

‘ಭಾರತೀಯ ಉಪಖಂಡದ ಮುಸ್ಲಿಮರಿಗಾಗಿನ ತಾಯಿನಾಡು’ ಎಂಬ ಘೊಷಣೆಯೊಂದಿಗೆ 1947ರ ಆಗಸ್ಟ್ನಲ್ಲಿ ಸೃಷ್ಟಿಯಾದ ಪಾಕಿಸ್ತಾನ ಮುಸ್ಲಿಂ ರಾಷ್ಟ್ರಗಳ ಕಣ್ಮಣಿಯಾದದ್ದರಲ್ಲಿ ಆಶ್ಚರ್ಯವೇನೂ ಇರಲಿಲ್ಲ. ಸೌದಿ ಅರೇಬಿಯಾ, ತುರ್ಕಿ, ಇರಾನ್ನಂಥ ಪ್ರಮುಖ ಮುಸ್ಲಿಂ ರಾಷ್ಟ್ರಗಳು 1947ರ ಆಗಸ್ಟ್ 14ರಂದೇ ಪಾಕಿಸ್ತಾನಕ್ಕೆ ಮಾನ್ಯತೆ ನೀಡಿದವು. ನಂತರದ ದಿನಗಳಲ್ಲಿ ಪಾಕಿಸ್ತಾನಕ್ಕೆ ಅಗಾಧ ಆರ್ಥಿಕ ನೆರವು ಹಾಗೂ ರಾಜಕೀಯ ಬೆಂಬಲ ತೈಲಸಂಪನ್ನ ಅರಬ್ ದೇಶಗಳಿಂದ ಹರಿದುಬರತೊಡಗಿತು. ಜತೆಗೆ, ಮುಸ್ಲಿಂ ಜಗತ್ತಿನಲ್ಲಿ ಪಾಕಿಸ್ತಾನದ ವರ್ಚಸ್ಸೂ ಏರತೊಡಗಿತು. ಅದು ಎಷ್ಟರ ಮಟ್ಟಿಗಿತ್ತೆಂದರೆ ಮುಸ್ಲಿಂ ರಾಷ್ಟ್ರಗಳು ಪಾಕಿಸ್ತಾನದ ಮಾತಿಗೆ ಬೆಲೆ ಕೊಟ್ಟು ಭಾರತವನ್ನು ಕಡೆಗಣಿಸುವಷ್ಟು. 1969 ಸೆಪ್ಟೆಂಬರ್ನಲ್ಲಿ ಮೊರಾಕ್ಕೋದ ರಬಾತ್ನಲ್ಲಿ ಮುಸ್ಲಿಂ ರಾಷ್ಟ್ರಗಳ ಪ್ರಥಮ ಸಮ್ಮೇಳನ ಆಯೋಜನೆಗೊಂಡಾಗ ಅದರಲ್ಲಿ ಭಾಗವಹಿಸಲು, ಅಂದು ಜಗತ್ತಿನ ಮೂರನೆಯ ಅತಿ ದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿದ್ದ ಭಾರತಕ್ಕೆ ಆಹ್ವಾನ ನೀಡಲಾಯಿತು. ಆ ಆಹ್ವಾನ ತಡವಾಗಿ ಬಂದರೂ ಅದು ಬಂದದ್ದು ಅತಿಥೇಯ ಮೊರಾಕ್ಕೋದ ವಿದೇಶಮಂತ್ರಿಗಳಿಂದ, ಅದೇ ಮೊರಾಕ್ಕೋ ಮತ್ತು ಮುಸ್ಲಿಂ ಜಗತ್ತಿನ ನಾಯಕ ಸೌದಿ ಅರೇಬಿಯಾದ ಅರಸರುಗಳ ಸಮ್ಮತಿಯೊಂದಿಗೆ. ಅದರಂತೆ ಮೊರಾಕ್ಕೋದಲ್ಲಿನ ಭಾರತೀಯ ರಾಯಭಾರಿ ಗುರ್ಬಚನ್ ಸಿಂಗ್ ಭಾರತೀಯ ನಿಯೋಗದ ಹಂಗಾಮಿ ನಾಯಕರಾಗಿ ಸಮ್ಮೇಳನದ ಮೊದಲ ಎರಡು ಸಭೆಗಳಲ್ಲಿ ಭಾಗವಹಿಸಿದರು. ಆದರೆ ಭಾರತದ ಅಧಿಕೃತ ನಿಯೋಗ ರಬಾತ್ ತಲುಪುವುದರೊಳಗೆ ಪಾಕಿಸ್ತಾನ ತಂಟೆ ತೆಗೆದು ಭಾರತವನ್ನು ಸಮ್ಮೇಳನದಿಂದ ಹೊರಗಿಡಿಸುವುದರಲ್ಲಿ ಯಶಸ್ವಿಯಾಯಿತು. ‘ಭಾರತದ ಮುಸ್ಲಿಮರು ಇಸ್ಲಾಮಿಕ್ ಜಗತ್ತಿನ ಭಾಗವಲ್ಲ’ ಎಂಬ ಪಾಕಿಸ್ತಾನದ ವಾದ ಮತ್ತು ಸೇನಾಶಕ್ತಿಗಾಗಿ ಮುಸ್ಲಿಂ ಜಗತ್ತಿನಲ್ಲಿ ಪಾಕಿಸ್ತಾನ ಹೊಂದಿದ್ದ ಹಿರಿಮೆಯ ಸ್ಥಾನ ಅಂದು ಮುಸ್ಲಿಂ ಜಗತ್ತಿನ ಕಣ್ಣಿಗೆ ಮಣ್ಣೆರಚಿದವು. ಮುಂದಿನ ಮೂರು ತಿಂಗಳಲ್ಲಿ ಸೃಷ್ಟಿಯಾಗಲಿದ್ದ ‘ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕೋ-ಆಪರೇಷನ್’ (ಓಐಸಿ) ಸಂಘಟನೆಯಲ್ಲಿ ಭಾರತವೂ ಸೇರಿಬಿಟ್ಟರೆ, ಕಾಶ್ಮೀರ ವಿವಾದವನ್ನೆತ್ತಿ ಭಾರತವನ್ನು ಟೀಕಿಸಲು ಆ ಸಂಘಟನೆಯನ್ನು ವೇದಿಕೆಯನ್ನಾಗಿ ಬಳಸಿಕೊಳ್ಳುವ ತನ್ನ ಉದ್ದೇಶ ಯಶಸ್ವಿಯಾಗಲಾರದು ಎಂಬ ಪಾಕ್ ಹುನ್ನಾರವನ್ನು ಅಂದು ಮುಸ್ಲಿಂ ರಾಷ್ಟ್ರಗಳು ಅರಿಯುವಲ್ಲಿ ಸೋತಿದ್ದವು. ಇಂದು ಇತಿಹಾಸದ ಚಕ್ರ ಒಂದು ಸುತ್ತು ಪೂರ್ತಿ ತಿರುಗಿದೆ, ಮುಸ್ಲಿಂ ಜಗತ್ತಿನ ಕಣ್ಣು ತೆರೆದಿದೆ.
ಇದೇ ನವೆಂಬರ್ 27-28ರಂದು ಪಶ್ಚಿಮ ಆಫ್ರಿಕನ್ ದೇಶ ನೈಜರ್ನ ರಾಜಧಾನಿ ನಿಯಾಮೇಯಲ್ಲಿ ನಡೆದ ಓಐಸಿಯ 47ನೇ ಸಮಾವೇಶದಲ್ಲಿ ಪಾಕಿಸ್ತಾನಕ್ಕೆ ಮುಖಭಂಗವಾಗಿದೆ. ಅಲ್ಲಿ ಕಾಶ್ಮೀರ ವಿಷಯವನ್ನು ರ್ಚಚಿಸಬೇಕೆಂಬ, ಭಾರತವನ್ನು ಟೀಕಿಸುವ ಗೊತ್ತುವಳಿ ಅಂಗೀಕರಿಸಬೇಕೆಂಬ ಪಾಕ್ ಬೇಡಿಕೆ ತಿರಸ್ಕೃತವಾಗಿದೆ. ಈ ಹಿನ್ನೆಲೆಯೊಂದಿಗೆ, ಕಳೆದ ಏಳು ದಶಕಗಳಲ್ಲಿ ಮುಸ್ಲಿಂ ಜಗತ್ತಿನಲ್ಲಿ ಪಾಕಿಸ್ತಾನದ ಏಳುಬೀಳುಗಳ ಅವಲೋಕನ ಮಾಡೋಣ.
57 ಮುಸ್ಲಿಂ ದೇಶಗಳಲ್ಲಿ ಸಮಾನವಾಗಿರುವುದು ಧರ್ಮ ಮಾತ್ರ. ಪ್ರಮುಖ ಮುಸ್ಲಿಂ ದೇಶಗಳಾದ ಸೌದಿ ಅರೇಬಿಯಾ, ಇರಾನ್ ಮತ್ತು ಟರ್ಕಿಗಳ ನಡುವೆಯಂತೂ ಯಾವುದೇ ತಾಳಮೇಳವಿಲ್ಲ. ಸೌದಿ ಅರೇಬಿಯಾ ಮತ್ತು ಇರಾನ್ಗಳು ಇಸ್ಲಾಮ್ ಎರಡು ಪ್ರಮುಖ ಹಾಗೂ ಪರಸ್ಪರ ಬದ್ಧವಿರೋಧಿ ಪಂಗಡಗಳಾದ ಸುನ್ನಿ ಮತ್ತು ಶಿಯಾ ನಾಡುಗಳು. ಇನ್ನು ಸೌದಿ ಅರೇಬಿಯಾ ಮತ್ತು ಟರ್ಕಿ ಸುನ್ನಿ ರಾಷ್ಟ್ರಗಳಾದರೂ, ಸೌದಿ ಕಟ್ಟಾ ವಹಾಬಿ ಇಸ್ಲಾಮಿಕ್ ರಾಷ್ಟ್ರವಾದರೆ, ಶೇಕಡ 98 ಮುಸ್ಲಿಮರಿರುವ ಟರ್ಕಿ ಸೆಕ್ಯೂಲರ್ ರಾಷ್ಟ್ರ. ಜತೆಗೆ ಇವೆರಡರ ನಡುವಿನ ಐತಿಹಾಸಿಕ ವೈಮನಸ್ಯಕ್ಕೆ ಒಂದು ಸಹಸ್ರಮಾನದ ಇತಿಹಾಸವಿದೆ. ಶೀತಲಸಮರ ಕಾಲದಲ್ಲಿ ತಮ್ಮ ರಕ್ಷಣಾ ಅಗತ್ಯಗಳಿಗೆ ಅನುಗುಣವಾಗಿ ಅಮೆರಿಕ ಮತ್ತು ಪಶ್ಚಿಮ ಯುರೋಪ್ನ ಜತೆಗೂಡಿದ ಈ ಮೂರೂ ದೇಶಗಳು ಆ ಕಾರಣದಿಂದಲೇ ಒಂದನ್ನೊಂದು ಸಹಿಸಿಕೊಂಡಿದ್ದವು ಮತ್ತು ಯೆಹೂದಿ ಇಸ್ರೇಲ್ ವಿರುದ್ಧದ ಮುಸ್ಲಿಂ ಜಗತ್ತಿನ ಸಂಘಟಿತ ವಿರೋಧ ಬಲಹೀನಗೊಳ್ಳದಂತೆ ಎಚ್ಚರಿಕೆ ವಹಿಸಿದ್ದವು. ಆ ದಿನಗಳಲ್ಲಿ ಪಾಕಿಸ್ತಾನದ ರಾಜತಂತ್ರ ಅತೀವ ಕೌಶಲಪೂರ್ಣವಾಗಿತ್ತು. ಪಾಕಿಸ್ತಾನದ ಸೇನಾ ಹಾಗೂ ಆರ್ಥಿಕ ಬಲಹೀನತೆಗಳನ್ನು ಮರೆಮಾಚಿ, ಪೂರ್ವದ ಈ ದೇಶ ಎಲ್ಲ ಅರ್ಥಗಳಲ್ಲೂ ಬಲಾಢ್ಯವಾದುದು, ಮುಸ್ಲಿಂ ಜಗತ್ತಿನ ಮುಖವಾಣಿಯಾಗಲು ಯೋಗ್ಯವಾದುದು ಎಂದು ನಂಬಿಸುವುದರಲ್ಲಿ ಪಾಕ್ ರಾಜತಂತ್ರಜ್ಞರು ಯಶಸ್ವಿಯಾಗಿದ್ದರು.
‘ರಾಯಭಾರಿಯೆಂದರೆ ತನ್ನ ದೇಶದ ಬಗ್ಗೆ ಸುಳ್ಳು ಹೇಳಲು ವಿದೇಶಕ್ಕೆ ಕಳುಹಿಸಲ್ಪಟ್ಟ ಪ್ರಾಮಾಣಿಕ ವ್ಯಕ್ತಿ’ ಎಂದು ನಾಲ್ಕು ಶತಮಾನಗಳ ಹಿಂದೆ ವೆನಿಸ್ನಲ್ಲಿ ಬ್ರಿಟಿಷ್ ರಾಯಭಾರಿಯಾಗಿದ್ದ ಸರ್ ಹೆನ್ರಿ ವ್ಯಾಟನ್ ಹೇಳಿದ ಮಾತಿಗೆ ಅಕ್ಷರಶಃ ಅನುಗುಣವಾಗಿ ನಡೆದುಕೊಂಡು ದೇಶದ ಹಿತಾಸಕ್ತಿಗಳನ್ನು ಕಾಪಾಡಿದ ಪಾಕ್ ರಾಜತಂತ್ರಜ್ಞರ ಚತುರಮತಿಯ ಬಗ್ಗೆ ಈರ್ಷ್ಯೆಯೂ, ಅಂಥ ಕೌಶಲ ಪ್ರದರ್ಶಿಸುವಲ್ಲಿ ಅಡಿಗಡಿಗೆ ಸೋತ ಭಾರತೀಯ ರಾಜತಂತ್ರಜ್ಞರ ಬಗ್ಗೆ ನಿರಾಸೆಯೂ ನನ್ನಲ್ಲಿವೆ.
ವೈರುಧ್ಯಮಯ ಇಸ್ಲಾಮಿಕ್ ಜಗತ್ತಿನಲ್ಲಿ ತನ್ನ ಹಿತಾಸಕ್ತಿಗಳನ್ನು ಕಾಪಾಡಿಕೊಳ್ಳುವ ಪಾಕಿಸ್ತಾನದ ಚತುರ ನೀತಿ ಮೊದಲಿಗೆ ಪರೀಕ್ಷೆಯನ್ನು ಎದುರಿಸಿದ್ದು 1956ರ ಸುಯೆಜ್ ಬಿಕ್ಕಟ್ಟಿನಲ್ಲಿ. ಸೋವಿಯತ್ ಕಮ್ಯೂನಿಸ್ಟ್ ವಿಸ್ತರಣಾವಾದವನ್ನು ತಡೆಗಟ್ಟಲು ಟರ್ಕಿ, ಇರಾಕ್, ಇರಾನ್ ಮತ್ತು ಪಾಕಿಸ್ತಾನ 1955ರಲ್ಲಿ ಬ್ರಿಟನ್ನ ಜತೆಗೂಡಿ ‘ಸೆಂಟ್ರಲ್ ಟ್ರೀಟಿ ಆರ್ಗನೈಜೇಷನ್’ (ಸೆಂಟೋ) ಅಥವಾ ‘ಬಾಗ್ದಾದ್ ಒಪ್ಪಂದ’ ರೂಪಿಸಿಕೊಂಡವಷ್ಟೇ. ಆದರೆ ಮರುವರ್ಷವೇ ಅರಬ್ಬರ ಬದ್ಧವೈರಿ ಇಸ್ರೇಲ್ ಜತೆಗೂಡಿ ಬ್ರಿಟನ್ ಪ್ರಮುಖ ಅರಬ್ ರಾಷ್ಟ್ರವಾದ ಈಜಿಪ್ತ್ ಮೇಲೆ ದಾಳಿಯೆಸಗಿತು. ಸೆಂಟೋದ ಮುಸ್ಲಿಂ ಸದಸ್ಯದೇಶಗಳು ಬಹಿರಂಗವಾಗಿ ಕುಂಯ್ಗರೆದರೂ ಈಜಿಪ್ತ್ ಪರವಾಗಿ ನಿಂತು ಬ್ರಿಟನ್ನ ದ್ವೇಷ ಕಟ್ಟಿಕೊಳ್ಳಲು ಅವ್ಯಾವುವೂ ತಯಾರಿರಲಿಲ್ಲ. ತಮ್ಮ ರಕ್ಷಣೆ ಜತೆಗೇ ಇಸ್ರೇಲ್ ವಿರುದ್ಧ ಬೇಕೆಂದಾಗ ಕೂಗಾಡಲು ಅಗತ್ಯವಾದ ‘ಧಂ’ ತಮಗೆ ದೊರೆಯುವುದು ಬ್ರಿಟನ್ ಮತ್ತು ಅದರ ಜತೆಗಿನ ಅಮೆರಿಕದಿಂದ ಮಾತ್ರ ಎಂದು ಅರಿತಿದ್ದವು. ಪಶ್ಚಿಮ ಏಷ್ಯಾದ ಮುಸ್ಲಿಂ ದೇಶಗಳ ರಕ್ಷಣಾ ಹಾಗೂ ರಾಜತಾಂತ್ರಿಕ ಬಲಹೀನತೆಗಳನ್ನು ಚೆನ್ನಾಗಿ ಅರ್ಥಮಾಡಿಕೊಂಡಿದ್ದು ಅಂದಿನ ಪಾಕ್ ಪ್ರಧಾನಮಂತ್ರಿ ಎಚ್.ಎಸ್. ಸುಹ್ರವರ್ದಿ, ‘ಸೊನ್ನೆ+ಸೊನ್ನೆ+ಸೊನ್ನೆ=ಸೊನ್ನೆ’ ಎಂದು ಹೇಳುವ ಮೂಲಕ! ಈ ‘ಸೊನ್ನೆ’ಗಳಲ್ಲಿ ಕೆಲವು ಹೊಂದಿದ್ದ ಅಗಾಧ ಪೆಟ್ರೋಡಾಲರ್ ಮತ್ತೆ ಕೆಲವಕ್ಕೆ ಅಮೆರಿಕ ಕೊಟ್ಟಿದ್ದ ಶಸ್ತ್ರಾಸ್ತ್ರಗಳ ಅರಿವು ಪಾಕ್ ನಾಯಕರಿಗಿತ್ತು ಮತ್ತು ಅವುಗಳನ್ನು ತಮ್ಮ ದೇಶದ ಅನುಕೂಲಕ್ಕೆ ಬಳಸಿಕೊಳ್ಳುವ ಕಲೆಯೂ ಕರಗತವಾಗಿತ್ತು. ಹೀಗಾಗಿಯೇ 1965ರ ಯುದ್ಧದಲ್ಲಿ ಈಜಿಪ್ತ್ ಬೆಂಬಲವನ್ನು ಪಡೆದುಕೊಳ್ಳುವುದರಲ್ಲಿ ಪಾಕಿಸ್ತಾನಕ್ಕೆ ಕಷ್ಟವೇನೂ ಆಗಲಿಲ್ಲ. 9 ವರ್ಷಗಳ ಹಿಂದೆ ತಾನು ಇಸ್ರೇಲ್ ಮತ್ತು ಬ್ರಿಟನ್ಗಳಿಂದ ದಾಳಿಗೊಳಗಾದಾಗ ತನ್ನ ಬೆಂಬಲಕ್ಕೆ ನಿಂತದ್ದು ಭಾರತ ಎಂಬ ವಾಸ್ತವವನ್ನು ಈಜಿಪ್ತ್ ತಣ್ಣಗೆ ಮರೆತುಬಿಟ್ಟಿತು. ಅದೇ ಯುದ್ಧದಲ್ಲಿ ಟರ್ಕಿ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸಿದರೆ, 1971ರ ಯುದ್ಧದ್ದು ಮತ್ತೊಂದು ಆಸಕ್ತಿದಾಯಕ ಕಥೆ. ಆ ಯುದ್ಧದಲ್ಲಿ ಪಾಕಿಸ್ತಾನಕ್ಕೆ ಬೆಂಬಲ ನೀಡಿದ ಇರಾನೀ ಅರಸ ರೆಜಾ ಶಾ ಪಹ್ಲವಿ, ‘ಪಶ್ಚಿಮ ಪಾಕಿಸ್ತಾನವನ್ನೂ ವಿಭಜಿಸಲು ಭಾರತವೇನಾದರೂ ಪ್ರಯತ್ನಿಸಿದರೆ ಆಗ ಅದು ಇರಾನ್ ಜತೆ ಹೋರಾಡಬೇಕಾಗುತ್ತದೆ!’ ಎಂದು ಧಮಕಿಯನ್ನೂ ಹಾಕಿದರು! 1971 ಡಿಸೆಂಬರ್ 2ರಂದು (ಇಂದಿಗೆ ಸರಿಯಾಗಿ 49 ವರ್ಷಗಳು) ಅಸ್ತಿತ್ವಕ್ಕೆ ಬಂದ ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ತನ್ನ ರಕ್ಷಣೆಗೆ ಅವಲಂಬಿಸಿದ್ದು ಪಾಕಿಸ್ತಾನೀ ಸೇನೆಯನ್ನು, ಅದೂ, ಮರುದಿನವೇ ಆರಂಭವಾದ ಯುದ್ಧದಲ್ಲಿ ಭಾರತದಿಂದ ಹೀನಾಯವಾಗಿ ಪರಾಭವಗೊಂಡ ಪಾಕಿ ಸೇನೆಯನ್ನು!
1979ರಲ್ಲಿ ಇರಾನ್ನಲ್ಲಿ ಕ್ರಾಂತಿಯಾಗಿ, ಖೊಮೇನಿಯ ಇಸ್ಲಾಮಿಕ್ ಮೂಲ ಭೂತವಾದಿ ಆಡಳಿತ ಅಧಿಕಾರಕ್ಕೆ ಬಂದು, ಇಸ್ಲಾಮಿಕ್ ಜಗತ್ತಿನ ನಾಯಕತ್ವಕ್ಕಾಗಿ ಸೌದಿ ಅರೇಬಿಯಾ ಮತ್ತು ಇರಾನ್ ನಡುವೆ ಜಟಾಪಟಿ ಆರಂಭವಾದ ಮೇಲೂ ಅವೆರಡು ದೇಶಗಳೊಂದಿಗೂ ಸಖ್ಯವನ್ನು ಏಕಪ್ರಮಾಣವಾಗಿ ಮುಂದುವರಿಸಿ ಕೊಳ್ಳುವುದರಲ್ಲಿ ಪಾಕಿಸ್ತಾನ ಯಶಸ್ವಿಯಾಯಿತು. ಹೀಗೆ ಮುಸ್ಲಿಂ ಜಗತ್ತಿನಲ್ಲಿ ತನ್ನ ಪ್ರತಿಷ್ಠೆಯನ್ನು ನಿರಂತರವಾಗಿ ಕಾಯ್ದುಕೊಂಡು ಬಂದ ಚಾಲಾಕಿ ಪಾಕಿಸ್ತಾನ ಅವುಗಳ ಪ್ರತಿಯೊಂದು ಸಮಾವೇಶವನ್ನೂ ಭಾರತದ ವಿರುದ್ಧ ವಾಗ್ದಾಳಿ ಎಸಗುವುದಕ್ಕೆ ಬಳಸಿಕೊಳ್ಳತೊಡಗಿತು. ಭಾರತದ ವಿರುದ್ಧ ಪಾಕಿಸ್ತಾನ ರಚಿಸಿ ಮುಂದಿಟ್ಟ ಪ್ರತೀ ಗೊತ್ತುವಳಿಯನ್ನೂ ಅಂಗೀಕರಿಸುವುದು ‘ಓಐಸಿ’ಯ ಅಭ್ಯಾಸವಾಗಿಹೋಯಿತು. ಮುಸ್ಲಿಂ ರಾಷ್ಟ್ರಗಳು, ಮುಖ್ಯವಾಗಿ ಅರಬ್ ರಾಷ್ಟ್ರಗಳು, ಅಕ್ಷರಶಃ ಮರಳಿನಲ್ಲಿ ತಲೆ ಹೂತು ನಿಂತ ಆಸ್ಟ್ರಿಚ್ಗಳೇ ಆಗಿದ್ದವು. (ಇದಕ್ಕೆ ಒಂದೇ ಒಂದು ಅಪವಾದವೆಂದರೆ ಸದಾ ಭಾರತದ ಪರವಾಗಿ ನಿಂತ ಇರಾಕ್ನ ಸದ್ದಾಂ ಹುಸೇನ್)
ಇದು ಇತಿಹಾಸ. ಈಗ ವರ್ತಮಾನಕ್ಕೆ ಬರೋಣ. ಪ್ರಧಾನಮಂತ್ರಿ ನರೇಂದ್ರ ಮೋದಿ 2015ರ ವಸಂತಕಾಲದಲ್ಲಿ ಆರಂಭಿಸಿದ ನೇರ ರಾಜತಾಂತ್ರಿಕ ನಡೆಗಳಿಂದಾಗಿ ಭಾರತವನ್ನು ಅರಬ್ ವಲಯ ನೋಡುವುದರಲ್ಲಿ ಎರಡು ಬಗೆಯ ಬದಲಾವಣೆಗಳಾಗಿವೆ. ಒಂದು- ಭಾರತದೊಂದಿಗಿನ ಆರ್ಥಿಕ ಸಹಯೋಗ ತಮಗೆ ಲಾಭದಾಯಕ ಎಂದು ಸೌದಿ ಅರೇಬಿಯಾ ಮತ್ತು ಯುಎಇ ಕಂಡುಕೊಂಡಿವೆ. 2017-18ರ ಸಾಲಿನಲ್ಲಿ ಭಾರತ-ಸೌದಿ ಒಟ್ಟು ವಹಿವಾಟು 33.07 ಬಿಲಿಯನ್ ಡಾಲರ್ಗಳಿಗೇರಿದರೆ ಪಾಕ್-ಸೌದಿ ವಹಿವಾಟು ಕೇವಲ 1.871 ಬಿಲಿಯನ್ ಡಾಲರ್ಗಳಷ್ಟೇ. ಅದೇ ಸಮಯದಲ್ಲಿ ಭಾರತ-ಯುಎಇ ವಹಿವಾಟು 60 ಬಿಲಿಯನ್ ಡಾಲರ್ಗಳ ಬೃಹತ್ ಮೊತ್ತ ತಲುಪಿದರೆ, ಪಾಕ್-ಯುಎಇ ವಹಿವಾಟು 8.19 ಬಿಲಿಯನ್ ಡಾಲರ್ಗಳು ಮಾತ್ರ. ತಮ್ಮ ಮೊಟ್ಟೆಗಳನ್ನು ಯಾವ ಬುಟ್ಟಿಯಲ್ಲಿಡಬೇಕೆಂದು ಅರಬ್ಬರಿಗೆ ಈಗ ಮನವರಿಕೆಯಾಗಿದೆ. ಈ ಹೊಸ ಚಿಂತನೆಯ ಬಹುದೊಡ್ಡ ಹರಿಕಾರ 2017ರಲ್ಲಿ ಯುವರಾಜ ಪಟ್ಟಕ್ಕೇರಿದ ಮಹಮ್ಮದ್ ಬಿನ್ ಸಲ್ಮಾನ್. ದ್ವಿಪಕ್ಷೀಯ ಸಂಬಂಧಗಳನ್ನು ರೂಪಿಸಲು ಧರ್ಮವೊಂದೇ ಆಧಾರವಾಗಿರಬಾರದು, ಅದಕ್ಕಿಂತಲೂ ಮುಖ್ಯವಾದದ್ದು ಆರ್ಥಿಕ ಸಹಯೋಗ ಎಂಬುದು ಈ ಪುರೋಗಾಮಿ ನವನಾಯಕನ ನಿಲುವು. ಇದೇ ನಿಲುವನ್ನು ಅನತಿಕಾಲದಲ್ಲೇ ಮತ್ತೊಂದು ಯುಎಇ ತನ್ನದಾಗಿಸಿಕೊಂಡಿತು. ಅದರಂತೆ, ತಾವು ನೀಡುವ ಆರ್ಥಿಕ ನೆರವಿಗೆ ಕಾದು ಕೂತಿರುವ ಪಾಕಿಸ್ತಾನಕ್ಕಿಂತಲೂ ತಮ್ಮ ಆರ್ಥಿಕ ‘ಸಹಯೋಗಿ’ಯಾಗಿರುವ ಭಾರತ ತಮಗೆ ಮುಖ್ಯವಾಗಬೇಕು ಎನ್ನುವುದೂ ಆ ಎರಡು ದೇಶಗಳಿಗಾದ ಜ್ಞಾನೋದಯ. ಅರಬ್ ಜಗತ್ತಿನಲ್ಲಿ ಅತ್ಯಂತ ಪ್ರಭಾವಶಾಲಿಯಾದ ಈ ಎರಡು ದೇಶಗಳ ನೀತಿಯನ್ನು ಉಳಿದ ಅರಬ್ ರಾಷ್ಟ್ರಗಳು ಹೆಚ್ಚು ಚರ್ಚೆಯಿಲ್ಲದೇ ಒಪ್ಪಿ ಅನುಸರಿಸುವುದು ವಾಡಿಕೆ. ಅರಬ್ ಜಗತ್ತಿಗೆ ಭಾರತ ಪ್ರಿಯವಾದದ್ದು ಹೀಗೆ.
ಎರಡು- ಆರ್ಥಿಕ ಬಾಂಧವ್ಯ ಮುಂಚೂಣಿಗೆ ಬರುತ್ತಿದ್ದಂತೇ ಕಾಶ್ಮೀರ ಕುರಿತಾಗಿ ಅರಬ್ ರಾಷ್ಟ್ರಗಳ ಚಿಂತನೆ ಬದಲಾಗತೊಡಗಿದೆ. ಕಾಶ್ಮೀರ ಸಮಸ್ಯೆ ಮೂಲಭೂತವಾಗಿ ಪಾಕಿಸ್ತಾನದ ಸೃಷ್ಟಿ ಮತ್ತು ಭಯೋತ್ಪಾದನೆಯನ್ನು ಒಂದು ಸರ್ಕಾರೀ ನೀತಿಯಾಗಿ ಪಾಕಿಸ್ತಾನ ಅನುಸರಿಸುತ್ತಿದೆ ಎನ್ನುವುದೂ ಸೌದಿ ಅರೇಬಿಯಾ ಮತ್ತು ಯುಎಇಗಳಿಗೆ ಮನವರಿಕೆಯಾಗಿದೆ. ಹೀಗಾಗಿಯೇ ಅವುಗಳ ನೀತಿಯಲ್ಲಿ ಕಳೆದೆರಡು ವರ್ಷಗಳಲ್ಲಿ ಊಹಿಸಲು ಅಸಾಧ್ಯವಾಗಿದ್ದ ಬದಲಾವಣೆಯಾಗಿದೆ. 2019 ಮಾರ್ಚ್ನಲ್ಲಿ ಯುಎಇ ರಾಜಧಾನಿ ಅಬುಧಾಬಿಯಲ್ಲಿ ನಡೆದ ಓಐಸಿ ವಿದೇಶಮಂತ್ರಿಗಳ ಸಮಾವೇಶವನ್ನು ಉದ್ದೇಶಿಸಿ ಮಾತನಾಡಲು ಭಾರತದ ವಿದೇಶಮಂತ್ರಿ ಸುಷ್ಮಾ ಸ್ವರಾಜ್ರಿಗೆ ಆಮಂತ್ರಣ ಬಂತು. ಕಕ್ಕಾಬಿಕ್ಕಿಯಾದ ಪಾಕಿಸ್ತಾನ ಆ ಸಮಾವೇಶವನ್ನೇ ಬಹಿಷ್ಕರಿಸಿತು. ಎರಡೇ ತಿಂಗಳಲ್ಲಿ ಮೆಕ್ಕಾದಲ್ಲಿ ಜರುಗಿದ ಓಐಸಿ ಸಮಾವೇಶ ಅಂಗೀಕರಿಸಿದ ‘ಮಕ್ಕಾಹ್ ಅಲ್-ಮುಕರ್ರಮಾಹ್’ (ಮೆಕ್ಕಾ ಘೊಷಣೆ) ಕಾಶ್ಮೀರದ ಬಗ್ಗೆ ಪ್ರಸ್ತಾಪ ಹೊಂದಿರಬೇಕೆಂದು ಪಾಕಿಸ್ತಾನ ಮಾಡಿದ ಬೇಡಿಕೆಯನ್ನು ತಿರಸ್ಕರಿಸಲಾಯಿತು. ವಿಶ್ವಸಂಸ್ಥೆಯಲ್ಲಿ ಪಾಕ್ ರಾಯಭಾರಿಯಾಗಿರುವ ಮುನೀರ್ ಆಕ್ರಂ ಇದೇ ಮೇನಲ್ಲಿ ವಿಶ್ವಸಂಸ್ಥೆಯಲ್ಲಿನ ಓಐಸಿ ಸದಸ್ಯ ರಾಷ್ಟ್ರಗಳ ರಾಯಭಾರಿಗಳನ್ನು ಒಂದು ಅನೌಪಚಾರಿಕ ಕೂಟದಲ್ಲಿ ಒಟ್ಟುಗೂಡಿಸಬೇಕೆಂದು ಮಾಡಿದ ಸಲಹೆ ರಾಯಭಾರಿಗಳ ಸಭೆಯಲ್ಲೇ ತಿರಸ್ಕೃತಗೊಂಡಿತು. ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪರವಾಗಿ ಲಾಬಿ ಮಾಡಲು ಆ ಕೂಟ ಬಳಸಿಕೊಳ್ಳುವುದು ಪಾಕಿಸ್ತಾನದ ಹುನ್ನಾರವಾಗಿತ್ತು.
ಇಂಥ ಸನ್ನಿವೇಶದಲ್ಲೂ ವಾಸ್ತವದೊಂದಿಗೆ ರಾಜಿ ಮಾಡಿಕೊಂಡು ತಮ್ಮ ದೇಶದ ಹಿತಾಸಕ್ತಿಗಳಿಗೆ ಅನುಕೂಲವಾಗುವ ನೀತಿಗಳನ್ನು ಪಾಕ್ ನಾಯಕರು ಅನುಸರಿಸಿ ಅರಬ್ ಸಖ್ಯವನ್ನು ಉಳಿಸಿಕೊಳ್ಳಬಹುದಾಗಿತ್ತು. ಆದರೆ ಮೊದಲ ಬಾರಿಗೆ ಪಾಕಿಸ್ತಾನದಲ್ಲೊಬ್ಬ ಅವಿವೇಕಿ ಪ್ರಧಾನಮಂತ್ರಿಯೂ, ಅವರಿಗೆ ತಕ್ಕ ಹರಕುಬಾಯಿಯ ವಿದೇಶಮಂತ್ರಿಯೂ ಇದ್ದಾರೆ. ಇಮ್ರಾನ್-ಖುರೇಶಿ ಜೋಡಿಯ ಆತ್ಮಹತ್ಯೀಯ ನಡೆಗಳು ಪಾಕಿಸ್ತಾನಕ್ಕೆ ಅಡಿಗಡಿಗೆ ಕಂಟಕ ತಂದೊಡ್ಡುತ್ತಿವೆ. 2019 ಆಗಸ್ಟ್ನಲ್ಲಿ ಸೌದಿ ರಾಜಕುಮಾರ ನೀಡಿದ ವಿಮಾನದಲ್ಲಿ ನ್ಯೂಯಾರ್ಕ್ಗೆ ಹೋದ ಇಮ್ರಾನ್ ಖಾನ್, ಅಲ್ಲಿ ಸೌದಿಯ ವಿರೋಧಿಗಳಾದ ಇರಾನ್ ಮತ್ತು ಟರ್ಕಿಯ ನಾಯಕರೊಂದಿಗೆ ರಹಸ್ಯ ಮಾತುಕತೆ ನಡೆಸಿದರು. ಪರಿಣಾಮ- ರಾಜಕುಮಾರ ಮಹಮದ್ ತಾವು ಕೊಟ್ಟಿದ್ದ ವಿಮಾನವನ್ನು ಹಿಂತೆಗೆದುಕೊಂಡರು, ಪಾಕ್ ಪ್ರಧಾನಿ ಸಾಮಾನ್ಯ ಪ್ರಯಾಣಿಕರಂತೆ ನಾಗರಿಕ ವಿಮಾನವೊಂದರಲ್ಲಿ ಪಾಕಿಸ್ತಾನಕ್ಕೆ ಹಿಂತಿರುಗಿದರು! ಇನ್ನು ವಿದೇಶಮಂತ್ರಿ ಶಾ ಮೆಹಮೂದ್ ಖುರೇಶಿಯವರ ಎಡವಟ್ಟುಗಳ ದೊಡ್ದ ಪಟ್ಟಿಯೇ ಇದೆ. ಅವುಗಳಲ್ಲಿ ಮುಖ್ಯವಾದುದು ಓಐಸಿಯನ್ನೇ ಒಡೆದು ತಮಗೆ ಬೆಂಬಲವಾಗಿರುವ ಇರಾನ್, ಟರ್ಕಿ, ಮಲೇಷ್ಯಾಗಳ ಪ್ರತ್ಯೇಕ ಗುಂಪನ್ನು ಕಟ್ಟುವುದಾಗಿ ಅವರು ಇದೇ ಆಗಸ್ಟ್ನಲ್ಲಿ ನೀಡಿದ ಹೇಳಿಕೆ. ಕುಪಿತಗೊಂಡ ಸೌದಿ ಅರೇಬಿಯಾ, ತಾನು ನೀಡಿದ್ದ ಮೂರು ಬಿಲಿಯನ್ ಡಾಲರ್ ಸಾಲದಲ್ಲಿ ಎರಡು ಬಿಲಿಯನ್ಗಳನ್ನು ತಿಂಗಳೊಳಗೆ ಹಿಂತಿರುಗಿಸಬೇಕೆಂದು ಧಮಕಿ ಹಾಕಿ, ಪಾಕಿಸ್ತಾನ ಚೀನಾ ಮುಂದೆ ದಮ್ಯಯ್ಯಗುಡ್ಡೆ ಹಾಕುವಂತೆ ಮಾಡಿತು. ಇದೆಲ್ಲದರ ಮುಂದುವರಿಕೆಯಾಗಿ ಇಂದು ಇಸ್ಲಾಮಿಕ್ ರಾಷ್ಟ್ರಗಳ ಸಮಾವೇಶದಲ್ಲಿ ಪಾಕಿಸ್ತಾನದ ಅಹವಾಲನ್ನು ಕೇಳುವವರೇ ಇಲ್ಲವಾಗಿದ್ದಾರೆ.
(ಪಾಕಿಸ್ತಾನದ ವಿರುದ್ಧ ಸೌದಿ ಅರೇಬಿಯಾ ತೆಗೆದುಕೊಂಡಿರುವ ಕ್ರಮಗಳ ವಿವರಗಳಿಗಾಗಿ ಇದೇ ಆಗಸ್ಟ್ 26ರಂದು ‘ಜಗದಗಲ’ ಅಂಕಣದಲ್ಲಿ ಪ್ರಕಟವಾದ ‘ಮತಿಗೆಟ್ಟ ನಾಯಕರಿಂದಾಗಿ ಗತಿಗೆಟ್ಟ ಪಾಕಿಸ್ತಾನ’ ಲೇಖನ ನೋಡಿ.)
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)