ನಾಸ್ತಿಕ ಕಮ್ಯೂನಿಸ್ಟರ ನಂಬಿಗಸ್ಥ ಮುಲ್ಲಾ ಜನರಲ್

Column F
Published on
ಭಾರತವನ್ನು ಒಡೆದು ಪಾಕಿಸ್ತಾನವನ್ನು ಸೃಷ್ಟಿಸಲು ಧರ್ಮವನ್ನು ಬಳಸಿಕೊಂಡರೂ ಆ ದೇಶವನ್ನು ಇಸ್ಲಾಮಿಕ್ ರಾಷ್ಟ್ರವನ್ನಾಗಿಸುವುದು ಮಹಮದ್ ಆಲಿ ಜಿನ್ನಾರ ಉದ್ದೇಶವಾಗಿರಲಿಲ್ಲ. ಪಾಕಿಸ್ತಾನವನ್ನೊಂದು ಆಧುನಿಕ ಧರ್ಮನಿರಪೇಕ್ಷ ರಾಷ್ಟ್ರವನ್ನಾಗಿ ಕಟ್ಟಿ ಬೆಳೆಸುವುದು ಅವರ ಆಶಯವಾಗಿತ್ತು. ಇದನ್ನವರು ಪಾಕಿಸ್ತಾನ ಅಸ್ತಿತ್ವಕ್ಕೆ ಬರುವ ಮೊದಲೇ (ಮುಂದೆ ಆ ದೇಶದ ಅಧ್ಯಕ್ಷರಾದ ಜ. ಇಸ್ಕಂದರ್ ಮಿರ್ಜಾ ಅವರಿಗೆ ಖಾಸಗಿಯಾಗಿ) ಹೇಳಿದ್ದಲ್ಲದೆ, ಪಾಕಿಸ್ತಾನದ ಸಂವಿಧಾನ ಸಭೆಯ ಮೊದಲ ಅಧಿವೇಶನದಲ್ಲಿ ಅಧಿಕೃತವಾಗಿಯೇ ಘೊಷಿಸಿದರು. ಆದರೆ, ಜಿನ್ನಾರ ಈ ಆಶಯ ಜಮಾತ್-ಎ-ಇಸ್ಲಾಮ್​ಇ-ಹಿಂದ್​ನ ಸ್ಥಾಪಕ ಮೌಲಾನಾ ಮೌದೂದಿ ಅವರಿಗೆ ಸಮ್ಮತವೆನಿಸಲಿಲ್ಲ. ಮುಖ್ಯ ವಿಷಯವೆಂದರೆ ದಿನಕ್ಕೆ ಐದು ಸಲ ಪ್ರಾರ್ಥನೆ ಮಾಡದ, ಪಾರ್ಸಿ ಸ್ತ್ರೀಯನ್ನು ವಿವಾಹವಾಗಿದ್ದ, ಹಂದಿಮಾಂಸ ಮತ್ತು ಮದ್ಯವನ್ನು ಇಷ್ಟಪಟ್ಟು ಸೇವಿಸುತ್ತಿದ್ದ ಜಿನ್ನಾರನ್ನು ಮುಸ್ಲಿಂ ಎಂದು ನಂಬಲು ಮೌದೂದಿ ತಯಾರಿರಲೇ ಇಲ್ಲ. ಮುಸ್ಲಿಂ ಲೀಗ್​ನ ನಾಯಕರು ಜಿನ್ನಾರಿಗೆ ‘ಕಾಯದ್-ಎ-ಆಜಂ’ ಅಂದರೆ ಮಹಾನಾಯಕ ಎಂಬ ಬಿರುದು ಕೊಟ್ಟು ಗೌರವಿಸಿದರೆ ಮೌದೂದಿ ಅವರು ‘ಕಾಫಿರ್-ಎ-ಆಜಂ’ ಅಂದರೆ ‘ಮಹಾ ಧರ್ಮಲಂಡ’ ಎಂದು ಕರೆದು ಹೀಯಾಳಿಸುತ್ತಿದ್ದರು!

ಆದರೆ, ಒಂದು ವರ್ಷದೊಳಗೇ ಜಿನ್ನಾರ ಅಂತ್ಯವಾಗಿ, ದೇಶದಲ್ಲಿ ಧರ್ಮಗುರುಗಳ ದನಿಗಳು ದೊಡ್ಡದಾಗಿ, ಇಸ್ಲಾಂ-ಪರ ಹಿಂಸಾಭರಿತ ಆಂದೋಲನಗಳಲ್ಲಿ ಇಡೀ ದೇಶ ಸಿಲುಕಿದಾಗ ಪಾಕಿಸ್ತಾನವನ್ನು ಇಸ್ಲಾಮಿಕ್ ರಾಷ್ಟ್ರವೆಂದು ಅಧ್ಯಕ್ಷ ಇಸ್ಕಂದರ್ ಮಿರ್ಜಾ ಸಾಂವಿಧಾನಿಕವಾಗಿ ಘೊಷಿಸಬೇಕಾಯಿತು. ಅಲ್ಲಿಂದೀಚೆಗೆ ಧಾರ್ವಿುಕ ಹಾದಿಯಲ್ಲಿ ಪಾಕಿಸ್ತಾನ ಹಿಂದೆ ತಿರುಗಿ ನೋಡಿಲ್ಲ. ಅದೊಂದು ಕಟ್ಟಾ ಸುನ್ನಿ ಇಸ್ಲಾಮಿಕ್ ರಾಷ್ಟ್ರವಾಗಿ ಗುರುತಿಸಿಕೊಳ್ಳುತ್ತದೆ. ಅಲ್ಲಿ ರಾಷ್ಟ್ರಾಧ್ಯಕ್ಷ ಮತ್ತು ಪ್ರಧಾನಮಂತ್ರಿಯಂತಹ ಉನ್ನತ ಸ್ಥಾನಗಳು ಸುನ್ನಿ ಮುಸ್ಲಿಮರಿಗೆ ಮಾತ್ರ ಮೀಸಲು, ಶಿಯಾಗಳಿಗೆ ಗೌರವವಿಲ್ಲ, ಅಹ್ಮದೀಯರು ಮುಸ್ಲಿಮರೇ ಅಲ್ಲ; ಇನ್ನು ಹಿಂದೂ, ಸಿಖ್ ಮತ್ತಿತರ ಅಲ್ಪಸಂಖ್ಯಾತರ ಸ್ಥಿತಿಯನ್ನು ಕೇಳುವ ಹಾಗೇ ಇಲ್ಲ. ಈ ಇಸ್ಲಾಮೀಕರಣದ ಪ್ರಕ್ರಿಯೆಯನ್ನು ವೇಗಗೊಳಿಸಿದ್ದು ಝುುಲ್ಪಿಕಾರ್ ಆಲಿ ಭುಟ್ಟೊ ಮತ್ತು ಉಗ್ರವಾಗಿಸಿದ್ದು ಜಿಯಾ-ಉಲ್-ಹಕ್. ತನ್ನನ್ನು ‘ಇಸ್ಲಾಂನ ನಿಷ್ಠಾವಂತ ಸೈನಿಕ’ ಎಂದು ಕರೆದುಕೊಂಡ ಜಿಯಾ ಸ್ಥಾಪಿಸಿದ 25 ಸಾವಿರದಷ್ಟು ಮದ್ರಸಾಗಳು ಇಂದು ಸುನ್ನಿ ಜಿಹಾದಿ ಕಾರ್ಖಾನೆಗಳಾಗಿ ಬೆಳೆದಿವೆ. ಇಂತಹ ಸ್ಥಿತಿಯಲ್ಲಿ ಸೇನಾ ದಂಡನಾಯಕ ಕೂಡ ಸುನ್ನಿ ಮುಸ್ಲಿಮನೇ ಆಗಿರಬೇಕೆಂಬುದು ನಿಯಮ. ಈ ದೃಷ್ಟಿಯಲ್ಲಿ, ಇದೇ ನವೆಂಬರ್ 24ರಂದು ಪ್ರಧಾನಮಂತ್ರಿ ಶೆಹ್​ಬಾಜ್ ಶರೀಫ್ ಅವರಿಂದ ಪಾಕಿಸ್ತಾನಿ ಸೇನೆಯ ದಂಡನಾಯಕರಾಗಿ ನೇಮಕಗೊಂಡ ಲೆ.ಜ. ಆಸಿಮ್ ಮುನೀರ್ ಆ ಸ್ಥಾನಕ್ಕೆ ಅಗತ್ಯಕ್ಕಿಂತ ಹೆಚ್ಚು ಯೋಗ್ಯತೆಯನ್ನು ಹೊಂದಿದ್ದಾರೆ.

ಮುನೀರ್ ಅವರ ಸುನ್ನಿ ಧರ್ಮನಿಷ್ಠೆ ಮತ್ತು ಇಸ್ಲಾಮಿಕ್ ಧಾರ್ವಿುಕ ಜ್ಞಾನ ಅವರನ್ನು ಜನಸಾಮಾನ್ಯರು ‘ಮುಲ್ಲಾ ಜನರಲ್’ ಎಂದು ಗುರುತಿಸುವಂತೆ ಮಾಡಿವೆ. ಸೌದಿ ಅರೇಬಿಯಾದಲ್ಲಿನ ಪಾಕ್ ರಾಯಭಾರ ಕಚೇರಿಯಲ್ಲಿ ಮಿಲಿಟರಿ ಅಟ್ಯಾಷೆಯಾಗಿ ಕಾರ್ಯನಿರ್ವಹಿಸುತ್ತಿದ್ದಾಗ ಮದೀನಾದಲ್ಲಿ ಖುರಾನ್​ನ ಅಧ್ಯಯನ ಕೈಗೊಂಡ ಅವರು ಆ ಗ್ರಂಥವನ್ನು ಇಡಿಯಾಗಿ ಬಾಯಿಪಾಠ ಮಾಡಿಕೊಂಡರು. ಅದಕ್ಕಾಗಿ ಅವರಿಗೆ ‘ಹಫೀಜ್-ಎ-ಖುರಾನ್’ ಎಂಬ ಹೆಸರು ಬಂದಿದೆ. ಈ ಬಗೆಯ ಹೆಸರು ಪಡೆದ ಮೊಟ್ಟಮೊದಲ ಪಾಕ್ ಸೇನಾನಾಯಕ ಇವರು. ಹೀಗೆ ಧಾರ್ವಿುಕ ಜ್ಞಾನದಲ್ಲಿ ಅವರನ್ನು ಸರಿಗಟ್ಟುವವರು ಸೇನೆಯಷ್ಟೇ ಅಲ್ಲ, ರಾಜಕೀಯ ಕ್ಷೇತ್ರದಲ್ಲೂ ಮತ್ತೊಬ್ಬರಿಲ್ಲ. ಆದರೆ, ಇಲ್ಲೊಂದು ತೊಡಕಿದೆ. ಇಸ್ಲಾಮಿಕ್ ರಾಷ್ಟ್ರದ ರಕ್ಷಕನಾದ ಸೇನಾ ದಂಡನಾಯಕ ಅನುಸರಿಸಬೇಕಾದ ಲಿಖಿತ ನಿಯಮಗಳಿರುವಂತೆ ಕೆಲವು ಅಲಿಖಿತ ನಿಯಮಗಳೂ ಇವೆ. ಆತನ ದೈನಂದಿನ ದಿನಚರಿ, ಸಂಬಂಧ-ಸ್ನೇಹ-ಒಡನಾಟ ಸುನ್ನಿ ಸಂಪ್ರದಾಯಗಳಿಗೆ ವಿರುದ್ಧವಾಗಿರಕೂಡದು ಎನ್ನುವುದು ಅವುಗಳಲ್ಲಿ ಕೆಲವು. ಲೆ.ಜ. ಮುನೀರ್ ವಿವಾಹವಾಗಿರುವುದು ಶಿಯಾ ಸ್ತ್ರೀಯನ್ನು. ಇಂತಹ ವ್ಯಕ್ತಿ ಸಹಜ ಸನ್ನಿವೇಶಗಳಲ್ಲಿ ಸೇನಾ ದಂಡನಾಯಕನಾಗುವುದು ಸಾಧ್ಯವೇ ಇಲ್ಲ. ಅಂದರೆ, ಸುನ್ನಿ ಸಂಪ್ರದಾಯಕ್ಕೆ ವ್ಯತಿರಿಕ್ತವೆನಿಸುವ ನಡವಳಿಕೆಯನ್ನು ತೋರಿದ್ದರೂ ಸೇನಾ ದಂಡನಾಯಕನ ಸ್ಥಾನಕ್ಕೆ ಅವರೇ ಸೂಕ್ತ ಎಂದು ತೀರ್ವನಿಸುವ ಸನ್ನಿವೇಶ ಈಗ ಉಂಟಾಗಿದೆಯೇ? ಈ ಪ್ರಶ್ನೆಗಳು ಇನ್ನಷ್ಟು ಗಾಢವಾಗುವುದು ಲೆ.ಜ. ಮುನೀರ್ ನೇಮಕಗೊಂಡ ಬಗೆಯಲ್ಲಿ.

ಈ ಮಾಸಾಂತ್ಯಕ್ಕೆ ಎರಡು ಅವಧಿಗಳನ್ನು ಪೂರೈಸುತ್ತಿರುವ ಜ. ಬಾಜ್ವಾ ಮೂರನೆಯ ಅವಧಿಯನ್ನೂ ಪಡೆದುಕೊಳ್ಳುವ ಇರಾದೆಯನ್ನು ಹೊರಗೆಡಹಿದ್ದರು. ಒಂದು ವೇಳೆ ಅದು ದಕ್ಕದೇ ಹೋದರೂ ತಮ್ಮ ನಿಷ್ಠಾವಂತರೊಬ್ಬರೇ ಉತ್ತರಾಧಿಕಾರಿಯಾಗುವುದು ತಮ್ಮ ಇಚ್ಛೆ ಎಂಬ ಸೂಚನೆಯನ್ನೂ ಅವರು ಕೊಟ್ಟಿದ್ದುಂಟು. ಕೆಲವೇ ತಿಂಗಳುಗಳ ಹಿಂದೆ ಇಮ್ರಾನ್ ಖಾನ್​ರನ್ನು ಕೆಳಗಿಳಿಸಿ, ಶೆಹ್​ಬಾಜ್ ಶರೀಫ್ ಗಾದಿಗೇರುವಂತೆ ಮಾಡಿದ್ದ ಅವರ ಬಯಕೆಗೆ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುವ ನಿರೀಕ್ಷೆಯೂ ಇತ್ತು. ವಾರದ ಹಿಂದೆ ಬಾಜ್ವಾರ ಎರಡನೆಯ ಆಶಯಕ್ಕೆ ಅನುಗುಣವಾಗಿ ಶೆಹ್​ಬಾಜ್ ಶರೀಫ್ ಸರ್ಕಾರ ನಡೆದುಕೊಳ್ಳುವಂತಿತ್ತು. ಆ ಪ್ರಕಾರ ಆರು ಹೆಸರುಗಳು ಕಾಣಿಸಿಕೊಂಡಿದ್ದವು. ಅವುಗಳಲ್ಲಿ ಮುನೀರ್ ಹೆಸರಿರಲಿಲ್ಲ.

ಶೀತಲ ಸಮರ ಕಾಲದಲ್ಲಿ ಏಶಿಯಾ ವಲಯದಲ್ಲಿ ಅಮೆರಿಕಾದ ಬಂಟನಾದ ದಿನಗಳಿಂದಲೂ ಪಾಕ್ ಸೇನಾ ದಂಡನಾಯಕನ ನೇಮಕಾತಿಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಾ ಬಂದಿರುವುದು ಅಮೆರಿಕಾವೇ ಹೊರತು ಪಾಕ್ ಸರ್ಕಾರವಲ್ಲ. ನೇಮಕಾತಿಯ ನಂತರ ಭಾರತ ಮತ್ತು ಅಮೆರಿಕಾ ಜತೆಗೆ ಪಾಕಿಸ್ತಾನದ ಸಂಬಂಧಗಳನ್ನು ನಿರ್ಣಯಿಸುವುದು ರಾವಲ್ಪಿಂಡಿಯಲ್ಲಿರುವ ಸೇನಾ ಮುಖ್ಯಾಲಯ. ಇಸ್ಲಾಮಾಬಾದ್​ನಲ್ಲಿರುವ ಪಾಕ್ ಸರ್ಕಾರಕ್ಕೆ ಇದರಲ್ಲಿ ಯಾವುದೇ ಪಾತ್ರವಿಲ್ಲ. ಹೀಗೆ ಲಾಗಾಯ್ತಿನಿಂದಲೂ ರಾವಲ್ಪಿಂಡಿಯ ಜಿಎಚ್​ಎ ಮತ್ತು ವಾಷಿಂಗ್ಟನ್​ನ ಶ್ವೇತಭವನಗಳ ಸಂಬಂಧ ಪರಸ್ಪರರಿಗೆ ನಿಷ್ಠ ಸಹಯೋಗಿಗಳಾಗಿರುವುದು. ಇವೆರಡರ ಕಾರಸ್ಥಾನಗಳ ಪಟ್ಟಿಗೆ 1978ರ ನಂತರ ಅಫ್ಘಾನಿಸ್ತಾನವೂ ಸೇರ್ಪಡೆಯಾಯಿತು. ಹೀಗೆ ಪಾಕ್ ಸೇನಾ ದಂಡನಾಯಕರೆಲ್ಲರೂ ಇಸ್ಲಾಮಾಬಾದ್​ಗಿಂತ ವಾಷಿಂಗ್ಟನ್​ಗೆ ನಿಷ್ಠವಾಗಿರುವ ಸಂಪ್ರದಾಯವನ್ನು ಬಾಜ್ವಾ ಕೂಡ ಮುಂದುವರಿಸಿಕೊಂಡು ಬಂದಿದ್ದರು. ತಾವೇ ಅಧಿಕಾರಕ್ಕೇರಿಸಿದ ಇಮ್ರಾನ್ ಖಾನ್ ಅಮೆರಿಕಾಗೆ ಪಥ್ಯವಾಗದ ಬಗೆಯಲ್ಲಿ ವರ್ತಿಸತೊಡಗಿದಾಗ ಅವರನ್ನು ಇಳಿಸಿ ‘ನಿಭಾಯಿಸಬಹುದಾದ’ ಶೆಹ್​ಬಾಜ್ ಶರೀಫ್​ರನ್ನು ಕುರ್ಚಿಯಲ್ಲಿ ಕೂರಿಸಿದರು, ಮತ್ತೆ ಬಾಲ ಬಿಚ್ಚತೊಡಗಿದ್ದ ಅಲ್-ಖೈದಾವನ್ನು ನಿಯಂತ್ರಿಸಲು ಅದರ ನಾಯಕ ಅಯ್ಮೆನ್ ಅಲ್ ಜವಾಹಿರಿಯನ್ನು ನಿವಾರಿಸಿಕೊಳ್ಳಲು ಅಮೆರಿಕಾಗೆ ಸಹಕಾರ ಹಾಗೂ ಅವಕಾಶವನ್ನು ಒದಗಿಸಿದರು, ತಮಗೆ ನಿಷ್ಠರಾದ ಲೆ.ಜ. ಅಜರ್ ಅಬ್ಬಾಸ್ ಅವರನ್ನು ವಾಷಿಂಗ್ಟನ್​ಗೆ ಕರೆದುಕೊಂಡುಹೋಗಿ ಅವರಿಗೆ ಶ್ವೇತಭವನದ ಪ್ರಭುಗಳ ಆಶೀರ್ವಾದವನ್ನೂ ಕೊಡಿಸಿಕೊಂಡು ಬಂದರು, ತಾವೇ ಗದ್ದುಗೆಗೇರಿಸಿದ ಶೆಹ್​ಬಾಜ್ ಶರೀಫ್ ತಾವು ಹೇಳಿದೆಡೆ ತೆಪ್ಪಗೆ ಸಹಿ ಹಾಕುತ್ತಾರೆ, ತಮ್ಮ ನಿವೃತ್ತಿಯ ನಂತರ ತಮ್ಮದೇ ಕೆಲಸಕಾರ್ಯಗಳನ್ನು ಲೆ.ಜ. ಅಬ್ಬಾಸ್ ಮುಂದುವರಿಸಿಕೊಂಡು ಹೋಗುತ್ತಾರೆ, ತಾವು ಹಿಂದಿನ ಆಷ್ಪಾಕ್ ಕಯಾನಿ ಅಥವಾ ರಹೀಲ್ ಶರೀಫ್​ರಂತೆ ವಿದೇಶಕ್ಕೆ ಹೋಗಿ ನೆಮ್ಮದಿಯಾಗಿ ನೆಲೆಸಬಹುದು ಎಂದು ಲೆಕ್ಕಹಾಕಿದರು. ಆದರೆ, ಅವರ ಬೆನ್ನ ಹಿಂದೆಯೇ ಬೇರೊಂದು ನಾಟಕದ ಅಂಕದ ಪರದೆ ಮೇಲೇಳತೊಡಗಿತ್ತು.

ಪಾಕಿಸ್ತಾನದ ಪ್ರಧಾನಮಂತ್ರಿ ಪದವಿ ಸುಪ್ಪತ್ತಿಗೆಯಲ್ಲ ಎನ್ನುವುದು ಶೆಹ್​ಬಾಜ್ ಶರೀಫ್​ರಿಗೆ ತಿಳಿದಿರಲಿಲ್ಲವೆಂದಲ್ಲ. ಆದರೆ, ಅದು ನಿಜವಾಗಿ ಅರಿವಿಗೆ ಬಂದದ್ದು ಆರ್ಥಿಕವಾಗಿ ದಿವಾಳಿಯ ಅಂಚಿನಲ್ಲಿರುವ ದೇಶದ ಸಹಾಯಕ್ಕೆ ಯಾರೂ ಇಲ್ಲ ಎಂಬ ವಾಸ್ತವ ಗಢಾರಿಯಂತೆ ಎದೆಗೆ ಘಟ್ಟಿಸಿದಾಗ. ಧನಸಹಾಯಕ್ಕಾಗಿ ಮೊರೆಯಿಟ್ಟು ತುರ್ಕಿ, ಸೌದಿ ಅರೇಬಿಯಾ, ಅಮೆರಿಕಾ, ಯುಎಇಗಳಿಗೆಲ್ಲಾ ಅಲೆದು ಬರಿಗೈಯಲ್ಲಿ ಬಂದರು. ‘ನಾನು ಕರೆ ಮಾಡಿದರೆ ಹಣ ಬೇಡುತ್ತಿದ್ದೇನೆ ಎಂದು ನಮ್ಮ ಮಿತ್ರರೆಲ್ಲರೂ ತಿಳಿಯುತ್ತಾರೆ. ಹೀಗಾಗಿ ಅವರಾರೂ ನನ್ನ ಕರೆಗೆ ಉತ್ತರಿಸುವುದೇ ಇಲ್ಲ’ ಎಂದವರು ಬಹಿರಂಗವಾಗಿ ಗೋಳು ತೋಡಿಕೊಂಡಿದ್ದರು. ಸೌದಿ ಅರೇಬಿಯಾ ಆಶ್ವಾಸನೆ ನೀಡಿ ಹಿಂದೆಗೆದಿದೆ. ಅಮೆರಿಕಾದಿಂದ ಮತ್ತದರ ಪ್ರಭಾವದಿಂದ ಚೂರುಪಾರೇನೋ ಸಿಕ್ಕಿತು. ಆದರೆ, ನವೆಂಬರ್ 8ರ ಚುನಾವಣೆಗಳಲ್ಲಿ ಹೌಸ್ ಆಫ್ ರೆಪ್ರೆಸೆಂಟಿವ್​ನಲ್ಲಿ ಬಹುಮತ ಗಳಿಸಿಕೊಂಡ ರಿಪಬ್ಲಿಕನ್ ಪಕ್ಷ ಪಾಕಿಸ್ತಾನ ಮತ್ತು ಚೀನಾದ ಕಟ್ಟಾ ವಿರೋಧಿ. ಅದು ಪಾಕಿಸ್ತಾನಕ್ಕೆ ಸಹಾಯ ನೀಡುವ ಬೈಡೆನ್ ಆಡಳಿತದ ಯಾವುದೇ ಯೋಜನೆಯನ್ನು ಕೆಳಗೆ ಬೀಳಿಸುತ್ತದೆ. ಇವೆಲ್ಲವೂ ಶರೀಫ್​ರನ್ನು ಅದೆಷ್ಟು ಹತಾಶರನ್ನಾಗಿಸಿದವೆಂದರೆ, ಅಣ್ವಸ್ತ್ರ ಹೊಂದಿರುವ ಪಾಕಿಸ್ತಾನವನ್ನು ದಿವಾಳಿಯಿಂದ ಪಾರು ಮಾಡದೇಹೋದರೆ ಅದು ಜಗತ್ತಿಗೇ ಅಪಾಯ ಎಂದು ಬ್ಲಾ್ಯಕ್​ವೆುೕಲ್​ನ ಹೊಸ ವರಸೆಯೊಂದನ್ನು ಪ್ರದರ್ಶಿಸಿದರು! ಇಷ್ಟಾಗಿಯೂ ಯಾರೂ ಕ್ಯಾರೇ ಅನ್ನದಿದ್ದಾಗ ದಿಕ್ಕೆಟ್ಟ ಶರೀಫ್ ಹಿಡಿದದ್ದು ಚೀನಾದ ದಾರಿ. ಕಬ್ಬಿಣ ಹದವಾಗಿ ಕಾದಿದೆ ಎಂದು ಗುರುತಿಸಿದ ಚೀನಾ ಸುತ್ತಿಗೆ ಎತ್ತಿಕೊಂಡಿತು. ನಾಲ್ಕು ಬಿಲಿಯನ್ ಡಾಲರ್​ಗಳ ಸಾಲದ ಮರುಪಾವತಿ ವೇಳಾಪಟ್ಟಿಯನ್ನು ಪುನರ್ವಿಮಶಿಸಿ, ಮೇಲುಖರ್ಚಿಗೂ ಒಂದಷ್ಟು ಕೊಡುವ, ಒಟ್ಟು ಆರು ಬಿಲಿಯನ್ ಡಾಲರ್​ಗಳ ಹೊಸ ಸಾಲ ನೀಡುವ ಗಾಳ ಬೀಸಿ ಚೀನಾ ಹಿಡಿದದ್ದು ಪಾಕಿಸ್ತಾನದ ಕೊರಳನ್ನು. ಅಮೆರಿಕಾದ ಬಂಟನಲ್ಲದ, ತನ್ನ ಮಾತು ಕೇಳುವವನೊಬ್ಬ ಪಾಕಿಸ್ತಾನೀ ಸೇನಾ ದಂಡನಾಯಕನಾಗಬೇಕು ಎಂದು ಚೀನಾ ಹಾಕಿದ ಕಟ್ಟಳೆಯನ್ನು ಮೀರುವುದು ಅಣ್ಣ-ತಮ್ಮ ಶರೀಫ್​ದ್ವಯರಿಗೆ ಸಾಧ್ಯವೇ ಇರಲಿಲ್ಲ. ಚೀನೀ ಅಪ್ಪಣೆಯ ಪಾಲನೆಗೆ ಕಂಡ ಸೂಕ್ತ ವ್ಯಕ್ತಿ ಆಸಿಮ್ ಮುನೀರ್!

ಮುನೀರ್ ಬೇಕೆಂದು ಚೀನಾ ಕೇಳಿದ್ದು ಪರೋಪಕಾರಿ ಇರಾದೆಯಿಂದಲ್ಲ, ಬದಲಾಗಿ ಭಾರತದ ರಕ್ಷಣೆಯನ್ನು ಕ್ಷತಿಗೊಳಿಸುವ ತನ್ನದೇ ಸ್ವಾರ್ಥಪರ ಹುನ್ನಾರದಿಂದ! ಚೀನೀ ಅರ್ಥವ್ಯವಸ್ಥೆ ಮುಳುಗುತ್ತಿದೆ, ಅದನ್ನು ತಡೆಯಲಾಗದು ಎಂಬ ವಾಸ್ತವವನ್ನು ಅಧ್ಯಕ್ಷ ಷಿ ಜಿನ್​ಪಿಂಗ್ ಒಪ್ಪಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳಲ್ಲಿನ ಅವರೆಲ್ಲಾ ನೀತಿಗಳಿಂದ ನಮಗೆ ತಿಳಿಯುವುದು ಎರಡು ಕರಾಳ ಸಂಗತಿಗಳು- 1. ಅರ್ಥವ್ಯವಸ್ಥೆಯ ಪುನರುತ್ಥಾನಕ್ಕಿಂತಲೂ ಕಮ್ಯೂನಿಸ್ಟ್ ಪಕ್ಷದ ಹಿಡಿತ ಕುಗ್ಗದಂತೆ ನೋಡಿಕೊಳ್ಳುವುದು, 2. ಚೀನಾವನ್ನು ತೊರೆಯುತ್ತಿರುವ ಅಮೆರಿಕಾದ ಹೂಡಿಕೆದಾರರಿಗೆ ಬೇರೆಲ್ಲೂ ಸೂಕ್ತ ಬದಲಿತಾಣ ದೊರೆಯದಂತೆ ಮಾಡುವುದು ಹಾಗೂ ಆ ಮೂಲಕ ಜಾಗತಿಕ ಪೂರೈಕೆ ಸರಪಳಿ ಕತ್ತರಿಸಿಹೋಗಿ ಈಗ ಚೀನಾ ಅನುಭವಿಸುತ್ತಿರುವ ಆರ್ಥಿಕ ದುಃಸ್ಥಿತಿಯನ್ನೇ ಇಡೀ ಜಗತ್ತು ಅನುಭವಿಸುವಂತೆ ಮಾಡುವುದು. ಇದರಾಚೆಗೆ ಅವರ ಯೋಜನೆಗಳೇನಿವೆ ಎಂದು ಕಾದುನೋಡಬೇಕಾಗಿದೆ. ಜಗತ್ತು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿ ಬಳಲತೊಡಗಿದಾಗ ಅದನ್ನು ಚೀನಾದ ಅನುಕೂಲಕ್ಕೆ ಬಳಸಿಕೊಳ್ಳುವ ದೂರಾಲೋಚನೆ ಅವರದಾಗಿರಬಹುದು. ಅದಕ್ಕಿನ್ನೂ ಸಮಯವಿದೆ. ಜಿನ್​ಪಿಂಗ್​ರ ಯೋಜನೆಯ ಮೊದಲ ಹಂತ ಸಫಲವಾಗಬೇಕಾದರೆ ಈಗ ವಿದೇಶೀ ಹೂಡಿಕೆದಾರರ ಕಣ್ಮಣಿಯಾಗುತ್ತಿರುವ, ಚೀನಾಗೆ ಬದಲಿಯಾಗಿ ಜಾಗತಿಕ ಹೂಡಿಕೆ ಗಮ್ಯಸ್ಥಾನವಾಗಿ ಬದಲಾಗುತ್ತಿರುವ ಭಾರತ, ತೈವಾನ್ ಮತ್ತು ವಿಯೆಟ್ನಾಂಗಳನ್ನು ಅಸ್ಥಿರಗೊಳಿಸುವುದು, ಈ ದೇಶಗಳಲ್ಲಿ ಅಶಾಂತಿಯೆಬ್ಬಿಸಿ ವಿದೇಶೀ ಹೂಡಿಕೆದಾರರರಲ್ಲಿ ಅಸುರಕ್ಷೆಯ ಭಯವನ್ನುಂಟು ಮಾಡಿ ಅವರನ್ನು ಈ ದೇಶಗಳಿಂದ ದೂರ ಅಟ್ಟುವುದು ಅಗತ್ಯ. ಪುಟ್ಟ ತೈವಾನ್​ಗೆ ನಿರಂತರ ಬೆದರಿಕೆ ಒಡ್ಡುತ್ತಾ; ವಿಯೆಟ್ನಾಂನ ಸಮುದ್ರ ತೀರದಲ್ಲಿ ನೌಕಾ ಧಮಕಿ ಹಾಕುವುದಲ್ಲದೆ, ಮೆಕಾಂಗ್ ನದಿಯನ್ನು ತಡೆಗಟ್ಟಿ ಆ ಪುಟ್ಟ ದೇಶದ ಕೃಷಿ ಮತ್ತು ವಿದ್ಯುತ್ ಉತ್ಪಾದನೆಗೆ ಸಂಚಕಾರ ತರುವ ದುಷ್ಕೃತ್ಯಗಳನ್ನು ಚೀನಾ ಈಗಾಗಲೇ ಮಾಡುತ್ತಿದೆ. ಆದರೆ, ಭಾರತದ ವಿಷಯದಲ್ಲಿ ಅದಕ್ಕೆ ಇತರರಿಂದ ಸಹಾಯ ಬೇಕಾಗಿದೆ. ಯಾಕೆಂದರೆ ಅದು ಏಕಾಂಗಿಯಾಗಿ ಮಾಡಿದ ಪ್ರಯತ್ನ ತಿರುಗುಬಾಣವಾಗಿದೆ. ಹೀಗಾಗಿ, ತನ್ನ ಸೇನೆ ನೇರವಾಗಿ ಕಾರ್ಯಾಚರಣೆಗಿಳಿಯದೆಯೂ ಭಾರತದ ಸುರಕ್ಷಾ ಸ್ಥಿತಿ ಹದಗೆಡಬೇಕು, ಗಡಿಗಳಲ್ಲಿ ಕಿಡಿ ಹೊತ್ತಿಕೊಳ್ಳಬೇಕು ಮತ್ತು ಆಂತರಿಕವಾಗಿ ಭಯೋತ್ಪಾದನಾ ಕೃತ್ಯಗಳು ಘಟಿಸುತ್ತಿರಬೇಕು ಎನ್ನುವುದು ಜಿನ್​ಪಿಂಗ್​ರ ಕುಟಿಲೋಪಾಯ. ಇದನ್ನು ಮಾಡಬಲ್ಲ ಒಂದೇ ದೇಶ ಪಾಕಿಸ್ತಾನ ಮತ್ತು ಸದ್ಯಕ್ಕೆ ಸೂಕ್ತ ವ್ಯಕ್ತಿ ಪುಲ್ವಾಮಾ ದಾಳಿಯನ್ನು ರೂಪಿಸಿದ ಆಸಿಮ್ ಮುನೀರ್!

ಹೀಗೆ ಮೊಟ್ಟಮೊದಲ ಬಾರಿಗೆ ಅಮೆರಿಕಾದ ಬದಲು ಚೀನಾಗೆ ನಂಬಿಗಸ್ಥನನ್ನು ಸೇನಾಧಿಕಾರಿಯಾಗಿ ನೇಮಿಸಿಕೊಳ್ಳಲು ಶರೀಫ್ ಸರ್ಕಾರ ಆಡಿದ ಆಟಗಳು, ಚೀನೀ ಯೋಜನೆಗೆ ಮುನೀರ್ ಎಷ್ಟರ ಮಟ್ಟಿಗೆ ಸಹಕಾರಿಯಾಗಬಹುದು, ಅವರ ವ್ಯಕ್ತಿತ್ವದ ಸ್ವರೂಪವೇನು, ಅದೆಲ್ಲವುಗಳಿಂದ ಭಾರತ ಎದುರಿಸಬಹುದಾದ ಸವಾಲುಗಳೇನು ಎನ್ನುವುದನ್ನು ಮುಂದಿನ ವಾರ ವಿಶ್ಲೇಷಿಸೋಣ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net