ಕರ್ಮ ಹಿಂಬಾಲಿಸಿಕೊಂಡು ಬರುತ್ತದೆ ಅಂದರೆ ಇದೇ!

Column F
Published on
ಭಯೋತ್ಪಾದನೆಯನ್ನೇ ಗುರಿಯಾಗಿಸಿಕೊಂಡು, ಎಲ್ಲ ಆದಾಯವನ್ನೂ ಅದಕ್ಕಾಗಿ ಸುರಿದು ಅಭಿವೃದ್ಧಿ ಯೋಜನೆಗಳನ್ನು ಕಡೆಗಣಿಸಿದ ಪಾಕಿಸ್ತಾನ ದುಸ್ಥಿತಿಯಲ್ಲಿದೆ. ರಷ್ಯಾ-ಯೂಕ್ರೇನ್ ಯುದ್ಧದಿಂದಾಗಿ ತೈಲ ಬೆಲೆ ಏರಿರುವುದು ದೊಡ್ಡ ಹೊರೆಯಾಗಿದೆ. ಚಹಾಪುಡಿ ಆಮದು ಸಾಧ್ಯವಾಗದಿರುವುದರಿಂದ ಚಹಾ ಕುಡಿಯುವುದನ್ನೇ ಕಡಿಮೆ ಮಾಡಿ ಎಂದು ಸರ್ಕಾರ ಜನತೆಗೆ ಹೇಳಿದೆ!

ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್)ಯಿಂದ 1958ರಲ್ಲಿ ಮೊದಲ ಬಾರಿಗೆ ಸಾಲ ಪಡೆದ ಪಾಕಿಸ್ತಾನ ಅದನ್ನು ಸದುಪಯೋಗಪಡಿಸಿಕೊಂಡು ಆರ್ಥಿಕ ಅಭಿವೃದ್ಧಿಯಲ್ಲಿ ದಾಪುಗಾಲು ಇಟ್ಟದ್ದುಂಟು. ಜನರಲ್ ಅಯೂಬ್ ಖಾನ್ ಸರ್ಕಾರ ‘ನಯೀ ಕಿರಣ್’ ಯೋಜನೆಯಡಿಯಲ್ಲಿ ಆರಂಭಿಸಿದ ವಿವಿಧ ಕಾರ್ಯಕ್ರಮಗಳು ಸಫಲವಾಗತೊಡಗಿ 1960ರ ದಶಕದ ಆದಿಭಾಗದಲ್ಲಿ ಪಾಕಿಸ್ತಾನ ಏಷ್ಯಾದ ಅತಿವೇಗದ ಅಭಿವೃದ್ಧಿಶೀಲ ರಾಷ್ಟ್ರ ಎಂಬ ಹೆಗ್ಗಳಿಕೆ ಪಡೆಯಿತು. ಆಗ ಅದರ ವಾರ್ಷಿಕ ಅಭಿವೃದ್ಧಿ ದರ ಶೇ. 5.2 ಇತ್ತು. ಇದನ್ನು ಅಂದಿನ ಭಾರತದ ಶೇ. 2.5ಗೆ ಹೋಲಿಸಿದರೆ ಪಾಕಿಸ್ತಾನದ ಅಭಿವೃದ್ಧಿ ವೇಗದ ಒಂದು ಕಲ್ಪನೆ ನಿಮಗಾಗಬಹುದು.

ಪಾಕಿಸ್ತಾನ ಎರಡನೆಯ ಬಾರಿಗೆ ಐಎಂಎಫ್ ಸಾಲ ತೆಗೆದುಕೊಂಡದ್ದು ಮಾರ್ಚ್ 1965ರಲ್ಲಿ. ಸರಿಸುಮಾರು ಅದೇ ಅವಧಿಯಲ್ಲಿ ಅಂದರೆ 1957-65ರಲ್ಲಿ ಭಾರತ ನಾಲ್ಕು ಬಾರಿ ಐಎಂಎಫ್ ಮುಂದೆ ಕೈಯೊಡ್ಡಿತ್ತು ಎಂಬ ವಿಷಯ ಆರ್ಥಿಕವಾಗಿ ಪಾಕಿಸ್ತಾನ ನಮಗಿಂತಲೂ ಎಷ್ಟು ಉತ್ತಮ ಸ್ಥಿತಿಯಲ್ಲಿತ್ತೆಂಬುದನ್ನು ತೋರಿಸುತ್ತದೆ. ಆದರೆ, ಇದೆಲ್ಲವನ್ನೂ ಹಾಳುಮಾಡಿದ್ದು 1965ರಲ್ಲಿ ಭಾರತದೊಂದಿಗೆ ಅನಗತ್ಯವಾಗಿ ನಡೆಸಿದ ಯುದ್ಧ. ಅದರಿಂದಾಗಿ ಆಮದು ವೆಚ್ಚ, ಡಾಲರ್ ಕೊರತೆ ಉಲ್ಬಣಗೊಂಡು, ಅದನ್ನು ಸರಿದೂಗಿಸಲು ಪಾಕಿಸ್ತಾನ 1968ರಲ್ಲಿ ಮೂರನೆಯ ಬಾರಿಗೆ ಐಎಂಎಫ್ ಮುಂದೆ ಹೋಗಿ ನಿಂತಿತು. 1971ರಲ್ಲಿ ಮತ್ತೊಂದು ವಿನಾಶಕಾರಿ ಯುದ್ಧವಾಗಿ, ದೇಶದ ವಿದೇಶೀ ವಿನಿಮಯದ (ಅಂದರೆ ಡಾಲರ್ ಗಳಿಕೆಯ) ಶೇ. 70ನ್ನು ತರುತ್ತಿದ್ದ ಪೂರ್ವ ಭಾಗವನ್ನು ಕಳೆದುಕೊಂಡದ್ದರಿಂದಾಗಿ ಪಾಕಿಸ್ತಾನದ ಆರ್ಥಿಕ ಸ್ಥಿತಿ ಗಣನೀಯವಾಗಿ ಕುಸಿಯಿತು. ಪರಿಣಾಮವಾಗಿ ಸತತವಾಗಿ 1972, 1973 ಮತ್ತು 1974ರಲ್ಲಿ ಐಎಂಎಫ್ ಸಾಲಕ್ಕಾಗಿ ಕೈಯೊಡ್ಡುವ ಸ್ಥಿತಿ ನಿರ್ವಣವಾಯಿತು.

ಮುಂದೆ ಅದೇ ಅಭ್ಯಾಸವಾಗಿಹೋಯಿತು. ಅದೇ ಅವಧಿಯಲ್ಲಿ ಭಾರತದ ಜಾಯಮಾನ ಬದಲಾಗತೊಡಗಿದ್ದೊಂದು ವಿಶೇಷ. 1965ರ ನಂತರ ಭಾರತ ಐಎಂಎಫ್ ಮುಂದೆ ನಿಂತದ್ದು ಎರಡೇ ಸಲ-1981 ಮತ್ತು 1991ರಲ್ಲಿ. ಅಲ್ಲಿಂದೀಚೆಗೆ ಭಾರತ ಒಮ್ಮೆಯೂ ಐಎಂಎಫ್​ನಿಂದ ಸಾಲ ತೆಗೆದುಕೊಂಡಿಲ್ಲ. ಇಂದಿರಾ ಗಾಂಧಿ ಸಾಧಿಸಿದ್ದ ಆರ್ಥಿಕ ಪ್ರಗತಿಯನ್ನು ಹಾಳುಮಾಡಿದ್ದು ರಾಜೀವ್ ಗಾಂಧಿ (ಅಥವಾ ಅವರ ‘ಜತೆ’ ಇದ್ದವರು!) ಅದನ್ನು ಸರಿದಾರಿಗೆ ತರಲು ವಿ.ಪಿ. ಸಿಂಗ್ ಅವರಿಗೆ ಮನಸ್ಸಾಗಲೀ, ವ್ಯವಧಾನವಾಗಲೀ ಇದ್ದಂತೆ ಕಾಣುವುದಿಲ್ಲ. ಜತೆಗೆ, ಸುಮಾರು ಹತ್ತು ಸಾವಿರ ಕೋಟಿ ರೂಪಾಯಿಗಳ ಕೃಷಿ ಸಾಲಗಳನ್ನು ಮನ್ನಾ ಮಾಡಿ ಅವರು ಸರ್ಕಾರದ ಬೊಕ್ಕಸವನ್ನು ಇನ್ನಷ್ಟು ತಳ ಕಾಣಿಸಿದರು. ಇದೆಲ್ಲದರಿಂದಾಗಿ ಪರಿಸ್ಥಿತಿ ಅದೆಷ್ಟು ಕೆಟ್ಟಿತೆಂದರೆ ಚಂದ್ರಶೇಖರ್ ಸರ್ಕಾರದಲ್ಲಿ ಅರ್ಥ ಮಂತ್ರಿಯಾಗಿದ್ದ ಯಶವಂತ್ ಸಿನ್ಹಾ ಫೆಬ್ರವರಿ 1991ರಲ್ಲಿ ವಾರ್ಷಿಕ ಬಜೆಟ್ ಮಂಡಿಸಲಾಗಲಿಲ್ಲ! ಜತೆಗೆ, ವಿದೇಶೀ ವಿನಿಮಯ ಸಂಗ್ರಹ ಕೇವಲ ಎರಡು ವಾರಗಳ ಆಮದಿಗಾಗುವಷ್ಟು ಉಳಿದಂತಹ ಸಂಕಷ್ಟ ಸ್ಥಿತಿ ನಿರ್ಮಾಣ ವಾಯಿತು. ವಿಧಿಯಿಲ್ಲದೆ ಚಂದ್ರಶೇಖರ್ ಸರ್ಕಾರ, ಅದುವರೆಗೆ ಕಳ್ಳಸಾಗಾಣಿಕೆದಾರರಿಂದ ವಶಪಡಿಸಿಕೊಳ್ಳಲಾಗಿದ್ದ ಸುಮಾರು 20 ಟನ್ ಚಿನ್ನವನ್ನು ಉಪಯೋಗಿಸಿ ಯೂನಿಯನ್ ಬ್ಯಾಂಕ್ ಆಫ್ ಸ್ವಿಜರ್​ಲ್ಯಾಂಡ್​ನಿಂದ 240 ಮಿಲಿಯನ್ ಡಾಲರ್ ತಂದು ಪರಿಸ್ಥಿತಿಯನ್ನು ಕೆಲ ದಿನ ಹೇಗೋ ನಿಭಾಯಿಸಲು ನೋಡಿತು. ನಂತರ ಅಧಿಕಾರಕ್ಕೆ ಬಂದ ಪಿ.ವಿ. ನರಸಿಂಹರಾವ್ ಸರ್ಕಾರ ನಮ್ಮ ರಿಸರ್ವ್ ಬ್ಯಾಂಕ್​ನ ಚಿನ್ನ ಸಂಗ್ರಹದಲ್ಲಿ 47 ಟನ್ ಚಿನ್ನವನ್ನು ಬ್ಯಾಂಕ್ ಆಫ್ ಇಂಗ್ಲೆಂಡ್​ನಲ್ಲಿ ಅಡವಿಟ್ಟು 400 ಮಿಲಿಯನ್ ಡಾಲರ್ ತರಬೇಕಾಯಿತು. ಹೀಗೆ ತತ್​ಕ್ಷಣದ ಸಂಕಷ್ಟದಿಂದ ಹೊರಬಂದು ಐಎಂಎಫ್ ಸಾಲಕ್ಕಾಗಿ ಭಾರತ ಪ್ರಯತ್ನಿಸಿದಾಗ ಆರ್ಥಿಕ ಸುಧಾರಣೆಗಳನ್ನು ಜಾರಿಗೆ ತರದಿದ್ದರೆ ಸಾಲ ನೀಡಲಾಗುವುದಿಲ್ಲ ಎಂದು ಆ ಸಂಸ್ಥೆ ಕರಾರು ಹಾಕಿತು.

ಉದ್ಯಮವೊಂದನ್ನು ಸ್ಥಾಪಿಸಲು 87 ಲೈಸನ್ಸ್​ಗಳನ್ನು ಪಡೆಯಬೇಕಾದ ದುರ್ಭರ ಸ್ಥಿತಿಯನ್ನು ಕೈಗಾರಿಕೋದ್ಯಮಿಗಳಿಗೆ ನಿರ್ವಿುಸಿ ಅವರ ಉತ್ಸಾಹಕ್ಕೆ ತಣ್ಣೀರೆರಚುತ್ತಿದ್ದ ನೆಹರೂರ ಲೈಸನ್ಸ್ ರಾಜ್, ಪರ್ವಿುಟ್ ರಾಜ್ ಎಂಬ ಕರಾಳ ಆರ್ಥಿಕ ನೀತಿಗಳನ್ನು ಕಿತ್ತೊಗೆಯದೇ ಬೇರೆ ಮಾರ್ಗವೇ ಇಲ್ಲ ಎಂದು ಕಮ್ಯೂನಿಸ್ಟರ ಹೊರತಾಗಿ ಇತರೆಲ್ಲರೂ ಅರಿತ ಸಮಯ ಅದು. ನೆಹರೂ ರೂಪಿಸಿದ್ದ ಪರ್ವಿುಟ್ ರಾಜ್ ನೀತಿಯಿಂದ 1960ರ ದಶಕದಲ್ಲೇ ಜನತೆ ಅದೆಷ್ಟು ರೋಸಿಹೋಗಿತ್ತೆಂದರೆ ಅದನ್ನು ಸೂಕ್ಷ್ಮವಾಗಿ ಲೇವಡಿ ಮಾಡುವ ‘ಪ್ರೇಮಕ್ಕೂ ಪರ್ವಿುಟ್ಟೇ?’ ಎಂಬ ಕನ್ನಡ ಚಲನಚಿತ್ರವೂ ಬಂದಿತ್ತು! ಈ ಎಲ್ಲಾ ಹಿನ್ನೆಲೆಯಲ್ಲಿ, ವಿವೇಕಿಯಾದ ನರಸಿಂಹರಾವ್ ಅವರು ತಮ್ಮ ಚಿಂತನೆಗಳನ್ನು ಪರಿಣಾಮಕಾರಿ ಆರ್ಥಿಕ ನೀತಿಗಳಾಗಿ ರೂಪಿಸಲು ಅರ್ಥಶಾಸ್ತ್ರಜ್ಞ ಡಾ. ಮನಮೋಹನ್ ಸಿಂಗ್ ಅವರನ್ನು ಆಯ್ಕೆ ಮಾಡಿಕೊಂಡರು. ನರಸಿಂಹರಾವ್-ಮನಮೋಹನ್ ಸಿಂಗ್ ಜೋಡಿ ಆರ್ಥಿಕ ಉದಾರೀಕರಣವನ್ನು ಐಎಂಎಫ್ ನಿರೀಕ್ಷೆಗೂ ಮೀರಿ ಜಾರಿಗೊಳಿಸಿತು. ಪರಿಣಾಮವಾಗಿ ಅಲ್ಲಿಯವರೆಗೆ ನಕಲಿ ಸಮಾಜವಾದಿಗಳ ಆರ್ಥಿಕ ನೀತಿಗಳಿಂದಾಗಿ ಎಂದೂ ಶೇ 3.5 ದಾಟದೇ ನಗೆಪಾಟಲಿಗೀಡಾಗುತ್ತಿದ್ದ ಭಾರತದ ವಾರ್ಷಿಕ ಅಭಿವೃದ್ಧಿ ದರ ಮೂರೇ ವರ್ಷಗಳಲ್ಲಿ ಶೇ. 8ನ್ನು ಮೀರಿ ಬೆಳೆಯಿತು. ಈ ಅಭಿವೃದ್ಧಿ ದೇಶವನ್ನು ಆರ್ಥಿಕವಾಗಿ ಅದೆಷ್ಟು ಸದೃಢಗೊಳಿಸತೊಡಗಿತೆಂದರೆ ಒಪ್ಪಂದದ ಪ್ರಕಾರ ಐಎಂಎಫ್ ನೀಡಲು ಮುಂದೆ ಬಂದ ಸಾಲದ ಉಳಿದೆರಡು ಕಂತುಗಳು ತನಗೆ ಅಗತ್ಯವಿಲ್ಲವೆಂದು ಭಾರತ ಹೇಳಿ ಜಗತ್ತನ್ನೇ ದಂಗುಬಡಿಸಿತು!

1977ರಲ್ಲಿ ಏಳನೆಯ ಬಾರಿಗೆ ಐಎಂಎಫ್​ನಿಂದ ಸಾಲ ತೆಗೆದುಕೊಂಡ ಪಾಕಿಸ್ತಾನ ಅದನ್ನೇ ಚಾಳಿಯಾಗಿ ಮುಂದುವರಿಸಿಕೊಂಡು ಬಂದಿದೆ. ಐಎಂಎಫ್ ಜತೆಗೆ ಇತರ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಪಡೆದ ಸಾಲಗಳು ಹಾಗೂ ಅಮೆರಿಕಾ, ವಿವಿಧ ಪಶ್ಚಿಮ ಯೂರೋಪಿಯನ್ ದೇಶಗಳು ಮತ್ತು ಶ್ರೀಮಂತ ಅರಬ್ ದೇಶಗಳಿಂದ ಬಂದ ನೆರವಿನ ಹಣವನ್ನು ಪಾಕಿಸ್ತಾನ ಬಳಸಿದ್ದು ಅಭಿವೃದ್ಧಿ ಯೋಜನೆಗಳಿಗಲ್ಲ, ಬದಲಾಗಿ ಪಂಜಾಬ್ ಮತ್ತು ಕಾಶ್ಮೀರಗಳಲ್ಲಿ ಭಯೋತ್ಪಾದನೆಯನ್ನು ಪ್ರಾಯೋಜಿಸಿ ಭಾರತದ ವಿರುದ್ಧ ದಶಕಗಳವರೆಗೆ ಪರೋಕ್ಷ ಯುದ್ಧ ನಡೆಸುವುದಕ್ಕಾಗಿ! ಇಷ್ಟಾಗಿಯೂ ಐಎಂಎಫ್ ಮತ್ತೆಮತ್ತೆ ಸಾಲ ಕೊಡಲು ನಿರಾಕರಿಸಲಿಲ್ಲವೇಕೆ? ಇದೇನೂ ಯಕ್ಷಪ್ರಶ್ನೆಯಷ್ಟು ಕಠಿಣವೇನಲ್ಲ ಬಿಡಿ. ಮೊದಲಿಗೆ ಸೋವಿಯೆತ್ ಯೂನಿಯನ್ ವಿರುದ್ಧದ ಅಫ್ಘನ್ ಯುದ್ಧದಲ್ಲಿ ಮತ್ತು ನಂತರ ಇಸ್ಲಾಮಿಕ್ ಭಯೋತ್ಪಾದನೆಯ ವಿರುದ್ಧದ ಯುದ್ಧದಲ್ಲಿ ತನಗೆ ‘ಜತೆಗಾರ’ನಾಗಿ ನಿಂತ ಪಾಕಿಸ್ತಾನದ ಮೇಲೆ ಅಮೆರಿಕಾದ ಕೃಪಾಕಟಾಕ್ಷವಿತ್ತು. ದೊಡ್ಡಣ್ಣ ಹೇಳಿದರೆ ಐಎಂಎಫ್ ಇರಲಿ ಅದರಪ್ಪನೂ ಓಡೋಡಿ ಬಂದು ಸಾಲ ಕೊಡುತ್ತದೆ. ಪಾಕಿಸ್ತಾನ ಇಂದು ಅಮೆರಿಕಾದ ಕೃಪಾಕಟಾಕ್ಷವನ್ನು ಕಳೆದುಕೊಂಡಿದೆ. ಭಯೋತ್ಪಾದನೆಯ ವಿರುದ್ಧದ ಯುದ್ಧದ ನೆಪದಲ್ಲಿ ಅಮೆರಿಕಾದಿಂದಲೇ 35 ಬಿಲಿಯನ್ ಡಾಲರ್​ಗಳ ಅಗಾಧ ಮೊತ್ತವನ್ನೂ ಪಡೆದಾಗ್ಯೂ ಅದೇ ಅಮೆರಿಕಾದ ಬೆನ್ನಹಿಂದೆಯೇ ಅದೇ ಭಯೋತ್ಪಾದಕರನ್ನು ಬೆಂಬಲಿಸಿ ಬೆಳೆಸುವ ಇಬ್ಬಂದಿ ನಿಲುವನ್ನು ಪ್ರದರ್ಶಿಸಿದ್ದಕ್ಕಾಗಿ ಈಗ ಬೆಲೆ ತೆರುತ್ತಿದೆ. ಮೊದಲಿಗೆ ಡೊನಾಲ್ಡ್ ಟ್ರಂಪ್ ನೆರವು ಹಣದ ಶೇ. 90ನ್ನು ಕತ್ತರಿಸಿದ್ದಲ್ಲದೆ, ಐಎಂಎಫ್​ನಿಂದ ಸಾಲ ಪಡೆಯುವುದಕ್ಕೂ ತಡೆಯೊಡ್ಡಿದರು. ನಂತರ, ಒಂದುಕಾಲದಲ್ಲಿ ಪಾಕಿಸ್ತಾನಕ್ಕೆ ವಾರ್ಷಿಕ ಒಂದೂವರೆ ಬಿಲಿಯನ್ ಡಾಲರ್ ಅಮೆರಿಕನ್ ಸಹಾಯಧನ (ಅಂದರೆ ಪುಕ್ಕಟೆ!) ದೊರೆಯಲು ಕಾರಣವಾಗಿದ್ದ ಸೆನೇಟರ್ ಜೋ ಬೈಡೆನ್ ಇಂದು ಅಧ್ಯಕ್ಷರಾಗಿ ಪಾಕಿಸ್ತಾನದತ್ತ ತಿರುಗಿಯೂ ನೋಡುತ್ತಿಲ್ಲ. ಅಂತಾರಾಷ್ಟ್ರೀಯ ಭಯೋತ್ಪಾದನೆಯ ಪೋಷಣೆಯನ್ನು ತಡೆಯಲು ನಿರ್ವಣವಾಗಿರುವ ಫೈನಾನ್ಷಿಯಲ್ ಆಕ್ಷನ್ ಟಾಸ್ಕ್​ಫೋರ್ಸ್ (ಎಫ್​ಎಟಿಎಫ್) ಪಾಕಿಸ್ತಾನವನ್ನು ಬೂದು ಪಟ್ಟಿಯಲ್ಲಿಟ್ಟಿರುವ ಕಾರಣದಿಂದಾಗಿ ಇತರೆಡೆಗಳಿಂದಲೂ ‘ನ್ಯಾಯಯುತ’ ಮಾರ್ಗ ಗಳಲ್ಲಿ ನೆರವನ್ನೋ, ಸಾಲವನ್ನೋ ಪಡೆಯುವುದು ಪಾಕಿಸ್ತಾನಕ್ಕೆ ಸಾಧ್ಯವಾಗುತ್ತಿಲ್ಲ.

ಭಯೋತ್ಪಾದನೆಯನ್ನೇ ಗುರಿಯಾಗಿಸಿಕೊಂಡು, ಎಲ್ಲ ಆದಾಯವನ್ನೂ ಅದಕ್ಕಾಗಿ ಸುರಿದು ಅಭಿವೃದ್ಧಿ ಯೋಜನೆಗಳನ್ನು ಕಡೆಗಣಿಸಿದ ಪಾಕಿಸ್ತಾನ ಇಂದು ಯಾವ ಸ್ಥಿತಿಯಲ್ಲಿದೆ? ಉದ್ಯಮಗಳನ್ನು ಸ್ಥಾಪಿಸದ ಕಾರಣದಿಂದಾಗಿ ಬಹುತೇಕ ಅಗತ್ಯ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕಾಗಿದೆ. ಕೃಷಿ ಪ್ರಧಾನ ದೇಶವಾದ ಅದು ನೀರಾವರಿಯಂತಹ ಸೌಲಭ್ಯಗಳನ್ನು ಕಡೆಗಣಿಸಿದ ಪರಿಣಾಮವಾಗಿ ಅದು ತನ್ನ ಅಗತ್ಯದ ಶೇ. 70 ಬೇಳೆಕಾಳುಗಳನ್ನೂ, ಶೇ. 85 ಅಡುಗೆ ಎಣ್ಣೆಯನ್ನೂ ಹೊರಗಿನಿಂದ ಆಮದು ಮಾಡಿಕೊಳ್ಳುತ್ತಿದೆ. ಇತ್ತೀಚೆಗೆ ಜನರ ಪ್ರಮುಖ ಆಹಾರವಾದ ಗೋಧಿಯನ್ನೂ ಆಮದು ಮಾಡಿಕೊಳ್ಳಬೇಕಾಗಿದೆಯೆಂದು ಸುದ್ದಿ! ರಷ್ಯಾ-ಯೂಕ್ರೇನ್ ಯುದ್ಧದಿಂದಾಗಿ ತೈಲ ಬೆಲೆಯೂ ಏರಿರುವುದರಿಂದ ಅದರ ಆಮದೂ ದೊಡ್ಡ ಹೊರೆಯಾಗಿದೆ. ತೈಲ ಆಮದನ್ನು ಜಾರಿಯಲ್ಲಿಡಲು ಇತರ ವಸ್ತುಗಳ ಆಮದಿ ನಲ್ಲಿ ಕಡಿತ ಉಂಟುಮಾಡಬೇಕಾಗಿದೆ. ಅಗತ್ಯವಾದಷ್ಟು ಚಹಾಪುಡಿ ಆಮದು ಸಾಧ್ಯವಾಗದಿರುವುದರಿಂದ ಚಹಾ ಕುಡಿಯುವುದನ್ನೇ ಕಡಿಮೆ ಮಾಡಿ ಎಂದು ಸರ್ಕಾರ ಜನತೆಗೆ ಹೇಳಿದೆ!

ಇಷ್ಟಾಗಿಯೂ ಅಗತ್ಯವಿರುವಷ್ಟು ತೈಲ ಆಮದು ಸಾಧ್ಯವಾಗುತ್ತಿಲ್ಲ. ತೈಲ ಕೊರತೆ ಅದೆಷ್ಟು ಬಿಗಡಾಯಿಸಿದೆ ಯೆಂದರೆ, ಸರ್ಕಾರಿ ನೌಕರರಿಗೆ ವಾರಕ್ಕೆ ಆರು ದಿನ, ದಿನಕ್ಕೆ ಹತ್ತು ಗಂಟೆ ಕೆಲಸ ಎಂದು ಅಧಿಕಾರಕ್ಕೆ ಬಂದಾಗ ಘೊಷಿಸಿದ್ದ ಶೆಹ್​ಭಾಜ್ ಶರೀಫ್ ಸರ್ಕಾರ ಕೆಲವೇ ದಿನಗಳಲ್ಲಿ ವಾರಕ್ಕೆ ಮೂರು ದಿನ ವರ್ಕ್ ಫ್ರಂ ಹೋಮ್ ಘೊಷಿಸಿತು! ತೈಲ ಕೊರತೆಯಿಂದಾಗಿ ನೌಕರರಿಗೆ ಸ್ವಂತ ವಾಹನ ಚಲಾಯಿಸಲಾಗುತ್ತಿಲ್ಲದ ಹಾಗೂ ಸೂಕ್ತ ವಾಹನ ಸೌಲಭ್ಯವನ್ನು ಒದಗಿಸಲು ತನಗೆ ಸಾಧ್ಯವಾಗುತ್ತಿಲ್ಲದ ಕಾರಣ ಸರ್ಕಾರ ತನ್ನ ಕೆಲಸಗಳೇ ಘಾಸಿಗೊಳಗಾಗುವಂತಹ ಈ ಮಾರ್ಗ ಹಿಡಿದಿದೆ! ಇದು ಸಾಲದೆಂಬಂತೆ ಚೀನೀಯರ ಹಿಡಿತದಲ್ಲಿರುವ ವಿದ್ಯುತ್ ಉತ್ಪಾದನಾ ಘಟಕಗಳು ಹಣ ಪಾವತಿಯಾಗಿಲ್ಲ ಎಂದು ವಿದ್ಯುತ್ ಪೂರೈಕೆಯನ್ನು ಬಹುತೇಕ ತಡೆಹಿಡಿದವು. ಕಾರಣ ಸರ್ಕಾರಿ ನೌಕರರು ಮನೆಯಿಂದಲೂ ಕೆಲಸ ಮಾಡಲಾಗುತ್ತಿಲ್ಲ.

ಜುಲೈ ಕೊನೆಯ ಹೊತ್ತಿಗೆ ಪೆಟ್ರೋಲ್ ಬೆಲೆ 236 ರೂಪಾಯಿ, ಡೀಸೆಲ್ ಬೆಲೆ 228 ರೂಪಾಯಿ ಆದ ಕಾರಣ ಸರಕು ಸಾಗಾಣಿಕೆಯೂ ಘಾಸಿಗೊಂಡು, ವಸ್ತುಗಳ ಬೆಲೆ ಗಗನಕ್ಕೇರುತ್ತಿದೆ. ಇದರಿಂದಾಗಿ ಹಣದುಬ್ಬರದ ಪ್ರಮಾಣ ಶೇ. 25! ಇದನ್ನು ನಮ್ಮಲ್ಲಿನ ಶೇ. 8ಕ್ಕೆ ಹೋಲಿಸಿದರೆ ಸಾಮಾನ್ಯ ಪಾಕಿಸ್ತಾನೀಯರ ಕಷ್ಟ ನಮಗರಿವಾಗಬಹುದು. ಈಗ ಉಳಿದಿರುವ ಸುಮಾರು 8 ಬಿಲಿಯನ್ ಡಾಲರ್ ವಿದೇಶೀ ವಿನಿಮಯದಲ್ಲಿ 6.5 ಬಿಲಿಯನ್ ಚೀನೀ ಸಾಲಕ್ಕೆ ಬಡ್ಡಿ ಕಟ್ಟಲು ಹೋಗುತ್ತದೆ. ಪ್ರಸಕ್ತ ಸರ್ಕಾರ ಮತ್ತು ಸೇನೆ ಅಮೆರಿಕಾದ ಪರವಾಗಿರುವುದರಿಂದ ಚೀನಾ ಯಾವುದೇ ರಿಯಾಯಿತಿ ತೋರುತ್ತಿಲ್ಲ. ಕತ್ತಿನ ಮೇಲೆ ಕೂತು ವಸೂಲಿ ಮಾಡಿಕೊಳ್ಳುತ್ತಿದೆ. ಹೀಗಾಗಿ ಉಳಿದ ಒಂದು ಬಿಲಿಯನ್​ನಷ್ಟನ್ನು ಅಗತ್ಯ ವಸ್ತುಗಳ ಆಮದಿಗಾಗಿ ಬಳಸಬೇಕೋ, ಇತರ ಸಾಲಗಳ ಮರುಪಾವತಿಗಾಗಿ ಬಳಸಬೇಕೋ ಸರ್ಕಾರಕ್ಕೆ ತಿಳಿಯುತ್ತಿಲ್ಲ. ಏನು ಮಾಡಿದರೂ ಶ್ರೀಲಂಕಾದ ಹಾಗೆ ಪಾಕಿಸ್ತಾನ ದಿವಾಳಿಯಾಗುವುದನ್ನು ತಡೆಯಲಾಗುತ್ತಿಲ್ಲ.

ಸೇನಾ ದಂಡನಾಯಕ ಕಮರ್ ಜಾವೇದ್ ಬಾಜ್ವಾ ಐಎಂಎಫ್​ನಿಂದ ಸಾಲ ಪಡೆಯಲು ಸಹಕರಿಸಿ ಎಂದು ಅಮೆರಿಕಾದ ಉಪ ವಿದೇಶಾಂಗ ಕಾರ್ಯದರ್ಶಿ ವೆಂಡಿ ಶೆರ್ವನ್​ರನ್ನು ಬೇಡಿಕೊಂಡಿದ್ದಾರೆ. ನಾಗರಿಕ ಸರ್ಕಾರವಿದ್ದರೂ ಸೇನಾ ದಂಡನಾಯಕ ಹೀಗೆ ಮಾಡಿದ್ದು ಕುತೂಹಲಕರ. ಈ ಬೇಡಿಕೆಗೆ ಅಮೆರಿಕಾ ಸಮ್ಮತಿಸುವ ಸೂಚನೆ ಹೊರಬಂದಿಲ್ಲ. ಒಂದುವೇಳೆ ಸಮ್ಮತಿಸಿದರೂ ಅದಕ್ಕನುಗುಣವಾಗಿ ಈ ತಿಂಗಳ ಕೊನೆಗೆ ನಡೆಯಲಿರುವ ಐಎಂಎಫ್ ಬೋರ್ಡ್ ಮೀಟಿಂಗ್​ನಲ್ಲಿ ಔಪಚಾರಿಕವಾಗಿ ನಿರ್ಧಾರ ತೆಗೆದುಕೊಳ್ಳಬೇಕಾದ್ದು ನಿಯಮ. ಅಲ್ಲಿಯವರೆಗೆ? ಇಂತಹ ಸನ್ನಿವೇಶದಲ್ಲೂ ಪ್ರಧಾನಮಂತ್ರಿ ಶೆಹ್​ಭಾಜ್ ಶರೀಫ್ ವಿಚಲಿತರಾದಂತೆ ಕಾಣುತ್ತಿಲ್ಲ. ಅಣ್ವಸ್ತ್ರಗಳನ್ನು ಹೊಂದಿರುವ ಪಾಕಿಸ್ತಾನ ದಿವಾಳಿಯಾಗಿ ಲಾಚಾರೆದ್ದುಹೋಗಲು ಜವಾಬ್ದಾರಿಯುತ ಜಾಗತಿಕ ಶಕ್ತಿಗಳು ಬಿಡಲಾರವು ಎಂದು ಅವರು ಹೇಳಿದ್ದಾರೆ! ಒಂದು ಕಾಲದಲ್ಲಿ ಭಾರತವನ್ನು ಬ್ಲಾ್ಯಕ್​ವೆುೕಲ್ ಮಾಡಲು ಅಣ್ವಸ್ತ್ರ ಝುಳಪಿಸುತ್ತಿದ್ದ ಪಾಕಿಸ್ತಾನ ಈಗ ಆರ್ಥಿಕ ಸಂಕಟದಿಂದ ಹೊರಬರಲೂ ಅದೇ ಅಣ್ವಸ್ತ್ರಗಳನ್ನು ಮುಂದೆಮಾಡುತ್ತಿದೆ! ಈ ಬ್ಲಾ್ಯಕ್​ವೆುೕಲ್​ಗೆ ಅಮೆರಿಕಾ ಬಗ್ಗುತ್ತದೆಯೇ? ಬಗ್ಗಲೇಬೇಕು.

ಪಾಕ್ ಸರ್ಕಾರಿ ವ್ಯವಸ್ಥೆ ಕುಸಿದು ಅಣ್ವಸ್ತ್ರಗಳು ಅಲ್-ಖೈದಾಗೋ, ಐಸಿಸ್​ಗೋ ಸಿಕ್ಕಿ ಅಮೆರಿಕಾ ವಿರುದ್ಧವೇ ಬಳಕೆಯಾಗಬಹುದಾದ ಗಂಡಾಂತರವನ್ನು ತಡೆಯಬೇಕಾದರೆ ಅಮೆರಿಕಾ ಏನಾದರೂ ಮಾಡಲೇಬೇಕು. ನಾಲ್ಕು ದಶಕಗಳ ಹಿಂದೆ ಅಫ್ಘಾನಿಸ್ತಾನದಲ್ಲಿ ತಮ್ಮ ಸೋವಿಯೆತ್-ವಿರೋಧಿ ಚಟುವಟಿಕೆಗಳಿಗೆ ಸಹಕಾರಿಯಾಗಿದೆ ಎಂಬ ಒಂದೇ ಕಾರಣಕ್ಕಾಗಿ ಪಾಕಿಸ್ತಾನದ Beg, Borrow or Steal ಅಣ್ವಸ್ತ್ರ ನೀತಿಗೆ ಸಹಕರಿಸಿದ್ದಕ್ಕೆ ಅಮೆರಿಕಾ ತೆರಬೇಕಾದ ಬೆಲೆ ಇದು. ಇದನ್ನೇ ಹೇಳುವುದು, ಕರ್ಮ ಹಿಂಬಾಲಿಸಿಕೊಂಡು ಬರುತ್ತದೆ ಅಂತ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net