ಚೀನಾದ ಸದ್ಭಾವನಾಕ್ಷಾಮ, ನೆರೆನಾಡುಗಳಿಗೆ ಜಲಕ್ಷಾಮ..

Draught
Published on
ಆಗ್ನೇಯ ಏಶಿಯಾದ ಜೀವನದಿಯಾದ ಮೆಕಾಂಗ್​ಗೆ ಈಗಾಗಲೇ ಹನ್ನೊಂದು ಅಣೆಕಟ್ಟು ಕಟ್ಟಿ ಮುಗಿಸಿ, ಹನ್ನೆರಡನೆಯದನ್ನು ಕಟ್ಟುತ್ತಾ, ಹದಿಮೂರನೆಯದಕ್ಕೆ ಯೋಜನೆ ರೂಪಿಸುತ್ತಾ ಇರುವ ಚೀನಾದ ವರ್ತನೆ ಜಾಗತಿಕವಾಗಿ ಖಂಡನೆಗೊಳಗಾಗುತ್ತಿದೆ. ಯಾರ ಬುದ್ಧಿಮಾತನ್ನೂ ಕೇಳದ ಚೀನಾ ತಮ್ಮಅಸ್ತಿತ್ವಕ್ಕೇ ಸಂಚಕಾರ ತರಲು ಹೊರಟಿದೆ ಎಂದು ವಲಯದ ದೇಶಗಳು ಕಣ್ಣೀರು ಹಾಕುತ್ತಿವೆ. ಚೀನಾದ ಈ ದುರ್ವರ್ತನೆಯನ್ನು ಮಾನವಜನಾಂಗದ ಬದುಕಿನಲ್ಲಿ ನೀರಿನ ಪಾತ್ರದ ಮಹತ್ವದ ಐತಿಹಾಸಿಕ ಚಿತ್ರಣದ ಹಿನ್ನೆಲೆಯೊಂದಿಗೆ ಪರಿಚಯಿಸುವುದು ಇಂದಿನ ಜಗದಗಲದ ಉದ್ದೇಶ.

ಮಾನವ ಅಲೆಮಾರಿ ಬದುಕು ತೊರೆದು ಒಂದೆಡೆ ನೆಲೆನಿಂತು ವ್ಯವಸ್ಥಿತ, ಸಾಮುದಾಯಿಕ ಬದುಕನ್ನಾರಂಭಿಸಿದ್ದು, ಭವ್ಯ ನಾಗರಿಕತೆಗಳು ಮೊಳೆತು ಬೆಳೆದದ್ದು ನದಿಕಣಿವೆಗಳಲ್ಲಿ ಎಂದು ಇತಿಹಾಸ ಹೇಳುತ್ತದೆ ಮತ್ತು ಪ್ರಾಕ್ತನಶಾಸ್ತ್ರ ಅದನ್ನು ಪುಷ್ಟೀಕರಿಸುತ್ತದೆ. ಕುಡಿಯಲು ಮತ್ತು ಆಹಾರಧಾನ್ಯಗಳನ್ನು ಬೆಳೆದುಕೊಳ್ಳಲು ಅಗತ್ಯ ಪ್ರಮಾಣದ ನೀರು ದೊರೆತದ್ದೇ ಮನುಷ್ಯ ನೆಮ್ಮದಿಯ ಬದುಕನ್ನಾರಂಭಿಸಿದ. ಹೊಟ್ಟೆಬಟ್ಟೆಯ ಚಿಂತೆಯಿಂದ ಬಿಡುವು ದೊರೆತದ್ದೇ ಕಲೆ, ಶಿಲ್ಪಕಲೆ, ವಾಸ್ತುಶಿಲ್ಪ, ಸಾಹಿತ್ಯಗಳತ್ತ ಮನಸ್ಸು ಹೊರಳಿಸಿ ಸಾಂಸ್ಕೃತಿಕವಾಗಿ ಬೆಳೆಯತೊಡಗಿದ್ದು ಸಹಜವೇ. ಹೀಗೆ ಮನುಷ್ಯನ ಬದುಕನ್ನು ನಿರ್ದೇಶಿಸಿದ್ದೇ ನೀರು. ಮನುಷ್ಯನ ಶಾಂತಸ್ವಭಾವಕ್ಕೂ ನೀರು ಪ್ರೇರಣೆಯಾಗಿದೆ. ತುರ್ಕಿ, ಇರಾನ್, ಮಧ್ಯ ಏಶಿಯಾ, ಅಫ್ಘಾನಿಸ್ತಾನ ಮತ್ತು ಭಾರತೀಯ ಉಪಖಂಡದ ನಿವಾಸಿಗಳೆಲ್ಲರೂ ಒಂದೇ ಮೂಲದವರಾದರೂ ಅವರ ಸ್ವಭಾವಗಳಲ್ಲಿನ ಅಗಾಧ ವ್ಯತ್ಯಾಸ ಎಲ್ಲರಿಗೂ ಕಾಣುವಂತೇ ಇದೆ. ಸಿಂಧೂ ಗಂಗಾ ಬಯಲಿನ ಜನ ಆಕ್ರಮಣಶೀಲತೆಯನ್ನು ತೊರೆದರೆ, ಬರಡು ಗುಡ್ಡಗಳು, ಮರಳುಗಾಡುಗಳಿಂದಲೇ ತುಂಬಿರುವ ಇತರ ಪ್ರದೇಶಗಳ ಜನ ಅದೇ ಆಕ್ರಮಣಶೀಲತೆಯನ್ನು ಉಳಿಸಿ ಬೆಳೆಸಿಕೊಂಡದ್ದು, ಅದನ್ನು ವಿಧವಿಧವಾಗಿ ಹರಿತಗೊಳಿಸಿಕೊಳ್ಳುತ್ತಾ ಬಂದದ್ದನ್ನು ಇತಿಹಾಸ ದಾಖಲಿಸಿದೆ. ಇದೇ ಶಾಂತ, ಸಹನಶೀಲ ಮೌಲ್ಯಗಳನ್ನು ಭಾರತೀಯ ಉಪಖಂಡದಲ್ಲಿ ಉದಿಸಿದ ಧರ್ಮಗಳೂ ಪ್ರತಿಪಾದಿಸಿವೆ. ಇದಕ್ಕೆ ವಿರುದ್ಧವಾಗಿ ಪಶ್ಚಿಮ ಏಶಿಯಾದ ಧರ್ಮಗಳು ಆಕ್ರಮಣಶೀಲತೆ, ಇತರರ ಮೇಲೆ ದಬ್ಬಾಳಿಕೆಗಳ ಮೌಲ್ಯಗಳನ್ನು ಮೈಗೂಡಿಸಿಕೊಂಡೇ ಸಾಗಿಬಂದಿವೆ. ಶತಮಾನಗಳಿಂದಲೂ ಪ್ರಾದೇಶಿಕವಾಗಿ ವಿಸ್ತಾರವಾಗುತ್ತಲೂ ಹೋಗುತ್ತಿವೆ. ರಾಜಮನೆತನಗಳಲ್ಲಿ ಜನಿಸಿ ಸಿಂಹಾಸನಗಳಿಗೆ ಹಕ್ಕುದಾರರಾಗಿದ್ದ ಗೌತಮ ಬುದ್ಧ ಮತ್ತು ಮಹಾವೀರ ಅದನ್ನೆಲ್ಲಾ ತೊರೆದು ಸರಳ, ಸಾಮಾನ್ಯ ಬದುಕಿನತ್ತ ಹೊರಳಿದರೆ, ಸಾಮಾನ್ಯ ಮನೆತನದಲ್ಲಿ ಜನಿಸಿದ ಮಹಮದ್ ಪೈಗಂಬರ್ ಖೊರೇಶ್ ಬುಡಕಟ್ಟಿನ ಮುಂದಾಳತ್ವದ ಸಾಮ್ರಾಜ್ಯವನ್ನು ಕಟ್ಟಿದ್ದು ನಿಮಗೆಲ್ಲರಿಗೂ ಗೊತ್ತೇ ಇದೆ. ಜೀಸಸ್ ಕ್ರೖೆಸ್ಟ್ ಯಾವುದೇ ಸಾಮ್ರಾಜ್ಯ ಕಟ್ಟದಿದ್ದರೂ ಅವರ ಬೋಧನೆಗಳಲ್ಲಿ ರಾಜಕೀಯ ಮೌಲ್ಯಗಳನ್ನು ಸಂಕೇತಿಸುವ ಕಿಂಗ್​ಡಂ (ಕಿಂಗ್​ಡಂ ಆಫ್ ಗಾಡ್) ಎಂಬ ಪದ ಕಾಣಿಸಿಕೊಳ್ಳುವುದು ವಿಶೇಷ.

ಹೀಗೆ ಮನುಷ್ಯನನ್ನು ನಾಗರಿಕನನ್ನಾಗಿ, ಶಾಂತ ಸಹಿಷ್ಣುವಾಗಿ ರೂಪಿಸುವ ನೀರು ತನ್ನ ಅನುಪಸ್ಥಿತಿ ಅಥವಾ ಕೊರತೆಯಿಂದ ಮನುಷ್ಯ ಸಮುದಾಯಗಳ ನಡುವೆ ಕಲಹಗಳಿಗೆ ಕಾರಣವಾಗುವ ಸಾಧ್ಯತೆ ಗುರುತಿಸಿದ ನಾಗರಿಕ ಮನುಷ್ಯ ಆ ಅಪಾಯವನ್ನು ನಾಗರಿಕವಾಗಿಯೇ ಬಗೆಹರಿಸಿಕೊಳ್ಳುವ ಉಪಾಯಗಳನ್ನೂ ರೂಢಿಸಿಕೊಂಡದ್ದೂ ಇದೆ. ವಿಶಾಲ ಆಸ್ಟ್ರೋ-ಹಂಗೇರಿಯನ್ ಮತ್ತು ಅಟೋಮಾನ್ ಸಾಮ್ರಾಜ್ಯಗಳು ಹರಿದು ಚೂರಾಗಿ ಅವುಗಳ ಸ್ಥಾನಗಳಲ್ಲಿ ಅರ್ಧ ಡಜನ್ ಸಣ್ಣ ಸಣ್ಣ ದೇಶಗಳು ಸೃಷ್ಟಿಯಾದಾಗ ಅವೆಲ್ಲವುಗಳಲ್ಲಿ ಹರಿಯುವ ಡ್ಯಾನ್ಯೂಬ್ ನದಿಯೇ ಕಲಹಕ್ಕೆ ಕಾರಣವಾಗಬಹುದೆಂದು ಆತಂಕಪಟ್ಟು ನೈಋತ್ಯ ಯೂರೋಪ್​ನ ಆ ದೇಶಗಳೆಲ್ಲವೂ ಒಟ್ಟುಗೂಡಿ ಎಲ್ಲರಿಗೂ ಸಮ್ಮತವಾದ, ಎಲ್ಲರ ಹಿತವನ್ನೂ ಸಾಧ್ಯವಾದಷ್ಟು ಕಾಪಾಡುವ ನಿಯಮಾವಳಿಗಳನ್ನು ರೂಪಿಸಿಕೊಂಡದ್ದು ಆ ವಲಯದಲ್ಲಿ ಶಾಂತಿಯನ್ನು ಸ್ಥಾಪಿಸಿದೆ. ಇಂತಹ ವ್ಯವಸ್ಥೆಯೇನಾದರೂ ಮಾಡಿಕೊಳ್ಳದೇ ಹೋಗಿದ್ದರೆ ನಮ್ಮ ಕಾವೇರಿ ಸಮಸ್ಯೆಯಂತಹದು ಅಲ್ಲಿ ಬೆಳೆದು, ಅವೆಲ್ಲವೂ ಸ್ವತಂತ್ರ ದೇಶವಾಗಿರುವ ಕಾರಣ ಸೇನಾ ಸಂಘರ್ಷಗಳಿಗೆ, ಸಾವು-ನೋವುಗಳಿಗೆ ಕಾರಣವಾಗುತ್ತಿದ್ದುದು ನಿಶ್ಚಿತ. ಇಂತಹದೇ ಪ್ರಯತ್ನವನ್ನು ಭಾರತೀಯ ಉಪಖಂಡದಲ್ಲೂ ಕಾಣಬಹುದು.

ಭೌಗೋಳಿಕವಾಗಿ ಮತ್ತು ಆರ್ಥಿಕವಾಗಿ ಸಿಂಧೂ ಗಂಗಾ ಬಯಲು, ಅದರಲ್ಲೂ ಮುಖ್ಯವಾಗಿ ಪಂಜಾಬ್ ಒಂದು ಏಕ ಘಟಕ. ಅದನ್ನು ವಿಭಜಿಸುವ ಪ್ರಯತ್ನಗಳು ಇತಿಹಾಸಕಾಲದಲ್ಲಿ ಘಟಿಸಿದ್ದು ಬಹು ಕಡಿಮೆ. ದೆಹಲಿ ಕೇಂದ್ರಿತ ಸಾಮ್ರಾಜ್ಯಗಳು ಈ ವಿಶಾಲ ಪ್ರದೇಶದ ಉದ್ದಗಲಕ್ಕೂ ಹರಡಿದ್ದವು. ಇಂತಹ ಏಕ ಆರ್ಥಿಕ-ಭೌಗೋಳಿಕ ಪ್ರದೇಶವನ್ನು ಧರ್ಮವೆಂಬ ಕೃತಕ ವಿಭಜನಾ ಶಕ್ತಿಯ ಕಾರಣದಿಂದ 1947ರಲ್ಲಿ ಎರಡಾಗಿ ಸೀಳಿದಾಗ ಅದರ ಋಣಾತ್ಮಕ ಪರಿಣಾಮಗಳು ಎರಡೂ ಪ್ರದೇಶಗಳ ಜನತೆಗಳನ್ನು ಬಾಧಿಸಿದ್ದು ಮತ್ತು ಮುಂದೆ ದೊಡ್ಡ ವೈಮನಸ್ಯವಾಗಿ ಬೆಳೆಯುವ, ಆ ಮೂಲಕ ಸೇನಾ ಸಂಘರ್ಷಗಳಿಗೆ ಕಾರಣವಾಗುವ ಸಾಧ್ಯತೆಯೂ ಎದುರಾಯಿತು. ಅಂತಹ ಸೂಚನೆ ಏಪ್ರಿಲ್ 1948ರಲ್ಲಿ ಕಾಣಿಸಿಯೂಕೊಂಡಿತು.

ಸಿಂಧೂ ಮತ್ತದರ ಉಪನದಿಗಳನ್ನು ಒಳಗೊಂಡು ಒಂದೇ ನೀರಾವರಿ ವ್ಯವಸ್ಥೆಯಾಗಿದ್ದ ಪಂಜಾಬ್ ಪ್ರಾಂತ್ಯ ವಿಭಜನೆಗೊಂಡಾಗ ಲಾಹೋರ್ ಜಿಲ್ಲೆ ಪಾಕಿಸ್ತಾನಕ್ಕೆ ಹೋಯಿತು. ಅದಕ್ಕೆ ನೀರು ಸರಬರಾಜು ಮಾಡುತ್ತಿದ್ದ ಫಿರೋಜ್​ಪುರ್ ಜಿಲ್ಲೆ ಭಾರತಕ್ಕೆ ಬಂತು. ಕಾಶ್ಮೀರ ಯುದ್ಧ ಗಂಭೀರವಾಗಿ ಸಾಗತೊಡಗಿದಂತೆ ಮತ್ತು ಅದರಲ್ಲಿ ಪ್ರಾರಂಭಿಕ ಶಸ್ತ್ರಸಜ್ಜಿತ ಪಠಾಣ ಗುಡ್ಡಗಾಡು ದಾಳಿಕಾರರ ಜತೆಗೂಡಿ ಮಾರ್ಚ್ 1948ರಲ್ಲಿ ಪಾಕಿಸ್ತಾನಿ ಸೇನೆಯೂ ಅಧಿಕೃತವಾಗಿ ಕಣಕ್ಕಿಳಿದಾಗ ಆ ದೇಶದ ಸೇನಾ-ರಾಜಕೀಯ ನಾಯಕತ್ವಕ್ಕೆ ಅದರ ಶಕ್ತಿಯ ಮಿತಿಯನ್ನು ಮನಗಾಣಿಸಲು ಭಾರತ ಸರ್ಕಾರ ಫಿರೋಜ್​ಪುರ್ ಹೆಡ್​ವರ್ಕ್ಸ್ ನಿಂದ ಲಾಹೋರ್ ಪ್ರದೇಶಕ್ಕೆ ನೀರು ಸರಬರಾಜನ್ನು ತಡೆಹಿಡಿಯಿತು. ನಂತರ ಮಾತುಕಥೆಗಳ ಮೂಲಕ ಸಮಸ್ಯೆ ತಹಬಂದಿಗೆ ಬಂದರೂ ಪಾಕಿಸ್ತಾನದ ಆತಂಕ ದೂರವಾಗಲಿಲ್ಲ. ಆ ದೇಶದ ಎಲ್ಲ ನದಿಗಳೂ ಭಾರತ ಮತ್ತು ಭಾರತದ ಹತೋಟಿಯಲ್ಲಿರುವ ಕಾಶ್ಮೀರದ ನೆಲದ ಮೂಲಕ ಹರಿದುಬರುವ ಕಾರಣ, ಮುಂದೊಮ್ಮೆ ಆ ನದಿಗಳನ್ನು ತಡೆಯುವ ಪ್ರಯತ್ನವನ್ನೇನಾದರೂ ಭಾರತ ಮಾಡಿದರೆ ಮತ್ತು ಅದನ್ನು ತಡೆಯುವ ಸಾಮರ್ಥ್ಯ ತನಗಿಲ್ಲವಾದರೆ ಅಲ್ಲಿಗೆ ತನ್ನ ಇತಿಶ್ರೀ ಎಂದು ಪಾಕಿಸ್ತಾನ ಸಹಜವಾಗಿಯೇ ತಿಳಿಯಿತು. ಅದರ ಆತಂಕ ದೂರಾಗಿದ್ದು ವಿಶ್ವಬ್ಯಾಂಕ್​ನ ಮಧ್ಯಸ್ಥಿಕೆಯಿಂದ 1960ರಲ್ಲಿ ಸಿಂಧೂ ನದಿನೀರು ಒಪ್ಪಂದವಾದಾಗ ಮತ್ತು ಆ ಮೂಲಕ ಪಾಕಿಸ್ತಾನದ ಆದ್ಯತೆಯನ್ನು ಭಾರತ ತನ್ನ ಹಿತಾಸಕ್ತಿಯನ್ನು ಬದಿಗೊತ್ತಿ ಮಾನ್ಯ ಮಾಡಿದಾಗ. ಆ ಒಪ್ಪಂದ ತನಗೆ ಅನುಕೂಲಕರವಾಗಿರುವ ಕಾರಣದಿಂದಲೇ ಅದನ್ನು ಉಲ್ಲಂಘಿಸುವ ಯಾವ ಪ್ರಯತ್ನವನ್ನೂ ಪಾಕಿಸ್ತಾನ ಇದುವರೆಗೂ ಮಾಡಿಲ್ಲ.

ದೇಶವಿಭಜನೆಯ ನಿಯಮಗಳಿಗನುಗುಣವಾಗಿ ಅಂದು ಮುಸ್ಲಿಂ ಬಹುಸಂಖ್ಯಾತವಾಗಿದ್ದ ಫಿರೋಜ್​ಪುರ್ ಜಿಲ್ಲೆ ಪಾಕಿಸ್ತಾನಕ್ಕೆ ಹೋಗಬೇಕಾಗಿತ್ತು. ಹಾಗೇನಾದರೂ ಆಗಿದ್ದರೆ ಅದು ಭಾರತಕ್ಕೆ ಆರ್ಥಿಕವಾಗಿ ಹಾನಿಕರವಾಗುತ್ತಿತ್ತು. ಇದನ್ನು ಮನಗಂಡದ್ದು ಬಿಕಾನೇರ್ ದೇಶೀಯ ರಾಜ್ಯದ ಮಹಾರಾಜರು. ಲಾಹೋರ್​ನಂತೆಯೇ ಬಿಕಾನೇರ್​ಗೂ ನೀರು ಪೂರೈಕೆಯಾಗುತ್ತಿದ್ದುದು ಫಿರೋಜ್​ಪುರ್ ಹೆಡ್​ವರ್ಕ್ಸ್​ನಿಂದ. ಅದೇನಾದರೂ ಪಾಕಿಸ್ತಾನಕ್ಕೆ ಹೋದರೆ ತನ್ನ ರಾಜ್ಯದ ನೀರಿನ ಏಕೈಕ ಮೂಲ ಬತ್ತಿಹೋಗಿ ಬಿಕಾನೇರ್ ದಶಕಗಳ ಹಿಂದಿದ್ದಂತೇ ಥಾರ್ ಮರುಭೂಮಿಯ ಭಾಗವಾಗುವುದು ನಿಶ್ಚಿತ ಎಂದರಿತ ಅವರು ಲಾರ್ಡ್ ಮೌಂಟ್​ಬ್ಯಾಟನ್ ಮುಂದೆ ಗೋಳು ತೋಡಿಕೊಂಡರು. ಅದಕ್ಕೆ ಸ್ಪಂದಿಸಿದ ಮೌಂಟ್​ಬ್ಯಾಟನ್ ಸರ್ ಸಿರಿಲ್ ರ್ಯಾಡ್ಕ್ಲಿಫ್ ಮೇಲೆ ಪ್ರಭಾವ ಬೀರಿ, ಮೂಲ ವಿಭಜನಾ ಯೋಜನೆಯಲ್ಲಿ ಪಾಕಿಸ್ತಾನಕ್ಕೆ ನೀಡಲಾಗಿದ್ದ ಫಿರೋಜ್​ಪುರ್ ಅನ್ನು ರಹಸ್ಯವಾಗಿ ಭಾರತಕ್ಕೆ ನೀಡುವಂತೆ ಮಾಡಿದರು. ಕಣ್ತಪ್ಪಿನಿಂದ ಲಾಹೋರ್​ನ ಪ್ರಾಂತೀಯ ಗವರ್ನರ್ ಕಚೇರಿಯಲ್ಲಿ ಉಳಿದುಹೋಗಿದ್ದ ಮೂಲ ವಿಭಜನಾ ಭೂಪಟ ನಂತರ ಪಾಕಿಸ್ತಾನಕ್ಕೆ ಸಿಕ್ಕಿ ತನಗೆ ಅನ್ಯಾಯವಾಗಿದೆಯೆಂದು ಅದು ಗೋಳಾಡಿದ್ದೂ ಆಯಿತು. ಆ ದೇಶ ತನಗಾದ ‘ಅನ್ಯಾಯ’ವನ್ನು ಕೊನೆಗೂ ಮರೆತದ್ದು ಸಿಂಧೂ ನದಿನೀರು ಒಪ್ಪಂದದ ಪ್ರಕಾರ ನೀರಿನ ಸಿಂಹಪಾಲು ಪಡೆದು ಜೀಲಂ ನದಿಗೆ ಮಂಗಲಾ ಅಣೆಕಟ್ಟೆ ಕಟ್ಟಿ ಸಿಯಾಲ್​ಕೋಟ್, ಲಾಹೋರ್ ಮತ್ತು ಅದರಾಚೆಯ ಬಹವಾಲ್​ಪುರ್ ಜಿಲ್ಲೆಗೂ ಸಾಕೆನಿಸುವಷ್ಟು ನೀರಿನ ವ್ಯವಸ್ಥೆ ಮಾಡಿಕೊಂಡಾಗ.

ಹೀಗೆ ಯೂರೋಪಿಯನ್ ಮತ್ತು ಉಪಖಂಡದ ದೇಶಗಳು ನದಿಗಳನ್ನು ಸಮಸ್ಯೆಯಾಗಿಸಿಕೊಳ್ಳದೇ ಬದುಕುವುದನ್ನು ರೂಢಿಸಿಕೊಂಡಿದ್ದರೆ ಕಮ್ಯೂನಿಸ್ಟ್ ಚೀನಾ ಹಿಡಿದಿರುವ ಹಾದಿಯೇ ಬೇರೆ. ನದಿಗಳನ್ನು ತನ್ನ ನೆರೆನಾಡುಗಳ ವಿರುದ್ಧ ಪ್ರಬಲ ಅಸ್ತ್ರವನ್ನಾಗಿ ಬಳಸುವ ದುರ್ಬುದ್ಧಿಯನ್ನು ಚೀನಾ ಹಲವು ದಶಕಗಳಿಂದಲೂ ಯಾವುದೇ ಶಿಕ್ಷೆಯ ಭಯವಿಲ್ಲದೇ ಪ್ರದರ್ಶಿಸುತ್ತಿದೆ. ಅದರ ಈ ಋಣಾತ್ಮಕ ನೀತಿಗಳಿಗೆ ಬಲಿಯಾದದ್ದು ಮೊದಲಿಗೆ ಭಾರತ, ಈಗ ಇಡೀ ಆಗ್ನೇಯ ಏಶಿಯಾದ ಮುಖ್ಯ ಭೂಭಾಗ.

ವಾಸ್ತವವಾಗಿ ಚೀನಾಗೆ ಇಂತಹ ವಿನಾಶಕಾರಿ ಶಕ್ತಿ ದಕ್ಕಿದ್ದು 1950ರಲ್ಲಿ ಟಿಬೆಟ್ ಅದರ ಆಕ್ರಮಣಕ್ಕೊಳಗಾದಾಗ. ಪೂರ್ವ, ದಕ್ಷಿಣ ಮತ್ತು ಅವೆರಡರ ನಡುವಿನ ಆಗ್ನೇಯ ಏಶಿಯಾದ ಎಲ್ಲ ಪ್ರಮುಖ ನದಿಗಳೂ ಉಗಮಿಸುವುದು ‘ಪ್ರಪಂಚದ ಮೇಲ್ಛಾವಣಿ’ ಎಂದು ಹೆಸರಾದ ಟಿಬೆಟ್ ಪ್ರಸ್ಥಭೂಮಿಯಲ್ಲಿ. ಅಲ್ಲಿಂದ ಪೂರ್ವಕ್ಕೆ ಹರಿಯುವ ಎರಡು ಮಹಾನದಿಗಳಾದ ಹ್ವಂಗ್​ಹೋ ಮತ್ತು ಯಾಂಗ್ಟ್​ಷೇ ಇಡಿಯಾಗಿ ಹರಿಯುವುದು ಚೀನೀ ನೆಲದಲ್ಲಿ. ಆದರೆ, ಇತರ ನದಿಗಳ ಹಾದಿಯೇ ಬೇರೆ. ಸಿಂಧೂ ಮತ್ತು ಸಟ್ಲೆಜ್ ನದಿಗಳು ಪಶ್ಚಿಮ ಟಿಬೆಟ್​ನಲ್ಲಿ ಹುಟ್ಟಿ ಭಾರತಕ್ಕೆ ಹರಿದುಬರುತ್ತವೆ. ಟಿಬೆಟ್​ನಲ್ಲಿ ಅವುಗಳ ಹರಿವು ಸೀಮಿತವಾಗಿರುವ ಹಾಗೂ ಅವುಗಳನ್ನು ಪೂರ್ತಿಯಾಗಿ ತಡೆಯಲು ಭೌಗೋಳಿಕ ಕಾರಣಗಳಿಂದಾಗಿ ಚೀನಾ ಅಸಮರ್ಥವಾಗಿರುವ ಕಾರಣ ಆ ನದಿಗಳ ವಿಷಯದಲ್ಲಿ ಗಮನಾರ್ಹ ಕಿಡಿಗೇಡಿ ಕೃತ್ಯವನ್ನೆಸಗುವುದು ಚೀನಾಗೆ ಸಾಧ್ಯವಾಗುವುದಿಲ್ಲ.

ಗಂಗಾ ನದಿಯ ಬಗೆಗಿನ ಆಸಕ್ತಿಕರ ವಿಷಯ ಹಂಚಿಕೊಳ್ಳಲೇಬೇಕು. ಗಂಗೋತ್ರಿ ಪ್ರದೇಶದ ಭೌಗೋಳಿಕ ಸ್ಥಿತಿ ಹೇಗಿದೆಯೆಂದರೆ ಅಲ್ಲಿ ಉಗಮಿಸುವ ಎಲ್ಲ ನದಿ ತೊರೆಗಳೂ ಟಿಬೆಟ್​ನತ್ತಲೇ ಸಾಗುತ್ತವೆ. ಗಂಗೆಯೊಂದೇ ಅಪವಾದ. ಇದಾಗಿರುವುದು ಪ್ರಾಕೃತಿಕ ಕಾರಣಗಳಿಂದಲ್ಲ. ಮೂಲತಃ ಟಿಬೆಟ್​ನತ್ತಲೇ ಹರಿದುಹೋಗುತ್ತಿದ್ದ ಗಂಗೆಯನ್ನು ‘ಯಾರೋ’ ಪ್ರಯತ್ನಪಟ್ಟು ಭಾರತದ ಕಡೆ ತಿರುಗಿಸಿರುವ ಕುರುಹುಗಳಿವೆ. ಭಗೀರಥ ಗಂಗೆಯನ್ನು ಭೂಮಿಗೆ ಕರೆತಂದ ಎನ್ನುವ ಪೌರಾಣಿಕ ಕಥೆ ಹಿಂದೆಂದೋ ಆ ಪ್ರದೇಶದಲ್ಲಿ ನಡೆಸಲಾದ ಇಂಜಿನಿಯರಿಂಗ್ ಅದ್ಭುತವೊಂದರ ಸಂಕೇತವಾಗಿರಬಹುದು. ಏನೇ ಇರಲಿ, ಒಟ್ಟಿನಲ್ಲಿ ಗಂಗೆ ಚೀನಾದ ಕಪಿಮುಷ್ಟಿಯಲ್ಲಿ ನಮ್ಮ ವಿರುದ್ಧ ಒಂದು ಅಸ್ತ್ರವಾಗುವುದು ತಪ್ಪಿದೆ.

ಬ್ರಹ್ಮಪುತ್ರ ನದಿ ತ್ಯಾಂಗ್​ಪೋ ಎಂದು ಕರೆಸಿಕೊಂಡು ಟಿಬೆಟ್​ನಲ್ಲೇ ಬಹುದೂರದವರೆಗೆ ಹರಿಯುತ್ತದೆ. ಅದು ಮತ್ತದರ ಕೆಲವು ಉಪನದಿಗಳಿಗೆ ಚೀನಾ ಅಣೆಕಟ್ಟೆಗಳನ್ನು ಕಟ್ಟಿದೆ. ಆದಾಗ್ಯೂ ಭಾರತದ ಭೌಗೋಳಿಕ ಮಿತಿಯೊಳಗಿರುವ ಹಿಮಾಲಯ ಪರ್ವತಗಳಲ್ಲಿ ಹಿಮಕರಗುವಿಕೆಯಿಂದಾಗಿ ನದಿಯಲ್ಲಿ ನಮಗೇನೂ ನೀರಿನ ಕೊರತೆ ಇಲ್ಲ. ಪ್ರವಾಹಗಳೇ ನಮಗಿರುವ ದೊಡ್ಡ ತೊಂದರೆ. ತನ್ನ ಅಣೆಕಟ್ಟೆಗಳಲ್ಲಿನ ನೀರನ್ನು ಚೀನಾ ಪೂರ್ವಸೂಚನೆಯಿಲ್ಲದೇ ಬಿಡುಗಡೆ ಮಾಡುವುದರಿಂದ ಅನಿರೀಕ್ಷಿತ ಪ್ರವಾಹಗಳು ನಮ್ಮ ಮೇಲೆರಗುತ್ತವೆ. ಅಣೆಕಟ್ಟೆಗಳ ವಿವರಗಳನ್ನು ಭಾರತದೊಂದಿಗೆ ಹಂಚಿಕೊಳ್ಳುವ ಚೀನಾ ಒಪ್ಪಂದದ ಮೂಲಕ ಬದ್ಧವಾಗಿದ್ದರೂ ಅದರ ಪ್ರಾಮಾಣಿಕತೆಯನ್ನು ನಂಬಲಾಗದ ಕಾರಣ ನಾವು ನಿರಂತರ ಎಚ್ಚರಿಕೆಯಲ್ಲಿರಬೇಕಾಗಿದೆ.

ಟಿಬೆಟ್​ನಲ್ಲೇ ಹುಟ್ಟುವ ಮೆಕಾಂಗ್ ನದಿ ಮ್ಯಾನ್ಮಾರ್, ಥಾಯ್ಲ್ಯಾಂಡ್, ಲಾವೋಸ್, ಕಾಂಬೋಡಿಯಾ ಮತ್ತು ವಿಯೆಟ್ನಾಂಗಳ ಮೂಲಕ ಹರಿಯುತ್ತದೆ. ಆ ಅರ್ಥದಲ್ಲಿ ಅದು ಏಶಿಯಾದ ಡ್ಯಾನ್ಯೂಬ್. ಮ್ಯಾನ್ಮಾರ್ ಹೊರತಾಗಿ ಉಳಿದೆಲ್ಲಾ ದೇಶಗಳ ಕುಡಿಯುವ ನೀರಿನ ಹಾಗೂ ವ್ಯವಸಾಯದ ಬಹುತೇಕ ಅಗತ್ಯವನ್ನು ಪೂರೈಸುವುದು ಇದೊಂದೇ ನದಿ. ಪ್ರಪಂಚದ ಸಿಹಿನೀರು ಮೀನಿನ ಶೇ. 20ನ್ನು ಇದೊಂದೇ ನದಿ ಒದಗಿಸುತ್ತದೆ ಎಂದರೆ ಆ ದೇಶಗಳ ಆಹಾರ ಪೂರೈಕೆಯ ಒಂದು ಆಯಾಮದಲ್ಲಿ ಆ ನದಿಯ ಪಾತ್ರದ ಮಹತ್ವ ನಿಮಗರಿವಾಗಬಹುದು.

ಇದು ಹತ್ತು ವರ್ಷಗಳ ಹಿಂದಿನ ಕಥೆ. ಈಗ ಎಲ್ಲವೂ ಬದಲಾಗಿದೆ. ತನ್ನ ಹನ್ನೊಂದು ಅಣೆಕಟ್ಟೆಗಳ ಮೂಲಕ ನದಿಯ ತೊಂಬತ್ತು ಭಾಗ ನೀರನ್ನು ಚೀನಾ ನಿಯಂತ್ರಿಸುತ್ತಿದೆ. ಒಂದು ಉದಾಹರಣೆಯೆಂದರೆ ಜೀವನದಿಯಲ್ಲಿ ತನ್ನವರೆಗೆ ನೀರೇ ಬಾರದ ಕಾರಣ ಕಾಂಬೋಡಿಯಾದ ಅಣೆಕಟ್ಟೆಯೇ ಬರಿದಾಗಿ ಜಲವಿದ್ಯುಚ್ಛಕ್ತಿ ಉತ್ಪಾದನೆ ಸ್ಥಗಿತಗೊಂಡು ದೇಶದ ದೊಡ್ಡ ಭಾಗ ಕತ್ತಲಲ್ಲಿ ಮುಳುಗಿದೆ. ಇನ್ನು ಕುಡಿಯುವ ನೀರಿನ ಪೂರೈಕೆ, ವ್ಯವಸಾಯಕ್ಕಾಗಿರುವ ಹಾನಿ ಯಾವ ಪ್ರಮಾಣದಲ್ಲಿರಬಹುದು ಲೆಕ್ಕ ಹಾಕಿ.

ವಲಯದ ಯಾವ ದೇಶದ ಮಾತಿಗೂ ಚೀನಾ ಸೊಪ್ಪು ಹಾಕುತ್ತಿಲ್ಲ. ರಾಷ್ಟ್ರೀಯ ಸುರಕ್ಷೆಯ ನೆಪವೊಡ್ಡಿ ತನ್ನ ಅಣೆಕಟ್ಟೆಗಳ ವಿವರಗಳನ್ನು ನೀಡುತ್ತಿಲ್ಲ. ಮೆಕಾಂಗ್​ನ ನೀರನ್ನೆಲ್ಲಾ ಈಗ ಅನಿರೀಕ್ಷಿತವಾಗಿ ಬರಕ್ಕೆ ಒಳಗಾಗಿರುವ ತನ್ನ ಮಧ್ಯಭಾಗಕ್ಕೆ ಸಾಗಿಸುತ್ತಿದೆ ಎಂದು ಅಂತಾರಾಷ್ಟ್ರೀಯ ತಜ್ಞರ ಸಮಿತಿಯೊಂದು ಪತ್ತೆಮಾಡಿದೆ. ಒಟ್ಟಿನಲ್ಲಿ ಚೀನಾದ ಮತ್ತೊಂದು ದುರುಳ ಮುಖ ಜಗತ್ತಿಗೀಗ ಪರಿಚಯವಾಗುತ್ತಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net