

ಮೊದಲಿಗೆ ಐಎಂಎಫ್ ಸಾಲ ಬೇಡಿಕೆಯನ್ನೇ ಚರ್ಚೆಗೆತ್ತಿಕೊಳ್ಳೋಣ. ಒಂದು ಕಾಲದಲ್ಲಿ ಏಶಿಯಾ, ಆಫ್ರಿಕಾ, ಲ್ಯಾಟಿನ್ ಅಮೆರಿಕಾದ ಬಹುತೇಕ ದೇಶಗಳು ಆರ್ಥಿಕ ಸಂಕಟದಿಂದ ಪಾರಾಗಲು ಐಎಂಎಫ್ ಮೊರೆಹೋಗುತ್ತಿದ್ದುದು ದಿನನಿತ್ಯದ ಬೆಳವಣಿಗೆಯೇ ಆಗಿತ್ತು. ಆದರೀಗ ಕಾಲ ಬದಲಾಗಿದೆ. ಬದಲಾದದ್ದೆಲ್ಲವೂ ಒಳ್ಳೆಯದೇನಲ್ಲ. ಕೆಲವು ದೇಶಗಳು ಸಂಕಷ್ಟಗಳನ್ನು ಸ್ವಂತವಾಗಿ ಪರಿಹರಿಸಿಕೊಳ್ಳುವ ಅಥವಾ ತಾವು ಹಿಂಬಾಲಿಸುವ ‘ದೊಡ್ಡಣ್ಣಂದಿರಿಂದ’ ನೆರವನ್ನೋ, ಕಡಿಮೆ ಬಡ್ಡಿದರದಲ್ಲಿ ಸಾಲವನ್ನೋ ಪಡೆದು ಬದುಕಿಕೊಳ್ಳುತ್ತವೆ. ಇದು ಒಳ್ಳೆಯ ಮಾರ್ಗ. ಆದರೆ, ಇನ್ನು ಕೆಲವು ಚೀನಾದ ಸವಿಮಾತು ಮತ್ತು ಧೂರ್ತ ‘ಚೆಕ್ ಬುಕ್ ಡಿಪ್ಲೊಮಸಿ’ಗೆ ಬಲಿಬಿದ್ದು ಹೆಚ್ಚು ಬಡ್ಡಿ ದರದಲ್ಲಿ ಅಧಿಕ ಪ್ರಮಾಣದ ಸಾಲ ತೆಗೆದುಕೊಂಡು ಸಾಲಶೂಲಕ್ಕೆ ಸಿಕ್ಕಿಕೊಳ್ಳುತ್ತವೆ. ಅಂತಹ ದೇಶಗಳ ದೊಡ್ಡ ಪಟ್ಟಿಯೇ ಇದೆ. ಇದು ಕಳೆದೊಂದು ದಶಕದಲ್ಲಿ ಜಾಗತಿಕವಾಗಿ ಕಂಡುಬರುತ್ತಿರುವ ದುರಂತ. ಒಟ್ಟಿನಲ್ಲಿ ಐಎಂಎಫ್ ಸಾಲ ಪಡೆಯುವ ದೇಶಗಳೀಗ ಕಡಿಮೆ. ಇಂದು ಅಂತಹ ದೇಶಗಳು ಕೇವಲ ಏಳು; ನಾಲ್ಕು ಆಫ್ರಿಕನ್ ದೇಶಗಳಾದ ಘಾನಾ, ಝಾಂಬಿಯಾ, ತಾಂಝಾನಿಯಾ, ಇಥಿಯೋಪಿಯಾ ಮತ್ತು ಮೂರು ದಕ್ಷಿಣ ಏಶಿಯಾ ದೇಶಗಳಾದ ಪಾಕಿಸ್ತಾನ, ಶ್ರೀಲಂಕಾ ಮತ್ತು ಬಾಂಗ್ಲಾದೇಶ.
ವಿಶೇಷವೆಂದರೆ ಬಾಂಗ್ಲಾದೇಶವನ್ನು ಉಳಿದ ಆರರ ಜತೆ ಹೋಲಿಸಲಾಗುವುದಿಲ್ಲ. ಉಳಿದುವೆಲ್ಲವೂ ಚೀನಾದ ಸಾಲಸಂಕೋಲೆಗೆ ಸಿಲುಕಿ ಯಾವುದೇ ಉತ್ಪನ್ನವಿಲ್ಲದೆ ವಿದೇಶೀ ವಿನಿಮಯದ ಕೊರತೆ ಎದುರಿಸುತ್ತಿರುವ, ಸಾಲವನ್ನೂ ತೀರಿಸಲಾಗದೇ ಬಡ್ಸಿಯನ್ನೂ ಕಟ್ಟಲಾಗದೇ ದಿವಾಳಿಯ ಹಾದಿಗಿಳಿದಿರುವ ದೇಶಗಳು. ಬಾಂಗ್ಲಾದೇಶ ಚೀನಾದ ಸಾಲಸಂಕೋಲೆಗೂ ಸಿಲುಕಿಲ್ಲ, ದಿವಾಳಿಯ ಅಂಚಿನಲ್ಲೂ ಇಲ್ಲ. ಹಾಗಿದ್ದರೆ ಆ ದೇಶಕ್ಕೀಗ ಐಎಂಎಫ್ ಸಾಲ ಯಾಕಾಗಿ ಬೇಕು?
ನಮ್ಮ ಭಾರತೀಯ ಉಪಖಂಡದಲ್ಲಿ ಭಾರತದ ನಂತರ ಆರ್ಥಿಕವಾಗಿ ಅತ್ಯಂತ ಸುಸ್ಥಿತಿಯಲ್ಲಿರುವ ದೇಶ ಬಾಂಗ್ಲಾದೇಶ. ಕಳೆದ ಹಣಕಾಸು ವರ್ಷದಲ್ಲಿ ಅದರ ನಿವ್ವಳ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) 416 ಬಿಲಿಯನ್ ಡಾಲರ್, ಪಾಕಿಸ್ತಾನಕ್ಕಿಂತ ಸುಮಾರು 120 ಬಿಲಿಯನ್ ಡಾಲರ್ ಅಧಿಕ! ಇನ್ನು ವಿದೇಶೀ ವಿನಿಮಯ ಅಂದರೆ ಡಾಲರ್ ಸಂಗ್ರಹ 45 ಬಿಲಿಯನ್ ಡಾಲರ್. ಆಗ ಕೇವಲ 16 ಬಿಲಿಯನ್ ಡಾಲರ್ ಇಟ್ಟುಕೊಂಡು ಗೋಳಾಡುತ್ತಿದ್ದ ಪಾಕಿಸ್ತಾನವನ್ನು ಬಾಂಗ್ಲಾದೇಶದ ಜತೆ ಹೋಲಿಸಲಾಗದು. ಭಾರತ ಮತ್ತು ಬಾಂಗ್ಲಾದೇಶಗಳ ತುಲನೆ ಮಾಡುವುದಾದರೆ ಭಾರತದ ಜಿಡಿಪಿ ಬಾಂಗ್ಲಾದೇಶದ್ದಕಿಂತ ಏಳು ಪಟ್ಟು ಮತ್ತು ವಿದೇಶೀ ವಿನಿಮಯ ಸಂಗ್ರಹ ಹದಿನೈದು ಪಟ್ಟು ದೊಡ್ಡದು. ಆದಾಗ್ಯೂ ಕಳೆದ ವರ್ಷ ಬಾಂಗ್ಲಾದೇಶವು ತಲಾ ವರಮಾನದಲ್ಲಿ ಭಾರತವನ್ನು ಹಿಂದೆ ಹಾಕಿ ಬೀಗಿದ್ದುಂಟು.
ನಿಜವಾಗಿ ಹೇಳುವುದಾದರೆ ಬಾಂಗ್ಲಾದೇಶಕ್ಕೆ ತಲೆಹೋಗುವಂತಹದ್ದೇನೂ ಆಗಿಲ್ಲ. ಆಗದಂತೆ ನೋಡಿಕೊಳ್ಳಲೆಂದೇ ಈಗ ಅದು ಇಟ್ಟಿರುವ ಬುದ್ಧಿವಂತ ಹೆಜ್ಜೆಯೇ ಐಎಂಎಫ್ ಸಾಲ ತೆಗೆದುಕೊಳ್ಳುವುದು. ಅಳಿಲು, ಇಲಿ, ಇರುವೆ ಮುಂತಾದುವು ಮಳೆಗಾಲಕ್ಕಾಗಿ ಊಟ-ತಿಂಡಿಯ ದಾಸ್ತಾನು ಸಂಗ್ರಹಿಸಿಟ್ಟುಕೊಳ್ಳುತ್ತವಲ್ಲಾ ಹಾಗೆ!
ಕಳೆದ ವರ್ಷದ ಜುಲೈನಲ್ಲಿ ಬಾಂಗ್ಲಾದೇಶ ಹೊಂದಿದ್ದ ವಿದೇಶೀ ವಿನಿಮಯ ಸಂಗ್ರಹ 45.48 ಬಿಲಿಯನ್ ಡಾಲರ್. ಅದು ಈ ವರ್ಷದ ಜುಲೈನಲ್ಲಿ 39 ಬಿಲಿಯನ್ಗಿಳಿಯಿತು. ಹೀಗಾದದ್ದು ಮುಖ್ಯವಾಗಿ ಎರಡು ಕಾರಣಗಳಿಂದ. ಬಾಂಗ್ಲಾದೇಶದ ವಿದೇಶೀ ವಿನಿಮಯ ಗಳಿಕೆಗೆ ದೊಡ್ಡ ಕಾಣಿಕೆ ಬರುತ್ತಿದ್ದುದು ಸಿದ್ಧುಡುಪುಗಳ ರಫ್ತು ಮತ್ತು ವಿದೇಶಗಳಲ್ಲಿ ದುಡಿಯುತ್ತಿರುವ ಬಾಂಗ್ಲಾದೇಶೀಯರು ಕಳುಹಿಸುವ ಹಣ. ಈ ಎರಡೂ ಮೂಲಗಳಿಗೆ ಹೊಡೆತ ನೀಡಿದ್ದು ಕೋವಿಡ್ ಮಹಾಮಾರಿ. ಮಹಾಮಾರಿಯಿಂದಾಗಿ ಜಾಗತಿಕವಾಗಿ ವಸ್ತುಗಳಿಗೆ ಬೇಡಿಕೆ ಕುಸಿಯಿತಷ್ಟೆ. ಹೀಗಾಗಿ ವಿದೇಶೀ ಸಿದ್ಧ ಉಡುಪುಗಳ ಮಾರಾಟಗಾರರು ಬಾಂಗ್ಲಾದೇಶದಿಂದ ಅವುಗಳ ಆಮದನ್ನು ಗಣನೀಯವಾಗಿ ತಗ್ಗಿಸಿಬಿಟ್ಟರು. ಜತೆಗೆ ಮಹಾಮಾರಿಯಿಂದಾಗಿ ಲಕ್ಷಾಂತರ ಬಾಂಗ್ಲಾದೇಶೀಯರು ಕೆಲಸ ಕಳೆದುಕೊಂಡು ಸ್ವದೇಶಕ್ಕೆ ಹಿಂತಿರುಗಿದರು. ಆದರೆ, ಸದ್ಯಕ್ಕೆ ಪರಿಸ್ಥಿತಿ ಸುಧಾರಿಸುವ, ಡಾಲರ್ ಗಳಿಕೆ ಮತ್ತೆ ಮಾಮೂಲಿನಂತಾಗುವ ಅವಕಾಶ ಕಾಣದಿರುವುದು ಮತ್ತು ಬದಲಿ ಮೂಲಗಳಿಂದ ವಿದೇಶೀ ವಿನಿಮಯ ಗಳಿಸುವ ಹಾದಿಯೂ ಕಾಣದಿರುವುದು ಬಾಂಗ್ಲಾದೇಶದ ಆತಂಕಕ್ಕೆ ಕಾರಣ. ಆದಾಗ್ಯೂ ಈಗಿರುವ ಸಂಗ್ರಹ ಆರೇಳು ತಿಂಗಳುಗಳ ಆಮದಿಗೆ ಸಾಕಾಗುತ್ತದೆ, ಸ್ವಲ್ಪ ಸೊಂಟಪಟ್ಟಿ ಬಿಗಿಗೊಳಿಸಿಕೊಂಡರೆ ಒಂದು ವರ್ಷವನ್ನೂ ನಿಭಾಯಿಸಬಹುದು.
1971ರಲ್ಲಿ ಪಾಕಿಸ್ತಾನೀ ಸೇನೆಯ ಬರ್ಬರ ಕೃತ್ಯಗಳು ಮತ್ತು ವಿಮೋಚನಾ ಯುದ್ಧದಿಂದಾಗಿ ಜಝುರಿತವಾಗಿ ಉದಯಿಸಿದ ಬಾಂಗ್ಲಾದೇಶ ಮುಂದಿನ ನಾಲ್ಕು ದಶಕಗಳಲ್ಲಿ ತೀವ್ರತರಹದ ಆರ್ಥಿಕ ಸಂಕಷ್ಟಗಳನ್ನು ಅನುಭವಿಸಿತ್ತು. ಮತ್ತೆಮತ್ತೆ ಸರ್ಕಾರಗಳ ಹಿಂಸಾತ್ಮಕ ಉರುಳುವಿಕೆಯಿಂದಾಗಿ ನಿರ್ವಣವಾದ ರಾಜಕೀಯ ಅಸ್ಥಿರತೆ, ಸೇನಾ ಸರ್ವಾಧಿಕಾರಿಗಳ ಆಳ್ವಿಕೆ, ನಂತರದ ಪ್ರಜಾಪ್ರಭುತ್ವ ಕಾಲದಲ್ಲಿ ಭ್ರಷ್ಟಾಚಾರಕ್ಕೆ ಮತ್ತೊಂದು ಹೆಸರಾದ ಬೇಗಂ ಖಲೀದಾ ಜಿಯಾರ ಎರಡು ಅವಧಿಗಳ ಆಳ್ವಿಕೆ ದೇಶವನ್ನು ನಿರಂತರವಾಗಿ ಬಡತನದಲ್ಲಿಟ್ಟಿದ್ದವು. 2009ರಲ್ಲಿ ಎರಡನೆಯ ಬಾರಿಗೆ ಪ್ರಧಾನಮಂತ್ರಿಯಾಗಿ ಇನ್ನೂ ಅದೇ ಸ್ಥಾನದಲ್ಲಿರುವ ಷೇಕ್ ಹಸೀನಾ ವಾಜಿದ್ ಸರ್ವಾಧಿಕಾರಿ ಪ್ರವೃತ್ತಿ ತೋರುತ್ತಿದ್ದರೂ ದೇಶದ ಆರ್ಥಿಕ ಅಭಿವೃದ್ಧಿಗೆ ತೀವ್ರ ಗಮನ ನೀಡುತ್ತಿದ್ದಾರೆ. ಹೀಗಾಗಿಯೇ 1974-2012ರ ಅವಧಿಯಲ್ಲಿ ಆರ್ಥಿಕ ಸಂಕಷ್ಟಗಳಿಂದ ಪಾರಾಗಲು ಹತ್ತು ಸಲ ಐಎಂಎಫ್ ಸಾಲ ಪಡೆದಿದ್ದ ಬಾಂಗ್ಲಾದೇಶ ಕಳೆದ ಹತ್ತು ವರ್ಷಗಳಲ್ಲಿ ಒಮ್ಮೆಯೂ ಅತ್ತ ಹೋಗಿಲ್ಲ. ಹೀಗೆ ಹಸೀನಾರ ಆರ್ಥಿಕ ನೀತಿಗಳು ಮತ್ತು ಪೂರಕ ಜಾಗತಿಕ ಆರ್ಥಿಕ ವಿದ್ಯಮಾನಗಳು ಬಡ ಬಾಂಗ್ಲಾದೇಶವನ್ನು ಉತ್ತಮ ಸ್ಥಿತಿಗೆ ವೇಗವಾಗಿಯೇ ಕೊಂಡೊಯ್ಯತೊಡಗಿದವು. ಆದರೀಗ ಕೋವಿಡ್ ಪೀಡೆ ಪ್ರಗತಿಯನ್ನು ಹಿಂದಕ್ಕೆಳೆಯುತ್ತಿದೆ.
ಜಗತ್ತು ಕರೊನಾ ಪೀಡೆಯಿಂದ ನಿಧಾನವಾದರೂ ಮುಕ್ತವಾಗ ತೊಡಗಿದೆ, ಜಾಗತಿಕ ಅರ್ಥವ್ಯವಸ್ಥೆಯೂ ಮತ್ತೆ ಏರುಹಾದಿಗೆ ಹತ್ತಿದೆ. ಹೀಗಾಗಿ, ಬಾಂಗ್ಲಾದೇಶದ ಪರಿಸ್ಥಿತಿಯೂ ಸುಧಾರಿಸುತ್ತದೆ. ಅಲ್ಲಿಯವರೆಗೆ ಪಾಕಿಸ್ತಾನ ಅಥವಾ ಶ್ರೀಲಂಕಾದ ಹಾದಿಗಿಳಿಯುವಂತಹ ಪರಿಸ್ಥಿತಿ ನಿರ್ವಣವಾಗಬಾರದೆಂದೇ ಆ ದೇಶ ದಶಕದ ನಂತರ ಮತ್ತೆ ಐಎಂಎಫ್ ಬಾಗಿಲು ತಟ್ಟಿದೆ. ಬಾಂಗ್ಲಾದೇಶದ ಇದುವರೆಗಿನ ಟ್ರಾ್ಯಕ್ ರೆಕಾರ್ಡ್ ಸಮರ್ಪಕವಾಗಿಯೇ ಇರುವುದರಿಂದ ಮತ್ತು ಐಎಂಎಫ್ ನೀಡುವ ಹಣವನ್ನು ವ್ಯರ್ಥ ಮಾಡದಷ್ಟು ಬುದ್ಧಿವಂತಿಕೆ ಪ್ರಸಕ್ತ ಬಾಂಗ್ಲಾದೇಶೀ ಸರ್ಕಾರಕ್ಕಿರುವುದರಿಂದ ಸಾಲ ಪಡೆಯುವುದು ಕಷ್ಟವೇನಲ್ಲ. ಸಾಲದೊಂದಿಗೆ ಒಂದಷ್ಟು ಷರತ್ತುಗಳು ಐಎಂಎಫ್ ಲಗತ್ತಿಸಲ್ಪಡಬಹುದಷ್ಟೆ. ಅದರಿಂದ ಸಾಲಗಾರ ದೇಶಗಳಿಗೇ ಒಳಿತಾಗುತ್ತದೆ ಮತ್ತು ಐಎಂಎಫ್ ಕೊಟ್ಟ ಸಾಲ ಬಡ್ಡಿಸಹಿತವಾಗಿ ಅದಕ್ಕೆ ಹಿಂತಿರುಗುತ್ತದೆ. ಇದೆಲ್ಲವೂ ಹೇಳುವುದು ಇಷ್ಟೇ- ಬಾಂಗ್ಲಾ ದೇಶ ಐಎಂಎಫ್ ಸಾಲಕ್ಕಾಗಿ ಬೇಡಿಕೆಯಿತ್ತಿರುವುದು ಆ ದೇಶವೂ ಶ್ರೀಲಂಕಾ ಮತ್ತು ಪಾಕಿಸ್ತಾನಗಳ ಹಾದಿ ಹಿಡಿಯುತ್ತದೆ ಎಂಬ ಕೂಗಿನಲ್ಲಿ ಯಾವ ಹುರುಳೂ ಇಲ್ಲ.
ಇನ್ನು ಎರಡನೆಯ ವಿಷಯಕ್ಕೆ ಹೋಗೋಣ. ‘ಚೀನಾದಿಂದ ಸಾಲ ಪಡೆಯುವುದು ಯಾವ ದೇಶಕ್ಕೂ ಒಳ್ಳೆಯದಲ್ಲ, ಅದನ್ನು ಈಗ ಶ್ರೀಲಂಕಾದ ದುರಂತವೇ ಜಗಜ್ಜಾಹೀರು ಮಾಡಿದೆ’ ಎಂದು ಬಾಂಗ್ಲಾದೇಶದ ಅರ್ಥಮಂತ್ರಿ ಆಸಿಫ್ ಮುಸ್ತಫಾ ಕಮಾಲ್ ಹೇಳಿದ್ದೊಂದು ಸ್ವಾರಸ್ಯಕರ ಬೆಳವಣಿಗೆ. ಮಂತ್ರಿ ಕಮಾಲ್ ಏಕಾಏಕಿ ನಿದ್ದೆಯಿಂದೆದ್ದು ಈ ಮಾತು ಹೇಳಲಿಲ್ಲ. ಅವರದನ್ನು ಹೇಳಿದ್ದು ಚೀನೀ ವಿದೇಶಮಂತ್ರಿ ವಾಂಗ್ ಯಿ ಇದೇ ಆಗಸ್ಟ್ 6ರಂದು ಬಾಂಗ್ಲಾದೇಶ ಭೇಟಿ ಮುಗಿಸಿಕೊಂಡು ಹೊರಹೋದ ಮರುಗಳಿಗೆಯೇ!
ಶ್ರೀಲಂಕಾದಲ್ಲಿ ಹಂಬನತೋಟ ಬಂದರು, ಮಟ್ಟಾಲ ವಿಮಾನ ನಿಲ್ದಾಣ ಮತ್ತು ಕೊಲಂಬೋ ಪೋರ್ಟ್ ಸಿಟಿ ಮತ್ತು ಪಾಕಿಸ್ತಾನದಲ್ಲಿ ಇಡೀ ಚೈನಾ-ಪಾಕಿಸ್ತಾನ್ ಇಕನಾಮಿಕ್ ಕಾರಿಡಾರ್ನಂತಹ ವ್ಯರ್ಥ ಯೋಜನೆಗಳಿಗೆ ಚೀನಾ ಸಾಲ ನೀಡಿ ಆ ದೇಶಗಳನ್ನು ಸಾಲಸಂಕೋಲೆಗೆ ಸಿಲುಕಿಸಿಕೊಂಡಂತೆ ಬಾಂಗ್ಲಾದೇಶವನ್ನೂ ಸಿಲುಕಿಸಿಕೊಳ್ಳಲು ನೋಡಿತ್ತು. ಸೋನಾಧಾ ಬಂದರು ನಿರ್ಮಾಣ ಮಾಡಿಕೊಡುವುದಾಗಿ ಚೀನಾ ಹೇಳಿತು. ಬಾಂಗ್ಲಾದೇಶದಲ್ಲಿ ಈಗಾಗಲೇ ಚಿತ್ತಗಾಂಗ್ ಬಂದರಿದೆ. ಅದರ ಜತೆಗೆ ಜಪಾನೀ ನೆರವಿನಿಂದ ಮಾತಾರ್ಬಾರಿ ಬಂದರನ್ನೂ ಅಭಿವೃದ್ಧಿಪಡಿಸುತ್ತಿದೆ. ಇನ್ನೊಂದು ಬಂದರು ನಿರ್ಮಾಣ ವ್ಯರ್ಥ ಹೂಡಿಕೆಯೇ ಸರಿ. ಕೊಲಂಬೋ ಮತ್ತು ಟ್ರಿಂಕೋಮೆಲೇ ಬಂದುರುಗಳಿದ್ದರೂ ಹಂಬನತೋಟಕ್ಕಾಗಿ ಚೀನಾದಿಂದ ಸಾಲ ಪಡೆದು, ಅದನ್ನು ತೀರಿಸಲಾಗದೇ ಬಂದರನ್ನೇ ಚೀನಾಗೆ ಒಪ್ಪಿಸಿದ ಶ್ರೀಲಂಕಾದ ಮೂರ್ಖತನ ಇಲ್ಲಿ ಒಳ್ಳೆಯ ಉದಾಹರಣೆ. ಇದನ್ನೇ ಬಾಂಗ್ಲಾದೇಶ ಅರ್ಥಮಂತ್ರಿ ಪರೋಕ್ಷವಾಗಿ ಉಲ್ಲೇಖಿಸಿದ್ದು, ಹಂಬನತೋಟವನ್ನು ನುಂಗಿದಂತೇ ಸೋನಾಧಾ ಬಂದರನ್ನು ನುಂಗುವುದು ಚೀನಾದ ಹಂಚಿಕೆ ಎನ್ನುವುದನ್ನು ಅರಿತ ಢಾಕಾ ಸರ್ಕಾರ ಚೀನಾದೊಂದಿಗೆ ಮೊದಲಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ರದು ್ದ ಮಾಡಿತು. ಅದರಿಂದಲೂ ಪಾಠ ಕಲಿಯದ ಚೀನೀ ವಿದೇಶಮಂತ್ರಿ ಢಾಕಾಗೆ ಬಂದು, ‘ನಿಮ್ಮ ನಗರಗಳಲ್ಲಿ ಮೆಟ್ರೋ ನಿರ್ವಿುಸುತ್ತೇವೆ’ ಎಂದು ಹೇಳಿ ಬದಲಿಗೆ ತಮಗೆ ಕೆಲವೊಂದು ಸವಲತ್ತುಗಳನ್ನು ನೀಡಬೇಕೆಂದು ಕೇಳಿದರೆ ಹೇಗೆ? ಬಾಂಗ್ಲಾದೇಶದಲ್ಲಿ ನೆಲ ಕಬಳಿಸುವ ಹೊಸ ಚೀನೀ ಯೋಜನೆ ಎಂದು ಅರಿವಾಗದೇ? ಚೀನಾದಿಂದ ಸಾಲ ಪಡೆಯುವುದೇ ಅಪಾಯಕಾರಿ ಎಂದು ಮಂತ್ರಿ ಕಮಾಲ್ ಖಾರವಾಗಿಯೇ ಹೇಳಿ ಚೀನಾಗೆ ಸ್ಪಷ್ಟ ಸಂದೇಶ ನೀಡಿದ್ದಾರೆ. ಮೇನಲ್ಲಿ ಪುಟ್ಟ ಮೈಕ್ರೋನೇಶಿಯಾದ ಅಧ್ಯಕ್ಷ ಡೇವಿಡ್ ಪ್ಯಾನುಯೇಲೋ ಇದನ್ನೇ ಹೇಳಿದಾಗ ಅದು ಹೆಚ್ಚು ಜನರ ಕಿವಿಗೆ ಬಿದ್ದಿರಲಿಲ್ಲ. ಆದರೆ, ಈಗ ಮಂತ್ರಿ ಕಮಾಲ್ ಹೇಳಿದ್ದು ಎಲ್ಲೆಡೆ ಮೊಳಗುತ್ತಿದೆ.
ಇನ್ನು ಹಸೀನಾ ಸರ್ಕಾರ ಅಸ್ತಿತ್ವದಲ್ಲೇ ಇರುವಂತೆ ಭಾರತ ‘ಹೇಗಾದರೂ’ ನೋಡಿಕೊಳ್ಳಬೇಕೆಂದು ವಿದೇಶಮಂತ್ರಿ ಅಬ್ದುಲ್ ಮೋಮೀನ್ ಹೇಳಿದ ವಿಷಯ. ಹೊರಗಿನಿಂದ ಆಮದು ಮಾಡಿಕೊಳ್ಳುವ ಪೆಟ್ರೋಲಿಯಂ ಉತ್ಪನ್ನಗಳ ಮಾರಾಟದಲ್ಲಿ ಅಧಿಕ ಸಬ್ಸಿಡಿ ನೀಡಿದ್ದು ಮತ್ತು ಬೆಲೆಯನ್ನು ಶೇ 30-35 ಇಳಿಸಿದ್ದೇ ಪಾಕಿಸ್ತಾನ ಹಾಗೂ ಶ್ರೀಲಂಕಾ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳಲು ಪ್ರಮುಖ ಕಾರಣ ಮತ್ತು ಹಾಗೆ ಮಾಡದ್ದು ಭಾರತ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಳ್ಳದಿರಲು ಮುಖ್ಯ ಕಾರಣ ಎಂದೀಗ ಜಗತ್ತೇ ಗುರುತಿಸಿದೆ. ಭಾರತದ ಮಾದರಿ ಅನುಸರಿಸಹೋದ ಬಾಂಗ್ಲಾದೇಶ ಆಗಸ್ಟ್ 6ರಂದು ಏಕಾಏಕಿ ಪೆಟ್ರೋಲ್ ಬೆಲೆಯಲ್ಲಿ ಶೇ. 51.7 ಮತ್ತು ಡೀಸೆಲ್ ಬೆಲೆಯಲ್ಲಿ ಶೇ. 42.7 ಏರಿಕೆ ಮಾಡಿಬಿಟ್ಟಿತು. ಬೆಲೆಯೇರಿಕೆಯನ್ನು ಹಂತಹಂತವಾಗಿ ಮಾಡದೇ ಹೀಗೆ ಒಂದೇಸಲಕ್ಕೆ ಮಾಡಿಬಿಟ್ಟರೆ ಜನ ಸುಮ್ಮನಿರುತ್ತಾರೆಯೇ? ಮಾರನೆಯ ದಿನವೇ ದೇಶದಾದ್ಯಂತ ಜನ ಬೀದಿಗಿಳಿದರು.
ಇದು ಹೀಗೇ ಮುಂದುವರಿದರೆ ಶ್ರೀಲಂಕಾದಲ್ಲಿ ಆದದ್ದು ಬಾಂಗ್ಲಾದೇಶದಲ್ಲೂ ಆಗುತ್ತದೆ, ರಾಜಪಕ್ಷರು ಓಡಿದಂತೆ ಹಸೀನಾ ಸಹಾ ಓಡಬೇಕಾಗುತ್ತದೆ, ಹಾಗಾದರೆ ಬಾಂಗ್ಲಾದೇಶ ಇದುವರೆಗೆ ಸಾಧಿಸಿದ ಪ್ರಗತಿಯನ್ನೆಲ್ಲಾ ಗಾಳಿಗೆ ತೂರಿ ಅಧಃಪತನದತ್ತ ಸಾಗುತ್ತದೆ ಎಂದು ಅಲ್ಲಿನ ಸರ್ಕಾರ ಹೆದರಿದೆ. ಅದು ವ್ಯಕ್ತವಾದದ್ದು ವಿದೇಶ ಮಂತ್ರಿ ಮೋಮಿನ್ರ ಹೇಳಿಕೆಯಲ್ಲಿ. ಇದರರ್ಥ ಬಾಂಗ್ಲಾದೇಶೀಯರು ದಂಗೆಯೆದ್ದರೆ ಭಾರತ ಸೇನೆ ಕಳಿಸಬೇಕು ಎಂದೇನಲ್ಲ. ಅಲ್ಲೇ ಸಶಕ್ತ ಸೇನೆಯಿದೆ. ಶ್ರೀಲಂಕಾದ ಸಹಾಯಕ್ಕೆ ಭಾರತ ನಿಂತಂತೆ ಪೆಟ್ರೋಲ್, ಡೀಸೆಲ್ ಸೇರಿದಂತೆ ಬಿಲಿಯನ್ಗಟ್ಟಲೆ ಮೌಲ್ಯದ ಅಗತ್ಯವಸ್ತುಗಳನ್ನು ಸಾಲದ ರೂಪದಲ್ಲಿ ಕೊಟ್ಟಂತೆ ತಮ್ಮ ದೇಶಕ್ಕೂ ಕೊಟ್ಟು ಕಾಪಾಡಬೇಕೆಂದು ಅವರ ಮಾತಿನ ಅರ್ಥ. ಇದು ಈ ವಲಯದಲ್ಲಿ ಭಾರತದ ವರ್ಚಸ್ಸು ಎಷ್ಟಿದೆಯೆಂದು ತೋರಿಸುವುದಲ್ಲದೆ, ಮುಂದೆ ಬರಬಹುದಾದ ಅಪಾಯಗಳನ್ನು ಎದುರಿಸಲು ಈಗಲೇ ತಯಾರಿ ಮಾಡಿಕೊಳ್ಳುವ ಬಾಂಗ್ಲಾದೇಶಿ ಸರ್ಕಾರದ ದೂರಗಾಮಿ ನೀತಿಗೆ ಇನ್ನೊಂದು ಉದಾಹರಣೆಯೂ ಆಗುತ್ತದೆ. ಒಟ್ಟಿನಲ್ಲಿ ಪಾಕಿಸ್ತಾನ, ಶ್ರೀಲಂಕಾ ಸೇರಿದಂತೆ ಹಲವಾರು ದೇಶಗಳ ನಾಯಕರು ತೋರದ ಬುದ್ಧಿವಂತಿಕೆಯನ್ನು ಬಾಂಗ್ಲಾ ನಾಯಕರು ತೋರುತ್ತಿದ್ದಾರೆ, ಇತರರಿಗೆ ಮಾದರಿಯಾಗಿದ್ದಾರೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)