ಮಹಿಳಾಶಿರದ ಜತೆ ರಾಷ್ಟ್ರಸುರಕ್ಷಾಶಿರ ಮುಚ್ಚಹೊರಟ ಹಿಜಾಬ್

Column F
Published on
ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಶಾಲೆಗಳಿಗೆ ಹಾಜರಾಗುವುದರ ಕುರಿತಾಗಿ ಒಂದೂವರೆ ತಿಂಗಳ ಹಿಂದೆ ಕರ್ನಾಟಕದ ಉಡುಪಿಯಲ್ಲಿ ಆರಂಭವಾದ ವಿವಾದ ಇಂದು ನೆರೆಯ ಮಹಾರಾಷ್ಟ್ರವಲ್ಲದೆ ರಾಷ್ಟ್ರದ ರಾಜಧಾನಿ ದೆಹಲಿಗೂ ಮುಟ್ಟಿದೆ. ಜತೆಗೆ ಹಿಜಾಬ್ ಎಂಬ ಶಿರವಸ್ತ್ರ ಧರಿಸುವ ಸ್ವಾತಂತ್ರ್ಯಕ್ಕಾಗಿ ಆರಂಭವಾದ ಮುಸ್ಲಿಂ ವಿದ್ಯಾರ್ಥಿನಿಯರ ಬೇಡಿಕೆ ಕಣ್ಣುಗಳು ಮತ್ತು ಹಸ್ತಗಳ ಹೊರತಾಗಿ ಇಡೀ ದೇಹವನ್ನು ಆವರಿಸುವ ಬುರ್ಕಾ ಧರಿಸುವ ಬೇಡಿಕೆಯಾಗಿಯೂ ಬದಲಾಗಿಹೋಗಿದೆ. ಈ ವಿವಾದದ ಧಾರ್ವಿುಕ, ಸಾಂವಿಧಾನಿಕ ಹಾಗೂ ಕಾನೂನಾತ್ಮಕ ಆಯಾಮಗಳ ಆಮೂಲಾಗ್ರ ಚರ್ಚೆ ರಾಷ್ಟ್ರಾದ್ಯಂತ ನಡೆಯುತ್ತಲೇ ಇದೆ. ಹೀಗಾಗಿ ಚರ್ಚೆಯನ್ನು ಅವುಗಳಿಂದಾಚೆಗೆ ಕೊಂಡೊಯ್ಯುವ ಪ್ರಯತ್ನವನ್ನಿಲ್ಲಿ ಮಾಡುತ್ತಿದ್ದೇನೆ.

ಈ ವಿಷಯದ ಕುರಿತಾಗಿ ಜಾಗತಿಕವಾಗಿ ಯಾವ ನೀತಿಗಳು ಅನುಸರಿಸಲ್ಪಡುತ್ತಿವೆ ಎಂಬುದರತ್ತ ಇಣುಕುನೋಟ ಅಗತ್ಯ. ಯಾಕೆಂದರೆ ಹಿಜಾಬ್ ಮತ್ತು ಬುರ್ಕಾ ನಮ್ಮಲ್ಲಿ ವಿವಾದವಾಗುವ ಮೊದಲೇ ಇತರ ಹಲವುಹತ್ತು ದೇಶಗಳಲ್ಲಿ ಕಾಣಿಸಿಕೊಂಡದ್ದಿದೆ ಮತ್ತು ಆ ದೇಶಗಳು ತಳೆದ ನೀತಿಗಳು ನಮಗೆ ಮಾರ್ಗದರ್ಶಕವೂ ಆಗಬಲ್ಲವು.

ಲ್ಯಾಟಿನ್ ಅಮೆರಿಕದ ಟ್ರಿನಿಡಾಡ್ ಮತ್ತು ಟೊಬ್ಯಾಗೋ ಹಾಗೂ ಫ್ರೆಂಚ್ ಗಯಾನಾ ಜತೆಗೆ ಯೂರೋಪಿಯನ್ ದೇಶಗಳಾದ ಫ್ರಾನ್ಸ್, ಬೆಲ್ಜಿಯಂ, ನೆದರ್​ಲ್ಯಾಂಡ್, ಸ್ವಿಜರ್​ಲ್ಯಾಂಡ್, ಡೆನ್​ವಾರ್ಕ್, ಆಸ್ಟ್ರಿಯಾ ಮತ್ತು ಬಲ್ಗೇರಿಯಾ; ಆಫ್ರಿಕನ್ ದೇಶಗಳಾದ ಮಾರಿಟಾನಿಯಾ ಮತ್ತು ರಿಪಬ್ಲಿಕ್ ಆಫ್ ಕಾಂಗೋ; ಏಷ್ಯನ್ ರಾಷ್ಟ್ರಗಳಾದ ತಾಜಿಕಿಸ್ತಾನ್ ಮತ್ತು ಶ್ರೀಲಂಕಾಗಳು ಹಿಜಾಬ್ ಮತ್ತು ಬುರ್ಕಾವನ್ನು ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ನಿಷೇಧಿಸಿವೆ. ಇವುಗಳಲ್ಲಿ ಶ್ರೀಲಂಕಾ ನಮ್ಮ ನೆರೆಯ ದೇಶವಾದರೆ ತಾಜಿಕಿಸ್ತಾನ್ ಮುಸ್ಲಿಂ ರಾಷ್ಟ್ರ ಮತ್ತು 1991ರವರೆಗೂ ಕಮ್ಯೂನಿಸ್ಟ್ ಸೋವಿಯತ್ ಯೂನಿಯನ್​ನ ಭಾಗವಾಗಿತ್ತು ಎನ್ನುವುದು ಗಮನಿಸಬೇಕಾದ ಅಂಶ. ವಿವಾದಿತ ಉಡುಪನ್ನು ಕೆಲವು ಸ್ಥಳಗಳಲ್ಲಿ ಪೂರ್ಣ ಅಥವಾ ಭಾಗಶಃ ನಿಷೇಧಿಸಿರುವ ದೇಶಗಳ ಪಟ್ಟಿಯಲ್ಲಿ ಕೆನಡಾ, ಸ್ಪೇಯ್್ನ ಜರ್ಮನಿ, ಇಟಲಿ, ರಷ್ಯಾ, ನೈಜರ್, ಕ್ಯಾಮೆರೂನ್ ಮತ್ತು ಚೀನಾಗಳಿವೆ. ನಾರ್ವೆ ಮತ್ತು ಸ್ವೀಡನ್​ಗಳ ಜತೆ ಮುಸ್ಲಿಂ ದೇಶಗಳಾದ ತುರ್ಕಿ, ಅಲ್ಜೀರಿಯಾ, ಈಜಿಪ್ಟ್, ಅಜರ್​ಬೈಜಾನ್ ಮತ್ತು ಬೋಸ್ನಿಯಾಗಳೂ ಕೆಲವು ಸಾರ್ವಜನಿಕ ಕಟ್ಟಡಗಳು ಮತ್ತು ಸಾರ್ವಜನಿಕ ಸೇನಾಸ್ಥಳಗಳಲ್ಲಿ ನಿಷೇಧಿಸಿರುವುದು ಆಸಕ್ತಿಕರ. ಮುಸ್ಲಿಂ ದೇಶವಾದ, ಮುಸ್ಲಿಂ ದೇಶಗಳ ಸಂಘಟನೆಯ ಮೊದಲ ಅಧಿವೇಶನವನ್ನು ಆಯೋಜಿಸಿದ ಮೊರಾಕ್ಕೊ ಮತ್ತದರ ನಿಯಂತ್ರಣದಲ್ಲಿರುವ ಪಶ್ಚಿಮ ಸಹಾರಾದಲ್ಲಿ ಹಿಜಾಬ್ ಮತ್ತು ಬುರ್ಕಾಗಳ ಉತ್ಪಾದನೆ ಮತ್ತು ಮಾರಾಟದ ಮೇಲೇ ನಿಷೇಧವಿದೆ!

ಈಗ ನಮ್ಮ ಭಾರತದ ವಿಷಯಕ್ಕೆ ಬರೋಣ. ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಯಾವುದೇ ಸಭ್ಯ ಉಡುಪು ತೊಡಬಹುದಾದ ಅವಕಾಶವಿದ್ದರೂ ನಾನು ಕೆಲಸ ಮಾಡುತ್ತಿದ್ದ ಪಾಂಡಿಚೆರಿ ವಿಶ್ವವಿದ್ಯಾಲಯದಲ್ಲಿ ಹತ್ತು-ಹನ್ನೆರಡು ವರ್ಷಗಳ ಹಿಂದೆ ಮುಸ್ಲಿಂ ವಿದ್ಯಾರ್ಥಿನಿಯರ ಉಡುಪುಗಳಲ್ಲಿ ಅವರ ಧರ್ಮದ ಕುರುಹುಗಳು ಕಂಡೇ ಇರಲಿಲ್ಲ. ಹೆಸರು ಗೊತ್ತಾಗದ ಹೊರತು ಯಾವ ವಿದ್ಯಾರ್ಥಿ-ವಿದ್ಯಾರ್ಥಿನಿಯರ ಧರ್ಮ ಯಾವುದೆಂದು ನಮಗೆ ತಿಳಿಯುತ್ತಿರಲೂ ಇರಲಿಲ್ಲ, ತಿಳಿದುಕೊಳ್ಳುವ ಆಸಕ್ತಿಯೂ ಯಾರಿಗೂ ಇರಲಿಲ್ಲ. ಆದರೆ 2010ರಿಂದೀಚೆಗೆ ನಮ್ಮದೇ ವಿಭಾಗಕ್ಕೆ ಹಲವು ಕಾಶ್ಮೀರಿ ವಿದ್ಯಾರ್ಥಿಗಳು ಬಂದರು. ಹಾಗೆ ಬಂದ ಒಬ್ಬಳು ವಿದ್ಯಾರ್ಥಿನಿ ಹಿಜಾಬ್ ಧರಿಸುತ್ತಿದ್ದಳು. ಆಕೆಯೆಂದೂ ಬುರ್ಕಾ ಧರಿಸಲಿಲ್ಲ. ಮಾಲ್ದೀವ್ಸ್​ನ ವಿದ್ಯಾರ್ಥಿನಿಯೊಬ್ಬಳು ಮಾತ್ರ ಯಾವಾಗಲೂ ಹಿಜಾಬ್​ನಲ್ಲಿ ಮತ್ತು ಆಗಾಗ ಬುರ್ಕಾದಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಅದು ಅವಳು ಬೆಳೆದುಬಂದಿದ್ದ ನೆಲದ ಸಂಪ್ರದಾಯ ಮತ್ತು ಕಾನೂನು ಸಹ ಆಗಿತ್ತು. ಆ ಇಬ್ಬರ ಉಡುಪುಗಳು ನಮಗೆ ಅಸಹಜವೆನಿಸಲಿಲ್ಲ. ಆದರೆ ತೊಂದರೆ ಶುರುವಾದದ್ದು ಒಂದಿಬ್ಬರು ಕಾಶ್ಮೀರಿ ವಿದ್ಯಾರ್ಥಿಗಳಿಂದ. ಬಹುತೇಕ ವಿದ್ಯಾರ್ಥಿಗಳು ದಕ್ಷಿಣದ ಶಾಂತ, ಮುಕ್ತ ವಾತಾವರಣದ ಬಗ್ಗೆ ಮೊದಲಿಗೆ ಅಚ್ಚರಿಪಟ್ಟು ನಂತರ ನೆಮ್ಮದಿಯಿಂದ ಅಧ್ಯಯನದಲ್ಲಿ ತೊಡಗಿಕೊಂಡರೆ ಒಂದಿಬ್ಬರು ಮಾತ್ರ ನಮ್ಮಲ್ಲಿದ್ದ ಕೇರಳ ಮತ್ತು ತಮಿಳುನಾಡುಗಳ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸದ ಬಗ್ಗೆ ಅಸಮ್ಮತಿ ತೋರಿ, ‘ಮುಸ್ಲಿಂ ಆಗಿ ನೀವು ಹಿಜಾಬ್ ಧರಿಸದೇ ಇರುವುದು ನಮ್ಮ ಧರ್ಮಕ್ಕೆ ವಿರುದ್ಧ’ ಎಂದು ಕಟುವಾಗಿಯೇ ಹೇಳಿ ಅವರಿಗೆ ಕಿರಿಕಿರಿ ಉಂಟುಮಾಡತೊಡಗಿದರು. ಅದಕ್ಕೇನೂ ಆ ಮುಸ್ಲಿಂ ವಿದ್ಯಾರ್ಥಿನಿಯರು ಸೊಪ್ಪುಹಾಕಲಿಲ್ಲ. ಆದರೆ ಹಿಜಾಬ್ ನಮ್ಮಲ್ಲಿ ಮೊದಲಿಗೆ ಚರ್ಚೆಗೆ ಬಂದದ್ದು ಆಗ. ಆ ನಂತರ ದಕ್ಷಿಣ ಭಾರತ ವೇಗವಾಗಿ ಬದಲಾಗತೊಡಗಿತು. ಕೇರಳದ ಇಬ್ಬರು ಮುಸ್ಲಿಂ ಶಾಲಾಬಾಲಕಿಯರು ಯೂನಿಫಾಮ್ರ್ ಜತೆ ಹಿಜಾಬ್ ಧರಿಸುವ ಅವಕಾಶಕ್ಕಾಗಿ ನ್ಯಾಯಾಲಯದ ಮೆಟ್ಟಲೇರಿದ ಪ್ರಕರಣ 2018ರಲ್ಲಿ ನಡೆಯಿತು. ಆದರೆ ಅವರ ಬೇಡಿಕೆಯನ್ನು ಮಾನ್ಯಮಾಡಲು ಕೇರಳ ಹೈಕೋರ್ಟ್ ನಿರಾಕರಿಸಿ ಶಾಲೆಯ ಯೂನಿಫಾಮ್ರ್ ನಿಯಮಗಳನ್ನು ಪಾಲಿಸುವಂತೆ ಹೇಳಿತು. ವಿವಾದ ಅಲ್ಲಿಗೆ ತಣ್ಣಗಾಯಿತು. ಮುಸ್ಲಿಂ ಸಂಘಟನೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸೇರಿದಂತೆ ಯಾರೂ ಆ ಬಗ್ಗೆ ಗದ್ದಲವೆಬ್ಬಿಸಲಿಲ್ಲ. ಆದರೆ ಇಂದು ಕರ್ನಾಟಕದಲ್ಲಿ ಕೆಲವರು ಅದನ್ನೊಂದು ದೊಡ್ಡ ಪ್ರಶ್ನೆಯನ್ನಾಗಿ ಬೆಳೆಸಿ ನಿಲ್ಲಿಸಿದ್ದಾರೆ. ಇದಕ್ಕೆ ಇರಬಹುದಾದ ಕಾರಣಗಳಲ್ಲೊಂದು ಕೇರಳದಲ್ಲಿ ಕಮ್ಯೂನಿಸ್ಟ್ ಸರ್ಕಾರವಿದ್ದರೆ ಕರ್ನಾಟಕದಲ್ಲಿರುವುದು ಬಿಜೆಪಿ ಸರ್ಕಾರ ಎನ್ನುವುದನ್ನೂ ಮನಸ್ಸಿನ ಒಂದು ಮೂಲೆಯಟ್ಟುಕೊಂಡೇ ಈ ವಿವಾದದ ಮೂಲದತ್ತ ಗಮನ ಹರಿಸೋಣ.

ಉಡುಪೂ ಸೇರಿದಂತೆ ಹದಿವಯಸ್ಸಿನ ಹೆಣ್ಣುಮಕ್ಕಳ ಬಹುತೇಕ ಎಲ್ಲ ಆಯ್ಕೆಗಳನ್ನು ನಿರ್ಣಯಿಸುವುದು ತಂದೆ-ತಾಯಂದಿರು. ಮುಸ್ಲಿಂ ಹೆಣ್ಣುಮಕ್ಕಳ ವಿಷಯದಲ್ಲಿ ಇದು ಹೆಚ್ಚು ಸತ್ಯ. ಈ ವಾಸ್ತವದ ಹಿನ್ನೆಲೆಯಲ್ಲಿ ಉಡುಪಿಯ ಶಾಲೆಯೊಂದರ ವಿದ್ಯಾರ್ಥಿನಿಯರು 2021 ಡಿಸೆಂಬರ್ 31ರಂದು ಏಕಾಏಕಿ ಹಿಜಾಬ್ ಧರಿಸಿ ಬರಲು ಕಾರಣವೇನೆಂದು ನೋಡಹೋದರೆ ಅಲ್ಲಿ ತಂದೆ-ತಾಯಂದಿರ ನಿಲುವನ್ನು ಬದಲಿಸಲು ಆ ಮೂಲಕ ವಿದ್ಯಾರ್ಥಿನಿಯರ ತಲೆಗೆ ಹಿಜಾಬ್ ಸುತ್ತಲು ಬೇರೆಯೇ ಶಕ್ತಿಗಳು ವ್ಯವಸ್ಥಿತವಾಗಿ ಪ್ರಯತ್ನಿಸುವುದರ ಸೂಚನೆ ಕಾಣಬರುತ್ತದೆ.

ಹೈಸ್ಕೂಲ್ ನಂತರದ ಶೈಕ್ಷಣಿಕ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳಿಗೆ ಸಾಮಾನ್ಯವಾಗಿ ನಿಶ್ಚಿತ ಸಮವಸ್ತ್ರವಿರುವುದಿಲ್ಲ. ವರದಿಗಳ ಪ್ರಕಾರ, ಈ ಮಾಹಿತಿಯೊಂದಿಗೆ 2021 ಡಿಸೆಂಬರ್ 30ರಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ವಿದ್ಯಾರ್ಥಿ ಅಂಗ ‘ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ’ ಮತ್ತು ಜಮಾತ್-ಇ-ಇಸ್ಲಾಮಿ-ಇ-ಹಿಂದ್​ನ ವಿದ್ಯಾರ್ಥಿ ವಿಭಾಗ ಸ್ಟೂಡೆಂಟ್ಸ್, ಇಸ್ಲಾಮಿಕ್ ಆರ್ಗನೈಜೇಷನ್ (ಎಸ್​ಇಓ) ಸಂಸ್ಥೆಯ ಸದಸ್ಯರು ಉಡುಪಿಯ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜಿನ ಆಡಳಿತವನ್ನು ಸಂರ್ಪಸಿ, ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ತರಗತಿಗಳಿಗೆ ಹಾಜರಾಗಲು ಅನುಮತಿ ಕೇಳಿದ ವರದಿಯಿದೆ. ಅದರ ಮರುದಿನವೇ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜ್​ಗೆ ಬಂದದ್ದು ಅವರ ಕೃತ್ಯದ ಹಿಂದೆ ಸಿಎಫ್​ಐ ಮತ್ತು ಎಸ್​ಇಓ ಇರುವ ಸ್ಪಷ್ಟ ಸೂಚನೆಯಾಗಿದೆ ಎಂದು ಊಹಿಸಬಹುದಾಗಿದೆ. ಜತೆಗೆ, ಕಾಲೇಜಿನ ಆಡಳಿತ ಮಂಡಳಿ ಪ್ರವೇಶ ನಿರಾಕರಿಸಿದ್ದನ್ನು ಪ್ರತಿಭಟಿಸಿ ವಿದ್ಯಾರ್ಥಿನಿಯರು ಎರಡೇ ದಿನಗಳಲ್ಲಿ ಉಡುಪಿಯ ಜಿಲ್ಲಾಧಿಕಾರಿ ಬಳಿ ದೂರು ಒಯ್ದದ್ದು, ಆಗ ಅವರ ಜತೆ ಮುಸ್ಲಿಂ ಸಂಘಟನೆಯ ಸದಸ್ಯರೂ ಇದ್ದದ್ದು ಇಡೀ ಹಿಜಾಬ್ ಪ್ರಕರಣ ವ್ಯವಸ್ಥಿತ ಕಾರ್ಯಯೋಜನೆ ಎಂಬ ಸೂಚನೆ ನೀಡುತ್ತವೆ.

ಹಿಜಾಬ್ ವಿವಾದದ ಹಿಂದಿರುವುದು ಪಿಎಫ್​ಐ ಮತ್ತು ಜಮಾತ್-ಇ-ಇಸ್ಲಾಮಿ-ಇ-ಹಿಂದ್ ಎನ್ನುವ ಈ ವಿವಾದ ಉಡುಪಿಗಷ್ಟೇ ಸೀಮಿತವಾದುದಲ್ಲ, ಅದು ತಂದೊಡ್ಡಲಿರುವ ಸಮಸ್ಯೆ ರಾಷ್ಟ್ರೀಯ ಸುರಕ್ಷೆಯನ್ನೂ ಒಳಗೊಳ್ಳುವಷ್ಟು ಘಾತಕವಾದುದು. ಪಿಎಫ್​ಐ ಕೇರಳ ಮತ್ತು ಕರ್ನಾಟಕದಲ್ಲಿ ಕೋಮು ಸೌಹಾರ್ದವನ್ನು ಹಾಳುಮಾಡುವ ಹಾಗೂ ಕೋಮುಹಿಂಸಾಚಾರಕ್ಕೆ ಪ್ರಚೋದನೆ ನೀಡುವ ಆರೋಪಕ್ಕೊಳಗಾಗಿದೆ. ಅದರ ಇಬ್ಬರು ಸದಸ್ಯರು ಭಯೋತ್ಪಾದಕ ಷಡ್ಯಂತ್ರದ ಆರೋಪದಲ್ಲಿ ಉತ್ತರ ಪ್ರದೇಶದಲ್ಲಿ ಬಂಧನಕ್ಕೊಳಗಾಗಿದ್ದಾರೆ. ಇನ್ನು

ಜಮಾತ್ ಬಗ್ಗೆ ಹೇಳುವುದಾದರೆ ಫೆಬ್ರವರಿ 2019ರ ಪುಲ್ವಾಮಾ ದಾಳಿಗೆ ಪ್ರೇರೇಪಣೆ ಹಾಗೂ ಧನಸಹಾಯ ನೀಡಿದ ಆರೋಪದ ಮೇಲೆ 2019 ಫೆಬ್ರವರಿ 28ರಂದು ಕೇಂದ್ರ ಸರ್ಕಾರ ಅದನ್ನು ಬಹಿಷ್ಕರಿಸಿದೆ. ಇದೇ ಜಮಾತ್ ಭಯೋತ್ಪಾದಕ ಸಂಘಟನೆ ಹಿಜ್ಬುಲ್ ಮುಜಾಹಿದೀನ್​ಗೂ ಧನಸಹಾಯ ನೀಡುತ್ತಿದೆಯೆಂದು ವರದಿಗಳಿವೆ. ಇದರ ಮುನ್ನೂರೈವತ್ತರಷ್ಟು ಸದಸ್ಯರು ಬಂಧನದಲ್ಲಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆಯಡಿಯಲ್ಲಿ ಶ್ರೀನಗರದ ಬ್ಯಾಂಕ್​ಗಳಲ್ಲಿದ್ದ ಜಮಾತ್​ನ ಎಪ್ಪತ್ತರಷ್ಟು ಖಾತೆಗಳನ್ನು ಬಂದ್ ಮಾಡಲಾಗಿದೆ ಮತ್ತು ಅವುಗಳಿಂದ 52 ಕೋಟಿ ರೂ. ಹಣವನ್ನು ಅಮಾನತ್ತು ಮಾಡಲಾಗಿದೆ.

ಈ ಎರಡು ಸಂಘಟನೆಗಳ ಹಿಂದೆ ವಿದೇಶೀ ಶಕ್ತಿಗಳೂ ಇವೆ ಮತ್ತು ಇದೇ ಹಿಜಾಬ್ ವಿವಾದದಲ್ಲಿ ಅವುಗಳ ಪಾತ್ರವೂ ಇದೆ ಎಂಬ ಆತಂಕಕಾರಿ ಮಾಹಿತಿಗಳೂ ಈಗ ಲಭ್ಯವಿವೆ. ಕೇರಳದ ಪತ್ರಕರ್ತ ಎಂ.ಪಿ. ಬಶೀರ್ ಕಳೆದ ಜುಲೈನಲ್ಲಿ ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಭಾರತದಲ್ಲಿ ಇಸ್ಲಾಮಿಕ್ ವಸ್ತ್ರಸಂಹಿತೆ ಅನುಷ್ಠಾನಗೊಳಿಸಲು ನೀಡುತ್ತಿರುವ ಹಣವನ್ನು ಇನ್ನೂ ಹೆಚ್ಚಿಸುವಂತೆ ಸೌದಿ ಅರೇಬಿಯಾದ ಕಿಂಗ್ ಅಬ್ದುಲ್ ಅಜೀಜ್ ವಿಶ್ವವಿದ್ಯಾಲಯಕ್ಕೆ ಜಮಾತ್ ಪತ್ರದ ಮೂಲಕ ಮನವಿ ಸಲ್ಲಿಸಿತ್ತು ಮತ್ತು ಅ ಪ್ರಕಾರ ಸೌದಿ ವಿಶ್ವವಿದ್ಯಾಲಯದಿಂದ ಹಣ ಸಂದಾಯವೂ ಆಗಿತ್ತು!

ವಾಸ್ತವವಾಗಿ ಭಾರತದಲ್ಲಿ ಸೌದಿ ಹಣದ ದುಷ್ಪ್ರಭಾವದ ಇತಿಹಾಸವೇ ಇದೆ. ಮೇ 2015ರಲ್ಲೇ ವಿಕಿಲೀಕ್ಸ್ ಬಯಲುಮಾಡಿದ ಮಾಹಿತಿಗಳು ಕಟ್ಟಾ ಸುನ್ನಿ ವಹಾಬಿ ಪಂಥವನ್ನು ಭಾರತದಲ್ಲಿ ಜನಪ್ರಿಯಗೊಳಿಸಲು ಸೌದಿ ಸರ್ಕಾರ ಲಕ್ಷಾಂತರ ರಿಯಾಲ್​ಗಳನ್ನು ಒದಗಿಸುತ್ತಿರುವುದರ ವಿವರಗಳನ್ನು ನೀಡಿದ್ದವು. ಅಲ್ಲಿಯವರೆಗೆ ಸೌದಿ ಅರೇಬಿಯಾದಿಂದ ಭಾರತಕ್ಕೆ ಬಂದಿರುವ ಸುಮಾರು 60 ಸಾವಿರ ಕೇಬಲ್​ಗಳು ಹೇಳುವ ಪ್ರಕಾರ ಸೌದಿ ಹಣ ಬಳಕೆಯಾಗುತ್ತಿದ್ದದ್ದು ಭಾರತದ ವಿವಿಧ ರಾಜ್ಯಗಳಲ್ಲಿ ಮುಖ್ಯವಾಗಿ ಕೇರಳ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಪಶ್ಚಿಮ ಬಂಗಾಳಗಳಲ್ಲಿ ಸುನ್ನಿ ವಹಾಬಿ ಧಾರ್ವಿುಕ ಸಂಸ್ಥೆಗಳನ್ನು, ಮದರಸಾಗಳನ್ನು, ಮುಸ್ಲಿಮ್ ಎನ್​ಜಿಓಗಳನ್ನು ಸ್ಥಾಪಿಸುವುದಕ್ಕಾಗಿ. ಸೌದಿಯಿಂದ ಧನಸಹಾಯ ಪಡೆದಿರುವ, ಸಹಾಯಕ್ಕಾಗಿ ಅರ್ಜಿ ಸಲ್ಲಿಸಿರುವ ಭಾರತದ ಸಂಘಸಂಸ್ಥೆಗಳ ಪಟ್ಟಿಯನ್ನೂ ವಿಕಿಲೀಕ್ಸ್ ಬಯಲುಮಾಡಿತ್ತು. ಸೌದಿ ಸರ್ಕಾರವೇ ಕೇರಳ ಒಂದರಲ್ಲೇ ನಾಲ್ಕೂವರೆ ಲಕ್ಷ ರಿಯಾಲ್​ಗಳನ್ನು ಸುನ್ನಿ ಸಂಸ್ಥೆಗಳಿಗೆ ನೀಡಿತ್ತು. ಹಾಗೆಯೇ, ಉತ್ತರ ಪ್ರದೇಶದಲ್ಲಿ ಒಂದು ಮದರಸಾ ಮತ್ತು ಮುಸ್ಲಿಂ ಹೆಣ್ಣುಮಕ್ಕಳಿಗಾಗಿ ವೃತ್ತಿಪರ ಶಿಕ್ಷಣಸಂಸ್ಥೆ ಸ್ಥಾಪನೆಗಾಗಿ 75 ಸಾವಿರ ರಿಯಾಲ್​ಗಳೂ ಸಂದಿದ್ದವು.

ಸೌದಿ ಹಣ ಅಧಿಕ ಪ್ರಮಾಣದಲ್ಲಿ ಬಂದಿರುವುದು ಕೇರಳಕ್ಕೆ. ಇದರ ದುಷ್ಪರಿಣಾಮಗಳನ್ನು ಕೇಂದ್ರ ಗೃಹಮಂತ್ರಾಲಯದ ಅಧಿಕಾರಿಯೊಬ್ಬರು ಹೀಗೆ ವಿವರಿಸಿದ್ದರು: ‘ಸೌದಿ ಅರೇಬಿಯಾದಿಂದ ವಹಾಬಿ ಬೋಧಕರು ಕೇರಳಕ್ಕೆ ಬರುವುದು ಕಳೆದ ಮೂರುನಾಲ್ಕು ವರ್ಷಗಳಲ್ಲಿ ನಿರಂತರವಾಗಿ ಏರುತ್ತಿದೆ. ತೀಕ್ಷ್ಣ ಮೂಲಭೂತವಾದವನ್ನು ಕೇರಳದಲ್ಲಿ ಕಾಣಬಹುದಾಗಿದೆ. ಒಸಾಮಾ ಬಿನ್ ಲಾಡೆನ್ ಸತ್ತಾಗ ಅವನಿಗೆ ಸಂತಾಪ ಸೂಚಿಸುವ ಪೋಸ್ಟರ್​ಗಳು ಕಾಣಿಸಿಕೊಂಡ ಒಂದೇಒಂದು ರಾಜ್ಯ ಕೇರಳ. ಅಜ್ಮಲ್ ಕಸಬ್ ನೇಣಿಗೇರಿದಾಗ ಕೇರಳದಲ್ಲಿ ಅವನಿಗಾಗಿ ಪ್ರಾರ್ಥನೆಗಳನ್ನೂ ಸಲ್ಲಿಸಲಾಯಿತು.’

ಇದೇ ಬೆಳವಣಿಗೆ ಇಂದು ಕರ್ನಾಟಕದಲ್ಲೂ ಕಾಣಿಸಿಕೊಂಡಿದೆ. ವಿದ್ಯಾರ್ಥಿನಿಯರು ಏಕಾಏಕಿ ಹಿಜಾಬ್ ಧರಿಸಿ ಕಾಲೇಜಿಗೆ ಬಂದದ್ದು, ಅವರ ಬೇಡಿಕೆಗೆ ಪೂರಕವಾಗಿ ಧಾರ್ವಿುಕ ಸಂಘಟನೆಗಳು ನಿಂತದ್ದು, ಆ ಸಂಘಟನೆಗಳ ಚಟುವಟಿಕೆಗಳು ರಾಷ್ಟ್ರಹಿತಕ್ಕೆ ಮಾರಕವಾದುವು ಎಂಬ ಆರೋಪಗಳು ಈಗಾಗಲೇ ಇರುವುದು ಮತ್ತು ಅವುಗಳ ಮೇಲೆ ಕಾನೂನಿನ ಕತ್ತಿಯೂ ಬೀಸಿರುವುದು ಇಡೀ ಪ್ರಕರಣ ಮೇಲೆ ಕಾಣುವುದಕ್ಕಿಂತಲೂ ಭಯಾನಕವಾದದ್ದು ಎಂಬ ಸುಳಿವು ನೀಡುತ್ತದೆ. ಇದು ಹೀಗೇ ಮುಂದುವರಿದರೆ ಅದು ರಾಷ್ಟೀಯ ಸುರಕ್ಷೆಗೇ ಮಾರಕವಾಗಿ ಪರಿಣಮಿಸುವ ಅಪಾಯವಿದೆ. ಆದಾಗ್ಯೂ, ಅಂತಿಮವಾಗಿ ಆ ಶಕ್ತಿಗಳು ಸೋಲುವುದು ನಿಶ್ಚಿತ. ಆದರೆ ಆ ಹಾದಿಯಲ್ಲಿ ಬಲಿಪಶುವಾಗಲಿರುವವರು ಇಂದು ‘ಕಿತಾಬ್ ಕೆ ಪೆಹಲೆ ಹಿಜಾಬ್’ ಎಂದು ಕೂಗುತ್ತಿರುವ ವಿದ್ಯಾರ್ಥಿನಿಯರು. ಹಿಜಾಬ್​ನಾಚೆಗೂ ಬದುಕು ಇದೆ, ಅದು ವಿಶಾಲವಾಗಿದೆ ಎಂದು ಅವರಿಗೆ ಅರಿವಾಗುವ ಹೊತ್ತಿಗೆ ಆಧುನಿಕ ವಿದ್ಯೆ ಅವರ ಕೈತಪ್ಪಿಹೋಗಿರುತ್ತದೆ, ಕೈಗೆ ಸಿಕ್ಕಿದ ಹಿಜಾಬ್ ಇಂದಿನ ಅಗತ್ಯಗಳಿಗೆ ಸಂಬಂಧಿಸಿದಂತೆ ಅವರಿಗೇನೂ ಪ್ರಯೋಜನಕ್ಕೆ ಬರುವುದಿಲ್ಲ. ಇದು ಅವರ ಮುಂದಿರುವ ಕವಲುಹಾದಿ. ಅಲ್ಲಿ ಮಾಡುವ ಆಯ್ಕೆ ಅವರ ಮುಂದಿನ ಭವಿಷ್ಯವನ್ನೂ, ಇಂದಿನ ಜಗತ್ತಿನಲ್ಲಿ ಅವರ ಸ್ಥಾನವನ್ನೂ ನಿರ್ಧರಿಸುತ್ತದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net