

‘ಕೆಡಹುವವನಿಗಿಂತ ಕಟ್ಟುವವನು ಹೆಚ್ಚು’ ಎಂದು ಇಪ್ಪತ್ತೆಂಟು ಸಾವಿರಕ್ಕಿಂತಲೂ ಹೆಚ್ಚು ವರ್ಷಗಳವರೆಗೆ ಸಾಧಿಸಿಕೊಂಡು ಬಂದ ಸಿಂಧೂ-ಸರಸ್ವತಿ ನಾಗರಿಕತೆ ಅಂತಿಮವಾಗಿ 3,800-3,700 ವರ್ಷಗಳ ಹಿಂದೆ ‘ಕಟ್ಟುವವನಿಗಿಂತ ಕೆಡಹುವವನೇ ಹೆಚ್ಚು’ ಎನ್ನುವುದಕ್ಕೆ ಸಾಕ್ಷಿಯಾಗಿಹೋಯಿತು. ಹಾಗೆ ನೋಡಿದರೆ ಕಾಲಪ್ರವಾಹ ಕೊಚ್ಚಿಕೊಂಡು ಹೋದ ಬದುಕಿನ ಕುರುಹುಗಳು ನಮಗೆ ಎಲ್ಲೆಲ್ಲೂ ಕಾಣಸಿಗುತ್ತವೆ, ನೆಲದ ಮೇಲಷ್ಟೇ ಅಲ್ಲ, ಜಲದಾಳದಲ್ಲಿ ಸಹ.
ಭೂಗ್ರಹದ ಶೇ. 71 ಭಾಗವನ್ನು ಆವರಿಸಿರುವ ಸಾಗರಪ್ರದೇಶದಲ್ಲಿ ಇಂದಿನ ಮಾನವ ಶೋಧಿಸಿರುವುದು ಶೇ. 5 ಮಾತ್ರ. ಅಷ್ಟರಲ್ಲೇ ಎಷ್ಟೊಂದು ಮಾನವ ನಿರ್ವಿುತಿಗಳು ಗೋಚರವಾಗಿವೆ! ಮಧ್ಯ ಅಟ್ಲಾಂಟಿಕ್ ಸಾಗರದ ಅಝೆೊರ್ಸ್ ಮತ್ತು ಕ್ಯಾನರೀಸ್ ದ್ವೀಪಗಳ ಸುತ್ತಮುತ್ತ, ವಾಯವ್ಯ ಆಫ್ರಿಕಾದ ಕೇಪ್ ವೆರ್ಡೆ ದ್ವೀಪಗಳ ತೀರದಲ್ಲಿ, ಸೌರಾಷ್ಟ್ರ ಪರ್ಯಾಯದ್ವೀಪದ ಪೂರ್ವದ ಖಂಭಾತ್ ಕೊಲ್ಲಿಯಲ್ಲಿ ಮತ್ತು ಪಶ್ಚಿಮದ ಅರಬ್ಬೀ ಸಮುದ್ರದಲ್ಲಿ ಬೃಹತ್ ನಗರಗಳು; ಕೆರಿಬಿಯನ್ ಸಮುದ್ರದ ಕ್ಯೂಬಾ, ಹೈಟಿ ಮತ್ತು ಬಹಾಮಾ ದ್ವೀಪಗಳ ತೀರಗಳಲ್ಲಿ ಬೃಹತ್ ಕಟ್ಟಡಗಳು; ಜಪಾನ್ನ ದಕ್ಷಿಣ ತೀರದಲ್ಲೊಂದು ಬೃಹದಾಕಾರದ ‘ದೇವಸ್ಥಾನ’! ಸಾಗರದ ಕೇವಲ ಶೇ. 5 ಪ್ರದೇಶದಲ್ಲೇ ಇಷ್ಟೊಂದು ಕಾಣಸಿಕ್ಕಿ ವಿಸ್ಮಿತಗೊಳಿಸಬಹುದಾದರೆ ಇನ್ನುಳಿದ ಶೇ. 92 ಪ್ರದೇಶದಲ್ಲಿ ಏನೇನು ಅಡಗಿರಬಹುದು! ಇದೆನ್ನೆಲ್ಲಾ ಊಹಿಸುತ್ತಾ ನಾಗರಿಕತೆ ಮೊಳೆತದ್ದು ಇಂದಿನ ಸಾಗರತಳಗಳಲ್ಲೇ, ತನ್ನ ನೆಲೆಯನ್ನು ನೀರು ನುಂಗುತ್ತಾ ಏರಿಬರತೊಡಗಿದಂತೆ ಛಲ ಬಿಡದ ತ್ರಿವಿಕ್ರಮ ಮನುಷ್ಯ ಎತ್ತೆತ್ತರದ ಪ್ರದೇಶಗಳಿಗೆ ತಾನೂ ಏರುತ್ತಾ ಬಂದು ಈಗ ಉಳಿದಿರುವ ಶೇ. 29 ನೆಲದಲ್ಲಿ ನೆಲೆ ನಿಂತಿದ್ದಾನೆಯೇ ಎಂದು ಬೆರಗಾಗುತ್ತಿದ್ದರೆ ಕೆಲವರು ವಿಜ್ಞಾನಿಗಳು ಮಾನವ ನಾಗರಿಕತೆಯ ಮಾತು ಅತ್ತ ಇರಲಿ ಮಾನವ ಹುಟ್ಟಿದ್ದೇ ಸಾಗರದಲ್ಲಿ ಎಂದು ಹೇಳಿ ಹೆದರಿಸತೊಡಗಿದ್ದಾರೆ! ಅದಕ್ಕಾಗಿ ಅವರು ನೀಡುವ ಹಲವಾರು ಕಾರಣಗಳಲ್ಲೊಂದು ಮನುಷ್ಯನ ಲೈಂಗಿಕ ಕ್ರಿಯಾವಿಧಾನ. ಇದು ಭೂಮಿಯ ಇತರೆಲ್ಲಾ ಪ್ರಾಣಿ ಪಕ್ಷಿಗಳ ರೀತಿಯಂತೆ ಇರದೆ, ಮೀನು ಮತ್ತಿತರ ಜಲಜೀವಿಗಳಂತೆ ಇರುತ್ತದೆ. ಅಲ್ಲದೆ, ನೆಲಕ್ಕಿಂತ ಜಲದಲ್ಲಿ ಪ್ರಸವಿಸಲ್ಪಡುವುದು ಮಾನವ ಶಿಶುಗಳಿಗೆ ದೈಹಿಕ ಹಾಗೂ ಮಾನಸಿಕವಾಗಿ ಹೆಚ್ಚು ಅನುಕೂಲಕರ, ಆರಾಮಕರ ಹಾಗೂ ಆರೋಗ್ಯಕರ ಎಂದು ಸೋವಿಯೆತ್ ವಿಜ್ಞಾನಿಗಳು ನಾಲ್ಕೈದು ದಶಕಗಳ ಹಿಂದೆ ‘ಪತ್ತೆ’ ಮಾಡಿದ್ದಾರೆ! ಅಂದರೆ ಸಾಗರದಲ್ಲಿ ಹುಟ್ಟಿದ ಮನುಷ್ಯರಲ್ಲಿ ಎಲ್ಲರೂ ಸಾರಾಸಗಟಾಗಿ ನೆಲಕ್ಕೆ ಬರದೇ ಒಂದಷ್ಟು ಜನ ಅಲ್ಲೇ ಉಳಿದು ಬಾಳುತ್ತಿದ್ದಾರೆಯೇ? ನೆಲಕ್ಕೆ ಕಾಲಿಟ್ಟ ಮನುಷ್ಯ ಇಲ್ಲಿನ ವಾತಾವರಣಕ್ಕೆ, ಆಹಾರಕ್ಕೆ ಹೊಂದಿಕೊಂಡು ವಿಕಾಸ ಹೊಂದುವುದಕ್ಕೆ ಮಿಲಿಯನ್ಗಟ್ಟಲೆ ವರ್ಷಗಳನ್ನು ತೆಗೆದುಕೊಂಡರೆ ಸಾಗರದಲ್ಲೇ ಉಳಿದುಹೋಗಿರಬಹುದಾದ ನಮ್ಮ ದಾಯಾದಿಗಳು ಅದೇ ಸಮಯದಲ್ಲಿ ತಮ್ಮ ಜ್ಞಾನವನ್ನು ಇನ್ನಷ್ಟು ವಿಸ್ತರಿಸಿಕೊಂಡು, ಅದಕ್ಕನುಗುಣವಾಗಿ ನಾಗರಿಕ ಬದುಕನ್ನು ಅಗಾಧ ಎತ್ತರಕ್ಕೆ ಕೊಂಡೊಯ್ದಿದ್ದಾರೆಯೇ? ಇರಬಹುದು ಅನ್ನುತ್ತಾರೆ ಇನ್ನಷ್ಟು ವಿಜ್ಞಾನಿಗಳು ಮತ್ತು ಸಂಶೋಧಕರು. ಅವರು ಹೇಳುವುದು ಈ ಏಲಿಯನ್ಸ್ ಅಂದರೆ ಅನ್ಯಲೋಕ ಜೀವಿಗಳು ಎಂದು ನಾವು ಕರೆಯುವ ವಿಧವಿಧವಾದ ಜೀವಿಗಳು ಮತ್ತು ಫ್ಲೈಯಿಂಗ್ ಸಾಸರ್ಸ್ ಎಂದು ನಾವು ಹೆಸರಿಸಿರುವ ಅವರ ವಾಹನಗಳೆಲ್ಲಾ ಬರುತ್ತಿರುವುದು ನಮ್ಮ ಸಾಗರಗಳಿಂದಲೇ ಹೊರತು ಬೇರಾವ ದೂರದ ಗ್ರಹಗಳಿಂದಲ್ಲ ಅಂತ. ಅದೆಷ್ಟೋ ಫ್ಲೈಯಿಂಗ್ ಸಾಸರ್ಗಳು ಸಾಗರಗಳಿಂದಲೇ ಚಿಮ್ಮಿ ಮೇಲೆ ಬರುವುದನ್ನೂ, ಸಾಗರಗಳಿಗೇ ಇಳಿದು ಅಂತರ್ಧಾನವಾಗುವುದನ್ನೂ ಅವರು ಉದಾಹರಣೆಯಾಗಿ ಕೊಡುತ್ತಾರೆ. ಅವರ ಮಾತು ನಿಜವಿದ್ದರೂ ಇರಬಹುದು. ನಮ್ಮ ಮಹಾಭಾರತದ ಅರ್ಜುನ ಉಲೂಪಿಯನ್ನು ಮದುವೆ ಮಾಡಿಕೊಂಡು ಕರೆತಂದದ್ದು ಸಾಗರತಳದಿಂದಲೇ ಅಲ್ಲವೇ? ಏನೋಪ್ಪ, ಇದೆಲ್ಲಾ ಭಾರಿ ಕೌತುಕಮಯ. ನಮ್ಮ ಸದ್ಯದ ಜ್ಞಾನಕ್ಕೆ ನಿಲುಕದ್ದು. ಹೀಗಾಗಿ ತೆಪ್ಪಗೆ ಸಿಂಧೂ-ಸರಸ್ವತಿ ನಾಗರಿಕತೆಗೆ ಹಿಂತಿರುಗೋಣ.
ಸಿಂಧೂ-ಸರಸ್ವತಿ ನಾಗರಿಕತೆ ಸುಮಾರು 3,200 ವರ್ಷಗಳ ಹಿಂದೆ, ಮಧ್ಯ ಏಶಿಯಾದಿಂದ ಬಂದ ಆರ್ಯರಿಂದ ಎಂದು ಮೊದಲಿಗೆ ಊಹಿಸಲಾಗಿತ್ತು. ಆ ನಂತರದ ಸರಿಸುಮಾರು ನೂರು ವರ್ಷಗಳಲ್ಲಿ ಆ ನಾಗರಿಕತೆಯ ಆರಂಭ, ಲಕ್ಷಣ ಹಾಗೂ ವ್ಯಾಪ್ತಿಗಳ ಜತೆಗೆ ಆರ್ಯರು ಎಂಬ ಜನಾಂಗದ, ಅವರ ‘ದಾಳಿ’ಯ ಬಗೆಗೂ ನಮ್ಮ ಅರಿವು ಬದಲಾಗುತ್ತಾ, ಬೆಳೆಯುತ್ತಾ ಬಂದಿದೆ. ಅಲ್ಲದೆ, ಮೊದಲಿಗೆ ಕೇವಲ ಸಿಂಧ್ ಮತ್ತು ಪಶ್ಚಿಮ ಪಂಜಾಬ್ನಲ್ಲಿ ಸಿಂಧೂ ಮತ್ತದರ ಒಂದೆರಡು ಉಪನದಿಗಳ ಪಾತ್ರಗಳ ಆಚೀಚೆಗಷ್ಟೇ ಸೀಮಿತವಾಗಿದ್ದು, ‘ಸಿಂಧೂ ಕಣಿವೆಯ ನಾಗರಿಕತೆ’ ಎಂದು ಕರೆಸಿಕೊಂಡಿದ್ದ ಈ ನಾಗರಿಕತೆ ಆ ನದಿಗಳಿಂದ ದೂರದ ಪೂರ್ವ ಪಂಜಾಬ್, ಹರಿಯಾಣ ಮತ್ತು ರಾಜಸ್ತಾನ ಮತ್ತು ಪಶ್ಚಿಮ ಉತ್ತರ ಪ್ರದೇಶಕ್ಕೂ ಹರಡಿತ್ತು ಎನ್ನುವುದು ನಂತರದ ದಿನಗಳಲ್ಲಿ ಪತ್ತೆಯಾಗಿ ಈ ಪ್ರಾಚೀನ ಹಾಗೂ ಭವ್ಯ ನಾಗರಿಕತೆಗೆ ‘ಸಿಂಧೂ-ಸರಸ್ವತಿ ನಾಗರಿಕತೆ’ ಎಂಬ ಹೆಸರೂ ಬಂದಾಗಿದೆ. ಜತೆಗೆ, ಅದರ ಅಂತ್ಯದ ಕಾಲಮಾನವೂ ಸುಮಾರು 600-500 ವರ್ಷಗಳಷ್ಟು ಹಿಂದಕ್ಕೆ ಸರಿಸಲ್ಪಟ್ಟು ಆರ್ಯರು ಇಲ್ಲಿಗೆ ಬಂದದ್ದು ಅದಾದ ಎರಡು ಶತಮಾನಗಳಿಗಿಂತಲೂ ನಂತರ, ಅಂದರೆ ಆರ್ಯರಿಗೆ ಇಲ್ಲಿ ಕಂಡದ್ದು ಅದಾಗಲೇ ಅಂತ್ಯಗೊಂಡಿದ್ದ ನಾಗರಿಕತೆಯ ಕುರುಹುಗಳು ಎನ್ನುವುದೂ ಚಾಲ್ತಿಗೆ ಬಂದಿದೆ. ಅಲ್ಲದೆ, ಆರ್ಯರು ಎನ್ನುವವರೇನೂ ಮಿಡತೆಗಳು ಅಥವಾ ಇರುವೆಗಳಂತೆ ಅಗಾಧ ಸಂಖ್ಯೆಯಲ್ಲಿ ಉಪಖಂಡದ ವಾಯವ್ಯ ಗಡಿಯಲ್ಲಿ ಏಕಾಏಕಿ ಕಾಣಿಸಿಕೊಂಡು ಸಿಂಧೂ ಬಯಲಿನ ಮೇಲೆ ಎರಗಿಬಿಡಲಿಲ್ಲ, ತುರುಗಾಹಿಗಳಾದ ಅವರು ಪುಟ್ಟಪುಟ್ಟ ಗುಂಪುಗಳಲ್ಲಿ ಹಲವು ಶತಮಾನಗಳ ಅವಧಿಯಲ್ಲಿ ವಲಸೆ ಬಂದರು ಎನ್ನುವುದೂ ಸರಿಸುಮಾರು ಸಿದ್ಧವಾಗಿಯೇ ಇರುವ ವಿಷಯ. ಆದಾಗ್ಯೂ, ಇತಿಹಾಸ ಎನ್ನುವುದು ಮೃತ ಜ್ಞಾನಶಿಸ್ತಲ್ಲ, ಹೊಸ ಆಧಾರಗಳು ದೊರೆಯುತ್ತಾ ಹೋದಂತೆ ನಿರಂತರವಾಗಿ ಬೆಳೆಯುತ್ತಾ ಇರುವ ಜೀವಂತ ಜ್ಞಾನಶಿಸ್ತು ಎನ್ನುವುದನ್ನು ನಾವು ಗಮನದಲ್ಲಿಟ್ಟುಕೊಂಡಿರಬೇಕು.
ಅಣ್ವಸ್ತ್ರ ಸ್ಫೋಟ ಸಿಂಧೂ-ಸರಸ್ವತಿ ನಾಗರಿಕತೆಯನ್ನು ಅಂತ್ಯಗೊಳಿಸಿರಬಹುದೇ ಎನ್ನುವುದು ಸಂಶೋಧಕರನ್ನು ಕಾಡುತ್ತಿರುವ ಪ್ರಶ್ನೆ. ಅದಕ್ಕಾಗಿ ಅವರು ಪರಿಗಣಿಸುವುದು ಮೊಹೆಂಜೋದಾರೋನ ಒಂದು ಕಡೆ ಅಣುವಿಕಿರಣದ ಕುರುಹುಗಳು ಪತ್ತೆಯಾಗಿವೆ ಎನ್ನುವುದನ್ನು. ಪ್ರಾಚೀನ ಕಾಲದಲ್ಲೇ ಅಣ್ವಸ್ತ್ರಗಳು ಮನುಷ್ಯನಿಗೆ ಪರಿಚಯವಾಗಿದ್ದವು ಎನ್ನುವುದಕ್ಕೆ ಹಲವಾರು ಉದಾಹರಣೆಗಳಿವೆ. ನಮ್ಮದೇ ಜೋಧ್ಪುರ್ ನಗರಕ್ಕೆ ಹತ್ತು ಕಿಲೋಮೀಟರ್ ಪಶ್ಚಿಮದಲ್ಲಿ ಮೂರು ಕಿಲೋಮೀಟರ್ ವ್ಯಾಸದ ಪ್ರದೇಶದಲ್ಲಿ ಅಣುವಿಕಿರಣವಿದೆ ಮತ್ತು ಇದು ಅನಾದಿಕಾಲದಿಂದಲೂ ಅಲ್ಲಿನ ಜನರನ್ನು ಬಾಧಿಸುತ್ತಿದೆ ಎಂದು ಹೇಳಲಾಗುತ್ತದೆ. ಸಿರಿಯಾದಲ್ಲಂತೂ ಅಣ್ವಸ್ತ್ರದಿಂದ ಇಡೀ ನಗರವೇ ನಾಶವಾದ ಕುರುಹುಗಳು ಪತ್ತೆಯಾಗಿವೆ. ಆ ಪ್ರದೇಶದ್ದೇ ಗ್ರಂಥವಾದ ಬೈಬಲ್ನಲ್ಲಿರುವ ಒಂದು ಚಿತ್ರಿತವಾಗಿರುವ ಲಾಟ್ನ ಹೆಂಡತಿ ಕಂಡ ದೃಶ್ಯ ಯೆಹೋವ ದೇವರು ಸೋಡೋಂ ನಗರವನ್ನು ನಾಶಪಡಿಸಿದ್ದು ಅಣ್ವಸ್ತ್ರದಿಂದಲೇ ಎಂದು ಕರಾರುವಾಕ್ಕಾಗಿ ಹೇಳುತ್ತದೆ. ಇನ್ನು ನಮ್ಮದೇ ಮಹಾಭಾರತದ ದ್ರೋಣಪರ್ವದಲ್ಲಿ ವರುಷ್ಣಿ ಮತ್ತು ಅಂಡಕ ಎಂಬ ಎರಡು ಜನಾಂಗಗಳು ನಾಶವಾದದ್ದರ ಬಗೆಗಿರುವ ವಿವರಗಳು ಅಣ್ವಸ್ತ್ರ ಸ್ಪೋಟದ ಕರಾರುವಾಕ್ ಚಿತ್ರಣ ನೀಡುತ್ತವೆ. ಆದರೆ, ಈ ಪ್ರಾಚೀನ ವಿವರಗಳು ಮತ್ತು ಕೇವಲ 77 ವರ್ಷಗಳ ಹಿಂದಷ್ಟೇ ಹಿರೋಶಿಮಾ ನಗರ ಅಣ್ವಸ್ತ್ರ ದಾಳಿಗೊಳಗಾದಾಗಿನ ಚಿತ್ರಣಗಳು ಮೊಹೆಂಜೋದಾರೋದಲ್ಲಿ ಪತ್ತೆಯಾಗಿರುವ ‘ಅಣ್ವಸ್ತ್ರ ಪ್ರಯೋಗ’ದ ಕುರುಹುಗಳಿಗೆ ಹೊಂದಿಕೆಯಾಗುವುದಿಲ್ಲ. ಎಲ್ಲಿ ಅಣುವಿಕಿರಣ ದಟ್ಟವಾಗಿದೆಯೆಂದು ಹೇಳಲಾಗುತ್ತದೋ ಅಲ್ಲಿ ಹತ್ತು ಹದಿನೈದು ಅಡಿ ಎತ್ತರದ ಇಟ್ಟಿಗೆ ಗೋಡೆಗಳು ಇಂದಿಗೂ ಅಚಲವಾಗಿ ನಿಂತಿವೆ! ಅಲ್ಲದೆ, ಮೊಹೆಂಜೋದಾರೋದ ಒಂದು ಬೀದಿಯ ಹೊರತಾಗಿ ಬೇರಾವ ಸ್ಥಳದಲ್ಲೂ ಅಸಹಜ ಪ್ರಮಾಣದ ಅಣುವಿಕಿರಣ ಇದುವರೆಗೆ ಪತ್ತೆಯಾಗಿಲ್ಲ.
ಹೀಗೆ ಹೊರಗಿನವರ ದಾಳಿ ಮತ್ತು ಅಣ್ವಸ್ತ್ರ ಬಳಕೆಯನ್ನು ನಿರಾಕರಿಸಿದರೆ ಈಛಿಛ್ಠ್ಚಜಿಡಛಿ ಔಟಜಜ್ಚಿ ಪ್ರಕಾರ ನಮಗುಳಿಯುವ ತರ್ಕಬದ್ಧ ಕಾರಣ ಪ್ರಾಕೃತಿಕ ವಿಕೋಪ. ಇದರಲ್ಲೂ ಮೂರು ಬಗೆಯ ಸಾಧ್ಯತೆಗಳು ನಮಗೆದುರಾಗುತ್ತವೆ. ಮೊದಲನೆಯದು ನದಿಗಳ ಪಾತ್ರ ಬದಲಾವಣೆ. ತಮ್ಮ ತೀರಗಳಲ್ಲಿ ಲಕ್ಷಲಕ್ಷ ಜನರನ್ನು ನೂರಾರು ವರ್ಷಗಳವರೆಗೆ ಪೋಷಿಸಿದ ಜೀವನದಿಗಳು ಏಕಾಏಕಿ ಪಾತ್ರ ಬದಲಾಯಿಸಿ ಎಲ್ಲವನ್ನೂ ಆಪೋಶನ ತೆಗೆದುಕೊಂಡು ನಂತರ ಏನೂ ಆಗಿಲ್ಲವೆನ್ನುವಂತೆ ತಣ್ಣಗೆ ಹರಿಯುತ್ತಾ ಹೋಗುವುದನ್ನು ಮನುಷ್ಯ ಅನಾದಿಕಾಲದಿಂದಲೂ ಕಾಣುತ್ತಾ, ಅನುಭವಿಸುತ್ತಾ ಬಂದಿದ್ದಾನೆ. ಇದಕ್ಕೆ ಉದಾಹರಣೆಗಳನ್ನು ನೈಲ್, ಹ್ವಾಂಗ್ ಹೋ, ಯಾಂಗ್ಟ್ಜೇ, ಮೆಕಾಂಗ್ ಮುಂತಾದ ಮಹಾನದಿಗಳು ಆಗಾಗ ನೀಡುತ್ತಲೇ ಬಂದಿವೆ. ನಮ್ಮದೇ ನದಿಗಳಿಗೆ ಬಂದರೆ ಪುರಾತನ ಪಾಟಲೀಪುತ್ರ ನಗರದ ಬಹುಭಾಗ ಗಂಗೆಯಲ್ಲಿ ಕೊಚ್ಚಿಹೋಗಿ ಅಳಿದುಳಿದ ಚೂರುಪಾರು ಇಂದಿನ ಪಾಟ್ನಾ ನಗರದಡಿ ಮಲಗಿದೆ. ತೀರಾ ಇತ್ತೀಚಿನದೆಂದರೆ ಸಟ್ಲೆಜ್ ನದಿಯದು. 1961ರ ದಶಕದಲ್ಲಿ ಈ ನದಿ ಮತ್ತೆಮತ್ತೆ ಪ್ರವಾಹ ಕಂಡು ಪಾತ್ರ ಬದಲಿಸಿದ್ದರಿಂದಾಗಿ ಭಗತ್ ಸಿಂಗ್, ರಾಜ್ ಗುರು ಮತ್ತು ಸುಖ್ದೇವ್ರ ದೇಹಗಳು ಅಗ್ನಿಸಂಸ್ಕಾರಕ್ಕೊಳಗಾದ, ಗಂಡಾ ಸಿಂಗ್ ವಾಲಾ ಹಳ್ಳಿಯ ಹೊರವಲಯದ ತುಂಡು ನೆಲ ಪಾಕಿಸ್ತಾನದ ಕೈತಪ್ಪಿ ಭಾರತಕ್ಕೆ ದಕ್ಕಿತು.
ಸಟ್ಲೆಜ್ ನದಿ ಹಿಂದೆಯೂ ಪಾತ್ರ ಬದಲಿಸಿದೆ. ಹಿಂದೆ ಅದು ಈಗಿರುವುದಕ್ಕಿಂತಲೂ ಕೆಳಗೆ ದಕ್ಷಿಣದಲ್ಲಿ ಹರಿಯಾಣಾ, ರಾಜಸ್ತಾನಗಳಲ್ಲಿ ಹರಿದು ಸಿಂಧ್ನಲ್ಲಿ ಸಿಂಧೂ ನದಿಯನ್ನು ಸೇರಿದಂತೆ ತೋರುವ ಕುರುಹುಗಳಿವೆ. ಸಟ್ಲೆಜ್ನ ಆ ಹಳೆಯ ಪಾತ್ರವೇ ಪ್ರಾಚೀನ ಸರಸ್ವತಿ ನದಿಯಾಗಿದ್ದಿರಬಹುದು, ಈಗದು ಮಳೆಗಾಲದಲ್ಲಿ ಮಾತ್ರ ನೀರು ಕಾಣುವ ಘಗ್ಗರ್ ನದಿಯಾಗಿದೆ ಎಂದು ಕೆಲವರು ಸಂಶೋಧಕರು ಭಾವಿಸುತ್ತಾರೆ. ಹೀಗೆ ಸಟ್ಲೆಜ್ ಜತೆ ಸಿಂಧೂ ನದಿಯೂ ಮತ್ತೆ ಮತ್ತೆ ಪಾತ್ರ ಬದಲಿಸಿದ ಕಾರಣ ಆ ನದಿಗಳ ದಡದಲ್ಲಿದ್ದ ಮಹಾನಗರಗಳು ಹಾಳುಬಿದ್ದು ನಾಗರಿಕತೆ ಅಂತ್ಯಗೊಂಡಿತೆಂದು ಊಹಿಸಲು ಅವಕಾಶವಿದೆ.
ನದಿಗಳ ಪಾತ್ರ ಬದಲಾವಣೆಗೆ ಪ್ರೇರಕವಾದ ಪ್ರವಾಹಗಳೇ ನಾಗರಿಕತೆ ಕ್ಷಿಪ್ರಕಾಲದಲ್ಲಿ ಮೇಲೇಳಲಾಗದಷ್ಟು ಹಾನಿಗೊಳಗಾಗಿರಬೇಕು ಎಂದು ಮತ್ತೊಂದು ವಾದವಿದೆ. ಇದನ್ನು 1960ರ ದಶಕದಲ್ಲಿ ಮೊದಲಿಗೆ ಮಂಡಿಸಿದವರು ಜಲಶಾಸ್ತ್ರಜ್ಞ ರಾಜರ್ಟ್ ಎಲ್. ರೈಕೆಸ್ ಮತ್ತು ಪುರಾತತ್ವಶಾಸ್ತ್ರಜ್ಞ ಜಾರ್ಜ್ ಎಫ್. ಡೇಲ್ಸ್. ನಂತರ 2010ರಲ್ಲಿ ಪಾಕಿಸ್ತಾನ ಭೀಕರ ಪ್ರವಾಹಗಳನ್ನು ಎದುರಿಸಿದಾಗ ಅವರ ವಾದಕ್ಕೆ ಮತ್ತೆ ಚಾಲನೆ ಬಂತು. ನದಿಯ ಪಾತ್ರದುದ್ದಕ್ಕೂ ಮುಖ್ಯವಾಗಿ ಸಿಂಧ್ನಲ್ಲಿ ಪ್ರವಾಹ ಎಸಗಿದ ಹಾನಿಯನ್ನು ಕಂಡು ಪತ್ರಕರ್ತ, ಸಂಶೋಧಕ ಮತ್ತು ಅಸಾಂಪ್ರದಾಯಿಕ ಪುರಾತತ್ವಶಾಸ್ತ್ರಜ್ಞ ಗ್ರಹಾಂ ಹ್ಯಾನ್ಕಾಕ್ ಪ್ರಾಚೀನ ಪ್ರವಾಹಗಳು ಸಿಂಧೂ-ಸರಸ್ವತಿ ನಾಗರಿಕತೆಯ ಅಂತ್ಯಕ್ಕೆ ಪ್ರಮುಖ ಕಾರಣವಾಗಿರಬಹುದೆಂದು ವಾದಿಸಿದರು.
ಈ ಮೂವರೂ ವಿದ್ವಾಂಸರ ಮಾತುಗಳನ್ನು ನಮಗೆ ನೆನಪಿಸುತ್ತಿರುವುದು ಪಾಕಿಸ್ತಾನ ಇದೇ ಜೂನ್-ಆಗಸ್ಟ್ನಲ್ಲಿ ಅನುಭವಿಸಿದ ಘಾತಕ ಪ್ರವಾಹ. ಇದುವರೆಗಿನ ಲಿಖಿತ ಇತಿಹಾಸದ ಅತಿದೊಡ್ಡ ಪ್ರವಾಹವಾದ ಇದರಲ್ಲಿ ಸಿಂಧೂ ನದಿಯ ಪಾತ್ರದುದ್ದಕ್ಕೂ ಊರೂರುಗಳೇ ಹೇಳಹೆಸರಿಲ್ಲದಂತೆ ನಾಶವಾಗಿವೆ. ಅವುಗಳಲ್ಲಿ ಹೆಚ್ಚಿನವನ್ನು ಮರುನಿರ್ವಿುಸುವುದು ವ್ಯರ್ಥ, ಬದಲಿಗೆ ಹತ್ತು ಲಕ್ಷ ಸಮೀಪಿಸಿರುವ ನಿರಾಶ್ರಿತರಲ್ಲಿ ಹೆಚ್ಚಿನವರಿಗೆ ನದಿಯಿಂದ ದೂರದಲ್ಲಿ ಬೇರೆಯೇ ವಸತಿವ್ಯವಸ್ಥೆ ನಿರ್ವಿುಸುವುದು ಸೂಕ್ತ ಪರಿಹಾರಮಾರ್ಗ ಎಂಬ ಅಭಿಪ್ರಾಯ ಪಾಕ್ ಸರ್ಕಾರಿ ವಲಯದಲ್ಲಿದೆ. ನಾಲ್ಕುಸಾವಿರ ವರ್ಷಗಳಿಂದಲೂ ನೆಲದಲ್ಲಿ ಅಡಗಿ ಸುರಕ್ಷಿತವಾಗಿಯೇ ಉಳಿದುಕೊಂಡು ಬಂದಿದ್ದ ಬಂದಿದ್ದ ಪ್ರಾಚೀನ ನಾಗರಿಕತೆಯ ಅವಶೇಷಗಳಿಗೂ ಈಗಿನ ಮಳೆ ಮತ್ತು ಪ್ರವಾಹ ಹಾನಿಯೆಸಗಿದೆಯಂತೆ!
ಇಂದಿನ ಪ್ರವಾಹಗಳ ಜತೆಗೆ ಇದೇ ವರ್ಷದ ಏಪ್ರಿಲ್-ಮೇನಲ್ಲಿ ಪಾಕಿಸ್ತಾನ ಅನುಭವಿಸಿದ ಭೀಕರ ಬಿಸಿಲಬೇಗೆ, ಬಿಸಿಗಾಳಿ ಮತ್ತು ಅನಾವೃಷ್ಟಿ ಹವಾಮಾನ ವೈಪರೀತ್ಯದ ಹಲವು ಮುಖಗಳನ್ನು ಏಕಕಾಲದಲ್ಲಿ ತೋರಿಸಿದೆ. ಇಂತಹದೇ ದುರ್ಗತಿಯನ್ನು ಮುಂದಿನ ವರ್ಷವೂ ಆ ದೇಶ ಅನುಭವಿಸಿದರೆ ಅದು ಸಹಜ ಬದುಕಿನತ್ತ ಮತ್ತೆ ಹೊರಳುವುದು ಬಹುತೇಕ ಅಸಾಧ್ಯ. ಹೊರಳಿದರೂ ಅದಕ್ಕೆ ಬಹುಕಾಲ ಬೇಕಾಗುತ್ತದೆ. 3,800-3,700 ವರ್ಷಗಳ ಹಿಂದೆಯೂ ಹೀಗೆಯೇ ಹಲವು ಪ್ರಾಕೃತಿಕ ವಿಕೋಪಗಳು ಈ ಪ್ರದೇಶಕ್ಕೆ ಏಕಕಾಲದಲ್ಲಿ ಎರಗಿರಬಹುದೇ? ಒಂದು ಕಾಲದಲ್ಲಿ ಜೀವನದಿಯನ್ನೂ, ಅದರ ಪಾತ್ರದುದ್ದಕ್ಕೂ ನಾಗರಿಕ ಜನವಸತಿಯನ್ನೂ ಹೊಂದಿದ್ದ ರಾಜಸ್ತಾನ ಈಗ ಮರಳುಗಾಡಾಗಿ ಬದಲಾಗಿಹೋಗಿರುವುದಾದರೆ, ಅಲ್ಲಿ ಮತ್ತದರ ಮೂರೂ ದಿಕ್ಕುಗಳಲ್ಲೂ ಬೆಳೆದಿದ್ದ ಒಂದು ಭವ್ಯ ನಾಗರಿಕತೆಯೇ ಸಂಪೂರ್ಣವಾಗಿ ಅಳಿದುಹೋಗಿರಬಹುದಾದರೆ ಮೂರೂಮುಕ್ಕಾಲು ಸಹಸ್ರಮಾನಗಳ ಹಿಂದೆ ಘಟಿಸಿದ್ದಿರಬಹುದಾದ ಆ ಪ್ರಾಕೃತಿಕ ವಿಕೋಪ ಯಾವ ಪ್ರಮಾಣದ್ದಾಗಿರಬಹುದು!
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)