ಜಗದಗಲ ಅಂಕಣ; ಹಮಾಸ್ ಹುಮ್ಮಸ್ಸಿನ ಹಾವು ಏಣಿಯಾಟ

IMG-20210526-WA0000
Published on

ಇಸ್ರೇಲ್ ವಿರುದ್ಧ ಹಿಂಸಾಮಾರ್ಗವನ್ನು ಪ್ಯಾಲೆಸೆôನ್ ಲಿಬರೇಷನ್ ಆರ್ಗನೈ ಜೇಷನ್ (ಪಿಎಲ್​ಓ) ತೊರೆಯುತ್ತಿರುವುದಾಗಿ ಅದರ ನಾಯಕ ಯಾಸರ್ ಅರಾಫತ್ 1988 ನ.15ರಂದು ಘೊಷಿಸುವ ಮೊದಲು ಆ ಉಗ್ರಗಾಮಿ ಸಂಘಟನೆ ಮತ್ತು ಇತರ ಸಣ್ಣಪುಟ್ಟ ಪ್ಯಾಲೆಸ್ತೀನೀ ಭಯೋತ್ಪಾದಕ ಗುಂಪುಗಳು ಯಹೂದೀ ರಾಷ್ಟ್ರದ ವಿರುದ್ಧ ಭಯೋತ್ಪಾದಕ ಚಟುವಟಿಕೆಗಳನ್ನು ಜಗತ್ತಿನ ವಿವಿಧೆಡೆ ಎಸಗುತ್ತಿದ್ದವು. ಅವುಗಳಲ್ಲಿ ಪ್ರಮುಖವಾದುವು 1972ರಲ್ಲಿ ಪಶ್ಚಿಮ ಜರ್ಮನಿಯ ಮ್ಯೂನಿಕ್ ನಗರದಲ್ಲಿ ಒಲಂಪಿಕ್ ಪಂದ್ಯಾವಳಿ ಸಂದರ್ಭದಲ್ಲಿ ಪ್ಯಾಲೆಸ್ತೀನಿ ಭಯೋತ್ಪಾದಕರು ಎಸಗಿದ ದಾಳಿ ಮತ್ತು ಅಪಹರಣ ಪ್ರಕರಣದಲ್ಲಿ ಇಸ್ರೇಲ್​ನ ಆರು ತರಬೇತುದಾರರು ಮತ್ತು ಐವರು ಆಟಗಾರರು ಪ್ರಾಣ ಕಳೆದುಕೊಂಡದ್ದು; 1976ರಲ್ಲಿ ಇಸ್ರೇಲಿ ಪ್ರಯಾಣಿಕರೇ ಅಧಿಕವಾಗಿದ್ದ ಫ್ರೆಂಚ್ ಏರ್​ಬಸ್ ಒಂದನ್ನು ಅಪಹರಿಸಿ ಉಗಾಂಡಾದ ಎಂಟೆಬ್ ವಿಮಾನನಿಲ್ದಾಣಕ್ಕೆ ಕೊಂಡೊಯ್ದ ಪ್ರಕರಣ ನಿಮಗೆ ನೆನಪಿರಬಹುದು. ಇಂತಹ ಪ್ರತಿಯೊಂದು ಭಯೋತ್ಪಾದಕ ಚಟುವಟಿಕೆ ಘಟಿಸಿದಾಗಲೂ ಇಸ್ರೇಲ್ ಪ್ರತಿಕಾರ್ಯಾಚರಣೆ ಕೈಗೊಳ್ಳುತ್ತಿತ್ತು, ಅದರ ವಾಯುದಳ ಲೆಬನಾನ್ ಮತ್ತು ಸಿರಿಯಾಗಳಲ್ಲಿನ ಪಿಎಲ್​ಓ ನೆಲೆಗಳ ಮೇಲೆ ದಾಳಿಯೆಸಗುತ್ತಿತ್ತು, ಅದರ ಗುಪ್ತಚರ ಸಂಸ್ಥೆ ‘ಮೊಸಾದ್’ ಭಯೋತ್ಪಾದಕ ಕೃತ್ಯಗಳನ್ನೆಸಗಿದ ಪ್ಯಾಲೆಸ್ತೀನೀಯರನ್ನು ಹುಡುಕಿ ಹುಡುಕಿ ಕೊಲ್ಲುತ್ತಿತ್ತು. ತಮ್ಮ ಕೃತ್ಯಗಳಲ್ಲಿ ಪ್ಯಾಲೆಸ್ತೀನೀ ಭಯೋತ್ಪಾದಕ ಸಂಘಟನೆಗಳು ಸೋವಿಯತ್ ಗುಪ್ತಚರ ಸಂಸ್ಥೆ ಕೆಜಿಬಿ, ಹಿಂದಿನ ಯುಗೋಸ್ಲಾವಿಯಾದ ಕ್ರೋಯೇಯಾ ಪ್ರತ್ಯೇಕತಾವಾದಿಗಳು, ಪಶ್ಚಿಮ ಜರ್ಮನಿಯ ನವನಾಜಿಗಳು, ಲ್ಯಾಟಿನ್ ಅಮೆರಿಕದ ವಿವಿಧ ಎಡಪಂಥೀಯ ಭಯೋತ್ಪಾದಕ ಸಂಘಟನೆಗಳ ಸಹಕಾರ ಪಡೆದುಕೊಳ್ಳುತ್ತಿದ್ದವು. ತನ್ನ ಪ್ರತಿಕಾರ್ಯಾಚರಣೆಗಳಿಗಾಗಿ ಇಸ್ರೇಲ್ ಅಮೆರಿಕದ ಸಿಐಎ ಮತ್ತು ವಿವಿಧ ಪಶ್ಚಿಮ ಯುರೋಪಿಯನ್ ಮಿತ್ರದೇಶಗಳ ಗುಪ್ತಚರ ಸಂಸ್ಥೆಗಳ ಸಹಕಾರ ಪಡೆದುಕೊಳ್ಳುತ್ತಿತ್ತು. ಹಲವರು ಪ್ಯಾಲೆಸ್ತೀನಿಯರೂ ಇಸ್ರೇಲ್​ಗಾಗಿ ಕೆಲಸ ಮಾಡುತ್ತಿದ್ದರು. ಒಟ್ಟಿನಲ್ಲಿ ಆ ದಿನಗಳು ಇಸ್ರೇಲ್ ಮತ್ತು ಪ್ಯಾಲೆಸ್ತೀನಿ ಭಯೋತ್ಪಾದಕರ ನಡುವಿನ ರಕ್ತಪಾತವನ್ನು ಅಡಿಗಡಿಗೆ ಕಾಣುತ್ತಿದ್ದವು.

1993ರ ಶಾಂತಿ ಒಪ್ಪಂದಗಳು ಮತ್ತು ಮುಂದಿನ ಎರಡು ವರ್ಷಗಳವರೆಗೆ ಜರುಗಿದ ಪೂರಕ ಬೆಳವಣಿಗೆಗಳ ಪರಿಣಾಮವಾಗಿ ರಕ್ತಪಾತ ಬಹುತೇಕ ನಿಂತೇಹೋಗಿ ಶಾಶ್ವತ ಶಾಂತಿಯ ಆಶಾಭಾವನೆ ಮೂಡಿತು. ಇದೇನೂ ಸುಲಭವಾಗಿ ಬಂದದ್ದಲ್ಲ. ಮೊದಲಿಗೆ, 1978ರಲ್ಲಿ ಕ್ಯಾಂಪ್ ಡೇವಿಡ್ ಒಪ್ಪಂದಗಳ ಮೂಲಕ ಇಸ್ರೇಲನ್ನು ಮಾನ್ಯಮಾಡಿ ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಯುಗಕ್ಕೆ ನಾಂದಿ ಹಾಡಿದ ಈಜಿಪ್ಟ್​ನ ಅಧ್ಯಕ್ಷ ಅನ್ವರ್ ಸದಾತ್​ರನ್ನು ಇಬ್ಬರು ಈಜಿಪ್ಷಿಯನ್ ಇಸ್ಲಾಮಿಕ್ ಜಿಹಾದಿಗಳು ಹತ್ಯೆಗೈದರು. ಪ್ಯಾಲೆಸ್ತೀನಿಯರೊಂದಿಗೆ 1993ರ ಶಾಂತಿ ಒಪ್ಪಂದಕ್ಕೆ ಸಹಿ ಹಾಕಿದ ಇಸ್ರೇಲಿ ಪ್ರಧಾನಿ ಯಿಟ್ಝಾಕ್ ರಬೀನ್ ಅವರನ್ನು ಯೆಹೂದಿ ಉಗ್ರ ರಾಷ್ಟ್ರೀಯವಾದಿಯೊಬ್ಬ ಗುಂಡಿಟ್ಟು ಕೊಂದ.

1993ರ ಒಪ್ಪಂದಕ್ಕೆ ಅನುಗುಣವಾಗಿ ಮೊದಲಿಗೆ ಗಾಜಾ ಮತ್ತು ಜೆರಿಕೋ ಪಟ್ಟಣಗಳನ್ನು ಪಡೆದುಕೊಂಡ ಪ್ಯಾಲೆಸೆôನ್ ಅರಬ್ಬರಿಗೆ ಹಂತಹಂತವಾಗಿ ವೆಸ್ಟ್ ಬ್ಯಾಂಕ್​ನ ಇತರ ಪ್ರದೇಶಗಳ ಮೇಲೆ ಅಧಿಕಾರ ದಕ್ಕತೊಡಗಿತು. ಈ ಶಾಂತಿಪ್ರಕ್ರಿಯೆಗೆ ಆಗಾಗ ಧಕ್ಕೆಯೊದಗಿದರೂ ಅದು ತೀವ್ರತರವಾಗಿರಲಿಲ್ಲ. ಆದರೆ ಪರಿಸ್ಥಿತಿ ತಿರುವುಮುರುವಾಗಿ ಭೀಷಣ ರಕ್ತಪಾತದ ದಿನಗಳು ಮರುಕಳಿಸತೊಡಗಿದ್ದು 2006ರಲ್ಲಿ ಪ್ಯಾಲೆಸೆôನ್ ನ್ಯಾಷನಲ್ ಅಥಾರಿಟಿಗಾಗಿ ಚುನಾವಣೆ ಜರುಗಿದಾಗ.

‘ಹರಕತ್ ಅಲ್-ಮುಕಾವನ್ನಹ್ ಅಲ್-ಇಸ್ಲಾಮಿಯಹ್’ (ಹಮಾಸ್) ಸ್ಥಾಪನೆಯಾದದ್ದು 1987ರಲ್ಲಿ, ಪಿಎಲ್​ಓ ಶಾಂತಿಮಾರ್ಗಕ್ಕಿಳಿಯುವ ಒಂದು ವರ್ಷ ಮೊದಲು. ಅದು ಸಾಮಾಜಿಕ ಸೇವಾ ಅಂಗ ‘ದವಾಹ್’ ಜತೆಗೆ ‘ಇಝå್ ಅದ್-ದಿನ್ ಅಲ್-ಕಸಮ್ ಎಂಬ ಸೇನಾ ಅಂಗವನ್ನೂ ಹೊಂದಿದೆ. ಪಿಎಲ್​ಓದ ಇತರ ಅಂಗಗಳು ಇಸ್ರೇಲ್ ಜತೆ ಶಾಂತಿಮಾರ್ಗ ಅನುಸರಿಸಿ ಪ್ಯಾಲೆಸೆôನ್ ರಾಷ್ಟ್ರವನ್ನು ಸ್ಥಾಪಿಸಿಕೊಳ್ಳಬೇಕೆಂದು ಬಯಸಿದರೆ ಮತ್ತು ಆ ಹಾದಿಯಲ್ಲೇ ನಡೆಯುತ್ತಿದ್ದರೆ ಹಮಾಸ್ ಮಾತ್ರ ಅದನ್ನು ತಿರಸ್ಕರಿಸಿ ಯೆಹೂದಿ ರಾಷ್ಟ್ರದೊಂದಿಗೆ ಘರ್ಷಣೆಯನ್ನೇ ನೀತಿಯನ್ನಾಗಿಸಿಕೊಂಡಿದೆ. ಈ ಕಾರಣದಿಂದಾಗಿ ಇಸ್ರೇಲ್, ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಜಪಾನ್ ಅದನ್ನೊಂದು ಭಯೋತ್ಪಾದಕ ಸಂಘಟನೆ ಎಂದು ಘೊಷಿಸಿವೆ.

ಪ್ರಾರಂಭದಿಂದಲೇ ಇಸ್ರೇಲ್​ನೊಡನೆ ಘರ್ಷಣೆಯ ಮಾರ್ಗ ಹಿಡಿದ ಹಮಾಸ್ ಆ ಕಾರಣದಿಂದಲೇ ಶಾಂತಿಪರ ಪಿಎಲ್​ಓ ಅನ್ನು ತನ್ನ ವಿರೋಧಿ ಎಂದು ಬಗೆಯುತ್ತದೆ. 1993-95ರ ಶಾಂತಿ ಒಪ್ಪಂದಗಳಿಗೆ ಅನುಗುಣವಾಗಿ ಜನವರಿ 2005ರಲ್ಲಿ ನಡೆದ ಎರಡನೆಯ ಅಧ್ಯಕ್ಷೀಯ ಚುನಾವಣೆಯಲ್ಲಿ ಪಿಎಲ್​ಓದ ಶಾಂತಿಪರ ‘ಫತಾ’ ಬಣದ ಅಭ್ಯರ್ಥಿ ಮಹಮೂದ್ ಅಬ್ಬಾಸ್ ಆಯ್ಕೆಯಾದರು. ಮರುವರ್ಷ ‘ಪ್ಯಾಲೆಸೆôನ್ ನ್ಯಾಷನಲ್ ಅಥಾರಿಟಿ’(ಪಿಎನ್​ಎ)ಗಾಗಿ ನಡೆದ ಎರಡನೆಯ ಚುನಾವಣೆಗಳಲ್ಲಿ ಹಮಾಸ್​ಗೆ ಬಹುಮತ ದಕ್ಕಿದರೂ ಅದು ಹೆಚ್ಚು ಸ್ಥಾನಗಳನ್ನು ಗಳಿಸಿದ್ದು ಪುಟ್ಟ ಗಾಜಾದಲ್ಲಿ. ವೆಸ್ಟ್ ಬ್ಯಾಂಕ್​ನಲ್ಲಿ ಅದರ ವಿರೋಧಿ ಬಣವಾದ ‘ಫತಾ’ ಹೆಚ್ಚು ಸ್ಥಾನ ಗಳಿಸಿತು. ಆ ಕಾರಣದಿಂದಾಗಿ ಗಾಜಾದ ಪ್ರಾಂತೀಯ ಆಡಳಿತವನ್ನು ಕೈಗೆ ತೆಗೆದುಕೊಂಡ ಹಮಾಸ್ ಜೂನ್ 2007ರಲ್ಲಿ ಗಾಜಾದಲ್ಲಿದ್ದ ಫತಾ ಅಧಿಕಾರಿಗಳು ಮತ್ತು ಕಾರ್ಯಕರ್ತರಲ್ಲಿ ಬಹುತೇಕರನ್ನು ಹತ್ಯೆಗೈದಿತು. ಅಳಿದುಳಿದವರು ಇಸ್ರೇಲ್ ಮೂಲಕ ಫತಾ ಆಡಳಿತವಿದ್ದ ವೆಸ್ಟ್ ಬ್ಯಾಂಕ್​ಗೆ ಓಡಿಹೋದರು. ಒಂದಾಗಿರಬೇಕಾಗಿದ್ದ ಪ್ಯಾಲೆಸೆôನ್​ನ ಎರಡು ಭಾಗಗಳು ಅಂದಿನಿಂದ ಹೀಗೆ ಆಡಳಿತಾತ್ಮಕವಾಗಿ ಬೇರೆಬೇರೆಯಾಗಿ ಹೋಗಿವೆ. ಪ್ಯಾಲೆಸೆôನ್​ನೊಳಗೆ ತನ್ನ ಬದ್ಧವೈರಿ ಫತಾ ಎಂದು ಹಮಾಸ್ ಬಲವಾಗಿ ನಂಬಿದೆ. ಇದೇ ಮುಂದಿನ ಸಮಸ್ಯೆಗಳಿಗೆ ಮೂಲವಾದದ್ದು.

ಇಡೀ ಪ್ಯಾಲೆಸೆôನ್​ನಲ್ಲಿ ಅಧಿಕಾರ ಗಳಿಸಿಕೊಳ್ಳಬೇಕಾದರೆ ವೆಸ್ಟ್ ಬ್ಯಾಂಕ್​ನಲ್ಲೂ ತಾನು ಜನಪ್ರಿಯವಾಗುವ ಅಗತ್ಯವನ್ನೂ, ಅದಕ್ಕಾಗಿ ಪ್ಯಾಲೆಸ್ತೀನಿಯರ ಹಿತರಕ್ಷಣೆಯಲ್ಲಿ ಫತಾಗಿಂತಲೂ ತಾನು ಸಕ್ಷಮ, ಪ್ಯಾಲೆಸ್ತೀನೀಯರ ನಿಜವಾದ ಭಾಗ್ಯವಿದಾತ ತಾನೇ ಎಂದು ಬಿಂಬಿಸಬೇಕಾದ ಅಗತ್ಯವನ್ನೂ ಹಮಾಸ್ ತಿಳಿಯಿತು. ಹಾಗಾಗಬೇಕಾದರೆ ಪ್ಯಾಲೆಸ್ತೀನೀಯರು ಹೆಮ್ಮೆಪಡುವಂತಹ ಬಗೆಯಲ್ಲಿ ಇಸ್ರೇಲ್ ವಿರುದ್ಧ ಕಾರ್ಯಾಚರಣೆ ಕೈಗೊಳ್ಳಬೇಕೆಂದೂ, ಆ ಯೆಹೂದಿ ರಾಷ್ಟ್ರದ ವಿರುದ್ಧ ಸಾಧಿಸುವ ಒಂದೊಂದು ‘ವಿಜಯ’ವೂ ಪ್ಯಾಲೆಸ್ತೀನಿಯರ ಹೃದಯದಲ್ಲಿ ತನ್ನ ಸ್ಥಾನವನ್ನು ಗಟ್ಟಿಗೊಳಿಸುತ್ತದೆಂದೂ ಹಮಾಸ್ ಬಗೆಯಿತು. ನಂತರದ ಈ ಹದಿನಾಲ್ಕು ವರ್ಷಗಳಲ್ಲಿ ಇಸ್ರೇಲ್ ವಿರುದ್ಧ ಹಮಾಸ್ ಕೈಗೊಂಡ ಪ್ರತಿಯೊಂದು ಕಾರ್ಯಾಚರಣೆಯ ‘ಅಘೊಷಿತ ಆದರೆ ನಿಜವಾದ’ ಉದ್ದೇಶ ಫತಾದ ಜನಪ್ರಿಯತೆ ಕುಗ್ಗಿಸುವುದಾಗಿದೆ.

ಹಮಾಸ್ ತನ್ನ ಯೋಜನೆಯ ಮೊದಲ ಹಂತವಾಗಿ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಂಡು ತನ್ನ ಅಧಿಕಾರದ ಗಾಜಾದಲ್ಲಿ ಸಂಗ್ರಹಿಸಿಡುವುದನ್ನು 2007ರ ವಸಂತಕಾಲದಲ್ಲಿ ಆರಂಭಿಸಿತು. ಪ್ರತಿಯಾಗಿ ಇಸ್ರೇಲ್ ಗಾಜಾದ ಮೇಲೆ ದಿಗ್ಬಂಧನ ಹೇರಿ ಹಮಾಸ್​ನ ಯೋಜನೆಗಳಿಗೆ ತಡೆಯೊಡ್ಡಲು ಪ್ರಯತ್ನಿಸಿತು. ನಿರೀಕ್ಷಿತ ಪರಿಣಾಮ ಕಾಣದಿದ್ದಾಗ ಇಸ್ರೇಲ್ 2008-09ರ ಚಳಿಗಾಲದಲ್ಲಿ ‘ಆಪರೇಷನ್ ಕ್ಯಾಸ್ಟ್ ಲೆಡ್’ ಸೇನಾ ಕಾರ್ಯಾಚರಣೆ ಮೂಲಕ ಹಮಾಸ್​ನ ಸಮರೋತ್ಸಾಹವನ್ನು ತಹಬಂದಿಗೆ ತರುವುದರಲ್ಲಿ ಯಶಸ್ವಿಯಾಯಿತೇನೋ ನಿಜ. ಆದರೆ ಹಮಾಸ್ ರಾಕೆಟ್ ದಾಳಿಗಳಿಂದ ಇಸ್ರೇಲ್​ಗೆ ಸಾಕಷ್ಟು ಹಾನಿಯೆಸಗಿ ಭೀತಿಯ ಅಲೆಯೆಬ್ಬಿಸುವುದರಲ್ಲಿ ಯಶಸ್ವಿಯಾದದ್ದೂ ಅಷ್ಟೇ ನಿಜ ಮತ್ತು ಆ ಮಟ್ಟಿಗೆ ಪ್ಯಾಲೆಸ್ತೀನಿಯರಲ್ಲಿ ಫತಾ ವಿರುದ್ಧ ತನ್ನ ಜನಪ್ರಿಯತೆ ವೃದ್ಧಿಸಿಕೊಂಡದ್ದೂ ನಿಜ.

2008-09ರ ಘರ್ಷಣೆಗಳಲ್ಲಿ ಇಸ್ರೇಲ್​ಗೆ ಮತ್ತೊಂದು ಬಗೆಯಲ್ಲೂ ನಿರಾಸೆಯೊದಗಿತು. ಪರಂಪರಾಗತವಾಗಿ ಅದರ ಪರವಾಗಿದ್ದ ಹಲವು ಪಶ್ಚಿಮ ಯುರೋಪಿಯನ್ ರಾಷ್ಟ್ರಗಳಿಂದ ಈ ಸಲ ನಿರೀಕ್ಷಿತ ರಾಜತಾಂತ್ರಿಕ ಬೆಂಬಲ ದೊರೆಯಲಿಲ್ಲ. ಇದು ಹಮಾಸ್ ವಿರುದ್ಧ ಇನ್ನಷ್ಟು ಕಠಿಣ ಕ್ರಮಗಳಿಗೆ ಮುಂದಾಗದಂತೆ ತಡೆಯಿತು. ಪರಿಣಾಮವಾಗಿ ಹಮಾಸ್ ಶಸ್ತ್ರಾಸ್ತ್ರ ಸಂಗ್ರಹ ವೃದ್ಧಿಸಿಕೊಳ್ಳತೊಡಗಿತು. ಈ ನಡುವೆ ಪ್ಯಾಲೆಸೆôನ್​ನ ಆಂತರಿಕ ರಾಜಕಾರಣದಲ್ಲಿ ಮತ್ತೊಂದು ಅಹಿತಕರ ಬೆಳವಣಿಗೆ ಘಟಿಸಿತು. ವೆಸ್ಟ್ ಬ್ಯಾಂಕ್​ನಲ್ಲಿ ವೃದ್ಧಿಸುತ್ತಿದ್ದ ಹಮಾಸ್​ನ ಜನಪ್ರಿಯತೆಯಿಂದಾಗಿ ತಮ್ಮ ಅಧ್ಯಕ್ಷ ಸ್ಥಾನಕ್ಕೂ, ವೆಸ್ಟ್ ಬ್ಯಾಂಕ್​ನಲ್ಲಿ ಫತಾದ ಅಧಿಕಾರಕ್ಕೂ ಸಂಚಕಾರ ಬರಬಹುದೆಂದು ಶಂಕಿಸಿದ ಅಧ್ಯಕ್ಷ ಮಹಮೂದ್ ಅಬ್ಬಾಸ್ ಚುನಾವಣೆಗಳನ್ನೇ ಮುಂದೂಡಿದರು. ಅಲ್ಲದೆ ಅಬ್ಬಾಸ್ ಬೆಂಬಲಿಗರಿಂದಲೇ ತುಂಬಿದ್ದ ಪಿಎಲ್​ಓ ಸೆಂಟ್ರಲ್ ಕೌನ್ಸಿಲ್ ಡಿಸೆಂಬರ್ 2009ರಲ್ಲಿ ಅವರನ್ನು ಅನಿರ್ದಿಷ್ಟ ಕಾಲದವರೆಗೆ ಅಧ್ಯಕ್ಷರನ್ನಾಗಿ ಘೊಷಿಸಿತು. ಇದರ ಹಿಂದಿದ್ದ ಉದ್ದೇಶ ಒಳ್ಳೆಯದೇ. ಹೇಗೆಂದರೆ ಚುನಾವಣೆಗಳು ನಡೆದು ಪ್ಯಾಲೆಸೆôನ್ ಶಾಸನಸಭೆ ಮತ್ತು ಅಧ್ಯಕ್ಷ ಸ್ಥಾನಗಳೆರಡೂ ಹಮಾಸ್ ಕೈಗೆ ಬಿದ್ದರೆ ಅಲ್ಲಿಗೆ 1988ರಿಂದ ಜಾರಿಯಲ್ಲಿದ್ದ ಇಸ್ರೇಲ್-ಪ್ಯಾಲೆಸೆôನ್ ಶಾಂತಿ ಪ್ರಕ್ರಿಯೆ ನಿಂತುಹೋಗಿ, ಮತ್ತೊಮ್ಮೆ ರಕ್ತಪಾತದ ಯುಗ ಆರಂಭವಾಗಬಹುದು ಮತ್ತು ಅದು ಪ್ಯಾಲೆಸೆôನ್​ನ ಪೂರ್ಣ ಸ್ವಾತಂತ್ರ್ಯವನ್ನು ಶಾಶ್ವತವಾಗಿ ಕನಸಾಗಿಸಿಬಿಡಬಹುದು ಎಂಬ ಆತಂಕ ಪಿಎಲ್​ಓನ ಎಲ್ಲ ಶಾಂತಿಪ್ರಿಯ ಬಣಗಳಲ್ಲಿತ್ತು. ಅವೆಲ್ಲವುಗಳ ಉದ್ದೇಶ ಶಾಂತಿಕಂಟಕ ಹಮಾಸ್ ಅನ್ನು ಪೂರ್ಣ ಅಧಿಕಾರದಿಂದ ದೂರವಿಡುವುದು. ಸಹಜವಾಗಿಯೇ ವ್ಯಗ್ರಗೊಂಡ ಹಮಾಸ್ ಶಸ್ತ್ರಾಸ್ತ್ರ ಸಂಗ್ರಹಣೆ ತೀವ್ರಗೊಳಿಸಿತು. ಅದೇ ಸಮಯದಲ್ಲಿ, ಅರಬ್ ಜಗತ್ತಿನಲ್ಲಿ ಕೆಲವು ಬೆಳವಣಿಗೆಗಳು ಘಟಿಸಿದವು. ಹಮಾಸ್​ನದೇ ಅವಳಿಯಾದ ಮೂಲಭೂತವಾದಿ ಮುಸ್ಲಿಂ ಬ್ರದರ್​ಹುಡ್ ಈಜಿಪ್ಟ್​ನಲ್ಲಿ ಅಧಿಕಾರಕ್ಕೆ ಬಂದದ್ದನ್ನು ಹಾಗೂ ಸಿರಿಯಾದಲ್ಲಿ ಅಧ್ಯಕ್ಷ ಅಸದ್ ವಿರುದ್ಧದ ಆಂದೋಲನ ಇಸ್ಲಾಮಿಕ್ ಮೂಲಭೂತವಾದಿಗಳ ತೆಕ್ಕೆಗೆ ಬಿದ್ದದ್ದನ್ನು ತನಗೆ ಅನುಕೂಲಕರವೆಂದು ನಂಬಿದ ಹಮಾಸ್ ಇಸ್ರೇಲ್ ಮೇಲೆ ಆಗಾಗ ರಾಕೆಟ್ ದಾಳಿ ಎಸಗತೊಡಗಿತು ಮತ್ತು ಅದನ್ನು ನವೆಂಬರ್ 2012ರಲ್ಲಿ ತೀವ್ರಗೊಳಿಸಿತು. ಇಸ್ರೇಲ್​ನದು ಗಾಜಾ ಮೇಲೆ ವಾಯುದಾಳಿಯ ಪ್ರತಿಕ್ರಿಯೆ. ಅದೃಷ್ಟವಶಾತ್ ಈಜಿಪ್ಟ್ ಮತ್ತು ಟರ್ಕಿಗಳ ಮಧ್ಯಸ್ಥಿಕೆಯಿಂದಾಗಿ ಒಂದೇವಾರದಲ್ಲಿ ಕದನವಿರಾಮ ಘೊಷಣೆಯಾಗಿ ಶಾಂತಿಸ್ಥಾಪನೆಯಾಯಿತು.

ಅನತಿ ಕಾಲದಲ್ಲೇ ಈಜಿಪ್ಟ್​ನಲ್ಲಿ ಇಸ್ಲಾಮಿಕ್ ಬ್ರದರ್​ಹುಡ್ ಕೆಳಗುರುಳಿ ಸೇನಾನೇತೃತ್ವದ ಸರ್ಕಾರ ಅಧಿಕಾರಸೂತ್ರ ತೆಗೆದುಕೊಂಡಿತು. ಜತೆಗೆ, ಸಿರಿಯಾದಲ್ಲಿ ಅಸದ್-ವಿರೋಧಿ ಆಂದೋಲನ ಚುರುಕು ಕಳೆದುಕೊಂಡಿತು. ಈ ಎಲ್ಲ ಕಾರಣಗಳಿಂದ ಹಮಾಸ್​ನ ಉತ್ಸಾಹವೂ ತಣ್ಣಗಾಗಿ ಅದು ದುಸ್ಸಾಹಸಕ್ಕೆ ಕೈಹಾಕಲಾರದೆಂದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಜೂನ್-ಜುಲೈ 2014ರಲ್ಲಿ ಸಂಘರ್ಷ ಭುಗಿಲೆದ್ದಿತು. ಇದಕ್ಕೆ ಹಿನ್ನೆಲೆಯಾಗಿ ಹಿಂದಿನ ಒಂದೂವರೆ ವರ್ಷಗಳಲ್ಲಿ ಇರಾನ್​ನಿಂದ ಅತ್ಯಧಿಕ ಪ್ರಮಾಣದಲ್ಲಿ ರಾಕೆಟ್​ಗಳನ್ನು ಸುಡಾನ್ ಮೂಲಕ ಕಳ್ಳಮಾರ್ಗದಲ್ಲಿ ಹಮಾಸ್ ಪಡೆದುಕೊಂಡು ಗಾಜಾದ ನೂರಾರು ರಹಸ್ಯ ಸುರಂಗಗಳಲ್ಲಿ ಅಡಗಿಸಿಟ್ಟಿತ್ತು. ಹಮಾಸ್​ನ ಹುಮ್ಮಸ್ಸನ್ನು ಹೆಚ್ಚಿಸಿದ್ದು ಇದು.

ಘರ್ಷಣೆಗಳಿಗೆ ಕಿಡಿ ಹೊತ್ತಿಸಿದ್ದು ವೆಸ್ಟ್ ಬ್ಯಾಂಕ್​ನಲ್ಲಿ ಮೂವರು ಇಸ್ರೇಲಿ ಹದಿವಯಸ್ಕರನ್ನು ಹಮಾಸ್ ಅಪಹರಿಸಿ ಕೊಂದದ್ದು. ಆ ಬಗ್ಗೆ ಇಸ್ರೇಲ್ ಮಾಡಿದ ದೂಷಣೆಯನ್ನು ಹಮಾಸ್ ಒಪ್ಪಿಕೊಳ್ಳಲೂ ಇಲ್ಲ, ತಿರಸ್ಕರಿಸಲೂ ಇಲ್ಲ. ಬದಲಾಗಿ ಅದು ಕೊಟ್ಟ ಉತ್ತರ ಇಸ್ರೇಲ್​ನ ಹಾಫ್ ಅಶ್ಕೆಲಾನ್ ಪ್ರದೇಶದ ಮೇಲೆ ರಾಕೆಟ್ ದಾಳಿ ಎಸಗುವುದರ ಮೂಲಕ. ಪ್ರತಿಯಾಗಿ ಪೂರ್ವ ಜೆರುಸಲೇಮ್ ಪ್ಯಾಲೆಸ್ತೀನ್ ಪ್ರದೇಶಗಳ ಮೇಲೆ ಇಸ್ರೇಲ್ ದಾಳಿಯೆಸಗಿತು. ಈ ದಾಳಿ-ಪ್ರತಿದಾಳಿಗಳಲ್ಲಿ ಶಾಂತಿಯ ಅವಕಾಶ ಕೊಚ್ಚಿಹೋಗಿ ಜುಲೈ 8ರಂದು ಇಸ್ರೇಲ್ Operation Protective Edge ಎಂಬ ಸಮರ ಕಾರ್ಯಾಚರಣೆ ಘೊಷಿಸಿ ಹಮಾಸ್​ಗೆ ಎಚ್ಚರಿಕೆ ನೀಡಿತು. ಶಾಂತಿಗಿದ್ದ ಕೊನೆಯ ಅವಕಾಶವನ್ನು ಮಣ್ಣಿಗೆಸೆದ ಹಮಾಸ್ ಕೈಗೊಂಡದ್ದು ಇಸ್ರೇಲಿ ರಾಜಧಾನಿ ಟೆಲ್ ಅವಿವ್ ಮೇಲೆಯೇ ದೂರಗಾಮಿ ರಾಕೆಟ್ ದಾಳಿ. ಅಲ್ಲಿಗೆ ಇಸ್ರೇಲ್​ನ ತಾಳ್ಮೆಯ ಕಟ್ಟೆಯೊಡೆಯಿತು. ಗಾಜಾ ಮೇಲೆ ವಾಯುದಾಳಿಯನ್ನದು ತೀವ್ರಗೊಳಿಸಿತು.

ಅಂತಿಮವಾಗಿ ಗಾಜಾದಲ್ಲಿ 2,200 ಜನ ಪ್ರಾಣ ಕಳೆದುಕೊಂಡು 10,000ಕ್ಕೂ ಹೆಚ್ಚು ಜನ ಗಾಯಗೊಂಡರು. ಇದಕ್ಕೆ ಮುಖ್ಯವಾಗಿ ಕಾರಣವಾದದ್ದು ಬಹುಪಾಲು ಹಮಾಸ್ ರಾಕೆಟ್​ಗಳು ಇಸ್ರೇಲ್ ತಲುಪದೇ ಗಾಜಾದಲ್ಲೇ ಬಿದ್ದದ್ದು. ರಾಕೆಟ್​ಗಳನ್ನು ಅಡಗಿಸಿಡಲು ಹಮಾಸ್ ಬಳಸುತ್ತಿದ್ದ ಸುರಂಗಗಳಲ್ಲಿ ಕನಿಷ್ಠ 34 ಇಸ್ರೇಲಿ ದಾಳಿಯಲ್ಲಿ ನಾಶವಾದವು. ಜತೆಗೆ ಹಮಾಸ್ ಸಂಗ್ರಹದಲ್ಲಿದ್ದ ಹತ್ತು ಸಾವಿರಕ್ಕೂ ಹೆಚ್ಚಿನ ರಾಕೆಟ್​ಗಳಲ್ಲಿ ಬಹುಪಾಲು ಉಪಯೋಗಿಸಲ್ಪಟ್ಟಿದ್ದವು ಅಥವಾ ನಾಶವಾಗಿದ್ದವು. ಈ ಲೆಕ್ಕದಲ್ಲಿ ಹಮಾಸ್​ನ ಶಸ್ತ್ರಸಂಗ್ರಹಕ್ಕೆ ಮತ್ತು ಗಾಜಾದ ಬಡಪಾಯಿ ನಾಗರಿಕರಿಗೆ ಈ ಘರ್ಷಣೆಗಳು ಹೆಚ್ಚು ಹಾನಿಯನ್ನೆಸಗಿದವು. ಹಲವು ಅರ್ಥಗಳಲ್ಲಿ ಇದು ಹಮಾಸ್​ನ ಸೋಲು. ಇದರಿಂದ ಪಾಠ ಕಲಿತ ಹಮಾಸ್ ನಿರ್ವಾಹವಿಲ್ಲದೇ ಫತಾ ಜತೆ ಸಂಬಂಧ ಕುದುರಿಸಿಕೊಳ್ಳುವ ಹಾದಿಗಿಳಿಯಿತು ಮತ್ತು ಮಹಮೂದ್ ಅಬ್ಬಾಸ್​ರನ್ನು ಅಧ್ಯಕ್ಷರೆಂದು ಮಾನ್ಯ ಮಾಡುವ ಸ್ಥಿತಿಗೂ ತಲುಪಿತು. ಅತ್ತ ಪ್ರಮುಖ ಅರಬ್ ದೇಶಗಳು ಇಸ್ರೇಲ್ ಜತೆ ಸ್ನೇಹ ಒಪ್ಪಂದ ಮಾಡಿಕೊಂಡವು. ಹಮಾಸ್ ಮತ್ತೊಂದು ಘರ್ಷಣೆಗೆ ಇಳಿಯಲಾರದು ಎನ್ನುವ ಸ್ಥಿತಿ ನಿರ್ವಣವಾಯಿತು. ಆದರೆ ಹಮಾಸ್ ಈಗ ‘ಸುಮ್ಮನಿರಲಾರದ’ ಸ್ಥಿತಿಯನ್ನು ಪ್ರತ್ಯಕ್ಷವಾಗಿ ಅಧ್ಯಕ್ಷ ಮಹಮೂದ್ ಅಬ್ಬಾಸ್ ಮತ್ತು ಪರೋಕ್ಷವಾಗಿ ಇಸ್ರೇಲ್ ನಿರ್ವಿುಸಿಬಿಟ್ಟವು. ಇದೆಲ್ಲದರ ವಿಶ್ಲೇಷಣೆ ಮುಂದಿನವಾರ, ಲೇಖನದ ಮೂರನೆಯ ಹಾಗೂ ಅಂತಿಮ ಭಾಗದಲ್ಲಿ. (ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net