

ಪ್ರಸಕ್ತ ಬೆಳವಣಿಗೆಗಳಲ್ಲಿ ಮೆಲ್ನೋಟಕ್ಕೆ ಕಾಣುವುದು- ಇಮ್ರಾನ್ ಸೇನೆಯ ಬೆಂಬಲ ಕಳೆದುಕೊಂಡರು ಎಂದು ಅರಿವಾದೊಡನೇ ‘ತೋಳ ಹಳ್ಳಕ್ಕೆ ಬಿದ್ದರೆ ಆಳಿಗೊಂದು ಕಲು’ ಎಂಬಂತೆ ವಿರೋಧಪಕ್ಷಗಳು ಅವರ ಮೇಲೆ ಏರಿಹೋದವು, ಅವಿಶ್ವಾಸ ಮತ ಮಂಡಿಸಿ, ಸಂಖ್ಯಾಶಕ್ತಿಯನ್ನೂ ಕೂಡಿಸಿಕೊಂಡು ಅಂತಿಮ ಪ್ರಹಾರ ಎಸಗಿದವು, ಪ್ರತಿಯಾಗಿ ಏನೇನೋ ತಲೆಕೆಟ್ಟ ‘ಪೊಲಿಟಿಕಲ್ ಇನ್ಸ್ವಿಂಗರ್’ನ ಮೊರೆಹೋದ ಇಮ್ರಾನ್ ಖಾನ್ ಅವಮಾನಿತರಾಗಿ ಅಧಿಕಾರದಿಂದ ಹೊರದೂಡಲ್ಪಟ್ಟರು ಎಂದು.
ಮೇಲ್ನೋಟಕ್ಕೆ ಇದೆಲ್ಲವೂ ನಿಜವೇ. ಇಂಟರ್ ಸರ್ವೀಸಸ್ ಇಂಟಲಿಜೆನ್ಸ್ (ಐಎಸ್ಐ)ನ ಹೊಸ ನಿರ್ದೇಶಕನ ನೇಮಕಾತಿಯಲ್ಲಿ ಸೇನಾದಂಡನಾಯಕ ಜನರಲ್ ಕಮರ್ ಜಾವೆದ್ ಬಾಜ್ವಾರ ಇಷ್ಟಕ್ಕೆ ವಿರೋಧವಾಗಿ ನಡೆದುಕೊಂಡ ಇಮ್ರಾನ್ ಖಾನ್ ವಿರುದ್ಧ ಸೇನೆ ಮೂಲಭೂತವಾದಿ ತೆಹ್ರೀಕ್-ಎ-ಲಬ್ಬಾಯಿಕ್ ಪಾಕಿಸ್ತಾನ್ (ಟಿಎಲ್ಪಿ) ಅನ್ನು ಛೂಬಿಟ್ಟಿತು. ಟಿಎಲ್ಪಿ ಎಬ್ಬಿಸಿದ ದಾಂಧಲೆಗಳಿಂದ ಕಂಗೆಟ್ಟ ಇಮ್ರಾನ್ಗೆ ಆಗ ಪಾಕಿಸ್ತಾನದಲ್ಲಿ ಯಾರು ‘ಬಾಸ್’ ಎಂದು ಅರಿವಾಯಿತು, ಬಾಜ್ವಾ ಹೇಳಿದೆಡೆ ಸಹಿ ಹಾಕಿದರು. ಕ್ರಿಕೆಟ್ಟೇ ಬೇರೆ, ಪಾಕಿಸ್ತಾನೀ ರಾಜಕೀಯವೇ ಬೇರೆ!
ಪ್ರಧಾನಿ ಮತ್ತು ಸೇನೆಯ ನಡುವೆ ‘ಎಲ್ಲವೂ’ ಸರಿಯಿಲ್ಲ ಎಂದು ತಿಳಿದೊಡನೇ ವಿರೋಧಪಕ್ಷಗಳು ಒಟ್ಟುಗೂಡಿ ಇಮ್ರಾನ್ ವಿರುದ್ಧ ನಿಂತವು. ನಿನ್ನೆಯವರೆಗೂ ಕಚ್ಚಾಡುತ್ತಿದ್ದ ಅವೆಲ್ಲವೂ ಹೀಗೆ ಒಟ್ಟುಗೂಡಿದ್ದರ ಹಿಂದಿನ ರಹಸ್ಯ ಅವುಗಳಿಗೆ ಸೇನೆ ಕೃಪೆ ಹಾಗೂ ಸಹಕಾರಗಳೆರಡನ್ನೂ ನೀಡಿದ್ದು. ತಾವು ಒಳ್ಳೆಯವರೆಂದೂ, ಪಾಕಿಸ್ತಾನದ ಒಳಿತಿಗಾಗಿ ಜೀವ ಮುಡಿಪಾಗಿಟ್ಟವರೆಂದೂ, ಆ ಕಾರಣದಿಂದಾಗಿಯೇ ಸೇನೆ ತಮ್ಮ ಪರವಾಗಿ ನಿಲ್ಲಬೇಕೆಂದೂ ಬಗೆಬಗೆಯಾಗಿ ಹಲುಬಿದ ಇಮ್ರಾನ್ ಖಾನ್ ತಮಗೆ ವಾಸ್ತವಪ್ರಜ್ಞೆ ಇಲ್ಲದ್ದರ ಜತೆಗೆ ಪಾಕಿಸ್ತಾನದ ರಾಜಕೀಯದಲ್ಲಿ ತಾವೆಷ್ಟು ಅನನುಭವಿ ಎನ್ನುವುದನ್ನೂ ಜಗಜ್ಜಾಹೀರು ಮಾಡಿದರು. ಆಮೇಲೆ ಇಮ್ರಾನ್ ಖಾನ್ ಅಧಿಕಾರದಿಂದ ಹೊರದೂಡಲ್ಪಟ್ಟದ್ದು ಬಹಿರಂಗ ಘಟನೆಯಾದರೆ ಜನರಲ್ ಬಾಜ್ವಾರಿಂದ ತಮ್ಮ ನಿವಾಸದಲ್ಲೇ ಕಪಾಳಮೋಕ್ಷ ಮಾಡಿಸಿಕೊಂಡರು ಎನ್ನುವುದು ‘ಪಾಕತ್ತಲ ರಾತ್ರಿ’ಯ ರಹಸ್ಯ ಘಟನೆಯಂತೆ. ಈಗ ಇಮ್ರಾನ್ ಖಾನ್ ಭಾಷಣ ಮಾಡಿಕೊಂಡು ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಅಲೆದಾಡುತ್ತಿದ್ದಾರೆ. ಅವರ ಮುಖದಲ್ಲಿ ನೋವು, ಅಸಹಾಯಕತೆ, ಸಿಟ್ಟು, ರೋಷ, ಹತಾಶೆ ಮತ್ತು ಗೊಂದಲ ಮೇಳೈಸಿವೆ.
ಪಾಕಿಸ್ತಾನದಲ್ಲಿ ನಡೆದದ್ದು, ನಡೆಯುತ್ತಿರುವುದು ಇಷ್ಟೇಯೇ? ಹಾಗಿರಲಾರದು. ಇಂದು ಅಲ್ಲಿ ತೆರೆಯ ಹಿಂದೆ ಏನು ನಡೆಯುತ್ತಿದೆಯೆಂದು ತಿಳಿಯಲು ಸ್ವಲ್ಪ ಇತಿಹಾಸದ ತೆರೆಯನ್ನು ಸರಿಸೋಣ.
ಕಾಶ್ಮೀರ ತನಗೆ ಪೂರ್ಣವಾಗಿ ಸೇರುವವರೆಗೂ 1947ರ ದೇಶವಿಭಜನೆಯ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಎನ್ನುವುದು ಪಾಕಿಸ್ತಾನದ ನೀತಿ; ಅದಕ್ಕನುಗುಣವಾಗಿ ಅದು 1947-48, 1965 ಮತ್ತು 1999ರಲ್ಲಿ ಭಾರತದ ವಿರುದ್ಧ ಕಾಲುಕೆರೆದು ಯುದ್ಧಕ್ಕಿಳಿದಿದೆ ಎನ್ನುವುದು ಎಲ್ಲರಿಗೂ ಗೊತ್ತಿರುವಂತಹದೇ. ಆದರೆ ಬಹುತೇಕರಿಗೆ ಗೊತ್ತಿಲ್ಲದಿರುವುದು ಕಾಶ್ಮೀರವನ್ನು ಭಾರತದೊಂದಿಗೆ ಹಂಚಿಕೊಂಡು ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಲು ಒಬ್ಬರಿಗಿಂತಲೂ ಹೆಚ್ಚು ಪಾಕ್ ನಾಯಕರು ಮನಸ್ಸು ಮಾಡಿದ್ದರು ಎನ್ನುವುದು.
1947-48ರ ಮೊದಲ ಯುದ್ಧದಲ್ಲಿ ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನದ ವಶದಲ್ಲೇ ಬಿಟ್ಟು ಕದನವಿರಾಮ ಘೊಷಿಸಿದ ಭಾರತ ಆ ಮೂಲಕ ನೀಡಿದ ಸಂದೇಶ ಕಾಶ್ಮೀರವನ್ನು ಪಾಕಿಸ್ತಾನದ ಜತೆ ಹಂಚಿಕೊಳ್ಳಲು ತಾನು ತಯಾರು ಎಂದು. ಇದಕ್ಕೆ ಪಾಕಿಸ್ತಾನದ ಮೊದಲ ಸ್ಪಷ್ಟ ಸಕಾರಾತ್ಮಕ ಪ್ರತಿಕ್ರಿಯೆ ಬರತೊಡಗಿದ್ದು 1956ರಲ್ಲಿ. ಆಗ ನಡೆದ ಮಾತುಕಥೆಗಳಲ್ಲಿ ಪಾಕ್ ಅಧ್ಯಕ್ಷ ಜನರಲ್ ಇಸ್ಕಂದರ್ ಮಿರ್ಜಾ ಶ್ರೀನಗರವನ್ನು ಭಾರತದ್ದೆಂದೇ ಮಾನ್ಯಮಾಡಲು ಮನಸ್ಸು ಮಾಡಿದರು. ಆ ದೇಶದಲ್ಲಿ ಗವರ್ನರ್ ಜನರಲ್/ಅಧ್ಯಕ್ಷರ ಮಾತೇ ಅಂತಿಮವಾಗಿದ್ದ ದಿನಗಳವು. ಆ ಮಾತುಕತೆಗಳ ಪ್ರಕಾರ ಹೊಸ ಗಡಿ ಶ್ರೀನಗರ ಮತ್ತು ವುಲಾರ್ ಸರೋವರಗಳ ನಡುವೆ ಸಾಗಬೇಕಾಗಿತ್ತು. ಶ್ರೀನಗರಕ್ಕೆ ಪ್ರತಿಯಾಗಿ ಬಾರಾಮುಲ್ಲಾ ಸೇರಿದಂತೆ ವುಲಾರ್ನಾಚೆಯ ಪ್ರದೇಶಗಳನ್ನು ಶಾಶ್ವತವಾಗಿ ಪಾಕಿಸ್ತಾನಕ್ಕೆ ನೀಡಲು ಪ್ರಧಾನಿ ನೆಹರೂ ಸಹಾ ತಯಾರಾದರು. ಇಬ್ಬರೂ ನಾಯಕರ ಈ ಚಿಂತನೆಗಳು ಕಾಶ್ಮೀರ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸಿ ಮೈತ್ರಿಯ ಹೊಸ ಶಕೆಗೆ ನಾಂದಿಹಾಡುವಂತಿದ್ದವು.
ಆದರೆ ಮಾತುಕತೆಗಳು ಅಂತಿಮ ಹಂತ ತಲುಪುತ್ತಿದ್ದಂತೇ ಪಾಕಿಸ್ತಾನದಲ್ಲಿ ಸೇನಾಕ್ರಾಂತಿಯಾಯಿತು. ಇಸ್ಕಂದರ್ ಮಿರ್ಜಾರನ್ನು ಸತ್ತೆಯಿಂದ ಇಳಿಸಿದ ಜನರಲ್ ಅಯೂಬ್ ಖಾನ್ ಅಧ್ಯಕ್ಷರನ್ನು ವಿಮಾನದಲ್ಲಿ ಕೂರಿಸಿ ಲಂಡನ್ಗೆ ಅಟ್ಟಿಬಿಟ್ಟರು, ಇನ್ನೆಂದೂ ಪಾಕಿಸ್ತಾನಕ್ಕೆ ಹಿಂತಿರುಗಕೂಡದೆಂಬ ತಾಕೀತಿನೊಂದಿಗೆ! ಅಲ್ಲಿಗೆ ಮಿರ್ಜಾ-ನೆಹರೂ ಶಾಂತಿ ಮಾತುಕತೆಯೂ ಗಡಿಪಾರಾಗಿ ಎತ್ತಲೋ ಹೊರಟುಹೋಯಿತು, ಕಾಶ್ಮೀರ ಸಮಸ್ಯೆಯಾಗಿಯೇ ಮುಂದುವರಿಯಿತು. ಅಯೂಬ್ ಖಾನ್ ಮತ್ತು ಜುಲ್ಪೀಕರ್ ಆಲಿ ಭುಟ್ಟೋ 1965ರಲ್ಲಿ ಎರಡನೆಯ ಕಾಶ್ಮೀರ ಯುದ್ಧವನ್ನಾರಂಭಿಸಿದರು.
ಏಳು ವರ್ಷಗಳು ಗತಿಸಿಹೋದವು. ಮತ್ತೊಂದು ಯುದ್ಧದಲ್ಲಿ ಸೋತು, ಪೂರ್ವಭಾಗವನ್ನು ಕಳೆದುಕೊಂಡ ಪಾಕಿಸ್ತಾನ ಸೇನೆಯನ್ನು ಮೂಲೆಗೊತ್ತರಿಸಿ ಅಧಿಕಾರವನ್ನು ಪೂರ್ಣವಾಗಿ ಭುಟ್ಟೋರ ಕೈಗೆ ಹಾಕಿತು. ನಂತರ ಶಿಮ್ಲಾದಲ್ಲಿ ಭೇಟಿಯಾದ ಇಂದಿರಾ ಗಾಂಧಿ ಮತ್ತು ಭುಟ್ಟೋ ಕಾಶ್ಮೀರವನ್ನು ಶಾಶ್ವತವಾಗಿ ಹಂಚಿಕೊಳ್ಳುವ ಬಗ್ಗೆ ತೀರ್ವನಕ್ಕೆ ಬಂದರು. ಈಗ ಭಾರತದ ನೀತಿಯಲ್ಲಿ ಒಂದು ಬದಲಾವಣೆಯಾಗಿತ್ತು. ತನ್ನ ತಂದೆಗಿಂತಲೂ ಹೆಚ್ಚು ರಾಷ್ಟ್ರನಿಷ್ಠೆಯನ್ನೂ, ವಿವೇಕವನ್ನೂ ಹೊಂದಿದ್ದ ಇಂದಿರಾ ವುಲಾರ್ ಸರೋವರ, ಬಾರಾಮುಲ್ಲಾ ಪಟ್ಟಣ ಯಾವುದನ್ನೂ ಕೊಡುವುದಿಲ್ಲ; ಜತೆಗೆ ಯುದ್ಧದಲ್ಲಿ ನಾವು ಗೆದ್ದುಕೊಂಡಿರುವ ಆಯಕಟ್ಟಿನ ಹಾಜಿಪೀರ್ ಮತ್ತು ಕಾರ್ಗಿಲ್ ಪರ್ವತಪ್ರದೇಶಗಳನ್ನೂ ಹಿಂತಿರುಗಿಸುವುದಿಲ್ಲ; ಹೊಸ ನಿಯಂತ್ರಣ ರೇಖೆ ಹೇಗಿದೆಯೋ ಹಾಗೇ ಪಾಕಿಸ್ತಾನ ಒಪ್ಪಿಕೊಳ್ಳಬೇಕು, ಅದೇ ಅಂತಾರಾಷ್ಟ್ರೀಯ ಗಡಿ ಎಂದು ನೇರವಾಗಿ, ಸ್ಪಷ್ಟವಾಗಿ ಹೇಳಿದರು. ‘ಭಾರತದೊಂದಿಗೆ ಸಾವಿರ ವರ್ಷಗಳು ಯುದ್ಧ ನಡೆಸುತ್ತೇವೆ’ ಎಂದು ಹಿಂದೊಮ್ಮೆ ಕೂಗಾಡಿದ್ದ ಭುಟ್ಟೋಗೆ ಈಗ ಅಂತಹ ಧೈರ್ಯವಿರಲಿಲ್ಲ. ಎಲ್ಲ ಬಗೆಯಲ್ಲೂ ಸೋತಿದ್ದ ಅವರು ಇಂದಿರಾರ ಮಾತನ್ನು ಒಪ್ಪಿಕೊಂಡರು. ಈ ಯೋಜನೆಯ ಹಂತಹಂತದ ಅನುಷ್ಠಾನಕ್ಕೆ ಪೂರಕವಾಗುವಂತೆ ಎರಡೂ ದೇಶಗಳು ತಂತಮ್ಮ ವಶದಲ್ಲಿನ ಕಾಶ್ಮೀರಗಳನ್ನು ತಂತಮ್ಮಲ್ಲೇ ಅಂತರ್ಗತಗೊಳಿಸಿಕೊಳ್ಳಲು ಆರಂಭಿಸಬೇಕೆಂದೂ, ಒಂದು ದೇಶದ ಕ್ರಮದ ಬಗ್ಗೆ ಇನ್ನೊಂದು ದೇಶ ಆಕ್ಷೇಪವೆತ್ತಕೂಡದೆಂದೂ ಇಬ್ಬರು ನೇತಾರರು ಒಮ್ಮತಕ್ಕೆ ಬಂದರು. ಅದರಂತೆ ಎಲ್ಲವೂ ನಡೆಯತೊಡಗಿತು ಕೂಡಾ.
ಮತ್ತೆ ಐದು ವರ್ಷಗಳು ಕಳೆದವು. 1971ರ ಯುದ್ಧದ ಸೋಲಿನ ನಂತರ ಮೂಲೆಗುಂಪಾಗಿ, ನಾಗರಿಕ ಸರ್ಕಾರದ ಕೃಪಾಕಟಾಕ್ಷದಲ್ಲಿ ಜೀವ ಹಿಡಿದುಕೊಂಡಿದ್ದ ಪಾಕ್ ಸೇನೆ ಮತ್ತೆ ಚಿಗಿತುಕೊಂಡು ಭುಟ್ಟೋರನ್ನೇ ಉರುಳಿಸಿ ಗಲ್ಲಿಗೇರಿಸಿಯೂಬಿಟ್ಟಿತು. ಜನರಲ್ ಜಿಯಾ-ಉಲ್-ಹಖ್ 1984ರಲ್ಲಿ ಸಿಯಾಚಿನ್ ಮೇಲೆ ನಿಯಂತ್ರಣ ಸಾಧಿಸಲು ಯತ್ನಿಸಿ ಸೋತು, ಕಾರ್ಗಿಲ್ ಅನ್ನೇ ವಶಪಡಿಸಿಕೊಂಡು ಸಿಯಾಚಿನ್ಗೂ ಭಾರತಕ್ಕೂ ಇರುವ ಸಂಪರ್ಕವನ್ನೇ ಕತ್ತರಿಸಬೇಕೆಂದು ಭಾರಿ ಯೋಜನೆಯನ್ನೇ ಹಾಕಿದರು. ಆದರೆ ಇಂದಿರಾರ ಉಗ್ರ ಪ್ರತಿಕ್ರಿಯೆಯಿಂದ ಅವರು ತಮ್ಮ ಯೋಚನೆಯ ನಿರರ್ಥಕತೆಯನ್ನು ಅರಿತರು, ಕಾಶ್ಮೀರವನ್ನು ಭಾರತದೊಂದಿಗೆ ಹಂಚಿಕೊಂಡು ಸಮಸ್ಯೆಯನ್ನು ಪರಿಹರಿಸಿಬಿಡಲು ರಾಜೀವ್ ಗಾಂಧಿಯವರೊಂದಿಗೆ ಮಾತುಕತೆಗೆ ಮುಂದಾದರು. ಆ ಪ್ರಕಾರ ಒಪ್ಪಂದವೊಂದರ ಕರಡೂ 1987ರಲ್ಲಿ ತಯಾರಾಯಿತು. ಆದರೆ ಅನೂಹ್ಯ ಕಾರಣಗಳಿಂದಾಗಿ ಅಂತಿಮ ಒಪ್ಪಂದ ಮುಂದಕ್ಕೆ ಹೋಯಿತು. ಪ್ರತಿಯೊಂದಕ್ಕೂ ಅದರದೇ ಆದ ಮುಹೂರ್ತವೊಂದಿರುತ್ತದಂತೆ. ಆ ಮುಹೂರ್ತ ಮೀರಿದರೆ ಎಲ್ಲ ತಯಾರಿಯೂ ವ್ಯರ್ಥ. ಇಲ್ಲೂ ಹಾಗೇ ಆಯಿತು. ಆಗಸ್ಟ್ 1988ರಲ್ಲಿ ಜಿಯಾ ಹತ್ಯೆಗೀಡಾದರು. ಬಹವಾಲ್ಪುರದಲ್ಲಿ ಅವರು ಹತ್ತಿದ ವಿಮಾನದೊಳಗೆ ಕೊನೇಗಳಿಗೆಯಲ್ಲಿ ಮಾವಿನಹಣ್ಣುಗಳು ಎಂದು ಹೇಳಿ ‘ಯಾರೋ’ ತಂದಿಟ್ಟ ಪೆಟ್ಟಿಗೆಯಲ್ಲಿ ಬಾಂಬ್ಗಳಿದ್ದವು. ಅವು ಸಿಡಿದಾಗ ಜಿಯಾ ಜತೆಗೆ ಅವರು ರಾಜೀವ್ ಜತೆಗೆ ಮಾಡಿಕೊಳ್ಳಬೇಕಾಗಿದ್ದ ಒಪ್ಪಂದವೂ ಹತ್ಯೆಗೀಡಾಯಿತು.
ನಂತರ ಚುನಾವಣೆಗಳ ಮೂಲಕ ಪ್ರಧಾನಿಯಾದ ಬೆನಜೀರ್ ಭುಟ್ಟೋ ಭಾರತದೊಂದಿಗೆ ಸ್ನೇಹವೃದ್ಧಿಯ ಬಗ್ಗೆ ದೊಡ್ಡದೊಡ್ಡ ಮಾತಾಡುತ್ತಲೇ ಕಾಶ್ಮೀರವನ್ನು ಆತಂಕವಾದದ ಪ್ರಪಾತಕ್ಕೆ ನೂಕಿದರು, ‘ಭಾರತದೊಂದಿಗೆ ಒಂದುಸಾವಿರ ವರ್ಷಗಳವರೆಗೆ ಯುದ್ಧ ಮಾಡುತ್ತೇವೆ’ ಎಂದು ತನ್ನ ತಂದೆ ಹೇಳಿದ್ದ ಮಾತನ್ನು ಸೀಳುಕಂಠದಲ್ಲಿ ಪುನರುಚ್ಚರಿಸಿದರು! ಆಮೇಲೆ ಸೇನಾದಂಡನಾಯಕರಾದ ಪರ್ವೆಜ್ ಮುಷರ್ರಫ್ ಕೈಗೆ ಒಂದೂವರೆ ದಶಕದ ಹಿಂದೆ ಜಿಯಾ ತಯಾರಿಸಿದ್ದ ಕಾರ್ಗಿಲ್ ಆಕ್ರಮಣ ಯೋಜನೆಯ ಕಾಗದಪತ್ರಗಳು ಸಿಕ್ಕಿಬಿಟ್ಟವು, ಕಾರ್ಗಿಲ್ ಕದನ ನಡೆಹುಹೋಯಿತು.
ಭಾರತೀಯ ಸೇನೆಯಿಂದ ಮುಖಭಂಗವನ್ನಷ್ಟೇ ಅಲ್ಲ, ಜಗತ್ತಿನಿಂದಲೂ ಛೀಮಾರಿ ಹಾಕಿಸಿಕೊಂಡ ಮುಷರ್ರಫ್ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಅಂದುಕೊಂಡು ಕೆಲಕಾಲ ಒಂದಷ್ಟು ರಾಜತಾಂತ್ರಿಕ ಆಟಗಳನ್ನು ಆಡಿದರು. ಅದೇನೂ ನಡೆಯುವುದಿಲ್ಲ ಎಂದು ಅರಿವಾದಾಗ ನಮ್ಮ ಮನಮೋಹನ್ ಸಿಂಗ್ ಸರ್ಕಾರದ ಜತೆ ಗುಪ್ತ ಮಾತುಕತೆಗಳ ದಾರಿಗಿಳಿದರು. ಆ ಪ್ರಯತ್ನಗಳು 2006-07ರಲ್ಲಿ ಅಂತಿಮ ಹಂತ ತಲುಪಿ ಕಾಶ್ಮೀರ ಸಮಸ್ಯೆಯನ್ನು ಶಾಶ್ವತವಾಗಿ ಪರಿಹರಿಸುವ ಒಪ್ಪಂದವೊಂದಕ್ಕೆ ತಯಾರಿ ನಡೆಯಿತು.
ಆದರೆ ಹಿಂದಿನ ಎಲ್ಲಾ ಸೇನಾಸರ್ವಾಧಿಕಾರಿಗಳಿಗಿಂತಲೂ ಉದಾರಿಯಾದ, ಮುಕ್ತ ಚುನಾವಣೆಗಳನ್ನು ನಡೆಸಿ ಸಂಸತ್ತಿನ ರಚನೆಗೆ, ಪ್ರಧಾನಮಂತ್ರಿ ನೇತೃತ್ವದ ಸರ್ಕಾರಕ್ಕೆ ಅನುವುಮಾಡಿಕೊಟ್ಟ ಮುಷರ್ರಫ್ರಿಗೆ ಸೇನೆ, ರಾಜಕೀಯ ಪಕ್ಷಗಳು ಒಟ್ಟುಗೂಡಿ ಎಂತಹ ಕೋಟಲೆಗಳನ್ನು ತಂದೊಡ್ಡಿದವೆಂದರೆ ಆ ಬಲಾಢ್ಯ ಅಧ್ಯಕ್ಷ ಅಧಿಕಾರ ತೊರೆದು ತನ್ನದೇ ಫಾಮರ್್ಹೌಸ್ನಲ್ಲಿ ಇಲಿಯಂತೆ ಅಡಗಿಕೊಳ್ಳಬೇಕಾಯಿತು. ಅವಕಾಶ ಸಿಕ್ಕಿದ್ದೇ ಅವರು ದೇಶವನ್ನೇ ಬಿಟ್ಟು ಓಡಿಹೋದರು. ಇನ್ನು ಅವರ ಮಹತ್ವಾಕಾಂಕ್ಷಿ ಕಾಶ್ಮೀರ ಒಪ್ಪಂದದ ಗತಿ ಏನಾಯಿತೆಂದು ಹೇಳಬೇಕಾಗಿಲ್ಲ ಅಲ್ಲವೇ?
ಅನಂತರ ಭಾರತದ ಬಗ್ಗೆ ಒಳ್ಳೆಯ ಮಾತಾಡುವ ನೇತಾರರೊಬ್ಬರು ಪಾಕಿಸ್ತಾನದಲ್ಲಿ ಅವತರಿಸಿದ್ದು ಇಮ್ರಾನ್ ಖಾನ್ ಪ್ರಧಾನಿಯಾಗಿ ಮೂರು ವರ್ಷ ಪೂರ್ಣಗೊಳಿಸಿದ ನಂತರ. ಮೊದಲಿಗೆ ನಮ್ಮ ಪ್ರಧಾನಿ ನರೇಂದ್ರ ಮೋದಿಯವರನ್ನು ‘ಸಣ್ಣ ಮನುಷ್ಯ’ ಎಂದು ಕರೆದು ಸಣ್ಣತನ ತೋರಿದ, ಕಾಶ್ಮೀರದ ಜತೆಗೆ ಜುನಾಗಡವನ್ನೂ ಪಾಕಿಸ್ತಾನದ ಭಾಗವಾಗಿ ತೋರಿಸುವ ನಕ್ಷೆಗಳನ್ನು ತಯಾರಿಸಿ ನಗೆಪಾಟಲಿಗೀಡಾದ ಇಮ್ರಾನ್ ಖಾನ್ ಇದೇ ಜನವರಿಯಲ್ಲಿ ಯಾರೂ ಕಂಡುಕೇಳರಿಯದಿದ್ದ ನಡೆಯೊಂದಕ್ಕೆ ಮುಂದಾದರು. ಅವರ ಸರ್ಕಾರ ಜನವರಿ 20, 2022ರಂದು ಬಿಡುಗಡೆ ಮಾಡಿದ ದೇಶದ ಮೊತ್ತಮೊದಲ ರಾಷ್ಟ್ರೀಯ ಭದ್ರತಾ ನೀತಿ ಹೇಳಿದ್ದು- ‘ರಾಷ್ಟ್ರೀಯ ಭದ್ರತೆಯ ಮೂಲವೇ ಆರ್ಥಿಕ ಭದ್ರತೆ, ಇನ್ನು ಮುಂದೆ ಸೇನೆಯನ್ನು ಪಕ್ಕಕ್ಕಿರಿಸಿ ಜನತೆಯ ಹಿತಕ್ಕೆ ಮಹತ್ವ ಕೊಡುತ್ತೇವೆ, ಭಾರತದೊಂದಿಗೆ ಇನ್ನು ಒಂದುನೂರು ವರ್ಷಗಳವರೆಗೆ ಯುದ್ಧವಾಗದಂತೆ ನೋಡಿಕೊಳ್ಳುವುದು ನಮ್ಮ ಉದ್ದೇಶ, ಭಾರತ-ಪಾಕಿಸ್ತಾನ ಸ್ನೇಹಸಂಬಂಧಗಳ ವೃದ್ಧಿಗೆ ಕಾಶ್ಮೀರ ಸಮಸ್ಯೆಯನ್ನು ಮೊದಲು ಪರಿಹರಿಸಬೇಕಾದ ಅಗತ್ಯವಿಲ್ಲ.’
ಈ ನೀತಿ ಹೊರಬಿದ್ದ ನಾಲ್ಕನೆಯ ದಿನ ಇಮ್ರಾನ್ ಖಾನ್ ವಿರುದ್ಧ ಅವಿಶ್ವಾಸಮತ ಗೊತ್ತುವಳಿ ಮಂಡಿಸುವ ಮಾತು ವಿರೋಧಪಕ್ಷಗಳ ನಾಯಕರಿಂದ ಬಂತು, ಇಮ್ರಾನ್ರನ್ನು ಮನೆಗೆ ಕಳುಹಿಸುತ್ತೇವೆ ಎಂದೂ ಕೆಲವರು ಗುಡುಗಿದರು. ಸೇನೆ ಅವರ ಬೆಂಬಲಕ್ಕೆ ನಿಂತಿತು...ಈಗ ನೀವು ಚುಕ್ಕೆಗಳನ್ನು ಜೋಡಿಸಿ.
ಭಾರತದೊಂದಿಗೆ ಶಾಶ್ವತ ಸ್ನೇಹಕ್ಕಾಗಿ ಪ್ರಯತ್ನಿಸಿದ ಪಾಕ್ ನಾಯಕರೆಲ್ಲರೂ ಅಧಿಕಾರ ಕಳೆದುಕೊಂಡು ದಿಕ್ಕೆಟ್ಟು ಗಡಿಪಾರಾಗಿದ್ದಾರೆ, ಜೀವ ಕಳೆದುಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಇಮ್ರಾನ್ ಖಾನ್ ಹೆಸರು ಹೊಚ್ಚಹೊಸದು. ಮತ್ತು, ಭಾರತ-ಸ್ನೇಹಾಕಾಂಕ್ಷಿ ನಾಯಕರನ್ನು ಕೆಳಗಿಳಿಸಿ ಗದ್ದುಗೆಗೇರಿದ ಪಾಕ್ ನಾಯಕರೆಲ್ಲರೂ (ಮೊದಮೊದಲು) ಅಮೆರಿಕಾಗೆ ಅತಿ ನಿಷ್ಠೆ ತೋರಿದ್ದಾರೆ. ಈ ಪಟ್ಟಿಯಲ್ಲಿ ಹೊಚ್ಚಹೊಸ ಹೆಸರು ಶಾಹ್ಭಾಜ್ ಶರೀಫ್. ಅಮೆರಿಕಾ ಹೇಳಿದಂತೆ ನಾವು ಕೇಳುತ್ತೇವೆ ಎಂದು ಹೇಳಲು ಅವರು ಉಪಯೋಗಿಸಿದ ನುಡಿಗಟ್ಟು- ‘ಭಿಕ್ಷುಕರಿಗೆ ಆಯ್ಕೆಗಳಿಲ್ಲ’.
ನಮ್ಮ ಭಾರತಕ್ಕೂ ಆಯ್ಕೆಗಳಿಲ್ಲ. ಇಂತಹವರೊಂದಿಗೆ ಹೇಗೋ ನಿಭಾಯಿಸಿಕೊಂಡು ಹೋಗಬೇಕು. ಸುಂದರ ನಾಳೆಯ ನಿರೀಕ್ಷೆಯಲ್ಲಿ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)