ಭಯೋತ್ಪಾದಕ ಪಾಕಿಸ್ತಾನಕ್ಕೆ ತಾಲಿಬಾನ್ ಭೂತಬಾಧೆ

jagadagala0000
Published on
ಚೀನೀ ಕಮ್ಯೂನಿಸ್ಟ್ ಸತ್ತೆಯ ಮಾತಿಗನುಗುಣವಾಗಿ ಶರೀಫ್ ಸಹೋದರರು ಜನರಲ್ ಆಸಿಮ್ ಮುನೀರ್ ಅವರನ್ನು ಪಾಕಿಸ್ತಾನಿ ಸೇನೆಯ ದಂಡನಾಯಕನ ಪಟ್ಟಕ್ಕೇರಿಸಿ ಇದೇ 29ಕ್ಕೆ ಒಂದು ತಿಂಗಳಾಗುತ್ತಿದೆ. ನಿರೀಕ್ಷೆಯಂತೇ ಈ ಅವಧಿಯಲ್ಲಿ ಚೀನಾ ಮತ್ತು ಪಾಕಿಸ್ತಾನದ ಹಾಗೂ ಪಾಕಿಸ್ತಾನೀ ಸರ್ಕಾರ ಮತ್ತು ಸೇನೆಯ ಭಾರತ-ವಿರೋಧಿ ನೀತಿಗಳಲ್ಲಿ ಅಸಾಧಾರಣ ತಾಳಮೇಳ ಕಂಡುಬಂದಿದೆ. ಇಪ್ಪತೆôದು ವರ್ಷಗಳ ನಂತರ ಪಂಜಾಬ್ ಗಡಿಯಲ್ಲಿ ಪಾಕಿಸ್ತಾನಿ ರೇಂಜರ್ಸ್ (ಗಡಿ ಭದ್ರತಾ ಪಡೆ) ನಮ್ಮ ಬಿಎಸ್​ಎಫ್ ಯೋಧರತ್ತ ಗುಂಡು ಹಾರಿಸುತ್ತಾರೆ. ಅದರ ಮರುದಿನವೇ ಚೀನೀಯರು ತವಾಂಗ್​ನಲ್ಲಿ ಅತಿಕ್ರಮಣವೆಸಗಲು ವಿಫಲ ಪ್ರಯತ್ನ ನಡೆಸುತ್ತಾರೆ! ಅದಾದ ವಾರದೊಳಗೆ ಪಾಕ್ ಸರ್ಕಾರಿ ನೇತಾರರ ಭಾರತ-ವಿರೋಧಿ ವಾಕ್​ಪಟುತ್ವ ಹದ್ದು ಮೀರುತ್ತದೆ. ಮೊದಲಿಗೆ, ಭಯೋತ್ಪಾದಕ ಹಫೀಜ್ ಸಯೀದ್​ನ ಲಾಹೋರ್ ನಿವಾಸದ ಸಮೀಪ ನಡೆದ ಸ್ಪೋಟಕ್ಕೆ ಭಾರತವನ್ನು ಜವಾಬ್ದಾರವಾಗಿಸಿ ಅಲ್ಲಿನ ಗೃಹಮಂತ್ರಿ ರಾಣಾ ಸನಾವುಲ್ಲಾ ಆಪಾದನೆ ಮಾಡುತ್ತಾರೆ. ನಂತರ ವಿದೇಶಮಂತ್ರಿ ಬಿಲಾವಲ್ ಭುಟ್ಟೋ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಭಾರತದ ಪ್ರಧಾನಮಂತ್ರಿಗಳನ್ನು ವೈಯಕ್ತಿಕವಾಗಿ ಅವಹೇಳನಗೈಯುವ ಮಾತಾಡುತ್ತಾರೆ. ಅದಕ್ಕೆ ಭಾರತೀಯ ವಿದೇಶ ಮಂತ್ರಾಲಯದಿಂದ ಚಾಟಿಯೇಟು ಬೀಳುತ್ತಿದ್ದಂತೇ ಅಲ್ಲಿನ ಬಡತನ ನಿಮೂಲನ ಮತ್ತು ಸಾಮಾಜಿಕ ಭದ್ರತಾ ಮಂತ್ರಿ ಶಾಝಿಯಾ ಮರೀ ಅಖಾಡಕ್ಕಿಳಿಯುತ್ತಾರೆ, ‘ಒಂದು ಕೆನ್ನೆಗೆ ಹೊಡೆದರೆ ಇನ್ನೊಂದು ಕೆನ್ನೆಯನ್ನು ಒಡ್ಡುವ ರಾಷ್ಟ್ರ ಪಾಕಿಸ್ತಾನ ಅಲ್ಲ. ಪ್ರತಿಯಾಗಿ ಕೆನ್ನೆಗೆ ಬಾರಿಸುವ ರಾಷ್ಟ್ರ ಇದು’ ಎಂದು ಅಬ್ಬರಿಸಿ ಭಾರತಕ್ಕೆ ಅಣ್ವಸ್ತ್ರ ಬೆದರಿಕೆ ಒಡ್ಡುತ್ತಾರೆ.

ಹೀಗೆ ಪಾಕ್ ಸೇನೆಯ ಟ್ರಿಗರ್ ಹಪಾಹಪಿ ಮತ್ತು ಪಾಕ್ ನಾಯಕರ ಹರಕುಬಾಯಿ ದಕ್ಷಿಣ ಏಶಿಯಾದಲ್ಲಿ ಅಶಾಂತಿಯ ಹೊಸದೊಂದು ಪರ್ವಕ್ಕೆ ನಾಂದಿ ಹಾಡಬಹುದೆಂಬ ಆತಂಕ ಮೂಡುತ್ತಿದ್ದಂತೇ ಪಾಕಿಸ್ತಾನೀ ಸರ್ಕಾರ ಮತ್ತು ಸೇನೆಗಳೆರಡೂ ಆಂತರಿಕ ಸುರಕ್ಷೆಯತ್ತ ಪೂರ್ಣ ಗಮನ ಹರಿಸಬೇಕಾದ ಪರಿಸ್ಥಿತಿಯನ್ನು ತೆಹ್ರೀಕ್-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ನಿರ್ವಿುಸಿಬಿಟ್ಟಿದೆ. ಅದರೊಂದಿಗೆ ಬಲೂಚಿ ಸ್ವಾತಂತ್ರ್ಯ ಹೋರಾಟ ಸಂಘಟನೆಗಳೂ ಸೇರಿಕೊಂಡಿರುವುದು ಹಾಗೂ ಮಾಜಿ ಪ್ರಧಾನಮಂತ್ರಿ ಇಮ್ರಾನ್ ಖಾನ್ ಮತ್ತು ಮಾಜಿ ಐಎಸ್​ಐ ಮುಖ್ಯಸ್ಥ ಫೈಜ್ ಹಮೀದ್ ಸಹಾ ಜತೆಗೂಡಿರುವಂತಹ ಸೂಚನೆಗಳು ಕಾಣಬರುತ್ತಿರುವುದು ಪಾಕಿಸ್ತಾನದ ಏಕತೆಗೇ ನಿರ್ಣಾಯಕ ಹೊಡೆತದಂತೆ ಕಾಣುತ್ತಿದೆ. ಟಿಟಿಪಿ ಒಡ್ಡಿರುವ ಈ ಸವಾಲಿನ ಸ್ಪಷ್ಟ ಚಿತ್ರಣ ಸಿಗಬೇಕಾದರೆ ಆ ಪಠಾಣ ಭಯೋತ್ಪಾದಕ ಸಂಘಟನೆಯ ಕಿರುಪರಿಚಯ ಅಗತ್ಯ.

ಹದಿನೈದು ವರ್ಷಗಳ ಹಿಂದೆ ರಾಜಧಾನಿ ಇಸ್ಲಾಮಾಬಾದ್​ನ ಪ್ರಸಿದ್ಧ ಮ್ಯಾರಿಯೆಟ್ ಹೋಟೆಲ್​ಗೆ 600 ಕಿಲೋಗ್ರಾಂ ಸ್ಪೋಟಕಗಳು ತುಂಬಿದ ಟ್ರಕ್ ಅನ್ನು ಗುದ್ದಿಸುವುದರ ಮೂಲಕ ತನ್ನ ಹುಟ್ಟಿನ ಸುದ್ದಿಯನ್ನು ಭಾರಿ ಸದ್ದಿನೊಂದಿಗೆ ಸಾರಿದ ಟಿಟಿಪಿ ಮುಂದಿನ ಒಂದೇ ವರ್ಷದಲ್ಲಿ ಪಾಕಿಸ್ತಾನದ ಸುರಕ್ಷೆಗೆ ಅತಿ ದೊಡ್ಡ ಸವಾಲಾಗಿ ಬೆಳೆದು ನಿಂತಿತು. ಅಫ್ಘನ್ ತಾಲಿಬಾನ್ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದ ಅಮೆರಿಕದ ಸೇನೆಗೆ ಸಹಕಾರ ನೀಡಿದ ಕಾರಣಕ್ಕಾಗಿ ಪಾಕ್ ಸೇನೆಯನ್ನು ಗುರಿಯಾಗಿರಿಸಿಕೊಂಡ ಟಿಟಿಪಿ ಮೊದಲಿಗೆ ಅಫ್ಘಾನಿಸ್ತಾನಕ್ಕೆ ಹೊಂದಿಕೊಂಡ ಖೈಬರ್-ಪಖ್ತೂನ್​ಖ್ವಾ (ಕೆಪಿಕೆ) ಪ್ರಾಂತ್ಯದಲ್ಲಿ ದಾಳಿಗಳನ್ನಾರಂಭಿಸಿ 2009ರ ಪ್ರಾರಂಭದ ಹೊತ್ತಿಗೆ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೊಂದಿಕೊಂಡ ಸ್ವಾತ್ ಕಣಿವೆಯನ್ನು ಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಂಡು ಅಲ್ಲಿ ತನ್ನ ಆಡಳಿತವನ್ನು ಮಾನ್ಯ ಮಾಡುವಂತೆ ಪಾಕ್ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿತು. ದಾರಿಗಾಣದ ಜರ್ದಾರಿ-ಗಿಲಾನಿ ಸರ್ಕಾರ ಸ್ವಾತ್ ಕಣಿವೆಯನ್ನು ಟಿಟಿಪಿಗೆ ಬಿಟ್ಟುಕೊಟ್ಟು ಅದಕ್ಕೆ ಪ್ರತಿಯಾಗಿ ಪಾಕಿಸ್ತಾನದ ಇತರೆಡೆಗಳಿಗೆ ಚಟುವಟಿಕೆಗಳನ್ನು ವಿಸ್ತರಿಸದಿರುವ ವಾಗ್ದಾನವನ್ನು ಪಡೆದುಕೊಂಡಿತು. ಆದರೆ, ಒಂದೇ ತಿಂಗಳಲ್ಲಿ ವಾಗ್ದಾನ ಮುರಿದ ಟಿಟಿಪಿ ರಾಜಧಾನಿ ಇಸ್ಲಾಮಾಬಾದನ್ನೇ ಗುರಿಯಾಗಿಸಿಕೊಂಡು ರಾಜಧಾನಿಗೆ ಕೇವಲ ನೂರು ಕಿಲೋಮೀಟರ್ ಹತ್ತಿರದ ಬುನೇರ್ ಪಟ್ಟಣದಲ್ಲಿ ಬೀಡುಬಿಟ್ಟಿತು. ಟಿಟಿಪಿಯ ಈ ಅಸಾಧಾರಣ ಯಶಸ್ಸಿಗೆ ಪ್ರಮುಖವಾಗಿ ಮೂರು ಕಾರಣಗಳಿದ್ದವು. ಮೊದಲಿಗೆ ಸಮಸ್ಯೆಯ ಮೂಲವನ್ನು ಸರಿಯಾಗಿ ಅರಿಯುವಲ್ಲಿ ಪಾಕ್ ಸೇನೆ ಮತ್ತು ಸರ್ಕಾರ ವಿಫಲವಾದದ್ದು. ಹೆಚ್ಚಿನ ಸಂಖ್ಯೆಯ ಮೃತ ಅಥವಾ ಬಂಧಿತ ಟಿಟಿಪಿ ಕಾರ್ಯಕರ್ತರು ಸುನ್ನತಿ ಮಾಡಿಸಿಕೊಂಡಿಲ್ಲದ್ದನ್ನು ಕಂಡ ಪಾಕ್ ಸೇನೆ ಅವರೆಲ್ಲ ಭಾರತೀಯ ಭಯೋತ್ಪಾದಕರೆಂದೂ, ಕಾಬೂಲ್​ನಲ್ಲಿದ್ದ ಭಾರತ-ಪರ ಹಮೀದ್ ಕರ್ಜಾಯ್ ಸರ್ಕಾರದ ಸಹಕಾರದಿಂದ ಅವರು ಪಾಕಿಸ್ತಾನ ಪ್ರವೇಶಿಸಿ ದಾಂಧಲೆ ಎಬ್ಬಿಸುತ್ತಿದ್ದಾರೆಂದೂ, ಈ ಆಟಾಟೋಪ ಹೆಚ್ಚುಕಾಲ ನಡೆಯುವುದಿಲ್ಲವೆಂದೂ ತಪ್ಪಾಗಿ ತಿಳಿಯಿತು. ಗಡಿನಾಡಿನಲ್ಲಿ ವ್ಯಾಪಕ ಬಡತನ ಹಾಗೂ ಬುಡಕಟ್ಟು ಸಂಪ್ರದಾಯಗಳ ಕಾರಣದಿಂದಾಗಿ ಅಲ್ಲಿ ಬಹಳಷ್ಟು ಜನ ಮುಸ್ಲಿಮರಾಗಿದ್ದರೂ ಸುನ್ನತಿ ಮಾಡಿಸಿಕೊಳ್ಳುವುದಿಲ್ಲವೆಂಬ ‘ಜ್ಞಾನೋದಯ’ ಪಾಕ್ ಸೇನೆಗಾಗುವ ಹೊತ್ತಿಗೆ ಟಿಟಿಪಿ ಉಗ್ರವಾಗಿ ಬೆಳೆದಿತ್ತು. ಎರಡನೆಯದಾಗಿ, ಟಿಟಿಪಿಗೆ ಅಫ್ಘನ್ ತಾಲಿಬಾನ್​ನಿಂದ ನಿರಂತರವಾಗಿ ಶಸ್ತ್ರಾಸ್ತ್ರ ಪೂರೈಕೆಯಾಗುತ್ತಿದ್ದುದರಿಂದ ಅದರ ಶಕ್ತಿ ಏರುತ್ತಲೇ ಹೋಯಿತು. ಮೂರನೆಯದಾಗಿ, ಟಿಟಿಪಿ ಪಠಾಣ ಸಂಘಟನೆ ಎನ್ನುವ ಕಾರಣದಿಂದಲೇ ಪಾಕ್ ಸೇನೆಯಲ್ಲಿ ಸುಮಾರು ಶೇ. 30ರಷ್ಟು ಇರುವ ಪಠಾಣ ಸೈನಿಕರಲ್ಲಿ ಒಂದಷ್ಟು ಜನ ಟಿಟಿಪಿಯೊಂದಿಗೇ ಸೇರಿಕೊಂಡರು ಮತ್ತು ಇತರ ಹಲವರು ಟಿಟಿಪಿಯ ಸಮರ್ಥಕರಾಗಿಬಿಟ್ಟರು. ಪಾಕ್ ಸೇನೆ ಕಂಡ ಮೊದಲ ಬಿರುಕು ಇದು. ಪ್ರತಿಯಾಗಿ ಕಾರ್ಯಾಚರಣೆಗಿಳಿದ ಪಾಕ್ ಸೇನೆ ಒಂಬತ್ತು ತಿಂಗಳುಗಳಲ್ಲಿ ಸ್ವಾತ್​ಗೇ ನುಗ್ಗಿ ಟಿಟಿಪಿಯನ್ನು ಬಗ್ಗುಬಡಿಯಿತು. ಆಗ ಸರಿಸುಮಾರು ನಿರ್ನಾಮವಾದಂತೇ ಕಂಡರೂ ನಿಧಾನವಾಗಿ ಚೇತರಿಸಿಕೊಂಡು ಡಿಸೆಂಬರ್ 2014ರಲ್ಲಿ ಪೆಷಾವರ್​ನ ಆರ್ವಿು ಪಬ್ಲಿಕ್ ಸ್ಕೂಲ್​ಗೆ ದಾಳಿಯಿಟ್ಟು 133 ಮಕ್ಕಳನ್ನು ಹತ್ಯೆಗೈದಿತು. ಈ ಬರ್ಬರ ಕೃತ್ಯವನ್ನು ಅದು ಸಮರ್ಥಿಸಿಕೊಂಡದ್ದು ‘ನಮ್ಮನ್ನು ಕೊಲ್ಲುತ್ತಿರುವ ಪಾಕ್ ಸೈನಿಕರಿಗೆ ಪಾಠ ಕಲಿಸಲು ಅವರ ಮಕ್ಕಳನ್ನು ನಾವು ಕೊಲ್ಲುತ್ತಿದ್ದೇವೆ’ ಎಂದು!

ಈ ನಡುವೆ ಟಿಟಿಪಿ ಅಕ್ಟೋಬರ್ 2012ರಲ್ಲಿ ಹೆಣ್ಣುಮಕ್ಕಳ ಶಿಕ್ಷಣದ ಪ್ರತಿಪಾದಕಿ ಹದಿವಯಸ್ಸಿನ ಮಲಾಲಾ ಯೂಸುಫ್​ರkಾಯ್ ಮೇಲೆ ಘಾತಕ ಹಲ್ಲೆಯೆಸಗಿ ಜಾಗತಿಕವಾಗಿ ಸುದ್ದಿ ಮಾಡಿಯಾಗಿತ್ತು. ನಮ್ಮ ಈ ವಿಶ್ಲೇಷಣೆಯಲ್ಲಿ ಇಮ್ರಾನ್ ಖಾನ್ ಪ್ರವೇಶ ಆಗುವುದು ಈ ಸನ್ನಿವೇಶದಲ್ಲಿ. 1996ರಲ್ಲಿ ಪಾಕಿಸ್ತಾನ್ ತೆಹ್ರೀಕ್ - ಎ ಇನ್ಸಾಫ್ ಪಕ್ಷ ಕಟ್ಟಿ ರಾಜಕೀಯ ಪ್ರವೇಶಿಸಿದ ಇಮ್ರಾನ್ ಮೊದಲಿಗೆ ಭ್ರಷ್ಟಾಚಾರದ ವಿರುದ್ಧ ಆಂದೋಲನ ಆರಂಭಿಸಿ ಪಾಕ್ ಮತದಾರರ ಮನಗೆಲ್ಲಲು ಯತ್ನಿಸಿದರು. ಆದರೆ ಭ್ರಷ್ಟಾಚಾರವೆನ್ನುವುದು ಸಹಜವೇ ಆಗಿಹೋಗಿರುವ ಪಾಕ್ ವ್ಯವಸ್ಥೆ ಮತ್ತು ಸಮಾಜದಲ್ಲಿ ಅದರ ವಿರುದ್ಧದ ದನಿಗೆ ಬೆಂಬಲ ಸಿಗುವುದಿಲ್ಲವೆಂದು ಅನತಿಕಾಲದಲ್ಲೇ ಅರಿತ ಅವರು ಧರ್ಮದ ಮೊರೆಹೊಕ್ಕರು. ಇಸ್ಲಾಮಿಕ್ ರಾಷ್ಟ್ರ ಪಾಕಿಸ್ತಾನದಲ್ಲಿ ಇಸ್ಲಾಮಿಕ್ ಕಾನೂನುಗಳಿಗೆ ಪ್ರಾಮುಖ್ಯ ಇರಬೇಕೆಂದು ಹೇಳುವ ಮೂಲಕ ಮೌಲ್ವಿಗಳ ಮನವೊಲಿಸಿಕೊಂಡು ಅವರ ಬೆಂಬಲದಿಂದ ಜನಪ್ರಿಯತೆ ಗಳಿಸುವ ಸುಲಭದ ಮಾರ್ಗ ಕಂಡುಕೊಂಡ ಖಾನ್ ನಂತರ ಹಿಂತಿರುಗಿ ನೋಡಲಿಲ್ಲ. ಟಿಟಿಪಿಯ ಬಗೆಗೂ ಮೃದು ಮಾತಾಡತೊಡಗಿದ, ಮಲಾಲಾ ಮೇಲೆ ನಡೆದ ದಾಳಿಯನ್ನು ನಿಖರವಾಗಿ ಖಂಡಿಸದ ಅವರಿಗೆ ‘ತಾಲಿಬಾನ್ ಖಾನ್’ ಎಂಬ ಹೆಸರು ಬಂದದ್ದು ಆಗ. ಅವರ ಟಿಟಿಪಿ ಸಹಾನುಭೂತಿ ಅವರನ್ನು ಅಫ್ಘನ್ ತಾಲಿಬಾನ್​ಗೂ ಪ್ರಿಯವಾಗಿಸಿತು.

2021ರ ಆಗಸ್ಟ್ 15ರಂದು ಅಫ್ಘಾನಿಸ್ತಾನವನ್ನು ಅಫ್ಘನ್ ತಾಲಿಬಾನ್​ಗೆ ಬಿಟ್ಟುಕೊಟ್ಟು ಅಮೆರಿಕನ್ನರು ಓಡಿಹೋದರಷ್ಟೆ. ಆಗ ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಪ್ರಧಾನಿಯಾಗಿದ್ದರು ಮತ್ತು ಲೆ.ಜ. ಫೈಜ್ ಹಮೀದ್ ಐಎಸ್​ಐ ಮುಖ್ಯಸ್ಥರಾಗಿದ್ದರು. ಅಫ್ಘನ್ ತಾಲಿಬಾನ್​ಗೆ ಅವರಿಬ್ಬರ ಬೆಂಬಲ ಮುಚ್ಚುಮರೆಯದೇನೂ ಆಗಿರಲಿಲ್ಲ. ಅಮೆರಿಕಾದ ಹಿನ್ನಡೆಯನ್ನು, ಅಫ್ಘಾನಿಸ್ತಾನದಲ್ಲಾದ ಒಟ್ಟಾರೆ ಬೆಳವಣಿಗೆಗಳನ್ನು ಇಮ್ರಾನ್ ಖಾನ್ ಬಣ್ಣಿಸಿದ್ದು ‘ಅಫ್ಘನ್ ಜನತೆ ತಮ್ಮ ಗುಲಾಮಿತನದ ಸಂಕೋಲೆಗಳನ್ನು ಕಿತ್ತೊಗೆದಿದ್ದಾರೆ ’ಎಂದು. ಅಫ್ಘನ್ ತಾಲಿಬಾನ್​ನ ನಡೆಗಳನ್ನು ನಿರ್ದೇಶಿಸಿದ ಐಎಸ್​ಐ ಮಹಾನಿರ್ದೇಶಕ ಲೆ.ಜ. ಫೈಜ್ ಹಮೀದ್ ಕಾಬೂಲ್​ಗೆ ತೆರಳಿ ಇಡೀ ಬೆಳವಣಿಗೆ ತನ್ನ ನಿಯಂತ್ರಣದಲ್ಲಿದೆ ಎನ್ನುವುದನ್ನು ಹಾವಭಾವಗಳಿಂದ ಪ್ರದರ್ಶಿಸಿದ್ದರು. ಆ ಕಾರಣದಿಂದಲೇ ಅವರಿಬ್ಬರೂ ಅಮೆರಿಕಾದ ಕೆಂಗಣ್ಣಿಗೆ ಗುರಿಯಾದರು. ಅಮೆರಿಕಾದ ಪರವಾಗಿದ್ದ ಆಗಿನ ಸೇನಾ ದಂಡನಾಯಕ ಕಮರ್ ಜಾವೆದ್ ಬಾಜ್ವಾ ತಕ್ಷಣ ಕಾರ್ಯೋನ್ಮುಖರಾಗಿ, ಫೈಜ್ ಹಮೀದ್​ರನ್ನು ಹೊರಗಟ್ಟಿ ಲೆ.ಜ. ನದೀಂ ಅಂಜುಂರನ್ನು ಐಎಸ್​ಐ ಮುಖ್ಯಸ್ಥನನ್ನಾಗಿ ಮಾಡಿದರು. ಮುಂದುವರಿದು ಅವರು ಇದೇ ಜನವರಿಯಲ್ಲಿ ವಿರೋಧಪಕ್ಷಗಳನ್ನು ಒಗ್ಗೂಡಿಸಿ ಇಮ್ರಾನ್ ಖಾನ್​ಗೆ ಸಂಕಷ್ಟ ತಂದು ಮೂರು ತಿಂಗಳೊಳಗೆ ಅವರನ್ನು ಮನೆಗೆ ಕಳಿಸಿದರು. ಆಗ ಇಮ್ರಾನ್ ಪ್ರತಿಕ್ರಿಯಿಸಿದ್ದು ‘ಪಾಕಿಸ್ತಾನ ಮೂರು ತುಂಡಾಗುತ್ತದೆ’ ಎಂದು. ತಾನಿಲ್ಲದ ಸರ್ಕಾರ ದೇಶದ ಏಕತೆಯನ್ನು ಕಾಪಾಡಲಾರದು ಎಂದು ತೀರ್ವನಿಸಲು ಇಮ್ರಾನ್​ಗೆ ಸಾಧ್ಯವಾದದ್ದಾದರೂ ಹೇಗೆ? ಈ ಪ್ರಶ್ನೆಗೆ ಉತ್ತರ ಸಿಗುವುದು ಪಾಕ್ ತಾಲಿಬಾನ್​ನ ನಡವಳಿಕೆಯಲ್ಲಿ.

ಇಮ್ರಾನ್ ಅವಧಿಯಲ್ಲಿ ಪಾಕ್ ಸೇನೆಯೊಂದಿಗೆ ಕದನವಿರಾಮ ಒಪ್ಪಂದ ಮಾಡಿಕೊಂಡಿದ್ದ ಟಿಟಿಪಿ ತನ್ನ ಸಹಯೋಗಿ ಅಧಿಕಾರದಿಂದ ಇಳಿಯುತ್ತಿದ್ದಂತೇ ಚುರುಕಾಯಿತು. ಕದನವಿರಾಮದ ನಿಯಮಗಳನ್ನು ಉಲ್ಲಂಘಿಸತೊಡಗಿ ಸೇನಾ ಠಿಕಾಣೆಗಳ ಮೇಲೆ ದಾಳಿಯೆಸಗತೊಡಗಿತು. ಈ ವರ್ಷ ಅದು ಕೊಂದಿರುವ ಸೈನಿಕರ ಸಂಖ್ಯೆ 350ರಿಂದ 500 ಎಂದು ಹೇಳಲಾಗುತ್ತಿದೆ. ಈ ರಕ್ತಸಿಕ್ತ ಇತಿಹಾಸದಲ್ಲಿ ಅತ್ಯಂತ ಮುಖ್ಯವಾದ ದಿನಾಂಕ ಇದೇ ನವೆಂಬರ್ 29.

ಆ ದಿನ ಇಮ್ರಾನ್ ಖಾನ್​ರಿಗೆ ವೈಯಕ್ತಿಕವಾಗಿ ವಿರೋಧಿಯಾದ ಆಸಿಮ್ ಮುನೀರ್ ಸೇನಾ ದಂಡನಾಯಕರಾಗಿ ಅಧಿಕಾರ ವಹಿಸಿಕೊಳ್ಳುತ್ತಿದ್ದಂತೇ ಟಿಟಿಪಿ ಸೇನೆಯೊಂದಿಗಿನ ಕದನವಿರಾಮ ಒಪ್ಪಂದಕ್ಕೆ ಅಧಿಕೃತವಾಗಿ ತಿಲಾಂಜಲಿಯಿಡುವ ಘೊಷಣೆ ಮಾಡಿತು. ಅಲ್ಲಿಂದೀಚೆಗೆ ನಾವು ಕಾಣುತ್ತಿರುವುದು ಅತೀವ ಗೊಂದಲಮಯ ಪಾಕಿಸ್ತಾನ. ಜ. ಮುನೀರ್ ನೇತೃತ್ವದ ಸೇನೆ ಮತ್ತು ಶರೀಫರ ಸರ್ಕಾರ ಭಾರತದ ವಿರುದ್ಧ ಕತ್ತಿಮಸೆಯತೊಡಗಿದರೆ ಟಿಟಿಪಿ ಪಾಕ್ ಸೇನೆಯ ವಿರುದ್ಧವೇ ದೊಡ್ಡದಾಗಿ ಕತ್ತಿ ಝುಳಪಿಸಿದೆ. ಮಂತ್ರಿ ಶಾಝಿಯಾ ಮರೀ ಭಾರತಕ್ಕೆ ಅಣ್ವಸ್ತ್ರ ಬೆದರಿಕೆ ಒಡ್ಡುತ್ತಿದ್ದಂತೇ ಟಿಟಿಪಿ ಬನ್ನೋನಲ್ಲಿರುವ ಭಯೋತ್ಪಾದಕರ ವಿಚಾರಣಾ ಕೇಂದ್ರದ ಮೇಲೆ ದಾಳಿಯೆಸಗಿ ಅದನ್ನು ಮೂರು ದಿನ ಹಿಡಿತದಲ್ಲಿಟ್ಟುಕೊಂಡಿತು. ಅದನ್ನು ಪಾಕ್ ಸೇನೆ ಮತ್ತೆ ವಶಕ್ಕೆ ತೆಗೆದುಕೊಂಡದ್ದರ ಬಗ್ಗೆ ರಕ್ಷಣಾ ಮಂತ್ರಿ ಖ್ವಾಜಾ ಮಹಮದ್ ಆಸಿಫ್​ರ ಹೇಳಿಕೆಯನ್ನು ನಂಬುವುದೋ ಬೇಡವೋ ಎಂದು ಹೊರಜಗತ್ತು ಮೀನಮೇಷ ಎಣಿಸುತ್ತಿದ್ದಂತೇ ಟಿಟಿಪಿ ವಾನಾ ಸೇನಾ ಠಿಕಾಣೆಯ ಮೇಲೆರಗಿ ಆರು ಸೈನಿಕರನ್ನು ಕೊಂದಿದೆ. ಮರುದಿನವೇ ಅದು ಕೆಪಿಕೆ ಪ್ರಾಂತ್ಯವನ್ನು ದಾಟಿ ಬಲೂಚಿಸ್ತಾನಕ್ಕೂ ಚಟುವಟಿಕೆಗಳನ್ನು ವಿಸ್ತರಿಸಿ ಚಮನ್​ನಲ್ಲಿ ಅನಿರ್ದಿಷ್ಟ ಸಂಖ್ಯೆಯ ಸೈನಿಕರನ್ನು ಕೊಂದಿದೆ. ಇದರ ಮುಂದುವರಿಕೆಯಾಗಿ ಇದೇ ಸೋಮವಾರ ಬಲೂಚಿಸ್ತಾನದಲ್ಲಿ ಏಳು ಸ್ಪೋಟಗಳು ಸಂಭವಿಸಿವೆ. ಬಲೂಚಿಸ್ತಾನ ಏಕಾಏಕಿ ಈ ಬಗೆಯ ರಕ್ತಪಾತ ಕಾಣುತ್ತಿರುವುದಕ್ಕೆ ಕಾರಣ ಟಿಟಿಪಿ ಮತ್ತು ಬಲೂಚ್ ಸ್ವಾತಂತ್ರ್ಯ ಹೋರಾಟ ಸಂಘಟನೆಗಳು ಜಂಟಿಯಾಗಿ ಪಾಕ್ ಸೇನೆಯ ವಿರುದ್ಧ ಕಾರ್ಯಾಚರಣೆ ನಡೆಸುವ ಒಪ್ಪಂದಕ್ಕೆ ಬಂದಿರುವುದು! ಬಲೂಚಿ ಸಂಘಟನೆಗಳ ಗುರಿ ಸ್ವತಂತ್ರ ಬಲೂಚಿಸ್ತಾನದ ಸ್ಥಾಪನೆ. ಈಗಿನ ಬೆಳವಣಿಗೆಗಳನ್ನು ನೋಡಿದರೆ ಸ್ವತಂತ್ರ ಬಲೂಚಿಸ್ತಾನವನ್ನು ಟಿಟಿಪಿ ಬೆಂಬಲಿಸುತ್ತದೆ ಎಂದರ್ಥ. ಇದರ ಜತೆಗೆ ಕೆಪಿಕೆ ಪ್ರಾಂತ್ಯವನ್ನು ಅಫ್ಘಾನಿಸ್ತಾನದಲ್ಲಿ ವಿಲೀನಗೊಳಿಸುವುದು ಟಿಟಿಪಿಯ ಗುರಿಗಳಲ್ಲೊಂದು ಎಂಬುದನ್ನೂ ಸೇರಿಸಿದರೆ 1971ರ ನಂತರ ಪಾಕಿಸ್ತಾನ ತನ್ನ ಏಕತೆಗೆ ಅತಿ ದೊಡ್ಡ ಸವಾಲನ್ನು ಎದುರಿಸುತ್ತಿರುವ ಚಿತ್ರ ನಮಗೆ ದೊರೆಯುತ್ತದೆ. ಕಳೆದ ಶುಕ್ರವಾರ ಟಿಟಿಪಿ ಬಿಡುಗಡೆ ಮಾಡಿದ ಒಂದು ವಿಡಿಯೋದಲ್ಲಿ ಟಿಟಿಪಿ ಕಾರ್ಯಕರ್ತನೊಬ್ಬ ‘ನಾವು ಬರುತ್ತಿದ್ದೇವೆ’ ಎಂಬ ಪದಗಳನ್ನು ಉರ್ದು, ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಬರೆದ ಪ್ಲಕಾರ್ಡ್ ಹಿಡಿದು ಇಸ್ಲಾಮಾಬಾದ್​ನ ರಸ್ತೆಯೊಂದರಲ್ಲಿ ನಿಂತಿದ್ದಾನೆ! 2009ರಲ್ಲಿ ಬುನೇರ್​ನಿಂದ ಹಿಂದಕ್ಕಟ್ಟಲ್ಪಟ್ಟ ಟಿಟಿಪಿ ಈಗ ರಾಜಧಾನಿಯನ್ನು ಆಕ್ರಮಿಸಿಕೊಳ್ಳುವ ಭಾರಿ ಯೋಜನೆಯನ್ನೇ ಹಾಕಿದೆ ಎನ್ನುವುದರ ಸೂಚನೆ ಇದಿರಬಹುದು. ಈ ಅನುಮಾನ ಗಟ್ಟಿಯಾಗಿರುವುದು ಇಸ್ಲಾಮಾಬಾದ್​ಗೆ ಹೋಗಬೇಡಿ ಎಂದು ಅಮೆರಿಕಾ, ಬ್ರಿಟನ್, ಆಸ್ಟ್ರೇಲಿಯಾ ಮತ್ತೀಗ ಸೌದಿ ಅರೇಬಿಯಾ ಸೇರಿದಂತೆ ಹಲವಾರು ಪ್ರಮುಖ ದೇಶಗಳು ತಮ್ಮ ನಾಗರಿಕರಿಗೆ ನೀಡಿರುವ ಸೂಚನೆ.

ಇಡೀ ಪ್ರಕರಣವನ್ನು ರೋಚಕಗೊಳಿಸಿರುವುದು ಫೈಜ್ ಹಮೀದ್ ಬಹಿರಂಗವಾಗಿ, ಇಮ್ರಾನ್ ಖಾನ್ ರಹಸ್ಯವಾಗಿ ಟಿಟಿಪಿ ಬೆನ್ನಿಗೆ ನಿಂತಿದ್ದಾರೆ ಎಂಬ ಸುದ್ದಿಗಳು. ಇವುಗಳನ್ನು ಮುಂದಿನವಾರ ವಿಸõತವಾಗಿ ವಿಶ್ಲೇಷಿಸೋಣ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net