ಮಾ ಕಾ ಲಾಡ್​ಲಾ ಬಿಗಡ್ ಗಯಾ.. ಹೋಯ್ ಹೋಯ್!

Imran
Published on
ಹುಸೇನ್ ಹಖ್ಖಾನಿ ಪಾಕಿಸ್ತಾನದ ಗೌರವಾನ್ವಿತ ಪತ್ರಕರ್ತ, ರಾಜಕೀಯ ವಿಶ್ಲೇಷಕ, ರಾಜಕೀಯ ಕಾರ್ಯಕರ್ತ, ವಿದ್ವಾಂಸ ಹಾಗೂ ದಶಕದ ಹಿಂದೆ ಅಮೆರಿಕದಲ್ಲಿ ಪಾಕಿಸ್ತಾನದ ರಾಯಭಾರಿಯಾಗಿದ್ದವರು. ವಾಷಿಂಗ್ಟನ್ ಡಿಸಿಯಲ್ಲಿ ನೆಲೆಸಿರುವ ಅವರು ಪಾಕಿಸ್ತಾನವನ್ನು ‘ನಾರ್ಮಲ್’ ಅಂದರೆ ಸಹಜ ದೇಶ ಅಲ್ಲ ಎಂದು ಬಣ್ಣಿಸುತ್ತಾರೆ. ಇದರಲ್ಲೇನು ವಿಶೇಷ, ಆ ದೇಶ ಅದ್ಯಾವಾಗ ನಾರ್ಮಲ್ ಆಗಿತ್ತು ಎಂಬ ಪ್ರಶ್ನೆಯೇಳುವುದು ಸಹಜವೇ. ಆದಾಗ್ಯೂ, ಆ ದೇಶ ನಾರ್ಮಲ್ ಆಗದೇಹೋದದ್ದು ಹೇಗೆ ಎಂಬುದನ್ನು ಅಕಾಡೆಮಿಕ್ ನೆಲೆಯಲ್ಲಿ ಗಂಭೀರವಾಗಿ ಶೋಧಿಸಲು ಪ್ರಯತ್ನಿಸೋಣ.

ಪ್ರಜಾಪ್ರಭುತ್ವ ವ್ಯವಸ್ಥೆಯಾಗಲೀ, ನಿರಂಕುಶ ವ್ಯವಸ್ಥೆಯಾಗಲೀ ದೇಶವೊಂದರ ರಾಜಕೀಯ ಬದುಕು ಒಂದು ನಿಶ್ಚಿತ ಗತಿಯಲ್ಲಿ ಸಾಗುತ್ತಿದ್ದರೆ ಅಂದರೆ ರಾಜಕೀಯ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಪರಿಚಿತ, ನಿರೀಕ್ಷಿತ ಗತಿಯಲ್ಲೇ ನಡೆಯುತ್ತಿದ್ದರೆ, ರಾಜಕೀಯ ನಾಯಕರು, ರಾಜಕೀಯ ಪಕ್ಷಗಳು ಜತೆಗೆ ನ್ಯಾಯಾಂಗ ಸಹ ರೂಢಿಗತ ಸಾಂವಿಧಾನಿಕ ಸಂಪ್ರದಾಯಗಳಿಗೆ ಬದ್ಧರಾಗಿ ನಡೆಯುತ್ತಿದ್ದರೆ ಆ ದೇಶ ಸಹಜ ದೇಶದ ಪಟ್ಟಿಗೆ ಸಹಜವಾಗಿಯೇ ಸೇರುತ್ತದೆ. ಅಧ್ಯಕ್ಷೀಯ ಪ್ರಜಾಪ್ರಭುತ್ವವನ್ನು ಆಯ್ಕೆಮಾಡಿಕೊಂಡಿರುವ ಅಮೆರಿಕದಲ್ಲಿ ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ನಿರ್ದಿಷ್ಟ ಬಗೆಯಲ್ಲೇ ಅಧ್ಯಕ್ಷರ ಆಯ್ಕೆಯಾಗುತ್ತದೆ. ಈ ವೇಳಾಪಟ್ಟಿ ಬದಲಾಗುವುದಿಲ್ಲ. ಯಾವುದೇ ಕಾರಣದಿಂದ ಅಧ್ಯಕ್ಷಸ್ಥಾನ ಖಾಲಿಯಾದರೆ ಉಪಾಧ್ಯಕ್ಷರು ಆ ಸ್ಥಾನ ತುಂಬುತ್ತಾರೆ. ಸಂಸದೀಯ ಪ್ರಜಾಪ್ರಭುತ್ವದ ಹಾದಿ ಹಿಡಿದ ಬ್ರಿಟನ್​ನಲ್ಲಿ ನಿಯಮಿತವಾಗಿ ಅಥವಾ ಕಾಲಕಾಲಕ್ಕೆ ಎದುರಾಗುವ ಅಗತ್ಯಕ್ಕನುಗುಣವಾಗಿ ಚುನಾವಣೆಗಳು ನಡೆಯುತ್ತವೆ, ಫ್ರಾನ್ಸ್​ನಂಥ ಮಿಶ್ರವ್ಯವಸ್ಥೆಯಲ್ಲೂ ಹಾಗೇ. ಪಶ್ಚಿಮದ ಪ್ರಜಾಪ್ರಭುತ್ವಗಳಲ್ಲಿ ರಾಜಕೀಯ ಅಧಿಕಾರ ವರ್ಗಾವಣೆ ಪ್ರಕ್ರಿಯೆಗೆ ಈ ಮೂರು ದೇಶಗಳು ಪ್ರಾತಿನಿಧಿಕ ಉದಾಹರಣೆಯಾಗುತ್ತವೆ. ಅಲ್ಲೆಲ್ಲ ಸಂವಿಧಾನದ ಪ್ರಕಾರ ಶಾಂತಿಯುತವಾಗಿ ಅಧಿಕಾರ ಹಸ್ತಾಂತರವಾಗುತ್ತದೆ. ಭಾರತದಂಥ ಪೌರ್ವಾತ್ಯ ಪ್ರಜಾಪ್ರಭುತ್ವದಲ್ಲೂ ಹಾಗೆಯೇ. ಚುನಾವಣೆಯಲ್ಲಿ ಜಯಶೀಲವಾದ ರಾಜಕೀಯ ಪಕ್ಷದಿಂದ ಪ್ರಧಾನಮಂತ್ರಿ ಸ್ಥಾನಕ್ಕೆ ಆಯ್ಕೆಯಾಗುವ ನಾಯಕ/ನಾಯಕಿ ಲೋಕಸಭೆಯಲ್ಲಿ ಬಹುಮತ ಸಾಬೀತುಗೊಳಿಸಬೇಕಾಗುತ್ತದೆ. ಹಾಗಾಗದಿದ್ದಾಗ ಆತ/ಆಕೆ ಅಧಿಕಾರ ತ್ಯಜಿಸಬೇಕಾಗುತ್ತದೆ (ಚರಣ್ ಸಿಂಗ್-1979, ವಾಜಪೇಯಿ-1996). ವಿಶ್ವಾಸಮತ ಗಳಿಸುವಲ್ಲಿ ವಿಫಲವಾದ ಪ್ರಧಾನಮಂತ್ರಿಯೂ ಗೌರವಯುತವಾಗಿ ಅಧಿಕಾರ ತೊರೆದ ಉದಾಹರಣೆಯೂ ಇದೆ. ಅಪರೂಪಕ್ಕೊಮ್ಮೆ ನ್ಯಾಯಾಂಗದ ಮಧ್ಯಪ್ರವೇಶವಾದದ್ದೂ ಉಂಟು. 1975ರಲ್ಲಿ ತನ್ನ ವಿರುದ್ಧ ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದಾಗ ಅದನ್ನು ಮಾನ್ಯಮಾಡುವ ಅಥವಾ ಸುಪ್ರೀಂ ಕೋರ್ಟ್ ಮೊರೆಹೋಗುವ ಬದಲು ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಘೊಷಿಸಿದರು. ಅದೇ ಇಂದಿರಾ ಸಹ ಅಂತಿಮವಾಗಿ ಸಂವಿಧಾನಕ್ಕೆ ಬೆಲೆಕೊಟ್ಟು ಚುನಾವಣೆ ನಡೆಸಿ, ಸೋತಾಗ ಅಧಿಕಾರ ತ್ಯಜಿಸಿದ್ದನ್ನು ಲೆಕ್ಕಕ್ಕೆ ತೆಗೆದುಕೊಂಡು, ನಮ್ಮಲ್ಲೂ ಅಧಿಕಾರ ವರ್ಗಾವಣೆ ಸಹಜವಾಗಿ, ಸಂವಿಧಾನಬದ್ಧವಾಗಿ ನಡೆಯುತ್ತದೆ ಎನ್ನುವುದನ್ನು ಗುರುತಿಸಬೇಕು. 1975ರಲ್ಲಿ ಇಂದಿರಾ ಮಾಡಿದ್ದು ಒಂದು ಅಪವಾದವಷ್ಟೇ. ಅಪವಾದಗಳನ್ನು ಉದಾಹರಣೆಗಳಾಗಿ ತೆಗೆದುಕೊಳ್ಳಬಾರದು.

ಇನ್ನು ಚೀನಾದಂತಹ ಕಮ್ಯೂನಿಸ್ಟ್ ಸರ್ವಾಧಿಕಾರಿ ದೇಶದಲ್ಲಿ ಪಕ್ಷದ ಉನ್ನತ ನೇತಾರನ ಕೈಗೆ ಅಧಿಕಾರ ಬೀಳುತ್ತದೆ. ಆತನಿಗೆ, ಸರ್ಕಾರಕ್ಕೆ, ಪಕ್ಷಕ್ಕೆ ವಿರೋಧ ಕಂಡುಬಂದರೆ ಉಗ್ರವಾಗಿ ಹತ್ತಿಕ್ಕಲಾಗುತ್ತದೆ. ದೇಶದ ಅಗತ್ಯಕ್ಕೆ ಅನುಗುಣವಾಗಿ ಟೀಕಾಕಾರರ ಭವಿಷ್ಯ ನಿರ್ಣಯವಾಗುತ್ತದೆ. ಅಗತ್ಯವಿಲ್ಲದವರನ್ನು ನೇರ ಯಮಲೋಕಕ್ಕೆ ಅಟ್ಟಲಾಗುತ್ತದೆ, ಅಗತ್ಯ ಎನಿಸಿದವರನ್ನು ‘ಪುನರ್​ಶಿಕ್ಷಣ’ ಎಂಬ ಬ್ರೇನ್​ವಾಶ್ ವಿಧಾನದ ಮೂಲಕ ಸರಿದಾರಿಗೆ ತರಲಾಗುತ್ತದೆ (ಉದ್ಯಮಿ ಜಾಕ್ ಮಾ, ಟೆನಿಸ್ ತಾರೆ ಪೆಂಗ್ ಶ್ವಾಯ್). ಒಟ್ಟಿನಲ್ಲಿ ಅಲ್ಲಿಯೂ ರಾಜಕೀಯ ಅಧಿಕಾರ ಹಸ್ತಾಂತರ ಕಮ್ಯೂನಿಸ್ಟ್ ಪಕ್ಷದ ಇಷ್ಟಾನಿಷ್ಟಗಳಿಗೆ ಅನುಗುಣವಾಗಿಯೇ ನಿಶ್ಚಿತ ಗತಿಯಲ್ಲಿ ನಡೆಯುತ್ತದೆ.

ಹೀಗೆ ನಿಶ್ಚಿತ ವಿಧಾನದಲ್ಲೇ ರಾಜಕೀಯ ಅಧಿಕಾರ ಹಸ್ತಾಂತರ ನಡೆಯುವ ದೇಶಗಳಲ್ಲಿ ಯಾವ ಬೆಳವಣಿಗೆ ಯಾವ ಫಲಿತಾಂಶಕ್ಕೆ ದಾರಿಮಾಡಿಕೊಡುತ್ತದೆ ಎಂದು ಸ್ಪಷ್ಟವಾಗಿಯೇ ಮುಂಗಾಣಬಹುದು. ಇಲ್ಲಿ ಅನಿಶ್ಚಿತತೆಗೆ ಅವಕಾಶವಿರುವುದಿಲ್ಲ. ಆದರೆ ಪಾಕಿಸ್ತಾನದಲ್ಲಿ ಹೀಗಲ್ಲ. ಅಲ್ಲಿಯೂ ಸಂವಿಧಾನವಿದೆ. ಆದರೆ, ನೇತಾರರು ಅದನ್ನು ತಮಗೆ ಬೇಕಾದಂತೆ ಅರ್ಥೈಸುತ್ತಾರೆ. ಇಂದಿನ ಒಂದು ರಾಜಕೀಯ ಬೆಳವಣಿಗೆ ತಂದಿಟ್ಟ ಸ್ಥಿತಿಯನ್ನೇ ನಾಳೆ ಅಂತಹದೇ ರಾಜಕೀಯ ಬೆಳವಣಿಗೆಯೂ ತರುತ್ತದೆ ಎಂದು ಹೇಳಲಾಗುವುದಿಲ್ಲ. ಇದು ಇತ್ತೀಚೆಗಂತೂ ಬೆರಗು ಹುಟ್ಟಿಸುವಷ್ಟು ಅಧಿಕವಾಗಿದೆ. ನಾಳೆ ಆ ದೇಶ ಯಾವ ಹಾದಿ ಹಿಡಿಯುತ್ತದೆಂದು ಊಹಿಸಲಾಗುತ್ತಿಲ್ಲ; ಊಹಿಸುವ ಅವಕಾಶವನ್ನು ಅಲ್ಲಿನ ರಾಜಕೀಯ ನೇತಾರರು, ರಾಜಕೀಯ ಪಕ್ಷಗಳು ಮತ್ತು ಸೇನೆ ನೀಡುತ್ತಲೇ ಇಲ್ಲ.

1947-58ರ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಏಳು ಪ್ರಧಾನಮಂತ್ರಿಗಳು ಬಂದುಹೋದರು. ಅವರ್ಯಾರೂ ಜನರಿಂದ ಆಯ್ಕೆಗೊಂಡವರಲ್ಲ. ಗವರ್ನರ್ ಜನರಲ್ ಅಥವಾ ರಾಷ್ಟ್ರಾಧ್ಯಕ್ಷರಿಂದ ನೇಮಕಗೊಂಡು, ಅವರ ಆಶೀರ್ವಾದ ಇರುವವರೆಗೆ ಅಧಿಕಾರದಲ್ಲಿ ಕೂತವರವರು. ಆ ಅರಾಜಕತೆಯನ್ನು ಕೊನೆಗೊಳಿಸಿ ದೇಶಕ್ಕೆ ರಾಜಕೀಯ ಸ್ಥಿರತೆ ತರುವ ಘೊಷಣೆಯೊಂದಿಗೆ 1958ರಲ್ಲಿ ಸೇನಾಕ್ರಾಂತಿ ನಡೆಸಿ ಅಧಿಕಾರಕ್ಕೆ ಬಂದು 1973ರವರೆಗೂ ಅಧಿಕಾರದಲ್ಲಿದ್ದ ಜನರಲ್ ಅಯೂಬ್ ಖಾನ್​ರಿಗೆ ಪ್ರಧಾನಮಂತ್ರಿಯ ಅಗತ್ಯ ಕಾಣಲಿಲ್ಲ. 1969ರಲ್ಲಿ ಅವರ ಉತ್ತರಾಧಿಕಾರಿಯಾದ ಜನರಲ್ ಯಾಹ್ಯಾ ಖಾನ್ ಡಿಸೆಂಬರ್ 1979ರಲ್ಲಿ ಪಾಕಿಸ್ತಾನದ ಇತಿಹಾಸದಲ್ಲೇ ಮೊಟ್ಟಮೊದಲ ಸಾರ್ವತ್ರಿಕ ಚುನಾವಣೆಗಳನ್ನೇನೋ ಆಯೋಜಿಸಿದರು. ಆದರೆ ಜಯಶೀಲವಾದ ಅವಾಮಿ ಲೀಗ್ ಮತ್ತು ಅದರ ನಾಯಕ ಶೇಖ್ ಮುಜೀಬುರ್ ರಹಮಾನ್​ರಿಗೆ ಅಧಿಕಾರ ನೀಡಲು ಯಾಹ್ಯಾ ಹಿಂದೆಗೆದ ಕಾರಣ ಪಾಕಿಸ್ತಾನ ಅಂತರ್ಯುದ್ಧಕ್ಕೆ ಸಿಲುಕಿ ಎರಡು ಹೋಳಾಯಿತು. ಭಾರತದೊಂದಿಗಿನ ಯುದ್ಧದಲ್ಲಿ ಸೋತು ಸುಣ್ಣವಾದ ಪಾಕಿಸ್ತಾನಕ್ಕೆ ‘ನಾಗರಿಕ ಸೇನಾ ಆಡಳಿತಗಾರ’ ಎಂಬ ವಿಚಿತ್ರ ಹೆಸರಿನಲ್ಲಿ ನಾಯಕತ್ವ ಒದಗಿಸಿದ ಜುಲ್ಪಿಕರ್ ಆಲಿ ಭುಟ್ಟೋ 1973ರಲ್ಲಿ ಚುನಾವಣೆ ನಡೆಸಿ ಗೆದ್ದು ಪ್ರಧಾನಮಂತ್ರಿಯಾದರು. ಇದೆಲ್ಲವೂ ಅನಿಶ್ಚಿತತೆಯ ಉದಾಹರಣೆಗಳು. ಅದು ಅಲ್ಲಿಗೇ ನಿಲ್ಲುವುದಿಲ್ಲ.

ಚುನಾವಣಾ ಅಕ್ರಮಗಳಿಂದಾಗಿ ಅವರ ವಿರುದ್ಧ ವಿರೋಧಪಕ್ಷಗಳು ತಿರುಗಿಬಿದ್ದು ದೇಶ ಮತ್ತೊಮ್ಮೆ ರಾಜಕೀಯ ಅಸ್ಥಿರತೆ ಕಂಡಾಗ ಸೇನಾ ದಂಡನಾಯಕ ಜನರಲ್ ಜಿಯಾ-ಉಲ್ ಹಖ್ ಕಾರ್ಯಪ್ರವೃತ್ತರಾದರು. ಭುಟ್ಟೋರನ್ನು ಜುಲೈ 1977ರಲ್ಲಿ ಸತ್ತೆಯಿಂದಿಳಿಸಿ ನಂತರ ಏಪ್ರಿಲ್ 1979ರಲ್ಲಿ ಗಲ್ಲಿಗೇರಿಸಿದ ಜಿಯಾರಿಗೂ ಮೊದಲ ಒಂಬತ್ತು ವರ್ಷಗಳ ಕಾಲ ದೇಶಕ್ಕೆ ಪ್ರಧಾನಿಯೊಬ್ಬರು ಬೇಕು ಅನಿಸಲಿಲ್ಲ. ಕೊನೆಗೆ 1985ರಲ್ಲಿ ‘ಪಕ್ಷರಹಿತ’ ಚುನಾವಣೆ ನಡೆಸಿ ಮಹಮದ್ ಖಾನ್ ಜುನೇಜೋ ಅವರನ್ನು ಕೈಗೊಂಬೆ ಪ್ರಧಾನಮಂತ್ರಿಯನ್ನಾಗಿಸಿಕೊಂಡರು. ಆದರೆ ಕೈಗೊಂಬೆಯಾಗಿಯೇ ಉಳಿಯಲು ಜುನೇಜೋ ನಿರಾಕರಿಸಿದ್ದರಿಂದ ಅವರಿಗೆ ಎತ್ತಂಗಡಿಯಾಯಿತು. ಆಗಸ್ಟ್ 1987ರಲ್ಲಿ ಅವರ ಅವಸಾನವಾದ ಮೇಲೆ ಪಾಕಿಸ್ತಾನ ಪ್ರಧಾನಮಂತ್ರಿಗಳ ಆಡಳಿತವನ್ನು ಕಂಡರೂ ಅದು ಪ್ರಜಾಪ್ರಭುತ್ವದ ಅಣಕವಾಗಿತ್ತು. ಬೆನಜೀರ್ ಭುಟ್ಟೊ ಮತ್ತು ನವಾಜ್ ಶರೀಫ್ ಅಧ್ಯಕ್ಷರೊಂದಿಗೆ ಸೇರಿ ಪಿತೂರಿ ನಡೆಸಿ ಒಬ್ಬರನ್ನೊಬ್ಬರು ಮತ್ತೆಮತ್ತೆ ಅಧಿಕಾರದಿಂದಿಳಿಸಿ ತಾವು ಕ್ಷಿಪ್ರಕಾಲಕ್ಕಾದರೂ ಮೂರುಮೂರು ಸಲ ಗದ್ದುಗೇರಿದರು. ಆ ಗೊಂದಲಗ್ರಸ್ತ ಅವಧಿ ನಿಲುಗಡೆಗೆ ಬಂದದ್ದು ಅಕ್ಟೋಬರ್ 1999ರಲ್ಲಿ ಜನರಲ್ ಪರ್ವೆಜ್ ಮುಷರ್ರಫ್ ಸೇನಾಕ್ರಾಂತಿಯೆಸಗಿ ಅಧಿಕಾರಕ್ಕೇರಿ ಕೂತಾಗ.

2008ರಲ್ಲಿ ಮುಷರ್ರಫ್​ರ ಅಧಿಕಾರ ತ್ಯಜಿಸಿದ ನಂತರದ ದಿನಗಳು ಪಾಕಿಸ್ತಾನದ ಇತಿಹಾಸದಲ್ಲಿ ವಿಶಿಷ್ಟ. ಅಲ್ಲಿಂದೀಚೆಗೆ ಸತತವಾಗಿ ಎರಡು ಚುನಾಯಿತ ಸಂಸತ್ತುಗಳು ಪೂರ್ಣಾವಧಿ ಮುಗಿಸಿವೆ ಮತ್ತು ಮೂರನೆಯದು ಮೂರೂವರೆ ವರ್ಷಗಳನ್ನು ಪೂರೈಸಿದೆ. ಜತೆಗೆ, ನಾಗರಿಕ ಸರ್ಕಾರಗಳು ಸೇನಾಕ್ರಾಂತಿಯ ತಡೆಗೊಳಗಾಗದೆ ಸತತವಾಗಿ ಹನ್ನೊಂದು ವರ್ಷಗಳಿಗಿಂತಲೂ ಹೆಚ್ಚುಕಾಲ ಅಧಿಕಾರ ನಡೆಸುತ್ತಿರುವುದು ಇದೇ ಮೊದಲ ಬಾರಿ.

ಇದರರ್ಥ ಪಾಕ್ ಸೇನೆಯೇನೂ ಸಭ್ಯವಾಗಿದೆ, ರಾಜಕೀಯ ಅಧಿಕಾರದ ಆಸೆಯನ್ನು ತೊರೆದಿದೆ, ರಾಜಕೀಯ ಸಂನ್ಯಾಸ ತೆಗೆದುಕೊಂಡಿದೆ ಅಂತಲ್ಲ. 2011 ಮತ್ತು 2016ರಲ್ಲಿ ದೇಶ ಅರಾಜಕತೆ, ಅಶಾಂತಿಗೆ ಸಿಲುಕಿದಾಗ ಕ್ರಮವಾಗಿ ಜನರಲ್ ಆಶ್ಪಾಖ್ ಪರ್ವೆಜ್ ಕಯಾನಿ ಮತ್ತು ಜನರಲ್ ರಹೀಲ್ ಶರೀಫ್ ಸೇನಾ ಕ್ರಾಂತಿ ಬಗ್ಗೆ ಯೋಚಿಸಿದ್ದುಂಟು. ಆದರೆ ಇಬ್ಬರೂ ಕೊನೇಗಳಿಗೆಯಲ್ಲಿ ತಮ್ಮ ಯೋಜನೆಯನ್ನು ಬದಿಗೊತ್ತಿ, ಪ್ರಧಾನಮಂತ್ರಿಗಳ ಬದಲಾವಣೆಗೆ ತೆರೆಯ ಹಿಂದೆ ತಂತ್ರ ರೂಪಿಸಿ; ಹೊಸ, ಬಲಹೀನ ಪ್ರಧಾನಮಂತ್ರಿಯ ಬೆನ್ನ ಹಿಂದೆ ನಿಂತು ಅಧಿಕಾರ ನಡೆಸುವುದು ಅನುಕೂಲಕರ ಎಂದು ತಿಳಿದರು ಮತ್ತು ಹಾಗೇ ಮಾಡಿದರು. ಆ ಪ್ರಕಾರ ಸೇನೆ ಅಧಿಕಾರ, ಸವಲತ್ತು, ಎಲ್ಲವನ್ನೂ ಪಡೆಯಿತು; ಭಯೋತ್ಪಾದನೆಯ ವೃದ್ಧಿಗೆ, ಆರ್ಥಿಕ ಮುಗ್ಗಟ್ಟಿಗೆ ಹೊಣೆಯಾಗುವ ಅಪಾಯದಿಂದ ತಪ್ಪಿಸಿಕೊಂಡಿತು!

ಕಳೆದೊಂದು ದಶಕದಲ್ಲಿ ಪಾಕಿಸ್ತಾನ ಅತಿದೊಡ್ಡ ಪ್ರಮಾಣದ ರಾಜಕೀಯ ಗೊಂದಲ, ಆಂತರಿಕ ಅಶಾಂತಿ ಕಂಡದ್ದು ಈಗಷ್ಟೇ ಅಂತ್ಯಗೊಂಡ ಇಮ್ರಾನ್ ಖಾನ್ ಆಡಳಿತಾವಧಿಯಲ್ಲಿ. ಕಳೆದ ವರ್ಷವಿಡೀ ತೆಹ್ರೀಕ್-ಎ-ಲಬ್ಬಾಯಿಕ್ ಪಾಕಿಸ್ತಾನ್ ದಾಂಧಲೆ ಎಬ್ಬಿಸಿದ್ದನ್ನು ನೋಡಿದ್ದೇವೆ. ಇದೇ ಜನವರಿ ಅಂತ್ಯದಿಂದೀಚೆಗೆ ವಿರೋಧ ಪಕ್ಷಗಳು ಇಮ್ರಾನ್ ಸರ್ಕಾರದ ವಿರುದ್ಧ ತಿರುಗಿಬಿದ್ದು ಎಬ್ಬಿಸಿದ ರಾಜಕೀಯ ರಂಪ 1977ರಲ್ಲಿ ಭುಟ್ಟೋ ವಿರುದ್ಧ ಭುಗಿಲೆದ್ದಿದ್ದ ವಿರೋಧಕ್ಕೇನೂ ಕಡಿಮೆಯಿರಲಿಲ್ಲ. ಸೇನಾಕ್ರಾಂತಿಗೆ ಫಲವತ್ತಾದ ದಿನಗಳು ಇವಾಗಿದ್ದವು. ಆದರೆ ಸೇನಾದಂಡನಾಯಕ ಜನರಲ್ ಕಮರ್ ಜಾವೇದ್ ಬಾಜ್ವಾ ಅಧಿಕಾರಗ್ರಹಣದಿಂದ ದೂರ ಉಳಿದರು. ಅವರದೇನಿದ್ದರೂ ತೆರೆಯ ಹಿಂದೆ ಇಮ್ರಾನ್ ವಿರುದ್ಧ ಮಸಲತ್ತು ಮಾಡುವುದಷ್ಟೇ.

ಇನ್ನೊಂದು ಅಚ್ಚರಿಯ ವಿಷಯವೆಂದರೆ ತನ್ನ ದಂಡನಾಯಕರ ವಿರುದ್ಧ ಪ್ರಧಾನಮಂತ್ರಿಗಳ ಅವಮಾನಕರ ಬೈಗುಳಗಳನ್ನು, ಪಿತೂರಿಗಳನ್ನು ಹಿಂದೆ ಸಹಿಸದ ಸೇನೆ ಇಂದು ಆ ಬಗ್ಗೆ ಮೃದುವಾಗಿಬಿಟ್ಟಿದೆ. ಭುಟ್ಟೋರನ್ನು ಜಿಯಾ ನೇಣಿಗೆ ಏರಿಸುವ ಮಟ್ಟಕ್ಕೆ ಹೋದದ್ದು ತಮ್ಮ ಹಾಗೂ ಹಿಂದಿನ ದಂಡನಾಯಕ ಮಹಮದ್ ಮೂಸಾರ ಬಗ್ಗೆ ಭುಟ್ಟೋ ಸಾರ್ವಜನಿಕವಾಗಿ ಅವಮಾನಕರ ಮಾತುಗಳನ್ನಾಡಿದ್ದು ಹಾಗೂ 1971ರ ಯುದ್ಧದ ನಂತರ ಸೇನೆಯನ್ನು ಅವಮಾನಿಸಿದ್ದು. ಮುಷರ್ರಫ್ ಇದ್ದ ನಾಗರಿಕ ವಿಮಾನಕ್ಕೆ ಇಳಿಯಲು ಅನುಮತಿ ನೀಡದೇ, ವಿಮಾನ ಅಪಘಾತಕ್ಕೀಡಾಗಿ ಅವರು (ಇತರ ಪ್ರಯಾಣಿಕರ ಜತೆ!) ಸಾಯಲೆಂದು ಪಿತೂರಿ ನಡೆಸಿದ್ದೇ ನವಾಜ್ ಶರೀಫ್ ಪತನಕ್ಕೆ ಕಾರಣವಾಯಿತು. ಅವರನ್ನು ನೇಣಿಗೇರಿಸಬೇಕೆಂದೇ ಮುಷರ್ರಫ್​ರ ತೀರ್ವನವಾಗಿತ್ತು. ಕೊನೆಗೂ ಕುತಂತ್ರಿ ಶರೀಫ್ ಉಳಿದುಕೊಂಡದ್ದು ಸೌದಿ ಅರಸರ ಮಧ್ಯಪ್ರವೇಶದಿಂದ. ಅದಕ್ಕೂ ಹಿಂದೆ ತನ್ನ ಅಧಿಕಾರಕ್ಕೆ ಮುಳುವಾಗಬಹುದೆಂಬ ನಿರಾಧಾರ ಶಂಕೆಯಿಂದ ಅಯೂಬ್ ಖಾನ್ ಮಾಜಿ ಪ್ರಧಾನಿ ಸುಹ್ರವರ್ದಿಯವರನ್ನು ಬೈರೂತ್​ನಲ್ಲಿ ಹುಡುಕಿ ಕೊಲ್ಲಿಸಿದ್ದರು! ಇಂದು ಇಮ್ರಾನ್ ಖಾನ್ ತನ್ನ ದಂಡನಾಯಕನ ವಿರುದ್ಧ ಆಡಿದ, ಆಡುತ್ತಿರುವ ಮಾತುಗಳನ್ನು ಸೇನೆ ಸಹಿಸಿಕೊಳ್ಳುತ್ತಿರುವುದು ಊಹೆಗೆ ನಿಲುಕದ ಅಚ್ಚರಿ. ಕೆಲವು ವರದಿಗಳ ಪ್ರಕಾರ ಜನರಲ್ ಬಾಜ್ವಾ ಏಪ್ರಿಲ್ 9ರ ರಾತ್ರಿ ಇಮ್ರಾನ್​ರ ನಿವಾಸಕ್ಕೆ ಹೆಲಿಕಾಪ್ಟರ್​ನಲ್ಲಿ ಅನಿರೀಕ್ಷಿತವಾಗಿ ಹೋಗಿ ಅವರ ಕಪಾಳಕ್ಕೆ ಬಾರಿಸಿದರು ಮತ್ತು ಬಾಜ್ವಾರ ಸಹಾಯಕರು ಇಮ್ರಾನ್​ರನ್ನು ಥಳಿಸಿದರಂತೆ. ಕಳೆದೊಂದು ವಾರದಲ್ಲಿ ಇಮ್ರಾನ್​ರ ಮುಖಭಾವ ಮತ್ತು ಸಾರ್ವಜನಿಕ ಭಾಷಣಗಳಲ್ಲಿ ಅವರು ಆಡುತ್ತಿರುವ ಮಾತುಗಳು ಆ ‘ವರದಿಗಳು’ ನಿಜವಿರಬಹುದು ಎಂಬ ಸೂಚನೆ ಕೊಟ್ಟರೂ ಘಟನೆಯ ಸತ್ಯಾಸತ್ಯತೆ ಇನ್ನೂ ಸ್ಪಷ್ಟವಾಗಿಲ್ಲ. ಅದು ನಿಜವಿದ್ದರೂ, ಹಿಂದೆ ಅಯೂಬ್ ಖಾನ್, ಜಿಯಾ-ಉಲ್-ಹಖ್ ಮತ್ತು ಪರ್ವೆಜ್ ಮುಷರ್ರಫ್ ಪ್ರಧಾನಮಂತ್ರಿಗಳಿಗೆ ನೀಡಿದ ಶಿಕ್ಷೆಗಳ ಮುಂದೆ ಇದು ಏನೇನೂ ಅಲ್ಲ. 2018ರಲ್ಲಿ ಇಮ್ರಾನ್​ರನ್ನು ಅಧಿಕಾರಕ್ಕೆ ತಂದದ್ದೇ ಪಾಕ್ ಸೇನೆ ಮತ್ತು ಇದೇ ಜನರಲ್ ಬಾಜ್ವಾ. ಪ್ರಶ್ನೆಪತ್ರಿಕೆಯನ್ನು ಮೊದಲೇ ಕೊಟ್ಟು, ಪರೀಕ್ಷೆಯಲ್ಲಿ ಕಾಪಿ ಹೊಡೆಯಲು ಅವಕಾಶವಿತ್ತು, ಅದೂ ಸಾಲದಿದ್ದಾಗ ಗ್ರೇಸ್ ಮಾರ್ಕ್ಸ್ ಕೊಟ್ಟು ಪಾಸ್ ಮಾಡುವಂಥ ಬಗೆಯಲ್ಲಿ ಇಮ್ರಾನ್​ರನ್ನು ಬಾಜ್ವಾ ಗದ್ದುಗೆಯಲ್ಲಿ ಕೂರಿಸಿದ್ದು! ಅದಕ್ಕೆ ಇಮ್ರಾನ್​ರ ಪ್ರತಿಕ್ರಿಯೆ ಕಟುನಿಂದನೆ ಮತ್ತು ಆಪಾದನೆಗಳು. ಸೇನೆಯಿಂದ ಯಾವುದೇ ಲಾಭವಿರದಿದ್ದರೂ ಅದಕ್ಕೆ ಹೆದರಿ ರಾಜಿ ಮಾಡಿಕೊಂಡು ಬದುಕಿದ ಪ್ರಧಾನಮಂತ್ರಿಗಳ ಉದಾಹರಣೆ ಇರುವಾಗ ಅದರಿಂದಲೇ ಅಧಿಕಾರ ಗಿಟ್ಟಿಸಿದ ಇಮ್ರಾನ್​ರ ಇಂದಿನ ವರ್ತನೆ ಅರ್ಥಕ್ಕೆ ನಿಲುಕುವುದಿಲ್ಲ. ಮಾ ಕಾ ಲಾಡ್​ಲಾ ಈ ಮಟ್ಟಕ್ಕೆ ‘ಹಾಳಾದದ್ದು’ ಹೇಗೆ?

ಇದರ ಜತೆಗೆ, ಒಂದು ಕಾಲದಲ್ಲಿ ಪಶ್ಚಿಮ ಜಗತ್ತಿನ ಮುಖ್ಯವಾಗಿ ಅಮೆರಿಕದ ಕಣ್ಮಣಿಯಾಗಿದ್ದ ಪಾಕಿಸ್ತಾನ ರಾಜಕೀಯವಾಗಿ, ಆರ್ಥಿಕವಾಗಿ ಅಧೋಗತಿಗಿಳಿದಿರುವುದನ್ನೂ, ಅದಕ್ಕಾಗಿ ಪಾಕಿಸ್ತಾನೀಯರು ಅಮೆರಿಕವನ್ನೇ ದೂರುತ್ತಿರುವುದನ್ನೂ ನೋಡಿದರೆ ಒಬ್ಬರಿಗಿಂತ ಹೆಚ್ಚು ‘ಮಾ’ಗಳಿದ್ದಾರೆ ಮತ್ತು ‘ಹಾಳಾದ’ ಮಕ್ಕಳ ಸಂಖ್ಯೆಯೂ ಹೆಚ್ಚಿಗೇ ಇದೆ ಅನಿಸುತ್ತದೆ! ಪಾಕಿಸ್ತಾನ ನಿಜಕ್ಕೂ ‘ಸಹಜ ದೇಶ’ ಅಲ್ಲ!

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net