ಪೂತಿನ್ ಚಿತ್ತ ಭೂತದಿಂದ ಭವಿಷ್ಯದತ್ತ!

Putin
Published on
ದೀರ್ಘ ಇತಿಹಾಸ, ಭವ್ಯ ಸಾಂಸ್ಕೃತಿಕ ಪರಂಪರೆ ಮತ್ತು ಅಗಾಧ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿದ ಮಧ್ಯ ಏಷ್ಯಾದ ಗಣರಾಜ್ಯಗಳು ಕಳೆದ ಮೂರು ದಶಕಗಳ ತಮ್ಮ ಸ್ವತಂತ್ರ ಅಸ್ತಿತ್ವದಲ್ಲಿ ಹೇಳಿಕೊಳ್ಳುವ ಆರ್ಥಿಕ ಪ್ರಗತಿಯನ್ನೇನೂ ಸಾಧಿಸಿಲ್ಲ. ರಾಜಕೀಯ ರಂಗದಲ್ಲಿ ಜನತೆಯ ಪಾತ್ರವೂ ಕನಿಷ್ಠ. ಹಾಗೆ ನೋಡಿದರೆ ಜನಸಮುದಾಯದ ಆರ್ಥಿಕ ಪ್ರಗತಿ ಹಾಗೂ ರಾಜಕೀಯ ಅಧಿಕಾರ ಈ ದೇಶಗಳಿಗೆ ಹಿಂದಿನಿಂದಲೂ ಕನಸೇ. ಇತಿಹಾಸದುದ್ದಕ್ಕೂ ಅಗಾಧ ಸಂಪತ್ತು ಹಾಗೂ ಅಪರಿಮಿತ ಅಧಿಕಾರದಿಂದ ಮೆರೆದವರು ಚಕ್ರವರ್ತಿಗಳು, ಸುಲ್ತಾನರು, ಮತ್ತವರ ಆಸ್ಥಾನಿಕರು ಹಾಗೂ ಸೇನಾಧಿಕಾರಿಗಳಷ್ಟೇ. ಅದೇ ಸ್ಥಿತಿ ಝಾರ್ ಚಕ್ರವರ್ತಿಗಳ ಕಾಲದಲ್ಲೂ, ನಂತರದ ಸೋವಿಯತ್ ಕಮ್ಯೂನಿಸ್ಟ್ ಆಡಳಿತದಲ್ಲೂ ಮುಂದುವರಿಯಿತು. ಕಮ್ಯೂನಿಸ್ಟರು ಜನರಲ್ಲಿ ಆಸೆ ಹುಟ್ಟಿಸಿದ್ದ ಅಭೂತಪೂರ್ವ ಆರ್ಥಿಕ ಪ್ರಗತಿಯನ್ನು, ಎಲ್ಲರಿಗೂ ಅಗತ್ಯವಾದುದೆಲ್ಲವೂ ಲಭ್ಯವಿರುವಂಥ ಸ್ಥಿತಿಯನ್ನು ಒಟ್ಟಾರೆ ಸೋವಿಯತ್ ಯೂನಿಯನ್ನೇ ಸಾಧಿಸಿರಲಿಲ್ಲ. ಆ ಕಮ್ಯೂನಿಸ್ಟ್ ದೈತ್ಯನ ವಾರ್ಷಿಕ ನಿವ್ವಳ ರಾಷ್ಟ್ರೀಯ ಉತ್ಪಾದನೆ (ಜಿಡಿಪಿ) ಅಮೆರಿಕದದ್ದರ ಕೇವಲ 12.5% ಅಂದರೆ ಒಂದು ಹಂತದಲ್ಲಿ ಪುಟ್ಟ ನ್ಯೂಜಿಲ್ಯಾಂಡ್​ನದಕ್ಕೆ ಸಮವಷ್ಟೆ! ಆದರೆ ತಮ್ಮ ದೇಶದ ಜಿಡಿಪಿ ಅಮೆರಿಕದ್ದರ ಶೇಕಡ 55 ಎಂದು ಕಮ್ಯೂನಿಸ್ಟ್ ಸರ್ಕಾರಗಳು ಜಗತ್ತಿಗೆ ಸುಳ್ಳು ಅಂಕಿಅಂಶಗಳನ್ನು ನೀಡುತ್ತ ದಶಕಗಳನ್ನು ಕಳೆದುಬಿಟ್ಟವು. 1970-80ರ ದಶಕಗಳಲ್ಲಂತೂ ಗ್ರಾಹಕ ವಸ್ತುಗಳು ಮತ್ತು ಇನ್ನಿತರ ಜೀವನಾನುಕೂಲಿ ಸೌಲಭ್ಯಗಳ ಮೇಲಿನ ಮೊದಲ ಹಕ್ಕು ಕಮ್ಯೂನಿಸ್ಟ್ ಪಕ್ಷದ ಸದಸ್ಯರಿಗೇ ಮೀಸಲಾಗಿ, ಕಮ್ಯೂನಿಸ್ಟರೇ ಶೋಷಕರಾಗಿ, ಒಟ್ಟಾರೆ ‘ಸಮಾಜವಾದ’ ಎಂಬ ಪದವೇ ನಗೆಪಾಟಲಿಗೀಡಾಗಿಹೋಯಿತು. ಆಧುನಿಕ ಶಿಕ್ಷಣಕ್ಕೆ ತೆರೆದುಕೊಂಡಿದ್ದ, ರಾಜಕೀಯ ಅರಿವುಳ್ಳ ಯುರೋಪಿಯನ್ ರಷ್ಯನ್ನರಿಗೇ ಈ ಸ್ಥಿತಿಯಾದರೆ ಶತಮಾನಗಳಿಂದ ಶಿಕ್ಷಣವನ್ನೇ ಕಾಣದ, ಊಳಿಗಮಾನ್ಯ ಸಾಮಾಜಿಕ ವ್ಯವಸ್ಥೆಯ, ಜಾಗತಿಕ ರಾಜಕೀಯ ಚಿಂತನೆಯ ಗಂಧಗಾಳಿಯೂ ಇಲ್ಲದ ಮಧ್ಯ ಏಷ್ಯನ್ನರ ಸ್ಥಿತಿ ಹೇಗಿರಬೇಕು!

ಸ್ವತಂತ್ರಗೊಂಡು ದಶಕದ ನಂತರ ತನ್ನ ಅಗಾಧ ತೈಲ ಸಂಪತ್ತನ್ನು ತುಸು ಮಟ್ಟಿಗಾದರೂ ಬಳಸಿಕೊಂಡು ಕುಂಟುಹೆಜ್ಜೆಯಲ್ಲಾದರೂ ಆರ್ಥಿಕ ಪ್ರಗತಿ ಸಾಧಿಸತೊಡಗಿದ್ದು ತುರ್ಕ್​ವೆುನಿಸ್ತಾನ. ಆದರೆ ಇನ್ನುಳಿದ ನಾಲ್ಕು ದೇಶಗಳ ಬಗ್ಗೆ ನಾವು ಹಾಗೆ ಆಶಾವಾದಿಗಳಾವುದು ಕಷ್ಟ. ಇದಕ್ಕೆ ಕಾರಣ ಅವು ನೈಸರ್ಗಿಕ ಸಂಪನ್ಮೂಲಗಳ ಕೊರತೆಯಿಂದ ಬಳಲುತ್ತಿವೆ ಎಂದಲ್ಲ. ಅವುಗಳ ದುಃಸ್ಥಿತಿಗೆ ನಿಜವಾದ ಕಾರಣ ಅಧಿಕಾರಲಾಲಸಿ, ಧನದಾಹಿ, ಸ್ವಾರ್ಥಿ, ಸ್ವಜನಪಕ್ಷಪಾತಿ ಅಧ್ಯಕ್ಷರುಗಳ ಮತ್ತವರ ಭ್ರಷ್ಟಾಚಾರಿ ಹಿಂಬಾಲಕರ ಕಪಿಮುಷ್ಟಿಯಲ್ಲಿ ಅವು ಸಿಲುಕಿಹೋಗಿರುವುದು. ಅಮೂಲ್ಯ ಖನಿಜಗಳ ಭಂಡಾರವಾದ ತಾಜಿಕಿಸ್ತಾನದ ವಾರ್ಷಿಕ ವರಮಾನದ ಅರ್ಧದಷ್ಟು ಬರುವುದು ವಿದೇಶಗಳಲ್ಲಿ ದುಡಿಯುವ ಲಕ್ಷಾಂತರ ತಾಜಿಕರು ಕಳುಹಿಸುವ ಡಾಲರ್​ಗಳಿಂದ ಎಂದರೆ ಪರಿಸ್ಥಿತಿ ಅರಿವಾಗಬಹುದು. ಉಜ್ಬೇಕಿಸ್ತಾನದಲ್ಲಿ ಇದು ಶೇ.12 ಇದೆ. ಇಂಥ ದೀನ ಆರ್ಥಿಕ ಸ್ಥಿತಿಯಿದ್ದರೂ ಈ ದೇಶಗಳ ಅಧ್ಯಕ್ಷರುಗಳು ಅಭಿವೃದ್ಧಿಯತ್ತ ಅಗತ್ಯ ಗಮನ ಹರಿಸುತ್ತಿಲ್ಲ. ಕೆಲವರಂತೂ ಜೀವಮಾನ ಅಧ್ಯಕ್ಷಗಿರಿ ತಮ್ಮ ಹಕ್ಕು ಎಂಬಂತೆ ವರ್ತಿಸುತ್ತಿದ್ದಾರೆ. ತಾಜಿಕಿಸ್ತಾನದ ಅಧ್ಯಕ್ಷ ಎಮೊಮಾಲಿ ರಹಮಾನ್ ಕಳೆದ 33 ವರ್ಷಗಳಿಂದಲೂ (ಸೋವಿಯತ್ ಕಾಲದಿಂದಲೂ) ಕುರ್ಚಿಗೆ ಅಂಟಿಕೊಂಡೇ ಕೂತಿದ್ದಾರೆ. ಅಧಿಕಾರಾವಧಿಯ ರೆಕಾರ್ಡ್​ನಲ್ಲಿ ಇಂದು ಇವರನ್ನು ಮೀರಿಸುವವರಿರುವುದು ನಮಗೆ ಕಾಣಬರುವುದು ಕ್ಯಾಮೆರೂನ್, ಈಕ್ವಟೋರಿಯಲ್ ಗಿನಿ, ಕಾಂಗೋ, ಚಾಡ್ ಮತ್ತು ಉಗಾಂಡಾದಂಥ ಆಫ್ರಿಕನ್ ದೇಶಗಳಲ್ಲಿ! ಅಧಿಕ ಕಾಲ ಅಧಿಕಾರದಲ್ಲಿರುವುದು, ನಂತರ ತಮ್ಮ ಮಕ್ಕಳನ್ನು ಅಥವಾ ಇತರ ಹತ್ತಿರದ ಸಂಬಂಧಿಕರನ್ನು ಗಾದಿಗೇರಿಸಲು ನೋಡುವುದು ಮಧ್ಯ ಏಷ್ಯಾದ ಅಧ್ಯಕ್ಷ ಮಹಾಶಯರುಗಳ ಹಂಚಿಕೆ. ರ್ಕಿಗಿಸ್ತಾನದಲ್ಲೇನೋ ಅಧ್ಯಕ್ಷರ ಬದಲಾವಣೆ ಎರಡು ಕ್ರಾಂತಿಗಳ ಮೂಲಕ ಆದರೂ ಆ ಪುಟ್ಟ ದೇಶ ಎದುರಿಸುತ್ತಿರುವ ಗಂಡಾಂತರವೇ ಬೇರೆ. ನಮ್ಮ ಕರ್ನಾಟಕಕ್ಕಿಂತ ತುಸುವೇ ದೊಡ್ಡದಾದ ಅದರ 1,200 ಚದರ ಕಿಲೋಮೀಟರ್ ಪ್ರದೇಶವನ್ನು ಪೂರ್ವದ ಕಂಟಕ ಚೀನಾ ಈಗಾಗಲೇ ಕಿತ್ತುಕೊಂಡಿರುವುದಲ್ಲದೆ ದೇಶದ ಶೇ.45 ಪ್ರದೇಶದ ಮೇಲೆಯೂ ಕಣ್ಣುಹಾಕಿದೆ!

ಈ ಗಣರಾಜ್ಯಗಳ ಉದಯಕ್ಕೆ ಮೂರು ದಶಕಗಳ ಹಿಂದೆ ಕಾರಣವಾದ ಸೋವಿಯತ್ ಛಿದ್ರೀಕರಣದೊಂದಿಗೆ ರಷ್ಯಾ ಕಳೆದುಕೊಂಡ ಒಟ್ಟಾರೆ ಪ್ರದೇಶಗಳಲ್ಲೊಂದು ವಿಶೇಷ ಸಾಮ್ಯತೆ ಇದೆ. ಮೂರು ಶತಮಾನಗಳ ಹಿಂದೆಯೇ ಯುರೋಪ್​ನ ಅತಿ ದೊಡ್ಡ ದೇಶವಾಗಿ, ಎರಡು ಶತಮಾನಗಳ ಹಿಂದೆ ಜಗತ್ತಿನ ಅತಿ ದೊಡ್ಡ ದೇಶವಾಗಿ ಬೆಳೆದರೂ ರಷ್ಯಾದ ಬಹುತೇಕ ಪ್ರದೇಶಗಳಿರುವುದು ತಂದ್ರಾ ಶೀತವಲಯದಲ್ಲಿ. ರಷ್ಯನ್ನರ ಅತಿ ದೊಡ್ಡ ಶತ್ರು ಚಳಿ. ಇದಕ್ಕೊಂದು ಉದಾಹರಣೆ ಕೊಡುವುದಾದರೆ ಚಳಿಗಾಲದ ಎರಡುಮೂರು ತಿಂಗಳುಗಳಲ್ಲಿ ರಾಜಧಾನಿ ಮಾಸ್ಕೋ ಮತ್ತು ಪ್ರಮುಖ ಬಂದರು ನಗರ ಸೇಂಟ್ ಪೀಟರ್ಸ್​ಬರ್ಗ್ ನಗರಗಳ ರಸ್ತೆಗಳಲ್ಲಿ ಬೆಳ್ಳಂಬೆಳಗ್ಗೆಯೇ ಹಿಮವನ್ನು ತೆಗೆಯದಿದ್ದರೆ ಆ ದಿನಕ್ಕೆ ಆ ನಗರಗಳು ಸ್ತಬ್ಧಗೊಂಡಂತೇ! ಇದು ಸಾಲದು ಎಂಬಂತೆ ಪೂರ್ವದ ಪೆಸಿಫಿಕ್ ತೀರದಿಂದ ಪಶ್ಚಿಮದ ಕರೇಲಿಯಾದವರೆಗೆ ಉದ್ದಕ್ಕೂ ದೇಶದ ನಡುಮಧ್ಯದ ಅತಿ ದೊಡ್ಡ ಭಾಗ ತೈಗಾ ಕಾಡುಗಳಿಂದ ಆವೃತವಾಗಿದೆ. ಜನಜೀವನಕ್ಕೆ ವರ್ಷದ ಯಾವ ಋತುವಿನಲ್ಲೂ ಬಾಧೆ ತರದ ಹಾಗೂ ತನಗೆ ಸರ್ವಋತು ಬಂದರುಗಳನ್ನು ಒದಗಿಸಬಲ್ಲ ಸಮಶೀತೋಷ್ಣವಲಯದ ಪ್ರದೇಶಗಳನ್ನು ಪಡೆದುಕೊಳ್ಳಲೆಂದೇ ಝಾರಿಸ್ಟ್ ರಷ್ಯಾ ದಕ್ಷಿಣಾಭಿಮುಖವಾಗಿ ವಿಸ್ತಾರಗೊಳ್ಳುತ್ತ ಹೋದದ್ದನ್ನು ಹತ್ತೊಂಬತ್ತನೇ ಶತಮಾನದ ಜಾಗತಿಕ ಇತಿಹಾಸ ವಿವರವಾಗಿ ದಾಖಲಿಸಿದೆ. 1990-91ರಲ್ಲಿ ಬೋರಿಸ್ ಯೆಲ್ತ್್ತನ್ ರಷ್ಯಾದ ಕೈ ತಪ್ಪಿಸಿದ್ದು ಈ ಎಲ್ಲ ಸಮಶೀತೋಷ್ಣ ನಾಡುಗಳನ್ನು.

ಜನಾಂಗೀಯವಾಗಿ ರಷ್ಯನ್ನರೊಂದಿಗೆ ಐತಿಹಾಸಿಕವಾಗಿ ಹೊಂದಿಕೊಳ್ಳದ, ಪ್ರಾದೇಶಿಕವಾಗಿಯೂ ಪುಟ್ಟದಾದ ಬಾಲ್ಟಿಕ್ ಮತ್ತು ಕಾಕಸಸ್ ನಾಡುಗಳು ಹೊರಹೋದದ್ದು ರಷ್ಯಾಗೆ ದೊಡ್ಡ ನಷ್ಟವೇನಲ್ಲ. ಆದರೆ ಯೂಕ್ರೇನ್ ಮತ್ತು ಮಧ್ಯ ಏಷ್ಯಾ ಬಗ್ಗೆ ಹೀಗೆ ಹೇಳಲಾಗುವುದಿಲ್ಲ.

ಮೊದಲಿಗೆ ಮಧ್ಯ ಏಷ್ಯಾ ಅದರಲ್ಲೂ ಮುಖ್ಯವಾಗಿ ಕಝಾಖ್​ಸ್ತಾನ್​ನತ್ತ ವಿಶೇಷವಾಗಿ ಹೊರಳುವುದಾದರೆ 27 ಲಕ್ಷ ಚ.ಕಿ.ಮೀ. ವಿಸ್ತೀರ್ಣದ ಅಂದರೆ ನಮ್ಮ ದೇಶಕ್ಕಿಂತ ಐದು ಲಕ್ಷ ಚ.ಕಿ.ಮೀ. ಮಾತ್ರ ಕಡಿಮೆಯ ಆ ದೇಶ ಭೂವಿಸ್ತಾರದಲ್ಲಿ ಜಗತ್ತಿನ ಅತಿ ದೊಡ್ಡ ಮುಸ್ಲಿಂ ದೇಶ. ಜಾಗತಿಕವಾಗಿ ಇದುವರೆಗೆ ಪತ್ತೆಯಾಗಿರುವ ಯುರೇನಿಯಂ ನಿಕ್ಷೇಪಗಳಲ್ಲಿ ಶೇ.40 ಅದೊಂದರಲ್ಲೇ ಇದೆಯಂತೆ! ಶುದ್ಧ ಇಂಧನ ಮೂಲಗಳಿಗಾಗಿ ಜಗತ್ತು ಹುಡುಕಾಡುತ್ತಿರುವ ಈ ದಿನಗಳಲ್ಲಿ ಅಣುಶಕ್ತಿಗೆ ಅತ್ಯಗತ್ಯವಾದ ಹಾಗೂ ಅಣ್ವಸ್ತ್ರ ತಯಾರಿಕೆಗೂ ಬೇಕೇಬೇಕಾದ ಯುರೇನಿಯಂನ ಮಹತ್ವದ ಬಗ್ಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸೋವಿಯತ್ ಕಾಲದಲ್ಲಿ ನಿರ್ವಣವಾದ ಬೈಕನೂರ್ ಬಾಹ್ಯಾಕಾಶ ಉಡ್ಡಯನ ಕೇಂದ್ರವಿರುವುದು ಕಝಾಖ್​ಸ್ತಾನ್​ನಲ್ಲಿ. ಅದು ಜಗತ್ತಿನ ಮೊಟ್ಟಮೊದಲ ಉಡ್ಡಯನ ಕೇಂದ್ರವಷ್ಟೇ ಅಲ್ಲ, ಇಂದಿಗೂ ಜಾಗತಿಕವಾಗಿ ಅಂತಹ ಅತಿ ದೊಡ್ಡ ಕೇಂದ್ರ. ಇಂದು ಅದರಿಂದ ಕಝಾಖ್​ಸ್ತಾನ್​ಗೆ ಉಪಯೋಗವೇನೂ ಇಲ್ಲ ಮತ್ತು ರಷ್ಯಾ ಅದನ್ನು ಗುತ್ತಿಗೆಗೆ ಪಡೆದು ತನ್ನ ಬಾಹ್ಯಾಕಾಶ ಕಾರ್ಯಕ್ರಮಗಳಿಗಾಗಿ ಬಳಸಿಕೊಳ್ಳುತ್ತಿದೆ.

ಹೀಗೆ ಹಲವು ಬಗೆಗಳಲ್ಲಿ ತನ್ನ ದೇಶಕ್ಕೆ ಮಹತ್ವವೆನಿಸುವ ಕಝಾಖ್​ಸ್ತಾನ್ ಕೈಬಿಟ್ಟುಹೋದದ್ದನ್ನು ರಷ್ಯಾದ ರಾಷ್ಟ್ರೀಯವಾದಿ ಅಧ್ಯಕ್ಷ ವ್ಲಾದಿಮೀರ್ ಪೂತಿನ್ ಇಂದಿಗೂ ಒಪ್ಪಿಕೊಂಡಿಲ್ಲ. ಹಾಗೆ ನೋಡಿದರೆ ರಷ್ಯಾದೊಂದಿಗೇ ಉಳಿಯಲು ಕಝಾಖ್​ಸ್ತಾನ್​ಗೆ ಇನ್ನೊಂದು ಕಾರಣವೂ ಇತ್ತು. 1991ರಲ್ಲಿ ಕಝಾಖ್​ಸ್ತಾನ್​ನ ಒಟ್ಟು ಜನಸಂಖ್ಯೆಯಲ್ಲಿ ಶೇ.40 ರಷ್ಯನ್ನರಿದ್ದರು ಮತ್ತು ಉಳಿದವರಲ್ಲಿ ಬಹುತೇಕರು ರಷ್ಯನರಲ್ಲಿ ಸಹಜವೆನಿಸುವಂತೆ ವ್ಯವಹರಿಸಬಲ್ಲವರಾಗಿದ್ದರು. ಎರಡೂ ಜನಾಂಗಗಳ ಶಾಂತಿಯುತ ಸಹಬಾಳ್ವೆ ಅಂದು ಜಾಗತಿಕ ಸಾಂಸ್ಕೃತಿಕ ನಕ್ಷೆಯಲ್ಲಿ ಕಝಾಖ್​ಸ್ತಾನ್​ಗೆ ವಿಶಿಷ್ಟ ಸ್ಥಾನವನ್ನು ತಂದುಕೊಟ್ಟಿತ್ತು. ಧಾರ್ವಿುಕವಾಗಿಯೂ ಕಝಾಖಿಗಳು ಕಟ್ಟಾ ಮುಸ್ಲಿಮರೇನೂ ಆಗಿರಲಿಲ್ಲ.

ಆದರೀಗ ಪರಿಸ್ಥಿತಿ ಬದಲಾಗುತ್ತಿದೆ. ಇಂದು ಕಝಾಖ್​ಸ್ತಾನ್​ನಲ್ಲಿ ರಷ್ಯನ್ನರು ಕೇವಲ ಶೇ.18ಕ್ಕೆ ಇಳಿದಿದ್ದಾರೆ. ಜತೆಗೆ ಮಾಜಿ ಅಧ್ಯಕ್ಷ ನೂರ್​ಸುಲ್ತಾನ್ ನಝುರ್​ಬಯೇವ್ ರಷ್ಯಾ ಜತೆ ಉತ್ತಮ ಸಂಬಂಧದ ನಾಟಕವಾಡುತ್ತಲೇ ತನ್ನ ದೇಶವನ್ನು ಆರ್ಥಿಕವಾಗಿ ಪಶ್ಚಿಮ ಜಗತ್ತಿಗೆ ಹತ್ತಿರವಾಗಿಸುತ್ತಿದ್ದರು. ಅದರಲ್ಲೂ 2012ರಲ್ಲಿ ರಷ್ಯಾ ನೇತೃತ್ವದ ಸಿಎಸ್​ಟಿಓ ಸೇನಾಕೂಟದಿಂದ ತುರ್ಕ್​ವೆುನಿಸ್ತಾನ್ ಹೊರಹೋದಾಗ ಪೂತಿನ್ ಎಚ್ಚೆತ್ತುಕೊಂಡರು. ಹೀಗೇ ಮುಂದುವರಿದರೆ ತಮ್ಮ ದೇಶಕ್ಕೆ ಹಲವು ಬಗೆಯಲ್ಲಿ ಮುಖ್ಯವಾದ ಕಝಾಖ್​ಸ್ತಾನ್ ಕೈಬಿಟ್ಟುಹೋಗಬಹುದೆಂದು ಅವರು ಆತಂಕಗೊಳ್ಳುವುದು ಸಹಜವೇ ಆಗಿತ್ತು.

ಇನ್ನು ಯೂಕ್ರೇನ್​ನತ್ತ ತಿರುಗೋಣ. ರಷ್ಯಾಗೆ ಕಪು್ಪ ಸಮುದ್ರ, ಅದರಾಚೆಗಿನ ಮೆಡಿಟರೇನಿಯನ್ ಸಮುದ್ರ, ಅದನ್ನೂ ದಾಟಿದರೆ ಪಶ್ಚಿಮದಲ್ಲಿ ಜಿಬ್ರಾಲ್ಟರ್ ಜಲಸಂಧಿ ಮೂಲಕ ಅಟ್ಲಾಂಟಿಕ್ ಸಾಗರಕ್ಕೆ ಮತ್ತು ಪೂರ್ವದಲ್ಲಿ ಸುಯೆಜ್ ಕಾಲುವೆ ಮೂಲಕ ಹಿಂದೂ ಮಹಾಸಾಗರಕ್ಕೆ ಸಂಪರ್ಕ ಒದಗಿಸಿದ್ದೇ ಯೂಕ್ರೇನ್​ನ ಬಂದರುಗಳು. 1991ರವರೆಗೂ ದೇಶದ ಪ್ರಮುಖ ಸರ್ವಋತು ಬಂದರಾಗಿದ್ದ ಒಡೆಸ್ಸಾ ಮತ್ತು ಬಲಾಢ್ಯ ಸೋವಿಯತ್ ಬ್ಲಾಕ್ ಸಿ ಫ್ಲೀಟ್​ನ ನೆಲೆ ಸೆವಾಸ್ತಪೋಲ್ ಏಕಾಏಕಿ ಕೈಬಿಟ್ಟುಹೋದದ್ದು ರಷ್ಯಾಗೆ ದೊಡ್ಡ ನಷ್ಟವಷ್ಟೇ ಅಲ್ಲ, ಭಾವೀ ಆರ್ಥಿಕ ಹಾಗೂ ಸಾಮರಿಕ ಯೋಜನೆಗಳಿಗೆ ದೊಡ್ಡ ಹೊಡೆತ. ಸೆವಾಸ್ತಪೋಲ್ ನೌಕಾನೆಲೆಯನ್ನು ಬಳಸಿಕೊಳ್ಳುವ ಅವಕಾಶವನ್ನೇನೋ ಯೂಕ್ರೇನ್ ರಷ್ಯಾಗೆ ನೀಡಿದ್ದುಂಟು. ಆದರೆ ಯೂಕ್ರೇನ್ ದಿನೇದಿನೇ ಪಶ್ಚಿಮದತ್ತ ವಾಲತೊಡಗಿದಂತೆ ರಷ್ಯಾದ ಬ್ಲಾಕ್ ಸೀ ಫ್ಲೀಟ್​ನ ಭವಿಷ್ಯದ ಮೇಲೆ ಕಾಮೋಡಗಳು ಕವಿಯಲಾರಂಭಿಸಿದವು.

ಜನಾಂಗೀಯವಾಗಿ, ಭಾಷಿಕವಾಗಿ ಮತ್ತು ಸಾಂಸ್ಕೃತಿಕವಾಗಿಯೂ ರಷಿಯನ್ನರು ಮತ್ತು ಯೂಕ್ರೇನಿಯನ್ನರ ನಡುವೆ ದಾಟಲಾಗದ ಕಂದಕವೇನೂ ಇಲ್ಲ; ಎರಡೂ ಜನತೆಯನ್ನು ಒಂದುಗೂಡಿಸುವ ಸಾಮ್ಯತೆಗಳೇ ಅಧಿಕ. ಅಲ್ಲದೇ, 1991ರಲ್ಲಿ ರಷ್ಯಾ ಮತ್ತು ಯೂಕ್ರೇನ್​ಗಳ ನಡುವೆ ಸೃಷ್ಟಿಯಾದ ಅಂತಾರಾಷ್ಟ್ರೀಯ ಗಡಿರೇಖೆ ಕಮ್ಯೂನಿಸ್ಟ್ ಕಾಲದಲ್ಲೇ ‘ರಷಿಯನ್ ಸೋವಿಯತ್ ಫೆಡರೇಟಿವ್ ಸೋಶಿಯಲಿಸ್ಟ್ ರಿಪಬ್ಲಿಕ್’ (ರಷಿಯನ್ ಫೆಡರೇಷನ್) ಮತ್ತು ‘ಯೂಕ್ರೇನಿಯನ್ ಸೋವಿಯತ್ ಸೋಶಿಯಲಿಸ್ಟ್ ರಿಪಬ್ಲಿಕ್’ಗಳ ನಡುವೆ ಗುರುತಿಸಲಾಗಿದ್ದ ಗಡಿರೇಖೆಯೇ ಆಗಿದ್ದರೂ ಅದೇನೂ ನಿಖರವಾಗಿ ಪ್ರತ್ಯೇಕಿಸುವ ವಿವಾದಾತೀತ ಗಡಿಯಾಗಿಲ್ಲ. ಕ್ರಿಮಿಯಾ ಪರ್ಯಾಯದ್ವೀಪ ಹಾಗೂ ಪೂರ್ವ ಯೂಕ್ರೇನ್​ನಲ್ಲಿ ರಷಿಯನ್ನರದೇ ಪ್ರಾಬಲ್ಯ. 1991ರಲ್ಲಿ ಒಟ್ಟಾರೆ ಯೂಕ್ರೇನ್ ಜನಸಂಖ್ಯೆಯಲ್ಲಿ ರಷಿಯನ್ನರು ಸರಿಸುಮಾರು ಕಾಲುಭಾಗದಷ್ಟಿದ್ದರು. ಹಾಗೆಯೇ ಉತ್ತರ ಯೂಕ್ರೇನ್​ಗೆ ಹೊಂದಿಕೊಂಡ ರಷ್ಯಾ ಮತ್ತು ಬೆಲರೂಸ್​ಗಳಲ್ಲಿ ಯೂಕ್ರೇನಿಯನ್ನರ ಸಂಖ್ಯೆ ಸಾಕಷ್ಟಿದೆ. ಜತೆಗೆ, ವರ್ಷವರ್ಷವೂ ಲಕ್ಷಾಂತರ ಯೂಕ್ರೇನಿಯನ್ನರು ಸ್ವಇಚ್ಛೆಯಿಂದ ರಷ್ಯಾಗೆ ಕಾನೂನುಬದ್ಧವಾಗಿಯೇ ವಲಸೆ ಹೋಗುತ್ತಿದ್ದಾರೆ. ಒಟ್ಟಿನಲ್ಲಿ ರಷ್ಯಾ ಮತ್ತು ಯೂಕ್ರೇನ್​ಗಳನ್ನು ಬೇರ್ಪಡಿಸಿದ್ದೇ ಅವ್ಯಾವಹಾರಿಕ. ಆದರೆ ಒಮ್ಮೆ ಯಾವುದೇ ಕಾರಣದಿಂದಾಗಿ ಪ್ರತ್ಯೇಕಗೊಂಡರೆ ಪ್ರತ್ಯೇಕತಾ ಮನೋಭಾವ ತಾನಾಗಿಯೇ ಉದ್ಭವವಾಗುತ್ತದೆ ಮತ್ತು ಬೆಳೆಯುತ್ತಲೂ ಹೋಗುತ್ತದೆ. ಐರ್ಲೆಂಡ್, ತಿಮೂರ್, ಸೋಮಾಲಿಯಾ, ಮೊಲ್ದೋವಾ, ಸ್ಪಾ್ಯನಿಷ್ ಸಹಾರಾದಲ್ಲಿ ನಾವದನ್ನು ನೋಡುತ್ತಲೇ ಇದ್ದೇವೆ. ರಷ್ಯಾ-ಯೂಕ್ರೇನ್ ನಡುವೆ ಆಗುತ್ತಿರುವುದೂ ಇದೇ.

ಎರಡೂ ದೇಶಗಳ ನಡುವಿನ ಸಹಬಾಳ್ವೆ ಪರಸ್ಪರರಿಗೆ ಅನುಕೂಲಕರ ಹಾಗೂ ಅವಶ್ಯಕವೆಂದು ನಂಬಿದ್ದ ಯೂಕ್ರೇನ್​ನ ಪ್ರಾರಂಭಿಕ ನಾಯಕರು, ಮುಖ್ಯವಾಗಿ ಅಧ್ಯಕ್ಷ ವಿಕ್ತೊರ್ ಯಾನುಕೋವಿಚ್ (2010-13) ರಷ್ಯಾ ಜತೆ ಹೊಂದಾಣಿಕೆಯ ನೀತಿ ಅನುಸರಿಸಿ ಪಶ್ಚಿಮದ ಆಮಿಷಗಳಿಂದ ದೇಶವನ್ನು ದೂರವಿರಿಸಿಕೊಂಡಿದ್ದರು. ಆದರೆ ಯೂಕ್ರೇನಿಯನ್ ಜನತೆಯನ್ನು ತನ್ನತ್ತ ಸೆಳೆದುಕೊಳ್ಳುವ ಪ್ರಯತ್ನವನ್ನು ಪಶ್ಚಿಮ ಜಗತ್ತು ಮುಂದುವರಿಸಿ ಯಶಸ್ವಿಯೂ ಆಯಿತು. ಪರಿಣಾಮವಾಗಿ ಅಧ್ಯಕ್ಷ ಯಾನುಕೋವಿಚ್ ಅಧಿಕಾರ ಕಳೆದುಕೊಂಡರು. ಡೆಮೋಕ್ರಾಟಿಕ್ ಅಧ್ಯಕ್ಷ ಬರಾಕ್ ಒಬಾಮ ಮತ್ತು ಜರ್ಮನಿಯ ಛಾನ್ಸಲರ್ ಏಂಗೆಲಾ ಮೆರ್ಕೆಲ್ ಈ ನೀತಿಯ ಹರಿಕಾರರು. ಅವರ ಈ ನೀತಿಯ ಹಿಂದಿದ್ದದ್ದು ಆಯಕಟ್ಟಿನ ಯೂಕ್ರೇನನ್ನು ತಮ್ಮತ್ತ ಸೆಳೆದುಕೊಂಡು ಅಷ್ಟರಮಟ್ಟಿಗೆ ರಷ್ಯಾಗೆ ಸಾಮರಿಕ ತಡೆಗಳನ್ನೊಡ್ಡುವುದಾಗಿತ್ತು. ಇದು ಅಧ್ಯಕ್ಷ ಪೂತಿನ್​ಗೆ ಗೂಳಿಯ ಮುಂದೆ ಕೆಂಪುವಸ್ತ್ರ ಬೀಸಿದಂತಾಯಿತು.

ನಂತರದ ವರ್ಷಗಳಲ್ಲಿ ಯೂಕ್ರೇನ್ ರಷ್ಯಾದಿಂದ ವೇಗವಾಗಿ ದೂರದೂರ ಸರಿಯತೊಡಗಿತು. ಅಧ್ಯಕ್ಷ ಪೆತ್ರೋ ಪೊರೊಶೆಂಕೋ (2014-19) ಕಾಲದಲ್ಲಿ ಆರಂಭಗೊಂಡ ಅದನ್ನು ಪ್ರಸಕ್ತ ಅಧ್ಯಕ್ಷ ವೊಲೊದಿಮಿರ್ ಝೆಲೆನ್​ಸ್ಕಿ ಉತ್ತುಂಗಕ್ಕೊಯ್ದಿದ್ದಾರೆ. ಇಂಥ ಸನ್ನಿವೇಶದಲ್ಲಿ ಕಝಾಖ್​ಸ್ತಾನ್ ಮತ್ತು ಯೂಕ್ರೇನ್ ಶತ್ರುಗಳ ಆಡಂಬೊಲವಾಗಿ ರಷ್ಯಾಗೆ ಮಗ್ಗುಲ ಮುಳ್ಳಾಗಬಾರದು ಎಂದು ಅಧ್ಯಕ್ಷ ಪೂತಿನ್ ಎಣಿಸಿದ್ದು ಸಹಜ. ಅವರ ಆತಂಕವನ್ನು ದಿನೇದಿನೇ ಹೆಚ್ಚಿಸುತ್ತಿರುವ ಜೋ ಬೈಡೆನ್ ಆಡಳಿತದ ಋಣಾತ್ಮಕ ನಡೆಗಳು ಮತ್ತು ಭವಿಷ್ಯದ ಬಗೆಗಿನ ಒಳನೋಟ ಮುಂದಿನವಾರ, ಲೇಖನದ ಮೂರನೆಯ ಹಾಗೂ ಅಂತಿಮ ಭಾಗದಲ್ಲಿ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net