಶತಮಾನದಿಂದಲೂ ಪಾಲಿಸಿಕೊಂಡು ಬಂದಿದೆ. ಆ ರಾಜ್ಯದ ಮೇಲ್ಪಂಕ್ತಿಯನ್ನು ಅಲ್ಲಿನ ಇತರ ರಾಜ್ಯಗಳು ಮತ್ತು ಆ ದೇಶದ ಕೇಂದ್ರ ಸರ್ಕಾರ ಸಹ ಅನುಸರಿಸಿದ ಇತಿಹಾಸವಿದೆ. ಈ ಅರ್ಥದಲ್ಲೂ ‘ಕಶ್ಮೀರ್ ಫೈಲ್ಸ್’ ಇತಿಹಾಸ ನಿರ್ವಿುಸಿದೆ.(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)