ಸಾವಿಲ್ಲದ ಸತ್ಯ ಮತ್ತು ಸುಖವಿಲ್ಲದ ಸುಳ್ಳು

Tiesta
Published on
ಗುಜರಾತ್ ಕೋಮು ಹಿಂಸಾಚಾರಕ್ಕೆ ಇಪ್ಪತ್ತು ವರ್ಷಗಳೇ ಆಗಿಹೋದವು. ಆ ದುರಂತಕ್ಕೆ ರಾಜ್ಯದ ಅಂದಿನ ಮುಖ್ಯಮಂತ್ರಿ ಮತ್ತು ರಾಷ್ಟ್ರದ ಇಂದಿನ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಜವಾಬ್ದಾರಿಯಾಗಿಸುವ ಆಪಾದನೆಗಳಿಗೂ ಅಷ್ಟೇ ವರ್ಷಗಳಾಗಿಹೋಗಿವೆ. ಆ ಹಿಂಸಾಚಾರದ ವಿವಿಧ ಆಯಾಮಗಳ ಬಗ್ಗೆ ಜಸ್ಟಿಸ್ ನಾನಾವತಿ ಆಯೋಗ, ಗುಜರಾತ್ ಉಚ್ಚ ನ್ಯಾಯಾಲಯ, ಸವೋಚ್ಚ ನ್ಯಾಯಾಲಯದ ವಿಶೇಷ ತನಿಖಾ ತಂಡಗಳು ವಿಚಾರಣೆ ಹಾಗೂ ತನಿಖೆಗಳನ್ನು ವರ್ಷಗಳ ಹಿಂದೆಯೇ ನಡೆಸಿವೆ. ಅವೆಲ್ಲವನ್ನೂ ಸಮಗ್ರವಾಗಿ ತೆಗೆದುಕೊಂಡರೆ ಕೋಮು ಹಿಂಸಾಚಾರದಲ್ಲಿ ಮೋದಿಯವರ ಪಾತ್ರ ಇರಲಿಲ್ಲ ಮತ್ತು ಹಿಂಸಾಚಾರ ನಿಯಂತ್ರಿಸಲು ಅವರು ಸೂಕ್ತ ಕ್ರಮಗಳನ್ನು ಕ್ಷಿಪ್ರವಾಗಿ ಕೈಗೊಂಡರು ಎನ್ನುವುದು ವೇದ್ಯವಾಗುತ್ತದೆ. ಇದೇ ಅಭಿಪ್ರಾಯವನ್ನು ದೇಶದ ಅತ್ಯಂತ ಸಮರ್ಥ ಪೊಲೀಸ್ ಅಧಿಕಾರಿಗಳಲ್ಲೊಬ್ಬರಾದ ಕೆ.ಪಿ.ಎಸ್.ಗಿಲ್ ಹೇಳಿದ್ದಾರೆ. ಗೌರವಾನ್ವಿತ ಸಂಶೋಧಕಿ ಪೊ›. ಮಧುಪೂರ್ಣಿಮಾ ಕಿಶ್ವರ್ ಅವರು ವಿಸõತ ಅಧ್ಯಯನ ಮತ್ತು ಸೂಕ್ಷ್ಮ ಅವಲೋಕನದಿಂದ ಇದನ್ನು ಸಾರುವುದರ ಜತೆಗೆ ಮೋದಿಯವರ ವಿರುದ್ಧ ಪಿತೂರಿ ನಡೆಸಲಾಯಿತು ಎಂದೂ ತೋರಿಸಿದ್ದಾರೆ. ಆದಾಗ್ಯೂ ತೀಸ್ತಾ ಸೆತಲ್ವಾಡ್ ಎಂಬ ತಥಾಕಥಿತ ಸಾಮಾಜಿಕ ಕಾರ್ಯಕರ್ತೆ ಒಬ್ಬರು ನೈಜ ಸಂತ್ರಸ್ತೆ, ಇಬ್ಬರು ಪ್ರಶ್ನಾರ್ಹ ಕರ್ತವ್ಯನಿಷ್ಠೆಯ ಪೊಲೀಸ್ ಅಧಿಕಾರಿಗಳು ಮತ್ತು ತನ್ನ ‘ಕೈ ಶುದ್ಧವಿಲ್ಲದ’ ಎನ್​ಜಿಓ ಮೂಲಕ ಮತ್ತೆಮತ್ತೆ ನ್ಯಾಯಾಲಯದ ಕಟ್ಟೆ ಹತ್ತಿ ವಿಷಯವನ್ನು ಸದಾ ಚಾಲ್ತಿಯಲ್ಲಿಡಲು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಅದನ್ನು ಅಂತಿಮವಾಗಿ ನಿಲುಗಡೆಗೆ ತರಬಹುದಾದ ತೀರ್ಪನ್ನು ಸವೋಚ್ಚ ನ್ಯಾಯಾಲಯ ಇದೇ 24ರಂದು ನೀಡಿದೆ.

ಕೋಮು ಹಿಂಸಾಚಾರದ ಸಮಯದಲ್ಲಿ ಉದ್ರಿಕ್ತ ಗಲಭೆಕೋರರ ಗುಂಪು ಅಹ್ಮದಾಬಾದ್ ನಗರದ ಗುಲ್ಬರ್ಗ್ ಸೊಸೈಟಿ ವಸತಿ ಸಮುಚ್ಚಯಕ್ಕೆ ದಾಳಿಯಿಟ್ಟು 69 ಜನರನ್ನು ಕೊಂದಿತು. ಹತ್ಯೆಗೀಡಾದವರಲ್ಲಿ ಒಬ್ಬರು ಕಾಂಗ್ರೆಸ್ ಸಂಸತ್ ಸದಸ್ಯರಾಗಿದ್ದ ಎಹ್ಸನ್ ಜಾಫ್ರಿ. ಅವರ ಪತ್ನಿ ಝುಕಿಯಾ ಜಾಫ್ರಿಯವರು ಮುಖ್ಯಮಂತ್ರಿ ಸೇರಿದಂತೆ 63 ವ್ಯಕ್ತಿಗಳ ವಿರುದ್ಧ ಜೂನ್ 8, 2006ರಂದು ಗುಜರಾತ್ ಡಿಜಿಪಿಗೆ 67 ಪುಟಗಳ ದೂರು ಸಲ್ಲಿಸಿದರು. ಸಹದೂರುದಾರರಾಗಿದ್ದದ್ದು ತೀಸ್ತಾ ಸೆತಲ್ವಾಡ್​ರ ಎನ್​ಜಿಓ ಸಿಟಿಜನ್ಸ್ ಫಾರ್ ಜಸ್ಟಿಸ್ ಅಂಡ್ ಪೀಸ್. ನಂತರ ಸವೋಚ್ಚ ನ್ಯಾಯಾಲಯ ನೇಮಿಸಿದ ವಿಶೇಷ ತನಿಖಾ ತಂಡ ಮೋದಿ ಮತ್ತಿತರರನ್ನು ಅಪರಾಧಮುಕ್ತರನ್ನಾಗಿಸಿತು ಮತ್ತು ಎಸ್​ಐಟಿ ನಿರ್ಣಯವನ್ನು ನ್ಯಾಯಾಲಯ ಸ್ವೀಕರಿಸಿತು. ಈ ನಡುವೆ ಏಪ್ರಿಲ್ 15, 2013ರಂದು ತೀಸ್ತಾ ಸೆತಲ್ವಾಡ್​ರ ಎನ್​ಜಿಓ ಜತೆಗೂಡಿ ಝುಕಿಯಾ ಜಾಫ್ರಿ 514 ಪುಟಗಳ ಪೊ›ಟೆಸ್ಟ್ ಪಿಟಿಷನ್ ಸಲ್ಲಿಸಿದರು. ಪರಿಶೀಲನೆಯ ನಂತರ ಇದೆಲ್ಲವನ್ನೂ ನ್ಯಾಯಾಲಯ 2018ರಲ್ಲಿ ವಜಾಗೊಳಿಸಿ ದಾಗ್ಯೂ ಕಳೆದ ಡಿಸೆಂಬರ್​ನಲ್ಲಿ ಪುನರ್ವಿಮರ್ಶೆಗಾಗಿ ದೂರುದಾರದಿಂದ ಪಿಟಿಷನ್ ಸಲ್ಲಿಕೆಯಾಯಿತು. ಅದನ್ನು ವಜಾಗೊಳಿಸಿ, ಎಲ್ಲ 63 ಆರೋಪಿಗಳನ್ನೂ ನಿದೋಷಿ ಗಳೆಂದು ತೀರ್ವನಿಸಿ ಸವೋಚ್ಚ ನ್ಯಾಯಾಲಯ ಈಗ ತೀರ್ಪು ನೀಡಿದೆ.

400 ಪುಟಗಳಿಗೂ ಹೆಚ್ಚಿನ ಈ ತೀರ್ಪಿನಲ್ಲಿ ತೀಸ್ತಾ ಸೆತಲ್ವಾಡ್ ಹೆಸರು 46 ಬಾರಿ ಉಲ್ಲೇಖಗೊಂಡಿದೆಯಂತೆ! ಅವರ ಕುರಿತಾಗಿ ನ್ಯಾಯಾಲಯ ಹೇಳಿರುವ ಮಾತುಗಳಲ್ಲಿ ಮುಖ್ಯವಾದುವು ಇವು- ಸನ್ನಿವೇಶದ ನಿಜವಾದ ಬಲಿಪಶುವಾದ ಝುಕಿಯಾ ಜಾಫ್ರಿಯವರ ಭಾವನೆಗಳನ್ನು ತನ್ನದೇ ರಹಸ್ಯ ಉದ್ದೇಶಗಳಿಗಾಗಿ ಬಳಸಿಕೊಂಡಿದ್ದಾರೆ, ಹಾಗೆ ಮಾಡುವ ಮೂಲಕ ನ್ಯಾಯಿಕ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ, ಅಸತ್ಯಗಳನ್ನು ಹೇಳುವಂತೆ ಝುಕಿಯಾ ಜಾಫ್ರಿಯವರಿಗೆ ಗಿಳಿಪಾಠ ಹೇಳಿದ್ದಾರೆ, ಅಸತ್ಯಗಳು ಎಂದು ಸ್ವತಃ ತಿಳಿದಿದ್ದಾಗ್ಯೂ ಅವರು ಹೀಗೆ ಮಾಡಿದ್ದಾರೆ. ಅಂತಿಮವಾಗಿ, ತೀಸ್ತಾರ ಈ ಬಗೆಯ ಋಣಾತ್ಮಕ ವರ್ತನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಲಯ ಅವರ ಪೂರ್ವಾಪರವನ್ನು ಶೋಧಿಸುವಂತೆ ಮತ್ತು ಅವರ ವಿರುದ್ಧ ಕಾನೂನು ಕ್ರಮದ ಬಗ್ಗೆ ತನ್ನ ತೀರ್ಪಿನಲ್ಲಿ ಹೇಳಿದೆ. ನ್ಯಾಯಾಲಯದ ತೀರ್ಪು ಬಂದ ಮರುದಿನವೇ ಅಹ್ಮದಾಬಾದ್ ಕ್ರೖೆಂ ಬ್ರಾ್ಯಂಚ್ ಭಯೋತ್ಪಾದನಾ ನಿಗ್ರಹ ದಳದ ಮೂಲಕ ತೀಸ್ತಾ ಸೆತಲ್ವಾಡ್ ಮತ್ತು ಅವರಿಗೆ ಸಹಕರಿಸಿದ ಆರೋಪದ ಮೇಲೆ ಮಾಜಿ ಪೊಲೀಸ್ ಅಧಿಕಾರಿ ಆರ್.ಬಿ.ಶ್ರೀಕುಮಾರ್​ರನ್ನು ಬಂಧಿಸಿದೆ. ಮತ್ತೊಬ್ಬ ಆರೋಪಿ ಸಂಜೀವ್ ಭಟ್ ಈಗಾಗಲೇ ಬಂಧನದಲ್ಲಿದ್ದಾರೆ. ಈ ಮೂವರ ವಿರುದ್ಧ ಕ್ರೖೆಂ ಬ್ರಾ್ಯಂಚ್​ನಲ್ಲಿ ಸಲ್ಲಿಕೆಯಾಗಿರುವ ಎಫ್​ಐಆರ್​ನಲ್ಲಿರುವ ಪ್ರಮುಖ ಆರೋಪಗಳೆಂದರೆ ಸುಳ್ಳು ಕೇಸ್ ದಾಖಲಿಸಿರುವುದು ಮತ್ತು ಅದಕ್ಕಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿರುವುದು; ಆಯೋಗದ ಮುಂದೆ, ವಿಶೇಷ ತನಿಖಾ ತಂಡದ ಮುಂದೆ ಸುಳ್ಳು ಸಾಕ್ಷಿಗಳನ್ನು ಪ್ರಸ್ತುತ ಪಡಿಸಿರುವುದು ಮತ್ತು ಅವೆಲ್ಲವೂ ಸುಳ್ಳು ಹಾಗೂ ತಮ್ಮದೇ ಕಲ್ಪನೆ ಎಂದು ತಿಳಿದೂ ಅದೆಲ್ಲವನ್ನು ಮಾಡಿರುವುದು. ತೀಸ್ತಾ ಮತ್ತವರ ಸಹಯೋಗಿಗಳ ‘ಅಪರಾಧ’ ಗುರುತರ ಮತ್ತು ಗಂಭೀರವಾಗಿರುವುದು ಇಲ್ಲಿ. ಒಂದುವೇಳೆ ತಮ್ಮ ಸುಳ್ಳು ಆರೋಪಗಳಿಗೆ ಇವರು ಸೃಷ್ಟಿಸಿದ ಸುಳ್ಳು ದಾಖಲೆ ಮತ್ತು ಸಾಕ್ಷಿಗಳ ವಿರುದ್ಧ ಹೋರಾಡಿ ತಮ್ಮನ್ನು ರಕ್ಷಿಸಿಕೊಳ್ಳಲು ಇವರ ದೂರಿಗೆ ಗುರಿಯಾದವರು ವಿಫಲರಾಗಿದ್ದರೆ ಅವರಿಗೆ ಸಿಗಬಹುದಾಗಿದ್ದ ಶಿಕ್ಷೆ ಮರಣದಂಡನೆ!

ತೀಸ್ತಾ ಮತ್ತವರ ಸಹಯೋಗಿಗಳ ಈ ಬಗೆಯ ಕೃತ್ಯಗಳು ಸಾಧುವೇ ಎಂದು ನೋಡಬೇಕಾದರೆ ಗುಜರಾತ್ ದುರಂತವನ್ನು ವಿವಿಧ ಕೋನಗಳಿಂದ ಮರುಶೋಧಿಸಬೇಕಾಗುತ್ತದೆ. 2002ರ ಫೆಬ್ರವರಿ 28 ಮತ್ತು ಮಾರ್ಚ್ 1, 2ರಂದು ಗುಜರಾತ್​ನಲ್ಲಿ ನಡೆದ ಹಿಂಸಾಚಾರ ಖಂಡಿತವಾಗಿಯೂ ಅಕ್ಷಮ್ಯ, ಆದರೆ ಇದಕ್ಕೆ ಪ್ರೇರಣೆಯಾದದ್ದು ಗೋಧ್ರಾ ಹತ್ಯಾಕಾಂಡ. ಘಾಂಚಿ ಮುಸ್ಲಿಮರು ಫೆಬ್ರವರಿ 27ರ ಬೆಳಿಗ್ಗೆ ಸಬರ್​ವುತಿ ಎಕ್ಸ್​ಪ್ರೆಸ್​ನ ಎಸ್-6 ಬೋಗಿಗೆ ಬೆಂಕಿ ಹಚ್ಚಿ 59 ಹಿಂದೂಗಳನ್ನು ಸುಟ್ಟು ಕೊಲ್ಲದೇ ಇದ್ದಿದ್ದರೆ ಗುಜರಾತ್ ಹೊತ್ತಿ ಉರಿಯುತ್ತಿರಲಿಲ್ಲ. ಇಷ್ಟಾಗಿಯೂ, ಸ್ವಭಾವತಃ ಶಾಂತಮತಿಗಳಾದ ಸಾಮಾನ್ಯ ಗುಜರಾತಿಗಳು ಮತೀಯವಾಗಿ ಇಷ್ಟೇಕೆ ಉದ್ರಿಕ್ತರಾದರು ಎನ್ನುವುದಕ್ಕೆ ಉತ್ತರ ಇತಿಹಾಸದಲ್ಲಿದೆ.

ಇಸ್ಲಾಂ ಒಂದು ಸಾಮ್ರಾಜ್ಯಶಾಹಿ ಧರ್ಮ. ಪ್ರವಾದಿಯವರು ಕಾಲವಾದ ನಂತರದ ಒಂದೇ ತಲೆಮಾರಿನಲ್ಲಿ 900 ವರ್ಷಗಳ ಇತಿಹಾಸವಿದ್ದ ಪರ್ಶಿಯಾದ ಸಸಾನಿದ್ ಸಾಮ್ರಾಜ್ಯವನ್ನು ಧೂಳೀಪಟಗೊಳಿಸಿ ಅಗ್ನಿ ಆರಾಧಕರ ಮೇಲೆ ಅರಬ್ಬರು ಇಸ್ಲಾಮನ್ನು ಹೇರಿದ್ದು ಕ್ರೂರ ವಿಧಾನಗಳಿಂದ. ಅವುಗಳಿಂದ ತಪ್ಪಿಸಿ ಕೊಂಡು ಓಡಿಬಂದ ಪಾರ್ಸಿಗಳಿಂದ ಇಸ್ಲಾಮ್ ಕ್ರೌರ್ಯದ ಮೊದಲ ಪರಿಚಯ ಗುಜರಾತಿಗಾಯಿತು. ಮುಂದಿನ ಐದಾರು ದಶಕಗಳಲ್ಲಿ ನೆರೆಯ ಸಿಂಧ್ ಅರಬ್ಬರ ವಶವಾದಾಗ ಗುಜರಾತ್ ಹಿಂದೂಧರ್ಮದ ಗಡಿ ಎಂಬ ಅರಿವು ಆ ನಾಡಿನ ಜನತೆಗಾಯಿತು. ನಂತರ 1025ರಲ್ಲಿ ಘಜನಿಯ ಸುಲ್ತಾನ ಮಹಮದ್ ದಕ್ಷಿಣ ಗುಜರಾತ್​ನ ಸೋಮನಾಥ ದೇವಾಲಯವನ್ನು ನಾಶಮಾಡಿದ್ದು, ಹಿಂದೂ ಧಾರ್ವಿುಕ ಸಂಕೇತಗಳನ್ನು ಒದೆದದ್ದು ಇಸ್ಲಾಂನಿಂದ ಒದಗಬಹುದಾದ ಹಾನಿಯ ನೇರ ಪರಿಚಯವನ್ನು ಗುಜರಾತಿಗಳಿಗೆ ಮಾಡಿಕೊಟ್ಟಿತು. ಹೀಗಾಗಿಯೇ ಜಹಾಂಗೀರ್​ನ ಕಾಲದಿಂದಲೂ ಗುಜರಾತಿಗಳು ಆಗಾಗ್ಗೆ ಧಾರ್ವಿುಕ ವಿಷಯಗಳಿಗೆ ಸಂಬಂಧಿಸಿದಂತೆ ತೀವ್ರವಾಗಿ ಉದ್ರೇಕಿತರಾಗಿ ಹಿಂಸೆಯಲ್ಲಿ ತೊಡಗುವುದು ನಡೆದು ಕೊಂಡೇ ಬಂದಿದೆ. ಸ್ವಾತಂತ್ರಾ್ಯನಂತರವೂ ಗುಜರಾತಿಗಳ ಮುಸ್ಲಿಂ-ವಿರೋಧಿ ಮನೋಭಾವವನ್ನು ಇನ್ನಷ್ಟು ಹೆಚ್ಚಿಸಿದ್ದು ಪಾಕಿಸ್ತಾನದ ನೀತಿ. ಉತ್ತರ ಗುಜರಾತ್​ನ ಕಚ್ಛ್​ನ ರಣ್ ಪ್ರದೇಶದ ಸುಮಾರು 3,500 ಚದರ ಕಿಲೋಮೀಟರ್ ಪ್ರದೇಶದ ಮೇಲೆ ತನ್ನ ಹಕ್ಕು ಸ್ಥಾಪಿಸಿದ ಪಾಕಿಸ್ತಾನ ಮೇ 1965ರಲ್ಲಿ ಆ ಪ್ರದೇಶದ ಮೇಲೆ ಆಕ್ರಮಣವೆಸಗಿತು. ಆಗ ಭಾರತೀಯ ಸೇನೆ ಹಿಮ್ಮೆಟ್ಟಿದ್ದು ನಾವು ಒಪ್ಪಿಕೊಳ್ಳಬೇಕಾದ ಕಹಿಸತ್ಯ. ವಿವಾದವನ್ನು ಭಾರತ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಒಯ್ದಾಗ, ಅದು ಸ್ಥಾಪಿಸಿದ ಟ್ರಿಬ್ಯೂನಲ್ ಸುಮಾರು 780 ಚ.ಕಿ.ಮೀ. ನೆಲವನ್ನು ಪಾಕಿಸ್ತಾನಕ್ಕೆ ನೀಡುವಂತೆ ಭಾರತಕ್ಕೆ ಹೇಳಿತು ಮತ್ತು ಭಾರತ ಅದನ್ನು ಪಾಲಿಸಿತು. ಹೀಗೆ ತನ್ನ ಒಂದಷ್ಟು ಪ್ರದೇಶವನ್ನು ಅಧಿಕೃತವಾಗಿ ಮತ್ತು ಶಾಶ್ವತವಾಗಿ ಕಳೆದುಕೊಂಡ ಭಾರತದ ಏಕೈಕ ರಾಜ್ಯ ಗುಜರಾತ್. ಆ ಪ್ರಕರಣದ ತರುವಾಯ ಗುಜರಾತ್ ಕಂಡದ್ದು ದಾಖಲಿತ ಇತಿಹಾಸದ ಅತಿದೊಡ್ಡ ಕೋಮು ಗಲಭೆ. 1969ರಲ್ಲಿ ಐದು ಸಾವಿರಕ್ಕಿಂತಲೂ ಹೆಚ್ಚು ಮುಸ್ಲಿಮರು ಅಲ್ಲಿ ಜೀವ ಕಳೆದುಕೊಂಡರು.

ಇನ್ನು ಗೋಧ್ರಾ ಇಡೀ ರಾಜ್ಯದಲ್ಲೇ ಅತ್ಯಂತ ಸೂಕ್ಷ್ಮ ಮತೀಯ ವಾತಾವರಣ ಹೊಂದಿದ ಪ್ರದೇಶ. 1925ರಿಂದ 1999ರವರೆಗೆ ಅಲ್ಲಿ ಹದಿನೈದು ದೊಡ್ಡ ಪ್ರಮಾಣದ ಮತೀಯ ಗಲಭೆಗಳು ಘಟಿಸಿದ್ದವು. ಫೆಬ್ರವರಿ 27ರ ಬೆಳಿಗ್ಗೆ ಗೋಧ್ರಾ ರೈಲ್ವೆ ಸ್ಟೇಷನ್​ಗೆ ಬಂದ ಸಬರ್​ವುತಿ ಎಕ್ಸ್​ಪ್ರೆಸ್ ಟ್ರೇನ್​ಗೆ ಸ್ಥಳೀಯ ಘಾಂಚಿ ಮುಸ್ಲಿಮರು ಬೆಂಕಿ ಹಚ್ಚಿ ಹಿಂದೂ ಕರಸೇವಕರನ್ನು ಸುಟ್ಟು ಕೊಂದರು. ಪ್ರತಿಕ್ರಿಯೆಯಾಗಿ ಇಡೀ ಗುಜರಾತ್ ಹೊತ್ತಿ ಉರಿಯತೊಡಗಿತು, ಹಿಂಸಾಚಾರಕ್ಕೆ ಮುಖ್ಯಮಂತ್ರಿ ನರೇಂದ್ರ ಮೋದಿಯವರನ್ನು ಜವಾಬ್ದಾರರನ್ನಾಗಿಸಿ ಕಾಂಗ್ರೆಸ್, ಅದರ ಪರವಾಗಿದ್ದ ಮಾಧ್ಯಮಗಳು ಅಪಪ್ರಚಾರ ಆರಂಭಿಸಿದವು. ‘ರೋಮ್ ಹೊತ್ತಿ ಉರಿಯುತ್ತಿದ್ದಾಗ ಚಕ್ರವರ್ತಿ ನೀರೋ ನಿದ್ದೆಮಾಡುತ್ತಿದ್ದ ಹಾಗೆ ಗುಜರಾತ್ ಹೊತ್ತಿ ಉರಿಯುತ್ತಿದ್ದಾಗ ಮುಖ್ಯಮಂತ್ರಿ ಮೋದಿ ನಿದ್ದೆ ಮಾಡುತ್ತಿದ್ದರು’ ಎಂದು ನಿವೃತ್ತ ನ್ಯಾಯಾಧೀಶರೊಬ್ಬರು ಹೇಳಿದ್ದು ಇವರ ಅಪಪ್ರಚಾರದ ಘೊಷವಾಕ್ಯವಾಯಿತು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯಂತೂ ಮೋದಿಯವರನ್ನು ‘ಸಾವಿನ ವ್ಯಾಪಾರಿ’ ಎಂದು ಕರೆದರು. ತೀಸ್ತಾ ಸೆತಲ್ವಾಡ್ ಮೋದಿ ಮತ್ತವರ ಸಹಯೋಗಿಗಳ ವಿರುದ್ಧ ಕೋರ್ಟ್ ಕಟ್ಟೆಯೇರಿದರು. ಕರಸೇವಕರನ್ನು ಹೊತ್ತ ಟ್ರೇನ್​ಗಳು ಅಂದು ದೇಶದಾದ್ಯಂತ ಸಂಚರಿಸುತ್ತಿದ್ದವು. ಆದರೆ ದಾಳಿಯಾದದ್ದು ಸಬರ್​ವುತಿ ಎಕ್ಸ್​ಪ್ರೆಸ್ ಟ್ರೇನ್ ಮೇಲೆ ಮಾತ್ರ! ಅದೂ ಬಿಜೆಪಿ ಆಡಳಿತವಿದ್ದ ಗುಜರಾತ್​ನಲ್ಲಿ, ಅತೀ ಸೂಕ್ಷ್ಮ ಮತೀಯ ವಾತಾವರಣದ ಇತಿಹಾಸ ಹೊಂದಿದ್ದ ಗೋಧ್ರಾದಲ್ಲಿ! ಇದೆಲ್ಲವೂ ಆಕಸ್ಮಿಕವೇ? ಇಲ್ಲ ಎಂದು ಜಸ್ಟಿಸ್ ನಾನಾವತಿ ಆಯೋಗ ಹೇಳುತ್ತದೆ. ಸಬರ್​ವುತಿ ಎಕ್ಸ್​ಪ್ರೆಸ್​ಗೆ ಬೆಂಕಿ ಹಚ್ಚಲು ಹಿಂದಿನ ಸಂಜೆಯೇ 600 ಲೀಟರ್ ಪೆಟ್ರೋಲ್ ಸಂಗ್ರಹಿಸಿಟ್ಟುಕೊಂಡಿದ್ದರು ಎಂದು ಆಯೋಗ ಹೇಳುತ್ತದೆ. ಅಂದರೆ ಇಡೀ ದುಷ್ಕರ್ಮ ಪೂರ್ವಯೋಜಿತ! ಆಯೋಗ ಬಯಲುಮಾಡಿರುವ ಇನ್ನೊಂದು ವಿಷಯವೆಂದರೆ ಟ್ರೇನ್​ಗೆ ಬೆಂಕಿ ಹಚ್ಚಿದ ದುಷ್ಕರ್ವಿುಗಳಿಗೆ ಸ್ಥಳೀಯ ಕಾಂಗ್ರೆಸ್ ನಾಯಕರ ನೇರ ಸಂಪರ್ಕ ಮತ್ತು ಬೆಂಬಲವಿತ್ತು ಹಾಗೂ ಘಟನಾನಂತರ ಕೆಲವರು ಪಾಕಿಸ್ತಾನಕ್ಕೆ ಓಡಿಹೋಗಿ ತಲೆಮರೆಸಿಕೊಂಡರು ಎಂದು.

ಗಲಭೆಗಳನ್ನು ಹರಡುವಲ್ಲಿ ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರೂ ಭಾಗಿಯಾಗಿದ್ದೀಗ ಬಹಿರಂಗ ಸತ್ಯ. ಅಹ್ಮದಾಬಾದ್ ನಗರದ ಕಾಂಗ್ರೆಸ್ ಮೇಯರ್ ಹಿಮ್ಮತ್ ಸಿಂಗ್ ಪಟೇಲ್ ಒಂದೇ ದಿನದಲ್ಲಿ ಮಸೀದಿಯೊಂದನ್ನು ಧ್ವಂಸ ಮಾಡಿಸಿ ಅಲ್ಲಿ ರಸ್ತೆಯನ್ನು ನಿರ್ವಿುಸಿಬಿಟ್ಟರು! ಮುಖ್ಯಮಂತ್ರಿ ನರೇಂದ್ರ ಮೋದಿ ಕೋಮು ಹಿಂಸಾಚಾರಗಳನ್ನು ತಡೆಯಲು ತಕ್ಷಣವೇ ಕ್ರಮಗಳನ್ನು ಕೈಗೊಂಡರು. ರಾಜ್ಯದ ಪೊಲೀಸ್ ಪಡೆಗಳಿಂದಷ್ಟೇ ಗಲಭೆಗಳನ್ನು ನಿಯಂತ್ರಿಸುವುದು ಸಾಧ್ಯವಾಗದು ಎಂದರಿವಾದ ಕೂಡಲೇ ಮೋದಿ ಸುರಕ್ಷಾಪಡೆಗಳನ್ನು ಕಳುಹಿಸಿ ಸಹಕರಿಸುವಂತೆ ಸುತ್ತಲಿನ ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ರಾಜಸ್ತಾನ ಸರ್ಕಾರಗಳಿಗೆ ಲಿಖಿತ ಮನವಿ ಮಾಡಿಕೊಂಡರು. ಮಹಾರಾಷ್ಟ್ರ ಅತ್ಯಲ್ಪ ಪ್ರಮಾಣದಲ್ಲಿ ಸುರಕ್ಷಾಕರ್ವಿುಗಳನ್ನು ಕಳುಹಿಸಿದರೆ ಮಧ್ಯಪ್ರದೇಶ ಮತ್ತು ರಾಜಸ್ತಾನ ಯಾವುದೇ ಸಹಕಾರ ನೀಡಲು ನಿರಾಕರಿಸಿದವು. ಆ ಮೂರೂ ರಾಜ್ಯಗಳಲ್ಲಿ ಇದ್ದದ್ದು ಕಾಂಗ್ರೆಸ್ ಸರ್ಕಾರಗಳು!

ಈಗ ಹೇಳಿ, ಗುಜರಾತ್ ಹೊತ್ತಿ ಉರಿಯುತ್ತಿದ್ದಾಗ ನಿದ್ದೆ ಮಾಡುತ್ತಿದ್ದವರು ಯಾರು? ಜತೆಗೆ ಇನ್ನೊಂದಿಷ್ಟು ಪ್ರಶ್ನೆಗಳು- ಪೂರ್ವಯೋಜನೆಯಂತೆ ಸಬರ್​ವುತಿ ಎಕ್ಸ್​ಪ್ರೆಸ್​ಗೆ ಬೆಂಕಿ ಹಚ್ಚಿದವರು ಕಾಂಗ್ರೆಸ್ ಬೆಂಬಲಿತ ಘಾಂಚಿ ಮುಸ್ಲಿಮರು. ನಂತರ ಅವರಲ್ಲಿ ಹಲವರು ಪಾಕಿಸ್ತಾನಕ್ಕೆ ಓಡಿಹೋಗಿ ಆಶ್ರಯ ಪಡೆದರು. ಕಾಂಗ್ರೆಸ್​ಗೂ, ಪಾಕಿಸ್ತಾನಕ್ಕೂ ರಹಸ್ಯ ಸಂಪರ್ಕವಿಲ್ಲದೇ ಇದು ಸಾಧ್ಯವಿತ್ತೇ? ರಾಜ್ಯದ ಕಾಂಗ್ರೆಸ್ ನೇತಾರರು, ಕಾರ್ಯಕರ್ತರು ಗಲಭೆಯ ಹರಡುವಿಕೆಯಲ್ಲಿ ಪಾತ್ರ ವಹಿಸಿದ್ದರ ಜತೆಗೆ ಹೊರ ರಾಜ್ಯಗಳ ಕಾಂಗ್ರೆಸ್ ಸರ್ಕಾರಗಳು ಹಿಂಸಾಚಾರ ನಿಯಂತ್ರಿಸಲು ಸಹಕರಿಸದೇ ಹೋದದ್ದರಲ್ಲಿ ಕಾಂಗ್ರೆಸ್ ಹೈಕಮಾಂಡ್​ನ ಪಾತ್ರವಿರಲಿಲ್ಲವೇ? ಇಷ್ಟೆಲ್ಲಾ ಆದ ಮೇಲೆ ಇಡೀ ಹಿಂಸಾಚಾರಕ್ಕೆ ಮೋದಿಯವರನ್ನು ನೇರವಾಗಿ ಜವಾಬ್ದಾರರನ್ನಾಗಿಸಿ ಅಪಪ್ರಚಾರ ಆರಂಭಿಸಿದ್ದರಲ್ಲಿ ಯಾವ ಪೂರ್ವಯೋಜಿತ ಕಾರ್ಯಯೋಜನೆಯೂ ಇರಲಿಲ್ಲವೇ? ಅಥವಾ ಗುಜರಾತ್ ಕೋಮು ಹಿಂಸಾಚಾರ ಬಿಜೆಪಿಯನ್ನು ಮತ್ತು ಮೋದಿಯವರನ್ನು ರಾಷ್ಟ್ರರಾಜಕಾರಣದಿಂದ ದೂರ ನೂಕಲು ಕಾಂಗ್ರೆಸ್ ತಯಾರಿಸಿದ್ದ ಹಿಡನ್ ಅಜೆಂಡಾದ ಪ್ರಕಾರ ಘಟಿಸಿದ ದುರಂತವೇ? ಮಾಧ್ಯಮದ, ವೈಚಾರಿಕ ಕ್ಷೇತ್ರದ ಒಂದು ಪ್ರಭಾವಿ ವರ್ಗ ಕಾಂಗ್ರೆಸ್ ಹೇಳಿಕೆಗಳಿಗೆ ಧ್ವನಿವರ್ಧಕಗಳಾದದ್ದು ಎಲ್ಲವೂ ವ್ಯವಸ್ಥಿತ ಸಂಚಿಗನುಗುಣವಾಗಿಯೇ? ಅದನ್ನು ತೀಸ್ತಾ ಸೆತಲ್ವಾಡ್ ನಿರಂತರವಾಗಿ ಜಾರಿಯಲ್ಲಿಡಲು, ಅಂದರೆ, “to keep the pot boiling” ಟೂಲ್ಕಿಟ್ ತಯಾರಾಗಿತ್ತೇ? ಇನ್ನು ತನಿಖೆಗಳ ಮತ್ತೊಂದು ಸರಣಿ ಆರಂಭವಾಗಬೇಕಿದೆ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net