

ಈ ವರ್ಷದ ವಿಜಯೋತ್ಸವ ಇನ್ನಷ್ಟು ಮಹತ್ವಪೂರ್ಣ. ಅಂದು ಒಂದೇ ದೇಶವಾಗಿ ನಾಜಿಗಳ ವಿರುದ್ಧ ಹೋರಾಡಿದ್ದ ರಷ್ಯಾ ಮತ್ತು ಯೂಕ್ರೇನ್ ಇಂದು ಪರಸ್ಪರ ವಿರೋಧಿಗಳಾಗಿ ಕಾದಾಡುತ್ತಿದ್ದಾರೆ. ಫೆಬ್ರವರಿ 24ರಂದು ಯೂಕ್ರೇನ್ ವಿರುದ್ಧ ವಿಶೇಷ ಸೇನಾ ಕಾರ್ಯಾಚರಣೆ ಆರಂಭಿಸುವ ಮೊದಲು ಅಧ್ಯಕ್ಷ ಪೂತಿನ್ ಘೊಷಿಸಿದ್ದು ‘ರಷ್ಯಾದ ಸುರಕ್ಷೆಯನ್ನು ಖಚಿತಪಡಿಸಲು ಮತ್ತು ಯೂಕ್ರೇನನ್ನು ನವನಾಜಿವಾದದಿಂದ ಮುಕ್ತಗೊಳಿಸಲು ಈ ಯುದ್ಧ ಅಗತ್ಯ’ ಎಂದು. ಎಪ್ಪತ್ತೈದು ದಿನಗಳ ನಂತರವೂ ಅವರು ವಿಕ್ಟರಿ ಪರೇಡ್ನಲ್ಲಿ ಅದೇ ಮಾತುಗಳನ್ನು ಪುನರುಚ್ಚರಿಸಿದರು.
ಯೂಕ್ರೇನನ್ನು ರಷ್ಯಾ ವಿರುದ್ಧ ಎತ್ತಿಕಟ್ಟಲು ಹೊರಟಿದ್ದು ಅಮೆರಿಕಾ. ಒಂದುಕಾಲದಲ್ಲಿ ರಷ್ಯನ್ ಸಾಮ್ರಾಜ್ಯದ ಅಂಗವಾಗಿದ್ದ, ರಷ್ಯಾದೊಂದಿಗೆ ಸೋವಿಯೆತ್ ಯೂನಿಯನ್ನ ಭಾಗವೂ ಆಗಿದ್ದ, ಇಂದು ರಷ್ಯಾದ ನೆರೆರಾಷ್ಟ್ರವಾಗಿರುವ ಯೂಕ್ರೇನನ್ನು ಪಶ್ಚಿಮದ ಸೇನಾಕೂಟ ನ್ಯಾಟೋಗೆ ಸೇರಿಸಿಕೊಳ್ಳುವುದಾಗಿ ಹೇಳಿ ಅಧ್ಯಕ್ಷ ಪೂತಿನ್ರ ನಿದ್ದೆಗೆಡಿಸಿದ್ದು ಡೆಮೋಕ್ರಾಟಿಕ್ ಪಕ್ಷದ ಬರಾಕ್ ಒಬಾಮಾ ಆಡಳಿತ. ನಂತರ ನಾಲ್ಕು ವರ್ಷಗಳ ರಿಪಬ್ಲಿಕನ್ ಆಡಳಿತದಲ್ಲಿ ಮತ್ತೇನೂ ಅವಾಂತರವಾಗದೇ ಯೂರೋಪ್ ಶಾಂತಿಯಲ್ಲಿ ಬದುಕಿತು. ಅದು ಯಾರ ಕಣ್ಣಿಗೆ ಕಿಸುರಾಯಿತೋ, ಉದಾರವಾದ ಮತ್ತು ಪ್ರಗತಿಪರತೆಯ ಹಣೆಪಟ್ಟಿ ಹಚ್ಚಿಕೊಂಡು ಆ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿ ನಡೆದುಕೊಳ್ಳುವ ಬಂಡವಾಳಶಾಹಿ-ಎಡಪಂಥೀಯರ ಪಿತೂರಿಯಿಂದಾಗಿ ಡೊನಾಲ್ಡ್ ಟ್ರಂಪ್ ಅಧಿಕಾರ ಕಳೆದುಕೊಂಡು ಡೆಮೋಕ್ರಾಟಿಕ್ ಪಕ್ಷದ ಜೋ ಬೈಡೆನ್ ಅಧ್ಯಕ್ಷ ಗಾದಿಗೇರಿದರು. ಒಬಾಮಾ ಮಾಡಿದ್ದನ್ನೇ ದೊಡ್ಡದಾಗಿ ಮಾಡಹೊರಟ ಬೈಡೆನ್ ಯೂಕ್ರೇನ್ಗೆ ಅಗಾಧ ಪ್ರಮಾಣದಲ್ಲಿ ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ನೀಡಿದ್ದಲ್ಲದೇ ಅವುಗಳನ್ನು ಉಪಯೋಗಿಸಲು ಯೂಕ್ರೇನ್ ಸೈನಿಕರಿಗೆ ತರಬೇತಿ ನೀಡಲೆಂದು ನೂರಾರು ಅಮೆರಿಕನ್ ಸೇನಾ ತಂತ್ರಜ್ಞರನ್ನು ಯೂಕ್ರೇನ್ಗೆ ಕಳುಹಿಸಿದರು. ಹೀಗಾಗಿ ಅಮೆರಿಕಾದ ಬೆಂಬಲದಿಂದ ಯೂಕ್ರೇನ್ ತಮ್ಮ ದೇಶಕ್ಕೆ ಅಪಾಯವೊಡ್ಡುವ ಮಟ್ಟಕ್ಕೆ ತಲುಪುತ್ತಿದೆ ಎಂದು ಅಧ್ಯಕ್ಷ ಪೂತಿನ್ ಹೇಳಿದ್ದು ಸತ್ಯವೇ ಆಗಿತ್ತು ಮತ್ತು ಯೂಕ್ರೇನ್ ನಿಭಾಯಿಸಲಾಗದಷ್ಟು ಅಪಾಯಕಾರಿ ಮಟ್ಟಕ್ಕೆ ಬೆಳೆಯುವುದನ್ನು ತಡೆಯಲು ಸೇನಾ ಕಾರ್ಯಾಚರಣೆ ಅಗತ್ಯವಾಗಿದೆ ಎಂಬ ಅವರ ತರ್ಕ ಸರಿಯೂ ಆಗಿತ್ತು. ಅದೇ ಸ್ಥಿತಿ ಈಗಲೂ ಇದೆ. ಯುದ್ಧ ಆರಂಭವಾದ ಮೇಲೆ ಬೈಡನ್ ಆಡಳಿತದಿಂದ ಯೂಕ್ರೇನ್ಗೆ ಶಸ್ತ್ರಾಸ್ತ್ರಗಳ ಪೂರೈಕೆ ಹಲವು ಪಟ್ಟು ಹೆಚ್ಚಾಗಿದೆ. ಜತೆಗೆ, ಯೂಕ್ರೇನಿಯನ್ ಸೈನಿಕರಿಗೆ ಹಿಂದೆ ಯೂಕ್ರೇನ್ ನೆಲದಲ್ಲೇ ತರಬೇತಿ ನೀಡುತ್ತಿದ್ದ ಅಮೆರಿಕನ್ನರು ಈಗ ಅದೇ ಕೆಲಸವನ್ನು ಜರ್ಮನಿಯಲ್ಲಿ ಮಾಡುತ್ತಿದ್ದಾರೆ ಅಷ್ಟೇ. ಅಮೆರಿಕನ್ ಶಸ್ತ್ರಾಸ್ತ್ರಗಳನ್ನು ಬಳಸಿ ಯೂಕ್ರೇನಿಯನ್ನರು ರಷ್ಯನ್ನರನ್ನು ಕೊಲ್ಲುವುದು, ತಾವೂ ಕೊಲ್ಲಲ್ಪಡುವುದು ಬೈಡೆನ್ರಿಗೆ ದೊಡ್ಡ ವಿಷಯವೇನಲ್ಲ ಬಿಡಿ.
ಯೂಕ್ರೇನ್ ನೆಲದಲ್ಲಿ ಸಿಕ್ಕಿಬಿದ್ದು ಅಮೆರಿಕನ್ನರು ಸಾಯಬಾರದು ಅಷ್ಟೇ. ಅದು ಅಮೆರಿಕನ್ ಎಡಪಂಥೀಯರಿಗೆ ಬಹಳ ಮುಖ್ಯ. ಹೀಗೆ ಮಾಡುವ ಮೂಲಕ ಯೂಕ್ರೇನನ್ನು ಉಳಿಸುತ್ತಿದ್ದೇವೆ ಎಂದವರು ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಯುದ್ಧದ ಆರಂಭದ ದಿನಗಳಲ್ಲಿ ಕೀಯೆವ್ ನಗರದ ಪತನ ಸನ್ನಿಹಿತವಾಗಿತ್ತು, ಆದರೆ ಈಗ ಆ ಅಪಾಯ ಇಲ್ಲ ಎಂದು ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಜೆನ್ ಪ್ಸಾಕಿ ಹೆಮ್ಮೆಯಿಂದ ಹೇಳಿದರೆ ರಕ್ಷಣಾ ಕಾರ್ಯದರ್ಶಿ ಲಾಯ್್ಡ ಆಸ್ಟಿನ್ ಹೇಳುವುದು ಹೀಗೆ- ‘ತಾವು ಗೆಲ್ಲಬಲ್ಲೆವು ಎಂದು ಅವರು (ಯೂಕ್ರೇನಿಯನ್ನರು) ನಂಬುತ್ತಾರೆ, ಅವರು ಗೆಲ್ಲವಲ್ಲರೆಂದು ನಾವೂ ನಂಬುತ್ತೇವೆ... ಅವರಿಗೆ ಬೇಕಾದ ಸಹಾಯವನ್ನು ನಾವು ಮಾಡುತ್ತಿದ್ದೇವೆ.’
ಇದೇ ಮಾತನ್ನು ಯೂಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಸಹಾ ಹೇಳುತ್ತಾರೆ. ಮೇ 9ರಂದೇ ಪ್ರಸಾರ ಮಾಡಿದ ವಿಡಿಯೋ ಒಂದರಲ್ಲಿ ಅವರು ಕೀಯೆವ್ ನಗರದ ಖಾಲಿ ರಸ್ತೆಯಲ್ಲಿ ವಿರಾಮವಾಗಿ ನಡೆದಾಡುತ್ತಾ ಎರಡು ವಿಜಯಗಳ ಬಗ್ಗೆ ಹೇಳುತ್ತಾರೆ, ಜರ್ಮನ್ನರ ವಿರುದ್ಧ ಈಗಾಗಲೇ ಒಂದು ವಿಜಯವನ್ನು ಸಾಧಿಸಿದ್ದೇವೆ, ಇನ್ನು ರಷ್ಯಾ ಮೇಲೆ ಇನ್ನೊಂದು ವಿಜಯ ಸಾಧಿಸುತ್ತೇವೆ ಎದು ಘೊಷಿಸುತ್ತಾರೆ! ಮೊದಲಿಗೆ ಬದುಕಿ ಉಳಿಯಲು ಹೆಣಗಿದ, ನಂತರ ಮಾತುಕತೆಗಳ ಮೂಲಕ ಸಮಸ್ಯೆ ಪರಿಹರಿಸಿಕೊಳ್ಳುವ ಮಾತಾಡಿದ ಝೆಲೆನ್ಸ್ಕಿ ಈಗ ರಷ್ಯನ್ನರನ್ನು ಸೋಲಿಸುವ ಮಾತಾಡುತ್ತಿದ್ದಾರೆ. ಈ ಹುಮ್ಮಸ್ಸಿನ ಹಿಂದಿರುವುದು ಅಮೆರಿಕಾದ ಶಸ್ತ್ರಾಸ್ತ್ರಗಳು.
ಹೀಗಾಗಿ ಯುದ್ಧ ಆರಂಭವಾಗಿ ಎಪ್ಪತ್ತೈದು ದಿನಗಳ ನಂತರವೂ ಅಮೆರಿಕಾದ ಬೆಂಬಲದಿಂದಾಗಿ ಯೂಕ್ರೇನ್ ತಮ್ಮ ದೇಶಕ್ಕೆ ಅಪಾಯಕಾರಿಯಾಗಿಯೇ ಇದೆ ಎಂದು ಅಧ್ಯಕ್ಷ ಪೂತಿನ್ ರ್ತಸಿದ್ದು ಸರಿಯಾಗಿಯೇ ಇದೆ. ಆದರೆ ಅವರು ಹೇಳುತ್ತಿರುವ ‘ಯೂಕ್ರೇನನ್ನು ನವನಾಜಿಗಳಿಂದ ಮುಕ್ತವಾಗಿಸಬೇಕು’ ಎಂಬ ಮಾತಿಗೆ ಅರ್ಥವಿದೆಯೇ? ಹೇಳಿಕೇಳಿ ಯೂಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಒಬ್ಬ ಯೆಹೂದಿ. ಅವರು ದೇಶದಲ್ಲಿ ನಾಜಿವಾದಕ್ಕೆ ನೆಲೆ ನೀಡುತ್ತಾರೆಯೇ? ಈ ಪ್ರಶ್ನೆಗೆ ಉತ್ತರ- ಹೌದು. ಕೆಲವೊಮ್ಮೆ ವಾಸ್ತವ ಕಲ್ಪನೆಗಿಂತಲೂ ವಿಚಿತ್ರವಾಗಿರುತ್ತದೆ.
ಫೆಬ್ರವರಿ 2014ನಲ್ಲಿ ಒಬಾಮಾ ಆಡಳಿತದ ಪ್ರಚೋದನೆಯಿಂದಾಗಿ ಮತ್ತು ಅಂದಿನ ಉಪ ವಿದೇಶಾಂಗ ಕಾರ್ಯದರ್ಶಿ ವಿಕ್ಟೋರಿಯಾ ನ್ಯೂಲ್ಯಾಂದ್ರ ಸಕ್ರಿಯ ಪಾತ್ರದಿಂದಾಗಿ ಯೂಕ್ರೇನ್ನ ರಷ್ಯಾ-ಪರ ಅಧ್ಯಕ್ಷ ವಿಕ್ತರ್ ಯಾನುಕೋವಿಚ್ರ ಉಚ್ಚಾಟನೆ ಮತ್ತು ಅಮೆರಿಕಾ-ಪರ ಪೆತ್ರೋ ಪೊರೊಶೆಂಕೋ ಅಧ್ಯಕ್ಷರಾದಾಗ ಅಧ್ಯಕ್ಷ ಪೂತಿನ್ ಏಪ್ರಿಲ್ನಲ್ಲಿ ಯೂಕ್ರೇನ್ನ ಕ್ರಿಮಿಯಾವನ್ನು ಆಕ್ರಮಿಸಿಕೊಂಡು ರಷ್ಯಾಗೆ ಸೇರಿಸಿಕೊಂಡದ್ದಲ್ಲದೇ ಪೂರ್ವದ ರಶಿಯನ್ ಬಹುಸಂಖ್ಯಾತ ದನ್ಬಾಸ್ ಪ್ರದೇಶದ ಲುಹಾನ್ಸ್ಕ್ ಮತ್ತು ದೊನೆತ್ಸ್ಕ್ಗಳು ಯೂಕ್ರೇನ್ನಿಂದ ಪ್ರತ್ಯೇಕಗೊಳ್ಳಲು ಸಹಕರಿಸಿದರು. ಆಗ ದೊನೆತ್ಸ್ಕ್ನ ರಷ್ಯನ್-ಪರ ಹೋರಾಟಗಾರರು ಅಝೋವ್ ಸಮುದ್ರತೀರದ, ಮಾರಿಯುಪೋಲ್ ನಗರವನ್ನು ಆಕ್ರಮಿಸಿಕೊಂಡರು.
ಅದು ದೊನೆತ್ಸ್ಕ್ನ ರಾಜಧಾನಿಯಾಗಬೇಕೆನ್ನುವುದು ಅವರ ಆಶಯವಾಗಿತ್ತು. ಆದರೆ ಅಲ್ಲಿನ ರಷ್ಯಾ-ವಿರೋಧಿ ಜನರು ಅಝೋವ್ ರೆಜಿಮೆಂಟ್ ಎಂಬ ಸ್ವಯಂಸೇವಕ ಅರೆಸೈನಿಕ ಪಡೆಯನ್ನು ಕಟ್ಟಿ, ರಷ್ಯನ್-ಪರ ಹೋರಾಟಗಾರರನ್ನು ಸೋಲಿಸಿ, ಮಾರಿಯುಪೋಲ್ ನಗರವನ್ನು ಮತ್ತೆ ಯೂಕ್ರೇನ್ನ ವಶಕ್ಕೆ ತಂದರು. ಅಂದಿನಿಂದ ಇಂದಿನವರೆಗೂ ಅಝೋವ್ ರೆಜಿಮೆಂಟ್ ಯೂಕ್ರೇನ್ ಸೇನೆಯ ಅಂಗದಂತೆ ಕಾರ್ಯನಿರ್ವಹಿಸುತ್ತಿದೆ.
ಇಲ್ಲಿ ಗಮನಿಸಬೇಕಾದ್ದೆಂದರೆ, ಅಝೋವ್ ರೆಜಿಮೆಂಟ್ ನಾಜಿ ಸಂಕೇತಗಳನ್ನು ಉಪಯೋಗಿಸುತ್ತದೆ ಮತ್ತು ನಾಜಿ ಮೌಲ್ಯಗಳನ್ನು ಪ್ರತಿಪಾದಿಸುತ್ತದೆ. ಅದರ ಕಾಳಗತಂತ್ರಗಳೂ ಹಿಂದೆ ಜರ್ಮನ್ ನಾಜಿಗಳು ಅನುಸರಿಸಿದ್ದಂತಹವೇ. ಇದೆಲ್ಲವನ್ನೂ ಅದು ಯಾವ ಹಿಂಜರಿಕೆಯಾಗಲೀ, ಪಶ್ಚಾತ್ತಾಪವಾಗಲೀ ಇಲ್ಲದೇ ಮಾಡುತ್ತಿದೆ. ಇದನ್ನು ಸ್ವತಃ ಯೆಹೂದಿಯಾಗಿರುವ ಝೆಲೆನ್ಸ್ಕಿ ಒಪ್ಪಿಕೊಂಡಿದ್ದಾರೆ. ಅಝೋವ್ ರೆಜಿಮೆಂಟ್ ಮಾರಿಯುಪೋಲ್ ಅಲ್ಲದೇ ದೊನೆತ್ಸ್ಕ್ ಪ್ರದೇಶಕ್ಕೂ ನುಗ್ಗಿ ಅಲ್ಲಿನ ರಷ್ಯನ್ ಭಾಷಿಕ ಜನರನ್ನು ಕೊಲ್ಲುವ, ಹಿಂಸಿಸುವ ಕೃತ್ಯಗಳಲ್ಲಿ ನಿರಂತರವಾಗಿ ತೊಡಗಿದೆ. ಇಂದು ದನ್ಬಾಸ್ ಪ್ರದೇಶದಲ್ಲಿ ತನ್ನ ವಿರೋಧಿಯೆಂದು ರಷ್ಯಾ ಪರಿಗಣಿಸುತ್ತಿರುವುದು ಈ ನವನಾಜಿ ಅಝೋವ್ ರೆಜಿಮೆಂಟ್ ಅನ್ನು, ಯೂಕ್ರೇನ್ ಸೇನೆಯನ್ನಲ್ಲ. ಅಧ್ಯಕ್ಷ ಪೂತಿನ್ರ ನವನಾಜಿ-ವಿರೋಧಿ ಹೇಳಿಕೆಯ ಹಿಂದಿರುವುದು ಇದು.
ಅಝೋವ್ ರೆಜಿಮೆಂಟ್ ರಷ್ಯಾಗೆ ಎಷ್ಟು ಅಪಾಯಕಾರಿ ಎನ್ನುವುದು ಮಾರಿಯುಪೋಲ್ನಲ್ಲಿ ನಿಚ್ಚಳವಾಗಿ ಗೋಚರವಾಗುತ್ತಿದೆ. ರಷ್ಯನ್ ಬಹುಸಂಖ್ಯಾತ ಲುಹಾನ್ಸ್ಕ್ ಮತ್ತು ದೊನೆತ್ಸ್ಕ್ ಇಂದಲ್ಲ ನಾಳೆ ರಷ್ಯಾ ಜತೆ ವಿಲೀನಗೊಳ್ಳುವುದು ಶತಸಿದ್ಧ. ದೊನೆತ್ಸ್ಕ್ಗೆ ಮಾರಿಯುಪೋಲ್ ನಗರ ಬೇಕಾಗಿದೆ. ರಷ್ಯಾಗೂ ಅದು ಅದರದೇ ಕಾರಣಗಳಿಗಾಗಿ ಸಮ್ಮತ. ಯೂಕ್ರೇನ್ನ ಕಪ್ಪು ಸಮುದ್ರ ತೀರಪ್ರದೇಶಗಳನ್ನೆಲ್ಲಾ ವಶಕ್ಕೆ ತೆಗೆದುಕೊಂಡು ಕ್ರಿಮಿಯಾ ಜತೆ ನೇರ ಭೂಸಂಪರ್ಕ ಹೊಂದುವುದಲ್ಲದೇ ಯೂಕ್ರೇನನ್ನು ಸಮುದ್ರ ತೀರವಿಲ್ಲದ ದೇಶವನ್ನಾಗಿ ಮಾಡಿ ಅಷ್ಟರಮಟ್ಟಿಗೆ ಪಶ್ಚಿಮ ಜಗತ್ತಿನೊಂದಿಗೆ ಅದರ ಸಂಪರ್ಕವನ್ನು ಕತ್ತರಿಸುವುದು ಪ್ರಸಕ್ತ ಯುದ್ಧದಲ್ಲಿ ರಷ್ಯಾದ ಮುಖ್ಯ ಗುರಿ. ಈ ಗುರಿಸಾಧನೆಗೆ ತಡೆಯಾಗಿ ನಿಂತಿರುವುದು ಮಾರಿಯುಪೋಲ್ನಲ್ಲಿ ಗಟ್ಟಿಯಾಗಿ ತಳವೂರಿರುವ ಅಜೋವ್ ರೆಜಿಮೆಂಟ್ ಮತ್ತು ಯೂಕ್ರೇನ್ ಸೇನೆ.
ಮಾರಿಯುಪೋಲ್ ನಗರವನ್ನು ಏಪ್ರಿಲ್ 21ರಂದೇ ರಷ್ಯನ್ ಸೇನೆ ವಶಪಡಿಸಿಕೊಂಡಿತೇನೋ ನಿಜ. ಆದರೆ ಅಝೋವ್ಸ್ತಾಲ್ ಉಕ್ಕು ಸಂಯಂತ್ರ ಮಾತ್ರ ಅದಕ್ಕಿನ್ನೂ ಪೂರ್ಣವಾಗಿ ದಕ್ಕಿಲ್ಲ. ಈ ಸಂಯಂತ್ರದ್ದೊಂದು ವಿಶಿಷ್ಟ ಇತಿಹಾಸ. ದ್ವಿತೀಯ ಮಹಾಯುದ್ಧಕ್ಕೂ ಹಿಂದೆ ನಿರ್ವಣವಾದ ಇದು ಜರ್ಮನ್ನರ ಕೈಗೆ ಬೀಳಬಾರದೆಂದು ಸ್ಟಾಲಿನ್ ಸರ್ಕಾರ ಇಡೀ ಕಾರ್ಖಾನೆಯನ್ನು ಬಿಚ್ಚಿ ಉರಾಲ್ಸ್ ಪರ್ವತಗಳ ಪೂರ್ವಕ್ಕೆ ಕೊಂಡೊಯ್ದು ಸ್ಥಾಪಿಸಿಕೊಂಡಿತ್ತು. ಯುದ್ಧಕಾಲದಲ್ಲಿ ಉಕ್ಕಿನ ಪೂರೈಕೆಗೆ ಈ ಕ್ರಮ ಅಗತ್ಯವಾಗಿತ್ತು. ಯುದ್ಧಾನಂತರ ಕಾರ್ಖಾನೆಯನ್ನು ಮಾರಿಯುಪೋಲ್ಗೆ ಮರುವರ್ಗಾಯಿಸಿ, ಇಡೀ ಸಂಯಂತ್ರವನ್ನು 11 ಚದರ ಕಿ.ಮೀ. ಪ್ರದೇಶಕ್ಕೆ ವಿಸ್ತರಿಸಲಾಯಿತು. ಕಾರ್ಖಾನೆಯ ಜತೆಗೇ ಹಲವಾರು ಸುರಂಗಗಳನ್ನೂ, ಬಂಕರ್ಗಳನ್ನೂ ಸೋವಿಯೆತ್ ಸರ್ಕಾರ ನಿರ್ವಿುಸಿತು. ಮುಂದೆಂದಾದರೂ ಮಾರಿಯುಪೋಲ್ನತ್ತ ಮತ್ತೆ ಜರ್ಮನ್ ಅಥವಾ ಇನ್ನಾರೇ ಆಕ್ರಮಣಕಾರದು ಬಂದರೆ ಸಮರ್ಥವಾಗಿ ಸೆಣಸಲು ಈ ಬಗೆಯ ಭದ್ರಕೋಟೆಯ ವ್ಯವಸ್ಥೆ ಅಗತ್ಯ ಎಂದು ಸ್ಟಾಲಿನ್ ನಂಬಿದ್ದರು. ಇಲ್ಲಿನ ಬಂಕರ್ಗಳು ಮತ್ತು ಸುರಂಗಗಳಲ್ಲಿ ಸಾವಿರಾರು ಸೋವಿಯೆತ್ ಸೈನಿಕರು/ಜನರು ಸುರಕ್ಷಿತವಾಗಿರಬಹುದಾಗಿತ್ತು ಹಾಗೂ ಶೇಖರಿಸಲ್ಪಟ್ಟ ಅಗಾಧ ಮದ್ದುಗುಂಡು ಮತ್ತು ಆಹಾರಸಾಮಗ್ರಿಯಿಂದ ಅವರು ಶತ್ರುವನ್ನು ಹಲವಾರು ತಿಂಗಳುಗಳ ಕಾಲ ತಡೆದು ನಿಲ್ಲಿಸಬಹುದಾಗಿತ್ತು. ಇದು ಸ್ಟಾಲಿನ್ರ ಲೆಕ್ಕಾಚಾರ. ಆದರೆ ಆನಂತರ ನಡೆದದ್ದು ಅವರ ನಿರೀಕ್ಷೆಗೆ ವ್ಯತಿರಿಕ್ತವಾಗಿತ್ತು. ಇತಿಹಾಸದ ಚಕ್ರ ಎತ್ತ ತಿರುಗುತ್ತದೆಂದು ಬಲ್ಲವರಾರು!
1991ರಲ್ಲಿ ಸೋವಿಯೆತ್ ಯೂನಿಯನ್ ಛಿದ್ರವಾದಾಗ ಮಾರಿಯುಪೋಲ್ ಯೂಕ್ರೇನ್ನ ಭಾಗವಾಯಿತು. ಅದರೊಂದಿಗೆ ಅಝೋವ್ಸ್ತಾಲ್ ಸ್ಟೀಲ್ ಪ್ಲಾಂಟ್ ಎಂಬ ಭದ್ರಕೋಟೆ ಸಹ. ಇಂದು ನವನಾಜಿಗಳಾದ ಅಜೋವ್ ರೆಜಿಮೆಂಟ್ ಮತ್ತು ಯೂಕ್ರೇನ್ ಸೇನೆ ಅಲ್ಲಿ ಭದ್ರವಾಗಿ ತಳವೂರಿ ರಷ್ಯನ್ನರನ್ನು ಹಿಮ್ಮೆಟ್ಟಿಸುತ್ತಿವೆ!
ಇದು ಇಂದಿನ ವಾಸ್ತವ. ನಾಳೆ ಇತಿಹಾಸದ ಚಕ್ರ ಎತ್ತ ತಿರುಗುತ್ತದೋ!
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)