

ಇದೇ ಫೆಬ್ರವರಿ 24ರ ಬೆಳಗ್ಗೆ ಆರಂಭಿಸಿದ ಬಿರುಗಾಳಿಯ ದಾಳಿಯಲ್ಲಿ ಎರಡನೆಯ ದಿನವೇ ಯೂಕ್ರೇನ್ನ ರಾಜಧಾನಿ ಕಿಯೆವ್ನ ಹೊರವಲಯ ತಲುಪಿದ ರಷ್ಯಾಗೆ ರಾಜಧಾನಿಯನ್ನು ಪ್ರವೇಶಿಸಲು ಸಾಧ್ಯವಾಗಿಲ್ಲ. ಇದರರ್ಥ ಅಧ್ಯಕ್ಷ ಪೂತಿನ್ ಗುರಿಸಾಧನೆಯಲ್ಲಿ ವಿಫಲರಾಗಿದ್ದಾರೆಯೇ? ರಷ್ಯಾ ಸೇನೆ ಬರಿಗೈಯಲ್ಲಿ ಹಿಂತಿರುಗುತ್ತದೆಯೇ? ತಥಾಕಥಿತ ಉದಾರವಾದಿ-ಪ್ರಗತಿಪರರ ಅಂದರೆ ಎಡಪಂಥೀಯರ ಹಿಡಿತದಲ್ಲಿರುವ ಪಶ್ಚಿಮದ ಮಾಧ್ಯಮಗಳು ಮತ್ತು ಸೋಷಿಯಲ್ ಮೀಡಿಯಾಗಳು ಹಾಗೆಂದು ಹೇಳುತ್ತಿವೆ. ಆದರೆ ರಷ್ಯಾ ಪರವಾದ ಸುದ್ದಿಗಳು ಮತ್ತು ವಿಚಾರಗಳನ್ನು ವ್ಯವಸ್ಥಿತವಾಗಿ ತಡೆಗಟ್ಟಿ, ಅದಕ್ಕೆ ವಿರುದ್ಧವಾದವುಗಳನ್ನು ಉತ್ಪ್ರೇಕ್ಷಿಸಿ ಜಗತ್ತಿನಾದ್ಯಂತ ಬಿತ್ತರಿಸುವ ಎಂದಿನ ಪಿತೂರಿಯಲ್ಲಿ ಇವು ಇಂದೂ ನಿರತವಾಗಿವೆ. ರಷ್ಯಾ ಸೋಲುತ್ತಿದೆ, ಯೂಕ್ರೇನ್ (ಅಂದರೆ ಅದನ್ನು ಎತ್ತಿಕಟ್ಟಿರುವ ಪಶ್ಚಿಮ ಜಗತ್ತು) ಅದ್ಭುತ ಯಶಸ್ಸಿನತ್ತ ಸಾಗುತ್ತಿದೆ ಎಂದು ಅಮೆರಿಕ ಮತ್ತು ಬ್ರಿಟನ್ನ ಪತ್ರಿಕೆಗಳು ಹಾಗೂ ಅಮೆರಿಕನ್ ಎಡಪಂಥೀಯರೇ ನಡೆಸುವ ಫೇಸ್ಬುಕ್, ಇನ್ಸಾ ್ಟಗ್ರಾಂ, ಟ್ವಿಟರ್ಗಳು ಕೂಗುತ್ತಿವೆ. ಸೋವಿಯತ್ ಯೂನಿಯನ್ನಲ್ಲಿ ಕಮ್ಯೂನಿಸಂ ಇದ್ದಾಗ ಅದರ ಪರವಾಗಿ ಬ್ಯಾಟ್ ಮಾಡುತ್ತ, ಅದಕ್ಕಾಗಿ ಕೆಜಿಬಿಯಿಂದ ಹೇರಳ ಹಣ ಪಡೆಯುತ್ತ, ತಮ್ಮದೇ ನೆಲದ ಬಂಡವಾಳಶಾಹಿ ವ್ಯವಸ್ಥೆಯನ್ನು ಹೀಗಳೆಯುತ್ತಿದ್ದ ಇವು ಇಂದು ತಾವೇ ಬೃಹತ್ ಬಂಡವಾಳಶಾಹಿಯಾಗಿ ಬೆಳೆದುನಿಂತಿವೆ, ಇನ್ನೂ ಎಡಪಂಥೀಯ ಹಣೆಪಟ್ಟಿ ಹಚ್ಚಿಕೊಂಡೇ ಅವು ಬಂಡವಾಳಶಾಹಿಯ ತುತ್ತೂರಿಯಾಗಿವೆ. ಹೀಗಾಗಿ ಈ ಆಷಾಢಭೂತಿಗಳಿಂದ ಆಗ್ನೇಯ ಯುರೋಪ್ನಲ್ಲಿ ಹಿಂದೇನಾಗಿತ್ತು, ಇಂದೇನಾಗುತ್ತಿದೆ ಮತ್ತು ಮುಂದೇನಾಗಬಹುದು ಎನ್ನುವುದರ ಬಗ್ಗೆ ಸತ್ಯವೆಂದೂ ನಮಗೆ ಸಿಗುವುದಿಲ್ಲ. ಬನ್ನಿ, ವಸ್ತುಸ್ಥಿತಿಯನ್ನಿಷ್ಟು ಶೋಧಿಸೋಣ.
ಪ್ರಸಕ್ತ ಸಂಘರ್ಷದ ಹಿಂದಿರುವುದು ಭೂ-ಸಾಮರಿಕ, ಭೂ-ರಾಜಕೀಯ ಹಾಗೂ ಭೂ-ಆರ್ಥಿಕ ಸಂಘರ್ಷಗಳ ಒಂದು ಸಂಕೀರ್ಣ ಮಿಶ್ರಣ. ಮೊದಲಿಗೆ ಭೂ-ಸಾಮರಿಕ ಮತ್ತು ಭೂ-ರಾಜಕೀಯ ಕಾರಣಗಳನ್ನು ಒಟ್ಟಿಗೇ ಅವಲೋಕಿಸುವುದಾದರೆ ನಾವು ಯುರೋಪ್ನ ಭೌಗೋಳಿಕ ಸ್ಥಿತಿಯೊಂದರ ಕಿರುಪರಿಚಯ ಮಾಡಿಕೊಳ್ಳಬೇಕಾಗುತ್ತದೆ. ಭೂಗೋಳಶಾಸ್ತ್ರಜ್ಞರು, ‘ಉತ್ತರ ಯುರೋಪಿಯನ್ ಮೈದಾನಪ್ರದೇಶ’ ಎಂದು ಕರೆಯುವ ಆಲಿಕೆಯಾಕಾರದ ಪ್ರದೇಶ ಆರಂಭವಾಗುವುದು ನೆದರ್ಲ್ಯಾಂಡ್ನಲ್ಲಿ. ಅಲ್ಲಿಂದ ಪೂರ್ವಕ್ಕೆ ಸಾಗಿ ಜರ್ಮನಿಯಲ್ಲಿ ಉತ್ತರದ ಸಮುದ್ರಗಳು ಮತ್ತು ಆಲ್ಪ್ ್ಸ ಪರ್ವತಗಳ ನಡುವೆ ಸಿಲುಕಿ ಕಿರಿದಾಗಿ ಸಾಗುವ ಅದು ಪೋಲೆಂಡ್ ಪ್ರವೇಶಿಸುತ್ತಿದ್ದಂತೇ ಅಗಲಗೊಳ್ಳತೊಡಗುತ್ತದೆ. ಅಲ್ಲಿಯವರೆಗೆ ದಕ್ಷಿಣದಲ್ಲಿದ್ದ ಕಾರ್ಪೆಥಿಯನ್ ಪರ್ವತಶ್ರೇಣಿಯೂ ಮಾಯವಾಗಿ, ಬೆಲರೂಸ್ ಪ್ರವೇಶಿಸುತ್ತಿದ್ದಂತೇ ಆ ಮೈದಾನಪ್ರದೇಶ ಯಾವ ಭೌಗೋಳಿಕ ತಡೆಯೂ ಇಲ್ಲದೇ ಏಕಾಏಕಿ ಅಗಾಧ ಅಗಲ ಪಡೆದುಕೊಳ್ಳುತ್ತದೆ. ಉತ್ತರದಲ್ಲಿ ಆರ್ಕ್ಟಿಕ್ ಸಾಗರ ಮತ್ತು ದಕ್ಷಿಣದಲ್ಲಿ ಕಪು್ಪಸಮುದ್ರ, ಕಾಕಸಸ್ ಪರ್ವತಗಳು ಮತ್ತು ಕ್ಯಾಸ್ಪಿಯನ್ ಸಮುದ್ರದವರೆಗೆ ಸಹಸ್ರಾರು ಕಿಲೋಮೀಟರ್ಗಳ ಅಗಲಕ್ಕೆ ಹರಡಿಹೋಗುವ ವಿಶಾಲ ಮೈದಾನಪ್ರದೇಶ ಅದು. ರಷ್ಯಾ ಇರುವುದು ಇಲ್ಲಿ.
ಸಹಸ್ರಾರು ಕಿಲೋಮೀಟರ್ಗಳವರೆಗೆ ಯಾವುದೇ ಭೌಗೋಳಿಕ ತಡೆಯಿಲ್ಲದ ಪ್ರದೇಶದಲ್ಲಿ ಗಡಿ ಇದ್ದರೆ ಅದನ್ನು ರಕ್ಷಿಸುವುದು ಅತೀವ ಪ್ರಯಾಸಕರ. ಹಿಂದೂಕುಶ್ ಪರ್ವತಗಳನ್ನು ದಾಟಿ ವಿಶಾಲ ಸಿಂಧೂ ಮೈದಾನಪ್ರದೇಶಕ್ಕೆ ಬಂದ ಯಾವುದೇ ಶತ್ರುಸೇನೆಯನ್ನು ನಮ್ಮ ಇದುವರೆಗಿನ ಇತಿಹಾಸದಲ್ಲಿ ನಾವು ತಡೆಯಲಾಗಿಲ್ಲ ಎಂಬುದನ್ನು ನೆನಪಿಸಿಕೊಂಡರೆ ರಷ್ಯನ್ನರ ಕಷ್ಟ ನಿಮಗರಿವಾಗಬಹುದು.
ಹೀಗಾಗಿಯೇ ರಷ್ಯನ್ನರು ‘ಉತ್ತರ ಯುರೋಪಿಯನ್ ಮೈದಾನಪ್ರದೇಶ’ ಕಿರಿದಾಗಿರುವ ಉತ್ತರ ಜರ್ಮನಿಯವರೆಗೆ ತಮ್ಮ ಅಥವಾ ತಮ್ಮ ಮಿತ್ರದೇಶಗಳ ಗಡಿಯನ್ನು ವಿಸ್ತರಿಸಲು, ಆ ಮೂಲಕ ಪಶ್ಚಿಮದಿಂದ ಬರುವ ವೈರಿ ಸೇನೆಗಳನ್ನು ಆ ಕಿರಿದಾದ ಪ್ರದೇಶದಲ್ಲೇ ಎದುರಿಸಿ ಹಿಮ್ಮೆಟ್ಟಿಸಲು ಇತಿಹಾಸದುದ್ದಕ್ಕೂ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ಅವರ ಪ್ರಯತ್ನ ಅಂತಿಮವಾಗಿ ಯಶಸ್ವಿಯಾದದ್ದು ದ್ವಿತೀಯ ಮಹಾಯುದ್ಧದ ತರುವಾಯ ಸೋವಿಯತ್ ಸರ್ವಾಧಿಕಾರಿ ಶ್ತಾ್ಯಲಿನ್ ಪೋಲೆಂಡ್ ಮತ್ತು ಪೂರ್ವ ಜರ್ಮನಿಯನ್ನು ರಷ್ಯಾ ಹಿಡಿತಕ್ಕೆ ತೆಗೆದುಕೊಂಡಾಗ. ನಂತರ ಪಶ್ಚಿಮ ಜಗತ್ತು ಹುಟ್ಟುಹಾಕಿದ ನ್ಯಾಟೋ ಸೇನೆಗೆ ರಷ್ಯಾ/ಸೋವಿಯತ್ ಯೂನಿಯನ್ಗೆ ಅಪಾಯವೊಡ್ದುವ ಅವಕಾಶವಿದ್ದದ್ದು ಉತ್ತರ ಯುರೋಪಿಯನ್ ಮೈದಾನಪ್ರದೇಶ ಉತ್ತರದಲ್ಲಿ ಬಾಲ್ಟಿಕ್ ಸಮುದ್ರ ಮತ್ತು ದಕ್ಷಿಣದಲ್ಲಿ ಬವೇರಿಯನ್ ಆಲ್ಪ್ ್ಸ ಪರ್ವತಗಳ ನಡುವೆಗಷ್ಟೇ ಸೀಮಿತವಾಗಿದ್ದ ಸ್ಥಳದಲ್ಲಿ. ಆ ಕಿರಿದಾದ ಪ್ರದೇಶದಲ್ಲಿ ಮಾಸ್ಕೋ ಅಗಾಧ ಸಂಖ್ಯೆಯ ಟ್ಯಾಂಕ್ಗಳ ತಡೆಗೋಡೆಯನ್ನೇ ನಿರ್ವಿುಸಿಬಿಟ್ಟಿತ್ತು. ಶೀತಲಸಮರ ಕಾಲದಲ್ಲಿ ಅಮೆರಿಕದ ಬಳಿ ಕೇವಲ ಎಂಟುಸಾವಿರ ಟ್ಯಾಂಕ್ಗಳಿದ್ದರೆ ಸೋವಿಯತ್ ಯೂನಿಯನ್ ಬಳಿ ಇದ್ದದ್ದು ನಲವತ್ತೆರಡು ಸಾವಿರ ಟ್ಯಾಂಕ್ಗಳು ಮತ್ತು ಅವುಗಳ ಮುಕ್ಕಾಲುಪಾಲು ನಿಂತಿದ್ದದ್ದು ಎರಡೂ ಜರ್ಮನಿಗಳನ್ನು ಬೇರ್ಪಡಿಸುತ್ತಿದ್ದ ಸ್ಥಳದಲ್ಲಿ. ಅದನ್ನು ದಾಟಲು ನ್ಯಾಟೋ ಸೇನೆಗೆ ಶತಾಯಗತಾಯ ಸಾಧ್ಯವಿರಲಿಲ್ಲ.
ಆದರೆ ಈ ಅಗಾಧ ರಕ್ಷಣಾತಡೆಗೋಡೆ ಉರುಳಿಬಿದ್ದದ್ದು 1990-91ರಲ್ಲಿ ಕಮ್ಯೂನಿಸ್ಟ್ ವ್ಯವಸ್ಥೆ ಕುಸಿದಾಗ. ಪೂರ್ವ ಜರ್ಮನಿ, ಪೋಲೆಂಡ್ ಮತ್ತು ಝೆಕೊಸ್ಲೊವೇಕಿಯಾ ಮಾಸ್ಕೋದ ಹಿಡಿತದಿಂದ ಹೊರಜಾರುತ್ತಿದ್ದಂತೇ ರಷ್ಯಾದ ರಕ್ಷಣಾ ಗಡಿ ಸರ್ರನೆ ಪೂರ್ವದ ಅಗಲ ಪ್ರದೇಶಕ್ಕೆ ಸರಿದುಬಿಟ್ಟಿತು. ಅದು ಸಾಲದು ಎಂಬಂತೆ ಬೇಜವಾಬ್ದಾರ ರಷ್ಯಾ ಅಧ್ಯಕ್ಷ ಬೋರಿಸ್ ಯೆಲ್ತ್ಸಿನ್ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೆವ್ ಮೇಲೆ ಒತ್ತಡ ಹೇರಿ ಸೋವಿಯತ್ ಯೂನಿಯನ್ ಅನ್ನೇ ಹದಿನೈದು ತುಂಡುಗಳಾಗಿ ವಿಭಜಿಸಿಬಿಟ್ಟಾಗ. ಅದರಲ್ಲೂ ಬೆಲರೂಸ್ ಮತ್ತು ಯೂಕ್ರೇನ್ಗಳು ಸ್ವತಂತ್ರ ದೇಶವಾಗಿಹೋದದ್ದು ರಷ್ಯಾದ ರಕ್ಷಣಾವ್ಯವಸ್ಥೆಯನ್ನು ಅಗಾಧವಾಗಿ ಬಲಹೀನಗೊಳಿಸಿಬಿಟ್ಟಿತು. ರಷ್ಯಾದ ಆತಂಕವನ್ನು ಇನ್ನಷ್ಟು ಹೆಚ್ಚಿಸಿದ್ದು ನ್ಯಾಟೋ ಪೂರ್ವದತ್ತ ವಿಸ್ತರಿಸತೊಡಗಿದಾಗ. 1990ರಲ್ಲಿ ಪೂರ್ವ-ಪಶ್ಚಿಮ ಜರ್ಮನಿಗಳ ಗಡಿಯವರೆಗೆ ಸೀಮಿತವಾಗಿದ್ದ ನ್ಯಾಟೋ ಆ ದಶಕದ ಅಂತ್ಯದ ಹೊತ್ತಿಗೆ ಪೋಲೆಂಡ್-ಬೆಲರೂಸ್ ಗಡಿಗೆ ಬಂದು ನಿಂತಿತು. ಅಳಿದುಳಿದ ಅನುಕೂಲಗಳನ್ನಾದರೂ ಉಳಿಸಿಕೊಳ್ಳಲು ಹೆಣಗುವ ಒತ್ತಡ 1999ರಲ್ಲಿ ಅಧ್ಯಕ್ಷ ಸ್ಥಾನಕ್ಕೇರಿದ ವ್ಲಾದಿಮೀರ್ ಪೂತಿನ್ ಹೆಗಲ ಮೇಲೆ ಬಿತ್ತು.
ಅಧ್ಯಕ್ಷ ಪೂತಿನ್ 2002ರಲ್ಲಿ ಬೆಲರೂಸ್ ಅನ್ನು ರಷ್ಯಾ ನೇತೃತ್ವದ Collective Security Treatuy Organization (ಸಿಎಸ್ಟಿಓ) ಸೇನಾಕೂಟದೊಳಗೆ ತಂದು ನ್ಯಾಟೋ ಆ ದೇಶವನ್ನೂ ನುಂಗದಂತೆ ತಡೆದರು. ಆದರೆ ದಕ್ಷಿಣದಲ್ಲಿ ರಷ್ಯಾದ ರಕ್ಷಣೆಗೆ ಅತಿಮುಖ್ಯವೆನಿಸಿದ ಯೂಕ್ರೇನ್ ಸಿಎಸ್ಟಿಓ ಕೂಟದಿಂದ ಹೊರಗೇ ಉಳಿದದ್ದು ಆ ದೇಶದ ಮುಂದಿನ ನಡೆಗಳನ್ನು ಎಚ್ಚರಿಕೆಯಿಂದ ಗಮನಿಸುವಂತೆ ಪೂತಿನ್ರನ್ನು ಪ್ರೇರೇಪಿಸಿತು. ಅದರಲ್ಲೂ ಯೂಕ್ರೇನ್ 2014ರ ನಂತರ ನ್ಯಾಟೋಗೆ ಸೇರುವ ಬಯಕೆ ವ್ಯಕ್ತಪಡಿಸತೊಡಗಿದಾಗ ಮತ್ತು ಅದಕ್ಕೆ ನ್ಯಾಟೋದಿಂದ ಸಕಾರಾತ್ಮಕ ಸ್ಪಂದನೆ ಬರತೊಡಗಿದಾಗ ದಕ್ಷಿಣದಲ್ಲಿ ಉದ್ಭವವಾಗತೊಡಗಿದ ಅಪಾಯದ ಅರಿವು ಪೂತಿನ್ರಿಗೆ ಸ್ಪಷ್ಟವಾಯಿತು. ನ್ಯಾಟೋ ಯೂಕ್ರೇನನ್ನೂ ನುಂಗಿ ರಷ್ಯಾದ ಗಡಿಗೆ ಬಂದು ನಿಲ್ಲುವುದು ಅಂದರೆ ಉತ್ತರ ಯುರೋಪಿಯುನ್ ಮೈದಾನಪ್ರದೇಶದ ದಕ್ಷಿಣ ಅಂಚಿನ ಸಮತಟ್ಟು ನೆಲದಲ್ಲಿ 2,400 ಕಿಲೋಮೀಟರ್ಗಳಷ್ಟು ದೀರ್ಘವಾಗಿ ಸಾಗುವಂಥ ಗಡಿಯನ್ನು ನಿರಂತರವಾಗಿ ಕಟ್ಟೆಚ್ಚರದಿಂದ ಕಾಯುವಂಥ ಒತ್ತಡಕ್ಕೆ ಸಿಕ್ಕಿಕೊಳ್ಳುವುದು ತಲೆ ಸರಿಯಿರುವ ಯಾವುದೇ ರಷ್ಯಾ ನಾಯಕನಿಗೆ ಸಮ್ಮತವಾಗುವುದು ಸಾಧ್ಯವೇ ಇಲ್ಲ. ಹೀಗಾಗಿಯೇ, ಎಂಟು ವರ್ಷಗಳ ಹಿಂದೆ ರಷ್ಯಾಪರವಾದ ವಿಕ್ತೊರ್ ಯಾನುಕೋವಿಚ್ ಸರ್ಕಾರದ ಪತನವಾಗಿ ರಷ್ಯಾವಿರೋಧಿ ಪೆತ್ರೋ ಪೊರೊಶೆಂಕೋ ಸರ್ಕಾರ ಕಿಯೆವ್ನಲ್ಲಿ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಕ್ರಿಮಿಯಾ ಪರ್ಯಾಯದ್ವೀಪವನ್ನು ರಷ್ಯಾ ಆಕ್ರಮಿಸಿಕೊಂಡಿತು. ಯೂಕ್ರೇನ್ ನ್ಯಾಟೋಗೆ ಸೇರಿ, ಸೆವಾಸ್ತಪೋಲ್ ಬಂದರು ನ್ಯಾಟೋಗೆ ದಕ್ಕಿ, ತನ್ನ ಬ್ಲಾ್ಯಕ್ ಸೀ ಫ್ಲೀಟ್ಗೆ ನೆಲೆಯಿಲ್ಲದಂತಾಗುವ ಸ್ಥಿತಿಯನ್ನು ತಡೆಯಲು ಅಧ್ಯಕ್ಷ ಪೂತಿನ್ ತೆಗೆದುಕೊಂಡ ಕ್ರಮ ಇದು.
ಈಗ ಭೂ-ಆರ್ಥಿಕ ಆಯಾಮದತ್ತ ಹೊರಳೋಣ. ಕಮ್ಯೂನಿಸ್ಟ್ ಕಾಲದಿಂದಲೂ ಸೋವಿಯತ್ ಯೂನಿಯನ್ ಜಗತ್ತಿನ ಎರಡನೆಯ ಅತಿದೊಡ್ಡ ತೈಲ ಉತ್ಪಾದಕ ಮತ್ತು ನೈಸರ್ಗಿಕ ಅನಿಲದ ದೊಡ್ಡ ರಫ್ತುದಾರ ರಾಷ್ಟ್ರ. ಸೈಬೀರಿಯಾ ಮತ್ತು ಕ್ಯಾಸ್ಪಿಯನ್ ವಲಯದಿಂದ ತೈಲವನ್ನೂ, ನೈಸರ್ಗಿಕ ಅನಿಲವನ್ನೂ ಯುರೋಪ್ಗೆ ರಫ್ತು ಮಾಡಲೆಂದು ಹಾಕಿದ್ದ ಕೊಳವೆಮಾರ್ಗಗಳೆಲ್ಲವೂ ಸಾಗುತ್ತಿದ್ದುದು ಯೂಕ್ರೇನ್ ಮೂಲಕ. 1991ರಲ್ಲಿ ಸೋವಿಯತ್ ಯೂನಿಯನ್ ಛಿದ್ರವಾದಾಗ ತೈಲ ಮತ್ತು ಅನಿಲದ ಮೂಲಗಳೆಲ್ಲವೂ ರಷ್ಯಾದಲ್ಲೇ ಉಳಿದವು, ಆದರೆ ರಫ್ತಿಗೆ ಅಗತ್ಯವಾದ ಕೊಳವೆಮಾರ್ಗಗಳು ಯೂಕ್ರೇನ್ ಕೈಗೆ ಬಿದ್ದವು. ಅವುಗಳನ್ನು ಉಪಯೋಗಿಸಲು ಯೂಕ್ರೇನ್ಗೆ ರಷ್ಯಾ ವಾರ್ಷಿಕವಾಗಿ ಬಿಲಿಯನ್ಗಟ್ಟಲೆ ತೆರಿಗೆ ಕೊಡಬೇಕಾಯಿತು. 2005ರಲ್ಲೂ ರಷ್ಯಾದ 80% ಅನಿಲ ರಫ್ತಾಗುತ್ತಿದ್ದು ಆ ಕೊಳವೆಮಾರ್ಗಗಳಿಂದ. ಅದರಿಂದಾಗಿ ಯೂಕ್ರೇನ್ಗೆ ಕೊಡಬೇಕಾದ ಭಾರಿ ತೆರಿಗೆಯನ್ನು ಉಳಿಸಲೋಸುಗ ಅಧ್ಯಕ್ಷ ಪೂತಿನ್ ಬೆಲರೂಸ್ ಮತ್ತು ಪೋಲೆಂಡ್ಗಳ ಮೂಲಕ ತನ್ನ ಅತಿ ದೊಡ್ಡ ಗಿರಾಕಿ ಜರ್ಮನಿಗೆ ‘ನಾರ್ತ್ ಸ್ಟ್ರೀಮ್ ಎಂಬ ನೇರ ಕೊಳವೆಮಾರ್ಗ ಸ್ಥಾಪಿಸಿದರು. ಹಾಗೆಯೇ, ಕಪು್ಪಸಮುದ್ರ ಮತ್ತು ತುರ್ಕಿ ನೆಲದ ಮೂಲಕ ದಕ್ಷಿಣ ಯುರೋಪಿಯನ್ ದೇಶಗಳಿಗೆ ಸಾಗುವಂಥ ‘ಸೌತ್ ಸ್ಟ್ರೀಮ್ ‘ಬ್ಲೂ ಸ್ಟ್ರೀಮ್ ಮತ್ತು ‘ಟರ್ಕ್ ಸ್ಟ್ರೀಮ್ ಎಂಬ ಪೈಪ್ಲೈನ್ಗಳನ್ನೂ ನಿರ್ವಿುಸಿದರು. ಆ ಮೂಲಕ ಯೂಕ್ರೇನ್ ಮೇಲಿನ ಅವಲಂಬನೆಯನ್ನು ಪೂರ್ಣವಾಗಿ ತಪ್ಪಿಸಿದರು. ಇಂದು ಯೂರೋಪಿಯನ್ ಯೂನಿಯನ್ನ 35% ಅನಿಲವನ್ನೂ, ಜರ್ಮನಿಯ 50% ಅನಿಲವನ್ನೂ ಈ ನಾಲ್ಕು ಪೈಪ್ಲೈನ್ಗಳು ಪೂರೈಸುತ್ತಿವೆ.
ಹೀಗೆ ಪೂತಿನ್ ನೆಮ್ಮದಿಯ ನಿಟ್ಟುಸಿರುಡುತ್ತಿರುವಾಗಲೇ ಅದೆಲ್ಲವೂ ವಿಫಲವಾಗುವ ಅಪಾಯ ಎದುರಾಗಿದೆ. 2019ರಲ್ಲಿ ಯೂಕ್ರೇನ್ನ ಗದ್ದುಗೆಯೇರಿದ ವೊಲೊದಿಮೀರ್ ಝೆಲೆನ್ಸ್ಕಿ ನ್ಯಾಟೋ ಸೇರುವ ಬಯುಕೆಯನ್ನು ದೊಡ್ಡದಾಗಿ ಹೇಳಿಕೊಂಡರೂ ಅದಕ್ಕೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ರಿಂದ ಹೇಳಿಕೊಳ್ಳುವಂಥ ಸಕಾರಾತ್ಮಕ ಪ್ರತಿಕ್ರಿಯೆ ಬರಲಿಲ್ಲ. ಆದರೆ ಯಾವಾಗ ಜೋ ಬೈಡೆನ್ ಶ್ವೇತಭವನ ಪ್ರವೇಶಿಸಿದರೋ ಆಗ ಪರಿಸ್ಥಿತಿ ಬಿಗಡಾಯಿಸತೊಡಗಿತು. ಝೆಲೆನ್ಸ್ಕಿಯವರ ನ್ಯಾಟೋ ಬಯಕೆಗೆ ಪೂರಕವಾಗಿ ಸ್ಪಂದಿಸತೊಡಗಿದ ಬೈಡೆನ್ ಯೂಕ್ರೇನ್ಗೆ ನೀಡುತ್ತಿದ್ದ ವಾರ್ಷಿಕ ಸೇನಾಸಹಾಯಧನವನ್ನು ಏಕಾಏಕಿ ದ್ವಿಗುಣಗೊಳಿಸಿದರು. ಆ ಪ್ರಕಾರ 650 ಮಿಲಿಯನ್ ಡಾಲರ್ಗಳ ಮೊತ್ತದ ‘ರೆಕಾರ್ಡ್’ ಶಸ್ತ್ರಾಸ್ತ್ರಗಳು ಬಂದದ್ದು ಕಳೆದ ಅಕ್ಟೋಬರ್ ಮತ್ತು ಡಿಸೆಂಬರ್ನಲ್ಲಿ. ರಷ್ಯಾ ತನ್ನ ಸೇನೆಯನ್ನು ಗಡಿಗೆ ಕಳುಹಿಸಿದ್ದು ಅ ಎರಡು ತಿಂಗಳುಗಳ ನಡುವಿನ ನವೆಂಬರ್ನಲ್ಲಿ! ಅಂದರೆ ಅಧ್ಯಕ್ಷ ಪೂತಿನ್ರ ಕ್ರಮದ ಹಿಂದೆ ಮತ್ತು ಮುಂದೆ ಅಧ್ಯಕ್ಷ ಬೈಡೆನ್ರ ಪ್ರಚೋದನೆ ಇರುವುದು ಸ್ಪಷ್ಟವಾಯಿತಲ್ಲ? ಮೊದಲಿಗೆ ಕೇವಲ ಬೆದರಿಕೆಯ ತಂತ್ರವಾಗಿ ಸೇನಾಜಮಾವಣೆ ಮಾಡಿದ ಪೂತಿನ್ ಅಮೆರಿಕದ ಬದಲಾದ ನೀತಿಯನ್ನು ಗಮನಿಸಿ, ಜನವರಿ ಆರಂಭದಿಂದ ನಿಜವಾದ ದಾಳಿಗೇ ತಯಾರಿ ನಡೆಸಿದರು.
ಯುದ್ಧದಲ್ಲಿ ಯೂಕ್ರೇನ್ ಪ್ರಮುಖವಾಗಿ ಬಳಸುತ್ತಿರುವುದು ಕಳೆದ ವರ್ಷದ ಸಹಾಯದ ಭಾಗವಾಗಿ ಅಮೆರಿಕದಿಂದ ಬಂದ ಟ್ಯಾಂಕ್ ನಿರೋಧಕ ಫಿರಂಗಿಗಳು, ವಿಮಾನನಾಶಕ ಕ್ಷಿಪಣಿಗಳು ಮತ್ತು ವಿವಿಧ ಬಗೆಯ ಗನ್ಗಳನ್ನು. ರಷ್ಯಾ ಯುದ್ಧವಿಮಾನಗಳನ್ನು ಹೊಡೆದುರುಳಿಸಲು, ಟ್ಯಾಂಕ್ಗಳನ್ನು ಸಿಡಿಸಿ ಕರಕಲಾಗಿಸಲು ಅಮೆರಿಕ ಪೂರೈಸಿದ ಅಸ್ತ್ರಗಳು ಬಳಕೆಯಾಗುತ್ತಿವೆ. ಯೂಕ್ರೇನ್ ಸೇನೆಯಿರಲಿ, ಎಪ್ಪತ್ತುಸಾವಿರಕ್ಕೂ ಹೆಚ್ಚಿನ ನಾಗರಿಕರ ಕೈಗೇ ಶಸ್ತ್ರಗಳು ಬಂದಿವೆ, ಶಸ್ತ್ರಬಳಕೆಯ ತರಾತುರಿ ತರಬೇತಿಯೊಂದಿಗೆ! ಈ ಬಗೆಯ ಯುದ್ಧ ಆರೇಳು ದಿನಗಳಲ್ಲಿ ಮುಕ್ತಾಯವಾಗುವಂತಹದಲ್ಲ. ಆದರೂ ಅದರ ಗತಿ ನಿಧಾನವಾಗಿ ಯೂಕ್ರೇನ್ಗೆ ಪ್ರತಿಕೂಲವಾಗುತ್ತಿದೆ. ರೂಪಕದಿಂದಲೇ ಆರಂಭವಾದ ನಮ್ಮೀ ವಿಶ್ಲೇಷಣೇಯ ಉಪಸಂಹಾರವನ್ನು ರೂಪಕದಿಂದಲೇ ಮಾಡೋಣ. ಯುದ್ಧದ ಮೊದಲ ದಿನದವರೆಗೂ ಸೂಟು-ಬೂಟು-ಟೈಗಳಲ್ಲಿ ಕಂಗೊಳಿಸುತ್ತಿದ್ದ ಯೂಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಎರಡನೆಯ ದಿನದಿಂದ ಟೀಶರ್ಟ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅವರ ಈ ಬದಲಾದ ಉಡುಪು ಯೂಕ್ರೇನ್ನ ಬದಲಾಗುತ್ತಿರುವ ಹಣೆಬರಹಕ್ಕೊಂದು ರೂಪಕವಾಗುತ್ತದೆ.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)