

ಮುಂದಿನ ಐದು ವರ್ಷಗಳಲ್ಲಿ ಭಾರತ ಮತ್ತು ಪಾಕಿಸ್ತಾನಗಳ ನಡುವೆ ದೊಡ್ಡ ಪ್ರಮಾಣದ ಸಂಘರ್ಷ ಘಟಿಸುತ್ತದೆ ಎಂದು ಈ ವರದಿ ಹೇಳುತ್ತದೆ. ಅದಕ್ಕೆ ಕಾರಣವಾಗುವುದು ಪಾಕಿಸ್ತಾನ ಭಾರತದಲ್ಲಿ ಎಸಗುವ ಬಹು ದೊಡ್ಡ ಪ್ರಮಾಣದ ಭಯೋತ್ಪಾದನಾ ಕೃತ್ಯ ಮತ್ತದಕ್ಕೆ ಪ್ರತಿಕ್ರಿಯೆಯಾಗಿ ಭಾರತ ಕೈಗೊಳ್ಳುವ ಸೇನಾ ಕಾರ್ಯಾಚರಣೆ. ಸೈನಿಕರು ಮತ್ತು ಟ್ಯಾಂಕ್ಗಳನ್ನೊಳಗೊಂಡ ಈ ಕಾರ್ಯಾಚರಣೆಯಿಂದಾಗಿ ಗಾಬರಿಗೊಂಡ ಪಾಕಿಸ್ತಾನ ವಾಯುದಾಳಿ ನಡೆಸುತ್ತದಂತೆ. ಆಗ ಎರಡೂ ಸರ್ಕಾರಗಳ ತಪ್ಪು ಲೆಕ್ಕಾಚಾರಗಳಿಂದಾಗಿ ಘರ್ಷಣೆ ಪೂರ್ಣ ಪ್ರಮಾಣದ ಯುದ್ಧದ ಸ್ವರೂಪ ಪಡೆಯುತ್ತದಂತೆ.
ಎನ್ಐಸಿ ವರದಿಗಳು ಭಾರತ-ಪಾಕಿಸ್ತಾನ ಯುದ್ಧದ ಬಗ್ಗೆ ಹೇಳಿರುವುದು ಇದು ಮೊದಲಲ್ಲ. 2012-14ರಲ್ಲಿ ಕಾಶ್ಮೀರಕ್ಕೆ ಸಂಬಂಧಿಸಿದಂತೆ ಯುದ್ಧಕ್ಕಿಳಿಯುವ ಪಾಕಿಸ್ತಾನ ಸೋತು ಭಾರತದಲ್ಲಿ ವಿಲೀನಗೊಳ್ಳುತ್ತದೆ ಎಂದು 2002ರ ವರದಿ ಹೇಳಿತ್ತು. ಹಾಗೇನೂ ಆಗಲಿಲ್ಲ. ಹೀಗಂದ ಮಾತ್ರಕ್ಕೆ ಎನ್ಐಸಿ ವರದಿಗಳು ವ್ಯರ್ಥಪ್ರಲಾಪವೇ? ಹಾಗೇನೂ ಇಲ್ಲ ಎನ್ನುವುದಕ್ಕೆ ಆಧಾರಗಳಿವೆ.
ಪೂರ್ವ ಏಷ್ಯಾದಲ್ಲಿ ಮಹಾಮಾರಿಯೊಂದು ತಲೆದೋರಿ ವ್ಯಾಪಕ ಜೀವಹಾನಿ ಹಾಗೂ ಆರ್ಥಿಕ ಅನಾಹುತಗಳಿಗೆ ಕಾರಣವಾಗುತ್ತದೆ ಎಂದು 2009ರ ವರದಿ ಹೇಳಿತ್ತು. ಇದೇ ಮಾತು 2017ರ ವರದಿಯಲ್ಲೂ ಪುನರಾವರ್ತನೆಯಾಯಿತು. ಅದು ಸತ್ಯವಾದದ್ದನ್ನು ನಾವೀಗ ಅನುಭವಿಸುತ್ತಿದ್ದೇವೆ. ಹಾಗಿದ್ದರೆ ಕರೊನಾ ಮಹಾಮಾರಿಯ ಬಗ್ಗೆ ನಿಖರವಾಗಿ ಹೇಳಲು ಎನ್ಐಸಿಗೆ ಸಾಧ್ಯವಾದದ್ದಾದರೂ ಹೇಗೆ? ಈ ಪ್ರಶ್ನೆಗೆ ಉತ್ತರಿಸಬೇಕಾದರೆ ಎನ್ಐಸಿ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸುವುದರ ಹಿಂದಿರಬಹುದಾದ ಉದ್ದೇಶವನ್ನೂ, ವರದಿ ಪ್ರಕಟವಾದ ನಂತರದ ಘಟಿಸುವ ಬೆಳವಣಿಗೆಗಳನ್ನೂ ಸೂಕ್ಷ್ಮವಾಗಿ ಪರಿಶೀಲಿಸಬೇಕಾಗುತ್ತದೆ.
ಚೀನೀ ರಾಜಧಾನಿ ಬೀಜಿಂಗ್ನಲ್ಲೇ ಇರುವ ಲ್ಯಾಬೊರೇಟರಿಯೊಂದರಿಂದ 2003ರಲ್ಲಿ ಸಾರ್ಸ್ ರೋಗಾಣು ಹೊರಬಂದು ತಾತ್ಕಾಲಿಕವಾಗಿ ಜಗತ್ತನ್ನು ಕಂಗೆಡಿಸಿದ ಕಾರಣ ಮುಂದೊಮ್ಮೆ ಅಂತಹದೇ ಆಕಸ್ಮಿಕ ದೊಡ್ಡ ಪ್ರಮಾಣದಲ್ಲಿ ಘಟಿಸಬಹುದೆಂದು ಎನ್ಐಸಿ ಗುಪ್ತಚರರು ಲೆಕ್ಕಹಾಕಿದ್ದಿರಬಹುದೆಂದು ರ್ತಸಬಹುದಾದರೂ 2009ರ ವರದಿ ಬಿಡುಗಡೆಯಾದ ನಂತರದ ಘಟನಾವಳಿಗಳು ನಮ್ಮ ಊಹೆಯನ್ನು ಬೇರೊಂದು ದಿಕ್ಕಿನಲ್ಲಿ ಕೊಂಡೊಯ್ಯುತ್ತವೆ. ಆ ವರದಿ ಹೊರಬಂದ ಒಂದು ವರ್ಷದಲ್ಲಿ ವೂಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿ(ಡಬ್ಲು್ಯಐವಿ)ಯಲ್ಲಿ ‘ಬ್ಯಾಟ್ವುಮನ್’ ಡಾ. ಶಿ ಜೆಂಗ್ಲಿ ಬಾವಲಿ ಕರೊನಾ ವೈರಸ್ ಬಗ್ಗೆ ಸಂಶೋಧನೆ ಆರಂಭಿಸಿದಳು. 2011-12ರಲ್ಲಿ ಆಕೆಯ ಸಂಶೋಧನಾ ತಂಡಕ್ಕೆ ಯುನಾನ್ನ ಕಲ್ಲಿದ್ದಲು ಗಣಿಯೊಂದರ ಕತ್ತಲಿನಲ್ಲಿ ಮನುಷ್ಯನಿಗೆ ಮಾರಕವೆನಿಸುವ ಕರೊನಾ ವೈರಸ್ನ ಸ್ಯಾಂಪಲ್ಗಳು ಸಿಕ್ಕಿದವು. 2014ರಲ್ಲಿ ಡಬ್ಲು್ಯಐವಿಯಲ್ಲಿ 44 ಮಿಲಿಯನ್ ಡಾಲರ್ ವೆಚ್ಚದಲ್ಲಿ ಬಯೋ-ಸೇಫ್ಟಿ ಲ್ಯಾಬ್ ನಿರ್ವಣವಾಯಿತು. ಇದಕ್ಕೆ ಸಹಕರಿಸಿದ್ದು ಫ್ರಾನ್ಸ್. ಹೆಚ್ಚಿನ ಧನಸಹಾಯ ಬಂದದ್ದು ಅಮೆರಿಕಾದಿಂದ. ಡಬ್ಲು್ಯಐವಿಯೊಂದಿಗೆ ಸಹಕಾರಕ್ಕೆ ಫ್ರಾನ್ಸ್ ಮುಂದಾದದ್ದೇ ಅಮೆರಿಕದ ಒತ್ತಾಸೆಯಿಂದ ಎಂದು ಊಹಿಸಲು ಆ ಎರಡು ದೇಶಗಳ ಹಿಂದಿನ ನಡವಳಿಕೆಗಳು ದಾರಿಮಾಡಿಕೊಡುತ್ತವೆ. 1974ರಲ್ಲಿ ಇಂದಿರಾ ಸರ್ಕಾರ ಅಣ್ವಸ್ತ್ರ ಪರೀಕ್ಷೆ ನಡೆಸಿದ್ದಕ್ಕಾಗಿ ಭಾರತದ ಮೇಲೆ ಹಲವಾರು ಬಹಿಷ್ಕಾರಗಳನ್ನು ವಿಧಿಸಿದ ಅಮೆರಿಕಾ ನಂತರ ತಾರಾಪುರ ರಿಯಾಕ್ಟರ್ಗೆ ಸಂಸ್ಕರಿತ ಯುರೇನಿಯಂ ಪೂರೈಸಲು ಫ್ರಾನ್ಸ್ಗೆ ಅವಕಾಶ ಮಾಡಿಕೊಟ್ಟಿತ್ತು. ಅಂದರೆ ತಾನು ತನ್ನದೇ ನೀತಿನಿಯಮಗಳ ಕಟ್ಟುಪಾಡಿಗೆ ಒಳಗಾಗಿ ಕೆಲಸವೊಂದನ್ನು ಮಾಡಲಾಗದಿದ್ದಾಗ ಅದನ್ನು ಫ್ರಾನ್ಸ್ನಿಂದ ಮಾಡಿಸಿತ್ತು! ಡಬ್ಲೂ್ಯಐವಿಯಲ್ಲಿ ಆದದ್ದು ಇದೇ ಇರಬಹುದು. ಅಂದರೆ ತನ್ನ ಎನ್ಐಸಿ ವರದಿಯ ಭವಿಷ್ಯವಾಣಿಯನ್ನು ಅಮೆರಿಕಾ ಹಂತಹಂತವಾಗಿ ನಿಜದತ್ತ ಕೊಂಡೊಯ್ದಿತ್ತು!
ಇದೇ ತರ್ಕವನ್ನು ಭಾರತದ ಬಗೆಗಿನ ಎನ್ಐಸಿ ಭವಿಷ್ಯವಾಣಿಗೂ ಅನ್ವಯಿಸಲು ಪ್ರಯತ್ನಿಸಬಹುದು. 2002ರ ಎನ್ಐಸಿ ಭವಿಷ್ಯವಾಣಿಯ ನಂತರ ಅಧ್ಯಕ್ಷ ಕಿರಿಯ ಜಾರ್ಜ್ ಬುಷ್ ಅಫ್ಘನ್ ಯುದ್ಧದಲ್ಲಿ ಪಾಕಿಸ್ತಾನವನ್ನು ಕಟ್ಟಿಹಾಕಿದ್ದಲ್ಲದೇ ಭಾರತಕ್ಕೆ ಅನುಕೂಲವೆನಿಸುವ ಹಲವಾರು ಕ್ರಮಗಳಿಗೆ ಮುಂದಾದರು. ಅಂದರೆ ಭಾರತದ ವಿರುದ್ಧ ತಾನು ದಿನೇದಿನೇ ಅಸಹಾಯಕವಾಗುತ್ತಿರುವ ಭಾವನೆಯನ್ನು, ತಾನೆಂದೂ ಸೋತು ಭಾರತದೊಂದಿಗೆ ವಿಲೀನಗೊಳ್ಳಬಾರದೆಂಬ ಕೆಚ್ಚನ್ನು ಪಾಕಿಸ್ತಾನದಲ್ಲಿ ಅಮೆರಿಕಾ ಮೂಡಿಸಲು ಪ್ರಯತ್ನಿಸುತ್ತಿತ್ತು. ಆಮೇಲೆ ನಾವು ನೋಡಿದ್ದು 26/11 ದಾಳಿಗಳನ್ನು, ಪಾಕಿಸ್ತಾನದ ಸಂಕಷ್ಟಗಳಿಗೆ ಭಾರತದ ಬದಲಾಗಿ ಭಯೋತ್ಪಾದಕರನ್ನು ದೂಷಿಸಿದ ಅಧ್ಯಕ್ಷ ಅಸೀಫ್ ಆಲಿ ಜರ್ದಾರಿ ಮತ್ತು ಪ್ರಧಾನಿ ಯೂಸುಫ್ ರಾಜಾ ಗಿಲಾನಿ ಮೂಲೆಗುಂಪಾಗಿ, ಏಕಕಾಲದಲ್ಲಿ ಅಮೆರಿಕಾ ಮತ್ತು ಚೀನಾಗಳ ನಂಬಿಗಸ್ತ ಚೇಲಾ ಆಗಿದ್ದ ನವಾಜ್ ಶರೀಫ್ ಗದ್ದುಗೆಗೇರಿದ್ದು.
ಮೇಲಿನ ಎರಡು ಪ್ರಕರಣಗಳು ಹೇಳುವುದು ಜಾಗತಿಕ ವಿದ್ಯಮಾನಗಳು ಹೇಗೆ ಸಾಗಬೇಕೆಂದು ಅಮೆರಿಕಾ ಮೊದಲೇ ತೀರ್ವನಿಸುವುದನ್ನು ಮತ್ತು ಅದನ್ನು ಎನ್ಐಸಿ ವರದಿಯ ಮೂಲಕ ಸಾರ್ವಜನಿಕವಾಗಿ ಸಾರಿ, ಅದಕ್ಕೆ ಜಗತ್ತು ತಯಾರಾಗುವಂತೆ ಮಾಡುವುದನ್ನು. ಇದರರ್ಥ ಜಗತ್ತಿನ ಕೊರಳಿಗೆ ಕುಣಿಕೆ ಹಾಕಿ ಅದನ್ನು ತನಗೆ ಬೇಕಾದ ದಿಕ್ಕಿಗೆ ಎಳೆದುಕೊಂಡು ಹೋಗುವ ಅಮೆರಿಕಾದ ತಂತ್ರವೇ ಎನ್ಐಸಿ ವರದಿಗಳು.
ಈಗ ಮತ್ತದೇ ವರದಿ ಮುಖವಾಡದ ಕುಣಿಕೆ ನಮ್ಮೆದುರಿಗಿದೆ. ಅದು ಬಂದ ಈ ಒಂದು ವರ್ಷದಲ್ಲಿ ಏನೇನಾಗಿದೆ? ಅಫ್ಘಾನಿಸ್ತಾನವನ್ನು ತಾಲಿಬಾನ್ಗೆ ಬಿಟ್ಟು ಅಮೆರಿಕಾ ಓಡಿಹೋಯಿತು. ಆದರೆ ತಾಲಿಬಾನ್ ಮತ್ತು ಪಾಕಿಸ್ತಾನ ಒಟ್ಟುಗೂಡಿ ಕಾಶ್ಮೀರದಲ್ಲಿ ದಾಂಧಲೆ ಎಬ್ಬಿಸುತ್ತವೆ ಎಂಬ ನಿರೀಕ್ಷೆ ಸುಳ್ಳಾಯಿತು. ಜತೆಗೆ, ತಡವಾಗಿಯಾದರೂ ಭಾರತದ ಬಗ್ಗೆ ಇಮ್ರಾನ್ ಖಾನ್ ಒಳ್ಳೆಯ ಮಾತಾಡತೊಡಗಿದಾಗ ಭಾರತದಲ್ಲಿ ಪಾಕಿಸ್ತಾನ ಭಾರಿ ಭಯೋತ್ಪಾದನಾ ಕೃತ್ಯ ಎಸಗುವ ಸಾಧ್ಯತೆಯೂ ದೂರವಾಯಿತು. ಅಂದರೆ ಎನ್ಐಸಿ ಭವಿಷ್ಯವಾಣಿಯ ಕಥೆ? ಅದು ನಿಜವಾಗುವಂತಹ ಸಂದರ್ಭಗಳು ಈಗ ಸೃಷ್ಟಿಯಾಗುತ್ತಿವೆ. ಇಮ್ರಾನ್ ಎತ್ತಂಗಡಿಯಾಗಿ ಶಹಭಾಜ್ ಶರೀಫ್ ಗದ್ದುಗೆಗೇರಿದ್ದಾರೆ. ಹೇಳಿಕೇಳಿ ಆತ ನವಾಜ್ ಶರೀಫ್ರ ತಮ್ಮ. ತಾವು ಅಮೆರಿಕಾ ಹೇಳಿದಂತೆ ಕೇಳುವ ಮನುಷ್ಯ ಎಂದವರು ಈಗಾಗಲೇ ಸಾರಿಹೇಳಿದ್ದಾರೆ. ಜತೆಗೆ ಭಾರತ-ದ್ವೇಷವನ್ನೇ ಮೂಲಮಂತ್ರವಾಗಿಸಿಕೊಂಡ ಪಾಕ್ ಸೇನೆಗೂ ಅವರಿಗೂ ಒಳ್ಳೆಯ ತಾಳಮೇಳವಿದೆ. ದಕ್ಷಿಣ ಏಷ್ಯಾ ಕೊರಳಿಗೆ ಅಮೆರಿಕನ್ ಕುಣಿಕೆ ಬೀಳುತ್ತಿದೆ.
ಈ ವಲಯದಲ್ಲೊಂದು ಯುದ್ಧವಾಗುವುದರಿಂದ, ಈಗಾಗಲೇ ಜಿಡಿಪಿಯಲ್ಲಿ ಬ್ರಿಟನ್ ಅನ್ನು ಹಿಂದಿಕ್ಕಿ ಜಾಗತಿಕವಾಗಿ ಆರನೆಯ ಸ್ಥಾನಕ್ಕೇರಿರುವ, ಸದ್ಯದಲ್ಲೇ ಫ್ರಾನ್ಸನ್ನೂ ಹಿಂದಿಕ್ಕುವ ಸೂಚನೆ ನೀಡುತ್ತಿರುವ ಭಾರತ ಕುಸಿದುಹೋಗುತ್ತದೆ. ಪಾಕಿಸ್ತಾನ ಮತ್ತೊಮ್ಮೆ ಅಮೆರಿಕಾದ ಸಾಕುನಾಯಿಯಾಗುತ್ತದೆ. ಜತೆಗೆ ಚೀನೀ ಬೆದರಿಕೆಗೆ ಒಳಗಾಗುವ ಬಲಹೀನ ಭಾರತವೂ ಅಮೆರಿಕಾ ಮುಂದೆ ಮಂಡಿಯೂರುತ್ತದೆ. ಅದರ ಬೆನ್ನಿಗೆ ಹಿಂದಿನಂತೆ ಸೋವಿಯೆತ್ ಯೂನಿಯನ್ ಈಗಿಲ್ಲ. ಅಷ್ಟರಮಟ್ಟಿಗೆ ಪಶ್ಚಿಮಕ್ಕೆ ಏಷ್ಯಾದ ಸ್ಪರ್ಧೆಯೊಂದು ನಿಲುಗಡೆಗೆ ಬರುತ್ತದೆ.
ಇದೆಲ್ಲವೂ ಪಶ್ಚಿಮದ ಯಜಮಾನಿಕೆಯನ್ನು ಮುಂದುವರಿಸಿಕೊಂಡು ಹೋಗುವ ತಂತ್ರದ ಒಂದು ಭಾಗ. ಇಲ್ಲಿ ಬಲಿಪಶು ಇಡೀ ಪಶ್ಚಿಮೇತರ ಜಗತ್ತು. ಇಂದು ಜಾಗತಿಕ ಜನಸಂಖ್ಯೆಯಲ್ಲಿ ಪಶ್ಚಿಮದ ಪಾಲು ಕೇವಲ 12%. ಆದರೆ ಅಷ್ಟು ಮಾತ್ರದ ಜನ ಜಾಗತಿಕ ಸಂಪನ್ಮೂಲಗಳ ಶೇಕಡಾ 70ರಿಂದ 80ರಷ್ಟನ್ನು ಬಳಸುತ್ತಿದ್ದಾರೆ. ಜಾಗತಿಕ ಜನಸಂಖ್ಯೆಯಲ್ಲಿ ಕೇವಲ 4.25% ಇರುವ ಅಮೆರಿಕನ್ನರು ಜಾಗತಿಕ ಸಂಪನ್ಮೂಲಗಳ ಕಾಲುಭಾಗದಷ್ಟನ್ನು ಬಳಸುತ್ತಿದ್ದಾರೆ. ಪಶ್ಚಿಮದ ಸಂಪತ್ತಿನ ವೃದ್ಧಿಗೆ ಬಹುದೊಡ್ಡ ಕಾಣಿಕೆ ನೀಡುತ್ತಿರುವವರು ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕಾಗಳ ಜನರು. ಈ ದೇಶಗಳಲ್ಲಿ ಪಶ್ಚಿಮಕ್ಕೆ ಅನುಕೂಲಕರವಾದ ಕೌಶಲಪೂರ್ಣ/ಅರೆಕೌಶಲಪೂರ್ಣ ಜನರ ಬಹುದೊಡ್ಡ ಸೇನೆಯೇ ಇದೆ. ಇವರಿಗೆಲ್ಲಾ ಜೀವನೋಪಾಯಸಹಕಾರಿ ಉದ್ಯೋಗ ನೀಡುವ ಸಾಮರ್ಥ್ಯ ಈ ದೇಶಗಳ ಅರ್ಥವ್ಯವಸ್ಥೆಗಳಿಗಿಲ್ಲ.
ಕಡಿಮೆ ಕೂಲಿಗೆ ದುಡಿಯಬಲ್ಲ ಬಡದೇಶಗಳ ಕುಶಲ/ಅರೆಕುಶಲ ಜನತೆ ಪಶ್ಚಿಮಕ್ಕೆ ವರದಾನ. ಇದನ್ನು ಅದು ದೊಡ್ಡದಾಗಿ ಕಂಡುಕೊಂಡದ್ದು ಚೀನಾ 1978ರಲ್ಲಿ ತನ್ನ ಅರ್ಥವ್ಯವಸ್ಥೆಯನ್ನು ಪಶ್ಚಿಮದ ಬಂಡವಾಳಶಾಹಿಗಳಿಗೆ ತೆರೆದಾಗ. ಆ ದೇಶದಲ್ಲಿದ್ದದ್ದು ಯಥೇಚ್ಛ ನೀರು-ನೆಲ-ಕಚ್ಚಾವಸ್ತುಗಳು, ಕಡಿಮೆ ಕೂಲಿಗೆ ದುಡಿಯಬಲ್ಲ ಕೋಟ್ಯಂತರ ಕೆಲಸಗಾರರು, ಅವರು ಮುಷ್ಕರಕ್ಕೆ ಇಳಿಯದಂತೆ ತಡೆಯುವ, ಗಾಣದೆತ್ತಿನಂತೆ ದುಡಿಯುವಂತೆ ನೋಡಿಕೊಳ್ಳುವ ಕಮ್ಯೂನಿಸ್ಟ್ ಸರ್ಕಾರ! ಪಶ್ಚಿಮದ ಬಂಡವಾಳಶಾಹಿಗಳಿಗೆ ಇನ್ನೇನು ಬೇಕು? ತಂತಮ್ಮ ದೇಶಗಳಲ್ಲಿದ್ದ, ನೆಲ-ಜಲ-ವಾತಾವರಣವನ್ನು ಕುಲಗೆಡಿಸುವಂತಹ ಕಾರ್ಖಾನೆಗಳನ್ನು, ಉತ್ಪಾದನಾ ಘಟಕಗಳನ್ನು ಅವರು ಸಾರಾಸಗಟಾಗಿ ಚೀನಾಗೆ ವರ್ಗಾಯಿಸಿಬಿಟ್ಟರು. ಹೆಚ್ಚಿನಂಶ ಉನ್ನತ ಆಡಳಿತ, ಮೇಲ್ವಿಚಾರಣೆ, ಗುಣಮಟ್ಟ ನಿಯಂತ್ರಣ ಹಾಗೂ ಸೇವೆಗಳಂತಹ ಶುದ್ಧ ಹುದ್ದೆಗಳನ್ನು ಮಾತ್ರ ಉಳಿಸಿಕೊಂಡರು. ಇಪ್ಪತ್ತು ವರ್ಷಗಳ ನಂತರ, ಜಾಗತಿಕ ಪರಿಸರಮಾಲಿನ್ಯದಲ್ಲಿ ಚೀನಾದ ಪಾತ್ರ ಬಲು ದೊಡ್ಡದು ಎಂದು ಆಪಾದಿಸತೊಡಗಿದರು! ಅದೂ ನಿಜವೇ ಬಿಡಿ. ಪಶ್ಚಿಮದ ಬಂಡವಾಳಶಾಹಿಗಳು ಮುಗಿಬಿದ್ದದ್ದರಿಂದಾಗಿ ಚೀನಾ ಅನತಿಕಾಲದಲ್ಲೇ ‘ಜಗತ್ತಿನ ಕಾರ್ಖಾನೆ’ ಎಂಬ ಬಿರುದು ಪಡೆದು ಬೀಗಿತೇನೋ ನಿಜ. ಅದರ ಜಿಡಿಪಿ 2000ದಲ್ಲಿ ಜಾಗತಿಕವಾಗಿ ಮೂರನೆಯ ಸ್ಥಾನಕ್ಕೆ, 2016ರಲ್ಲಿ ಎರಡನೆಯ ಸ್ಥಾನಕ್ಕೇರಿತು. ಆದರೆ ಈ ಹೆಗ್ಗಳಿಕೆಗೆ ಚೀನಾ ತೆರುತ್ತಿರುವ ಬೆಲೆ? ಅದರ 80% ನದಿಗಳು ಕಲುಷಿತವಾಗಿವೆ; ಕೈಗಾರಿಕೆಗಳು ಸಾಂದ್ರವಾಗಿರುವ ಪೂರ್ವ ಮತ್ತು ಈಶಾನ್ಯ ಭಾಗಗಳಲ್ಲಿ ಆಮ್ಲ ಮಳೆ ಸಾಮಾನ್ಯವಾಗಿಬಿಟ್ಟಿದೆ. ಅತಿಯಾದ ಪರಿಸರಮಾಲಿನ್ಯದಿಂದ ಹವಾಮಾನ ವೈಪರೀತ್ಯ, ಅದರ ಪರಿಣಾಮವಾಗಿ ಅನಿರೀಕ್ಷಿತ ಅತಿವೃಷ್ಟಿ ಅಥವಾ ಅನಾವೃಷ್ಟಿ ಚೀನೀ ಬದುಕಿನ ಭಾಗವೇ ಆಗಿಹೋಗಿದೆ. ಕಳೆದ ಎರಡು ವರ್ಷಗಳಲ್ಲೇ ಕರೊನಾ ಸಂಕಟದ ನಡುವೆ ಬೇಸಿಗೆಯಲ್ಲಿ ಹಿಮಪಾತವಾಗಿದೆ, ಹಿಂದಿನ ಎಂಬತ್ತು ವರ್ಷಗಳಲ್ಲೇ ಆಗಿರದಿದ್ದಷ್ಟು ಮಳೆಯಾಗಿ ದೇಶದ ಮುಕ್ಕಾಲು ಭಾಗ ಪ್ರವಾಹ, ಭೂಕುಸಿತ ಮತ್ತು ಬೆಳೆನಾಶವನ್ನು ಅನುಭವಿಸಿದೆ, ಚಳಿಗಾಲ ದೀರ್ಘ ಮತ್ತು ಕಟುವಾಗತೊಡಗಿದೆ.
ಆದರೆ ಸುರಕ್ಷಿತ ಸುಪ್ಪತ್ತಿಗೆಯಲ್ಲಿರುವ ಕಮ್ಯೂನಿಸ್ಟ್ ಆಳಸರರಿಗೆ ಇದೇನೂ ತಲೆಹೋಗುವ ಸಮಸ್ಯೆಯಾಗಿ ಕಾಣುತ್ತಿಲ್ಲ. 2030ರ ಹೊತ್ತಿಗೆ ಚೀನೀ ಜಿಡಿಪಿಯನ್ನು ಜಗತ್ತಿನಲ್ಲೇ ಅತಿ ದೊಡ್ಡದಾಗಿಸುವ ಗುರಿಯನ್ನು ಅವರು ಹಾಕಿಕೊಂಡಿದ್ದಾರೆ. ‘ಜಗತ್ತಿನ ಕಾರ್ಖಾನೆ’ ತರುವ ಆದಾಯವನ್ನು ಉಪಯೋಗಿಸಿಕೊಂಡು ಜಗತ್ತನ್ನೇ ಕಬಳಿಸುವ ಯೋಜನೆಯನ್ನು ಅವರು ರೂಪಿಸಿ ಕಾರ್ಯರೂಪಕ್ಕಿಳಿಸಿ ಬಹಳ ಕಾಲವೇ ಆಗಿಹೋಗಿದೆ ಬಿಡಿ. ಸದ್ಯಕ್ಕೆ ಅವರು ತಲೆ ಕೆಡಿಸಿಕೊಳ್ಳುತ್ತಿರುವುದು ಪಶ್ಚಿಮದ ಬಂಡವಾಳಶಾಹಿಗಳು ಹತ್ತು ವರ್ಷಗಳ ಹಿಂದೆ ತಮ್ಮ ಗ್ರಾಹಕ ಸಾಮಗ್ರಿಗಳ ಉತ್ಪಾದನಾ ಘಟಕಗಳನ್ನು ಮೆಕ್ಸಿಕೋ, ಪೆರು, ತಾಂಜಾನಿಯಾ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ವಿಯೆಟ್ನಾಂಗಳಿಗೆ ವರ್ಗಾಯಿಸಲಾರಂಭಿಸಿದ್ದನ್ನು ಮತ್ತು ಕರೊನಾ ಮಾರಿ ಅಮರಿಕೊಂಡಂದೀಚೆಗೆ ಅವುಗಳ ಜತೆಗೆ ಎಂಜಿನಿಯಿರಿಂಗ್, ಐಟಿ, ಸಂಪರ್ಕ ಸಾಧನಗಳ ಉತ್ಪಾದನಾ ಘಟಕಗಳನ್ನೂ ವಿಯೆಟ್ನಾಂ, ಇಂಡೋನೇಶಿಯಾ ಮತ್ತು ಭಾರತಗಳಿಗೆ ವರ್ಗಾಯಿಸತೊಡಗಿರುವುದನ್ನು ತಡೆಯುವುದು ಹೇಗೆ ಎಂದು. ಚೀನಾದಿಂದ ಹೊರಬರುತ್ತಿರುವ ಪಶ್ಚಿಮದ ಬಂಡವಾಳಶಾಹಿಗಳಿಗೆ ಬಾಗಿಲು ತೆರೆಯುತ್ತಿರುವ ಈ ಮೇಲಿನ ದೇಶಗಳ ಸ್ಥಿತಿ ಬಿಸಿತುಪ್ಪವನ್ನು ಬಾಯಿಗೆ ಹಾಕಿಕೊಂಡಂತೆ; ನುಂಗಲೂ ಆಗುತ್ತಿಲ್ಲ, ಉಗಿಯಲೂ ಮನಸ್ಸಿಲ್ಲ. ಇದೆಲ್ಲವೂ ಜಗತ್ತನ್ನು ಹೆಚ್ಚು ಸ್ಪರ್ಧಾತ್ಮಕಗೊಳಿಸುತ್ತದೆ; ದೇಶದೇಶಗಳ ನಡುವೆ, ದೇಶೀಯ ಸಮಾಜಗಳ ನಡುವೆ ಅಸಮಾನತೆಯನ್ನೂ, ಘರ್ಷಣೆಯನ್ನೂ ಹೆಚ್ಚಿಸುತ್ತದೆ ಎಂದು ಎನ್ಐಸಿ ವರದಿ ಹೇಳುತ್ತದೆ. ತನ್ನ ಮೂಲಕ ಜಗತ್ತಿನ ಕೊರಳಿನ ಕುಣಿಕೆಯನ್ನು ಪಶ್ಚಿಮ ಬಿಗಿಗೊಳಿಸುತ್ತಿದೆ ಎಂದು ಮಾತ್ರ ಅದು ಹೇಳುವುದಿಲ್ಲ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)