ದೂರಗತ್ತಲ ಇತಿಹಾಸಕ್ಕೊಂದು ದುರ್ಬೀನು

Column F
Published on
ನೂರು ವರ್ಷಗಳ ಹಿಂದೆ ಹರಪ್ಪಾ ಮತ್ತು ಮೊಹೆಂಜೋದಾರೋ ಅವಶೇಷಗಳು ಪತ್ತೆಯಾದಾಗ ಅವುಗಳ ಕಾಲಮಾನವನ್ನು ಕ್ರಿ.ಪೂ. 2,500-1,200 ಎಂದು ಊಹಿಸಲಾಯಿತು. ಈ ನೂರು ವರ್ಷಗಳಲ್ಲಿ ದೂರದೂರದ ಸ್ಥಳಗಳಲ್ಲಿ ಹೊಸ ಹೊಸ ಅವಶೇಷಗಳು ಪತ್ತೆಯಾಗಿವೆ ಮತ್ತು ಅದಕ್ಕನುಗುಣವಾಗಿ ಅದರ ಕಾಲಮಾನವೂ ಹಿಗ್ಗುತ್ತಾ ಹೋಗಿದೆ. ಬಲೂಚಿಸ್ತಾನದಲ್ಲಿನ ಮೆಹ್ರ್​ಘರ್ ಪ್ರಾಕ್ತನ ಅವಶೇಷಗಳು ನಾಗರಿಕತೆಯ ಆರಂಭವನ್ನು ಕ್ರಿ.ಪೂ. 7,000ದಷ್ಟು ಹಿಂದಕ್ಕೊಯ್ದರೆ ಮೊಹೆಂಜೋದಾರೋನಲ್ಲಿ ಕಂಡುಬರುವ ಕುರುಹುಗಳು ಅಂತ್ಯವನ್ನು ಕ್ರಿ.ಪೂ. 1,800ರ ಸುಮಾರಿಗೆ ತಂದು ನಿಲ್ಲಿಸುತ್ತವೆ. ಇದು ಕ್ರಿ.ಶ. 1997ರ ಹೊತ್ತಿಗೆ ತಲುಪಲಾದ ತೀರ್ವನ. ಆದರೆ, 1999-2011ರಲ್ಲಿ ಆಗ್ನೇಯ ಗುಜರಾತ್​ನ ಖಂಭಾತ್ ಕೊಲ್ಲಿಯಲ್ಲಿ ನೀರಿನಾಳದಲ್ಲಿ ಪತ್ತೆಯಾದ ಎರಡು ಪ್ರಾಚೀನ ನಗರಗಳ ಅವಶೇಷಗಳು ಸಿಂಧೂ-ಸರಸ್ವತಿ ನಾಗರಿಕತೆಯನ್ನು ಕ್ರಿ.ಪೂ. 32,00-9,500ದಷ್ಟು ಪ್ರಾಚೀನವಾಗಿಸುತ್ತವೆ! ಇದನ್ನು ನಿಜವೆಂದು ಒಪ್ಪಬಹುದೇ? ಬನ್ನಿ, ಪರಿಶೀಲಿಸೋಣ. ಅದಕ್ಕಾಗಿ ನಾವು ಭೂಮಿಯ ಇತಿಹಾಸದ ಒಂದು ಭಾಗದ ಮೇಲೆ ಮಾನವನ ಇತಿಹಾಸವನ್ನಿಟ್ಟು ಹೊಂದಿಸಿ ನೋಡಬೇಕಾಗುತ್ತದೆ.

ಪೂರ್ವ ಆಫ್ರಿಕಾದಲ್ಲಿ ಚಿಂಪಾಂಝಿಯಿಂದ ಮಾನವ ಪ್ರಭೇದ ಪ್ರತ್ಯೇಕಗೊಂಡದ್ದು ಸುಮಾರು 60 ಲಕ್ಷ ವರ್ಷಗಳ ಹಿಂದೆ. ನಂತರ ಅವನು 23 ಲಕ್ಷ ವರ್ಷಗಳ ಹಿಂದೆ ಕೈಗಳನ್ನು ಉಪಯೋಗಿಸಿ ಪ್ರಾಕೃತಿಕ ವಸ್ತುಗಳನ್ನು ಆಯುಧಗಳನ್ನಾಗಿಯೋ ಉಪಕರಣಗಳನ್ನಾಗಿಯೋ ಮಾರ್ಪಡಿಸಿಕೊಳ್ಳುವ ಕೌಶಲ ರೂಢಿಸಿಕೊಂಡ ‘ಹೋಮೋ ಹ್ಯಾಬಿಲಿಸ್ ಮಾನವ’ನಾಗಿ ಬೆಳೆದ. ಇಪ್ಪತ್ತು-ಹದಿನೆಂಟು ಲಕ್ಷ ವರ್ಷಗಳ ಹಿಂದೆ ನೆಟ್ಟಗೆ ನಿಲ್ಲುವುದನ್ನೂ ಕಲಿತು ‘ಹೋಮೋ ಎರೆಕ್ಟಸ್’ ಮಾನವನಾಗಿಯೂಬಿಟ್ಟ. ಮುಂದಿನ 15 ಲಕ್ಷ ವರ್ಷಗಳಲ್ಲಿ ಮಾನವನಲ್ಲಿ ಹೆಚ್ಚಿನ ಬೆಳವಣಿಗೆಯೇನೂ ಕಾಣಲಿಲ್ಲ. ಮೂರು ಲಕ್ಷ ವರ್ಷಗಳ ಹಿಂದೆ, ಮೊರಾಕ್ಕೋದಲ್ಲಿ ದೊರೆತಿರುವ ಪಳಯುಳಿಕೆಯ ಪ್ರಕಾರ ‘ಹೋಮೋ ಸೇಪಿಯನ್’ ಮಾನವ ಅಂದರೆ ‘ಬುದ್ಧಿವಂತ ಮಾನವ’ ಅವತರಿಸಿದ್ದು ಮಾನವ ವಿಕಾಸದಲ್ಲೊಂದು ಪ್ರಮುಖ ಬೆಳವಣಿಗೆ.

ನಂತರ ಹೋಮೋ ಸೇಪಿಯನ್ ಮಾನವ ಹಲವು ಟಿಸಿಲುಗಳಾಗಿ ಒಡೆದು ವಿವಿಧ ಬಗೆಯ ಮಾನವರು ಪ್ರಪಂಚದ ವಿವಿಧೆಡೆ ಬದುಕಿದ್ದ ಕುರುಹುಗಳು ದೊರೆತಿದ್ದರೂ ನಿಖರ ಮಾಹಿತಿ ಲಭ್ಯವಿಲ್ಲ. ಸ್ಪಷ್ಟ ಮಾಹಿತಿಗಳು ದೊರೆಯುವುದು 1,60,000 ವರ್ಷಗಳ ಹಿಂದೆ ಅವತಾರ ಆರಂಭಿಸಿದ ‘ಹೋಮೋ ಸೇಪಿಯನ್ ಸೇಪಿಯನ್’- ಅಂದರೆ ‘ಬುದ್ಧಿವಂತ ಬುದ್ಧಿವಂತ ಮಾನವ’ ಮತ್ತು 1,30,000 ವರ್ಷಗಳ ಸುಮಾರಿಗೆ ಕಾಣಿಸಿಕೊಂಡ ‘ಹೋಮೋ ಸೇಪಿಯನ್ ನಿಯಾಂಡರ್​ಥಾಲೆನ್ಸಿಸ್’ ಅಥವಾ ‘ನಿಯಾಂಡರ್​ಥಾಲ್ ಮಾನವ.’ ಇಷ್ಟು ಹಿನ್ನೆಲೆಯೊಂದಿಗೆ ನಾವು ಸುಮಾರು ಮೂವತೆôದು-ನಲವತ್ತು ಸಾವಿರ ವರ್ಷಗಳ ಹಿಂದಕ್ಕೆ ಬಂದು ವಿರಾಮವಾಗಿ ನಿಲ್ಲೋಣ. ಯಾಕೆಂದರೆ ಅಸಾಮಾನ್ಯ ಬೆಳವಣಿಗೆಗಳು ಘಟಿಸಿದ ಕಾಲಮಾನ ಅದು.

ಆ ಅವಧಿಯಲ್ಲಿ ಹೋಮೋ ಸೇಪಿಯನ್ ಸೇಪಿಯನ್ ಮಾನವ ಅಂದರೆ ನಾವು ಭಾಷೆಗಳನ್ನು ರೂಪಿಸಿಕೊಂಡೆವು, ನಮ್ಮ ದಾಯಾದಿ ನಿಯಾಂಡರ್​ಥಾಲ್ ಮಾನವ ನಿರ್ವಂಶವಾಗಿಹೋದ! ಇವೆರಡಕ್ಕೂ ಸಂಬಂಧವಿದ್ದಿರಬೇಕು. ಹೋಮೋ ಸೇಪಿಯನ್ ಅವತಾರದಲ್ಲೇ ನಮ್ಮ ದೇಹ ಮತ್ತು ತಲೆಯ ನಡುವಿನ ಅಂತರ ಹೆಚ್ಚುತ್ತಾ ಹೋಗಿ ನಡುವಿನ ಸ್ಥಳದಲ್ಲಿ ಧ್ವನಿಪೆಟ್ಟಿಗೆ ವಿಕಾಸಗೊಂಡು ಸ್ವರಗಳನ್ನು ಹೊರಡಿಸುವುದನ್ನು ನಾವು ಕಲಿತಿದ್ದೆವು. ಇದು ಭೂಮಿಯ ಇತರ ಜೀವಿಗಳ ಮುಂದೆ ನಮ್ಮನ್ನು ವಿಶೇಷರನ್ನಾಗಿಸಿತು. ಆದರೆ, ಅದಕ್ಕೆ ನಾವು ಬೆಲೆಯನ್ನೂ ತೆರುತ್ತಿದ್ದೇವೆ. ಕೊರಳು ಸಣ್ಣಕ್ಕೆ ಉದ್ದವಾದ ಕಾರಣ ಅನ್ನನಾಳ ಮತ್ತು ಶ್ವಾಸನಾಳಗಳು ಹತ್ತಿರಾಗಿ ಆಹಾರ ಹಾಗೂ ನೀರು ಶ್ವಾಸನಾಳಕ್ಕಿಳಿಯುವ ಅಂದರೆ ನೆತ್ತಿ ಹತ್ತುವ ತೊಂದರೆಯನ್ನು ನಾವು ಅನುಭವಿಸುವಂತಾಗಿದೆ ಎಂದು ಕೆಲವರು ವಿಜ್ಞಾನಿಗಳ ಅಂಬೋಣ. ಇರಲಿ, ಆ ಬಗ್ಗೆ ನನಗೆ ಹೆಚ್ಚು ಗೊತ್ತಿಲ್ಲ. ಆದರೆ, ವಿವಿಧ ಸ್ವರಗಳನ್ನು ಹೊರಡಿಸುವ ಸಾಮರ್ಥ್ಯ ಗಳಿಸಿಕೊಳ್ಳಲು ತೆತ್ತ ಬೆಲೆ ಅಷ್ಟೇನೂ ದೊಡ್ಡದಲ್ಲ ಅನಿಸುತ್ತದೆ.

ನಾವು ಭಾಷೆಯನ್ನು ರೂಢಿಸಿಕೊಂಡದ್ದು ಮೂವತೆôದು-ನಲವತ್ತು ಸಾವಿರ ವರ್ಷಗಳ ನಡುವಿನ ಅವಧಿಯಲ್ಲಿ. ಈ ಭಾಷೆಯೇ ನಮ್ಮ ನಡುವೆ ಸಂಪರ್ಕವನ್ನು ಗಣನೀಯವಾಗಿ ವೃದ್ಧಿಸಿ, ಸಮನ್ವಯತೆಯನ್ನು ಪರಿಣಾಮಕಾರಿಯಾಗಿಸಿತು. ಇದೇ ನಾವು ಸಂಘಟಿತರಾಗಿ ನಮ್ಮ ಸಮಕಾಲೀನರಾದ ಇತರ ಮಾನವ ಪ್ರಭೇದಗಳನ್ನು ನಿರ್ನಾಮ ಮಾಡಿ ಈ ಭೂಮಿಯಲ್ಲಿ ಏಕಮೇವಾದ್ವಿತೀಯ ಮಾನವ ಪ್ರಭೇದವಾಗಿ ಉಳಿಯಲು ಅವಕಾಶ ಮಾಡಿಕೊಟ್ಟಿರಬೇಕು. ಇತರೆಲ್ಲಾ ಹೋಮೋ ಸೇಪಿಯನ್ ಮಾನವ ಪ್ರಭೇದಗಳು ಹೇಳಹೆಸರಿಲ್ಲದೇ ನಿರ್ನಾಮವಾದರೆ ಹೋಮೋ ನಿಯಾಂಡರ್​ಥಾಲೆನ್ಸಿಸ್ ಮಾನವ ಈಗಿನ ಪೂರ್ವ ಏಶಿಯನ್ನರಲ್ಲಿ ತನ್ನ ಡಿಎನ್​ಎನ ಒಂದಂಶವನ್ನುಳಿಸಿ ಕಾಣೆಯಾಗಿಹೋದ. ಇದು ಜೀವ ಇತಿಹಾಸದಲ್ಲಿ ನಕಾರಾತ್ಮಕವೆನಿಸಬಹುದಾದರೆ ನಾವು ಹೋಮೋ ಸೇಪಿಯನ್ ಸೇಪಿಯನ್ ಮಾನವರ ಬದುಕಿನಲ್ಲಿ ಸಕಾರಾತ್ಮಕ ಬೆಳವಣಿಗೆಯೂ ಘಟಿಸಿದ್ದನ್ನು ನಿರ್ಲಕ್ಷಿಸಲಾಗುವುದಿಲ್ಲ. (ಇಲ್ಲಿಂದಾಚೆಗೆ ಹೋಮೋ ಸೇಪಿಯನ್ ಸೇಪಿಯನ್ ಮಾನವನನ್ನು ಸೂಚಿಸಲು ‘ಮಾನವ’ ಹಾಗೂ ‘ಮನುಷ್ಯ’ ಎಂಬ ಪದಗಳನ್ನಷ್ಟೇ ಪ್ರಯೋಗಿಸುತ್ತೇನೆ.)

40,000-35,000 ವರ್ಷಗಳ ಹಿಂದೆ ಮಾನವ ಏಕಾಏಕಿ ವಿವಿಧ ಕೌಶಲಗಳನ್ನು ಗಳಿಸಿಕೊಂಡ ಕುರುಹುಗಳು ಪ್ರಪಂಚದ ವಿವಿಧೆಡೆ ದೊರೆತಿವೆ. ಒಂದೇ ಬಗೆಯ ಗುಹಾಚಿತ್ರಗಳು ಅಲಾಸ್ಕಾ, ಪೆರು, ಸಹಾರಾ, ದಕ್ಷಿಣ ಆಫ್ರಿಕಾ, ಇಂಡೋನೇಶಿಯಾದ ಸುಲವೇಶಿ ದ್ವೀಪ ಸೇರಿದಂತೆ ಪರಸ್ಪರ ಸಂಬಂಧವೇ ಇಲ್ಲದ ದೂರದೂರದ ಪ್ರದೇಶಗಳಲ್ಲಿ ಕಂಡುಬಂದಿವೆ. ಹಾಗೆಯೇ ಮನುಷ್ಯ ಒಂದು ಕಡೆ ಗುಂಪಾಗಿ ನೆಲೆನಿಂತು ವಾಸಗೃಹಗಳನ್ನು ನಿರ್ವಿುಸಿಕೊಂಡು ವಾಸಿಸಲೂ ಆರಂಭಿಸಿದ ಸ್ಪಷ್ಟ ಗುರುತುಗಳೂ ಕಾಣಸಿಗುತ್ತವೆ. ಈಗ ಮಾನವನ ಇತಿಹಾಸದ ಈ ಘಟ್ಟಕ್ಕೆ ಭೂಮಿಯ ಇತ್ತೀಚಿನ ಇತಿಹಾಸವನ್ನು ಸಮೀಕರಿಸೋಣ.

ತನ್ನ ಐದು ಬಿಲಿಯನ್ ವರ್ಷಗಳ ಇತಿಹಾಸದಲ್ಲಿ ಭೂಮಿ ಉಷ್ಣಯುಗ ಮತ್ತು ಹಿಮಯುಗಗಳ ನಡುವೆ ಹೊಯ್ದಾಡುತ್ತಾ ಬಂದಿದೆ. ಈಗ ನಾವಿರುವುದು ಉಷ್ಣಯುಗ. ಕಳೆದ ಹಿಮಯುಗ 1,10,000 ವರ್ಷಗಳ ಸುಮಾರಿಗೆ ಆರಂಭವಾಗಿ 11,700 ವರ್ಷಗಳವರೆಗೆ ಸಾಗಿಬಂತು. ಭೂವಿಜ್ಞಾನಿಗಳ ಪ್ರಕಾರ ಆಗ ಭೂಮಿಯ ಉತ್ತರ ಮತ್ತು ದಕ್ಷಿಣದ ವಿಶಾಲ ತುದಿಗಳು ಹಿಮಾವೃತವಾಗಿದ್ದವು ಮತ್ತು ಸಾಗರವಿಜ್ಞಾನಿಗಳ ಪ್ರಕಾರ ಎಲ್ಲೆಡೆ ಸಾಗರಗಳ ಮಟ್ಟ ತುಂಬಾ ಕೆಳಗಿದ್ದು ಪ್ರಪಂಚದ ಎಲ್ಲ ಖಂಡಗಳ ನೆಲ ವಿಶಾಲವಾಗಿತ್ತು. ಈಗ ಹತ್ತು ಸಾವಿರಕ್ಕಿಂತಲೂ ಹೆಚ್ಚು ದ್ವೀಪಗಳಿರುವ ಇಂಡೋನೇಶಿಯಾ ಆಗ ಒಂದೇ ಬೃಹತ್ ದ್ವೀಪವಾಗಿತ್ತು. ಈಗಿನ ಕೆರಿಬಿಯನ್ ಸಮುದ್ರ ನೆಲವಾಗಿ ಅಮೆರಿಕಾ ಮತ್ತು ಮೆಕ್ಸಿಕೋಗೆ ಅಂಟಿಕೊಂಡಿತ್ತು, ಬ್ರಿಟನ್ ಸಹಾ ಯೂರೋಪ್ ಜತೆ ಸೇರಿಹೋಗಿತ್ತು, ಉತ್ತರ ಅಟ್ಲಾಂಟಿಕ್ ಸಾಗರದಲ್ಲಿ ಈಗಿನ ಸ್ಪೇನ್​ನಷ್ಟು ವಿಶಾಲವಾದ ದ್ವೀಪವಿತ್ತು! ನಮ್ಮ ಭಾರತದ ಪಶ್ಚಿಮ ತೀರದ ಬಗ್ಗೆಯಷ್ಟೇ ಹೇಳುವುದಾದರೆ ದಕ್ಷಿಣದಲ್ಲಿ ಲಕ್ಷದ್ವೀಪಗಳಿಂದ ಆರಂಭವಾಗುತ್ತಿದ್ದ ಅದು ಗೋವಾದ ಬಳಿ ಈಗಿನಂತೆ ನೇರ ಉತ್ತರಕ್ಕೆ ಸಾಗದೇ ಸಂಪೂರ್ಣ ವಾಯವ್ಯಕ್ಕೆ ತಿರುಗಿ ಅದೇ ದಿಕ್ಕಿನಲ್ಲಿ ಸರಿಸುಮಾರು ನೇರವಾಗಿ ಸಾಗಿ ಇರಾನ್​ಗೆ ಸೇರುತ್ತಿತ್ತು. ಆಗ ಪರ್ಶಿಯನ್ ಕೊಲ್ಲಿ ಇರಲೇ ಇಲ್ಲ. ನಮ್ಮ ಸಿಂಧೂ, ನರ್ಮದಾ, ತಪತೀ ನದಿಗಳು ಆಗ ಸಮುದ್ರ ಸೇರಲು 300-400 ಕಿಲೋಮೀಟರ್ ಹೆಚ್ಚು ದೂರ ನೆಲದಲ್ಲಿ ಹರಿದುಹೋಗಬೇಕಾಗಿದ್ದರೆ ಯೂಫ್ರಟೀಸ್ ಮತ್ತು ಟೈಗ್ರೀಸ್ ನದಿಗಳು ಈಗಿರುವುದಕ್ಕಿಂತ ಕನಿಷ್ಠ ಎರಡು ಸಾವಿರ ಕಿಲೋಮೀಟರ್ ಹೆಚ್ಚು ಉದ್ದವಾಗಿದ್ದವು! ಆಗ ಮನುಷ್ಯ ತನ್ನ ಸಾಮೂಹಿಕ ವಸತಿಗೆ ಸಾಗರತೀರವನ್ನೇ ಪ್ರಶಸ್ತ ಸ್ಥಳವೆಂದು ಪರಿಗಣಿಸಿದಂತೆ ಕಾಣುತ್ತದೆ. ಅಂತಹ ಸ್ಥಳಗಳು ಪ್ರಪಂಚದಾದ್ಯಂತ ಇದ್ದವು ಮತ್ತು ಅವುಗಳಲ್ಲೆರಡು ನಮ್ಮ ಭಾರತದ ಪಶ್ಚಿಮ ತೀರ ಮತ್ತು ಇಂದಿನ ಪರ್ಶಿಯನ್ ಕೊಲ್ಲಿ. ಖಂಭಾತ್ ಕೊಲ್ಲಿಯಲ್ಲಿ ಪತ್ತೆಯಾಗಿರುವ ಎರಡು ನಗರಗಳು ಭಾಷೆ ಕಲಿತ ಮಾನವ ಜಗತ್ತಿನ ವಿವಿಧೆಡೆ ನಾಗರಿಕ ಬದುಕನ್ನು ಆರಂಭಿಸಿದ ಸ್ಥಳಗಳಲ್ಲೆರಡು. ಖಂಭಾತ್ ಅವಶೇಷಗಳಲ್ಲಿ ಕೆಲವು 32,000 ವರ್ಷಗಳಷ್ಟು ಹಳೆಯವು ಎಂಬ ಕೌತುಕಕ್ಕೆ ಇದು ವಿವರಣೆ. ಅಲ್ಲದೆ, ಸದ್ಯಕ್ಕೆ ಉಪಖಂಡದ ಪಶ್ಚಿಮೋತ್ತರ ಭಾಗದಲ್ಲಿ ಸಿಕ್ಕಿರುವ ಅತ್ಯಂತ ಪ್ರಾಚೀನ ನಾಗರಿಕ ಅವಶೇಷಗಳು ಇವೇ ಆಗಿರುವುದರಿಂದ ಅವೇ ಸಿಂಧೂ-ಸರಸ್ವತಿ ನಾಗರಿಕತೆಯ ಮೂಲನೆಲೆಗಳು ಎಂದು ರ್ತಸಲೂ ಅವಕಾಶವಾಗುತ್ತದೆ.

1,10,000 ವರ್ಷಗಳ ಹಿಮಯುಗ ಕೊನೆಯಾಗ ತೊಡಗಿದ್ದು 20,000 ವರ್ಷಗಳ ನಡುವೆ. ಆಗ ಧ್ರುವಗಳಲ್ಲಿ ಸಹಸ್ರಾರು ಕಿಲೋಮೀಟರ್ ಅಗಲಕ್ಕೆ ಹತ್ತು-ಹನ್ನೆರಡು ಕಿಲೋಮೀಟರ್ ಎತ್ತರಕ್ಕೆ ನಿಂತಿದ್ದ ಅಗಾಧ ಹಿಮರಾಶಿ ಕರಗತೊಡಗಿದಂತೆ ಸಾಗರದ ಮಟ್ಟ ಏರತೊಡಗಿ ತೀರಗಳನ್ನು ನುಂಗತೊಡಗಿತು, ಅದರೊಂದಿಗೆ ನಾಗರಿಕ ಮನುಷ್ಯನ ನಿರ್ವಣಗಳೂ ಮುಳುಗತೊಡಗಿದವು. ಈಗ ಉತ್ತರ ಅಟ್ಲಾಂಟಿಕ್​ನಲ್ಲಿರುವ ಒಂಬತ್ತು ಪುಟ್ಟ ದ್ವೀಪಗಳ ಗುಚ್ಛ ಅಝೆೊರ್ಸ್ ಅಲ್ಲಿದ್ದ ಬೃಹತ್ ದ್ವೀಪದ ಪರ್ವತ ತುದಿಗಳು ಎಂದು ವಿಜ್ಞಾನಿಗಳು ಹೇಳುತ್ತಾರೆ. ಹೀಗೆ ಏರತೊಡಗಿದ ಸಾಗರದ ಮಟ್ಟ ತೀರಪ್ರದೇಶಗಳಲ್ಲಿ ಭೂಕಂಪಗಳಿಗೂ ಕಾರಣವಾಗಿದ್ದಿರ ಬಹುದಾದ ಸೂಚನೆ ಅದೇ ಅಝೋರ್ಸ್ ದ್ವೀಪಗಳಲ್ಲೇ ದೊರೆಯುತ್ತದೆ. ಅಲ್ಲಿನ ದ್ವೀಪವೊಂದು ಏಕಾಏಕಿ ಓರೆಯಾಗಿ ವಾಲಿಕೊಂಡು ದಕ್ಷಿಣ ಭಾಗ ಮೊದಲು, ಉತ್ತರ ಭಾಗ ನಂತರ ನೀರಿಗಿಳಿದಂತಿದೆ! ಅಲ್ಲಿ ನೀರಿನಾಳದಲ್ಲಿ ಹಲವಾರು ಮಾನವ ನಿರ್ವಿುತ ಕಟ್ಟಡಗಳು ಕಂಡುಬಂದಿವೆ ಮತ್ತು ಅವು 20 ಸಾವಿರ ವರ್ಷಗಳ ಹಿಂದೆ ನೆಲದ ಮೇಲಿದ್ದವು ಎಂದು ಸಾಗರವಿಜ್ಞಾನಿಗಳು ಹೇಳುತ್ತಾರೆ! ಇಂತಹ ಉದಾಹರಣೆಗಳು ಬಹಳೆಡೆ ದೊರೆಯುತ್ತವೆ. ಪ್ಯೂರ್ಟೆ ರಿಕೋ ತೀರದಲ್ಲಿ ಕೇವಲ ಮೂವತ್ತು ಅಡಿ ಆಳದಲ್ಲಿ ಮೂರು ಅಂತಸ್ತುಗಳ ಕಟ್ಟಡವೊಂದು ತಲೆಕೆಳಗಾಗಿ ಬಿದ್ದಿದೆ! ತಮಿಳುನಾಡಿನ ನಾಗಪಟ್ಟಿಣಂ ತೀರದಿಂದ ಐದು ಕಿಲೋಮೀಟರ್ ದೂರದಲ್ಲಿ 65 ಅಡಿ ಆಳದಲ್ಲಿ ಇಂಗ್ಲಿಷ್​ನ ಖಿ ಅಕ್ಷರದಾಕಾರದ ಮಾನವ ನಿರ್ವಿುತ ರಚನೆಯೊಂದು ಪತ್ತೆಯಾಗಿದೆ ಮತ್ತು ಅದು 16,000 ವರ್ಷಗಳಿಂದ ನೀರಿನಲ್ಲಿ ಮುಳುಗಿದೆ! ಪಶ್ಚಿಮ ತೀರದಲ್ಲಿ ಮುಂದೊತ್ತಿ ಬಂದ ಸಾಗರ 13,000 ವರ್ಷಗಳ ಹಿಂದೆ ಈಗಿನ ಕೊಂಕಣ ತೀರವನ್ನು ಮುಟ್ಟಿದ್ದಲ್ಲದೆ, ಮುಂಬೈನ ತೀರದಾಚೆ ಉದ್ದದ ದ್ವೀಪವೊಂದನ್ನು ಸೃಷ್ಟಿಸಿತು.

ಹಿಮಯುಗದ ಅಂತ್ಯದೊಂದಿಗೆ ಸಾಗರದ ಮಟ್ಟ ನಿಧಾನವಾಗಿ ಏರಿದ್ದರಿಂದ ತೀರಪ್ರದೇಶಗಳಲ್ಲಿ ನಾಗರಿಕ ಬದುಕು ಕಟ್ಟಿಕೊಂಡಿದ್ದ ಜನಸಮುದಾಯಕ್ಕೆ ವಾಸಸ್ಥಳಗಳನ್ನು ತೊರೆದು ಒಳನಾಡಿಗೆ ತಲುಪಿ ಹೊಸ ಹೊಸ ವಾಸಸ್ಥಳಗಳನ್ನು ನಿರ್ವಿುಸಿಕೊಳ್ಳಲು ಸಮಯಾವಕಾಶ ಧಾರಾಳವಾಗಿಯೇ ಸಿಕ್ಕಿದೆ. ಅಂದರೆ 40,000- 35,000 ವರ್ಷಗಳ ಹಿಂದೆ ಭಾಷೆಯ ಆವಿಷ್ಕಾರದೊಂದಿಗೆ ಈ ಭೂಮಿಯ ವಿವಿಧೆಡೆ ಏಕಕಾಲದಲ್ಲಿ ಆರಂಭವಾದ ಮಾನವನ ನಾಗರಿಕ ಬದುಕು ಅಲ್ಲಿಂದೀಚೆಗೆ ಆಗಾಗ ಸ್ಥಳ ಬದಲಾವಣೆಯೊಂದಿಗೆ ಅನೂಚಾನವಾಗಿ ಸಾಗಿಬಂದಿದೆ ಎಂದೆ? ಇಲ್ಲ. ಈ ನಡುವೆ ಯೊಮ್ಮೆ ಮಾನವ ಕುಲಕ್ಕಿರಲಿ ಭೂಮಿಗೇ ಮಾರಣಾಂತಿಕ ಹೊಡೆತವೊಂದು ಬಿದ್ದಿದೆ.

ನಮ್ಮ ಸೌರವ್ಯೂಹದಾಚೆಗೆ ಊರ್ಟ್ ಕ್ಲೌಡ್ ಅಥವಾ ಓಪಿಕ್ ಊರ್ಟ್ ಕ್ಲೌಡ್ ಎಂಬ ಅಗಾಧ ವಿಸ್ತಾರದ ಧೂಳು ಮತ್ತು ಹಿಮದ ಪ್ರದೇಶವಿದೆ. ಅದು ಟ್ರಿಲಿಯನ್​ಗಟ್ಟಲೆ ಧೂಮಕೇತುಗಳ ಜನ್ಮಸ್ಥಳ. ಅಲ್ಲಿಯೇ ಹರಿದಾಡುವ ಅವುಗಳಲ್ಲಿ ಕೆಲವು ತಪ್ಪಿಸಿಕೊಂಡು ಹೊರಬಂದು ಅತ್ತಿತ್ತ ಅಲೆದಾಡುವುದೂ ಉಂಟು. ಕೆಲವಂತೂ ನಮ್ಮ ಸೌರವ್ಯೂಹವನ್ನು ಸುತ್ತುಹಾಕಿ ಹೋಗುತ್ತವೆ. ಅವು ನಿಗದಿತ ಸಮಯಕ್ಕೇ ಬರುತ್ತಲೂ ಇರುತ್ತವೆ. ಪ್ರತಿ 75-79 ವರ್ಷಗಳಿಗೊಮ್ಮೆ ಇತ್ತ ಬರುವ ಹ್ಯಾಲಿ ಧೂಮಕೇತು ನಿಮಗೆ ಗೊತ್ತಿರಬೇಕಲ್ಲ? ಅಂತಹ ಒಂದು ದಾರಿ ತಪ್ಪಿದ ಧೂಮಕೇತು 20 ಸಾವಿರ ವರ್ಷಗಳ ಹಿಂದೆ ಇತ್ತ ಬಂತು. ಮುಂದಿನ ಏಳು ಸಾವಿರ ವರ್ಷಗಳಲ್ಲಿ ಅದು ತನ್ನ ಒಂದೊಂದು ಭೇಟಿಯಲ್ಲೂ ಭೂಮಿಗೆ ಹತ್ತಿರಾಗುತ್ತಾ ಬಂದು 12,800 ವರ್ಷಗಳ ಹಿಂದೆ ಭೂಮಿಯ ಕಕ್ಷೆಗೆ ಪ್ರವೇಶಿಸಿ ಅದರ ಪ್ರಭಾವದಿಂದ ಐದು ಚೂರುಗಳಾಗಿ ಸಿಡಿಯಿತು. ಎಲ್ಲಕ್ಕಿಂತ ದೊಡ್ಡದು ಇಂದಿನ ಉತ್ತರ ಕೆನಡಾಗೆ ಅಪ್ಪಳಿಸಿತು. ಮಧ್ಯಮ ಗಾತ್ರದ ಇನ್ನೆರಡು ಉತ್ತರ ಯೂರೋಪ್ ಮತ್ತು ಸಿರಿಯಾ ಮೇಲೆ ಬಿದ್ದವು. ಆ ಮಾರಣಾಂತಿಕ ಹೊಡೆತಗಳ ಪರಿಣಾಮದಿಂದಾಗಿ ಏಕಾಏಕಿ ಏರಿದ ತಾಪಮಾನ ಧ್ರುವಗಳದ್ದನ್ನಷ್ಟೇ ಅಲ್ಲ, ಇಂದಿನ ಪಾಕ್ ಆಕ್ರಮಿತ ಕಾಶ್ಮೀರ ಮತ್ತು ‘ಮೂರನೆಯ ಧ್ರುವ’ ಎಂದು ಕರೆಸಿಕೊಳ್ಳುವ ನಮ್ಮ ಸಿಯಾಚಿನ್ ಹಿಮನದಿ ಪ್ರದೇಶದ ಬಹುಪಾಲು ಹಿಮರಾಶಿಯನ್ನು ಕ್ಷಿಪ್ರಕಾಲದಲ್ಲಿ ಕರಗಿಸಿಬಿಟ್ಟಿತು. ಆಗ ಈ ಭೂಗ್ರಹದಲ್ಲಾದದ್ದು ಜಲಪ್ರಳಯ. ಆ ಮಹಾ ದುರಂತದ ಪರಿಣಾಮ ಸಿಂಧೂ-ಸರಸ್ವತಿ ನಾಗರಿಕತೆ ಸೇರಿದಂತೆ ಮಾನವ ಬದುಕಿನ ಮೇಲೆ ಎಸಗಿದ ಪರಿಣಾಮವನ್ನು ಲೇಖನದ ಅಂತಿಮ ಭಾಗದಲ್ಲಿ ನೋಡೋಣ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net