ಜಾಗತಿಕ ಜೋಕಾಲಿಯಲ್ಲಿ ಜೋ ಬೈಡೆನ್: ಪ್ರೇಮಶೇಖರ ಅವರ ಜಗದಗಲ ಅಂಕಣ

Trump-Joe Biden
Published on
ಜೋ ಬೈಡೆನ್ ಅಧ್ಯಕ್ಷಾವಧಿಯಲ್ಲಿ ಭಾರತದ ಬಗ್ಗೆ ಅಮೆರಿಕದ ನೀತಿ ಹೇಗಿರಬಹುದೆಂಬ ಒಂದು ಚಿತ್ರಣ ಕಟ್ಟಿಕೊಳ್ಳಲು ಕಳೆದವಾರ ಪ್ರಯತ್ನಿಸಿ ದ್ದಾಯಿತು. ಅದರ ಮುಂದುವರಿಕೆಯಾಗಿ, ಜಾಗತಿಕ ರಂಗದಲ್ಲಿ ದೊಡ್ಡಣ್ಣನ ಪಾತ್ರ ಹೇಗಿರಬಹುದೆಂಬ ಚಿತ್ರಣ ಪಡೆದುಕೊಳ್ಳಲು ಈ ಲೇಖನದಲ್ಲಿ ಪ್ರಯತ್ನಿಸೋಣ. ಇಂದಿನ ಜಗತ್ತು, ಅದು ಎದುರಿಸುತ್ತಿರುವ ಸಮಸ್ಯೆಗಳು, ಅವುಗಳಿಗೆ ಜಗನ್ನಾಯಕರು ಪ್ರತಿಕ್ರಿಯಿಸುತ್ತಿರುವ, ಪ್ರತಿಕ್ರಿಯಿಸಬೇಕಾದ ಬಗೆ- ಇವೆಲ್ಲವುಗಳನ್ನು ‘ಸರಿ’ಯಾದ ರೀತಿಯಲ್ಲಿ ವಿಶ್ಲೇಷಿಸಬೇಕಾದರೆ ನಮ್ಮ ಅವಲೋಕನವನ್ನು ಟ್ರಂಪ್ ಆಡಳಿತಾವಧಿಯಿಂದಲೇ ಆರಂಭಿಸಬೇಕು.

ಬರಾಕ್ ಒಬಾಮ ಆಡಳಿತದ ಮೃದುನೀತಿಯೇ ಚೀನೀ ಅಧ್ಯಕ್ಷ ಷಿ ಜಿನ್​ಪಿಂಗ್ ತಮ್ಮ ಸಾಲಸಂಕೋಲನಾ ನವವಸಾಹತುಶಾಹಿ ಹುನ್ನಾರಗಳನ್ನು ಎಗ್ಗಿಲ್ಲದೇ ಸಾಗಿಸಲು ಸಹಾಯಕವಾದದ್ದು. ಜತೆಗೆ, ಅಂತಾರಾಷ್ಟ್ರೀಯ ನೀತಿನಿಯಮ, ಕಾನೂನುಗಳನ್ನು ಸಾರಾಸಗಟಾಗಿ ಉಲ್ಲಂಘಿಸಿ ದಕ್ಷಿಣ ಚೀನಾ ಸಮುದ್ರದ ಶೇಕಡ 90 ಭಾಗದ ಮೇಲೆ ತನ್ನ ಹತೋಟಿ ಸ್ಥಾಪಿಸಿದ್ದೂ; ದಕ್ಷಿಣ ಕೊರಿಯಾ ಮತ್ತು ಜಪಾನ್​ಗಳ ಜಲಗಡಿಯನ್ನು ಅತಿಕ್ರಮಿಸಲು ನೋಡಿದ್ದು ಮತ್ತು ತೈವಾನ್​ನ ಸುರಕ್ಷೆಗೇ ಅಪಾಯವೊಡ್ಡುವ ನೀತಿಗಳನ್ನು ಅನುಸರಿಸಿದ್ದೂ ಅಮೆರಿಕ ಗಂಭೀರವಾಗಿ ಪ್ರತಿಕ್ರಿಯಿಸುವುದಿಲ್ಲ ಎಂಬ ನಿರಾಳತೆಯಿಂದಲೇ. ತನ್ನ ಸುತ್ತಲಿನ 21 ದೇಶಗಳೊಂದಿಗೆ ನೆಲ-ಜಲ ಗಡಿ ವಿವಾದವನ್ನು ಹುಟ್ಟುಹಾಕಿಕೊಂಡಿರುವ ಚೀನಾ ವಿಶ್ವಶಾಂತಿಗೆ ದೊಡ್ಡ ಪಿಡುಗಾಗಿ ಬೆಳೆದುನಿಂತು ಹಲವು ವರ್ಷಗಳೇ ಆಗಿಹೋಗಿವೆ. ಜತೆಗೆ, ತನ್ನ ಅಮಾಯಕ ಹೆಸರಿನ ನೂರಾರು ‘ಕನ್​ಫ್ಯೂಸಿಯಸ್ ಇನ್​ಸ್ಟಿಟ್ಯೂಟ್’ಗಳ ಮೂಲಕ ಚೀನೀ ಭಾಷೆ ಕಲಿಸುವ ಮುಖವಾಡದ ಹಿಂದೆ ಅಮೆರಿಕ ಸೇರಿ ಜಗತ್ತಿನಾದ್ಯಂತ ಸಿದ್ಧಾಂತಪ್ರಚಾರ ಮತ್ತು ಬೇಹುಗಾರಿಕಾ ಚಟುವಟಿಕೆಗಳನ್ನು ಚೀನಾ ನಡೆಸುತ್ತಿದೆ. ಈ ಅರ್ಥದಲ್ಲಿ ಚೀನೀ ಕಮ್ಯೂನಿಸ್ಟ್ ಪಕ್ಷ ಜಗತ್ತಿನ ಅತಿದೊಡ್ದ ಹಾಗೂ ಅಪಾಯಕಾರಿ ಭಯೋತ್ಪಾದಕ ಸಂಘಟನೆ. ವರ್ಷಾರಂಭದಲ್ಲಿ ಅದು ಕರೊನಾವೈರಸ್ ಅನ್ನು ಹರಡಿ ಜಗತ್ತಿಗೆ ತಂದಿಟ್ಟಿರುವ ಸಂಕಷ್ಟವನ್ನು ನಾವೆಲ್ಲರೂ ಅನುಭವಿಸುತ್ತಲೇ ಇದ್ದೇವೆ.

ಇಂಥ ಚೀನಾಗೆ ಬುದ್ಧಿ ಕಲಿಸುವ ಪ್ರಯತ್ನದಲ್ಲಿ ಟ್ರಂಪ್ ಮೊದಲು ಕೊಡಲಿಯೇಟು ಕೊಟ್ಟದ್ದು ಚೀನೀ ಅರ್ಥವ್ಯವಸ್ಥೆಗೆ. ಅಧ್ಯಕ್ಷ ಒಬಾಮ 2016 ಫೆಬ್ರವರಿಯಲ್ಲಿ ಅಂದರೆ ತಮ್ಮ ಆಳ್ವಿಕೆಯ ಕೊನೆಯ ವರ್ಷದಲ್ಲಿ ಪೆಸಿಫಿಕ್ ಸಾಗರದ ಎರಡೂ ಬದಿಗಳ ಹನ್ನೆರಡು ದೇಶಗಳನ್ನು ಒಂದು ಆರ್ಥಿಕ ಸಂಘಟನೆಯಲ್ಲಿ ಒಟ್ಟುಗೂಡಿಸುವ ಪ್ರಯತ್ನ ಮಾಡಿದರು. ಕೆನಡಾ, ಅಮೆರಿಕ, ಮೆಕ್ಸಿಕೋ, ಪೆರು, ಚಿಲಿ, ಜಪಾನ್, ವಿಯೆಟ್ನಾಂ, ಬ್ರುನೈ, ಮಲೇಷ್ಯಾ, ಸಿಂಗಾಪುರ, ಆಸ್ಟ್ರೇಲಿಯಾ ಮತ್ತು ನ್ಯೂಜಿಲ್ಯಾಂಡ್​ಗಳಿದ್ದ ‘ಟ್ರಾ್ಯನ್ಸ್-ಪೆಸಿಫಿಕ್ ಪಾರ್ಟ್​ನರ್​ಶಿಪ್’ (ಟಿಪಿಪಿ) ಎಂಬ ಹೆಸರಿನ ಆ ಒಕ್ಕೂಟ ಚೀನಾದ ವಿರುದ್ಧ ಎಂಬ ಅಭಿಪ್ರಾಯ ಸಹಜವಾಗಿಯೇ ಎಲ್ಲೆಡೆ ಮೂಡಿತು. ಸ್ವತಃ ಚೀನಾ ಇದರಿಂದ ಆತಂಕಗೊಂಡದ್ದೂ ಉಂಟು. ಆದರೆ ಟ್ರಂಪ್ ಅಧಿಕಾರಕ್ಕೆ ಬರುತ್ತಿದ್ದಂತೇ ಆ ಸಂಘಟನೆಯಿಂದ ಅಮೆರಿಕವನ್ನು ಹೊರಗೊಯ್ದರು. ಉಳಿದ ಹನ್ನೊಂದು ದೇಶಗಳು ತಮ್ಮಲ್ಲೇ ‘ಕಾಂಪ್ರಹೆನ್ಸಿವ್ ಅಂಡ್ ಪ್ರೋಗ್ರೆಸ್ಸಿವ್ ಆಗ್ರೀಮೆಂಟ್ ಫಾರ್ ಟ್ರಾ್ಯನ್ಸ್-ಪೆಸಿಫಿಕ್ ಪಾರ್ಟ್​ನರ್​ಶಿಪ್’ (ಸಿಪಿಟಿಪಿಪಿ) ಎಂಬ ಹೊಸ ಸಂಘಟನೆಯನ್ನು ಏರ್ಪಡಿಸಿಕೊಳ್ಳುವ ಒತ್ತಡಕ್ಕೊಳಗಾದವು. ಟ್ರಂಪ್​ರ ಈ ಕೃತ್ಯ ಚೀನಾ ಪರವಾಗಿದೆ ಎಂಬ ಅಭಿಪ್ರಾಯ ತಲೆಯೆತ್ತಿ, ಟ್ರಂಪ್ ಆಡಳಿತಾವಧಿಯಲ್ಲಿ ಚೀನಾಗೆ ಮತ್ತಷ್ಟು ಅನುಕೂಲವಾಗಲಿದೆ ಎಂಬ ಮಾತೂ ಕೇಳಿಬರತೊಡಗಿತು. ಆದರೆ ಟ್ರಂಪ್​ರ ಮನಸ್ಸಿನಲ್ಲಿದ್ದುದೇ ಬೇರೆ.

ಚೀನಾ ಜಗತ್​ಕಂಟಕನಾಗಿ ಬೆಳೆಯುತ್ತಿರುವುದಕ್ಕೆ ಅದರ ಆರ್ಥಿಕ ಬಲಾಢ್ಯತೆಯೇ ಕಾರಣ ಎಂದು ಗುರುತಿಸಿದ್ದ ಟ್ರಂಪ್ ಬೀಜಿಂಗ್ ಅನ್ನು ಮಣಿಸುವಲ್ಲಿ ಅದರ ಮೇಲೇ ಅವಲಂಬಿತವಾಗಿದ್ದ ದೇಶಗಳಿಂದ ಯಾವುದೇ ಸಹಕಾರ ದೊರೆಯದೆಂದು ಎಣಿಸಿದ್ದರು. ಸಶಸ್ತ್ರ ಹೋರಾಟದಲ್ಲಿ ಆ ದೇಶಗಳು ಸಹಭಾಗಿಗಳಾಗಬಹುದಾದರೂ ಆರ್ಥಿಕ ಹೋರಾಟದಲ್ಲಿ ಅವು ಚೀನಾಗೆ ಹೆದರಿ, ಅಮೆರಿಕದ ಕುತ್ತಿಗೆಗೆ ಜೋತುಬಿದ್ದ ಕಬ್ಬಿಣದ ಗುಂಡುಗಳಾಗುತ್ತಿದ್ದವು. ಹೀಗೆ, ಟಿಪಿಟಿ ಸಂಘಟನೆಯನ್ನು ತೊರೆದು ಅಧ್ಯಕ್ಷ ಟ್ರಂಪ್ ಚೀನಾ ವಿರುದ್ಧ ಆರ್ಥಿಕ ಯುದ್ಧಕ್ಕಿಳಿದಾಗ ಚೀನಾ ನಡುಗಿಹೋಯಿತು. 2018ರಲ್ಲಿ ಕೆಲವೇ ತಿಂಗಳುಗಳಲ್ಲಿ ಟ್ರಂಪ್ ಚೀನೀ ಆಮದುಗಳ ಮೇಲೆ ಶುಲ್ಕಗಳನ್ನು ಏರಿಸುತ್ತ 350 ಬಿಲಿಯನ್ ಡಾಲರ್ ಮೊತ್ತದ ಚೀನೀ ಉತ್ಪಾದನೆಗಳು ಅಮೆರಿಕಕ್ಕೆ ತಲುಪದಂತೆ, ತಲುಪಿದರೂ ದುಬಾರಿಯಾದ ಕಾರಣ ಬಿಕರಿಯಾಗದಂತೆ ವ್ಯವಸ್ಥೆ ಮಾಡಿ ಅಷ್ಟರ ಮಟ್ಟಿಗೆ ಚೀನೀ ಆದಾಯವನ್ನು ಕುಗ್ಗಿಸಿಬಿಟ್ಟರು. ಟ್ರಂಪ್ ಚೀನಾ ಜತೆ ವರ್ತಿಸಿದ್ದು ಹಾವಿನ ವಿರುದ್ಧ ಮುಂಗಸಿ ವರ್ತಿಸುವಂತೆ. ಅನಿರೀಕ್ಷಿತ ಹೊಡೆತಗಳಿಂದ ಹಾವನ್ನು ಹಂತಹಂತವಾಗಿ ಬಲಹೀನಗೊಳಿಸುವ ಮುಂಗಸಿಯಂತೆ ಅವರು ಚೀನಾ ನಿರೀಕ್ಷಿಸದ ಸಮಯದಲ್ಲಿ ಮತ್ತು ಕ್ಷೇತ್ರ ದಲ್ಲಿ ಹೊಡೆತ ನೀಡಿ ಆ ಕಮ್ಯೂನಿಸ್ಟ್ ದೈತ್ಯನನ್ನು ಆಟವಾಡಿಸತೊಡಗಿದರು. ಬಹುಶಃ ಅಂತಿಮ ಹೊಡೆತಕ್ಕೆ ಸಮಯ ಹೊಂಚುತ್ತಿದ್ದಾಗಲೇ ಅವರು ಶ್ವೇತಭವನ ತೊರೆಯಬೇಕಾಗಿದೆ.

ಜೋ ಬೈಡೆನ್​ರ ಚೀನಾ ನೀತಿಯನ್ನು ನಾವು ಅವಲೋಕಿಸಬೇಕಾದ್ದು ಈ ಹಿನ್ನೆಲೆಯಲ್ಲಿ. ಬರಾಕ್ ಒಬಾಮಾರಂತೇ ಬೈಡೆನ್ ರಷ್ಯಾವನ್ನು ಅಮೆರಿಕದ ಪರಮವೈರಿಯೆಂದು ತಿಳಿದಿದ್ದಾರೆ. ಅವರ ದೃಷ್ಟಿಯಲ್ಲಿ ಚೀನಾ ಒಂದು ಸುಲಭವಾಗಿ ನಿವಾರಿಸಿಕೊಳ್ಳಬಹುದಾದ ಸಣ್ಣ ಸಮಸ್ಯೆ! ತೊಂದರೆ ಆಗುತ್ತಿರುವುದು ಈ ಅವಾಸ್ತವಿಕ ಚಿಂತನೆಯಲ್ಲಿ. ಚುನಾವಣಾ ಪ್ರಚಾರದಲ್ಲೇನೋ ಅವರು ತಾವು ಚೀನಾವನ್ನು ಟ್ರಂಪ್​ರಿಗಿಂತಲೂ ಅಧಿಕವಾಗಿ ವಿರೋಧಿಸುವುದಾಗಿ ಮತ್ತೆಮತ್ತೆ ತೋರಿಸಿಕೊಂಡರು. ನಿಜ ಹೇಳಬೇಕೆಂದರೆ ಚೀನಾವನ್ನು ಯಾರು ಹೆಚ್ಚು ವಿರೋಧಿಸುತ್ತಾರೆ ಎಂಬ ಬಗ್ಗೆ ಇಬ್ಬರು ಅಧ್ಯಕ್ಷೀಯ ಅಭ್ಯರ್ಥಿಗಳಲ್ಲಿ ಸ್ಪರ್ಧೆಯಿದ್ದಂತೆ ಕಾಣುತ್ತಿತ್ತು. ಕರೊನಾ ಸಂಕಟದಿಂದಾಗಿ ಅಮೆರಿಕಕ್ಕೆ ತಟ್ಟಿರುವ ಹಾನಿಯ ವ್ಯಾಪಕತೆಯಿಂದಾಗಿ ಅಮೆರಿಕನ್ನರ ಮನ ಗೆಲ್ಲಬೇಕಾದರೆ ಚೀನಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುವುದೊಂದು ಸುಲಭ ಮಾರ್ಗ ಎಂದು ಇಬ್ಬರೂ ತಿಳಿದಂತಿತ್ತು. ಟ್ರಂಪ್​ರ ಚೀನಾ-ವಿರೋಧಿ ಕ್ರಮಗಳೇನೋ ಅವರ ಮಾತುಗಳ ಬೆನ್ನಿಗಿದ್ದವು. ಆದರೆ ಬೈಡನ್​ಗೆ? ಟಿಪಿಪಿ ಸಂಘಟನೆಯಿಂದ ಅಮೆರಿಕವನ್ನು ಟ್ರಂಪ್ ಹೊರಗೊಯ್ದಾಗಿನಿಂದಲೂ ಬೈಡೆನ್ ಅದನ್ನು ಟೀಕಿಸುತ್ತಲೇ ಬಂದಿದ್ದಾರೆ. ತಾವೇನಾದರೂ ಅಧಿಕಾರಕ್ಕೆ ಬಂದರೆ ಅಮೆರಿಕವನ್ನು ಮತ್ತೆ ಟಿಪಿಪಿಗೆ ಸೇರಿಸುವುದಾಗಿ ಕಳೆದ ವರ್ಷ ಅವರು ಘೊಷಿಸಿಯೂ ಆಗಿದೆ. ಆ ಬಗ್ಗೆ ಚೀನಾ ಸಂತಸಗೊಂಡದ್ದೂ ಆಗಿದೆ. ಜತೆಗೆ, ಚುನಾವಣಾಪ್ರಚಾರದಲ್ಲಿ ಚೀನಾ ವಿರುದ್ಧ ಅದೆಷ್ಟೇ ದೊಡ್ಡದನಿಯಲ್ಲಿ ಮಾತನಾಡಿದರೂ ಅವರ ಮನಸ್ಸಿನಲ್ಲಿ ನಿಜವಾಗಿ ಏನಿದೆಯೆಂದು ಅವರೇ ಹೊರಹಾಕಿಬಿಟ್ಟರು. ಚೀನಾ ವಿರುದ್ಧ ಟ್ರಂಪ್ ವಿಧಿಸಿದ ಆರ್ಥಿಕ ಕ್ರಮಗಳು ಅಮೆರಿಕಕ್ಕೇ ಹಾನಿಕಾರಕವೆಂದೂ, ಆ ಕಾರಣದಿಂದ ಚೀನಾ ವಿರುದ್ಧದ ‘ಆಮದುಶುಲ್ಕಸಂಘರ್ಷ’ವನ್ನು ತಹಬಂದಿಗೆ ತರುವ ಅಗತ್ಯವಿದೆಯೆಂದೂ ಅಕ್ಟೋಬರ್ 25ರ ಡಿಬೇಟ್​ನಲ್ಲಿ ಅವರು ಹೇಳಿಯೇಬಿಟ್ಟರು. ಇದರರ್ಥ ಚೀನಾ ಒಡ್ಡಿದ್ದ ಅಪಾಯದ ಪೂರ್ಣ ಚಿತ್ರಣ ಬೈಡೆನ್​ರಿಗಿನ್ನೂ ಸಿಕ್ಕಿಯೇ ಇಲ್ಲ! ಅವರಿನ್ನೂ ಒಬಾಮ ಕಾಲದ ಮನೋಭಾವದಲ್ಲೇ ಇದ್ದಾರೆ! ಪ್ರತಿಸ್ಪರ್ಧಿಗೆ ಮಾರಣಾಂತಿಕ ಪೆಟ್ಟು ಕೊಡುವಾಗ ತಾವೂ ಒಂದಷ್ಟು ಹಾನಿಯನ್ನು ಅನುಭವಿಸಲೇಬೇಕಾಗುತ್ತದೆ, ನಾವದನ್ನು ಒಪ್ಪಿಕೊಳ್ಳಬೇಕು ಎಂಬ ಸರಳ ಸತ್ಯ ಅವರಿಗೆ ಹೊಳೆದಂತಿಲ್ಲ.

ಜತೆಗೆ, ವಿವಿಧ ಸಂದರ್ಭಗಳಲ್ಲಿ ಬೈಡೆನ್ ನೀಡಿರುವ ಹೇಳಿಕೆಗಳು ಚೀನಾ ವಿರುದ್ಧ ಟ್ರಂಪ್ ಆಡಳಿತ ಕೈಗೊಂಡಿರುವ ಸೇನಾ ಯೋಜನೆಗಳನ್ನೂ ಕುಗ್ಗಿಸುವ ಸೂಚನೆ ನೀಡಿವೆ. ದಕ್ಷಿಣ ಚೀನಾ ಸಮುದ್ರ ಮತ್ತು ತೈವಾನ್ ಜಲಸಂಧಿಯಲ್ಲಿ ಚೀನೀ ಉಪಟಳಗಳನ್ನು ತಡೆಯಲು ಜೂನ್ ತಿಂಗಳಿಂದಲೂ ಅಮೆರಿಕದ ನೌಕಾದಳ ಬಲಪ್ರದರ್ಶನ ನಡೆಸುತ್ತಿರುವುದು, ಜಪಾನ್ ಮತ್ತು ದಕ್ಷಿಣ ಕೊರಿಯಾ ಪರವಾಗಿ ಟ್ರಂಪ್ ಆಡಳಿತ ದೃಢವಾಗಿ ನಿಂತದ್ದು ಬೈಡೆನ್ ಕಾಲದಲ್ಲಿ ಕನಸಾಗಬಹುದು. ಇದು ಸಂಬಂಧಪಟ್ಟ ದೇಶಗಳನ್ನೇ ಅದೆಷ್ಟು ಕಂಗೆಡಿಸಿದೆಯೆಂದರೆ ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಈಗಾಗಲೇ ಆತಂಕ ಶುರುವಾಗಿದೆ ಮತ್ತು ಹಲವಾರು ಜನನಾಯಕರು ಚೀನಾ ವಿರುದ್ಧ ಬೈಡೆನ್ ಆಡಳಿತ ಸಡಿಲ ನೀತಿ ಅನುಸರಿಸಬಾರದೆಂದು ಮನವಿ ಮಾಡಿಕೊಳ್ಳತೊಡಗಿದ್ದಾರೆ. ನವೆಂಬರ್ 5ರಂದೇ, ಫಲಿತಾಂಶದ ಪೂರ್ಣ ಚಿತ್ರಣ ಇನ್ನೂ ಸಿಗದಿರುವಾಗಲೇ; ಜಪಾನೀ ಪ್ರಧಾನಿ ಯೋಶಿಹಿದೆ ಸುಗಾ, ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ-ಇನ್ ಮತ್ತು ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಆತುರಾತುರವಾಗಿ ಬೈಡೆನ್​ರಿಗೆ ಕರೆ ಮಾಡಿ, ಅಭಿನಂದಿಸುವ ನೆಪದಲ್ಲಿ, ತಂತಮ್ಮ ದೇಶಗಳಿಗೆ ಅಮೆರಿಕದ ಬೆಂಬಲ ಮತ್ತು ಸಹಕಾರ ಎಷ್ಟು ಮಹತ್ವದ್ದು ಎಂದು ಹೇಳಿದ್ದಾರೆ. ಚೀನಾದಿಂದ ಹೆಚ್ಚು ಅಪಾಯ ಎದುರಿಸುತ್ತಿರುವ ಐದು ದೇಶಗಳಲ್ಲಿ ಮೂರು ಈ ಜಪಾನ್, ದಕ್ಷಿಣ ಕೊರಿಯಾ ಮತ್ತು ಆಸ್ಟ್ರೇಲಿಯಾ ಎಂಬ ವಾಸ್ತವವನ್ನು ನಾವಿಲ್ಲಿ ನೆನಪಿಸಿಕೊಳ್ಳಬೇಕು, ಬೈಡೆನ್ ಸಹಾ.

ಬೈಡೆನ್ ಮತ್ತವರ ಸಲಹೆಗಾರರು ಗಮನಿಸಬೇಕಾದ ವಿಷಯವೆಂದರೆ ನಾಲ್ಕು ವರ್ಷಗಳ ಹಿಂದೆ ಒಬಾಮ ಬಿಟ್ಟುಹೋದ ಅಮೆರಿಕಗಿಂತಲೂ ಈಗ ಒಬ್ಬ ಅಧ್ಯಕ್ಷನಾಗಿ ಟ್ರಂಪ್ ಬಿಟ್ಟುಹೋಗುತ್ತಿರುವ ಅಮೆರಿಕ ಉತ್ತಮ ಸ್ಥಿತಿಯಲ್ಲಿದೆ, ಚೀನಿ ಆರ್ಥಿಕತೆಯನ್ನು ಟ್ರಂಪ್ ಕುಗ್ಗಿಸದೆ ಹೋಗಿದ್ದರೆ ಈ ಕರೊನಾ ಸಂಕಟ ಕಾಲದಲ್ಲಿ ಆ ದುರುಳ ದೇಶ ಜಗತ್ತಿಗೆ ಇನ್ನೆಷ್ಟು ಅಪಾಯಕಾರಿಯಾಗಬಹುದಿತ್ತು ಎಂಬುದು ಊಹೆಗೆ ನಿಲುಕದ ವಿಷಯ. ಟ್ರಂಪ್ ಮತ್ತೂ ಹಲವು ಸಾಧನೆಗಳನ್ನು ಮಾಡಿದ್ದಾರೆ. ಬದ್ಧವೈರಿಗಳಾದ ಇಸ್ರೇಲ್, ಯುಎಇ ಮತ್ತು ಬಹರೀನ್​ಗಳ ನಡುವೆ ‘ಅಬ್ರಹಾಂ ಒಪ್ಪಂದ’ಗಳ ಮೂಲಕ ಮಿತ್ರತ್ವ ಏರ್ಪಡಿಸಿದ್ದಾರೆ. ಮುಸ್ಲಿಂ ಜಗತ್ತಿನ ನಾಯಕ ಸೌದಿ ಅರೇಬಿಯಾವನ್ನೂ ಇಸ್ರೇಲ್​ಗೆ ಹತ್ತಿರವಾಗಿಸುವ ಪ್ರಯತ್ನವನ್ನೂ ಅವರು ಆರಂಭಿಸಿದ್ದರು. ಅದು ಆಗಿಬಿಟ್ಟರೆ ಪಶ್ಚಿಮ ಏಷ್ಯಾ ಸರಿಸುಮಾರು ಶಾಂತವಾದಂತೆ. ಟ್ರಂಪ್​ರ ಇನ್ನೊಂದು ಹೆಗ್ಗಳಿಕೆಯೆಂದರೆ 1941ರ ನಂತರದ 80 ವರ್ಷಗಳಲ್ಲಿ ಅಮೆರಿಕ ಯಾವುದೇ ಯುದ್ಧದಲ್ಲಿ ನಿರತವಾಗದೇ ಇದ್ದದ್ದು ಟ್ರಂಪ್ ಆಡಳಿತಾವಧಿಯಲ್ಲಿ. ಇದೆಲ್ಲದರ ಅರ್ಥ ಡೊನಾಲ್ಡ್ ಟ್ರಂಪ್ ಅಮೆರಿಕವನ್ನೂ, ಜಗತ್ತನ್ನೂ ಹಿಂದೆಗಿಂತಲೂ ಒಳ್ಳೆಯ ಸ್ಥಿತಿಗ ತಂದು ನಿಲ್ಲಿಸಿದ್ದಾರೆ. ಅದನ್ನು ಮುಂದುವರಿಸಿಕೊಂಡು ಹೋಗಬೇಕಾದ್ದು ಬೈಡೆನ್​ರ ಜವಾಬ್ದಾರಿ.

ಇಷ್ಟೆಲ್ಲ ಹೇಳಿದ ಮೇಲೆ ಮುಖ್ಯ ವಿಷಯವೊಂದನ್ನು ನಿಮ್ಮ ಗಮನಕ್ಕೆ ತರಲೇ ಬೇಕು. ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮೊಕ್ರೇಟಿಕ್ ಅಭ್ಯರ್ಥಿ ಜೋ ಬೈಡೆನ್ ವಿಜಯಿಯಾಗಿದ್ದಾರೆಂದು ವರದಿಯಿದ್ದರೂ ಅಂತಿಮ ಫಲಿತಾಂಶಕ್ಕಾಗಿ ಡಿಸೆಂಬರ್ 14ರವರೆಗೆ ಕಾಯಲೇಬೇಕಾದ ಪರಿಸ್ಥಿತಿಯುಂಟಾಗಿದೆ. ವಿಸ್ಕಾನ್ಸಿನ್, ಮಿಷಿಗನ್, ಪೆನ್ಸಿಲ್​ವೇನಿಯಾ, ಜಾರ್ಜಿಯಾ, ನೆವಾಡಾ ಮತ್ತು ಅರಿಝೋನಾ ರಾಜ್ಯಗಳ ಹಲವಾರು ಕೌಂಟಿಗಳು ಮತ್ತು ಡಿಸ್ಟ್ರಿಕ್ಟ್​ಗಳಲ್ಲಿ ವ್ಯಾಪಕ ಚುನಾವಣಾ ಅವ್ಯವಹಾರಗಳು ನಡೆದಿರುವುದಾಗಿ ರಿಪಬ್ಲಿಕನ್ ಪಕ್ಷ ಆರೋಪಿಸಿದೆ. ಲಕ್ಷಾಂತರ ಮಾನ್ಯ ಮತಗಳು ಎಣಿಕೆಯಾಗದೆ, ಅಪಾರ ಸಂಖ್ಯೆಯ ‘ಕುಲಗೆಟ್ಟ’ ಮತಗಳು ಎಣಿಕೆಯಾಗಿರುವ ಬಗ್ಗೆ ರಿಪಬ್ಲಿಕನ್ ಪಕ್ಷದ ವಕೀಲರುಗಳು ಪುರಾವೆಗಳೊಂದಿಗೆ ಮಾಡಿದ ಆರೋಪಗಳನ್ನು ನ್ಯಾಯಾಲಯಗಳು ಪುರಸ್ಕರಿಸಿ ಮತಗಳ ಸರಿಯಾದ ಮರುಎಣಿಕೆಗೆ ಆದೇಶ ನೀಡಿವೆ. ಆ ರಾಜ್ಯಗಳಲ್ಲಿ ಬರಬಹುದಾದ ಅಂತಿಮ ಪರಿಣಾಮ ಈಗ ದೊರೆತಿರುವುದಕ್ಕಿಂತ ಬೇರೆಯಾಗಿರಬಹುದಾದ ಸಾಧ್ಯತೆಯನ್ನೂ ಮಾಧ್ಯಮಗಳು ವರದಿ ಮಾಡುತ್ತಿವೆ. ಇಂಥ ಸನ್ನಿವೇಶದಲ್ಲಿ ಪರಿಸ್ಥಿತಿ ತಿರುವುಮುರುವಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಒಂದುವೇಳೆ ಆ ಆರು ರಾಜ್ಯಗಳಲ್ಲಿ ಮತಗಳ ಮರುಎಣಿಕೆ ಸಮಯಕ್ಕೆ ಸರಿಯಾಗಿ ಪೂರ್ಣವಾಗದೇ ಹೋದರೆ ಇಬ್ಬರು ಅಭ್ಯರ್ಥಿಗಳಲ್ಲಿ ಯಾರೊಬ್ಬರೂ ಗೆಲ್ಲಲು ಅಗತ್ಯವಾದ ಮಾಂತ್ರಿಕ ಸಂಖ್ಯೆ 270ನ್ನು ದಾಟಲಾಗುವುದಿಲ್ಲ. ಆಗ ಅಧ್ಯಕ್ಷರ ಆಯ್ಕೆಯ ಜವಾಬ್ದಾರಿ ‘ಕಾಂಗ್ರೆಸ್’ನ ಕೆಳಮನೆ ‘ಹೌಸ್ ಆಫ್ ರೆಪ್ರಸೆಂಟೇಟಿವ್ಸ್’ (ಪ್ರತಿನಿಧಿ ಸಭೆ) ಮೇಲೆ ಬೀಳುತ್ತದೆ. ಆದರೆ ಇಲ್ಲಿ ಜರುಗುವ ವಿಚಿತ್ರ ಪರಿಸ್ಥಿತಿಯನ್ನು ಸಂವಿಧಾನಾತ್ಮಕ ಕಾನೂನುಗಳ ವಿಶೇಷಜ್ಞ ಪಾಲ್ ಏಂಗೆಲ್​ರ ಮಾತಿನಲ್ಲಿ ಹೇಳುವುದಾದರೆ ಪ್ರತಿನಿಧಿ ಸಭೆಯಲ್ಲಿ ಈಗಿರುವ ಸದಸ್ಯರು ಅಧ್ಯಕ್ಷರನ್ನು ಆಯ್ಕೆ ಮಾಡುವಂತಿಲ್ಲ ಬದಲಾಗಿ, ಐವತ್ತು ರಾಜ್ಯಗಳೂ ಒಬ್ಬೊಬ್ಬ ಪ್ರತಿನಿಧಿಯನ್ನು ಇದಕ್ಕಾಗಿಯೇ ಕಳುಹಿಸಬೇಕಾಗುತ್ತದೆ. ಈಗ 24 ರಾಜ್ಯಗಳಲ್ಲಿ ರಿಪಬ್ಲಿಕನ್ ಗವರ್ನರ್​ಗಳಿರುವ ಜತೆ ರಾಜ್ಯ ಶಾಸನಸಭೆಗಳಲ್ಲೂ ಅವರದೇ ಬಹುಮತ ಇದೆ. ಡೆಮೊಕ್ರಾಟಿಗರಿಗೆ ಈ ಬಗೆಯ ಅನುಕೂಲ ಇರುವುದು ಕೇವಲ 15 ರಾಜ್ಯಗಳಲ್ಲಿ. ಉಳಿದ 11 ರಾಜ್ಯಗಳಲ್ಲಿ ಗವರ್ನರ್ ಒಂದು ಪಕ್ಷದವರಾದರೆ ಶಾಸನ ಸಭೆಗಳಲ್ಲಿ ಬಹುಮತವಿರುವುದು ಇನ್ನೊಂದು ಪಕ್ಷಕ್ಕೆ. ಹೀಗಾಗಿ ಟ್ರಂಪ್​ರಿಗೆ 24 ಮತಗಳು ನಿಶ್ಚಿತ. ಜತೆಗೆ 11 ಮಿಶ್ರ ಆಡಳಿತದ ರಾಜ್ಯಗಳಲ್ಲಿ ಕನಿಷ್ಟ 2 ಮತಗಳು ಸಿಕ್ಕಿಬಿಟ್ಟರೆ ಡೊನಾಲ್ಡ್ ಟ್ರಂಪ್ ಮತ್ತೆ ಅಮೆರಿಕದ ಅಧ್ಯಕ್ಷ! ಹಾಗಾದ ಪಕ್ಷದಲ್ಲಿ ಬೈಡೆನ್ ಆಡಳಿತದ ಬಗ್ಗೆ ಈಗ ನಾವೂ ಸೇರಿ ಇಡೀ ಜಗತ್ತು ಮಾಡುತ್ತಿರುವ ಲೆಕ್ಕಾಚಾರಗಳೆಲ್ಲ ವ್ಯರ್ಥ!

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net