ಹಿಲಾಲ್-ಎ-ಪಾಕಿಸ್ತಾನ್ ದಿಲ್ಲಿ ಕೋ ಹಿಲಾಯೇಂಗೇ? : ಪ್ರೇಮಶೇಖರ ಅವರ ಜಗದಗಲ ಅಂಕಣ

biden
Published on

ಅಮೆರಿಕದ ಹೊಸ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿರುವ ಡೆಮಾಕ್ರಟಿಕ್ ಅಭ್ಯರ್ಥಿಗಳಾದ ಜೋ ಬೈಡೆನ್ ಮತ್ತು ಕಮಲಾ ಹ್ಯಾರಿಸ್ ಇಬ್ಬರಿಗೂ ಭಾರತದೊಂದಿಗೆ ಅವರವರದೇ ಆದ ಸಂಬಂಧಗಳಿವೆ. ಬೈಡೆನ್ 2013ರಲ್ಲಿ ಮುಂಬೈನಲ್ಲಿ ಮತ್ತು ಎರಡು ವರ್ಷಗಳ ನಂತರ ವಾಷಿಂಗ್ಟನ್​ನಲ್ಲಿ ಹೇಳಿದ ಪ್ರಕಾರ, ಜಾರ್ಜ್ ಬೈಡೆನ್ ಎಂಬ ಅವರ ಪೂರ್ವಿಕರಲ್ಲೊಬ್ಬರು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕ್ಯಾಪ್ಟನ್ ಆಗಿದ್ದರಂತೆ. ಅವರು ಭಾರತೀಯ ಸ್ತ್ರೀಯೊಬ್ಬರನ್ನೇ ವಿವಾಹವಾಗಿ ಮುಂಬೈಯಲ್ಲೇ ನೆಲೆಸಿದರಂತೆ. ಅವರ ವಂಶಸ್ಥರು ಈಗಲೂ ಮುಂಬೈನಲ್ಲಿದ್ದಾರಂತೆ. ಜೋ ಬೈಡೆನ್ ಹೇಳಿದ ಪ್ರಕಾರ ಮುಂಬೈಯಲ್ಲಿ ಐವರು ‘ಬೈಡೆನ್ ’ಗಳಿದ್ದಾರೆ!

ಕಮಲಾ ಹ್ಯಾರಿಸ್​ರಿಗೆ ಭಾರತದೊಂದಿಗಿರುವುದು ನೇರ ರಕ್ತಸಂಬಂಧ! ಅವರ ತಾಯಿ ಶ್ಯಾಮಲಾ ಗೋಪಾಲನ್ 1958ರಲ್ಲಿ ಅಮೆರಿಕಕ್ಕೆ ಹೋದ ಭಾರತೀಯರು. ಕಮಲಾರ ಭಾರತ-ಸಂಬಂಧ ಅಷ್ಟಕ್ಕೇ ನಿಂತುಹೋಗುತ್ತದೆ. ಅವರ ತಂದೆ ಜಮೈಕಾದ ವರ್ಣೀಯರು. ತನ್ನ ತಂದೆಯ ಜನಾಂಗೀಯ ಹಾಗೂ ಧಾರ್ವಿುಕ ಅಸ್ಮಿತೆಗಳನ್ನು ಅಪ್ಪಿಕೊಂಡಿರುವ ಕಮಲಾ ತಮ್ಮನ್ನು ವರ್ಣೀಯ ಅಂದರೆ ಕಪು್ಪಜನಾಂಗದವರು ಎಂದು ಕರೆದುಕೊಳ್ಳುತ್ತಾರೆ. ಜತೆಗೆ, ಅವರು ನಿಷ್ಠಾವಂತ ಕ್ರಿಶ್ಚಿಯನ್. ಧರ್ಮಪ್ರಚಾರಕ ಸಂಘಟನೆಗಳೊಂದಿಗೆ ಸಂಬಂಧ ಹೊಂದಿದ್ದಾರೆ ಹಾಗೂ ಭಾರತ ಸೇರಿ ಜಗತ್ತಿನಾದ್ಯಂತ ಅವುಗಳ ಮತಾಂತರ ಕೃತ್ಯಗಳ ಬೆಂಬಲಿಗರಾಗಿದ್ದಾರೆ.

ಬೈಡೆನ್-ಹ್ಯಾರಿಸ್ ಜೋಡಿಯ ಭಾರತದೊಂದಿಗಿನ ಈ ಬಗೆಯ ವೈಯಕ್ತಿಕ ಸಂಬಂಧಗಳು, ಅಮೆರಿಕದ ಅತ್ಯುಚ್ಚಸ್ತರೀಯ ಆಡಳಿತಗಾರರಾಗಿ, ಈ ದೇಶದೊಂದಿಗೆ ಅವರು ರೂಪಿಸಬಹುದಾದ ನೀತಿನಿಲುವುಗಳ ಮೇಲೆ ಪ್ರಭಾವ ಬೀರಬಹುದೇ ಎಂಬ ಚರ್ಚೆ ಅಲ್ಲಲ್ಲಿ ಕಾಣಬರುತ್ತಿದೆ. ಒಂದಷ್ಟು ಆಶಾವಾದ, ಒಂದಷ್ಟು ನಿರಾಶಾವಾದ ಸದ್ಯಕ್ಕೆ ನಮಗೆ ಸಿಗುತ್ತಿರುವ ಚಿತ್ರಗಳು. ಈ ಹಿನ್ನೆಲೆಯೊಂದಿಗೆ ಮುಂದಿನ ನಾಲ್ಕು ವರ್ಷಗಳಲ್ಲಿ ಭಾರತ-ಅಮೆರಿಕ ಸಂಬಂಧಗಳು ಯಾವ ಹಾದಿಯಲ್ಲಿ ಸಾಗಬಹುದೆಂಬ ಒಂದು ವಸ್ತುನಿಷ್ಠ ಚಿತ್ರಣ ಪಡೆದುಕೊಳ್ಳಲು ಪ್ರಯತ್ನಿಸುವುದು ಈ ಲೇಖನದ ಉದ್ದೇಶ.

ಬಹುತೇಕ ಶ್ವೇತಭವನ ನಿವಾಸಿಗಳಿಗೆ ವಿರುದ್ಧವಾಗಿ ಬೈಡೆನ್-ಹ್ಯಾರಿಸ್ ಜೋಡಿಗೆ ರಾಜಕೀಯದಲ್ಲಿ ಸಾಕಷ್ಟು ಅನುಭವವಿದೆ. ಜೋ ಬೈಡೆನ್ ವೃತ್ತಿಯೇ ರಾಜಕೀಯ ಮತ್ತವರು ಅದರಲ್ಲಿ ಸರಿಸುಮಾರು ಅರ್ಧ ಶತಮಾನವನ್ನೇ ಕಳೆದಿದ್ದಾರೆ. ಅವರು ಕಾಂಗ್ರೆಸ್​ನ ಮೇಲ್ಮನೆ ಸೆನೆಟ್ ಸದಸ್ಯರಾಗಿ ಆರು ಅವಧಿಗಳನ್ನು ಕಳೆದಿದ್ದಾರೆ, ಎರಡು ಬಾರಿ ‘ಸೆನೆಟ್ ಕಮಿಟಿ ಆನ್ ಫಾರಿನ್ ರಿಲೇಷನ್ಸ್’ನ ಅಧ್ಯಕ್ಷರಾಗಿದ್ದರು. ಅವರು 2009-17ರ ಅವಧಿಯಲ್ಲಿ ಎರಡು ಬಾರಿಗೆ ರಾಷ್ಟ್ರದ ಉಪಾಧ್ಯಕ್ಷರಾಗಿದ್ದೂ ಆಗಿದೆ. ಎಪ್ಪತ್ತೆಂಟರ ಹಿರಿವಯಸ್ಸಿನ ಬೈಡೆನ್​ರಿಗಿಂತ ಇಪ್ಪತ್ತೆರಡು ವರ್ಷಗಳು ಕಿರಿಯರಾದ ಐವತ್ತಾರರ ಹ್ಯಾರಿಸ್​ರ ರಾಜಕೀಯಾನುಭವ ಸಹಜವಾಗಿಯೇ ಕಡಿಮೆ. ಅವರು ಕ್ಯಾಲಿಫೋರ್ನಿಯಾ ರಾಜ್ಯದಿಂದ ಸೆನೆಟ್​ಗೆ ಆಯ್ಕೆಯಾದದ್ದು ನಾಲ್ಕು ವರ್ಷಗಳ ಹಿಂದೆ ಹಾಗೂ ಅವರಿಗೆ ಪ್ರಮಾಣವಚನ ಬೋಧಿಸಿದ್ದು ಆಗ ಉಪಾಧ್ಯಕ್ಷರಾಗಿದ್ದ ಇದೇ ಬೈಡೆನ್. ಹ್ಯಾರಿಸ್ ಸೆನೆಟ್​ನಲ್ಲಿ ಕಡಿಮೆ ಅವಧಿ ಕಳೆದಿರಬಹುದು, ಆದರೆ ಅವರ ಹೆಚ್ಚುಗಾರಿಕೆಯೆಂದರೆ ಬೈಡೆನ್ ಅರವತ್ತಾರನೇ ವಯಸ್ಸಿನಲ್ಲಿ ಉಪಾಧ್ಯಕ್ಷರಾದರೆ ಹ್ಯಾರಿಸ್ ಐವತ್ತಾರನೇ ವಯಸ್ಸಿನಲ್ಲೇ ಆ ಸ್ಥಾನಕ್ಕೇರಿದ್ದಾರೆ. ಹೀಗಾಗಿ ಅವರು ಜಗತ್ತಿನ ಶಕ್ತಿಶಾಲಿ ದೇಶದ ಅತ್ಯುಚ್ಚ ಆಡಳಿತವಲಯದಲ್ಲಿ ಬೈಡೆನ್​ರಿಗಿಂತಲೂ ಅಧಿಕ ಕಾಲ ಕಳೆಯುವ ಅವಕಾಶವಿದೆ. ಯಾವುದೇ ಕಾರಣದಿಂದ ಬೈಡೆನ್ ಅಧ್ಯಕ್ಷಾವಧಿ ಮೊಟಕಾದರೆ ಹ್ಯಾರಿಸ್ ಅರವತ್ತು ತುಂಬುವ ಮೊದಲೇ ಅಮೆರಿಕದ ಮೊಟ್ಟಮೊದಲ ಅಧ್ಯಕ್ಷೆಯಾಗಿ ಇತಿಹಾಸ ನಿರ್ವಿುಸುತ್ತಾರೆ. ಈ ಅಂಶಗಳು ಬೈಡೆನ್-ಹ್ಯಾರಿಸ್ ಆಡಳಿತವನ್ನು ಮುಖ್ಯವಾಗಿಸುತ್ತವೆ ಮತ್ತು ಅವರಿಬ್ಬರೂ ಭಾರತದೊಂದಿಗಿನ ಅಮೆರಿಕದ ಸಂಬಂಧಗಳನ್ನು ಯಾವ ಬಗೆಯಲ್ಲಿ ನಿರ್ದೇಶಿಸುತ್ತಾರೆ ಎನ್ನುವುದು ನಮಗೆ ಮುಖ್ಯವಾಗುತ್ತದೆ.

ಮೊದಲಿಗೆ ಬೈಡೆನ್ ಭಾರತ-ನೀತಿ ವಿಕಾಸ ಹೊಂದಿದ ಬಗೆಯನ್ನು ಶೋಧಿಸೋಣ. 1973ರಲ್ಲಿ ಮೂವತ್ತರ ಕಿರಿಯ ವಯಸ್ಸಿನಲ್ಲೇ ಸೆನೆಟರ್ ಆದ ಬೈಡೆನ್ ರಾಜಕೀಯ ಬದುಕಿನ ಪ್ರಾರಂಭಿಕ ವರ್ಷಗಳಲ್ಲಿ ಹೇಳಿಕೊಳ್ಳುವ ಸಾಧನೆ ಪ್ರದರ್ಶಿಸಲಿಲ್ಲ. ಬಹುಶಃ ಸೆನೆಟ್​ಗೆ ಆಯ್ಕೆಯಾಗುತ್ತಿದ್ದಂತೇ ಅಪಘಾತದಲ್ಲಿ ಪ್ರೀತಿಯ ಪತ್ನಿ ಮತ್ತು ಎಳೆಯ ಮಗಳನ್ನು ಕಳೆದುಕೊಂಡದ್ದು, ಗಾಯಗೊಂಡ ಮಗ ಶುಶ್ರೂಷೆ ಪಡೆಯುತ್ತಿದ್ದ ಆಸ್ಪತ್ರೆಯ ವಾರ್ಡ್​ನಲ್ಲೇ ಪ್ರಮಾಣವಚನ ಸ್ವೀಕರಿಸಿದ್ದು; ಪುಟ್ಟ ಮಗನೊಂದಿಗೆ ರಾತ್ರಿಗಳನ್ನಾದರೂ ಕಳೆಯುವ ಬಯಕೆ ಮತ್ತು ಅವನಿಗೆ ಕಥೆಗಳನ್ನು ಓದಿಹೇಳುವ ಆಸೆಯಿಂದ ವಾಷಿಂಗ್ಟನ್​ನಲ್ಲಿ ನೆಲೆಸದೆ, ರಾಜಧಾನಿ ಮತ್ತು ಡೆಲವೇರ್ ನಡುವೆ ದಿನವೂ ನಾಲ್ಕು ಗಂಟೆಗಳ ರೈಲುಪ್ರಯಾಣದಲ್ಲಿ ಹಲವು ವರ್ಷಗಳನ್ನು ಕಳೆದದ್ದು ಇದಕ್ಕೆ ಕಾರಣವಿರಬಹುದು.

ಮುಂದಿನ ದಶಕಗಳಲ್ಲಿ ಬೈಡೆನ್ ಸೆನೆಟ್ ಚಟುವಟಿಕೆಗಳಲ್ಲಿ ತೊಡಗಿಕೊಳ್ಳತೊಡಗಿದರು ಮತ್ತು ಭಾರತಕ್ಕೇ ನೇರವಾಗಿ ಸಂಬಂಧಿಸಿದಂತೆ ಮಹತ್ವದ ಆದರೆ ಕಠಿಣ ನಿಲುವೊಂದನ್ನು ಅವರು ಪ್ರದರ್ಶಿಸಿದ್ದು 1992ರಲ್ಲಿ. ತನ್ನ ಬಾಹ್ಯಾಕಾಶ ಸಾಧನೆಯನ್ನು ತೀವ್ರಗೊಳಿಸಲು ಕ್ರಿಯೋಜೆನಿಕ್ ರಾಕೆಟ್ ಎಂಜಿನ್ ತಂತ್ರಜ್ಞಾನವನ್ನು ಸೋವಿಯೆತ್ ಯೂನಿಯನ್​ನಿಂದ ಪಡೆದುಕೊಳ್ಳಲು ಭಾರತ 1991ರಲ್ಲಿ ಆ ದೇಶದ ಗ್ಲಾಸ್​ಕಾಸ್ಮೋಸ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿತು. ಆ ವ್ಯವಹಾರದ ಮೂಲಕ ಭಾರತದಿಂದ ಬರಲಿದ್ದ 250 ಮಿಲಿಯನ್ ಡಾಲರ್​ಗಳು ಅಂದು ಆರ್ಥಿಕವಾಗಿ ದಿವಾಳಿಯಾಗಿದ್ದ ಆ ಕಮ್ಯೂನಿಸ್ಟ್ ದೈತ್ಯನ ಬಾಯಿಗೆ ನಾಲ್ಕು ದಿನಗಳ ಗಂಜಿಯನ್ನಾದರೂ ಒದಗಿಸುವಂತಿದ್ದ ಕಾರಣ ಮಿಖಾಯಿಲ್ ಗೋರ್ಬಚೆವ್ ಸರ್ಕಾರ ತಂತ್ರಜ್ಞಾನವನ್ನು ಭಾರತಕ್ಕೆ ಮಾರಲು ಉತ್ಸುಕತೆಯಿಂದಲೇ ಮುಂದೆ ಬಂದಿತ್ತು. ಅದಕ್ಕೆ ತಡೆಯೊಡ್ಡಿದ್ದು ಇದೇ ಬೈಡೆನ್.

ಕಮ್ಯೂನಿಸ್ಟ್ ಅರ್ಥವ್ಯವಸ್ಥೆಯನ್ನು ಬಂಡವಾಳಶಾಹಿ ಮಾರುಕಟ್ಟೆ ಅರ್ಥವ್ಯವಸ್ಥೆಗೆ ರೂಪಾಂತರಗೊಳಿಸಲು ಹೊರಟಿದ್ದ ಗೋರ್ಬಚೆವ್​ರ ಆಸೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದ ಅಮೆರಿಕ 24 ಬಿಲಿಯನ್ ಡಾಲರ್​ಗಳ ಸಹಾಯಧನ ನೀಡಲು ಮುಂದೆ ಬಂದಿತ್ತು. ಆ ಬಗ್ಗೆ ನಿರ್ಧಾರ ತೆಗೆದುಕೊಂಡದ್ದು ಸೆನೆಟ್. ಸೆನೆಟರ್ ಬೈಡೆನ್​ರ ಪಾತ್ರ ಆರಂಭವಾಗುವುದು ಇಲ್ಲಿ.

ಕ್ರಿಯೋಜೆನಿಕ್ ತಂತ್ರಜ್ಞಾನಕ್ಕಾಗಿ ಭಾರತ-ಸೋವಿಯೆತ್ ಒಪ್ಪಂದವಾದ ತುಸುವೇ ಸಮಯದಲ್ಲಿ ಸೋವಿಯೆತ್ ಯೂನಿಯನ್ ಕುಸಿದು ಹದಿನೈದು ಚೂರುಗಳಾಗಿ ಇತಿಹಾಸ ಸೇರಿತು. ಆದರೆ ಅದರ ಉತ್ತರಾಧಿಕಾರಿಯಾಗಿ, ಅದರ ಎಲ್ಲ ಅಂತಾರಾಷ್ಟ್ರೀಯ ಒಪ್ಪಂದಗಳನ್ನು ಮುಂದುವರಿಸುವ ಜವಾಬ್ದಾರಿ ಹೊತ್ತುಕೊಂಡ ರಷ್ಯಾ, ಭಾರತದೊಂದಿಗಿನ ಒಪ್ಪಂದಕ್ಕೆ ಅನುಗುಣವಾಗಿ ನಡೆದುಕೊಳ್ಳುವ ನಿರ್ಧಾರ ತೆಗೆದುಕೊಂಡಿತು. ಆದರೆ ಬೈಡೆನ್​ಗೆ ಇದು ಸಮ್ಮತವಾಗಲಿಲ್ಲ. ಭಾರತ-ರಷ್ಯಾ ಒಪ್ಪಂದವನ್ನು ‘ಅಪಾಯಕಾರಿ’ ಎಂದು ಬಣ್ಣಿಸಿದ ಬೈಡೆನ್, ಅಮೆರಿಕದಿಂದ ಸಹಾಯಧನ ಮುಂದುವರಿಯಬೇಕಾದರೆ ಭಾರತದೊಂದಿಗಿನ ಒಪ್ಪಂದವನ್ನು ರಷ್ಯಾ ರದ್ದುಗೊಳಿಸಲೇಬೇಕೆಂದು ಆಗ್ರಹಿಸಿದರು ಮತ್ತು ಅದಕ್ಕನುಗುಣವಾಗಿ, ಸಹಾಯಧನಕ್ಕೆ ಸಂಬಂಧಿಸಿದಂತೆ ಸೆನೆಟ್ ತೆಗೆದುಕೊಂಡಿದ್ದ ನಿರ್ಣಯದಲ್ಲಿ ತಿದ್ದುಪಡಿಯಾಗಬೇಕೆಂದು ವಾದಿಸಿ ಮಸೂದೆಯೊಂದನ್ನು ಮಂಡಿಸಿದರು. ಅವರು ಸೂಚಿಸಿದ ತಿದ್ದುಪಡಿಯನ್ನು ಸೆನೆಟ್ ಒಪ್ಪಿಕೊಂಡ ಪರಿಣಾಮವಾಗಿ ಅಮೆರಿಕದ ಸಹಾಯಧನ ಅಥವಾ ಭಾರತದೊಂದಿಗಿನ ಒಪ್ಪಂದಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಇಕ್ಕಟ್ಟಿಗೆ ಬೋರಿಸ್ ಯೆಲ್ತ್​ಸಿನ್​ರ ರಷ್ಯಾ ಸಿಲುಕಿತು. ಭಾರತಕ್ಕೆ ತಂತ್ರಜ್ಞಾನ ಮಾರುವುದಿಂದ ಬರಬಹುದಾದ ಹಣಕ್ಕಿಂತಲೂ ಅಮೆರಿಕದಿಂದ ಬರುತ್ತಿದ್ದ ಸಹಾಯಧನ ಅದೆಷ್ಟೋ ಪಟ್ಟು ಅಧಿಕವಾಗಿದ್ದ ಕಾರಣ ಭಾರತದೊಂದಿಗಿನ ಒಪ್ಪಂದವನ್ನು ರಷ್ಯಾ ರದ್ದುಗೊಳಿಸಿತು.

ಕ್ರಿಯೋಜೆನಿಕ್ ಎಂಜಿನ್ ತಂತ್ರಜ್ಞಾನ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಖಂಡಾಂತರ ಕ್ಷಿಪಣಿ (ಇಂಟರ್ ಕಾಂಟಿನೆಂಟಲ್ ಬ್ಯಾಲೆಸ್ಟಿಕ್ ಮಿಸೈಲ್) ತಯಾರಿಕೆಗೆ ಬಳಕೆಯಾಗುವ ಸಾಧ್ಯತೆ ಇರಲಿಲ್ಲ. ಆದಾಗ್ಯೂ ಭಾರತ-ರಷ್ಯಾ ಒಪ್ಪಂದವನ್ನು ಬೈಡೆನ್ ವಿರೋಧಿಸಿದ್ದೇಕೆ ಎಂದು ಅರ್ಥವಾಗುವುದಿಲ್ಲ. ನನಗೆ ಹೊಳೆಯುವ ಒಂದೇಒಂದು ಕಾರಣವೆಂದರೆ ಬೈಡೆನ್​ರ ಪಾಕಿಸ್ತಾನ-ಪ್ರೀತಿ ಅಷ್ಟೇ. ಆ ದಿನಗಳಲ್ಲಿ ಪಾಕಿಸ್ತಾನ ಹಲವಾರು ಅಮೆರಿಕನ್ ಸಂಸದರನ್ನು ಹಣಕೊಟ್ಟು ಸಾಕುತ್ತಿತ್ತು ಮತ್ತು ಅವರನ್ನು ತನ್ನ ಪರವಾಗಿ ಅಮೆರಿಕದ ಸಂಸತ್ತಿನಲ್ಲಿ ಲಾಬಿ ಮಾಡಲು ಬಳಸಿಕೊಳ್ಳುತ್ತಿತ್ತು. ಇಂಡಿಯಾನಾ ಪ್ರತಿನಿಧಿ ಡ್ಯಾನ್ ಬರ್ಟನ್​ರಂಥವರಿದ್ದ ಆ ಗುಂಪಿನಲ್ಲಿ ಕಡಿಮೆ ಮಾತಿನ ಬೈಡೆನ್ ಇದ್ದ ಸಾಧ್ಯತೆಯ ಸುಳಿವು ನಮಗೆ ಸಿಗುವುದು ಪಾಕಿಸ್ತಾನದ ಆಂತರಿಕ ರಾಜಕಾರಣದಲ್ಲಿ ಅವರು ವರ್ಷಗಳವರೆಗೆ ವಹಿಸಿದ ಮಹತ್ವದ ಪಾತ್ರದಿಂದ. 1999ರಲ್ಲಿ ಸೇನಾಕ್ರಾಂತಿ ಮೂಲಕ ಅಧಿಕಾರಕ್ಕೆ ಬಂದ ಪರ್ವೇಜ್ ಮುಷರ್ರಫ್​ರಿಗೆ, ‘ಯೂನಿಫಾಮ್ರ್ ಕಳಚಿ, ಜನರಿಂದ ಅಧ್ಯಕ್ಷನಾಗಿ ಆಯ್ಕೆಯಾಗಿ ನಿನ್ನ ಅಧಿಕಾರವನ್ನು ಗಟ್ಟಿಮಾಡಿಕೋ’ ಎಂದು ಉಪದೇಶಿಸಿ, ನಂತರ 2008ರಲ್ಲಿ ಅಧ್ಯಕ್ಷ ಪದವಿ ತ್ಯಜಿಸಿ ಪೂರ್ಣ ಪ್ರಜಾಪ್ರಭುತ್ವ ಏರ್ಪಡಿಸುವಂತೆಯೂ ಸೂಚಿಸಿ, ಹಾಗೇ ಮಾಡಿಸಿದ್ದೇ ಬೈಡೆನ್ ಮಹಾಶಯ. ‘ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವದ ಪುನರುತ್ಥಾನಕ್ಕಾಗಿ ಬೈಡೆನ್ ಬಹಳಷ್ಟು ಮಾಡಿದ್ದಾರೆ’ ಎಂದು ಪ್ರಧಾನಮಂತ್ರಿ ಯೂಸುಫ್ ರಾಜಾ ಗಿಲಾನಿ 2009ರಲ್ಲಿ ಬಹಿರಂಗವಾಗಿಯೇ ಕೊಂಡಾಡಿದರು.

ಬೈಡೆನ್​ರ ಪಾಕ್​ಪ್ರೀತಿಯ ಪರಿಣಾಮವೆಂದರೆ ಕ್ರಿಯೋಜೆನಿಕ್ ತಂತ್ರಜ್ಞಾನವನ್ನು ತಾನೇ ಅಭಿವೃದ್ಧಿ ಪಡಿಸಿಕೊಳ್ಳಬೇಕಾದ ಒತ್ತಡಕ್ಕೆ ಭಾರತ ಒಳಗಾಯಿತು ಮತ್ತು ಅದರ ಸಾಧನೆಗಾಗಿ ತಗುಲಿದ್ದು ಪೂರ್ತಿ ಇಪ್ಪತ್ತೆರಡು ವರ್ಷಗಳು! ಭಾರತ ಅದರಲ್ಲಿ ಯಶಸ್ವಿಯಾದದ್ದು 2014ರ ಡಿಸೆಂಬರ್​ನಲ್ಲಿ. ಅಂದರೆ ಬೈಡೆನ್​ರ ಒಂದು ನಿಲುವು ಭಾರತದ ಬಾಹ್ಯಾಕಾಶ ಬಯಕೆಯನ್ನು ಇಷ್ಟು ದೀರ್ಘಕಾಲಕ್ಕೆ ಮುಂದೂಡಿತು. ಅಂದು ಬೈಡೆನ್ ಅಡ್ಡಗಾಲಿಟ್ಟ ಭಾರತ ಇಂದು ಅವರ ಅಮೆರಿಕದ ಉಪಗ್ರಹಗಳನ್ನೇ ಅಂತರಿಕ್ಷಕ್ಕೆ ಉಡಾಯಿಸಿ ಹಣ ಕಮಾಯಿಸುತ್ತಿದೆ. ಆದಾಗ್ಯೂ, ಕಳೆದುಹೋದ ಆ ಇಪ್ಪತ್ತೆರಡು ವರ್ಷಗಳು ದುಬಾರಿಯೇ.

ಆಮೇಲೆ ಬಿಲ್ ಕ್ಲಿಂಟನ್ ಆಡಳಿತ ಮೊದಲಿಗೆ ಭಾರತದ ಬಗ್ಗೆ ತಿಕ್ಕಲುತನ ಪ್ರದರ್ಶಿಸಿದರೂ ನಂತರ ಬುದ್ಧಿ ತಿಳಿಯಾಗಿ ತಪು್ಪ ಸರಿಪಡಿಸಿಕೊಳ್ಳುವ ಸಣ್ಣ ಪ್ರಯತ್ನವೊಂದನ್ನು ಮಾಡಿತು. ಕ್ಲಿಂಟನ್-ಯೆಲ್ತ್​ಸಿನ್ ಮಾತುಕತೆ ಪರಿಣಾಮವಾಗಿ ಏಳು ಕ್ರಿಯೋಜೆನಿಕ್ ಎಂಜಿನ್​ಗಳನ್ನು (ಎಂಜಿನ್​ಗಳನ್ನಷ್ಟೇ, ತಂತ್ರಜ್ಞಾನವನ್ನಲ್ಲ) ಭಾರತಕ್ಕೆ ಮಾರಲು ರಷ್ಯಾಗೆ ಸಾಧ್ಯವಾಯಿತು. ಕೆಲಕಾಲಾನಂತರ ಬೈಡೆನ್​ರಿಗೂ ತಮ್ಮ ತಪ್ಪಿನ ಅರಿವಾಗಿರಬೇಕು, ಬುಷ್ ಸರ್ಕಾರ ಮತ್ತು ಮನಮೋಹನ್ ಸಿಂಗ್ ಸರ್ಕಾರ 2005ರಲ್ಲಿ ಮಾಡಿಕೊಂಡ ‘ನಾಗರಿಕ ಅಣು ಒಪ್ಪಂದ’ 2006ರಲ್ಲಿ ಅನುಮೋದನೆಗಾಗಿ ಸೆನೆಟ್​ಗೆ ಬಂದಾಗ ಅದರ ಪರವಾಗಿ ಆಗ ಸೆನೆಟ್ ಚೇರ್ಮನ್ ಆಗಿದ್ದ ಬೈಡೆನ್ ಬಹುವಾಗಿ ಶ್ರಮಿಸಿದರು. ಅದೇ ವರ್ಷ ಭಾರತದ ಕುರಿತಾಗಿ ಮಹತ್ವದ ಹೇಳಿಕೆ ನೀಡಿದರು- ‘2020ರ ಹೊತ್ತಿಗೆ ಜಗತ್ತಿನ ಎರಡು ಅತ್ಯಂತ ಘನಿಷ್ಟ ಮಿತ್ರತ್ವ ಹೊಂದಿದ ದೇಶಗಳು ಭಾರತ ಮತ್ತು ಅಮೆರಿಕ ಆಗಿರಬೇಕು ಎನ್ನುವುದು ನನ್ನ ಆಶಯ’.

ಬೈಡೆನ್ ಅದೇ ಸಮಯದಲ್ಲಿ ಸೆನೆಟ್​ನಲ್ಲಿ ಪಾಕಿಸ್ತಾನದ ಪರ ಲಾಬಿಗಿಳಿದರು. ಅವರು ಮತ್ತು ರಿಪಬ್ಲಿಕನ್ ಸೆನೆಟರ್ ರಿಚರ್ಡ್ ಲ್ಯೂಗರ್ ಜಂಟಿ ಮಸೂದೆಯೊಂದನ್ನು ಮಂಡಿಸಿ ಪಾಕಿಸ್ತಾನಕ್ಕೆ ಅದಾಗಲೇ ನೀಡುತ್ತಿದ್ದ ಬೃಹತ್ ಮೊತ್ತದ ಸೇನಾ ಸಹಾಯಧನದ ಜತೆಗೆ ವರ್ಷಕ್ಕೆ 1.5 ಬಿಲಿಯನ್ ಡಾಲರ್​ಗಳ ಆರ್ಥಿಕ ಸಹಾಯಧನವನ್ನೂ ನೀಡಬೇಕೆಂದು ವಾದಿಸಿ ಅದನ್ನು ಕಾರ್ಯಗತಗೊಳಿಸುವುದರಲ್ಲಿ ಯಶಸ್ವಿಯಾದರು. ಅದಕ್ಕಾಗಿಯೇ ಅವರಿಬ್ಬರಿಗೂ ಪಾಕಿಸ್ತಾನ 2009ರಲ್ಲಿ ತನ್ನ ಎರಡನೆಯ ಅತ್ಯುನ್ನತ ನಾಗರಿಕ ಗೌರವ, ‘ಹಿಲಾಲ್-ಎ-ಪಾಕಿಸ್ತಾನ್’ (ಪಾಕಿಸ್ತಾನದ ಚಂದ್ರಮ) ನೀಡಿತು!

ಬೈಡೆನ್​ರ ಪಾಕ್-ಪ್ರೀತಿ ಅಷ್ಟಕ್ಕೇ ನಿಲ್ಲಲಿಲ್ಲ. 2009ರಲ್ಲಿ ಅವರು ಅಮೆರಿಕದ ಉಪಾಧ್ಯಕ್ಷರಾದರು. ಸತತ ಹತ್ತುವರ್ಷಗಳವರೆಗೆ ಒಸಾಮಾ ಬಿನ್ ಲಾಡೆನ್​ಗಾಗಿ ಅಫ್ಘಾನಿಸ್ತಾನವನ್ನು ಜಾಲಾಡಿದ ಅಮೆರಿಕನ್ ಸೇನೆ ಕೊನೆಗೆ ಅವನನ್ನು 2011ರಲ್ಲಿ ಪಾಕಿಸ್ತಾನದ ರಾಜಧಾನಿಗೆ ಹತ್ತಿರದ ಅಬ್ಬೊಟಾಬಾದ್​ನಲ್ಲೇ, ಪಾಕ್ ಸೇನೆಯ ರಕ್ಷಣೆಯಲ್ಲೇ ಪತ್ತೆಹಚ್ಚಿತು, ಅವನನ್ನು ಕೊಂದೂ ಹಾಕಿತು. ಇದು ಹಿಲಾಲ್-ಎ-ಪಾಕಿಸ್ತಾನ್ ಅಲಂಕೃತ ಅಮೆರಿಕನ್ ಉಪಾಧ್ಯಕ್ಷ ಬೈಡೆನ್​ರಿಗೆ ಸಮ್ಮತವಾಗಲಿಲ್ಲ. ಪಾಕ್ ನೆಲದಲ್ಲಿ ತಮ್ಮದೇ ಸೇನೆಯ ಕಾರ್ಯಾಚರಣೆಯನ್ನವರು ಖಂಡಿಸಿದರು! ಅವರ ಪಾಕ್-ಪ್ರೀತಿ ಹೀಗೆ ಚಂದ್ರಮನನ್ನೇ ಮುಟ್ಟುವಂಥದು. ಅಮೆರಿಕದಿಂದ ಬಿಲಿಯನ್​ಗಟ್ಟಲೆ ಹಣವನ್ನು ಕೊಳ್ಳೆಹೊಡೆದು, ಅಮೆರಿಕದ ಪರಮವೈರಿಯನ್ನು ತನ್ನಲ್ಲಿಯೇ ಇಟ್ಟುಕೊಂಡು ಸಾಕುತ್ತಿದ್ದ ಪಾಕಿಸ್ತಾನಕ್ಕೆ ಬುದ್ಧಿ ಕಲಿಸುವ ಯಾವುದೇ ಕ್ರಮಕ್ಕೆ ಒಬಾಮ ಆಡಳಿತ ಮುಂದಾಗದಿದ್ದುದಕ್ಕೆ ಬೈಡನ್​ರ ವಿರೋಧವೇ ಕಾರಣ ಎಂದು ಹೇಳಲಾಗುತ್ತದೆ. ಅಷ್ಟಾಗಿಯೂ, ನಂತರದ ವರ್ಷಗಳಲ್ಲಿ ಅಧ್ಯಕ್ಷ ಒಬಾಮ ಭಾರತದ ಜತೆ ಸಂಬಂಧವೃದ್ಧಿಗೆ ಮಹತ್ವ ನೀಡಿದರು.

ನಂತರ, ಮೋದಿ ಸರ್ಕಾರ ಕಾಶ್ಮೀರಕ್ಕೆ ಸಂಬಂಧಿಸಿದ 370ನೇ ವಿಧಿಯನ್ನು ರದ್ದುಗೊಳಿಸಿದಾಗ ಬೈಡೆನ್ ಉಗ್ರವಾಗಿ ಪ್ರತಿಕ್ರಿಯಿಸಿದರು. ಸಿಎಎ ಹಾಗೂ ಉದ್ದೇಶಿತ ಎನ್​ಆರ್​ಸಿಗಳನ್ನೂ ಟೀಕಿಸಿದರು. ಚುನಾವಣಾ ಪ್ರಚಾರದಲ್ಲಿ ರಾಗ ಬದಲಾಯಿಸಿ ಭಾರತದ ಪರವಾಗಿ ಹಲವು ಹೇಳಿಕೆ ನೀಡಿದರು. ಅಧ್ಯಕ್ಷ ಟ್ರಂಪ್ ಭಾರತವನ್ನು ‘ಕೊಳಕು’ ಎಂದಾಗ, ಬೈಡೆನ್ ‘ಮಿತ್ರನ ಬಗ್ಗೆ ಮಾತಾಡುವ ರೀತಿ ಇದಲ್ಲ’ ಎಂದರು. ಇದೆಲ್ಲವೂ ಹದಿನಾಲ್ಕು ಲಕ್ಷದಷ್ಟಿರುವ ಭಾರತೀಯ ಮತದಾರರನ್ನು ಸೆಳೆಯುವ ತಂತ್ರವಷ್ಟೇ. ಡೆಮಾಕ್ರಟಿಕ್ ಪಕ್ಷ ಬಿಡುಗಡೆ ಮಾಡಿದ ‘ನೀತಿಪತ್ರ’ದಲ್ಲಿ ಭಾರತದ ಬಗ್ಗೆ ಒಳ್ಳೆಯ ಮಾತುಗಳಿರುವಂತೇ ಭಾರತ ಸರ್ಕಾರದ ಆಂತರಿಕ ನೀತಿಗಳ ವಿರೋಧ ಢಾಳಾಗಿಯೇ ಇದೆ. ಹೀಗಾಗಿ ಚುನಾವಣಾ ಪ್ರಚಾರದ ಭರಾಟೆಯಲ್ಲಿ ಹೊರಬರುವ ಸಿಹಿಕಹಿ ಮಾತುಗಳೆಲ್ಲವನ್ನೂ ಬದಿಗಿಟ್ಟು, ಬೈಡೆನ್​ರ ಇದುವರೆಗಿನ ನಿಲುವು-ನಡವಳಿಕೆಗಳು ಮತ್ತು ಮುಂದಿನ ದಿನಗಳಲ್ಲಿ ಅಂತಾರಾಷ್ಟ್ರೀಯ ರಂಗದಲ್ಲಿ ಎದುರಾಗಬಹುದಾದ ಅನಿರೀಕ್ಷಿತ ಸವಾಲುಗಳಷ್ಟೇ ಹೊಸ ಅಧ್ಯಕ್ಷರ ನೀತಿಗಳನ್ನು ರೂಪಿಸುತ್ತವೆ ಎಂಬ ವಾಸ್ತವವನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದುವರಿಯಬೇಕು.

ಉಪಾಧ್ಯಕ್ಷೆ ಬಗ್ಗೆ ಈಗಲೇ ಹೆಚ್ಚೇನೂ ಹೇಳುವ ಅಗತ್ಯವಿಲ್ಲ. ಅವರು ಅವಕಾಶ ಸಿಕ್ಕಿದಾಗಲೆಲ್ಲ ‘ಪ್ರಗತಿಪರ ಸೆಕ್ಯೂಲರಿಸ್ಟ’ರ ಚಾಳಿಯಂತೆ ಎನ್​ಡಿಎ ಆಡಳಿತದ ಭಾರತದ ವಿರುದ್ಧ ಕೂಗಾಡುತ್ತ, ಕ್ರಿಶ್ಚಿಯನ್ ಮತಾಂತರವಾದಕ್ಕೆ ಪ್ರೋತ್ಸಾಹ ನೀಡುತ್ತ ನೆಮ್ಮದಿಯಾಗಿ ದಿನಗಳೆಯುತ್ತಾರೆ. ಅವರನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕಾದ್ದು ಅಧಿಕಾರಾವಧಿ ಮುಗಿಯುವುದರೊಳಗೇ ಯಾವುದೇ ಕಾರಣದಿಂದ ಬೈಡೆನ್ ಶ್ವೇತಭವನದಿಂದ ನಿರ್ಗಮಿಸಿದರೆ ಮಾತ್ರ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net